ಮುಂಗಾರು ಮಳೆ ನೋಡಿದ ಮೇಲೆ
-೧-
ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಈ ಪ್ರಶ್ನೆ ನನ್ನನ್ನು ಕಾಡಿದ್ದು ಮುಂಗಾರು ಮಳೆಯನ್ನು ಮೊನ್ನೆ ಸಿಡ್ನಿಯಲ್ಲಿ ನೋಡಿದಾಗ. ಸಾಧಾರಣವಾಗಿ ಎರಡು ಶೋಗಳು ನಡೆಯುವ ಇಲ್ಲೂ ಮೂರು ಶೋಗಳಿದ್ದು ಮೂರಕ್ಕೂ ಜನ ತುಂಬಿದ್ದರು.
ಪ್ರೀತಂನ ಮಾತುಗಳಿಗೆ ಮೊದಮೊದಲು ಜನ ನಗುತ್ತಲೇ ಚಿತ್ರ ಮೊದಲುಗೊಂಡಿತು. ಪ್ರೀತಂನ ಮಾತುಕತೆ ಎಲ್ಲಾ, ಬೆಂಗಳೂರಿನ ಶ್ರೀಮಂತ ಹುಡುಗನ ಉಡಾಫೆ, ಸಲೀಸಾಗಿ ಹರಿಯುವ ಇಂಗ್ಲೀಷ್ ಮಿಶ್ರಿತ ಕನ್ನಡ, ಮನಸ್ಸಿಗೆ ಹಿಡಿದ ಹುಡುಗಿ ಬೇಕೇ ಬೇಕು ಎಂಬಂತೆ ಹಿಂಬಾಲಿಸುವ ಮನೋಧರ್ಮ, ಇದರ ಸುತ್ತಲೇ ಸುತ್ತುತ್ತ ಢಾಳಾಗಿ ನಮ್ಮ ಮುಂದೆ ನಿಲ್ಲುತ್ತದೆ. ಒಳಗೇನೂ ಇಟ್ಟುಕೊಳ್ಳದೆ ಬೇಕಾದ್ದನ್ನು ಆಡುವ, ಆಡಿದಂತೆ ನಡೆಯುವ ಹುಡುಗ. ಇವೆಲ್ಲಾ ಹೊಸದೇನಲ್ಲ. ಆದರೆ, ಹೊಸ ಬಗೆಯ ಸ್ವಾವಹೇಳನ (self-depricating) ಹಾಸ್ಯ ಕನ್ನಡ ಚಿತ್ರದ ಹೀರೋಗೆ ಹೊಸದಿರಬಹುದು. ಆ ಅಂಶ ಅಲ್ಲಲ್ಲಿ ಕನ್ನಡದ ಚಿತ್ರಗಳಲ್ಲಿ ಈ ಹಿಂದೆ ಬಂದಿದ್ದರೂ, ಇಲ್ಲಿ ಅದು ಪ್ರೀತಂನ ಸ್ವಭಾವದ ಒಂದು ದೊಡ್ಡ ಭಾಗವೇ ಆಗಿರುವುದು ಹೊಸದೇನೋ ಅನಿಸಿತು. ಆಗಾಗ ಸಂದರ್ಭದ ಹೊರಗೆ ನಿಂತು ಚಟಾಕಿ ಹಾರಿಸುವ ಕ್ಷಣಗಳು ಮುದಕೊಡುವಂಥವು. ಎಲ್ಲಕ್ಕಿಂತ ಮುಖ್ಯವಾಗಿ ಪ್ರೀತಂ ಬಳಸುವ ಬೆಂಗಳೂರಿನಂಥ ನಗರದ ಭಾಷೆಯಿಂದಾಗಿ ಅದು ಹೊಸದಾಗಿ ಕಾಣುತ್ತವೆ ಕೂಡ. ಆದರೆ ಚಿತ್ರದ ಉತ್ತರಾರ್ಧದ ಹೊತ್ತಿಗೆ ಅವನ ಮಾತು ಕತೆ ಹಾಗೇ ಮುಂದುವರೆಯುವುದು ಪಿಚ್ ಎನಿಸುತ್ತದೆ.
