ಸಂಕಲ್ಪ

ಸಂಕಲ್ಪ

ವಿಶ್ವ ಮೊಬೈಲಿಗೆ ಬಂದ ಮೆಸೇಜ್ ಅನ್ನು ತೆಗೆದು ನೋಡಿದ. ಭಟ್ಟ ಹೇಳುತ್ತಿರುವುದು ಅವನಿಗೆ ಸರಿ ಎನಿಸಿತು. ಕಳೆದ ಮೂರ್ನಾಲ್ಕು ತಿಂಗಳು ಇಬ್ಬರಿಗೂ ಯಾಕೋ ಚೆನ್ನಾಗಿರಲಿಲ್ಲ. 

ತನ್ನ ಇಪ್ಪತ್ತೊಂದು ವರ್ಷದ ಜೀವನದಲ್ಲಿ ಹೆಚ್ಚಿನ ಕಾಲ ಲವಲವಿಕೆ ಮತ್ತು ಉತ್ಸಾಹದಿಂದಲೇ ಮುನ್ನಡೆಯುತ್ತಿದ್ದ ವಿಶ್ವನಲ್ಲಿ  ಇತ್ತೀಚೆಗೆ, “ಮಾನವ ಜೀವನ ಅರ್ಥಹೀನವಾದಂತಹ ನಶ್ವರ ಪಯಣ”, ಎಂಬ ವೈರಾಗ್ಯದ ಚಿಂತನೆ ಬೆಳೆದುಕೊಂಡಿತ್ತು. ಬೇಸರದ ಸಂಗತಿ ಎಂದರೆ ಈ ನಿರಾಸಕ್ತಿಯ ಭಾವಕ್ಕೆ ವಿಶ್ವನಲ್ಲಿ ಯಾವ ಮಹಾನ್ ಕಾರಣವೂ ಇರಲಿಲ್ಲ. ಸಮೃದ್ಧ ಮನೆತನ, ಒಳ್ಳೆಯ ಕಾಲೇಜಿನಲ್ಲಿ ಸೀಟು, ಓದು ಮುಗಿಯುವ ಮುನ್ನವೇ ಅಂತಾರಾಷ್ಟ್ರೀಯ ಕಂಪನಿಯಲ್ಲಿ ಕೆಲಸದ ಕೊಡುಗೆ; ವಿಶ್ವನಿಗೆ ಯಾವುದರ ಕೊರತೆಯೂ ಇರಲಿಲ್ಲ. 

ಕಳೆದ ವಾರದ ಬಿಇ ಪದವಿಯ ಆರನೇ ಸೆಮಿಸ್ಟರ್ ಪರೀಕ್ಷೆಯನ್ನು ಬರೆದು ಮುಗಿಸಿದ ನಂತರವಂತೂ ವಿಶ್ವ ತನ್ನ ಅಣುರೂಪ ಲೋಕದಲ್ಲಿ ಇನ್ನೂ ಕಳೆದು ಹೋಗಿ, “ಈ ಬದುಕು ಮಾನವನ ಮನಸ್ಸು ಸೃಷ್ಟಿಸಿರುವ ವಂಚನೆಯ ಮಾಯೆ!”, ಎಂದು ಸಿಕ್ಕಿದವರಿಗೆಲ್ಲಾ ಬೋಧಿಸುತ್ತಿದ್ದನು. ಜೊತೆಗೆ, ಮೈಸೂರಿನ ಸುತ್ತಾ ಮುತ್ತಾ ಇರುವ ಜನರಹಿತ ಪ್ರಾಕೃತಿಕ ಪ್ರದೇಶಗಳನ್ನು ಹುಡುಕಿಕೊಂಡು ಹೋಗಿ, ಅಲ್ಲಿನ ನವಿರಾದ ಸೌಂದರ್ಯವನ್ನು ಅನುಭವಿಸುತ್ತಾ ಗಂಟೆಗಟ್ಟಲೆ ಕಳೆಯುತ್ತಿದ್ದನು. 

ವಿಶ್ವನ ಸ್ಥಿತಿ ಒಂದು ರೀತಿಯಾದರೆ, ಅವನ ಏಕೈಕ ಸನ್ಮಿತ್ರ ಭಟ್ಟನ ಸಮಸ್ಯೆಯೇ ಬೇರೆ. ಭಟ್ಟನಿಗೆ ಗಣಿತ ಮತ್ತು ಭೌತಶಾಸ್ತ್ರಗಳಲ್ಲಿ ಚಿಕ್ಕ ವಯಸ್ಸಿನಿಂದಲೂ ಆಸಕ್ತಿ. ಏನೊ, ಬಾಹ್ಯ ಶಕ್ತಿಗಳ ಒತ್ತಡದಿಂದಾಗಿ ಇಂಜಿನಿಯರಿಂಗ್ ಕಾಲೇಜನ್ನು ಸೇರಿಬಿಟ್ಟಿದ್ದ. ಆದರೆ, ಸೇರಿದ ನಂತರ ಪಡಬಾರದ ಕಷ್ಟವನ್ನು ಪಡುತ್ತಿದ್ದ. ಬುದ್ಧಿವಂತನಾದರೂ, ಪ್ರತಿ ಸೆಮಿಸ್ಟರ್ ಪರೀಕ್ಷೆಯಲ್ಲೂ ತಪ್ಪದೆ ನಲವತ್ತರಿಂದ-ಐವತ್ತು ಮಾರ್ಕ್ಸ್ ತೆಗೆದುಕೊಂಡು ಹಾಗೂ ಹೀಗೂ ಪಾಸ್ ಆಗುತ್ತಿದ್ದನು. ಪರೀಕ್ಷೆಯ ಹಿಂದಿನ ದಿವಸ ವಿಜ್ಞಾನದ ಪತ್ರಿಕೆಗಳನ್ನು ಓದಿಕೊಂಡು, “ಅಮೇಜಿಂಗ್ ಅಮೇಜಿಂಗ್”, ಎಂದು ಉದ್ಗರಿಸುತ್ತಿದ್ದ ಭಟ್ಟ, ಮಾರನೇ ದಿನ ಎಗ್ಸಾಮ್  ಹಾಲಿನಲ್ಲಿ, “ಛೆ ಛೆ”, ಎಂದು ಬೈದುಕೊಳ್ಳುತ್ತಿದ್ದ. ಅವನ ಮಾರ್ಕ್ಸ್ ಕಾರ್ಡನ್ನು ನೋಡಿ ಹಲವು ಕಂಪನಿಗಳು ಕೆಲಸ ಕೊಡುವುದಿರಲಿ, ಸಂದರ್ಶನಕ್ಕೇ ಕರೆಯುತ್ತಿರಲಿಲ್ಲ. ಆದರೂ ವಿಶ್ವಾಸ ಕಳೆದುಕೊಳ್ಳದ ಭಟ್ಟ, “ನಾನು ಕ್ವಾಂಟಮ್ ಫಿಸಿಕ್ಸ್ ಅಲ್ಲಿ ಪಿಎಚ್‌ಡಿ ಮಾಡ್ತೀನಿ ಮುಂದೆ”, ಎಂದು ಹೇಳಿಕೊಂಡು ಕಾಲೇಜಿನಲ್ಲಿ ಓಡಾಡುತ್ತಿರುವಾಗ ಅವನ ಬೆನ್ನ ಹಿಂದೆ ನಗದಿದ್ದವನು ವಿಶ್ವನೊಬ್ಬನೆ. 

“ಟ್ರಿಣ್!”, ವಿಶ್ವನ ಚಿಂತನೆಯ ಹರಿವನ್ನು ಮೊಬೈಲಿನ ಸದ್ದು ಅಡ್ಡಿಪಡಿಸಿತು. ತಾನು ಓದುತ್ತಿದ್ದ ಜಿದ್ದು ಕೃಷ್ಣಮೂರ್ತಿ ಅವರ ಪುಸ್ತಕವನ್ನು ಕೆಳಗಿಟ್ಟು ಭಟ್ಟನಿಂದ ಬಂದ ಎರಡನೇ ಮೆಸೇಜನ್ನು ಓದಿದ. ಒಮ್ಮೆ ಏನನ್ನೋ ಯೋಚಿಸಿ, ಹಿಡಿದ ಪುಸ್ತಕವನ್ನು ಎತ್ತಿಟ್ಟ. ಬಟ್ಟೆ ಬದಲಾಯಿಸಿ ಮುಖ ತೊಳೆದುಕೊಂಡು ತಯಾರಾದ ಬಳಿಕ, ಕಾರಿನ ಕೀಯನ್ನು ತೆಗೆದುಕೊಂಡು, ಮನೆಯ ಹೊರಗೆ ನಡೆದ.

