ನನ್ನ ಮಾನಸ ಗುರು ಚಿತ್ತಾಲರು

ನನ್ನ ಮಾನಸ ಗುರು ಚಿತ್ತಾಲರು

(ಇದು ನಾನು 2014 ಜೂನ್ ನಲ್ಲಿ ಬರೆದ ಲೇಖನ - ಶಿಕಾರಿಯ ಬಗ್ಗೆ ಬಂದ ವಿಮರ್ಶಾ ಲೇಖನದಿಂದ ಪ್ರೇರಿತನಾಗಿ ಪ್ರಕಟಿಸುತ್ತಿದ್ದೇನೆ)

ಇದೇ ಮಾರ್ಚ್ 22ರಂದು ನಿಧನರಾದ ಯಶವಂತ ಚಿತ್ತಾಲರು ಕನ್ನಡದ ಅಪೂರ್ವ ಕಥೆಗಾರರು. ಕರ್ನಾಟಕದ ಹೊರಗೇ ಇದ್ದು ತಮ್ಮ ಸಾಹಿತ್ಯ ಕೃಷಿಯನ್ನು ಮಾಡಿದ ಚಿತ್ತಾಲರು ತಮ್ಮ ಕಥೆಗಳ ಮೂಲಕ ಓದುಗರನ್ನು ತಾತ್ವಿಕ ಚಿಂತನೆಗಳಿಗೆ ಒಡ್ಡಿದವರು. ಮುಂಬೈನ ಕನ್ನಡ ಸಾರಸ್ವತಲೋಕದ ತಾರೆಯಾಗಿ, ತಮ್ಮ ಬರಹಗಳಲ್ಲಿ ಮುಂಬೈನ ನಾಡಿ ಮಿಡಿತವನ್ನು ಹಿಡಿದವರು. ಕನ್ನಡ ಸಾಹಿತಿಗಳು ಮುಂಬೈಯನ್ನು ಬಿಟ್ಟಾಗ ತಾವು ಒಂಟಿಯಾದಂತೆ ದುಖಃ ಅನುಭವಿಸಿದರು, ಬಲ್ಲಾಳರು, ಕಾಯ್ಕಿಣಿ ಇವರೆಲ್ಲ ಮುಂಬೈ ಬಿಟ್ಟು ಬೆಂಗಳೂರಿಗೆ ಬಂದರೆ ಚಿತ್ತಾಲರು ಮುಂಬೈ ಬಿಡದೆ ಕನ್ನಡವನ್ನು ಗಟ್ಟಿಯಾಗಿ ಹಿಡಿದರು.

 

ನಾನು ಓದಿದ ಅವರ ಮೊದಲ ಕೃತಿ ಅವರ ಪ್ರಸಿದ್ಧ ಕಾದಂಬರಿ ಶಿಕಾರಿ . ಒಂದು ಖಾಸಗಿ ಕರ್ಖಾನೆಯ ರಾಜಕೀಯದಲ್ಲಿ ಕಧಾನಾಯಕ ನಾಗಪ್ಪ ದಾಳವಾಗುವುದರ ಸುತ್ತ ಹೆಣೆದ ಕಥೆ. ನಾನು ಇದನ್ನು ಓದಿದ್ದು ನನ್ನ ಪ್ರೌಢಶಾಲೆಯಲ್ಲಿ ಎಂಬ ನೆನಪು. ಅದನ್ನು ಓದಿದ ನಂತರದ ಓಂದಷ್ಟು ದಿನ ನನ್ನ ಯೋಚನೆಗಳು, ನನಗೆ ನಾನೇ ಆಡಿಕೊಳ್ಳುವ ಮಾತುಗಳು, ಚಿತ್ತಾಲರ ಬರವಣಿಗೆಯ ಶೈಲಿಯಲ್ಲೇ ಇರುತ್ತಿತ್ತು ಎಂಬಷ್ಟರ ಮಟ್ಟಿಗೆ ನಾನು ಪ್ರಭಾವಿತನಾಗಿದ್ದೆ. ಅವರ ಪುರುಷೋತ್ತಮ, ಛೇದ, ಕೇಂದ್ರ ವೃತ್ತಾಂತ ಕಾದಂಬರಿಗಳನ್ನು ಮತ್ತು ಅವರ ಹಲವಾರು ಕಥೆಗಳನ್ನು ನಂತರದ ದಿನಗಳಲ್ಲಿ ಓದಿದ್ದೇನೆ.

