ಕನ್ನಡ ಕ್ರೈಸ್ತ ಇತಿಹಾಸಕಾರ ಸ್ವಾಮಿ ಅಂತಪ್ಪ

ಕನ್ನಡ ಕ್ರೈಸ್ತ ಇತಿಹಾಸಕಾರ ಸ್ವಾಮಿ ಅಂತಪ್ಪ

ಬರಹ

ಐರೋಪ್ಯನಾಡುಗಳಿಂದ ಆಗಮಿಸಿ ಅಂದು ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಮಿಷನರಿಗಳು ಪ್ರತಿವರ್ಷವೂ ತಮ್ಮ ಸಾಧನೆಗಳ ಕುರಿತಂತೆ ತಮ್ಮ ವರಿಷ್ಠರಿಗೆ ವಿಸ್ತೃತ ವರದಿಗಳನ್ನು ಕಳಿಸಬೇಕಾಗಿತ್ತು. ಆ ವರದಿಗಳು ಪ್ರಚಾರಕಾರ್ಯದ ಸಾಧ್ಯಾಸಾಧ್ಯತೆ, ಅದಕ್ಕಿರುವ ವಿಘ್ನಗಳು, ಅಂದಿನ ಸಾಮಾಜಿಕ ಪರಿಸ್ಥಿತಿ, ಸಮಕಾಲೀನ ರಾಜಾಳ್ವಿಕೆಗಳು, ಯುದ್ಧಗಳು, ಜನರ ಮನೋಭಾವ, ಜೀವನಶೈಲಿ, ಆಚಾರವಿಚಾರ, ಸಂಸ್ಕೃತಿ, ಅಂದಿನ ರಾಜರುಗಳ ಏಳುಬೀಳು ಹಾಗೂ ಅವರ ಬಲಾಬಲಗಳ ಬಗ್ಗೆ ನಿಷ್ಪಕ್ಷಪಾತವಾದ ಕನ್ನಡಿ ಹಿಡಿದಿವೆ. ಮಿಷನರಿಗಳು ಅವುಗಳನ್ನೆಲ್ಲ ಅಧ್ಯಯನ ಮಾಡಿ ನಗಣ್ಯವೆನಿಸಬಹುದಾದ ಸಣ್ಣ ವಿವರವನ್ನೂ ದಾಖಲಿಸುವುದರ ಜೊತೆಗೆ ತಾವು ಆ ವರ್ಷ ಎಷ್ಟು ಜನರಿಗೆ ಕ್ರೈಸ್ತದೀಕ್ಷೆ ನೀಡಿದರೆಂಬುದರ ಲೆಕ್ಕ ಹೇಳಬೇಕಿತ್ತು. ಇದರೊಂದಿಗೆ ಧರ್ಮಪ್ರಚಾರಕಾರ್ಯದಲ್ಲಿ ಅವರು ಅನುಭವಿಸುತ್ತಿರುವ ಕಷ್ಟಸಂಕಟ ಯಾತನೆಗಳ ಚಿತ್ರಣವೂ ಇರುತ್ತಿತ್ತು.