 

*****

 

ವಿಶ್ವ ಛತ್ರವನ್ನು ಪ್ರವೇಶಿಸಿ ಅಲ್ಲಿದ್ದ ಜನಸಮೂಹವನ್ನು ಒಮ್ಮೆ ಪರಿಶೀಲಿಸಿದ. ಭಟ್ಟ ಕೊನೆಯ ಸಾಲಿನ ಒಂದು ಚೇರಿನಲ್ಲಿ ಕುಳಿತಿದ್ದನು. ವಿಶ್ವ ಅವನ ಪಕ್ಕದ ಚೇರಿನಲ್ಲಿ ಕುಳಿತುಕೊಂಡು, “ಬೇಗ್ ಬಂದಿದ್ಯಾ?”, ಎಂದು ವಿಚಾರಿಸಿದ. ಭಟ್ಟ ಮುಂದೆಯೇ ನೋಡಿಕೊಂಡು, “ಕ್ಯೂ ಜಾಸ್ತಿಯಾಗಕ್ಕೆ ಮುಂಚೇನೆ ಜೋಡಿಗೆ ಅಭಿನಂದನೆಗಳನ್ನು ಸಲ್ಲಿಸುವುದು ಉತ್ತಮ ಅನಸ್ತು”, ಎಂದು ಗಂಭೀರ ದನಿಯಲ್ಲಿ ಉತ್ತರಿಸಿದ. ವಿಶ್ವ ಎರಡು ಕ್ಷಣ ಮೌನವಾಗಿದ್ದು, “ಇನ್ನೂ ಎಗ್ಸಾಮ್ ಬಗ್ಗೇನೆ ಯೋಚ್ನೆ ಮಾಡ್ತಾಯ್ದ್ಯೇನೋ?”, ಎಂದು ಕಳೆದ ವಾರ ಮುಗಿದ ಆರನೇ ಸೆಮಿಸ್ಟರ್ ಪರೀಕ್ಷೆಯ ಬಗ್ಗೆ ಕೇಳಿದ. ಭಟ್ಟನ ಮುಖದಲ್ಲಿ ಕಾರ್ಮೋಡ ಕವಿಯಿತು - “ಆ ಪ್ರಾರಬ್ಧ ಮಂಜನ ಸಬ್ಜೆಕ್ಟ್ ಬಿಟ್ರೆ ಬಾಕಿದೆಲ್ಲಾ ಸುಮಾರಾಗಿ ಮಾಡಿದೀನಿ. ಛೆ! ಅವ್ನು ಯಾವಾಗ, “Aye Aradhya Bhat! What are you laughing there in last bench? Let us see how you will laugh after my exam, he he he….”, ಎಂದು ಹೆಂಗಸಿನ ಧ್ವನಿಯಲ್ಲಿ ಯಾವಾಗ ನನ್ನನ್ನು ಹಂಗಿಸಿದನೋ, ಆವಾಗ್ಲೇ ನಾನು ಅವನ ಸಬ್ಜೆಕ್ಟ್ ಮೇಲೆ ಭರವಸೆ ಕಳ್ಕೊಂಡೆ”. 
ಎರಡು ನಿಮಿಷದ ಮೌನದ ನಂತರ ಭಟ್ಟ ಮಾತನ್ನು ಮುಂದುವರೆಸಿದ, “ನಂದಿರ್ಲಿ. ನೀನ್ ಏನ್ ಮಾಡ್ದಿ ರಜದ ಮೊದಲ್ನೇ ವಾರ? ಎಲ್ಲಿಗಾದ್ರೂ ಹೋಗಿದ್ಯಾ?”. ವಿಶ್ವ ದೂರದಲ್ಲಿ ಛತ್ರದ ಗೋಡೆಯ ಮೇಲಿದ್ದ ವ್ಯಾಸ ಮಹರ್ಷಿಗಳ ಒಂದು ಅಪರೂಪದ ಚಿತ್ರವನ್ನು ನಿರುದ್ವಿಗ್ನವಾಗಿ ನೋಡಿ ನಂತರ ನುಡಿದ, “ಇಲ್ಲಾ. ಎಲ್ಲೂ ಹೋಗ್ಬೇಕು ಅನಸ್ತಾಯ್ಲ. ಈ ವಾರ ಮನೆ ಬಿಟ್ಟು ಹೊರಗೆ ಬಂದಿರೋದು ಇವತ್ತೇ”. ಭಟ್ಟ ತಲೆ ಆಡಿಸಿ ಚೇರಿನಲ್ಲಿ ಹಿಂದೆ ವರಗಿಕೊಂಡ. ವಿಶ್ವ ಛತ್ರದ ವಾತಾವರಣವನ್ನು ಒಮ್ಮೆ ಗಮನಿಸಿದ. 

ಮೈಸೂರಿನ ರಾಘವೇಂದ್ರ ಕೃಪಾ ಕಲ್ಯಾಣ ಮಂಟಪ ಈ ಬೇಸಿಗೆಯ ರಾತ್ರಿ ಜನರಿಂದ ಕಿಕ್ಕಿರಿದಿತ್ತು. ಅಲ್ಲಿನ ದೃಶ್ಯದಲ್ಲಿ ಅಂತದ್ದೇನೂ ಪ್ರತ್ಯೇಕತೆ ಇರಲಿಲ್ಲ. ಒಂದು ಸಾಮಾನ್ಯ ರಿಸೆಪ್ಶನ್ ಯಿನ ದೃಶ್ಯ. ವೇದಿಕೆಯ ಮೇಲೆ ದೀಪಕ್, ಶ್ರುತಿ ಮತ್ತು ಅವರ ತಂದೆ-ತಾಯಿಯರು ಬಂದ ಅತಿಥಿಗಳನ್ನು ಕೈಕುಲುಕುತ್ತಾ ಸ್ವಾಗತಿಸಿ, ಫೋಟೋ ತೆಗೆಸಿ ಕಳುಹಿಸುತ್ತಿದ್ದಾರೆ. ಒಡವೆ ಮತ್ತು ರೇಷ್ಮೆ ಸೀರೆಗಳನ್ನು ಧರಿಸಿರುವ ಆಂಟಿಯರು ಮುಂದಿನ ಸಾಲಿನಲ್ಲಿ ಕುಳಿತು, ಕಿಲಿಕಿಲಿ ನಗುತ್ತಾ ಆಗಾಗ ಹುಡುಗಿಯ ಕಡೆ ನೋಡುತ್ತಿದ್ದಾರೆ. ಪರಿಚಯಾತ್ಮಕ ಮಾತುಗಳೆಲ್ಲಾ ಮುಗಿದ ಕಾರಣ, ಅಂಕಲ್‌ಗಳು ಶಂಭೋ ಎಂದು ಕೈಕಟ್ಟಿಕೊಂಡು ಬಾಹ್ಯಾಕಾಶವನ್ನು ನೋಡುತ್ತಿರುವಂತೆ ಕುಳಿತ್ತಿದ್ದಾರೆ. ಕೆಲವು ಯುವತಿಯರು ಅತಿ ತೀವ್ರವಾದ ಮಹತ್ವದ ಕೆಲಸವಿರುವಂತೆ ಜವಾಬ್ದಾರಿಯುತವಾಗಿ ಕಾಣುತ್ತಾ ಅಲ್ಲಿ ಇಲ್ಲಿ ಪುಟುಪುಟು ಓಡಾಡುತ್ತಿದ್ದಾರೆ. ತಮ್ಮದೇ ಒಂದು ಗುಂಪನ್ನು ಸೃಷ್ಟಿಸಿಕೊಂಡ ಯುವಕರು, ಸೈಡಿನಲ್ಲಿ ಒಂದಿಷ್ಟು ಚೇರುಗಳನ್ನು ಭೂಗತಲೋಕದ ದಾದಾಗಳಂತೆ ಆಕ್ರಮಿಸಿಕೊಂಡು, ಜೋರಾಗಿ ಹರಟುತ್ತಾ ಆಗಾಗ ಸುತ್ತಾ ಮುತ್ತಾ ಸಂಶಯಾಸ್ಪದವಾಗಿ ನೋಡುತ್ತಿದ್ದಾರೆ. ಭಟ್ಟ ಇದ್ದಕ್ಕಿದ್ದಂತೆ ವಿಶ್ವನಿಗೆ ಒಂದು ದಿಕ್ಕಿನಲ್ಲಿ ನೋಡಲು ಸೂಚಿಸಿದ. ವಧು-ವರರನ್ನು ಭೇಟಿಯಾಗಲು ಇದ್ದ ಸರತಿ ಗಾಬರಿಗೊಳಿಸುವ ರೀತಿಯಲ್ಲಿ ಬೆಳೆಯುತ್ತಿತ್ತು. ವಿಶ್ವ, ಭಟ್ಟ ಇಬ್ಬರೂ ಎದ್ದು ನಿಂತು ಸರತಿಯ ಕಡೆ ನಡೆದರು.

