ಅನುಕಂಪ...
ನಾವು ಅಂತರ್ಮುಖಿ ಆಗಿರಬೇಕಾದ್ರೆ ಕೆಲವೊಂದು ಸಾರಿ ತಟ್ಟನೆ ಮನಸ್ಸಿಗೆ ನಾಟುತ್ತೆ, ನಾ ಏನು ಮಾಡ್ತಾ ಇದ್ದೀನಿ, ನಾ ಮಾಡ್ತಾ ಇರೋದು ಸರಿನಾ? ನನ್ನಲ್ಲಿರುವ ಲೋಪದೋಷಗಳು ಇವು, ನಾ ಇನ್ಮೇಲೆ ಹೀಗಿರಬೇಕು-ಹಾಗಿರಬೇಕು ಅಂತ ಸಾಕಷ್ಟು ಯೋಚನೆಗಳು ಬರುತ್ವೆ. ಆದರೆ ಹೊರಪ್ರಪಂಚಕ್ಕೆ ಮನ ಅಡಿಯಿಟ್ಟ ಮೇಲೆ ಮತ್ತೆ ಅದೇ ರಾಗ ಅದೇ ಹಾಡು.
ನಾವು ಬಯಸಿದ್ದೆಲ್ಲ ಯಾವಾಗ್ಲು ಸಿಗಲ್ಲ, ಸಿಕ್ಕಿದ್ದರಲ್ಲೆ ತೃಪ್ತಿ ಪಡಬೇಕು ಅಂತ ಸಿಧ್ಧಾಂತಾನ್ನ ಎಲ್ಲರೂ ಹೇಳ್ತಾರೆ. ಆದರೆ ಎಷ್ಟೋ ಸಾರಿ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ, ಧನಾತ್ಮಕ ಯೋಚನೆಗಳನ್ನು ಒರೆಗೆ ಹಚ್ಚಲು ಮರೆತು ಬಿಡ್ತೀವಿ. ಏನೂ ಇಲ್ಲ
ಅಂದ್ರನೂ ಎಲ್ಲಾ ಇದ್ದ ಹಾಗೆ ಖುಶಿಯಾಗಿ ಇರ್ಬೇಕು ಅಂತ ನನಗೆ ನಾನು ಯಾವಾಗ್ಲೂ ಹೇಳ್ಕೋತ್ತೀನಿ, ಆದರೆ ಅನುಕಂಪ ಬಿಡೋದೆ ಇಲ್ಲ.
ಅನುಕಂಪ ಬಯಸೋದು ಮನುಜನ ಸಹಜ ಗುಣ, ನನಗೇನೋ ಸಮಸ್ಯೆ ಅದನ್ನ ಯಾರ ಹತ್ತಿರಾದ್ರು ಹೇಳ್ಕೋ ಬೇಕು ಅನ್ಸುತ್ತೆ, ಹಾಗೆ ಹೇಳ್ಕೊಂಡಾಗ ಅದನ್ನ ಕೇಳಿದವರು," ಅಯ್ಯೋ ಹೌದಾ ಹುಷಾರು, ಜೋಪಾನ...ಪಾಪ ಏನು ಕಷ್ಟ ನಿನಗೆ" ಅಂತ ಆ ಕಡೆ ಅಂದಮೇಲೆ ಮನಸ್ಸಿಗೆ ಏನೋ ಸಿಕ್ಕಷ್ಟು ಸಂತೃಪ್ತಿ.
