ಇದೇ ನಮ್ಮ ನಾಡು... ಇವೇ ನಮ್ಮ ನುಡಿಗಳು...?!!
ನಮ್ಮದು ಜಾತ್ಯಾತೀತ ರಾಷ್ಟ್ರ; ಹೆಸರಿಗಷ್ಟೇ... ಇಲ್ಲಿ ಜಾತಿ ರಾಜಕಾರಣವೇ ಎದ್ದೂ ತೋರುತ್ತದೆಯಲ್ಲ.. ಇದೀಗ ಈ ಜಾತಿಯತೆ ಕನ್ನಡ ಸಾರಸ್ವತ ಲೋಕವನ್ನೂ ಪ್ರವೇಶಿಸಿರುವುದು ತೀರಾ ವಿಷಾದನೀಯ.
ನಮ್ಮ ಬುದ್ಧ, ಬಸವಣ್ಣ, ಪಂಪ,ರನ್ನ ಮುಂತಾದವರು ಯಾವ ಜಾತಿಯವರಾದರೇನು? “ಮನಷ್ಯ ಜಾತಿ ತಾನೊಂದೆ ವಲಂ...” ಎನ್ನಲಿಲ್ಲವೇ ಕುವೆಂಪುರವರು. ”ಆನು ದೇವಾ ಹೊರಗಣವನು” ಎಂಬ ತಮ್ಮಕೃತಿಯಲ್ಲಿ ಬಸವಣ್ಣನವರ ಜಾತಿಯನ್ನೆತ್ತಿ ದೊಡ್ಡ ಹಗರಣವನ್ನೇ ಮಾಡಿದ್ದಾರಲ್ಲ ಡಾ.ಬಂಜಗೆರೆ ಜಯಪ್ರಕಾಶ್ ಅವರು. ತಾವು ವಿದ್ವತ್ಪೂರ್ಣ ಕೃತಿಯೊಂದನ್ನು ನೀಡುವುದೇ ಉದ್ದೇಶವಾದರೆ, ಇಂಥ ಬರವಣಿಗೆಯಿಂದ ಕಾಣುವ ಯಶಸ್ಸು ಮತ್ತು ಸಾರ್ಥಕತೆಯೇನೋ...
ಇನ್ನೊಂದು ಪುಸ್ತಕ ಎಸ್ .ಎಲ್. ಭೈರಪ್ಪನವರ “ಆವರಣ” ದ ಬಗ್ಗೆ ನಡೆಯುತ್ತಿರುವ ಚರ್ಚೆಯಲ್ಲಿ ...
ಮೊದಲೇ ಹೇಳಿ ಬಿಡುತ್ತೇನೆ. ನಾನು ಬೈರಪ್ಪನವರ ಪರ ಅಲ್ಲ;ಯಾರ ಪರವೂ ಅಲ್ಲ ಎಂದು. ಭೈರಪ್ಪನವರಾದರೂ ಇತಿಹಾಸವನ್ನು ಕೆದಕಿ ಬೆದಕಿ ವಿವಾದಸ್ಪದವಾಗುವಂತ ಕೃತಿಯನ್ನು ಅವರ ಈ ಇಳಿವಯಸ್ಸಿನಲ್ಲಿ ಬರೆಯುವ ಸಾರ್ಥಕ್ಯ ಮತ್ತು ಔಚಿತ್ಯವೇನಿತ್ತೊ ತಿಳಿಯಲಿಲ್ಲ...
ಅಂತೆಯ, ಆವರಣದ ಬಗ್ಗೆಯೆ ಯು.ಆರ್.ಅನಂತ ಮೂರ್ತಿಯವರು ಮಾಡಿದ ಭಾಷಣದಲ್ಲಿ ಅವರ ಕೆಲವು ಸಾಲುಗಳೂ ನನಗೆ ಅರ್ಥವಾಗಲಿಲ್ಲ...
