'ಬದುಕುವ' ಆಸೆ!

'ಬದುಕುವ' ಆಸೆ!

ಬಂಡಿಗೊಡೆಯನು ನೀನೆ ಪಯಣಿಗನು ನೀನೆ

ಅವನ ಕರುಣೆಯಿದು ಅಹುದಹುದು ತಾನೆ |

ಗುರಿಯ ಅರಿವಿರಲು ಸಾರ್ಥಕವು ಪಯಣ

ಗುರಿಯಿರದ ಪಯಣ ವ್ಯರ್ಥ ಮೂಢ ||

     ನಮ್ಮ ಅಸ್ತಿತ್ವ ಎಷ್ಟು ಮಹತ್ವದ್ದಾಗಿದೆ, ನಮ್ಮ ಅಸ್ತಿತ್ವವಿದ್ದರೆ ಎಲ್ಲವೂ ಇರುತ್ತದೆ, ಇಲ್ಲದಿದ್ದರೆ ಏನೂ ಇರುವುದಿಲ್ಲವೆಂಬ ಚಮತ್ಕಾರಿಕ ಸಂಗತಿಯ ಬಗ್ಗೆ ಹಿಂದಿನ ಲೇಖನದಲ್ಲಿ ಚರ್ಚಿಸಿದೆವು. ಈ ಅಸ್ತಿತ್ವಕ್ಕಿಂತಲೂ ಮಹತ್ವವಾಧ ಸಂಗತಿ ಇದ್ದು, ಅದು ನಮ್ಮ ಅಸ್ತಿತ್ವಕ್ಕೆ ಮೂಲಕಾರಣವಾಗಿದೆ. ತರ್ಕದ ಎಳೆಯನ್ನು ಬಿಡಿಸುತ್ತಾ ಹೋದಂತೆ ನಮಗೆ ಸತ್ಯದ ಅರಿವಾಗುತ್ತಾ ಹೋಗುತ್ತದೆ. ವೇದಗಳು ಹೇಳುವುದೂ ಇದನ್ನೇ! ಸತ್ಯವನ್ನು ಕಂಡುಕೊಳ್ಳಿರಿ, ಸತ್ಯವನ್ನು ಆವಿಷ್ಕರಿಸಿರಿ, ಅಸತ್ಯವೆಂದು ಕಂಡುದನ್ನು ಕಿತ್ತೆಸೆಯಿರಿ. (ಯೂಯಂ ತತ್ ಸತ್ಯಶವಸ ಆವಿಷ್ಕರ್ತ ಮಹಿತ್ವನಾ | ವಿಧ್ಯತಾ ವಿದ್ಯುತಾ ರಕ್ಷಃ || -ಋಕ್.೧.೮೬.೯) ಯಾವುದನ್ನೂ ಕಣ್ಣು ಮುಚ್ಚಿ ಒಪ್ಪಬೇಕಿಲ್ಲ, ಯಾರೋ ಹೇಳಿದರೆಂದು ಕೇಳಬೇಕಿಲ್ಲ, ಕೇಳಿರಿ, ತಿಳಿಯಿರಿ, ವಿಚಾರ ಮಾಡಿರಿ, ಚರ್ಚಿಸಿರಿ, ಅಂತರಂಗಕ್ಕೆ ಒಪ್ಪಿಗೆಯಾದರೆ ಸ್ವೀಕರಿಸಿ, ಸತ್ಯವನ್ನು ನೀವೇ ಕಂಡುಕೊಳ್ಳಿ ಎಂಬ ಮಾತು ವೈಚಾರಿಕ ಪ್ರಜ್ಞೆ ಇರಬೇಕೆಂಬುದನ್ನು ಒತ್ತಿ ಹೇಳುತ್ತದೆ.