ಆ ಧಾರ್ಮಿಕ ವರಿಷ್ಠರು ದೇಶದ ವಿವಿಧೆಡೆಗಳಿಂದ ಬರುತ್ತಿದ್ದ ಇಂಥ ಪತ್ರಗಳ ಒಕ್ಕಣೆಯನ್ನು ತುಲನೆ ಮಾಡಿ ಪ್ರಚಾರಕಾರ್ಯಕ್ಕೆ ಅನುಕೂಲವಾಗುವಂಥ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರು. ಇಂದಿಗೂ ಈ ವರದಿಗಳನ್ನು ರೋಮ್, ಪ್ಯಾರಿಸ್, ಲಿಸ್ಬನ್ಗಳ ಪತ್ರಾಗಾರಗಳಲ್ಲಿ ಸಂಗ್ರಹಿಸಿಡಲಾಗಿದೆ. ಸ್ವಾಮಿ ಅಂತಪ್ಪನವರು ಇಂಥ ಸುಮಾರು ೧೩೫ ಜೆಸ್ವಿತ್ ಪತ್ರಗಳ ಸಮೀಕ್ಷೆ ನಡೆಸುತ್ತಾ ಅವುಗಳ ಆಧಾರದಲ್ಲಿ ಸಮಕಾಲೀನ ಆಗುಹೋಗುಗಳನ್ನು ಚಿತ್ರಿಸಲು ಯತ್ನಿಸಿದ್ದಾರೆ. ಅದಕ್ಕೆ ಬೆಂಬಲವಾಗಿ ಅವರು ವಿವಿಧ ಇತಿಹಾಸ ಗ್ರಂಥಗಳ ಆಳ ಅಧ್ಯಯನ ಹಾಗೂ ಕ್ಷೇತ್ರಕಾರ್ಯಗಳ ಮರೆ ಹೊಗುತ್ತಾರೆ. ಜೆಸ್ವಿತ್ ಪತ್ರಗಳು ಕ್ರಿಸ್ತಶಕ ೧೬೪೦ ರಿಂದ ೧೭೫೦ ಅವಧಿಯವಾಗಿದ್ದು ಲತೀನ್, ಪೋರ್ಚುಗೀಸ್, ಫ್ರೆಂಚ್ ಭಾಷೆಗಳಲ್ಲಿ ಬರೆಯಲಾಗಿವೆ.
ರೋಮಿನ ಆ ಪ್ರತಿಷ್ಠಿತ ಗ್ರೆಗರಿಯನ್ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಪ್ರವೇಶ ಪಡೆದ ಮೊದಲ ಕನ್ನಡಿಗರು ಸ್ವಾಮಿ ಅಂತಪ್ಪ. ೬೦ನೇ ದಶಕದ ಆ ವಿದ್ಯಾರ್ಥಿದೆಸೆಯಲ್ಲಿ ಅವರು ಅಲ್ಲಿನ ಪತ್ರಾಗಾರದಲ್ಲಿ ನಮ್ಮ ಕನ್ನಡನಾಡಿನ ಕುರಿತ ಉಲ್ಲೇಖಗಳಿಗಾಗಿ ತಡಕಾಡಿದ್ದರು. ಆ ನಿಟ್ಟಿನಲ್ಲಿ ಅವರು ನಮ್ಮ ನಾಡಿನಲ್ಲಿ ಧರ್ಮಪ್ರಚಾರ ಮಾಡಿದ ವಿದೇಶೀ ಜೆಸ್ವಿತ್ ಮತಪ್ರಚಾರಕರ ವಾರ್ಷಿಕ ವರದಿಗಳ ಅತ್ಯಮೂಲ್ಯ ಸಂಗ್ರಹವನ್ನು ಅಲ್ಲಿ ಕಂಡರು. ಆದರೆ ತಮಗೆ ನೀಡಿದ್ದ ಒಂದು ವರ್ಷದ ಗಡುವಿನಲ್ಲಿ ಅವರು ಪವಿತ್ರ ಧರ್ಮಶಾಸ್ತ್ರದಲ್ಲಿ ಡಾಕ್ಟರೆಟ್ ಪಡೆದು ಇಂಡಿಯಾಕ್ಕೆ ಹಿಂದಿರುಗಬೇಕಾಗಿತ್ತು. ಅದನ್ನು ಅವರು ಅತ್ಯುತ್ತಮವಾಗಿಯೇ ನಿರ್ವಹಿಸಿ ಬೆಂಗಳೂರಿಗೆ ಹಿಂದಿರುಗಿದರು.