1.“ಬೆಂಗಳೂರಿನಿಂದ `ಆವರಣ' ಓದಲಿಕ್ಕೆ ಶುರಮಾಡಿದ ನಾರಾಯಣ ಮೂರ್ತಿಯವರು ನ್ಯೂಯಾರ್ಕ್‌ನಲ್ಲಿ ಅದನ್ನು ಮುಗಿಸಿದರು'. ನಾರಾಯಣ ಮೂರ್ತಿಗಳಿಗೆ ಭೈರಪ್ಪನವರ `ಆವರಣ' ಇಷ್ಟ ಆಗಿದ್ದೂ ಕೂಡಾ ನನಗೊಂದು ಮೆಟಫರ್.’’
-ಒಬ್ಬ ಓದುಗ ಒಂದು ಪುಸ್ತಕ ಓದಿದ ಮಾತ್ರಕ್ಕೆ (ಆತನೇ ಸ್ವತಃ ಹೇಳುವವರೆಗೆ) ಅದನ್ನು ಆತ ಮೆಚ್ಚಿಕೊಂಡಿದ್ದಾನೆಂದು ಯು.ಆರ್ .ಅನಂತಮೂರ್ತಿಯವರು ಹೇಗೆ ನಿರ್ಧರಿಸಿದಿರೋ ನನಗೆ ಅರ್ಥವಾಗಲಿಲ್ಲ...
2.“ಬ್ರಿಟಿಷರು ಇಲ್ಲಿ ಬಂದರು; ನಮ್ಮನ್ನು ಆಳಿದರು; ಇದು ನಮ್ಮ ದೇಶ ಅಲ್ಲ ಅಂತ ಬಿಟ್ಟು ಹೋದರು. ಆದರೆ ಈಗ ನಮ್ಮನ್ನು ಸಂಪೂರ್ಣವಾಗಿ ಗುಲಾಮರನ್ನಾಗಿ ಮಾಡುತ್ತಿದ್ದಾರೆ. ಮುಸ್ಲಿಮರು ಬಂದರು, ಆಳಿದರು ಇಲ್ಲೇ ಬದುಕಿದರು. ಇದು ನಮ್ಮ ದೇಶವೇ ಅಂದು ಕೊಂಡರು;ಇಲ್ಲೇ ಬದುಕಿದರು. ನಮ್ಮ ಸಂಸ್ಕೃತಿ ಜತೆಗೆ ಬೆರೆತರು.”
-ಬ್ರಿಟಿಷರು ಇದು ನಮ್ಮ ದೇಶ ಅಲ್ಲ ಅಂತ ಬಿಟ್ಟು ಹೋದ ಮೇಲೆ ಅವರು ಅದೆಷ್ಟರ ಮಟ್ಟಿಗೆ ನಮ್ಮನ್ನು ಹೇಗೆ ಗುಲಾಮರನ್ನಾಗಿ ಮಾಡಿದ್ದಾರೋ ತಿಳಿಯಲಿಲ್ಲ... ನಾನು ತಿಳಿದುಕೊಂಡಂತೆ ನಮ್ಮ ನಡುವಣ ಕೆಟ್ಟ ರಾಜಕೀಯವೇ ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಅನಿಸುತ್ತದೆ. ಮುಗ್ಧ ಜನಸಾಮಾನ್ಯರನ್ನಷ್ಟೇ ಗುಲಾಮರನ್ನಾಗಿಸಿದೆ. ಮುಸ್ಲಿಮರು ಬಂದರು ಆಳಿದರು ನಿಜ; ಸ್ವಾತಂತ್ರ್ಯ ಬಂದಮೇಲೆ ತಮಗೂ ಪ್ರತ್ಯೇಕ ದೇಶ ಬೇಕೆಂದರು; ದೇಶ ಒಡೆದರು. ರಕ್ತಪಾತಕ್ಕೆ ಕಾರಣರಾದರು. ಅಳಿದುಳಿದವರಷ್ಟೇ ನಮ್ಮ ಸಂಸ್ಕೃತಿಯೊಂದಿಗೆ ಬೆರೆತರಲ್ಲವೇ...