     ಈ ಅಸ್ತಿತ್ವ ಅನ್ನುವುದು ತನ್ನಿಂದ ತಾನೇ ಪರಿಪೂರ್ಣವಲ್ಲ. ಅಸ್ತಿತ್ವದಲ್ಲಿರುವ ಬಯಕೆ ಅದಕ್ಕೂ ಮೊದಲು ಇರುವುದಾಗಿದ್ದು ಅಸ್ತಿತ್ವ ಅದನ್ನು ಅವಲಂಬಿಸಿದೆ. ನಾವು ಒಂದು ವಿಧದ ಆಸೆ, ಭರವಸೆ, ನಿರೀಕ್ಷೆಯ ಕಾರಣದಿಂದಾಗಿ ಬದುಕಿರುತ್ತೇವೆಯೇ ಹೊರತು, ಕೇವಲ ಈಗಿನ ಅನುಭವಗಳ ಕಾರಣಗಳಿಂದ ಅಲ್ಲ. ನಮ್ಮೊಳಗೆ ಅದೇನೋ ಇದೆ, ಅದು ಈ ನಿರೀಕ್ಷೆಯ ಬಲದಿಂದ ನಮ್ಮನ್ನು ಬಂಧಿಸಿರುತ್ತದೆ. ಈಗಿರುವುದಕ್ಕಿಂತ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ 'ಆಸೆ'ಯೇ ನಮ್ಮನ್ನು ಬಂಧಿಸುವ ಆ ಶಕ್ತಿಯಾಗಿದೆ. ಇದೇ ಆತ್ಮೋನ್ನತಿಯ 'ಆಸೆ'!

     ನಮ್ಮ ಅಸ್ತಿತ್ವಕ್ಕೆ, ಬದುಕಿಗೆ ಬೆಲೆ ಬರುವುದೇ ಇನ್ನೂ ಉತ್ತಮ ಸ್ಥಿತಿಗೆ ಏರಬೇಕೆಂಬ ಅಂತರ್ಗತ ಪ್ರಜ್ಞೆಯಿಂದ ಎಂಬುದನ್ನು ನಾವು ಗಮನಿಸಬೇಕು. ಆತ್ಮಾವಲೋಕನ ಮಾಡಿಕೊಂಡರೆ ತಿಳಿದೀತು, ಈ ಪ್ರಪಂಚದಲ್ಲಿ ಇಂದು ನಾವು ಏಕೆ ಸಂತೋಷವಾಗಿರುತ್ತೇವೆಂದರೆ, ನಾಳೆ ನಾವು ಸಂತೋಷವಾಗಿರುತ್ತೇವೆಂಬ ನಿರೀಕ್ಷೆಯಿಂದಲೇ ಹೊರತು, ಇಂದು ಸಂತೋಷವಾಗಿದ್ದೇವೆಂಬ ಕಾರಣದಿಂದ ಅಲ್ಲ. ಇಂದು ನಾವು ಎಷ್ಟೇ ಕಷ್ಟದ ಸ್ಥಿತಿಯಲ್ಲಿದ್ದರೂ, ಕೆಳಹಂತದಲ್ಲಿದ್ದರೂ ಮುಂದೊಮ್ಮೆ ನಾವು ಸುಖವಾಗಿರುತ್ತೇವೆ, ಮೇಲೆ ಬರುತ್ತೇವೆ ಎಂಬ ಒಳತುಡಿತ, ಒಳಭರವಸೆ ಇಂದಿನ ಸ್ಥಿತಿಯನ್ನು ಸಹಿಸಿಕೊಳ್ಳುಂತೆ, ಸಹನೀಯವಾಗುವಂತೆ ಮಾಡುತ್ತದೆ ಎಂಬುದು ಸತ್ಯವಲ್ಲವೇ? ಈ ಆಸೆ ಹೊರನೋಟಕ್ಕೆ ಕಾಣುವುದಿಲ್ಲ. ಆದರೆ ಇದು ನಮ್ಮೊಳಗೇ ನಮಗೆ ಕಾಣದಂತೆಯೇ ಕೆಲಸ ಮಾಡುತ್ತಿರುತ್ತದೆ. ಈ ಬದುಕುವ, ಮೇಲೇರುವ ಆಸೆ ನಮ್ಮ ವಿಚಿತ್ರ ಮತ್ತು ವಿಶಿಷ್ಟವಾದ ಗುಣವಾಗಿದೆ. ಈ ಗುಣದ ಕಾರಣವನ್ನು ತರ್ಕದ ಮೂಲಕ ತಿಳಿಯುವುದು ಸಾಧ್ಯವಿದೆಯೆಂದು ಅನ್ನಿಸುವುದಿಲ್ಲ. ಇದು ತರ್ಕಾತೀತವಾದ ವಿಸ್ಮಯವೆನ್ನಬಹುದು.

