ಪ್ರಕೃತಿಯೇ ಪಾಠಶಾಲೆ (ಇ-ಲೋಕ-27)(18/6/2007

ಪ್ರಕೃತಿಯೇ ಪಾಠಶಾಲೆ (ಇ-ಲೋಕ-27)(18/6/2007

ಬರಹ

 ಪ್ರಕೃತಿಯಿಂದ ನಾವು ಕಲಿಯಬೇಕಾದ್ದು ಬಹಳವಿದೆ. ಈ ಜಗತ್ತಿನ ಪ್ರತಿ ಜೀವಿಯೂ ಒಂದು ಅದ್ಭುತ. ಹಾಗೆ ನೋಡಿದರೆ ನಮ್ಮ ಸುತ್ತಲಿನ ಪ್ರತಿವಸ್ತುವೂ ಒಂದು ಪ್ರ್‍ಆಕೃತಿಕ ಕಲಾಕೃತಿ.ಇದು ತಡವಾಗಿಯಾದರೂ ನಮ್ಮ ತಂತ್ರಜ್ಞರಿಗೆ ಹೊಳೆದಿದೆ. ತಾವು ವಿನ್ಯಾಸಗೊಳಿಸಬೇಕಾದ ವಸ್ತು, ಅದು ವಾಹನವಾಗಿರಲಿ, ಅದರ ಬಿಡಿ ಭಾಗವಾಗಿರಲಿ,ಅಲ್ಲ ಮತ್ಯಾವುದೋ ಸಾಧನವಿರಲಿ,ಅವುಗಳ ವಿನ್ಯಾಸವನ್ನು ಪ್ರಕೃತಿಯಿಂದ ಅಳವಡಿಸಿಕೊಳ್ಳಬಹುದು ಎನ್ನುವುದು ತಂತ್ರಜ್ಞರಿಗೆ ಮನವರಿಕೆಯಾಗಿದೆ.
 ಹಲ್ಲಿಯ ಕಾಲಿನಡಿ ಇರುವ ಅತಿಸೂಕ್ಷ್ಮ ರೋಮಗಳು,ಹಲ್ಲಿಗಳು ತಾರಸಿ ಅಥವಾ ಗೋಡೆಗೆ ಬಿಗಿಯಾಗಿ ಅಂಟಿಕೊಳ್ಳಲು ಸಹಾಯ ಮಾಡುತ್ತವೆ. ಒಂದು ರೀತಿಯ ಸಸ್ಯ ಬೀಜಗಳಲ್ಲಿರುವ ಸಣ್ಣ ಕೊಂಡಿಗಳ ಕಾರಣ ಅವು ಬಟ್ಟೆಯನ್ನು ಅಂಟಲು ಸಾಧ್ಯವಾಗುತ್ತದೆ. ಇದನ್ನು ಗಮನಿಸಿದ ಸ್ವಿಸ್ ಇಂಜಿನಿಯರ್, ವೆಲ್ಕ್ರೋ ಎಂದು ಕರೆಯಲಾಗುವ ಅಂಟುವ ಪಟ್ಟಿಗಳ ಸಂಶೋಧನೆ ಮಾಡಿದ.
 ತಾವರೆಯೆಲೆಯ ಮೇಲೆ ನೀರು ಸರಾಗವಾಗಿ ಜಾರಿ ಹೋಗಿ, ಇದಕ್ಕೆ ತುಸುವೂ ಅಂಟದು. ಇದನ್ನು ನಕಲು ಮಾಡಿ ಕಲೆಯಾಗದ ವಸ್ತ್ರ ತಯಾರಿಸಲಾಗಿದೆ.
