*ಮರದೊಂದಿಗೆ. (ಪು. ೮೯.)

*ಮರದೊಂದಿಗೆ. (ಪು. ೮೯.)

ಬರಹ

ನದೀತೀರದಲ್ಲಿ [ಕವಿತಾ ಸಂಕಲನ]

ಲೇಖಕರು : ಡಾ. ಎಚ್. ಎಸ್. ವೆಂಕಟೇಶಮೂರ್ತಿ.

*ಮರದೊಂದಿಗೆ. (ಪು. ೮೯.)

ಯತ್ಕಿಂಚಿತ್ ಕಷ್ಟವಲ್ಲ ಮರದೊಂದಿಗೆ ಮಾತುಕತೆ !
ನಿಲ್ಲಬೇಕು ಅಷ್ಟೆ, ಅದರ ಮುಂದೆ ನೀವು ಮರದಂತೆ.

ತೋಳುಗಳೇ ಹರೆಗಳಾಗಿ ತೂಗಲಿ ಅವು ತಂಗಾಳಿಗೆ ;
ಕಾಲೆ ಕಾಂಡವಾಗಿ, ಬೆರಳು ಬೇರಾಗಲಿ ಅರೆಗಳಿಗೆ.

ಮುಖದ ತುಂಬ ನಗೆಯ ಹೂವು ಅರಳಲಿ ಬಲು ಮೆಲ್ಲಗೆ
ಬಾಯಿಮುಚ್ಚಿಕೊಂಡು ನಿಲ್ಲಿ ಹಕ್ಕಿ ಬರಲಿ ಅಲ್ಲಿಗೆ

ಈಗ ಕೇಳಿ ಮೈಯೆಲ್ಲಾ ಕಿವಿಯಮಾಡಿ ಪಿಸುನುಡಿ
ಎಲೆಗಳೇನೊ ಹೇಳುತ್ತಿವೆ ! ಕಣ್ಣಿನಲ್ಲಿ ಕಣ್ಣಿಡಿ.

ಮರ ಮಾನವನಾಗಬಹುದು, ಮಾನವ ಮರವಾದರೆ
ಹೆಗಲ ಮೇಲೆ ಪುಟ್ಟ ಹಕ್ಕಿ ಕೂತು ಹಾರಿಹೋದರೆ.

ಬಿಸಿಲಿನಲ್ಲಿ ಬಂದ ಮುದುಕ ನೆರಳಲಿ ಮೈಚೆಲ್ಲಲಿ
ಉಸುರುಬಿಡುತ ಪ್ರೀತಿಯಿಂದ ಬಿದ್ದ ಹಣ್ಣ ಮೆಲ್ಲಲಿ

ಆ ಮರದಿಂದೀಮರಕ್ಕೆ ಅಳಿಲು ಚಿಮ್ಮಿ ಹಾರಿತು
ಇರುವೆಯೊಂದು ಹರಿದು ಮರದ ಮೂಗಿನಲ್ಲಿ ತೂರಿತು

ಈಗ ಮರದ ಎಲೆ ಎಲೆಯೂ ಪಿಸುಗುಟ್ಟುವ ನಾಲಗೆ
ಮಾತಷ್ಟೂ ಮುಗಿಯದಿರಲಿ, ಉಳಿಸಿ ಸ್ವಲ್ಪ ನಾಳೆಗೆ !

ಮರದ ಮಾತಿಗರ್ಥವಿಲ್ಲ ; ಭಾಷೆ ಬರೀ ಸ್ಪಂದನ
ಮುಟ್ಟಿದಾಗ ಮಿಡಿತ ; ತಲೆಯ ತೂಗಿದಾಗ ವಂದನೆ

ಯತ್ಕಿಂಚಿತ್ ಕಷ್ಟವಲ್ಲ ಮರದೊಂದಿಗೆ ಮಾತು ಕತೆ !
ಷರತ್ತಿಷ್ಟೆ ; ನೀವು ನಿಲ್ಲಬೇಕು ಮುಂದೆ ಮರದಂತೆ !

ಈಗ ನೀವು ಮರವಾದಿರಿ ; ಎರವಾದಿರಿ ಗಾಳಿಗೆ !
ಕುಣಿದಾಡಿವೆ ನಾದ - ನಿಮ್ಮ ಮೈಯ ತುಂಬ ನಾಲಗೆ !

ತೆರೆದ ಛತ್ರಿಯಾದಿರೀಗ, ಕೆಳಗೆ ಬಿದ್ದ ನೆರಳಿಗೆ !
ಹೂವಿನ ಅವತರಣ - ಯಾರೊ ಬಿಚ್ಚಿಕೊಂಡ ಹೆರಳಿಗೆ !

ಬಾಗು ತೋಳಿನಿಂದ ತೂಗಿಕೊಳ್ಳುತ್ತಿರುವ ತೊಟ್ಟಿಲು !
ಬಾಯಾರಿದ ಷಟ್ಪದಕ್ಕೆ ರಸದ ಒರತೆ ಬಟ್ಟಲು !

ಜೀವದುಸಿರಿನುತ್ಪಾದನೆ, ಅಂತರಾಳ ಸಾಧನೆ !
ಬೋಧಿವೃಕ್ಷವಾಗದೆ ಸಿದ್ಧಾರ್ಥ ಬುದ್ಧನಾದನೆ ?

(*ಮೂರ್ತಿಯವರ ಅನುಮತಿಯಿಂದ )