ಅವರ ಮನದಲ್ಲಿ ಆ ಗ್ರೆಗರಿಯನ್ ವಿಶ್ವವಿದ್ಯಾಲಯದಲ್ಲಿ ಕಂಡ ಅಮೂಲ್ಯ ನಿಧಿಯನ್ನು ಪಡೆಯುವ ಕನಸು ಅದಮ್ಯವಾಗಿತ್ತು. ಯಾರು ರೋಮಿಗೆ ಹೋದರೂ ಆ ಅಮೂಲ್ಯ ನಿಧಿಯ ಕುರಿತು ಹೇಳಿಕಳುಹಿಸಿ ನಂತರ ಅವರು ಬರಿಗೈಯಲ್ಲಿ ಬರುತ್ತಿದ್ದುದನ್ನು ತಿಳಿದು ನಿರಾಶರಾಗುತ್ತಿದ್ದರು. ನೆರಳಚ್ಚು ತಂತ್ರಜ್ಞಾನದ ಪ್ರವೇಶವಾದ ಮೇಲೆ ಅವರು ಸ್ವಪ್ರಯತ್ನದಿಂದಲೇ ಅವನ್ನು ರೋಮಿನಿಂದ ತರಿಸಿ ಲತೀನ್, ಸ್ಪಾನಿಷ್, ಪೋರ್ಚುಗೀಸ್, ಇಟಾಲಿಯನ್ ಮತ್ತು ಫ್ರೆಂಚ್ ಭಾಷೆಗಳಲ್ಲಿದ್ದ ಅವುಗಳ ಹೂರಣವನ್ನು ಬಲ್ಲವರಿಂದ ಇಂಗ್ಲಿಷಿಗೆ ತರ್ಜುಮೆಮಾಡಿಸಿ ಅನಂತರ ಅವನ್ನು ಕನ್ನಡಕ್ಕೆ ಭಾಷಾಂತರಿಸಿ ಲಭ್ಯವಿರುವ ಇತರ ಇತಿಹಾಸ ಗ್ರಂಥಗಳೊಂದಿಗೆ ತುಲನೆ ಮಾಡಿ ಪುಸ್ತಕರೂಪದಲ್ಲಿ ಪ್ರಕಟಿಸಿದ ಸಾಹಸಿ ಸ್ವಾಮಿ ಅಂತಪ್ಪ. ಈ ಮೌಲಿಕ ಕಾರ್ಯಕ್ಕಾಗಿ ಅವರು ಸಾವಿರಾರು ರೂಪಾಯಿಗಳಷ್ಟು ಸ್ವಂತ ಹಣವನ್ನೇ ವ್ಯಯ ಮಾಡಿದರೆಂಬುದು ಅಷ್ಟೇ ಕಹಿಯಾದ ಸತ್ಯ.
ಹೀಗೆ ಅವರು ಪ್ರಕಟಿಸಿದ ಪುಸ್ತಕಗಳ ಯಾದಿ ಈ ರೀತಿ ಇದೆ:
೧. ಕನಕಪುರ ತಾಲೂಕು ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತಧರ್ಮದ ಉಗಮ
೨. ದೇವನಹಳ್ಳಿ ಮತ್ತು ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ಕ್ರೈಸ್ತಧರ್ಮದ ಉಗಮ (೧೯೯೦)
೩. ಆನೆಕಲ್ ತಾಲೂಕು ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತಧರ್ಮದ ಉಗಮ (೧೯೯೩)
೪. ಶ್ರೀರಂಗಪಟ್ಟಣದಲ್ಲಿ ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತಧರ್ಮದ ಉಗಮ (೧೯೯೪)
೫. ಕೊಳ್ಳೇಗಾಲ ತಾಲೂಕು ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತಧರ್ಮದ ಉಗಮ (೧೯೯೭)