ಸುಂದರ ಸ್ಥಳಗಳು, ಧಾರ್ಮಿಕ ಕೋನದ ಸೀನು, ಸರ್ಕಾರಿ ನೌಕರರನ್ನು ತಮಾಷೆ ಮಾಡುವ ಸೀನು ಇವೆಲ್ಲಾ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಅಂಶಗಳು. ಅವುಗಳನ್ನು ತಪ್ಪದೆ ಎಚ್ಚರಿಕೆಯಿಂದ ಸೇರಿಸಿಕೊಂಡಿದ್ದಾರೆ. ಎಲ್ಲ ರೀತಿಯ ನೋಟಗರನ್ನು ತೆಕ್ಕೆಗೆ ತೆಗೆದುಕೊಳ್ಳುವ ಜರೂರು ಇಂಥ ಚಿತ್ರಗಳಿಗೆ ಇರುತ್ತವೆ.
ಸುಂದರ ಛಾಯಾಗ್ರಹಣ ಅನ್ನುವುದೇನೋ ನಿಜ. ಆದರೆ ಅದು ಕ್ಯಾಲೆಂಡರ್ ಚಿತ್ರಗಳ ಹಾಗೆ ಸುಂದರವಷ್ಟೆ. ಚಿತ್ರದಲ್ಲಿನ ಸಂದರ್ಭಗಳ ಮೂಡನ್ನು ಸ್ಥಾಪಿಸುತ್ತದೆ ಅನ್ನುವುದು ನಿಜ. ಆದರೆ ಅದನ್ನು ಏರಿಸುವ, ತೀವ್ರಗೊಳಿಸುವ ಕೆಲಸ ನನಗೆ ಕಾಣಲಿಲ್ಲ. ಎಲ್ಲರೂ ಮೆಚ್ಚುವ ಜೋಗದ ಶಾಟ್‌ಗಳನ್ನೇ ತೆಗೆದುಕೊಂಡರೂ, ಪ್ರೀತಿಸುವಾಗ ಮತ್ತು ಹಳಹಳಿಸುವ ಎರಡು ಸಂದರ್ಭದಲ್ಲೂ ಒಂದೇ ಬಗೆಯ ಕ್ಯಾಮೆರಾ ಚಲನೆಯಿದೆ. ಎರಡನೇ ಸಲ ಬಣ್ಣದ ತೀವ್ರತೆ ಸ್ವಲ್ಪ ಕಡಿಮೆ ಮಾಡಿ, ನೀಲಿಯಾಗಿಸಿದ್ದು ಮಾತ್ರ ಕಾಣುತ್ತದೆ. ಇನ್ನು ಆಗಾಗ ಕ್ಯಾಮೆರಾವನ್ನು ಸೊಟ್ಟಗಿಡುವ ಖಯಾಲಿ-ಖುಷಿ ನನಗೆ ಅರ್ಥವಾಗಲಿಲ್ಲ.
ಇನ್ನು ಸಂಗೀತ ಮತ್ತು ನೃತ್ಯ ನನ್ನ ಮನಸ್ಸಿನಲ್ಲಿ ಉಳಿಯಲಿಲ್ಲ. mtv ಮಾದರಿಯ ಹಾಡಿನ ಕಟಿಂಗಗಳು (ಮತ್ತು ಮೇಲೆ ಹೇಳಿದ ಸೊಟ್ಟ ಕ್ಯಾಮೆರಾ) ಕನ್ನಡದ ಕಮರ್ಷಿಯಲ್ ಜಗತ್ತಿಗೆ ಹೊಸದೇನೋ ನನಗೆ ಗೊತ್ತಿಲ್ಲ. ಆದರೆ ನನ್ನ ಮನೋಭಾವಕ್ಕೆ ಅದು ಸ್ವಲ್ಪ ಕಿರಿಕಿರಿಯೇ ಅನ್ನಬಹುದು. ಆದರೆ ಎಲ್ಲರೂ ಅದನ್ನು ತುಂಬಾ ಇಷ್ಟಪಟ್ಟಿದ್ದಾರೆ ಅನಿಸುತ್ತದೆ. ನನಗೇನಾಗಿದೆ ಅಂದುಕೊಳ್ಳುತ್ತೇನೆ!