 

*****

 

 “ಸ್ವಲ್ಪ ಮುಂದೆ ಬನ್ನಿ ಸಾರ್”, ಫೋಟೋಗ್ರಾಫರ್ ಸಣ್ಣ ಗಾತ್ರದ ಭಟ್ಟನಿಗೆ ಹೇಳಿದ. ಭಟ್ಟ ಮುಂದೆ ನಡೆದು ದೀಪಕ್ ತಂದೆಯವರ ಭುಜದ ಮೇಲೆ ಸಲೀಸಾಗಿ ಕೈ ಹಾಕಿ ನಿಂತುಕೊಂಡ. ಅಂಕಲ್ ಸ್ವಲ್ಪ ಮುಜುಗರದಿಂದ ಭಟ್ಟನ ಕಡೆ ನೋಡುತ್ತಾ ಸೂಟನ್ನು ಸರಿ ಮಾಡಿಕೊಂಡು ಮುಂದೆ ನೋಡಿದರು. ಕ್ಯಾಮೆರಾ ದೀಪ ಉರಿದು ತಣ್ಣಗಾದ ನಂತರ ವಿಶ್ವ ದೀಪಕ್ ಗೆ, “ಮತ್ತೊಮ್ಮೆ! ಕಂಗ್ರಾಟ್ಸ್ ನಿಮಗೆ”, ಎಂದು ಹೇಳಿ ಕೈಕುಲುಕಿದ. ದೀಪಕ್, “ಥ್ಯಾಂಕ್ಸ್, ಥ್ಯಾಂಕ್ಸ್”, ಎಂದು ನಗುತ್ತಾ ಸ್ಪಂದಿಸಿದನು. ಭಟ್ಟ ಕೈ ಜೋಡಿಸಿ ಸ್ವಾತಿಗೆ ನಮಸ್ಕರಿಸಿದ. ಅವಳು ನಗುತ್ತಲೇ ಇದ್ದಳು. ವಧು-ವರರನ್ನು ಭೇಟಿಯಾಗಲು ಮುಂದಿನ ಗುಂಪು ಆಗಲೇ ವೇದಿಕೆಯ ಮೇಲೆ ಬಂದು ಕಾಯುತ್ತಿತ್ತು. ವಿಶ್ವ ವೇದಿಕೆಯ ಮೆಟ್ಟಲನ್ನು ಇಳಿಯಲಾರಂಭಿಸಿದ. ಭಟ್ಟ ಅವನನ್ನು ಬೇಗಬೇಗನೆ ಹಿಂಬಾಲಿಸಿದ. ಭಟ್ಟನ ವೇಗ ಕೊಂಚು ಹೆಚ್ಚಾಯಿತು. ಅವನು ಎಡವಿ ಕೊನೆಯ ಮೆಟ್ಟಿಲನ್ನು ಇಳಿಯುತ್ತಿದ್ದ ವಿಶ್ವನ ಮೇಲೆ ದಬಕ್ ಎಂದು ಬಿದ್ದನು. ಬೆನ್ನಿನ ಮೇಲೆ ಬಿದ್ದ ಬಲದಿಂದ ವಿಶ್ವನೂ ಸಮತೋಲನ ಕಳೆದುಕೊಂಡು ಮುಂದೆ ಎಡವಿ, ಮೆಟ್ಟಲ ಕೆಳಗೆ ನಿಂತಿದ್ದ ಹುಡುಗಿಯ ಮೇಲೆ ವರಗಿದ. ಹುಡುಗಿ ಹಿಡಿದಿದ್ದ ತುಂಬಿದ ಪಾನಕ ಲೋಟಗಳ ತಟ್ಟೆ ಎರಡು ಅಡಿ ಮೇಲೆ ಹಾರಿ ಕೆಳಗೆ ಬಿದ್ದಿತು. ಆದರೂ, ನೆಲದ ಮೇಲೆ ಒಂದು ಹನಿ ಪಾನಕವೂ ಬೀಳಲಿಲ್ಲ. ಪಾನಕದ ಅಭಿಷೇಕ ಮಾಡಿಸಿಕೊಂಡ ವಿಶ್ವ ಮತ್ತು ಭಟ್ಟ ತೋಯ್ದು ತೊಪ್ಪೆಯಾಗಿ ಮೆಟ್ಟಲಿನ ಮೇಲೆಯೇ ಸ್ಥಗಿತವಾಗಿ ನಿಂತು ಬಿಟ್ಟರು. ಕಲ್ಯಾಣ ಮಂಟಪದ ಪೂರ ಕೆಲವು ಕ್ಷಣಗಳ ಅಚ್ಚರಿಯ ಮೌನ.  