     ಸಾಯಲು ಇಚ್ಛಿಸುವವರು ಯಾರಾದರೂ ಇದ್ದಾರೆಯೇ? ಸಾಯಬಯಸುವ ಯಾವುದೇ ಜೀವಿ -ಅದು ಮಾನವನಿರಬಹುದು, ಪ್ರಾಣಿಯಿರಬಹುದು, ಕ್ರಿಮಿ-ಕೀಟವಿರಬಹುದು, ಗಿಡ-ಮರಗಳಿರಬಹುದು- ಇದೆಯೇ? ಆತ್ಮಹತ್ಯೆ ಮಾಡಿಕೊಳ್ಳುವವರು ಇರುತ್ತಾರೆ ಎಂದು ನೀವು ಹೇಳಬಹುದು. ಅವರು ಸಾಯುವುದೂ, ಸಾಯಬಯಸುವುದೂ 'ಬದುಕಲಿಕ್ಕಾಗಿಯೇ' ಎಂದು ನನ್ನ ಉತ್ತರವಿದೆ. ಎಷ್ಟು ದೀರ್ಘಕಾಲದವರೆಗೆ ಬದುಕಲು ಸಾಧ್ಯವೋ ಅಷ್ಟೂ ಕಾಲ ಜನರು ಬದುಕಿರಬಯಸುತ್ತಾರೆ. 'ದೀರ್ಘಾಯುಷ್ಮಾನ್ ಭವ' ಎಂದು ಹಿರಿಯರು ಕಿರಿಯರಿಗೆ ಆಶೀರ್ವಾದ ಮಾಡುತ್ತಾರೆ. 'ದೇವರೇ, ನನಗೆ (ನಮಗೆ ಎಂದು ನಮ್ಮ ಕುಟುಂಬದವರನ್ನೂ ಸೇರಿಸುತ್ತೇವೆ) ದೀರ್ಘಾಯಸ್ಸು, ಆರೋಗ್ಯ, ಸಂಪತ್ತು ಕೊಡು' ಎಂದು ಪ್ರಾರ್ಥನೆಯನ್ನೂ ಮಾಡುತ್ತೇವೆ. ಈ ದೀರ್ಘಾಯಸ್ಸು ಅಂದರೆ ಏನಿರಬಹುದು? ಅದು ಬಹುಷಃ ನಾವು ಭಾವಿಸಿರುವಂತೆ ಈಗ ಹೊಂದಿರುವ ಶರೀರವನ್ನೇ ಧರಿಸಿ ಇರುವ ಬಯಕೆಯಂತೂ ಇರಲಾರದು. ನಾವು ಗೊತ್ತಿಲ್ಲದಂತೆಯೇ, ನಮಗೇ ಅದು ಏನೆಂದು ನಮ್ಮ ಮನಸ್ಸಿಗೇ ಸ್ಪಷ್ಟವಿರದ ಸಂಗತಿಯ ಬಗ್ಗೆ ಪ್ರಾರ್ಥಿಸುತ್ತೇವೆ. ನಾವು ನಮ್ಮ ಕಲ್ಪನೆಗೂ ಮೀರಿದಂತಹ ಅದೇನೋ ಬಯಸುತ್ತೇವೆ. ಈ ದೀರ್ಘಾಯಸ್ಸು ಅಂದರೆ ಈಗಿನ ಶರೀರದಲ್ಲಿಯೇ ಬಹುಕಾಲ ಇರುವುದೇ? ಅದು ಬಾಲ್ಯಕಾಲದ ಶರೀರವೇ, ಯುವಾವಸ್ಥೆಯ ಶರೀರವೇ, ಮಧ್ಯವಯಸ್ಸಿನ ಶರೀರವೇ, ಪ್ರೌಢಾವಸ್ಥೆಯ ಶರೀರವೇ ಅಥವ ವೃದ್ಧಾಪ್ಯದ ಶರೀರವೇ? ಯಾವುದು ಎಂದು ನಾವು ಖಚಿತವಾಗಿ ಹೇಳಲಾರೆವು ಮತ್ತು ಅದೇ ಸ್ಥಿತಿಯಲ್ಲಿ ಬಹುಕಾಲ ಇರಲಾರೆವು ಎಂಬ ಅರಿವೂ ನಮಗೆ ಇರುತ್ತದೆ. ಆದರೂ ನಮಗೆ ದೀರ್ಘಾಯಸ್ಸು ಬೇಕು!