ಏನೋ ತರಬೇಕು ಅಂತ ಅಂಗಡಿಗೆ ಹೋಗಿರ್ತೀವಿ ಯಾವುದೋ ವಸ್ತು ಇಷ್ಟವಾಗುತ್ತೆ ತಗೋ ಬೇಕು ಅನ್ಸುತ್ತೆ, ಆದರೆ ದುಡ್ಡು ಕಡಿಮೆ ಇಟ್ಟುಕೊಂಡು ಹೋಗಿರ್ತೀವಿ, ತಗೊಳ್ಳೋಕೆ ಆಗಲ್ಲ. ಛೇ! ಅಂಗಡಿಗೆ ಹೋಗಿದ್ದೆ ಅದು ಇಷ್ಟ ಆಗಿತ್ತು ತಗೊಳ್ಳೋಕೆ ಆಗ್ಲಿಲ್ಲ ಅಂತ ಬೇಜಾರು ಮಾಡ್ಕೋತೀವಿ. ಅದನ್ನ ಕೇಳಿದವರು, "ಹೌದಾ! ಹೋಗ್ಲ್ ಬಿಡು ಯಾಕೆ ಚಿಂತೆ ಮಾಡ್ತಿಯಾ, ಮತ್ತೆ ಇನ್ನೊಂದು ಸಲ ಹೋದಾಗ ತಗೊವಂತೆ" ಅಂತ ಅವರು ಅಂದ್ಮೇಲೇನೆ ಮನಸ್ಸು ನಿರಾಳ. ನಮಗೂ ಗೊತ್ತಿರುತ್ತೆ ಮತ್ತೆ ಇನ್ನೊಂದು ಸಲ ಹೋದಾಗ ತಗೋಬಹುದು ಅಂತ, ಆದರೂ ನಾವು ಹೀಗೆ ಮಾಡ್ತೇವಿ...ಆ ಕ್ಷಣ ಪ್ರತಿಕ್ರಿಯಿಸದೆ ಇರೋದು ಆಗೋದೆ ಇಲ್ಲ. ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂದೀರ್ತಾವೆ,"ಹೋಗ್ಲಿಬಿಡು,ಮುಂದಿನ ವರ್ಷ
ಇದಕ್ಕಿಂತ ಚೆನ್ನಾಗಿ ತೆಗೆಯುವಂತೆ ನನ್ನ ಬಂಗಾರು" ಅಂತ ಯಾರಾದ್ರು ಅಂದ್ಮೇಲೇನೆ ಮನಸ್ಸಿಗೆ ಸಮಾಧಾನ. ಎಲ್ಲರೂ ಹಾಗೇನೆ...ಯಾವಾಗ್ಲೂ ನಮ್ಮ ಮನಸ್ಸು "ಅನಕಂಪ"ಕ್ಕೋಸ್ಕರ ತುಡಿತಾ ಇರುತ್ತೆ.
ಚಿಕ್ಕಮಗು ತಾನೆ ಎಡವಿ ಬಿದ್ದಿರುತ್ತೆ, ಆದರೆ ಹೋ... ಅಂತ ಜೋರಾಗಿ ಅಳುತ್ತೆ... ಕೆಲಸದಲ್ಲಿ ತಲ್ಲೀನವಾಗಿದ್ದ ತಾಯಿ ಬಂದು ರಮಿಸಿ ಅಯ್ಯೋ ಏನ್ಯಾಯ್ತು ನನ್ನ ರನ್ನ,ಚಿನ್ನ,ರಾಜ,ಬಂಗಾರ ಅಂತ ಅಂದ್ಮೇಲೇನೆ ಅಳು ನಿಲ್ಲಿಸೋದು. ಹೀಗೆ ಈ ಗುಣ ಹುಟ್ಟುವಾಗಲೆ ರಕ್ತಗತ.
ಪರೀಕ್ಷೆಯಲ್ಲಿ ಉತ್ತರ ಗೊತ್ತಿರೋ ಯಾವುದೋ ಪ್ರಶ್ನೆಗೆ ತಪ್ಪುತ್ತರ ಬರೆದು ಬಂದಿರ್ತೀವಿ.ಮನಸ್ಸು ಚಡಪಡಿಸ್ತಾ ಇರುತ್ತೆ. ಆಗ ಯಾರಾದ್ರು ಬಂದು ಸಮಾಧಾನ ಪಡಿಸಿದಮೇಲೇನೆ ಮುಂದಿನ ಪರೀಕ್ಷೆಗೆ ಅಣಿಯಾಗೋದು.
ಕೆಲಸದ ಸಂದರ್ಶನ ಮಠ ಹತ್ತಿರುತ್ತೆ(ಸರಿಯಾಗಿರಲ್ಲ) ಹ್ಯಾಪ್ ಮೋರೆ ಹಾಕ್ಕೊಂಡು,ಮುಗಿಲೇ ಧೊಪ್ಪೆಂದು ತಲೆಮೇಲೆ ಕುಸಿದಿರೋ ಹಾಗೆ ಕೂತಿರ್ತೀವಿ. ಆಗ ಹೃದಯಕ್ಕೆ ಹತ್ತಿರವಾದವರು ಹೇಳೋ ಅನುಕಂಪದ ಮಾತುಗಳು ನಮ್ಮನ್ನ
ಕೈಹಿಡಿದು ಮುಂದಕ್ಕೆ ನಡೆಸುತ್ತವೆ. ನಾವು ಅದನ್ನೆ ಬಯಸ್ತಾ ಇರ್ತೀವಿ ಸಹ.