ಮೊದಲು ಸೈಡಿನಲ್ಲಿ ಗುಂಪು ಮಾಡಿಕೊಂಡು ಕುಳಿತ್ತಿದ್ದ ಯುವಕರೆಲ್ಲಾ ಝಳ್ ಎಂದು ನಕ್ಕರು. ನಂತರ ವೇದಿಕೆಯ ಹತ್ತಿರ ನಿಂತವರೆಲ್ಲಾ “ಓ”, ಎಂದು ಆಲಾಪನೆ ಹೊರಡಿಸುತ್ತಾ ನಗಲಾರಂಭಿಸಿದರು. ಫೋಟೋಗ್ರಾಫರ್ ಯಾರಿಗೂ ತಿಳಿಯುವುದಿಲ್ಲ ಎಂದು ಭಾವಿಸಿ ಪಾನಕಾಧೀಶರ ಫೋಟೋವನ್ನು ಪಿಚಿಕ್ ಅಂತ ತೆಗೆದಿಯೇ ಬಿಟ್ಟ. ಕ್ಯಾಮೆರಾ ಬೆಳಕು ವಿಶ್ವ-ಭಟ್ಟರ ಮೇಲೆ ಬಿದ್ದದ್ದು ಇನ್ನೂ ಹೆಚ್ಚು ಜನರ ಗಮನವನ್ನು ಸೆಳೆಯಿತು. ಭಟ್ಟ, ಗಾಂಧೀಜಿ ದಂಡಿ ಯಾತ್ರೆಗೆ ಹೊರಡುತ್ತಿರುವ ಪೋಸಿನಂತೆ, ಒಂದು ಕಾಲನ್ನು ಮುಂದೆ ಇಟ್ಟು, ನಾಚಿಕೆಯಿಂದ ಹಾಗೇ ನಿಂತು ಬಿಟ್ಟಿದ್ದ. ವಿಶ್ವ ಎಸ್ಕೇಪ್ ಆಗುವ ದಾರಿಗಳನ್ನು ಹುಡುಕುತ್ತಾ ಗಾಬರಿಯಿಂದ ಅಲ್ಲಿ ಇಲ್ಲಿ ನೋಡಿದ. ನೋಡುತ್ತಿರುವಾಗ ಮುಂದೆಯೇ ನಿಂತಿದ್ದ ಪಾನಕದ ತಟ್ಟೆ ಬೀಳಿಸಿದ ಹುಡುಗಿ ಅವನ ಗಮನಕ್ಕೆ ಬಂದಳು. ಅವಳು ಪಟಪಟನೆ ಅವನಿಗೆ ಏನನ್ನೋ ಹೇಳುತ್ತಿದ್ದಳು. ವಿಶ್ವನಿಗೆ ಮೂಕಿ ಚಿತ್ರವೊಂದನ್ನು ನೋಡುತ್ತಿರುವಂತೆ, ಆಡಿಯೋ ನಿಂತುಹೋಯಿತು. ಅವನು ಅವಳ ಮುಖವನ್ನೇ ನೋಡಿದನು. ಅದೆಂತಹ ಸೌಮ್ಯ ಮುಖಭಾವ, ಎಂತಹ ಭಾವಪೂರ್ಣ ಕಣ್ಣುಗಳು! ಹಸಿರು ಸೀರೆಯುಟ್ಟಿದ್ದ ಆ ಹುಡುಗಿ ವಿಶ್ವನಿಗೆ ದೇವತೆಯಾಗಿ ರೂಪಾಂತರವಾದಳು. ಭಟ್ಟ ಗಾಂಧಿ ಪೋಸಿನಿಂದ ಈಚೆಗೆ ಬಂದು ವಿಶ್ವನಿಗೆ, “ಲೋ ಗುರು! ಯಾಕ್ ಕೈ ಮುಗಿತಾಯ್ದ್ಯಾ?”, ಎಂದು ಕೇಳಿದ ನಂತರ, ವಿಶ್ವ ಧರೆಗೆ ಇಳಿದು ಹುಡುಗಿಯ ಮಾತನ್ನು ಕೇಳಲು ಪ್ರಯತ್ನಿಸಿದ - “ಸಾರಿ ನಂದೇ ತಪ್ಪು, ..... ಆನಂದಮಯಗೆ ಚಿನ್ಮಯಗೆ, ಶ್ರೀಮನ್ನಾರಾಯಣಗೆ, ಆರತಿ ಎತ್ತಿರೆ, ..... ನೋಡ್ಲಿಲ್ಲ ನೀವು ಬರ್ತಾಯ್ರೋದು, ..... ಶೋಭಾನವೆನ್ನೀರೆ ಸುರರೊಳು ಸುಭ-ಗನಿಗೆ, ...... ಇಲ್ಲೇ ಇದೆ ಬನ್ನಿ”, ವಿಶ್ವನಿಗೆ ಅವಳ ದನಿಯ ಜೊತೆ ದೇವರನಾಮ ರಿಮಿಕ್ಸ್ ಆಗಲು ಶುರುವಾಯಿತು. ಚ್ ಚ್! ಎಲ್ಲೋ ದೂರದಲ್ಲಿ, ಇಲಿ ಬಿಸ್ಕೆಟ್ ಪ್ಯಾಕೆಟ್ ಮೇಲೆ ಓಡಾಡುವಾಗ ಬರುವ ಸದ್ದು ಕೇಳಿಬಂತು. ಚ್ ಚ್! ವಿಶ್ವ ಕೊನೆಯ ಮೆಟ್ಟಿಲನ್ನು ಇಳಿದು, ಚೇರುಗಳ ಮೊದಲ ಸಾಲಿನ ಬಳಿ ನಿಂತನು. ಚ್ ಚ್! “ಏನಿದು ಮೂಷಕ ಸದ್ದು?”, ವಿಶ್ವ ಯೋಚಿಸುತ್ತಾ ಸುತ್ತಾ ಮುತ್ತಾ ಕಣ್ಣು ಹಾಯಿಸಿ, ಕೊನೆಗೆ ದಾದಾಗಿರಿ ಯುವಕರ ಸಂಘದ ತಾತ್ಕಾಲಿಕ ಕಚೇರಿಯ ಕಡೆ ನೋಡಿದ. ಅಲ್ಲಿ ಒಟ್ಟಿಗೆ ಕುಳಿತ್ತಿದ್ದ ಇಪ್ಪತ್ತು-ಇಪ್ಪತ್ತೈದು ವಯಸ್ಸಿನ ಹುಡುಗರು ವಿಶ್ವನನ್ನು ಗುರಾಯಿಸುತ್ತಿದ್ದರು. ಅವರ ನಾಯಕನಂತೆ ಇದ್ದ, ಟೈಗರ್ ಪ್ರಭಾಕರ್ ಅವರನ್ನು ಹೋಲುವ, ಗಡ್ಡ ಪೀಡಿತನಾದ ಒಬ್ಬ ಹುಡುಗ, “ಆ! ಏನ್ನಮ್ಮಾ?”, ಎಂದು ಪ್ರಶ್ನಿಸುವಂತೆ, ಚೇರಿನಲ್ಲಿ ಹಿಂದೆ ವರಗಿಕೊಂಡು, ವಿಶ್ವನ ಕಡೆ ಬಿರುನೋಟವನ್ನು ಬೀರುತ್ತಿದ್ದ. ವಿಶ್ವ ಹುಡುಗರ ಗುಂಪಿನ ಕಡೆ ದುರುಗುಟ್ಟಿಕೊಂಡು ನೋಡಿದ. ಇವು ಯಾವುದನ್ನೂ ಗಮನಿಸದ ಹಸಿರು ಸೀರೆಯ ಹುಡುಗಿ ವಿಶ್ವನ ಬಳಿ ಬಂದು ಮೆದುವಾಗಿ, “ಸಾರಿ. ಕೈ ತಪ್ಪಿ ಪಾನಕದ ತಟ್ಟೆ ಜಾರಿ ಹೋಯ್ತು. ಬನ್ನಿ, ಬಚ್ಚಲ ಮನೆಯನ್ನು ತೋರಿಸ್ತೀನಿ”, ಎಂದು ಹೇಳುತ್ತಾ ಅದರ ದಿಕ್ಕಿನಲ್ಲಿ ನಡೆದಳು. ವಿಶ್ವ ಮತ್ತು ಭಟ್ಟ ಅವಳನ್ನು ಹಿಂಬಾಲಿಸಿದರು. ದಾರಿಯಲ್ಲಿ ಇಬ್ಬರೂ ಹುಡುಗರ ಗುಂಪಿನ ಕಡೆ ಮುಗುಳ್ನಗುತ್ತಾ ನೋಡಿದರು. ಟೈಗರ್ ಪ್ರಭಾಕರ್ ಹರಳೆಣ್ಣೆ ಕುಡಿದ ಮುಖ ಮಾಡಿಕೊಂಡು ವಿಶ್ವನನ್ನು ನೋಡುತ್ತಿದ್ದನು. 

ಹುಡುಗಿ ಬಚ್ಚಲ ಮನೆಯ ಬಳಿ ವಿಶ್ವ-ಭಟ್ಟರನ್ನು ಕರೆದುಕೊಂಡು ಹೋಗಿ, “ಮತ್ತೊಮ್ಮೆ, ಸಾರೀ ಆಯ್ತಾ...”, ಎಂದು ಹೇಳಿ ವಾಪಸ್ಸು ವೇದಿಕೆಯ ಕಡೆ ನಡೆಯಲಾರಂಭಿಸಿದಳು. ವಿಶ್ವ ಅವಳನ್ನು ಕರೆಯಲು ಪ್ರಯತ್ನಿಸಿದ. ಆದರೆ ಪದಗಳು ಹೊರಬರಲಿಲ್ಲ. “ಹಲೋ ಸರ್! ಮೊದಲು ಶುದ್ಧೀಕರಣ, ನಂತರ ಪ್ರೇಮಗೀತೆ”, ಎಂದು ಭಟ್ಟ ಚುಡಾಯಿಸುತ್ತಾ ಅವನನ್ನು ಬಚ್ಚಲ ಮನೆಯ ಒಳಗೆ ತಳ್ಳಿದ.