೬. ಬೆಂಗಳೂರು ಮತ್ತು ಸುತ್ತಮುತ್ತಲಲ್ಲಿ ಕ್ರೈಸ್ತಧರ್ಮದ ಉಗಮ (೨೦೦೦)
೭. ಉತ್ತರಕರ್ನಾಟಕದಲ್ಲಿ ಕ್ರೈಸ್ತಧರ್ಮದ ಉಗಮ (೨೦೦೧)
೮. ನಡುಕರ್ನಾಟಕದಲ್ಲಿ ಕ್ರೈಸ್ತಧರ್ಮದ ಉಗಮ (೨೦೦೩)
೯. ಹೊಸಗನ್ನಡದ ಪ್ರಥಮ ಗ್ರಂಥಕಾರ (೨೦೦೫)
೧೦. ಕನಕದಾಸ, ತಿಮ್ಮಪ್ಪದಾಸ ಇವರು ಕ್ರೈಸ್ತರಾದರೇ? (೨೦೦೬)

ಈ ಎಲ್ಲ ಪುಸ್ತಕಗಳಲ್ಲಿ ಜೆಸ್ವಿತರ ವಾರ್ಷಿಕ ವರದಿಗಳನ್ನು ವಿಶ್ಲೇಷಿಸಿರುವ ಫಾದರ್ ಅಂತಪ್ಪನವರು ಅವುಗಳಲ್ಲಿ ಉಲ್ಲೇಖವಾಗಿರುವ ಮತಪ್ರಚಾರದ ಕುರಿತ ಉತ್ಪ್ರೇಕ್ಷಿತ ಅಂಕಿಸಂಖ್ಯೆಗಳನ್ನೂ ಅನ್ಯಧರ್ಮದ ತೆಗಳುವಿಕೆಯನ್ನೂ ತೀವ್ರವಾಗಿ ಭಾವಿಸಬಾರದೆಂದು ವಿನಮ್ರವಾಗಿ ವಿನಂತಿಸಿದ್ದಾರೆ.
ಇವನ್ನು ಇತಿಹಾಸಾಧ್ಯಯನದ ದೃಷ್ಟಿಯಿಂದ ಅವಲೋಕಿಸಿದರೆ ರಾಜರುಗಳ ಪೂರ್ವೋತ್ತರಗಳ ಕುರಿತ ವರದಿಗಳು ಕರ್ನಾಟಕದ ಇತಿಹಾಸದ ಪುನರ್ ರಚನೆಗೆ ಕಾರಣವಾಗಿವೆ ಎಂದು ಘಂಟಾಘೋಷವಾಗಿ ಹೇಳಬಹುದು. ನಮ್ಮ ದೇಶದ ಪ್ರಾಚೀನ ಇತಿಹಾಸದ ದಾಖಲಿಸುವ ಸಂದರ್ಭದಲ್ಲಿ ಸ್ಥಳೀಯ ಬರಹಗಾರನಿಗೆ ತನ್ನೊಡೆಯನ ಉಪ್ಪಿನ ಋಣವೇ ಭಾರವಾಗುವುದರಿಂದ ಆತ ಒಡೆಯನ ಉನ್ನತಿಯ ವಿಷಯಗಳನ್ನಷ್ಟೇ ದಾಖಲಿಸುತ್ತಾನೆ, ಅವನತಿಯ ವಿಷಯಗಳನ್ನು ಮರೆಮಾಚುತ್ತಾನೆ. ಆದ್ದರಿಂದ ನಮ್ಮ ದೇಶದ ಚರಿತ್ರೆಯನ್ನು ಪುನರ್ ನಿರೂಪಿಸುವಾಗ ನಮ್ಮ ನಾಡಿನ ಆಕರಗಳು ಪೂರ್ಣ ನ್ಯಾಯ ಒದಗಿಸುವುದಿಲ್ಲ. ಆದರೆ ವಿದೇಶೀ ವ್ಯಕ್ತಿಗೆ ಈ ಹಂಗು ಇರುವುದಿಲ್ಲವಾದ್ದರಿಂದ ಆತ ಇತಿಹಾಸವನ್ನು ನಿಷ್ಪಕ್ಷಪಾತವಾಗಿ ದಾಖಲಿಸುತ್ತಾನೆ. ಈ ಒಂದು ದೃಷ್ಟಿಯಿಂದ ಜೆಸ್ವಿತ್ ಪತ್ರಗಳ ಬೆಳಕಲ್ಲಿ ನಮಗೆ ನಮ್ಮ ನಾಡಿನ ಇತಿಹಾಸದ ಸ್ಪಷ್ಟ ದೃಶ್ಯಗಳು ಕಾಣತೊಡಗುತ್ತವೆ.