ಕತೆಯನ್ನು ಗಂಭೀರವಾಗಗೊಡದೆ, ಒಂದೇ ಸ್ತರದಲ್ಲಿ ನಡೆಯುವುದು ಕೂಡ ಸ್ವಲ್ಪ ಪಿಚ್ ಎನಿಸಿತು. ಯಾಕೆಂದರೆ ಕತೆಯನ್ನು ಹಲವು ಸ್ತರಗಳಲ್ಲಿ ಹೇಳುವ ಉದಾಹರಣೆಗಳನ್ನು ಕನ್ನಡದ ಕಳಪೆ ಕಮರ್ಷಿಯಲ್ ಚಿತ್ರಗಳಲ್ಲೂ ಈ ಹಿಂದೆ ನೋಡಿದ್ದೇವೆ. ಇಲ್ಲಿ ಮಾತ್ರ, ಪ್ರೀತಿಸುವುದು, ಪ್ರೀತಿಸುವ ಹುಡುಗಿ ತನಗೆ ಬೇಕೆನಿಸುವುದು, ಅದಕ್ಕಾಗಿ ಹಾತೊರೆಯುತ್ತಾ ಅವಳ ಹಿಂದೆ ಓಡುವುದು ಅದೇ ಕತೆ, ಕತೆಯೆಲ್ಲಾ ಅದೆ! ಮೊದಲೆರಡು ಭಾಗ ಚುರುಕಾಗಿರುವ ನಿರೂಪಣೆ ಮೂರನೇ ಭಾಗದಲ್ಲಿ ಕಾಲು ಮುರಿದು ಬಿದ್ದಂತೆ ಅನಿಸುತ್ತದೆ. ಯಾವ ದಿಕ್ಕಲ್ಲಿ ಚಿತ್ರಕ್ಕೆ ಮೋಕ್ಷವಿದೆ ಎಂದು ತಡಕಾಡುತ್ತಿರುವಂತೆ ಕಾಣುತ್ತದೆ.
-೨-
ಮುಂಗಾರು ಮಳೆಯನ್ನು ಯಾಕೆ ಅಷ್ಟೊಂದು ಜನ ನೋಡಿದ್ದಾರೆ ಮತ್ತು ನೋಡುತ್ತಿದ್ದಾರೆ? ಇಷ್ಟೆಲ್ಲಾ ಕಮರ್ಷಿಯಲ್ ಚಿತ್ರಗಳ ಗುಣಗಳಿರುವುದು ಕಂಡೂ ಕೂಡ ನಾನು ಮೊದಲು ಎತ್ತಿದ ಪ್ರಶ್ನೆ ಇನ್ನೂ ಕಾಡುತ್ತದೆ.