 

*****

 

ಬಟ್ಟೆಯನ್ನು ತೊಳೆದುಕೊಂಡು, ಮೈಮೇಲಿದ್ದ ಅಂಟನ್ನು ಆದಷ್ಟು ಹೋಗಲಾಡಿಸಿಕೊಂಡು, ವಿಶ್ವ ಭಟ್ಟ ಇಬ್ಬರೂ ಕೆಳಗಿನ ಮಹಡಿಯಲ್ಲಿದ್ದ ಊಟದ ಹಾಲಿಗೆ ಬಂದರು. ಬಂದು ಹಾಲಿನ ಸುತ್ತಾ ಒಮ್ಮೆ ನೋಡಿದರು. ತಾವು ಬಚ್ಚಲ ಮನೆಗೆ ಹೋಗಿ ಬರುವಷ್ಟರಲ್ಲಿ, ಎಲ್ಲಾ ಎಲೆಯ ಸಾಲುಗಳು ಆಗಲೇ ತುಂಬಿಹೋಗಿದ್ದವು. ಊಟದ ಮೊದಲ ಪಂಕ್ತಿಯ ಸ್ಪರ್ಧೆಯಲ್ಲಿ ವಿಶ್ವ-ಭಟ್ಟರು ಸೋತು ಹೋಗಿದ್ದರು. ಜಯಶಾಲಿಗಳನ್ನು ಇಬ್ಬರೂ ಮಿಕಮಿಕನೆ ನೋಡುತ್ತಾ ನಿಂತರು. ಸ್ವಲ್ಪ ದೂರದ ಒಂದು ಸಾಲಿನಲ್ಲಿ ಕುಳಿತ್ತಿದ್ದ ಆಂಟಿಯೊಬ್ಬರು ಪಕ್ಕದಲ್ಲಿದ್ದ ಎರಡು ಖಾಲಿ ಚೇರುಗಳನ್ನು ತೋರಿಸಿ ಭಟ್ಟನಿಗೆ ಏನನ್ನೋ ಹೇಳುತ್ತಿದ್ದರು. ಭಟ್ಟ, “ಎನಾನ್ಟಿ? ಸೀಟ್ ಖಾಲಿ ಇದ್ಯಾ?”, ಎಂದು ಕೇಳಿಕೊಂಡು ಅವರ ಹತ್ತಿರ ನಡೆದ. ಹತ್ತಿರ ಹೋದ ನಂತರ ಅವರ ಧ್ವನಿ ಕೇಳಿಸಿತು - “ಇಲ್ಲಿ ಇಬ್ಬರು ಬರ್ತಾರೆ, ಅಂದೆ”. ವಿಶ್ವ ಮತ್ತು ಭಟ್ಟ ಹಪ್ಪಳ ಹಾಕಿಸಿಕೊಳ್ಳುತ್ತಿದ್ದ ಆಂಟಿಯನ್ನೇ ಎರಡು ಕ್ಷಣ ನೋಡಿದರು. 

“ಮೇಲ್ಗಡೆ ಎಲೆ ಹಾಕ್ತಿದಾರೆ. ಅಲ್ಲಿ ಬನ್ನಿ” - ವಿಶ್ವನ ಹಿಂದೆ ಒಂದು ಕೋಮಲ ಧ್ವನಿ ಕೇಳಿಬಂತು. ಅವನಿಗೆ ದೇವಸ್ಥಾನದ ಘಂಟೆ ಸದ್ದು ಕೇಳಲಾರಂಭಿಸಿತು. ವಿಶ್ವ ನಿಧಾನವಾಗಿ ಹಿಂದೆ ತಿರುಗಿದ. ಹಸಿರು ಸೀರೆಯ ಹುಡುಗಿ ಅಗಲ ಕಣ್ಣನ್ನು ಪಿಳಿಪಿಳಿ ಮಿಟುಕಿಸುತ್ತಾ ತನ್ನನ್ನೇ ನೋಡುತ್ತಿದ್ದಳು. ಇಬ್ಬರ ನಡುವೆ ಅರ್ಧ ನಿಮಿಷದ ಮೌನ. ಭಟ್ಟ, ಹುಡುಗಿಯಿಂದ ವಿಶ್ವನ ಕಡೆ, ವಿಶ್ವನಿಂದ ಹುಡುಗಿಯ ಕಡೆ, ಮೂರ್ನಾಲ್ಕು ಸಾರಿ ನೋಡಿದ. ಇಬ್ಬರೂ ಹಂಪೆಯ ಸಂಗೀತ ಕಂಬಗಳಂತೆ  ತಟಸ್ತವಾಗಿ ನಿಂತಿದ್ದರೂ, ಎಲ್ಲಿಂದಲೋ ಪ್ರೇಮನಾದವನ್ನು ವಾತಾವರಣದಲ್ಲಿ ಪ್ರಸರಿಸುತ್ತಿದ್ದರು. ಕೊನೆಗೆ ಭಟ್ಟ, “ಮೇಡಂ, ನೀವು ಎಲೆ ಖಾಲಿ ಇರುವ ಜಾಗ ದಯವಿಟ್ಟು ತೋರಿಸಿ. ನನ್ನ ಮಿತ್ರನನ್ನು ಕ್ಷಮಿಸಿ. ಇವತ್ತು ಅವನ್ಗೆ ಮೈಯಲ್ಲಿ ಹುಷಾರಿಲ್ಲದ ಕಾರಣ ಹೆಚ್ಚು ಮಾತಾಡ್ತಿಲ್ಲ”, ಎಂದು ನುಡಿದನು. “ಪಾಪಾ”, ಹುಡುಗಿ ಕನಿಕರದ ರಾಗದಿಂದ ಸ್ಪಂದಿಸಿದಳು. “ಊಟ ಮಾಡದ್ರೆ ಎಲ್ಲಾ ಸರಿ ಹೋಗತ್ತೆ. ಬನ್ನಿ, ಮೇಲೆ ಕರ್ಕೊಂಡು ಹೋಗ್ತೀನಿ”, ಎಂದು ಹೇಳಿ ಜಿಂಕೆಯ ತರಹ ಅರ್ಧ ನಡೆದುಕೊಂಡು ಅರ್ಧ ಹಾರಿಕೊಂಡು ಊಟದ ಹಾಲನ್ನು ನಿರ್ಗಮಿಸಿದಳು. 