ಜೆಸ್ವಿತರ ಪತ್ರಗಳ ಮೂಸೆಯಲ್ಲಿ ನೋಡಿದಾಗ ಹೈದರನು ಒಬ್ಬ ರಾಜಕೀಯ ಮುತ್ಸದ್ದಿಯಾಗಿರಲಿಲ್ಲ, ಅವನ ರಣತಂತ್ರ ನಡೆನುಡಿ ಎಲ್ಲವೂ ಕುಲೀನ ಧೀಮಂತಿಕೆಯಿಲ್ಲದ, ಇಂದಿನ ಪರಿಭಾಷೆಯಲ್ಲಿ ಹೇಳುವುದಾದರೆ ದುರುಳ ದುಂಡಾವರ್ತಿಯ 'ಗೂಂಡಾ'/'ರೌಡಿ'ತನವಾಗಿತ್ತೆಂದು ತಿಳಿಯಬಹುದಾಗಿದೆ. ಕ್ರಿಸ್ತಶಕ ೧೭೫೬ರ ಜೆಸ್ವಿತ್ ವರದಿಯಲ್ಲಿ "ಹೈದರನ ಸೈನ್ಯ ಬರುತ್ತಿದೆಯಂಬ ಸುದ್ದಿ ಕೇಳಿಯೇ ಗಂಡಸರು ಊರು ತೊರೆದು ಕಾಡು ಸೇರಿಕೊಳ್ಳುತ್ತಿದ್ದರು, ಇನ್ನು ಹೆಣ್ಣುಮಕ್ಕಳಂತೂ ಬೆಂಕಿಗೆ ಹಾರಿಕೊಳ್ಳುತ್ತಿದ್ದರು, ನಮ್ಮ ನಾಲ್ಕು ಚರ್ಚುಗಳೂ, ಹಲವು ಊರುಗಳಲ್ಲಿದ್ದ ಮಿಷನರಿಗಳ ಮನೆಗಳೂ ಅವನ ಸೈನ್ಯಕ್ಕೆ ಆಹುತಿಯಾದವು. ನಮ್ಮ ಹೆಣ್ಣುಮಕ್ಕಳ ಮೇಲೆ ಅವರು ನಡೆಸಿದ ಬಲಾತ್ಕಾರದ ಸಂಗತಿಗಳನ್ನಂತೂ ಹೇಳಲು ಅಸಾಧ್ಯ" ಎಂದು ದಾಖಲಿಸಲಾಗಿದೆ.
ತಿರುಚಿನಾಪಳ್ಳಿ ವಶವಾದ ನಂತರ ಅವನನ್ನು ದಿಂಡಿಗಲ್ ಕೋಟೆಯ ಸೇನಾಪತಿಯಾಗಿ ನೇಮಿಸಲಾಯಿತು. ಫ್ರೆಂಚರ ಕುಮ್ಮಕ್ಕಿನೊಂದಿಗೆ ಹೈದರ್ ಒಂದು ಪಕ್ಕಾ ಸೈನ್ಯ, ಮದ್ದುಗುಂಡು ದಾಸ್ತಾನು ಹಾಗೂ ಮದ್ದುಗುಂಡು ಕಾರ್ಖಾನೆಯನ್ನು ಸ್ಥಾಪಿಸಿದ. ಅನಂತರ ಅವನು ಬೆಂಗಳೂರ ಒಡೆಯನಾಗಿ ನೇಮಕಗೊಂಡು ಕೊಯಿಮತ್ತೂರು ಪ್ರಾಂತ್ಯದ ಸಮಸ್ತ ರಾಜಧನ ತನಗೇ ಸೇರುವಂತೆ ನೋಡಿಕೊಂಡ. ಮೈಸೂರಿನ ಮೇಲೆ ತಂಟೆ ಮಾಡುತ್ತಿದ್ದ ಮರಾಠರನ್ನು ಸದೆಬಡಿದು ಶ್ರೀರಂಗಪಟ್ಟಣದ ರಾಜದರ್ಬಾರಿನಲ್ಲಿ "ಫತೇ ಹೈದರ್ ಬಹಾದುರ್" ಎಂಬ ಬಿರುದುಗಳಿಸಿದ.
