ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?

ವಲಸೆಗಾರರು ಯಾರನ್ನು ಮೆಚ್ಚಿಸಲು ಬರೆಯಬೇಕು?

ಸುಮಾರು ವರ್ಷಗಳಿಂದ ನಾನಿರುವ ಅಮೇರಿಕದಲ್ಲಿ ಎನ್.ಅರ್.ಐ. ಲೇಖಕರು ಸೃಷ್ಟಿಸುತ್ತಿರುವ ಕನ್ನಡ ಲೇಖನಗಳನ್ನು ಓದುತ್ತಾ ಬಂದಿದ್ದೇನೆ. ಈ ನಡುವೆ ಕಥಾಸಂಕಲನಗಳು, ಮುಂತಾದವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುವುದು, ಅದಕ್ಕೆ ಭಾರತದಿಂದ ಬಂದ ಕವಿಗಳು/ಕಥೆಗಾರರು ಮುನ್ನುಡಿ ಬರೆದು, ಪುಸ್ತಕ ಬಿಡುಗಡೆ ಮಾಡಿ, ಶುಭಹಾರೈಸಿ ಹೋಗುವುದು ನಡೆಯುತ್ತಲೇ ಇದೆ. ಇವೆಲ್ಲ ಈ ಲೇಖಕರು ತಾವೇ ಸ್ವಂತ ಖರ್ಚು ಹಾಕಿ ಪ್ರಕಟಿಸಿರುವ ಪುಸ್ತಕಗಳು. ಹಾಗಿದ್ದ ಮೇಲೆ, ಇದರ ಗುಣಮಟ್ಟ ಎಂತಹದ್ದಿರಬಹುದು ಎಂಬ ಪ್ರಶ್ನೆ ಏಳುವುದು ಸಹಜವೆ. ನನಗನ್ನಿಸುವ ಹಾಗೆ ಇವೆಲ್ಲ ಸುಮಾರು ಒಳ್ಳೆಯ "ಟೈಮ್ ಪಾಸ್" ತರಹದ ಮುದ ನೀಡುವ ಕೃತಿಗಳು. ಆದರೆ, ಯಾವುದೇ "ಆವರಣ" ದಂತಹ ಗಂಭೀರ ಚರ್ಚೆಗೆ ಗುರಿಪಡಿಸುವಂತಹ ಮೇರುಕೃತಿಯಲ್ಲ. ಹೀಗೆ ಬರೆದ ಮರುಕ್ಷಣ ಅನ್ನಿಸಿದ್ದು, ನಾನೇಕೆ ಆವರಣದ ಜೊತೆ ಎನ್.ಅರ್.ಐ. ಕೃತಿಗಳನ್ನು ತಾಳೆ ಹಾಕುತ್ತಿದ್ದೇನೆ? ಇವಕ್ಕೆ ಇವರದ್ದೇ ಒಂದು ಸ್ವಂತ ಸ್ಥಾನವಿಲ್ಲವೇ?

ಹೌದು, ಇವರಿಗೆ ಒಂದು ಸ್ಥಾನವಿದೆ. ಅದೇನೆಂದರೆ, ಒಂದು ಪುಟ್ಟ ಮಗು ಚೆನ್ನಾದ ಚಿತ್ರ ಬಿಡಿಸಿದಾಗ, ದೊಡ್ಡವರು- ಚೆನ್ನಾಗಿದೆ ಮರಿ, ಇನ್ನೂ ಬರೆ, ನಿನಗೆ ಒಳ್ಳೆಯ ಭವಿಷ್ಯವಿದೆ- ಎಂದು ಬೆನ್ನು ತಟ್ಟಿ ಮುಂದೆ ಹೋಗುವ ಸ್ಥಾನ. ಯಾರೂ ಕನ್ನಡ ಸಾಹಿತ್ಯದಲ್ಲಿ ಇವರದೂ ಒಂದು ಪಾತ್ರವಿದೆಯೆಂದು ಗುರುತಿಸದ ಸ್ಥಾನ. ಭಾರತದಲ್ಲಿ ನಡೆಯುವ ಕನ್ನಡ ಕೃಷಿ "ಮೇಯಿನ್ ಸ್ಟ್ರೀಮ್", ಇಲ್ಲಿ ನಡೆಯುವುದು ಸಂತೃಪ್ತ ಮನಸ್ಸು ತಿಂದು ತೇಗಿ, ಬೀಗಿ ಬರೆಯುವ "ಹಾಬಿ" ಯ ಬರಹ. ಹೀಗಂತ ಬೆನ್ನ ಹಿಂದೆ ಹೇಳಿರುವ ಭಾರತದ ಲೇಖಕರು ಇದ್ದಾರೆ. ಹೌದಪ್ಪ ಹೌದು ಎಂದು ಅವರ ವಾಕ್ಯವೆಲ್ಲ ವೇದವೆನ್ನುವಂತೆ ಅಮೆರಿಕನ್ನಡಿಗರು ಸಹ ಅದಕ್ಕೆ ತಲೆಯಲ್ಲಾಡಿಸಿದ್ದಾರೆ. ಇದು ನಿಜವೇ? ಹಾಗಿದ್ದರೆ ನಾವೇಕೆ ಅವರನ್ನು ಮೆಚ್ಚಿಸಲು ಬರೆಯಬೇಕು? ನಾವೇಕೆ ಇವರ ಕಣ್ಣಲ್ಲಿ ಬೆಳಗಬೇಕೆಂದು ಒದ್ದಾಡಬೇಕು? ಗುಡಿಸಲಲ್ಲಿ ಮಲಗಿ, ಕೊಳಚೆಗೇರಿಯಲ್ಲಿ ಜೀವನ ಸವಿಸುವ ಪಾತ್ರಗಳು ಮಾತ್ರ ಪ್ರಶಸ್ತಿಗೆ ಲಾಯಕ್ಕೋ? ಹವಾನಿಯಂತ್ರಿತ ಕ್ಯೂಬಿಕಲ್ನಲ್ಲಿ ಕುಳಿತಿದ್ದು, ಕಾರಿನಲ್ಲಿ ಮನೆಗೆ ತೆರಳುವ ಪಾತ್ರಗಳ ಬದುಕಿನಲ್ಲಿ ಗೋಳೇ ಇಲ್ಲವೋ? ಹಾಗಿದ್ದಲ್ಲಿ ಇಲ್ಲಿನ ಮಾನಸಿಕ ಆಸ್ಪತ್ರೆಗಳಲ್ಲಿ ಕ್ಯೂ ಯಾಕಿರುತ್ತೆ?