 ಯಾವುದೇ ವಸ್ತುವಿನ ವಿನ್ಯಾಸದಲ್ಲಿ ಹೊಸತನ ಅಳವಡಿಸುವಾಗ ಪ್ರಕೃತಿಯು ಅಂತಹ ಗುಣವನ್ನು ನೀಡಿದ ಬಗೆಯನ್ನು ತಿಳಿದುಕೊಳ್ಳುವುದು ಹೆಚ್ಚಿನ ಸಹಾಯ ಮಾಡುತ್ತದೆ.ಇಂಧನ ಬಳಕೆಯಲ್ಲಿ ಮಿತವ್ಯಯ ಸಾಧ್ಯವಾಗುವ ಕಾರಿನ ವಿನ್ಯಾಸ ಮಾಡುವಾಗ ವಿನ್ಯಾಸಕಾರರು ಮೀನುಗಳನ್ನು ಅಧ್ಯಯನ ಮಾಡಿದರು.ಡೈಮರ್‌ಕ್ರಿಸ್ಲರ್ ಕಂಪೆನಿಯ ವಿನ್ಯಾಸಕಾರರ ಗಮನ ಸೇಳೆದದ್ದು ಬಾಕ್ಸ್‍ಫಿಶ್ ಎನ್ನುವ ಮೀನಿನ ತಳಿ. ಈ ಮೀನು ಮಧ್ಯದಲ್ಲಿ ಉಬ್ಬಿದ ದೇಹ ಹೊಂದಿದೆ. ಇದು ವೇಗವಾಗಿ ಸಾಗುವ ಮೀನು ಮತ್ತು ಅತ್ಯಂತ ಕಡಿಮೆ ಪ್ರಯತ್ನದ ಮೂಲಕ ವೇಗವನ್ನು ಸಾಧಿಸುತ್ತದೆ. ಇದರ ವಿಶಿಷ್ಟ ಆದರೆ ಅಷ್ಟು ಆಕರ್ಷಕವಲ್ಲದ ದೇಹ ವಿನ್ಯಾಸವನ್ನು ತಮ್ಮ ಸಣ್ಣ ಕಾರಿನ ವಿನ್ಯಾಸದಲ್ಲೂ ಅಳವಡಿಸಲು ಕಂಪೆನಿಯ ವಿನ್ಯಾಸಕಾರರು ತೀರ್ಮಾನಿಸಿದರು. ಮೊದಲಾಗಿ ಅವರು ಮಣ್ಣಿನ ಮಾದರಿಗಳನ್ನು ಮಾಡಿ ಅವನ್ನು ಗಾಳಿಯೆದುರು ಒಡ್ಡಿ ಅದು ಗಾಳಿಯ ಪ್ರವಾಹಕ್ಕೆ ಒಡ್ಡುವ ಪ್ರತಿರೋಧವನ್ನು ಕಂಡುಕೊಂಡರು. ತಿಂಗಳುಗಟ್ಟಲೆ ಪರಿಶ್ರಮದ ಬಳಿಕ ಕಂಪ್ಯೂಟರು ಮಾದರಿಯನ್ನೂ ಅವರು ಅಭಿವೃದ್ಧಿ ಪಡಿಸಿದರು.ಮೀನಿನ ಎಲುಬುಗಳ ವಿನ್ಯಾಸ ನಕಲು ಮಾಡಿ, ಕಾರಿನ ಬಾಗಿಲಿನ ತೂಕ ಇಳಿಸಲೂ ಅವರಿಗೆ ಸಾಧ್ಯವಾಯಿತು.ಇಂತಹ ಕಾರುಗಳ ಪೈಕಿ ಈ ಕಾರು ಅತ್ಯುತ್ತಮ ಎನಿಸಿದೆ.