ಛತ್ರದ ಒಂದು ದೊಡ್ಡ ರೂಮಿನಲ್ಲಿ ಸುಮಾರು ಐವತ್ತು ಅಧಿಕ ಮಂದಿಗೆ ಆಗುವಷ್ಟು ಎಲೆಗಳು ಹಾಕಲಾಗಿದ್ದವು. ಆದರೆ ಖಾಲಿ ಇದ್ದದ್ದು ಮೂರೇ ಎಲೆಗಳು. ವಿಶ್ವ ಮತ್ತು ಭಟ್ಟ ಎರಡು ಎಲೆಗಳ ಮುಂದೆ ಕುಳಿತ ನಂತರ, ಹುಡುಗಿ ವಿಶ್ವನ ಕಡೆ ನೋಡುತ್ತಲೇ ರೂಮಿನ ಹೊರಗೆ ನಡೆದಳು. ವಿಶ್ವ ಅವಳ ದಿಕ್ಕಿನಲ್ಲೇ ನೋಡುತ್ತಿರುವಾಗ, ಮತ್ತ್ಯಾರೋ ಕಣ್ಣಿಗೆ ಬಿದ್ದರು. ಆತ ಫ್ರೆಂಚ್ ಗಡ್ಡ ಹೊಂದಿದ್ದ, ಮತ್ತು ಫ್ರೇಮ್ ರಹಿತವಾದ ಕನ್ನಡಕವನ್ನು ಧರಿಸಿದ್ದ ನಡುವಯಸ್ಸಿನ ವ್ಯಕ್ತಿ. ಯಾರದೋ ಒಡನೆ ನಗುತ್ತಾ ಮಾತಾಡಿಕೊಂಡು ಅವರ ಕೈಕುಲುಕುತ್ತಿದ್ದರು. ವಿಶ್ವ ಅವರನ್ನೇ ಗಮನವಿಟ್ಟು ನೋಡಿದ. ನಂತರ ಭಟ್ಟನಿಗೆ, “ಲೋ! ಮೆಂಟಲ್ ಮಂಜ ಬಂದಿರೊಂಗೆ ಇದ್ಯಲೋ!”, ಎಂದನು. ಭಟ್ಟ ಎಲೆಯನ್ನು ದಾಟುತ್ತಿದ್ದ ಒಂದು ಇರುವೆಯನ್ನು ಪಕ್ಕಕ್ಕೆ ತಳ್ಳುತ್ತಾ, “ಸುಮ್ನೆ ಇರು ಗುರು. ಆ **ಮಗನ್ ವಿಷ್ಯಾನ ಈ ಶುಭ ಸಮಾರಂಭದಲ್ಲಿ ಯಾಕೆ ನಾಪಸ್ತ್ಯ?”, ಎಂದನು. ವಿಶ್ವ ಅವರನ್ನೇ ನೋಡುತ್ತಾ, “ಇಲ್ಲ ಕಣೋ. ನಿಜವಾಗ್ಲೂ ಅವ್ನೇ! ಈ ಸೈಡ್ ಬರ್ತಿದಾನೆ”, ಎಂದಾಕ್ಷಣ ಭಟ್ಟ ಅವರ ದಿಕ್ಕಿನಲ್ಲಿ ನೋಡಿದ. ತಕ್ಷಣ ಎಸ್ಕೇಪ್ ಆಗಲು ಎದ್ದು ನಿಂತ. ವಿಶ್ವ ಅವನ ಶರ್ಟ್ ತುದಿಯನ್ನು ಎಳೆದು ವಾಪಸ್ಸು ಕೂಡಿಸಿ, “ಏನಾಗಲ್ಲ ಕೂತ್ಕೋ”, ಎಂದು ಹೇಳುತ್ತಿರುವಾಗಲೇ ಪ್ರೊಫೆಸರ್ ಮಾವಿನಕಾಯಿನಹಳ್ಳಿ ಗೋವಿಂದಪ್ಪ ಮಂಜುನಾಥ್ ಬಂದು ಅದೃಷ್ಟವಶಾತ್ ಭಟ್ಟನ ಪಕ್ಕದಲ್ಲೇ ಇದ್ದ ಏಕೈಕ ಎಲೆಯ ಮುಂದೆ ಕುಳಿತೇ ಬಿಟ್ಟರು. ಅಡುಗೆ ಭಟ್ಟರು ಉಪ್ಪಿನಕಾಯನ್ನು ಬಡಿಸುತ್ತಿದ್ದರು. ಭಟ್ಟ ಉಸಿರು ಹಿಡಿದುಕೊಂಡು ಚಲನರಹಿತನಾಗಿ ಕುಳಿತ. ಚಿತ್ರಾನ್ನವನ್ನು ಬಡಿಸುವ ಸಮಯಕ್ಕೆ ಸರಿಯಾಗಿ ಭಟ್ಟನ ಪಕ್ಕದಿಂದ ಲಿಂಗವನ್ನು ಗುರುತಿಸಲು ಕಷ್ಟವಾದ ಒಂದು ದನಿ, “Aye! Aradhya Bhat!”, ಎಂದು ಹೇಳಿ ಪಟ್ ಅಂತ ಭಟ್ಟನ ಬೆನ್ನಿಗೆ ಹೊಡೆದು, “And Vishwanathan also! Finished exam and enjoyingaaaa?”, ಎನ್ನುತ್ತಾ ಅವರ ಮಾತಿಗೆ ಅವರೇ ಬಿದ್ದೂ ಬಿದ್ದೂ ನಕ್ಕರು. ಭಟ್ಟ ಬೆನ್ನನ್ನು ಉಜ್ಜಿಕೊಂಡು, “Hello sir. Nice to see you here”, ಎಂದು ತನ್ನ ಮಾತಿನ ತದ್ವಿರುದ್ಧದ ಮುಖಭಾವದಿಂದ ನುಡಿದನು. ಪ್ರೊಫೆಸರ್ ಇದಕ್ಕೆ ತಲೆ ಆಡಿಸುತ್ತಾ, “ಏಸ್, ಏಸ್! ದೀಪಕ್ ನನ್ನ ಶಾಲೆಯ ದಿನಗಳ ಚಡ್ಡಿ ದೋಸ್ತಿನ ಮಗ, ಯು ನೋ?. ಅವನು ಇವತ್ತು ಮದ್ವೆ ಆಗ್ತಿದಾನೆ ಅಂದ್ರೆ ನಂಬಕ್ಕೇ ಆಗಲ್ಲ”, ಎಂದರು. ವಿಶ್ವ ಭಟ್ಟ ಮುಖ ಮುಖ ನೋಡಿಕೊಂಡರು. 

ಅನ್ನ-ಸಾರು ಬಡಿಸುವ ವೇಳೆ ಬಂದಿತು. ಕಾಲೇಜನ್ನೇ ನಡುಗಿಸುವಂತಹ ಪ್ರೊಫೆಸರ್ ಪಕ್ಕದಲ್ಲೇ ಕುಳಿತಿದ್ದರಿಂದ, ವಿಶ್ವ-ಭಟ್ಟರು ಗುಪ್ಚುಪ್ಪಾಗಿ ಊಟ ಮಾಡುತ್ತಿದ್ದರು. ಪ್ರೊಫೆಸರ್ ಅನ್ನ ಸಾರನ್ನು ಮಜಬೂತಾಗಿ ಕಲಸಿ, ಸೊರ್ ಎಂದು ಸದ್ದು ಮಾಡುತ್ತಾ ಸಾರನ್ನು ಸವಿದ ಬಳಿಕ, ಭಟ್ಟನ ಕಡೆ ತಿರುಗಿ, “ನೀನು ಕ್ವಾರ್ಕ್ ಕಣದ ಬಗ್ಗೆ ಐಐಟಿ ಬಾಂಬೆಯ ಒಂದು ಸೆಮಿನಾರ್ ಅಲ್ಲಿ ಮಾತಾಡಿದ್ದಿ, ಅಲ್ವಾ?”, ಎಂದು ಕೇಳಿದರು. ಭಟ್ಟ, ಬೆಕ್ಕಿನ ಮರಿ ಮಿಯಾಂವ್ ಎನ್ನುವಂತೆ, “ಹೂಂ”, ಎಂದು ಮೆಲ್ಲನೆ ಉತ್ತರಿಸಿ, ಚರ್ಚೆ ಎಲ್ಲಿ ಮುಂದುವರೆದು ಬಿಡುತ್ತದೆಯೋ ಎಂದು ಒಂದು ಆಂಬೊಡೆಯನ್ನು ಬಾಯಲ್ಲಿ ತುರುಕಿಕೊಂಡು ಬಿಟ್ಟನು. ಇದನ್ನು ಗಮನಿಸದ ಪ್ರೊಫೆಸರ್ ಮುಂದುವರೆದರು, “ಎಕ್ಚುಲಿ, ನನ್ನ ಸ್ನೇಹಿತ ಡಾಕ್ಟರ್ ರಾಯ್ ಮೊನ್ನೆ ಫೋನ್ ಮಾಡಿದ್ದರು. ಅವರು ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ಸ್ಥಾಪಿಸುತ್ತಿರುವ ಕಣ ಭೌತಶಾಸ್ತ್ರದ ಸಂಶೋಧನಾ ಕೇಂದ್ರಕ್ಕೆ ಸ್ನಾತಕೋತ್ತರ ಅಭ್ಯರ್ಥಿಗಳನ್ನು ಹುಡುಕುತ್ತಿದ್ದಾರೆ. ನನ್ನನ್ನ ಕೇಳಿದ್ರು, “ಈ ವಿಷಯದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಯಾರಾದ್ರೂ ಗೊತ್ತಾ?”, ಅಂತ. ನಾನು ನಿನ್ನ ಹೆಸರನ್ನ ಹೇಳ್ಬಿಟ್ಟೆ”. ಭಟ್ಟನ ಗಂಟಲಲ್ಲಿ ಆಂಬೊಡೆ ಕೆಳಗೆ ಇಳಿಯದೆ, ಅಲ್ಲೇ ಸಿಕ್ಕಿ ಹಾಕಿಕೊಂಡಿತು. ಕೊಕ್ಕಕೊಕ್ಕ ಕೆಮ್ಮಲು ಶುರು ಮಾಡಿದ. ಜೊತೆಗೆ, ಹಾಹೂ ಅಂತ ಗಾಬರಿಗೊಳಿಸುವ ಶಬ್ಧಗಳನ್ನು ಹೊರಡಿಸುತ್ತಾ ಉಸಿರಾಡುವುದಕ್ಕೆ ಹರಸಾಹಸ ಪಟ್ಟನು. ಪ್ರೊಫೆಸರ್ ಹೆದರಿಯೇ ಬಿಟ್ಟರು - “what happened? what happened?”, ಎಂದು ಆತಂಕದಿಂದ ಕೇಳಿದರು. ವಿಶ್ವ ಭಟ್ಟನಿಗೆ ನೀರು ಕುಡಿಸಿ, “ಔಬ ಔಬ”, ಎಂದು ಅವನ ಬೆನ್ನು ತಟ್ಟುತ್ತಾ ಸಮಾದಾನ ಮಾಡಿದ. 