ಆತ್ಮನೇ ತಾನೆಂಬ ಅರಿವು ಮರೆಯಾಗಿ

ತನು-ಮನವೇ ತಾವೆಂದು ಭ್ರಮಿತರಾಗಿರಲು|

ತುಂಬಿದಜ್ಞಾನದಿಂ ಜನಿಸುವುದು ಕಾಮ

ಕಾಮಫಲಿತಕಾಗಿ ಕರ್ಮಗೈವರು ಮೂಢ||

     ನಮ್ಮ ಒಳಾಂತರಂಗದಲ್ಲಿ ಅಡಗಿದ ಬಯಕೆಯೆಂದರೆ ನಮ್ಮ ಅಸ್ತಿತ್ವದ ಮಹತ್ವವನ್ನು ಚಿರವಾಗಿ ಇರುವಂತೆ ಮಾಡುವುದೇ ಆಗಿದೆ! ವಿಚಾರ ಮಾಡಿದರೆ, ಶರೀರದ ಮೂಲಕ ನಾವು ಹೊಂದಿರುವ ಅಸ್ತಿತ್ವವನ್ನೇ ನಮ್ಮ ಅಸ್ತಿತ್ವ ಎಂದು ತಪ್ಪಾಗಿ ಗುರುತಿಸಿಕೊಂಡರೂ, ಶಾರೀರಿಕ ಅಸ್ತಿತ್ವಕ್ಕೂ ಮೀರಿ ಮುಂದುವರೆಯುವ ಸೂಕ್ಷ್ಮ ತುಡಿತವಿರುವುದನ್ನು ಕಂಡುಕೊಳ್ಳಬಹುದು. ಈ ಕಾರಣದಿಂದಲೇ ನಾವು ಹೆಚ್ಚು ಹೆಚ್ಚು ಬಯಸುತ್ತಾ ಹೋಗುವುದು, ಹೆಚ್ಚು ಹೆಚ್ಚು ಸಂಗ್ರಹಿಸುತ್ತಾ ಹೋಗುವುದು ಮತ್ತು ನಮ್ಮ ಅಸ್ತಿತ್ವವನ್ನು ಬಾಹ್ಯವಾಗಿ ವಿಸ್ತರಿಸಿಕೊಳ್ಳುತ್ತಾ ಹೋಗುವುದು! ಇದನ್ನು ಅನುಭವಿಸುವ ಸಲುವಾಗಿಯೇ ದೀರ್ಘಾಯಸ್ಸು ಕೋರುವುದು! ನಮ್ಮ ಪ್ರಾಪ್ತಿ(ಸಾಮ್ರಾಜ್ಯ ಅಂದುಕೊಳ್ಳೋಣ)ಯನ್ನು ಮತ್ತು ಸಮಯವನ್ನು ಹೆಚ್ಚಿಸಿಕೊಳ್ಳಬಯಸುವುದೇ ನಮ್ಮ ಆಸೆಯಾಗಿದೆ. ಇದಕ್ಕಾಗಿಯೇ ನಮ್ಮ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇವೆ. ನಾವು ಈಗಿರುವುದಕ್ಕಿಂತಲೂ ಹೆಚ್ಚಿನದನ್ನು ಎಲ್ಲಾ ಸಾಧ್ಯ ಮಾರ್ಗಗಳಿಂದ ಪಡೆಯಬಯಸುತ್ತೇವೆ. ಅದು ಎಷ್ಟರಮಟ್ಟಿಗೆ ಎಂದರೆ, ಈಗಲ್ಲದಿದ್ದರೆ ನಾಳೆ, ನಾಳೆಯಲ್ಲದಿದ್ದರೆ ನಾಡಿದ್ದು, ಹೀಗೆಯೇ ಮುಂದುವರೆದು ಅನಂತಕಾಲದವರೆಗೆ ಇಡೀ ವಿಶ್ವವೇ ನಮ್ಮದಾಗಬೇಕೆಂಬವರೆಗೆ ಈ ಅಸೆ ಅನ್ನುವುದು ಅಪ್ರಜ್ಞಾತ್ಮಕವಾಗಿ ನಮ್ಮಲ್ಲಿ ಸುಪ್ತವಾಗಿರುತ್ತದೆ. ಆದರೆ ತಿಳುವಳಿಕೆಯ ಕೊರತೆಯಿಂದ ಈ ಶರೀರದಲ್ಲಿಯೇ ದೀರ್ಘವಾಗಿ ಇರಬೇಕೆಂಬ ಆಸೆ ನಮ್ಮದು ಎಂದು ಅಂದುಕೊಂಡುಬಿಡುತ್ತೇವೆ. ಚತುರ್ವಿಧ ಪುರುಷಾರ್ಥಗಳಲ್ಲಿ ಈ ಕಾಮ/ಆಸೆಗೂ ಪ್ರಧಾನ ಸ್ಥಾನವಿರುವುದನ್ನು ಗಮನಿಸಬಹುದು. ಸಣ್ಣ ಸಣ್ಣ ಅಸೆಗಳನ್ನು ಬಿಟ್ಟು ಅತ್ಯಂತ ಗರಿಷ್ಠವಾದುದನ್ನು ಪಡೆಯಲು ನೆರವಾಗುವ ದೊಡ್ಡ ಆಸೆಯೇ ಪುರುಷಾರ್ಥ ಸಾಧನೆಗೆ ನೆರವಾಗುವ ಕಾಮವಾಗಿದೆ.