 ಒಂದು ಬಗೆಯ ಚಿಟ್ಟೆಯನ್ನು ಅಭ್ಯಸಿಸುವಾಗ, ಮಾರ್ಕ್ ಮೈಲ್ಸ್ ಎನ್ನುವ ಸಂಶೋಧಕ ಅದರ ರೆಕ್ಕೆಗಳು ಹೊಳೆಯುವ ಬಣ್ಣದ್ದಾಗಿ ಕಂಡರು, ರೆಕ್ಕೆಗಳಲ್ಲಿ ಬಣ್ಣದ ಅಂಶ ಇಲ್ಲದ್ದನ್ನು ಗಮನಿಸಿದನಾತ. ಪರೀಕ್ಷಿಸಿದಾಗ, ರೆಕ್ಕೆಗಳ ಮೇಲ್ಮೈಯಲ್ಲಿ ಕಿರು ರಚನೆಗಳಿದ್ದು, ಇವು ಬೆಳಕಿನ ಒಂದು ತರಂಗಾಂತರದ ಅಲೆಗಳನ್ನು ಪ್ರತಿಫಲಿಸುವ ಮೂಲಕ ಬಣ್ಣವನ್ನು ಹೊಮ್ಮಿಸುತ್ತವೆ ಎನ್ನುವುದನ್ನು ಗುರುತಿಸಿದ. ಇದೇ ಮಾದರಿ ಅನುಸರಿಸಿ ಕಂಪ್ಯೂಟರ್ ಅಥವ ಸಾಧನಗಳ ತೆರೆಯನ್ನು ತಯಾರಿಸಿದರೆ. ಬಾಹ್ಯ ಬೆಳಕಿನ ಮೂಲಕವೇ ದೃಶ್ಯ ತೋರಿಸಿ, ಸಾಧನದ ಬ್ಯಾಟರಿಯನ್ನು ಉಳಿಸಲು ಸಾಧ್ಯವೆಂದು ಯೋಚಿಸಿದ.ಫಲಸ್ವರೂಪವಾಗಿ ಐಮಾಡ್ ಎನ್ನುವ ತೆರೆಯನ್ನು ತಯಾರಿಸಲಾಯಿತು. ಇದು ಎಲ್.ಸಿ.ಡಿ. ತೆರೆಗಿಂತ ಕಡಿಮೆ ವಿದ್ಯುಚ್ಚಕ್ತಿ ಬಳಸುತ್ತದೆ.
 ಪ್ರಕೃತಿಯಿಂದ ಹೊಸ ವಿನ್ಯಾಸಗಳನ್ನು ಪಡೆದು ದೈನಂದಿನ ಸಾಧನಗಳಲ್ಲಿ ಅಳವಡಿಸುವ  ಬಯೋಮಿಮಿಕ್ರಿ ಎನ್ನುವ ವಿಧಾನ ಜನಪ್ರಿಯವಾಗುತ್ತಿದೆ.
ಕಲಾಕೃತಿಗಳ ಮುದ್ರಣಕ್ಕೆ ಪ್ರಿಂಟರ್
 ಮೊನಾಲಿಸಾ ಅಂತಹ ಕಲಾಕೃತಿಯನ್ನು ನೈಜವೆನ್ನಿಸುವ ಹಾಗೆ ಮುದ್ರಿಸಲು ಅತ್ಯುತ್ತಮ ಕಂಪ್ಯೂಟರ್ ಪ್ರಿಂಟರ್ ಬೇಕು. ಇಲ್ಲವಾದಲ್ಲಿ ಕೋಟಿಗಟ್ಟಲೆ ಬಿಂದುಗಳನ್ನು ಹೊಂದಿರುವ ಕಲಾಕೃತಿಯ ಡಿಜಿಟಲ್ ಪ್ರತಿಯಿಂದ ಚಿತ್ರವನ್ನು ಮುದ್ರಿಸಿ, ಅದು ನಿಜವಾದ ಕಲಾಕೃತಿಯೋ ಎಂದು ಭ್ರಮೆ ಹುಟ್ಟಿಸುವುದು ಹೇಗೆ ಸಾಧ್ಯ? ಕಂಪ್ಯೂಟರ್ ಪ್ರಿಂಟರ್ ತಯಾರಿಸುವುದರಲ್ಲಿ ಎತ್ತಿದ ಕೈ ಎಂದು ಗುರುತಿಸಲ್ಪಡುವ ಹ್ಯೂಲೆಟ್ ಪ್ಯಕರ್ಡ್ ಕಂಪೆನಿ ಜೆಟ್‍ಮ್ಯಾಟ್ರಿಕ್ಸ್ 10000 ಎನ್ನುವ ಹೊಸ ಮುದ್ರಕ ಇಂತಹ ಕಾರ್ಯಕ್ಕೆ ಹೇಳಿ ಮಾಡಿಸಿದಂತಿದೆ. ವಿನೈಲ್ ಎನ್ನುವ ಸಂಯುಕ್ತವನ್ನು ಬಳಸುವ ಶಾಯಿಯಿಂದ ಮುದ್ರಣ ನಡೆಯುತ್ತದೆ. ಚಿತ್ರದ ಸ್ಪಷ್ಟತೆಯೂ ಅತ್ಯುಚ್ಚ ಮಟ್ಟದ್ದು. ಚಿತ್ರವನ್ನು ಲ್ಯಾಮಿನೇಟ್ ಮಾಡಿದರೆ,ಕನಿಷ್ಠ ಮೂರು ವರ್ಷ ಕಾಲ ಚಿತ್ರ ಬಾಳಿಕೆ ಬರುವುದು ಖಾತರಿ ಎನ್ನುವುದು ಪ್ರಯೋಗಾಲಯದ ಪರೀಕ್ಷೆಗಳು ಸಿದ್ಧ ಪಡಿಸಿವೆ.ಪ್ರತಿ ಚಿತ್ರ ಮುದ್ರಿಸಲು ಇಪ್ಪತ್ತು ಸಾವಿರ ಖರ್ಚು ಬರುತ್ತದೆ.