3.”ನನಗೆ ಭೈರಪ್ಪನವರ ಬಗ್ಗೆ ಒಂದು ಸಮಸ್ಯೆ ಇದೆ. ಅವರು ಎಷ್ಟು ಪ್ರಸಿದ್ಧರು ಎಂದರೆ ಮರಾಠಿಯಲ್ಲಿ, ಹಿಂದಿಯಲ್ಲಿ ಎಲ್ಲ ಕಡೆಯೂ ಕನ್ನಡದ ಅತ್ಯಂತ ಪ್ರಸಿದ್ಧ ಒಬ್ಬ ಲೇಖಕರಿದ್ದರೆ ಅದು ಕಾರಂತರಲ್ಲ, ಕುವೆಂಪು ಅಲ್ಲ, ಬೇಂದ್ರೆ ಅಲ್ಲ, ನಾವ್ಯಾರೂ ಅಲ್ಲ.”
-ಅವರು ಹಾಗೆ ಹೊರನಾಡಿನಲ್ಲಿ ಯಾರೂ ಕಾಣದ ಪ್ರಸಿದ್ಧಿ ಪಡೆದದ್ದೇ ಅವರಿಗೊಂದು ಒಂದು ಸಮಸ್ಯೆ ಅಂತಾರಲ್ಲ; ಸರಿಯೆನಿಸಲಿಲ್ಲ.. ಅದಕ್ಕೆ ಕಾರಣವನ್ನೂ ಸರಿಯಾಗಿ ಹೇಳಲ್ಲಿಲ್ಲ.. ತಮ್ಮ ಕನ್ನಡ ಕೃತಿಗಳು ಇಂಗ್ಲೀಷ್ ಗೆ ತರ್ಜುಮೆಯಾದಾಗ ಜಗತ್ ಪ್ರಸಿದ್ಧಿ ಪಡೆದೆವೆಂದು ಹೆಮ್ಮೆಯಿಂದ ಬೀಗುವವರಿದ್ದಾರಲ್ಲ..
- ಅಲ್ಲದೇ, ಗದ್ಯಲೇಖನ ಮತ್ತು ಕಾದಂಬರಿ ಬರೆಯೋರೆಲ್ಲರೂ ಕಾವ್ಯಾತ್ಮಕ ಗುಣ ಹುಡುಕೋದು ಸರಿಕಾಣಲಿಲ್ಲ...
ಬಹಳ ಹಿಂದೆ ಅಂದರೆ ದಿನಾಂಕ:19-02-1995 ರ ತರಂಗ ವಾರ ಪತ್ರಿಕೆಯಲ್ಲಿ, ಶ್ರೀಯುತ ಯು.ಆರ್.ಅನಂತ ಮೂರ್ತಿಯವರ ಸಂದರ್ಶನ ಲೇಖನ ಪ್ರಕಟವಾಗಿತ್ತು.. ಆ ಸಂದರ್ಶನ ಲೇಖನದಲ್ಲಿ ಅವರು ಹೇಳಿಕೆ ನೀಡಿದಂಥ ಕೆಲವು ಸಾಲುಗಳ ಬಗ್ಗೆ ನನ್ನ ಅನಿಸಿಕೆ-
1.ರಾಮ ಚಾರಿತ್ರಿಕ ವ್ಯಕ್ತಿ ಅಲ್ಲ; ಕ್ರಿಸ್ತ ಚಾರಿತ್ರಿಕ ವ್ಯಕ್ತಿ; ಮಹ್ಮದ್ ಚಾರಿತ್ರಿಕ ವ್ಯಕ್ತಿ.
-ಪುರಾಣೇತಿಹಾಸ ಎಂದೇಕೆ ಹೇಳುತ್ತೇವೆ ನಾವು? ಹೇಳಿ. ರಾಮ ಪೌರಾಣಿಕ ವ್ಯಕ್ತಿಯಾದರೂ ಚಾರಿತ್ರಿಕ ವ್ಯಕ್ತಿಯಾಗಿಯೆ ನಮ್ಮ ಜನಮಾನಸದಲ್ಲಿ ಹುಟ್ಟಿ ಬಂದಿದ್ದಾನೆ; ಅವನ ಹುಟ್ಟಿಗೆ ಪುರಾವೆಗಳಿವೆ ಎನ್ನುವವರಿದ್ದಾರೆ. ಎಲ್ಲರ ಬಾಯಲ್ಲಿ ಇಂದಿಗೂ ಶ್ರೀರಾಮ ಇದ್ದಾನೆ.
2. ರಾಮ ಹುಟ್ಟಿದ್ದು ಅಯೋಧ್ಯೆಯಲ್ಲಲ್ಲ; ರಾಮ ಹುಟ್ಟಿದ್ದು ಗೋಡ್ಸೆ ಗುಂಡು ಹೊಡೆದಾಗ ಗಾಂಧಿ ಬಾಯಿಂದ..
-ಮಹ್ಮದ್ ಪೈಗಂಬರರಂತೆಯೆ ನಮ್ಮ ರಾಮ ಪೂಜನೀಯ ವ್ಯಕ್ತಿ ಎಂಬುದನ್ನು ಅನಂತ ಮೂರ್ತಿಯವರು ತಿಳಿದಿದ್ದರೂ ಇಂಥ ಅವಹೇಳನಕರ ಮಾತೇಕೆ ಅವರ ಬಾಯಿಂದ...? ನಮ್ಮ ಶ್ರೀರಾಮ ನಮ್ಮ ಸನಾತನ ಪರಂಪರೆಯಿಂದಲೂ ನಮ್ಮ ಋಷಿಮುನಿಗಳ ಬಾಯಿಂದ ಮಾತ್ರವಲ್ಲ, ಶತಮಾನಗಳಿಂದ ನಮ್ಮಜನಸಾಮಾನ್ಯರ ಬಾಯಿಂದಲೂ ಮತ್ತೆ ಮತ್ತೆ ಹುಟ್ಟಿ ಬಂದಿದ್ದಾನೆ;ಬರುತ್ತಲೇ ಇದ್ದಾನೆ. ತನ್ನ ಚಾರಿತ್ರ್ಯವನ್ನೆ ಮೆರೆಯುತ್ತಿದ್ದಾನೆ. ರಾಮನನ್ನು ಪೂಜಿಸಿದ ಗಾಂಧೀಜಿ ತಮ್ಮ ತ್ಯಾಗ ಮತ್ತು ಘನತೆವೆತ್ತ ಕಾರ್ಯಗಳಿಂದ ಮಹಾತ್ಮರೆನಿಸಿಕೊಂಡರು.
3.ನಾವು ಪಾಶ್ಚಾತ್ಯ ಅನುಕರಣೆಯಿಂದ ನಮ್ಮ ಸಂಸ್ಕೃತಿಗೇ ವಿಮುಖರಾಗುತ್ತಿದ್ದೇವೆ.
-ಹೌದು, ಗಾಂಧೀಜಿ ಸಾಯುವ ಮುನ್ನ ವಷ್ಟೇ ಅವರ ಬಾಯಲ್ಲಿ ರಾಮ ಹುಟ್ಟಿದನೆಂದು ತಿಳಿದರೆ ನಮ್ಮ ಸಂಸ್ಕೃತಿಗೆ ವಿಮುಖರಾದಂತೆಯೆ...ಅಪಚಾರ ಮಾಡಿದಂತೆಯೆ.
4.ನಮ್ಮ ಭಾಷಾ ಚಳುವಳಿ ಒಟ್ಟಿನಲ್ಲಿ ಬಿಡುಗಡೆಯ ಚಳುವಳಿ. ಶೂದ್ರನಿಗೆ ಶೂದ್ರತ್ವದಿಂದ ಬಿಡುಗಡೆ. ಬ್ರಾಹ್ಮಣನಿಗೆ ಬ್ರಾಹ್ಮಣತ್ವದಿಂದ ಬಿಡುಗಡೆ ಇವೆರಡೂ ಆಗಿದೆಯೇ... ಎನ್ನುತ್ತಾರೆ.