ಅದಕ್ಕೆ ಸ್ವಲ್ಪ ಕೆದಕಿ ನೋಡಿದಾಗ ಒಂದೆರಡು ಗಂಭೀರವಾದ ಪ್ರಶ್ನೆಗಳು ಎದ್ದವು. ಬರೇ ಶ್ರೀಮಂತರ ಮನೆಯ ಕತೆ ಹೇಳುವ ಚಾಳಿ ಇತ್ತೀಚೆಗೆ ನಮ್ಮ ಚಿತ್ರಗಳಲ್ಲಿ ಇರುವುದು ಹೆಚ್ಚೇನೋ. ಇದು ತನ್ನಷ್ಟಕ್ಕೆ ಏನೂ ತೊಂದರೆಯಿಲ್ಲದ ವಿಷಯ. ಆದರೆ ಅದಕ್ಕೊಂದು ಕೌಂಟರ್ ಪಾಯಿಂಟಿಲ್ಲದೆ ಇರುವುದು ಸ್ವಲ್ಪ ಅಪಾಯ. ಕೌಂಟರ್‍ಪಾಯಿಂಟ್ ಬಡತನವೇ ಆಗಬೇಕಾಗಿಲ್ಲ ಮತ್ತು ಕತೆಯ ಹೊರಗಿನಿಂದ ಬರಬೇಕಾಗಿಲ್ಲ. ಅದು ಕತೆಯ ಒಳಗೇ ಇರಬಹುದು, ಈಗಿರುವ ಪಾತ್ರಗಳೇ ಆಗಿರಬಹುದು. ಅದು ವಿವೇಚನೆ, ವಿವೇಕವನ್ನು ಮೆರೆಯುವ ಪಾತ್ರವಾಗಬಹುದು. ಇದೂ ಕೂಡ ಕಮರ್ಷಿಯಲ್ ಚಿತ್ರಗಳಿಗೆ ಹೊಸದೇನೂ ಅಲ್ಲ. ಮತ್ತು ಈ ಹಿಂದೆ ಕಮರ್ಷಿಯಲ್ ಚಿತ್ರಗಳಲ್ಲೇ ಇವನ್ನು ಚೆನ್ನಾಗಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾವಾಬ್ದಾರಿಯನ್ನು ಕಮರ್ಷಿಯಲ್ ಚಿತ್ರಕಾರರಲ್ಲಿ ಅಪೇಕ್ಷಿಸಕೂಡದು ಎಂಬ ಮಾತು ಯಾಕೋ ಸ್ವಲ್ಪ ಹಳಸಲು ಎನಿಸುತ್ತದೆ.
ಮತ್ತೊಂದು ಗಂಭೀರವಾದ ಪ್ರಶ್ನೆ ಮತ್ತು ನನ್ನನ್ನು ತುಂಬಾ ಚಿಂತೆಗೀಡು ಮಾಡಿದ್ದು ನಂದಿನಿಯ ಪಾತ್ರ ಚಿತ್ರಣದ ಕುರಿತು. ಒಂದು ಆಟದ ಗೊಂಬೆಯಾಗಿ (ಐಟಂ ಸಾಂಗಿಂನಿಂದ ಹಿಡಿದು) ಕಡೆಯವರೆಗೂ ತನ್ನ ಒಂದೇ ಒಂದು ಇಚ್ಛೆಯನ್ನು ಪೂರೈಸಲು ಕಿರು ಬೆರಳೂ ಎತ್ತದ ಹುಡುಗಿಯಾಗಿ ಚಿತ್ರಿತವಾಗಿರುವುದು. ಪ್ರೀತಂನನ್ನು ಒಂದು ಸಾರೆ ಕಪಾಳಕ್ಕೆ ಬಿಗಿಯುತ್ತಾಳೆ ಅಷ್ಟೆ. ಅದೂ ತನಗೋಸ್ಕರವಾಗಿಯೇ! ಪ್ರೀತಂ ಅಷ್ಟೆಲ್ಲಾ ತಿಣಕಲಾಡುತ್ತಿರುವಾಗ ಕೂಡ ಅವನ ಪ್ಲಾನಿನ ಕೈಗೊಂಬೆಯಾಗಿ ಮಾತ್ರ ನಂದಿನಿ ಚಿತ್ರಿತವಾಗಿದ್ದಾಳೆ. ಅವಳ ಸ್ವಭಾವದ ಬಗ್ಗೆ ಯಾವುದೇ ಇಣುಕು ನೋಟವೂ ಚಿತ್ರದಲ್ಲಿ ಇಲ್ಲ. ಪ್ರೀತಂನನ್ನು ಅಷ್ಟೊಂದು ರಂಗಾಗಿ ಚಿತ್ರಿಸಿ ನಂದಿನಿಯನ್ನು ಒಂದು ಬೋರಿಂಗ್ ಪಾತ್ರವಾಗಿ ಮಾಡುವುದರ ಹಿಂದಿನ ಉದ್ದೇಶವೇನಿರಬಹುದು ಎಂದು ಯೋಚಿಸುತ್ತೇನೆ. ಇನ್ನೂ ಕೂಡ ನಮ್ಮ ಹೆಣ್ಣುಮಕ್ಕಳನ್ನು ಗೊಂಬೆಗಳ ಹಾಗೆ ಮಾತ್ರ ಚಿತ್ರಿಸಿ ನಮ್ಮ ಚಿತ್ರಗಳು ಜಯಭೇರಿ ಹೊಡೆಯಬಲ್ಲವಲ್ಲ ಎಂದು ಅಚ್ಚರಿಪಡುತ್ತೇನೆ. ಈ ಹಿಂದಿನ ಕಳಪೆ ಕಮರ್ಷಿಯಲ್ ಚಿತ್ರಗಳಲ್ಲೂ ಕೂಡ ನಂದಿನಿಗಿಂತ ಗಟ್ಟಿಯಾದ, ರಂಗುರಂಗು ಸ್ವಭಾವದ ಹೆಣ್ಣು ಪಾತ್ರಗಳು ನಮಗೆ ಸಿಗುತ್ತವೆ! ಇಲ್ಲಿ ಏಕೆ ಹೀಗಾಗಿದೆ? ಗಂಡು ಕೇಂದ್ರಿತ ಕತೆಯಾದ್ದರಿಂದ ಏನಾದರೂ ಲಾಭವಿದೆಯೆ? ಲಾಭವಿಲ್ಲದ ಹಾಗೆ ಕಮರ್ಷಿಯಲ್ ಚಿತ್ರಗಳು ಮಾಡಲ್ಪಡುತ್ತವೆಯೆ? ಹೆಣ್ಣು ಕೇಂದ್ರಿತ ಆಗಬೇಕೆಂದೇನೂ ಇಲ್ಲ, ಆದರೆ ಸಹಜವಾಗಿ ಇರಬೇಕಾದ ಒತ್ತು ಕೂಡ ಈ ಚಿತ್ರದ ಹೆಣ್ಣು ಪಾತ್ರಕ್ಕೆ ಇಲ್ಲವಲ್ಲ! ನಮ್ಮ ನೋಟಗರು ಹೀಗೇ ಇಷ್ಟಪಡುತ್ತಾರೆಯೆ?
-೩-
ಈ ಎಲ್ಲಾ ಯೋಚನೆಗಳೂ ನಾನು ಮೊದಲು ಎತ್ತಿದ ಪ್ರಶ್ನೆಗೆ ಪರಿಪೂರ್ಣ ಉತ್ತರ ಕೊಡುವುದಿಲ್ಲ. ಹಾಗೊಂದು ನಿಚ್ಚಳವಾದ ಉತ್ತರವೇ ಇಲ್ಲದಿರಬಹುದು! ಆದರೂ ಅದೊಂದು ಮುಖ್ಯವಾದ ಪ್ರಶ್ನೆ ಎಂದು ಎಣಿಸುತ್ತೇನೆ. ಯಾಕೆಂದರೆ, ಮುಂದೆ ಬರುವ ಚಿತ್ರಗಳಿಗೆ ಜಯಭೇರಿ ಹೊಡೆದ ಮುಂಗಾರು ಮಳೆಯಂಥ ಚಿತ್ರಗಳು ಮಾದರಿಯಾಗುವ ಸಾಧ್ಯತೆಗಳಿದೆ. ಎರಡನೇ ಭಾಗದಲ್ಲಿ ಎತ್ತಿದ ಪ್ರಶ್ನೆಗಳು ಚಿತ್ರದಲ್ಲಿ ಪಡೆದ ಒತ್ತಿನಿಂದಾಗಿ ಈ ಚಿತ್ರ ಜಯಭೇರಿ ಹೊಡೆಯಿತೇ? ಅಥವಾ ಮೊದಲನೇ ಭಾಗದಲ್ಲಿ ಹೇಳಿದ ಗುಣಗಳಿಂದಾಗಿ ಚಿತ್ರ ಜಯಭೇರಿ ಹೊಡೆಯಿತೇ?
ಯೋಚಿಸಬೇಕಾದ ಸಂಗತಿಗಳು.