ಹಗಲು ರಾತ್ರಿ ಎನ್ನದೆ ಕೆಲಸ ಮಾಡ್ತಾ ಇರ್ತೀವಿ, ಗೆಳೆಯ ಫೋನಾಯಿಸಿದಾಗ, ಏನೋ ಇಷ್ಟು ಹೊತ್ತಾದ್ರೂ ಸಹ ಮನೆಗೆ ಹೋಗಿಲ್ವ? ತುಂಬಾ ಕೆಲ್ಸಾನ? ಅಂತ ಅಂದಾಗ, ಹೊಟ್ಟೆಯಲ್ಲಿ ಇದ್ದದ್ದು ಗಬಕ್ಕನೆ ಬಾಯಲ್ಲಿ ಬರುತ್ತೆ. ಹೂಂ ತುಂಬಾ ಕೆಲ್ಸ ಇದೆ, ಇನ್ನೂ ಮುಗಿದಿಲ್ಲ ಅಂತ ಜೋಲು ಮೋರೆ ಹಾಕ್ಕೊಂಡು ಮಾತಾಡ್ತೀವಿ. ಆಗ ಆ ಕಡೆಯಿಂದ, ಎಲ್ಲರೂ ಎಷ್ಟು ಕಷ್ಟಪಡ್ತೀರಲ್ಲ,ತುಂಬಾ ಕೆಲ್ಸ ನಿಮಗೆ...ಹಾಗೆ ಹೀಗೆ...ಏನೂ ಆಗಲ್ಲ...ಅಂತ ಅದು ಇದು ಅಂದ ಮೇಲೆ ಮನದಲ್ಲಿ ಏನೋ ಸಂತೃಪ್ತಿ. ಮನಮುಟ್ಟುವ ಕೆಲವು ಮಾತುಗಳು... ಮನದ ಭಾರವನ್ನ ಇಳಿಸಿ, ಮನಸ್ಸನ್ನ ಪ್ರಫುಲ್ಲಗೊಳಿಸುತ್ತವೆ.
ಪ್ರತಿಕ್ಷಣ ನಾವು ನಮ್ಮ ಸ್ಥಿತಿಗೆ ಅನುಕಂಪದ ಆಸರೆಯನ್ನ ಬಯಸ್ತಾ ಇರ್ತೀವಿ. ಅಯ್ಯೋ ಪಾಪ ಅಂತ ಕೇಳೋಕೆ ಕಿವಿ ನಿಮಿರುತ್ತೆ ಯಾವಾಗ್ಲೂ. ಹೇಳ್ಕೊಳ್ಳೋಕೆ ಬಾಯಿನೂ ಕಾಯ್ತಾ ಇರುತ್ತೆ.
ಅದೇ ಆ ಅನುಕಂಪ ಬಯಸೋದರ ಬದಲು, "ನಮ್ಮನ್ನ ನಾವು ಯಾವಾಗ ಸಮಾಧಾನ ಪಡಿಸಿಕೊಂಡು, ಮುಂದೆ ಹೋಗ್ತೇವೋ ಆಗ ಅನ್ಯರಿಗಿಂತ ಒಂದು ಹೆಜ್ಜೆ ಮುಂದೆ ನಾವು ಇರ್ತೀವಿ". ಈ ತರಹ ನಮ್ಮ ಮನಸ್ಸನ್ನ ನಾವೇ ಪಳಗಿಸುತ್ತಾ ಹೋದರೆ ಹತ್ತರಂತೆ ಹನ್ನೊಂದನೆಯವರು ಆಗದೆ(ಗುಂಪಿನಲ್ಲಿ ಗೋವಿಂದ ಆಗದೆ), ಹತ್ತೂ ಮಂದಿ ಹಿಂಬಾಲಕರಾಗಿ ಅವರ ಗುರು ನಾವಾಗುವೆವು... ಗಟ್ಟಿ ಮನಸ್ಸು ಅಂತ ಅದಕ್ಕೆ ಹೇಳೋದು...
ಅನುಕಂಪದ
ಆ-ಸೆರೆಗೆ
ಇತಿಶ್ರೀ ಹೇಳುವಾ...
ಯಾವುದಕ್ಕೂ
ಜಗ್ಗದ ಜಗಜಟ್ಟಿ
ನಾವಾಗುವಾ...
---ಅಮರ್