ಬಾಹ್ಯಾಕಾಶ ಕೇಂದ್ರದಲ್ಲಿ ಕೈಕೊಟ್ಟ ಕಂಪ್ಯೂಟರ್ ರಿಪೇರಿ!
 ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ಕಂಪ್ಯೂಟರ್ ಕೈಕೊಟ್ಟಿದೆ. ಆರು ಕಂಪ್ಯೂಟರುಗಳ ಜಾಲದಲ್ಲಿ ಸದ್ಯ ಎರಡು ಮಾತ್ರಾ ಕೆಲಸ ಮಾಡುತ್ತಿವೆ.ಹಿಂದೆಯೂ ಹೀಗಾಗುತ್ತಿತ್ತಂತೆ. ಆದರೆ ಕಂಪ್ಯೂಟರ್ ತೊಂದರೆ ಕೊಟ್ಟಾಗ ನಾವು ಪ್ರಯೋಗಿಸುವ ಬ್ರಹ್ಮಾಸ್ತ್ರ ಪುನರಾರಂಭಿಸುವ ಮಂತ್ರವನ್ನು ಪಠಿಸಿದಾಗ ಸರಿಯಾಗುತ್ತಿದ್ದವು. ಈ ಸಲ ಮಂತ್ರ ಕೆಲಸ ಮಾಡಿಲ್ಲ. ಪುಣ್ಯಕ್ಕೆ ಈಗ ಅಟ್ಲಾಂಟಿಸ್ ಸ್ಪೇಸ್ ಶಟಲ್ ಕೇಂದ್ರದೊಡನೆ ಥಳಕು ಹಾಕಿಕೊಂಡಿದೆ.ಏಳು ಜನ ಬಾಹ್ಯಾಕಾಶಯಾನಿಗಳು ಶಟಲಿನಲ್ಲಿ ಕೇಂದ್ರಕ್ಕೆ ಭೇಟಿ ಇತ್ತಿದ್ದಾರೆ. ಕೇಂದ್ರದಲ್ಲಿ ಮೂರು ಜನ ವಾಸವಾಗಿದ್ದಾರೆ. ಇವರೆಲ್ಲಾ ಸೇರಿ ತೊಂದರೆಯನ್ನು ಸರಿ ಪಡಿಸಲು ಕೊನೆಗೂ  ಪ್ರಯತ್ನಿಸಿ ಯಶ ಸಾಧಿಸಿದ್ದಾರೆ.