“Aradhya, are you alright? ನಿಂಗೆ ಮುಂದೆ ಓದಕ್ಕೆ ಇಷ್ಟ ಇಲ್ವಾ?”, ಪ್ರೊಫೆಸರ್ ನಿಧಾನವಾಗಿ ಕೇಳಿದರು. ಈ ಹೊತ್ತಿಗೆ ಸ್ವಲ್ಪ ಸುಧಾರಿಸಿಕೊಂಡ ಭಟ್ಟ, “ಇಷ್ಟ ಇದೆ ಸರ್”, ಎಂದು ಕೀರಲು ದನಿಯಲ್ಲಿ ಉತ್ತರಿಸಿದ. ಇದನ್ನು ಕೇಳಿ ಸಮಾದಾನಗೊಂಡ ಪ್ರೊಫೆಸರ್, “ಗೂಡ್, ಗೂಡ್. ಮೊದಲು ಹಾಗಾದ್ರೆ ನೀನು ಗೇಟ್ ಎಗ್ಸಾಮ್ ಅಲ್ಲಿ ಒಳ್ಳೆ ರಾಂಕು ಪಡಿಬೇಕು. ನಂತರ ನನ್ನ ಸ್ನೇಹಿತ ಡಾಕ್ಟರ್ ರಾಯ್ ನಿನ್ನನ್ನ ಸಂದರ್ಶನ ಮಾಡ್ತಾರೆ. ನಮ್ ಕಾಲೇಜಿಗೆ ಒಳ್ಳೆ ಹೆಸ್ರು ತರ್ಬೇಕಪ್ಪಾ ನೀನು”, ಎಂದು ಹೇಳುತ್ತಾ ತಮ್ಮ ಜೇಬಿನಿಂದ ಒಂದು ಕಾರ್ಡನ್ನು ತೆಗೆದು, ಅದನ್ನು ಭಟ್ಟನಿಗೆ ತೋರಿಸಿ, “ಇದರಲ್ಲಿ ಡಾಕ್ಟರ್ ರಾಯ್ ಅವರ ಇ-ಮೇಲ್ ವಿಳಾಸವಿದೆ. ಒಮ್ಮೆ ನಿನ್ನ ರೆಸ್ಯುಮೆಯನ್ನು ಅವರಿಗೆ ಕಳಿಸು”, ಎಂದರು. ಭಟ್ಟ ಕಾರ್ಡನ್ನು ತೆಗೆದುಕೊಂಡು ಅದನ್ನೇ ದಿಟ್ಟಿಸಿ ನೋಡಿದ. ಅವನ ಕಣ್ಣಲ್ಲಿ ನೀರು ತುಂಬಿಕೊಂಡಿದ್ದನ್ನು ವಿಶ್ವ ಗಮನಿಸಿದ. ಅಡುಗೆ ಭಟ್ಟರು ಮೈಸೂರ್ ಪಾಕ್ ಬಡಿಸಲು ಶುರು ಮಾಡಿದರು.

 

*****

 

“ಇಷ್ಟ್ ಒಳ್ಳೆಯವ್ನು ಅಂತ ಗೊತ್ತೇ ಇರ್ಲಿಲ್ವಲೋ ಆ **ಮಗ” - ಊಟ ಮುಗಿಸಿ ಊಟದ ರೂಮಿನ ಹೊರಗೆ ಬರುವಾಗ ಭಟ್ಟ ಪ್ರೊಫೆಸರ್ ಅನ್ನು ಹೊಗಳಿದ. ಅವನ ದನಿಯಲ್ಲಿದ್ದ ಉತ್ಸಾಹವನ್ನು ವಿಶ್ವ ಗ್ರಹಿಸಿದ. “ನೋಡು. ಇಲ್ಲಿಂದ ಈ ಅವಕಾಶವನ್ನು ನೀನು ಹೇಗೆ ಮುಂದುವರೆಸಿಕೊಂಡು ಹೋಗುತ್ತೀಯ ಎಂಬುದು ನಿನಗೆ ಬಿಟ್ಟಿದ್ದು”, ವಿಶ್ವ ಮಿಂಚುತ್ತಿದ್ದ ಭಟ್ಟನ ಮುಖವನ್ನು ನೋಡಿಕೊಂಡು ಹೇಳಿದ. ರಿಸೆಪ್ಶನಿಗೆ ಬಂದ ಬಹುತೇಕ ಅತಿಥಿಗಳು ಈಗ ಹೊರಡುತ್ತಿದ್ದರು. ಅರ್ಧ ಖಾಲಿಯಾದ ಛತ್ರದ ಪೂರ ವಿಶ್ವನ ಕಣ್ಣುಗಳು ಒಮ್ಮೆ ಅಲೆದಾಡಿದವು. ಕೊನೆಗೆ, “ಬರಣ್ವಾ?”, ಎಂದು ಭಟ್ಟನನ್ನು ಕೇಳಿದ. 

ಇಬ್ಬರೂ ಹೊರದ್ವಾರದ ದಿಕ್ಕಿನಲ್ಲಿ ನಡೆದರು. ವಿಶ್ವ, ಕಾರನ್ನು ಎಲ್ಲಿ ನಿಲ್ಲಿಸಿದ್ದೇನೆ, ಎಂದು ಯೋಚಿಸುತ್ತಾ ಛತ್ರದ ದ್ವಾರದ ಹೊರಗೆ ಎರಡು ಹೆಜ್ಜೆ ಇಟ್ಟನು. ಅದೇ ಸಮಯಕ್ಕೆ ಎದುರಿನಿಂದ ವೇಗದಲ್ಲಿ ಛತ್ರವನ್ನು ಪ್ರವೇಶಿಸುತ್ತಿದ್ದವರೊಬ್ಬರು ಬೆಚ್ಚು ಬಿದ್ದರು. ಅವರ ಕೈಯಲ್ಲಿ ಹಿಡಿದ ನೀರಿನ ಜಗ್ ತುಂಬಿಹರಿದು, ಅದರಲ್ಲಿನ ಸ್ವಲ್ಪ ನೀರು ವಿಶ್ವನ ಶರ್ಟಿನ ಮೇಲೆ ಚಲ್ಲಿತು. ಜಗನ್ನು ಹಿಡಿದಿದ್ದ ಹಸಿರು ಸೀರೆಯ ಹುಡುಗಿ ವಿಶ್ವನ ಒದ್ದೆಯಾದ ಶರ್ಟನ್ನು ನೋಡಿದಳು. ನೋಡಿ, “ಚುಚುಚು. ಮೊದಲು ನನ್ನ ಕೈಯಿಂದ ಪಾನಕ ಚಲ್ಲಿಸಿಕೊಂಡ್ರಿ. ಈಗ ಪನ್ನೀರು. ಇನ್ನೇನಿದೆ ಅಭಿಷೇಕಕ್ಕೆ ಬಾಕಿ?”, ಎಂದು ಕೇಳಿದಳು. ವಿಶ್ವ ಶರ್ಟನ್ನು ವರೆಸಿಕೊಳ್ಳುತ್ತಾ, “ಹಾಲು, ಜೇನು”, ಎಂದನು. ಭಟ್ಟ ತನ್ನ ತಲೆಯನ್ನು ಟಪ್ ಎಂದು ಹೊಡೆದುಕೊಂಡನು. ವಿಶ್ವನ ಮಾತನ್ನು ಕೇಳಿ ಹುಡುಗಿಯ ಮುಖ ಗುಲಾಬಿ ವರ್ಣವಾಯಿತು. ಅವಳು ಕೆಳಗೆ ನೋಡಿದಳು. ವಿಶ್ವ ಇಷ್ಟಕ್ಕೆ ಬಿಡದೆ, “ನೀವು ವಧುವಿನ ಕಡೆಯಿಂದ ಸಂಬಂಧಿಕರ?”, ಎಂದು ಕೇಳಿದ. 