 

ಅವರ ಬರಹಗಳಲ್ಲಿ ವಿಶಿಷ್ಟವಾಗಿ ಕಾಣುವುದು ಪಾತ್ರ ಚಿತ್ರಣ ಮತ್ತು ಕಥೆ ನಡೆಯುವ ಪರಿಸರದ ಚಿತ್ರಣ. ಮಾಸ್ತಿಯವರ ಕಥೆಗಳಲ್ಲಿನ ಪಾತ್ರಗಳ ಜೀವಂತಿಕೆ, ಚಿತ್ತಾಲರ ಕಥೆಗಳಲ್ಲೂ ಕಾಣಬಹುದು. ಚಿತ್ತಾಲರ ಪಾತ್ರಗಳೆಲ್ಲ ನಮ್ಮೊಳಗಿನ ಅಥವಾ ನಮ್ಮ ಒಡನಾಟದಲ್ಲಿರುವ ಪಾತ್ರಗಳು. ಆದರೆ ಆ ಪಾತ್ರಗಳು ಇಳಿಯುವ ಆಳ ಮಾತ್ರ ವಿಶಿಷ್ಟ. ಅವರ ಕಥೆಯ ಪಾತ್ರಗಳು ಆಳವಾದ ಚಿಂತನೆಗಳಿಗೆ ಇಳಿಯುತ್ತವೆ. ಮನುಷ್ಯನ ಚಿಂತನೆಗಳ ಆಳ ಅಗಲಗಳನ್ನು, ನಮ್ಮ ದಿನ ನಿತ್ಯದ ಜೀವನದಲ್ಲಿ ಆಗುವ ಘಟನೆಗಳಿಗೆ ನಾವು ಹಚ್ಚುವ ಕಾರ್ಯಕಾರಣ ಸಂಬಂಧಗಳನ್ನು ವಿವರಿಸುವ ರೀತಿ ನಮ್ಮ ಮನಸ್ಸನ್ನು ನಮಗೆ ತೆರೆದು ತೋರಿಸುತ್ತಿದೆಯೋ ಎಂಬಷ್ಟು ನಮ್ಮನ್ನು ತಟ್ಟುತ್ತವೆ. ಚಿತ್ತಾಲರ ಕಥೆ-ಕಾದಂಬರಿಗಳು ಘಟನೆಗಳ ಸತ್ಯದ ನಿರಂತರ ಶೋಧದಲ್ಲಿ ತೊಡಗುತ್ತವೆ. ತಮ್ಮ ಬೇರುಗಳನ್ನು ಹುಡುಕುತ್ತಾ, ತಮ್ಮ ಹುಟ್ಟು, ಬಾಲ್ಯಗಳನ್ನು ಮತ್ತೆ ಜೀವಿಸುತ್ತ ಇಂದಿನ ಇರುವಿಕೆಯ ಅರ್ಥವನ್ನು ಕಾಣುತ್ತವೆ. ಮುಂಬೈಯ ಜೀವನದ ಓಘ ಮತ್ತು ಹನೇಹಳ್ಳಿಯ ಜೀವನದ ಸಾವಧಾನತೆಯನ್ನು ಸಮಾನಂತರವಾಗಿ ಚಿತ್ರಿಸುತ್ತ, ಜೀವನದ ವೈರುಧ್ಯಗಳನ್ನು ನಮಗೆ ಮುಟ್ಟಿಸುತ್ತವೆ. ಅವರು ಉಪಯೋಗಿಸಿದ ಭಾಷೆ ಸಂಸ್ಕೃತ ಭೂಯಿಷ್ಟವಲ್ಲದ ಉತ್ತರ ಕನ್ನಡದ ಕನ್ನಡ. ಅವರ ಕೃತಿಗಳನ್ನು ಓದುತ್ತಿದ್ದಂತೆ ಅವರ ಪಾತ್ರಗಳು ನಮ್ಮವಾಗುವಂತೆಯೂ ಭಾಷೆಯೂ ನಮ್ಮವಾಗಿ ಬಿಡುತ್ತವೆ. ಭಾನಗಡಿ, ಹಿಕ್ಮತಿ ಮತ್ತು ಇನ್ನೇಷ್ಟೋ ಸರಳ ಸಾಮಾನ್ಯ ಶಬ್ದಗಳು ಓದುಗರಲ್ಲಿ ಹಲವಾರು ಅರ್ಥಗಳನ್ನು, ಭಾವಗಳನ್ನು ಸ್ಪುರಿಸುವಷ್ಟರ ಮಟ್ಟಿಗೆ ಬಲಗೊಳ್ಳುತ್ತವೆ. ಅವರ ಕಥೆಗಳ ಒಳಗೆ ಕಥೆಗಳಿವೆ. ಅವುಗಳು ನಮ್ಮ ಕಣ್ಣ ಮುಂದೆಯೇ ಅನಾವರಣಗೊಳ್ಳತೊಡಗುತ್ತ ನಮ್ಮ ಕಣ್ಣ ಮುಂದೆ ಪಾತ್ರಗಳ, ಘಟನೆಗಳ, ಸತ್ಯಾನ್ವೇಷಣೆಯ ಒಂದು ದೊಡ್ಡ ಮೆರವಣಿಗೆ ಹೊರಟು ಬಿಡುತ್ತದೆ.

 

ಅವರ ಕಥೆಗಳು ಕೇವಲ ಕಥೆಗಳಷ್ಟೇ ಆಗದೆ ಓದುಗನಿಗೆ ಮಾನಸಿಕ ಸ್ಥೈರ್ಯ ನೀಡುವ, ಜೀವನದ ವಿವಿಧ ಘಟ್ಟಗಳಿಗೆ ಮಾರ್ಗದರ್ಶನ ನೀಡುವ, ಬದುಕಿನ ಪ್ರಶ್ನೆಗಳಿಗೆ ಉತ್ತರ ಪಡೆಯುವ ದಾರ್ಶನಿಕ ಗ್ರಂಥಗಳಾಗುತ್ತವೆ. ಅವರ ಕಥೆಯ ಪಾತ್ರಗಳಾದ ಮೋನು, ದೋಶಿ, ಪದ್ದಕ್ಕ, ಮೊನ್ನ ಶಿನ್ನಾ ಇವುಗಳು ನಮ್ಮ ನಿಮ್ಮೊಳಗಿನ ವಿವಿಧ ವ್ಯಕ್ತಿತ್ವಗಳಾಗುತ್ತವೆ. ಎರಿಕ್ ಬರ್ನ, ಗೆಸ್ಟಾಲ್ಟ್ ಇವರುಗಳ ಮನಃಶಾಸ್ತ್ರವನ್ನೂ, ವಿವಿಧ ಲೇಖಕರನ್ನೂ ಚೆನ್ನಾಗಿ ಓದಿದ್ದ ಚಿತ್ತಾಲರು ನನಗೆ ಕಥೆಗಾರರು ಎನ್ನುವುದಕ್ಕಿಂತ ಒಬ್ಬ ಮೇಧಾವಿ ಮನಃಶಾಸ್ತ್ರಜ್ಙರಾಗಿ ಕಾಣುತ್ತಾರೆ. ಅವರ ಕೇಂದ್ರವೃತ್ತಾಂತದಲ್ಲಿ ಬರುವ ರೂಪಕ - ಒಂದು ಘಟನೆಯ ಪರಿಧಿಯಿಲ್ಲಿ ನಿಂತು ನಾವು ಘಟನೆಯ ಕೇಂದ್ರವನ್ನು ವೀಕ್ಷಿಸುತ್ತಿದ್ದರೆ, ನಾವೇ ಮತ್ತೊಂದು ಘಟನೆಯ, ಜೀವನ ಚಕ್ರದ ಕೇಂದ್ರವಾಗುವುದನ್ನು ಹೇಳುತ್ತಾ, ಬದುಕು ಸುಲಭ ಗ್ರಾಹ್ಯವಾದುದಲ್ಲ, ಯಾವುದೇ ಪರಿಪೂರ್ಣ ಸತ್ಯ ನಮ್ಮ ಕಲ್ಪನೆಗೆ, ನಮ್ಮ ಅರ್ಥವ್ಯಾಪ್ತಿಗೆ ನಿಲುಕದ್ದು ಎಂಬುದನ್ನು ಹೇಳುತ್ತದೆ. ಬದುಕು ಪ್ರಶ್ನೆ - ಉತ್ತರಗಳ ಒಂದು ನಿರಂತರ ಸರಮಾಲೆಯಾಗುವುದು ನಮ್ಮ ಕಣ್ಣ ಮುಂದೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ. ಅವರ ಕಥೆಗಳಲ್ಲಿ ಅವರ ಸೂಕ್ಷ್ಮಸಂವೇದನೆಗಳು, ಮನುಷ್ಯನ ಒಳತೋಟಿಗಳು, ಎಲ್ಲವನ್ನೂ ಹೇಳಿಕೊಳ್ಳಲಾಗದ, ಹೇಳಿಕೊಂಡರೂ ಗ್ರಹಿಸಲಾಗದ ಜೀವನದ ಎಷ್ಟೋ ವಿಷಯಗಳು ನಿರೂಪಿತವಾಗುತ್ತವೆ.