ಬೇಕು ಬೇಕೆಂಬುದಕೆ ಕೊನೆಯೆಂಬುದೆಲ್ಲಿ?

ಬಯಸಿದ್ದು ಸಿಕ್ಕಲ್ಲಿ ಮತ್ತಷ್ಟು ಬೇಕು ಮತ್ತಷ್ಟು|

ಸಿಕ್ಕಲ್ಲಿ ಮಗದಷ್ಟು ಬೇಕೆಂಬುದಕೆ ಕಾರಣವು

ಕಾಮ, ಅದಕಿಲ್ಲ ಪೂರ್ಣ ವಿರಾಮ ಮೂಢ||

     ಬದುಕುವ ಆಸೆ ಅನ್ನುವುದು ನಮ್ಮ ಅಸ್ತಿತ್ವಕ್ಕೆ ಆಧಾರ ಎಂದು ಮೇಲಿನ ತರ್ಕದಿಂದ ತಿಳಿಯುತ್ತದೆ. ಆದರೆ ಈ ಬದುಕುವುದು ಅಂದರೆ ಏನು, ಬದುಕಿನ ಗುರಿ ಏನು ಎಂಬುದಕ್ಕೆ ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಾರೆ. ಸ್ವರ್ಗ ಅಥವ ಮೋಕ್ಷ ಪ್ರಾಪ್ತಿಗಾಗಿ ಬದುಕುವುದು ಅನ್ನುತ್ತಾರೆ. ಹುಟ್ಟುವುದು ಆಕಸ್ಮಿಕವಾದರೂ ಸಾಯುವುದು ಖಚಿತ ಎನ್ನುವವರೂ ಇದ್ದಾರೆ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಗುರಿಯಾಗಿರಲಿಕ್ಕಿಲ್ಲ. ಹುಟ್ಟುವುದಕ್ಕಿಂತ ಮುಂಚೆ ಮತ್ತು ಸತ್ತ ನಂತರದಲ್ಲಿ ನಾವು ಈಗ ಹೊಂದಿರುವ ರೂಪದಲ್ಲಿ ಇರುವುದಿಲ್ಲ. ಆದ್ದರಿಂದ ಸಾವು ಅಂತಿಮವಲ್ಲ. ಸಾಯುವುದಾಗಲೀ, ಸ್ವರ್ಗ ಸೇರುವುದಾಗಲೀ ನಮ್ಮ ಬದುಕಿನ ಗುರಿಯಾಗಿದ್ದರೆ ನಾವು ಹುಟ್ಟುತ್ತಲೇ ಇರುತ್ತಿರಲಿಲ್ಲ. ಹುಟ್ಟಿರುವುದರಿಂದ ನಾವು ಗುರಿಯನ್ನು ತಲುಪಿಲ್ಲವೆಂದು ಹೇಳಬೇಕೆ? ಸ್ವಾಮಿ ದಯಾನಂದರು ಹೇಳುತ್ತಾರೆ: 'ಬದುಕುವುದೇ ಬದುಕಿನ ಗುರಿ. ಬದುಕುವುದಕ್ಕಾಗಿ ಬದುಕಬೇಕು, ಇದನ್ನು ಬಿಟ್ಟು ಮತ್ತೇನೂ ಇಲ್ಲ.' ಎಷ್ಟು ಸತ್ಯ!