ನಾನೇನು ಕನ್ನಡ ಪಂಡಿತೆಯಲ್ಲದಿದ್ದರೂ ನನಗನ್ನಿಸುವುದು, ಇಲ್ಲಿನ ಬರಹಗಾರರು ತಮ್ಮ ಭಾರತದ ಸಂಕೋಲೆ ಕಳಚಿ, ಸ್ವತಂತ್ರವಾಗಿ ತಮ್ಮ ಆತ್ಮವನ್ನು ಮಾತ್ರ ಮೆಚ್ಚಿಸಲು ಬರೆಯುವ ಸಮಯ ಬಂದಿದೆ. ಕಥಾವಸ್ತುಗಳಿಗೇನು ಇಲ್ಲಿ ಬರವಿಲ್ಲ. ಬರವಿರುವುದು ಅವನ್ನು ಮನಮುಟ್ಟುವಂತೆ ರೂಪಿಸುವ ಕಥೆಗಾರರದು. ಇಲ್ಲಿ ಸ್ವಲ್ಪ "ಫ಼ೀಲ್ ಗುಡ್" ಶೈಲಿಯಲ್ಲಿ ಬರೆಯುವ ಜನ ಜಾಸ್ತಿ. ಸ್ವಂತದ್ದು ಬರೆಯುವ ತೊಂದರೆ ತೆಗೆದುಕೊಳ್ಳದೆ, ಬರೀ ಇಂಗ್ಲಿಷ್ ಅನುವಾದಗಳನ್ನು ಮಾಡುವ ಸೋಮಾರಿಗಳು ಜಾಸ್ತಿ. ಕೆಲವರು ಒಂದೇ "ರಟ್" ನಲ್ಲಿ ಸುತ್ತುತ್ತಿರುತ್ತಾರೆ. ಇಲ್ಲವೇ ಭಾರತದ ತಮ್ಮ ಮೆಚ್ಚಿನ ಲೇಖಕರನ್ನು ಅನುಕರಿಸಲು ಹೊರಟಿರುತ್ತಾರೆ. ಇವರೆಲ್ಲಾ ಮುಂದೆ ಬಂದು ಸೃಜನಾತ್ಮಕ ಕೃತಿ ರಚನೆ ಮಾಡಿದಲ್ಲಿ ಅನಿವಾಸಿಗಳ ಕನ್ನಡ ಲೇಖನಗಳಲ್ಲಿ ಸತ್ವ ಕಂಡುಬರುವುದರಲ್ಲಿ ಸಂಶಯವೇ ಇಲ್ಲ. ನಾವೆಲ್ಲಾ ಭಾರತದಿಂದ ಆಮದು ಮಾಡಿಕೊಂಡು ನಮ್ಮ ಪುಸ್ತಕ ಭಂಡಾರವನ್ನು ಹೆಚ್ಚಿಸುವುದರ ಬದಲು, ನಮ್ಮ ಹಿತ್ತಲಲ್ಲೆ ಬೆಳೆದ ಶುದ್ಧ ತಳಿಯಿಂದ ಭಂಡಾರವನ್ನು ತುಂಬಬಹುದು.

Rating
No votes yet

Comments