 

ಮನಸ್ಸಿನಾಳದ ವಿಷಯಗಳನ್ನು ಚಿತ್ತಾಲರು ಹೇಳುತ್ತಿದ್ದ ಬಗೆಯ ಒಂದೆರಡು ಉದಾಹರಣೆ : "ಮನುಷ್ಯನನ್ನು ಮಾನಸಿಕವಾಗಿ ಮುರಿಯುವುದು ಹೀಗೆ ಸ್ಪಷ್ಟವಾದ ಮಾತಿನಲ್ಲಿ ಹಿಡಿಯಬಹುದಾದ ಭಯವಲ್ಲ ಎಂಬ ಅರಿವು ನಾಗಪ್ಪನಿಗಿದೆ" (ಶಿಕಾರಿ),

’ಪಿರೋಜನಲ್ಲಿ ತುಂಬಿದ್ದು ತನ್ನ ಸ್ಥಾನ ಮಾನಗಳ ಬಗೆಗಿನ ಅವಾಸ್ತವವಾದ ದುರಭಿಮಾನವೇ ಹೊರತು ಕೆಲಸದ ಬಗ್ಗೆ ಇರಬೇಕಾದ ದಕ್ಷತೆಯಲ್ಲ’ (ಶಿಕಾರಿ).

’ತನ್ನ ಗಂಡ ತಾನು ಇಷ್ಟು ದಿನ ತಿಳಕೊಂಡಂತೆ ಗಟ್ಟಿಗನಲ್ಲ ಅನ್ನಿಸಿ ಕೆಡುಕೆನಿಸಿತು, ಕಾಮಾಕ್ಷಿಗೆ.  ತಾನು ಮಾಡಲೆಳೆಸಿದ ದಿಟ್ಟತನದ ಕೆಲಸದ ಅಸ್ಪಷ್ಟ ಕಲ್ಪನೆ ತಲೆಯಲ್ಲಿ ಮೂಡಿದ್ದು ಆವಾಗಲೇ ಇರಬೇಕು’ (ಕಾಮಾಕ್ಷಿ ಮಾಡಲೆಳೆಸಿದ ಅತಿ ದಿಟ್ಟ ಕೆಲಸ)

’ವಾಸ್ತವ ಸತ್ಯ ಯಾವಾಗಲೂ ಒಂದೇ ಇದು, ಒಂದೇ ಅದು ಆಗಿರುತ್ತದೆಯೆಂದು ನಂಬುತ್ತ ಬಂದ ದೃಷ್ಟಿಕೋನಕ್ಕೆ ಐನ್‍ಸ್ಟೈನನ  ಹೇಳಿಕೆ - ಸತ್ಯ ಒಂದೇ ಕಾಲಕ್ಕೆ ಅದು ಇದು ಎರಡೂ ಆಗಿರುವುದು ಶಕ್ಯವಿದೆಯಂಬ ಹೇಳಿಕೆ’ ( ತಪರಾಕಿ).