ಇಷ್ಟಾದ ಮೇಲೆ ಕ್ರಿಸ್ತಶಕ ೧೭೫೯ರಲ್ಲಿ ಮೈಸೂರ ಒಡೆಯನಾಗಿದ್ದ ನಂಜರಾಜನನ್ನು ರಾಜಧಾನಿಯಿಂದ ಓಡಿಸಿ ತಾನೇ ರಾಜನೆಂದು ಘೋಷಿಸಿಕೊಂಡ. ಅದೇ ವೇಳೆಗೆ ಫ್ರೆಂಚ್ ರಾಯಭಾರಿಯೊಬ್ಬ ಬಂದು ಆರ್ಕಾಟ್ ಪ್ರಾಂತ್ಯದಿಂದ ಇಂಗ್ಲಿಷರನ್ನು ಹೊಡೆದೋಡಿಸಲು ತಮಗೆ ನೆರವಾಗಬೇಕೆಂದು ವಿನಂತಿಸಿದ. ಈ ಉದ್ದೇಶಕ್ಕಾಗಿ ೧೭೬೦ರಲ್ಲಿ ಪಾಡಿಚೆರಿಯಲ್ಲಿ ಲ್ಯಾಲಿಯೊಂದಿಗೆ ಒಂದು ಒಪ್ಪಂದಕ್ಕೆ ಬರಲಾಯಿತು. ಈ ಸಂತೋಷದಲ್ಲಿ ಅವನು ಬೀಗುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಮೈಸೂರಿನ ಮೇಲೆ ಮರಾಠರು ದಾಳಿ ನಡೆಸಿದರು. ಖಂಡೇರಾವ್ನ ನೇತೃತ್ವದಲ್ಲಿ ನಡೆದ ಆ ದಾಳಿ ಎಷ್ಟು ತೀವ್ರವಾಗಿತ್ತೆಂದರೆ ಹೈದರನು ತನ್ನ ಯುವಪತ್ನಿಯನ್ನೂ ಒಂಬತ್ತು ವರ್ಷದ ಮಗನನ್ನೂ ಬಿಟ್ಟು ತಲೆಮರೆಸಿಕೊಂಡು ಓಡಿಹೋಗಬೇಕಾಯಿತು. ಅದುವರೆಗೆ ಎಂದೂ ಸೋಲನ್ನೇ ಕಾಣದಿದ್ದ ಹೈದರನಿಗೆ ಈ ಘಟನೆ ದೊಡ್ಡ ಪಾಠ ಕಲಿಸಿತು.