     ಬದುಕುವ ಆಸೆ ನಮ್ಮನ್ನು ಬದುಕಿಸಿದೆ. ಒಂದು ಗುರಿಯನ್ನು ತಲುಪಲು ನಾವು ಬಯಸಿದರೆ ಅದು ಕಷ್ಟಸಾಧ್ಯವೇನಲ್ಲ. ಯಾವುದೇ ಬಯಕೆ ಈಡೇರಲಾರದಂತಹುದೇನೂ ಅಲ್ಲ. ಅದನ್ನು ಸಾಧಿಸಲು ಸತತ ಪ್ರಯತ್ನ ಮಾಡಬೇಕಷ್ಟೆ. ಕೆಳಹಂತದ ಗುರಿಗಳು, ಆಸೆಗಳು, ಬಯಕೆಗಳನ್ನು ಬಿಟ್ಟು ಉನ್ನತವಾದ ಗುರಿಯೆಡೆಗೆ ನಮ್ಮ ಲಕ್ಷ್ಯವಿದ್ದರೆ ನಮ್ಮ ಶಾರೀರಿಕ ಅಸ್ತಿತ್ವವನ್ನು ಮೀರಿ ನಮ್ಮ ನೈಜ ಅಸ್ತಿತ್ವ ಮುನ್ನಡೆಯುತ್ತದೆ. ಇದನ್ನೇ 'ಬದುಕುವುದು' ಅನ್ನಬಹುದು.

ಹುಟ್ಟು ಮೊದಲಲ್ಲ ಸಾವು ಕೊನೆಯಲ್ಲ

ಹುಟ್ಟು ಸಾವಿನ ಕೊಂಡಿ ಬದುಕಿನಾ ಬಂಡಿ |

ಹಿಂದಕೋ ಮುಂದಕೋ ಬಂಡಿ ಸಾಗುವುದು

ನಶಿಸಿದರೆ ಏರುವೆ ಹೊಸಬಂಡಿ ಮೂಢ ||

-ಕ.ವೆಂ.ನಾಗರಾಜ್.

Comments

Submitted by nageshamysore Thu, 04/09/2015 - 19:04

ಕವಿಗಳೆ ನಮಸ್ಕಾರ. ನಮ್ಮ ಅಸ್ತಿತ್ವದ ಮೂಲಕಾರಣವನ್ನು ಶೋಧಿಸುತ್ತ, ಹೇಗೆ ಆಸೆ, ಕಾಮನೆಗಳು ಬದುಕುವ ಇಚ್ಛೆಗೆ ನೀರೆರೆಯುವ ಸರಕುಗಳಾಗುತ್ತವೆ ಎಂದು ತೋರಿಸಿಕೊಟ್ಟ ರೀತಿ ಕುತೂಹಲಕರ. ಅಲ್ಲದೆ ಬದುಕಿನ ಗಮ್ಯ ಸಾವಲ್ಲ, ಅದೊಂದು ಯಾತ್ರೆಯ ಅಂತಿಮ ಬಿಂದು ಮಾತ್ರ ಎನ್ನುವುದನ್ನು ಗಹನ ಸ್ತರದಲ್ಲಿ ಪ್ರೌಢವಾಗಿ ಬಿಡಿಸಿಟ್ಟ ಲೇಖನ. ಅಂತೆಯೆ ಗಮ್ಯವೊದರ ಬೆನ್ನತ್ತಿ ಹೋಗುವ ಯಾತ್ರೆಯೆ ಬದುಕಿನ ಉದ್ದಗಲವನ್ನೆಳೆಯುವ ಮತ್ತು ನಿರ್ಧರಿಸುವ ಸೂತ್ರಧಾರಿಯಾಗುವುದನ್ನು ಚೆನ್ನಾಗಿ ಬಿಡಿಸಿಟ್ಟಿದೆ. ನಮ್ಮ ಅಸ್ತಿತ್ವದ ಮೂಲ ಕಾರಣವನ್ನು ವಿಶ್ಲೇಷಿಸುತ್ತ, ವಿವರಣೆಯ ಗಹನತೆ ಆಳವಾಗುತ್ತ, ಗಾಢವಾಗುತ್ತ, ಸೋಜಿಗವಾಗುತ್ತ, ಸ್ಪಷ್ಟವೆ ಅಸ್ಪಷ್ಟವಾಗುವ ಪರಿಯನ್ನು ಚೆನ್ನಾಗಿ ಹಿಡಿದಿಟ್ಟಿದ್ದೀರಿ. ಅಭಿನಂದನೆಗಳು ! :-)