ಹೀಗೆ ಹಲವಾರು ವಿಷಯಗಳನ್ನು ಅವರು ವಿಶ್ಲೇಷಿಸಿ ಕಥೆಗಳಲ್ಲಿ ಬಳಸಿಕೊಂಡಿದ್ದಾರೆ.

 

ಇವೆಲ್ಲವುಗಳಿಂದ ನನ್ನ ಚಿಂತನೆಗಳು, ಮಾನಸಿಕ ವಿಶ್ಲೇಷಣೆಗಳು, ಮನುಷ್ಯರ ನಡುವಿನ ಸಂಬಂಧಗಳ ನಂಬಿಕೆಗಳು ಇವೆಲ್ಲವೂ ನನ್ನಲ್ಲಿ ಬೆಳೆದವು. ನಾನು ಅವರ ಬರಹಗಳ ಮೂಲಕವೇ ಅವರನ್ನು ನನ್ನ ಗುರುವಾಗಿಸಿಕೊಂಡೆ. ಮಾನಸಿಕವಾಗಿ ನನ್ನನ್ನು ಗಟ್ಟಿಗೊಳಿಸಿದೆ, ಚಿಂತನೆಗಳಿಗೆ ರೂಪು ದೊರಕಿಸಿದ ಚಿತ್ತಾಲರಿಗೆ ಇದು ನನ್ನ ಅಕ್ಷರ ನಮನ.

 

ಚಿತ್ತಾಲರ ಬಗ್ಗೆ ಕೆಲ ವಿವರಗಳು:

ಹುಟ್ಟು: 1928, ಆಗಸ್ಟ್ 3

ಓದು: ಮುಂಬಯಿಯಲ್ಲಿ ಪ್ಲಾಸ್ಟಿಕ್ ತಂತ್ರಜ್ಙಾನದಲ್ಲಿ ಬಿ.ಎಸ್ಸಿ (ಟೆಕ್)  - 1951, ನ್ಯೂಜೆರ್ಸಿಯ ಸ್ಟೀವನ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ (1969)

ಪ್ರಶಸ್ತಿಗಳು : ಕರ್ನಾಟಕ ಸಾಹಿತ್ಯ ಅಕಾಡೆಮೆ ಪ್ರಶಸ್ತಿ - ಕಥೆಯಾದಳು ಹುಡುಗಿ ಸಂಕಲನಕ್ಕೆ, ಶಿಕಾರಿ ಕಾದಂಬರಿಗೆ, ಪುರುಷೋತ್ತಮ ಕಾದಂಬರಿಗೆ, ವರ್ಧಮಾನ ಪ್ರಶಸ್ತಿ ಇತ್ಯಾದಿ.

ಅಣ್ಣ : ಪ್ರಸಿದ್ಧ ಕವಿ ಗಂಗಾಧರ ಚಿತ್ತಾಲ

ಕೃತಿಗಳು: 65  ಕಥೆಗಳು, 5 ಕಾದಂಬರಿಗಳು, 3 ಪ್ರಬಂಧ ಸಾಹಿತ್ಯ. ಲಬಸಾ (ಲಯ ಬದ್ಧ ಸಾಲುಗಳು) ಎಂಬ ಕವಿತೆಯಲ್ಲದ ಕವಿತೆಗಳು

(ಚಿತ್ರವನ್ನು http://en.wikipedia.org/wiki/Yashwant_Vithoba_Chittal ಕೊಂಡಿಯಿಂದ‌ ತೆಗೆದುಕೊಳ್ಳಲಾಗಿದೆ)

Comments