 ಇದರ ಜತೆಗೆ ಶಟಲ್‍ನ ಹೊರಕವಚ ಕಿತ್ತಿದ್ದು, ಅದನ್ನೂ ಸರಿ ಪಡಿಸಬೇಕಾಗಿದೆ. ಕಂಪ್ಯೂಟರ್ ಕೆಟ್ಟಿರುವುದು ಸದ್ಯಕ್ಕೆ ದೊಡ್ಡ ಸಮಸ್ಯೆಯಾಗಿರಲಿಲ್ಲ. ಆದರೆ ಉಸಿರಾಡಲು ಆಮ್ಲಜನಕ ಪೂರೈಸುವ ವ್ಯವಸ್ಥೆ ನಿಂತು ಹೋಗಿತ್ತು. ದಾಸ್ತಾನು ಮಾಡಿಟ್ಟಿರುವ ಆಮ್ಲಜನಕ ಇನ್ನೆರಡು ತಿಂಗಳಿಗೆ ಮಾತ್ರಾ ಬರುತ್ತಿತ್ತು. ಕಂಪ್ಯೂಟರುಗಳನ್ನು ಸರಿಪಡಿಸಲಾಗದಿದ್ದರೆ, ಅಲ್ಲಿನ ನಿವಾಸಿಗಳು ನಿಗದಿತ ಸಮಯದ ಮೊದಲೇ ವಾಪಸ್ಸಾಗಬೇಕಾಗುತ್ತಿತ್ತು. ಅಟ್ಲಾಂಟಿಸ್‍ನ ಯಾತ್ರೆಯನ್ನು ಒಂದೆರಡು ದಿನ ಹೆಚ್ಚಿಸಿಯಾದರೂ ರಿಪೇರಿ ಕೈಗೊಳ್ಳ ಬೇಕೆನ್ನುವ ತೀರ್ಮಾನಕ್ಕೆ ವಿಜ್ಞಾನಿಗಳು ಬಂದಿದ್ದರು.
ಹುಡುಗಿಯನ್ನು ಹುಡುಕಲು ಅಂತರ್ಜಾಲದ ಬಳಕೆ
ಪೋರ್ಚುಗಲ್‍ನಲ್ಲಿನ ಪ್ರವಾಸಿಧಾಮದಿಂದ ಕಾಣೆಯಾದ ಮಾದೆನೀಲ್ ಎನ್ನುವ ನಾಲ್ಕು ವರ್ಷದ ಬಾಲೆಯನ್ನು ಹುಡುಕಲು ಬ್ರಿಟಿಷ್ ಪೊಲೀಸರು ಸಾಧ್ಯವಾದ ಎಲ್ಲಾ ಮಾರ್ಗಗಳನ್ನು ಉಪಯೋಗಿಸುತ್ತಿದ್ದಾರೆ.ಅದರಲ್ಲಿ ಅಂತರ್ಜಾಲದ ಬಳಕೆಯೂ ಸೇರಿದೆ. ಅಂತರ್ಜಾಲದ ಸೆಕೆಂಡ್‍ಲೈಫ್ ಎನ್ನುವ ಮಿಥ್ಯಾಪ್ರಪಂಚದಲ್ಲಿ ಕೂಡಾ ಆಕೆಯ ಪೋಸ್ಟರ್ ಅನ್ನು ಪ್ರದರ್ಶಿಸಲಾಗಿದೆ.ಈ ಮಿಥ್ಯಾಪ್ರಪಂಚದಲ್ಲಿ ಜನಪ್ರಿಯವಾಗಿರುವ ತಾಣಗಳಲ್ಲಿ ಈ ಪೋಸ್ಟರ್ ಪ್ರದರ್ಶಿಸಿ ಜನರ ಗಮನ ಸೆಳೆಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
 ಹುಡುಗಿ ನಾಪತ್ತೆಯಾಗಿ ಈಗಾಗಲೇ ಆರು ವಾರ ಉರುಳಿದೆ. ಮೊರಾಕ್ಕೋದ ಅಪಹರಣಕಾರರ ಮೇಲೆ ಸಂಶಯವಿರುವುದರಿಂದ, ಹುಡುಗಿಯ ಹೆತ್ತವರು ಅಲ್ಲಿಗೆ ಭೇಟಿ ಇತ್ತು ಅಲ್ಲಿನ ಸರಕಾರದ ನೆರವು ಪಡೆಯಲು ಪ್ರಯತ್ನಿಸುತ್ತಿದಾರೆ.
*ಅಶೋಕ್‍ಕುಮಾರ್ ಎ