ತಂದೆಯ ದಿನ
ನನ್ನ ತಂದೆ ಸತ್ತಾಗ ನನಗೆ ೬ ವರ್ಷ. ಆಕಸ್ಮಿಕವಾಗಿ ಹೃದಯಾಘಾತವಾಗಿ ಒಂದು ಭಾನುವಾರ ಸಾಯಂಕಾಲ ನಮ್ಮನ್ನು ಅಗಲಿದರು. ಅವರು ಎದೆನೋವು ಎಂದೊಡನೆ ನನ್ನ ಅಕ್ಕಂದಿರು ಪಕ್ಕದಲ್ಲಿದ್ದ ವೈದ್ಯರನ್ನು ಕರೆತರಲು ಓಡಿದರೆ, ನನ್ನ ಅಣ್ಣಂದಿರು ಔಷಧಿ ತರಲು ನಡೆದರು. ಹೀಗಾಗಿ ನನ್ನ ತಂದೆಯ ಕೊನೆಯುಸಿರು ನೋಡಿದ್ದು ನಾನು ಮತ್ತು ನನ್ನ ತಾಯಿ ಇಬ್ಬರೇ. ನನ್ನ ತಾಯಿ ಅವರ ಬಾಯೊಳಗೆ ಸುರಿದ ಗಂಗಾಜಲ ನೊರೆ ನೊರೆಯಾಗಿ ಆಚೆ ಇಳಿದಿದ್ದು ನನಗಿನ್ನೂ ಕಣ್ಣಿಗೆ ಕಟ್ಟಿದಂತಿದೆ. ಅಪ್ಪನನ್ನು ಚಟ್ಟಕ್ಕೆ ಬಿಗಿದು, ಅವರ ಬಾಯಿಗೆ ಅಕ್ಕಿಕಾಳು ಹಾಕಿದ್ದು, ನಮ್ಮ ಗೋಳಾಟ, ಅಸಹಾಯಕತೆಯನ್ನು ಕುತೂಹಲದಿಂದ ನೋಡಲು ಅಪರಿಚಿತರು ಮನೆಯ ಮುಂದೆ ನೆರೆದದ್ದು, ಇವೆಲ್ಲಾ ಎಂದೂ ಮರೆಯದ ದೃಶ್ಯಗಳು. ಆ ಒಂದು ರಾತ್ರಿ ನಮ್ಮ ಪರಿವಾರದ ಎಲ್ಲರ ಮೇಲೂ ಒಂದೊಂದು ರೀತಿಯ ಪರಿಣಾಮ ಬೀರಿತು.
ಆರು ವರುಷದ ಮಗುವಿಗೆ ಇದರಿಂದ ಮಾನಸಿಕವಾಗಿ ಹೆಚ್ಚೇನೂ ಬದಲಾಗಬಾರದಲ್ಲವೇ? ಏಕೆಂದರೆ, ಮಗುವಿಗೆ ಏನು ತಿಳಿದೀತು ಎಂದೆನಿಸುತ್ತಲ್ಲವೇ? ಆದರೆ, ನನಗೇ ಆಶ್ಚರ್ಯವಾಗುವಂತೆ ಆ ಘಟನೆ ನನ್ನನ್ನು ಬದುಕಿನಲ್ಲಿ ರೂಪಿಸಿದೆ. ಆ ದಿನಗಳಲ್ಲಿ ಎಲ್ಲರೂ ನನ್ನನ್ನು ಅನುಕಂಪದಿಂದ ನೋಡುತ್ತಿದ್ದಂತೆ ಭಾಸವಾಗುತ್ತಿತ್ತು ಮತ್ತು ಆ ನೋಟವನ್ನು ನಾನು ದ್ವೇಷಿಸುವಂತೆ ಮಾಡುತ್ತಿತ್ತು. ಈಗಲೂ ಸಹ ನನಗೆ ಯಾರದೇ ಸಹಾನುಭೂತಿ ಅಥವಾ ಕರುಣೆ ರುಚಿಸುವುದಿಲ್ಲ. ಹತ್ತಿರದವರ ಮುಂದೆಯೂ ನನ್ನ ದುರ್ಬಲತೆಯನ್ನು ತೆರೆದಿಡಲು ಹೆದರುತ್ತೇನೆ, ಏಕೆಂದರೆ, ಅದರಿಂದ ಅವರಲ್ಲಿ ಹುಟ್ಟುವ ಅನುಕಂಪ ನನಗೆ ಸೇರುವುದಿಲ್ಲ.
ಹಾಗೆಯೇ, ನನಗೆ ಸದಾ ನನ್ನ ಕಾಲಬುಡದಿಂದ ಬೇರು ಕಿತ್ತ ಅನುಭವ ಕಾಡುತ್ತದೆ. ಒಂದು ರೀತಿಯ "ಇನ್ಸ್ಟೆಬಿಲಿಟಿ". ನಾಳೆಯಲ್ಲಿ ನಂಬಿಕೆ ಕಮ್ಮಿ. ಯಾವಾಗಾದರೂ ಏನಾದರೂ ಕೆಟ್ಟದ್ದು ಆಗಬಹುದೆಂಬ ಹೆದರಿಕೆ. ಇದು ಒಂದು ತರಹ ಮನೆಯರಲ್ಲಿ ಅಪನಂಬಿಕೆ, ಮಕ್ಕಳ ಸುರಕ್ಷತೆಯ ವಿಷಯದಲ್ಲಿ ವಿಪರೀತ ಕಾಳಜಿ, ಹೀಗೆ ವಿವಿಧ ರೀತಿಯಲ್ಲಿ ಪ್ರಕಟಗೊಳ್ಳುತ್ತದೆ.
ಇವೆಲ್ಲಾ ಬಹಳಷ್ಟು ಜನರಿಗೆ ಇರುವ ಗುಣಗಳೇ. "ಅಯ್ಯೋ, ಅವರು ಹಾಗೇ ಸ್ವಲ್ಪ..." ಅಂತ ಹೇಳಿ ಬಿಟ್ಟುಬಿಡುತ್ತೇವೆ. ಆದರೆ, ಮನುಷ್ಯನ ಪ್ರತಿ "ಬಿಹೇವಿಯರ್" ಹಿಂದೆ ಚಿಕ್ಕಂದಿನಲ್ಲಿ ನಡೆದ ಘಟನೆಯ ಪ್ರಭಾವ ಅಡಗಿರುತ್ತದೆ ಎಂದು ನನಗನ್ನಿಸಲು ಶುರುವಾಗಿದೆ. ಇವೆಲ್ಲಾ ಈಗೇಕೆ? ಹೂಂ, ತಂದೆಯ ದಿನ ನಿನ್ನೆ ಇತ್ತಲ್ಲ? ಆಗಲೇ ಈ ವಿಚಾರಧಾರೆ ಶುರುವಾದದ್ದು. ಬಹುಶ: ನನ್ನ ೬ ವರ್ಷದ ಮಗನ ಮುಗ್ಧ ಕಂಗಳಲ್ಲಿ ಯಾವುದೇ ರೀತಿಯ "ಇನ್ಸ್ಟೆಬಿಲಿಟಿ" ನಾನು ನೋಡಲು ಬಯಸುವುದಿಲ್ಲವಾದ್ದರಿಂದ.