ಬಾಳ ಜೋಡಿ
ಬರಹ
ಬಾಳ ಜೋಡಿ
ಬಾಳ ಮುಂಜಾನೆಯು ಚೆನ್ನಾಯ್ತು-ನಲಿದಾಯ್ತು
ನೆತ್ತಿಯ ಮೇಲಿನ ರವಿಯ ಹೊತ್ತಾಯ್ತು
ನೀನೀಗ ಬಂದಿರುವೆ ನನ್ನ ಜೀವನದಲಿ
ನನ್ನೊಡನೆ ಬರಲೊಪ್ಪಿರುವೆ ಬಾಳಹಾದಿಯಲಿ
ದಾರಿಯಲಿ ಇಹುದು ಕಡಿದಾದ ಬೆಟ್ಟ
ನೀನಿರಲು ಹತ್ತುವುದು ಬಲು ಸುಲಭ! ಪುಟ್ಟ!
ನಾವ್ದಾಟಬಹುದು ನದಿಯು-ನದಿಯ ಸುಳಿಯು
ನೀನಿರಲು ಜೊತೆಯಲ್ಲಿ ಇರುವುದೇ ಸುಳಿಯ ಸುಳಿವು?
ಕ್ರಮಿಸಬಹುದೂ ಮುಂದೆ ಬಿಸಿ ಮರಳಗಾಡು
ನೀನಿರಲು ನನ್ನೊಡನೆ ಅದು ಕೋಗಿಲೆ ಹಾಡು
ಭೇದಿಸಬೇಕಾಗಬಹುದು ಕಾಡು-ಕೋಟೆ ದುರ್ಗಮ
ನಿನ್ನ ಕೈ ಹಿಡಿದಿರಲು, ನೀರ ಕುಡಿದಷ್ಟೇ ಸುಗಮ
ದಾರಿ ಬಹು ದೂರವಿದೆ ಬುತ್ತಿಯಾ ಕಟ್ಟು
ಬುತ್ತಿ ಎಂದೂ ಬತ್ತದು ನೀನಿರಲು ಒಟ್ಟು
ನಾನು ದಣಿಯಲು ಒರಸು ಸೆರಗಲಿ ನೀನು
ನೀನು ಬಳಲಲು ಕೊಡುವೆ ಹೆಗಲನ್ನು ನಾನು
ಬಾ ಇನ್ನು ಹೊರಡೋಣ ಓ ನನ್ನ ರನ್ನ
ಮುಳ್ಳಹಾದಿಯೂ ಹೂವಾಗುವುದು, ಚಿನ್ನ
ದೇವನಲಿ ನಾವು ಕೇಳೋಣ ಇಂದು,
ಬಾಳ ಮುಸ್ಸಂಜೆಯು ಬರದಿರಲಿ ಎಂದು
(೮-ನವಂಬರ್-೨೦೦೬)
ಸಂಪದ ಇನ್ನು ಮುಂದೆ ಕನಿಷ್ಟ ೭೫ ಪದಗಳಿರುವ ಕವಿತೆ ಬರೆಯ ಬೇಕೆಂದು ಆಜ್ನಾಪಿಸಿದೆ :)