-ಶೂದ್ರನಿಗೆ ಶೂದ್ರತ್ವದಿಂದ ಬಿಡುಗಡೆಯಾಗಲು ಬ್ರಾಹ್ಮಣರು ಬಿಡುತ್ತಾರೆಯೆ... ಬ್ರಾಹ್ಮಣರು ಬ್ರಾಹ್ಮಣತ್ವದಿಂದ ಬಿಡುಗಡೆಯಾಗಲು ಅವರ ಅಹಂಕಾರ ಬಿಡುತ್ತದೆಯೆ... ಎಂಬ ಪ್ರಶ್ನೆ ನನ್ನನ್ನು ಕಾಡುತ್ತದಲ್ಲ...
5.ಚರಕದಂತಹ ಒಂದು ಯಂತ್ರದ ಹುಡುಕಾಟದಲ್ಲಿರುತ್ತಿದ್ದರೆ ಇಂಡಿಯಾ ಪ್ರಾಯಶಃ ಪ್ರಪಂಚಕ್ಕೊಂದು ಪರ್ಯಾಯ ನಾಗರಿಕತೆ ಆಗಬಹುದಿತ್ತು. ಎಂದೂ ಹೇಳುತ್ತಾರೆ.
-ಇದನ್ನು ಹೇಗೆ ಅರ್ಥಮಾಡಿಕೊಳ್ಳುವುದೋ ..ಜನಸಾಮಾನ್ಯರಿಗಂತೂ ತಿಳಿಯುವುದೇ ಇಲ್ಲ... ಭೈರಪ್ಪನವರ ಕೃತಿಗಳು ಜನಸಾಮಾನ್ಯರನ್ನು ತಲುಪಿದಂತೆಯೆ ಅನಂತಮೂರ್ತಿಯವರ ಕೃತಿಗಳು ಜನಸಾಮಾನ್ಯರನ್ನು ತಲುಪಿವೆಯೆ...
ಇನ್ನೂ ಒಂದು ಶ್ರೀಯತರ ಅನಂತ ಮೂರ್ತಿಯವರದೇ ಮಾತು- “ತುಂಬಾ ಬುದ್ಧಿವಂತರನ್ನು ಕನ್ನಡ ಪತ್ರಿಕೆಗಳು ತೆಗೆದುಕೊಳ್ಳವುದಿಲ್ಲ..” ಸೂಕ್ತವೇ ಸರಿ.
ಈವತ್ತಿನ ಇನ್ನೊಂದು ಸುದ್ದಿ –ಶಿಕ್ಷಕಿಯೊಬ್ಬರು 3 ವರ್ಷಗಳಿಂದ ಸತತವಾಗಿ ಶಾಲೆಯಲ್ಲಿ ಪ್ರಾರ್ಥನೆ ಬಳಿಕ ತರಗತಿಯಲ್ಲಿ ಮಕ್ಕಳಿಗೆ ಏಸುವಿನ ಪ್ರಾರ್ಥನೆ ಹೇಳಿಸುತ್ತಿದ್ದರು. ಹಾಗೂ ರಾತ್ರಿ ಮಲಗುವ ಮುನ್ನ ಭೂತ ಪ್ರೇತಗಳಿಂದ ರಕ್ಷಿಸಿಕೊಳ್ಳಲು ಈ ಪ್ರಾರ್ಥನೆ ಮಾಡಬೇಕೆಂದೂ ಮಕ್ಕಳಿಗೆ ಸೂಚಿಸಿದ್ದರು ಎನ್ನಲಾಗಿದೆ..
-ಎಂಥ ಜಾತೀಯತೆ! ಹಾಗೂ ಎಂಥ ಹಿತೋಪದೇಶ ನಮ್ಮ ಜಾತ್ಯಾತೀತ ನಾಡಿನ ಮಕ್ಕಳಿಗೆ...
-ಎಚ್.ಶಿವರಾಂ