Submitted by H A Patil Fri, 04/10/2015 - 15:46

ಕವಿ ನಾಗರಾಜರವರಿಗೆ ವಂದನೆಗಳು
ಬದುಕುವ ಆಶೆ ಪ್ರತಿಯೊಬ್ಬ ಮನುಷ್ಯನನ್ನು ಒಮ್ಮೆ ಯೋಚನೆಗೆ ಹಚ್ಚಬಲ್ಲ ಲೇಖನ, ತಮ್ಮ ಅಭಿಪ್ರಾಯ ಸರಿ ಬದುಕುವ ಅಶೆಯೆ ನಮ್ಮಂತಹ ಜನ ಸಾಮಾನ್ಯರ ಗುರಿ ಬಲು ಸೀಮಿತ ಅರ್ಥದಲ್ಲಿಯೆ ಬದುಕಿ ಬಿಡುತ್ತೇವೆ, ಒಂದು ಉದಾತ್ತ ಧ್ಯೇಯ ಗುರಿಗಳೊಂದಿಗೆ ನಾವು ಜೀವಿಸುವುದೆ ಇಲ್ಲ ಅದೇ ನಮ್ಮ ದುರಂತ, ಬದುಕಿನ ಸಾರ್ಥಕತೆ ಮತ್ತು ನಿರರರ್ಥಕತೆಗಳನ್ನು ಕುರಿತು ಯೋಚಿಸಲು ಹಚ್ಚುವ ಕವನ, ದಿನದಿಂದ ದಿನಕ್ಕೆ ನೀವು ಅಂತರಿಕವಾಗಿ ಪಕ್ವಗೊಳ್ಳುತ್ತ ಅದರ ಫಲವನ್ನು ಬರಹದ ಮೂಲಕ ನಮಗೆಲ್ಲ ಹಂಚುತ್ತ ಒಂದು ಜನ ಸಮೂಹವನ್ನು ಜಾಗ್ರತೆಯೆಡೆಗೆ ಒಯ್ಯುತ್ತಿದ್ದೀರಿ ದನ್ಯವಾದಗಳು.

Submitted by kavinagaraj Sat, 04/11/2015 - 17:12

In reply to by H A Patil

ವಂದನೆಗಳು, ಪಾಟೀಲರೇ. ಪಂ. ಸುಧಾಕರ ಚತುರ್ವೇದಿಯವರು ಅಸ್ತೇಯದ (ಕಳ್ಳತನ ಮಾಡದಿರುವುದು) ಕುರಿತು ಹೇಳುವಾಗ ತಮಗೆ ತಿಳಿದಿರುವುದನ್ನು ಇನ್ನೊಬ್ಬರಿಗೆ ಹೇಳದಿರುವುದೂ ಕಳ್ಳತನವಾಗುತ್ತದೆ ಎಂದು ಒಂದು ಸತ್ಸಂಗದಲ್ಲಿ ಹೇಳಿದ್ದರು. ಹಾಗಾಗಿ ನಾನು ತಿಳಿಯಲು ಪ್ರಯತ್ನಿಸುತ್ತಾ ಜೊತೆಜೊತೆಗೆ ತಿಳಿದಿರುವುದನ್ನು ತಮ್ಮಗಳೊಂದಿಗೆ ಹಂಚಿಕೊಳ್ಳುತ್ತಿರುವೆ.

Submitted by kavinagaraj Sat, 04/11/2015 - 17:14

ನಾಗೇಶರ ಪ್ರತಿಕ್ರಿಯೆಗೆ ಉತ್ತರಿಸಿದ್ದು ಹಲವು ಸಲ ಮುದ್ರಣವಾಗಲು ಕಾರಣ ವೈರಸ್ ಮಹಿಮೆ! ವೈರಸ್ ಸಹ ಬದುಕಲು ಪ್ರಯತ್ನಿಸಿತು! ಸಂಪದಿಗರು ದಯವಿಟ್ಟು ಕ್ಷಮಿಸಬೇಕು.

Submitted by manju787 Sat, 04/11/2015 - 20:21

ಗಹನವಾದ‌ ಚಿಂತನೆಗೆ ಹಚ್ಚುವಂತಿದೆ ನಿಮ್ಮ‌ ಲೇಖನ‌.