ಹೀಗೆ ಹೈದರನ ಕಾಲದ ಕಾಣದ ಮಗ್ಗಲುಗಳ ಪರಿಚಯ ನಮಗಾಗುವುದು ಇಲ್ಲಿಂದಲೇ. ಜೆಸ್ವಿತ್ ಪತ್ರಗಳ ಮೂಲಕ ಸಮಗ್ರ ಇತಿಹಾಸದರ್ಶನವನ್ನು ನಮಗೆ ಕಟ್ಟಿಕೊಡುವ ಕೆಲಸದಲ್ಲಿ ಮೊತ್ತಮೊದಲು ಅಂದರೆ ೧೯೫೦ರ ದಶಕದಲ್ಲಿ ತೊಡಗಿಕೊಂಡವರು ಜೆಸ್ವಿತ್ ಪಾದ್ರಿಯವರಾದ ಜೆ ಫೆರೋಲಿಯವರು. ‘Jesuits in Mysore’ ಮತ್ತು ‘Jesuits in Malabar’ ಎಂಬ ತಮ್ಮ ಅಮೂಲ್ಯ ಗ್ರಂಥಗಳ ಮೂಲಕ ಫೆರೋಲಿಯವರು ನಮ್ಮ ನಾಡಿನ ಇತಿಹಾಸದ ನವೀಕರಣಕ್ಕೆ ಕೈಹಾಕಿದ್ದರು. ಆ ಸಮಯದಲ್ಲಿ ಅವರಿಗೆ ಜೆಸ್ವಿತರ ಸಮಗ್ರ ಪತ್ರಗಳು ಲಭ್ಯವಿರಲಿಲ್ಲವೆಂಬುದು ಒಂದು ನ್ಯೂನತೆಯಾಗಿ ಪರಿಣಮಿಸುತ್ತದೆ. ಅವರ ಪುಸ್ತಕಗಳನ್ನು ಪರಾಮರ್ಶಿಸಿದಾಗ ಇತಿಹಾಸವನ್ನು ಕುರಿತಂತೆ ಅವರ ಅಪಾರ ಪಾಂಡಿತ್ಯವನ್ನು ಮೆಚ್ಚದಿರಲು ಸಾಧ್ಯವಾಗದು. ಆದರೆ ಅವರು ತಮ್ಮ ಅಧ್ಯಯನಕ್ಕೆ ಸ್ವೀಕರಿಸಿದ ಆಕರ ಗ್ರಂಥಗಳಾವುವು ಎಂಬುದನ್ನು ಪಟ್ಟೀಕರಿಸಿಲ್ಲ.
ಸ್ವಾಮಿ ಅಂತಪ್ಪನವರು ತಮ್ಮ ಪರಾಮರ್ಶನಕ್ಕಾಗಿ ಕರ್ನಲ್ ಮಾರ್ಕ್ ವಿಲ್ಕ್ಸ್, ಬಿ ಎಲ್ ರೈಸ್, ಹಯವದನರಾವ್, ಗೋವಿಂದವೈದ್ಯ, ತಿರುಮಲಾರ್ಯ, ಮೈಸೂರು ವಿವಿ ವಿಶ್ವಕೋಶ ಇತ್ಯಾದಿಗಳನ್ನು ನೆಚ್ಚುತ್ತಾರೆ. ಜೊತೆಗೆ ಕನಕದಾಸ, ಸರ್ವಜ್ಞ ಮುಂತಾದವರ ಕಾವ್ಯಕೃತಿಗಳನ್ನೂ ನೆರವಿಗೆ ಪಡೆದಿದ್ದಾರೆ.
ಕ್ರೈಸ್ತ ಧರ್ಮಪ್ರಚಾರದ ಅಂದಿನ ಯುಗಧರ್ಮವನ್ನು ಒಪ್ಪಿಕೊಳ್ಳುವುದರ ಜೊತೆಗೇ ಅದನ್ನು ನವಿರಾಗಿ ವಿಶ್ಲೇಷಿಸುವ ಜಾಣ್ಮೆ ಸ್ವಾಮಿ ಅಂತಪ್ಪನವರದು. ಕ್ರೈಸ್ತಧರ್ಮದ ಪರಿಭಾಷೆಯಲ್ಲಿ "ಒಳ್ಳೆಯ ಕುರುಬ" ಎಂಬ ಪದವನ್ನು ಭಕ್ತವತ್ಸಲ ಎಂಬುದಕ್ಕೆ ಸಂವಾದಿಯಾಗಿ ಬಳಸಲಾಗುತ್ತದೆ. ಯೇಸುಕ್ರಿಸ್ತ ತನ್ನ ಬೋಧನೆಯಲ್ಲಿ "ನಾನೇ ಒಳ್ಳೆಯ ಕುರುಬ, ನನ್ನ ಕುರಿಗಳನ್ನು ಬಲು ಜತನದಿಂದ ನೋಡಿಕೊಳ್ಳುತ್ತೇನೆ" ಎಂದು ಹೇಳಿ ಕುರಿವೇಷದ ತೋಳಗಳನ್ನು ಅಂದರೆ ಗೊಡ್ಡು ಸನಾತನವಾದಿಗಳನ್ನು ಜಂಕಿಸುತ್ತಾನೆ. ಇಲ್ಲಿ ಕುರುಬ ಎಂಬುದು ಒಳ್ಳೇ ಪ್ರತಿಮೆಯಾಗಿ ಬಳಕೆಯಾಗಿದೆ. ನಮ್ಮ ದೇಶದ ಸಂದರ್ಭದಲ್ಲಿಯಂತೆ ಅದನ್ನು ಜಾತಿಸೂಚಕವಾಗಿ ಪರಿಗಣಿಸಲಾಗದು. ಅದರಂತೆಯೇ ಕನಕದಾಸ ತನ್ನ ಒಂದು ಕೀರ್ತನೆಯಲ್ಲಿ "ಕಾವ ನಮ್ಮಜ್ಜ ನರಕುರಿಹಿಂಡುಗಳ" ಎಂದು ಹೇಳುತ್ತಾನೆ. ಕ್ರೈಸ್ತನಾಗಿ ನಿತ್ಯವೂ Good Shepherd ಎಂಬ ಮಂತ್ರ ಪಠಿಸುವವನಿಗೆ ಕನಕದಾಸನ ಈ ಮಾತು ಕ್ರಿಸ್ತವಾಕ್ಯವಾಗಿ ತೋರುವುದರಲ್ಲಿ ಅತಿಶಯವೇನೂ ಇಲ್ಲ. ಸ್ವಾಮಿ ಅಂತಪ್ಪನವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕನಕದಾಸರು ಕ್ರೈಸ್ತಧರ್ಮವನ್ನು ಸ್ವೀಕರಿಸಿರಬಹುದಲ್ಲವೇ ಎಂದು ವಾದಿಸಿ ಅದಕ್ಕೆ ಪೂರಕವಾಗಿ ಅನೇಕ ಸಾಕ್ಷ್ಯಾಧಾರಗಳನ್ನು ಮುಂದಿಡುತ್ತಾರೆ.
ಈ ಎಲ್ಲ ಹವ್ಯಾಸಿ ಕಾರ್ಯದ ನಡುವೆಯೂ ಅವರು ತಮ್ಮ ಕರ್ತವ್ಯನಿಷ್ಠೆಯಿಂದ ಎಂದೂ ವಿಮುಖರಾಗಲಿಲ್ಲ. ಧರ್ಮಕೇಂದ್ರಗಳಲ್ಲಿ ಎಲ್ಲರೀತಿಯ ಎಲ್ಲವರ್ಗದ ಜನತೆಗೆ ಅವರು ಬೇಧಭಾವವಿಲ್ಲದೆ ದೀಕ್ಷಾಫಲವನ್ನು ಧಾರೆಯೆರೆದು ಕ್ರಿಸ್ತನ ತತ್ವಗಳನ್ನು ಎತ್ತಿಹಿಡಿದಿದ್ದಾರೆ. ಅತೀವ ಕಾರ್ಯದೊತ್ತಡದ ನಡುವೆಯೂ ಬೈಬಲನ್ನು ಕನ್ನಡಕ್ಕೆ ಭಾಷಾಂತರಿಸುವ ಮಹತ್ತರ ಕೆಲಸದಲ್ಲಿ ತೊಡಗಿಕೊಂಡು ಅದರಲ್ಲೂ ಯಶ ಕಂಡಿದ್ದಾರೆ. ಆದರೆ ನಮ್ಮ ಕನ್ನಡಕ್ರೈಸ್ತರ ಭವ್ಯ ಇತಿಹಾಸವನ್ನು ಸರ್ವರಿಗೂ ತೆರೆದಿಡುವ ಅವರ ಅನುಪಮ ಪ್ರಯತ್ನ ಮತ್ತು ಅಭಿಲಾಷೆ ಇದೆಯಲ್ಲ ಅದನ್ನು ಎಂಥವರೂ ಮೆಚ್ಚಲೇಬೇಕು.