“ಹೂಂ. ನಾನು ಶ್ರುತಿಯ ಕಸಿನ್”. 

“ಓಹೋ. ನೀವು ಯಾವ ಕಾಲೇಜು?”. 

ಅವಳು ಕೆಳಗೆ ನೋಡಿಕೊಂಡೇ ಉತ್ತರಿಸಿದಳು, “ಏನ್ಐಇ”. 

“ಓಹೋಹೋ. ನಾನು ಜೆಸಿಇ, ಎಲೆಕ್ಟ್ರಾನಿಕ್ಸ್ ವಿಭಾಗ. ನೀವು ಯಾವ ಬ್ರಾಂಚು?”. 

“ಎಲೆಕ್ಟ್ರಾನಿಕ್ಸ್”.

“ಓಹೋಹೋಹೋ. ನಾನು ಈಗ ಫೈನಲ್ ಇಯರ್. ನೀವು?”.

ಸಿಐಡಿ ತನಿಖೆದಾರನ ತರಹ ಪ್ರಶ್ನೆ ಮೇಲೆ ಪ್ರಶ್ನೆ ಹಾಕುತ್ತಿದ್ದ ವಿಶ್ವನನ್ನ ಹುಡುಗಿ ಅಚ್ಚರಿಯಿಂದ ನೋಡಿದಳು. ನಂತರ, “ಸೆಕೆಂಡ್ ಇಯರ್”, ಎಂದು ಪಿಸುಗುಟ್ಟಿದಳು. 

ವಿಶ್ವ ಗಂಭೀರ ದನಿಯಲ್ಲಿ, “ಹೌದಾ? ಹಾಗಾದ್ರೆ ಒಂದ್ ಕೆಲ್ಸ ಮಾಡಿ. ನಿಮ್ಗೆ ಯಾವಾಗಾದ್ರೂ ಪಠ್ಯಪುಸ್ತಕ ಅಥವಾ ಇಂಜಿನಿಯರಿಂಗ್ ವಿಷಯದಲ್ಲಿ ಸಲಹೆ ಬೇಕು ಅಂದ್ರೆ ನನ್ನ ನಂಬರ್ ತೊಗೊಳಿ. ಇಟ್ ಈಸ್...  “. 

ಭಟ್ಟ ದಂಗಾಗಿ ನೋಡುತ್ತಿರುವಂತೆಯೇ ಹುಡುಗಿ, “ಹೂಂ”, ಎಂದು ತಲೆ ಆಡಿಸಿ ವಿಶ್ವನ ಮೊಬೈಲ್ ಸಂಖ್ಯೆಯನ್ನು ತನ್ನ ಮೊಬೈಲ್ ನಲ್ಲಿ ಟೈಪ್ ಮಾಡಿದಳು. 

ನಂತರ ವಿಶ್ವ, “ಕೆಲವ್ಸಲಿ ಟೈಪ್ ಮಾಡ್ವಾಗ ತಪ್ಪಾಗತ್ತೆ. ನಂಬರ್ ಪರೀಕ್ಷಿಸಲು ಒಮ್ಮೆ ಪ್ಲೀಸ್ ಅದನ್ನು ಕಾಲ್ ಮಾಡಿ”, ಎಂದು, ಜಗತ್ತಿನ ಅತಿ ಸಹಜ ಸತ್ಯ ಎಂಬುವಂತೆ ಹೇಳಿದ.

ಹುಡುಗಿ ತಕ್ಷಣ ಗಂಭೀರವಾದಳು. ವಿಶ್ವ, “ಸ್ವಲ್ಪ ಓವರ್ ಆಗಿ ಆಡ್ಬಿಟ್ನಾ?”, ಎಂದು ಯೋಚಿಸಿದನು. ಹಲವು ಕ್ಷಣಗಳ ವಿಚಿತ್ರ ಮೌನ. ಹುಡುಗಿ ಕೊನೆಗೆ ಸದ್ದಿಲ್ಲದೆ ತನ್ನ ಮೊಬೈಲನ್ನು ಒತ್ತಿದಳು. ವಿಶ್ವ, “ರಿಂಗಾಯ್ತು”, ಎಂದಷ್ಟೇ ಹೇಳಿದನು.

ಮರುಕ್ಷಣ ಅವನು ಏನನ್ನೋ ನೆನಪಿಸಿಕೊಂಡು, “ಅರೆ! ಹೇಳದೇ ಮರ್ತ್ಬಿಟ್ನಲಾ! ನನ್ ಹೆಸ್ರು ವಿಶ್ವನಾಥ್ ಚೆನ್ನಗಿರಿ. ಇವನು ನನ್ನ ಸ್ನೇಹಿತ ಆರಾಧ್ಯ ಭಟ್ಟ್. ನಿಮ್ಮ ಹೆಸರನ್ನು ತಿಳಿಯುವ ಸೌಭಾಗ್ಯ ನನಗಿದೆಯೇ?”, ಎಂದು ಕೇಳಿದ. 

ಹುಡುಗಿ ಕಣ್ಣರಳಿಸಿ ಉತ್ತರಿಸಲು ಮುಂದಾದಳು. ಅದೇ ಸಮಯಕ್ಕೆ ಭಟ್ಟ, ಆಂಬೊಡೆ ವಾಪಸ್ಸು ಗಂಟಲಿಗೆ ಬಂದ ಕಾರಣಕ್ಕೋ ಏನೋ, ಕೊಕ್ಕಕೊಕ್ಕ ಕೆಮ್ಮಲು ಶುರು ಮಾಡಿದ. ವಿಶ್ವ ಅವನ ಕಡೆ ಸರಕ್ಕನೆ ನೋಡಿ, “ಏಯ್! ಒಂದ್ ಸ್ವಲ್ಪತ್ ಸುಮ್ನೆ ಇರಕ್ಕಾಗಲ್ವಾ?”, ಎಂದು ರೇಗಿದ. “ಕೆಂ ಬಂತು ಕಣೋ! ನಾ ಏನೋ ಮಾಡ್ಲಿ?”, ಭಟ್ಟ ನಗುತ್ತಾ ನುಡಿದ. ಹುಡುಗಿ ವಿಶ್ವನ ಹುಸಿಮುನಿಸಿನ ಮುಖವನ್ನು ನೋಡಿ ಮುಸುಮುಸು ನಕ್ಕಳು. ನಂತರ ಮೆಲ್ಲನೆ, “ಪ್ರತಿಮಾ”, ಎಂದಳು. ವಿಶ್ವನಿಗೆ ಎಲ್ಲೋ ದೂರದಲ್ಲಿ, “ಸುಲಗ್ನೇ ಸಾವಧಾನ…. ಸುಮುಹೂರ್ತೇ ಸಾವಧಾನ”, ಮಂತ್ರ ಪಠಣ ಕೇಳಲಾರಂಭಿಸಿತು. ಅವಳ ಕಣ್ಣನ್ನೇ ನೋಡುತ್ತಾ, “ಪ್ರತಿಮಾ”, ಎಂದು ಪುನರುಚ್ಚರಿಸಿದನು.

 

*****

 

“So, under what conditions will a quark particle undergo asymptotic freedom?”

“The interaction between quarks weaken at higher temperatures resulting in asymptotic freedom and plasma state”. 

ವಿಶ್ವ ಸೀಟಿನಲ್ಲಿ ನೆಟ್ಟಗೆ ಕುಳಿತು ಅಲ್ಲಿ ಇಲ್ಲಿ ನೋಡಿದ. ಬೆಂಗಳೂರಿನ ಟಾಟಾ ಇನ್ಸ್ಟಿಟ್ಯೂಟ್ ನಲ್ಲಿ ನಡೆಯುತ್ತಿದ್ದ ಭಟ್ಟನ ಪಿಎಚ್‌ಡಿ ಮಹಾಪ್ರಬಂಧದ ಪ್ರಸ್ತುತಿ ಚೆನ್ನಾಗಿ ಸಾಗುತ್ತಿತ್ತು. ಪ್ರಾಧ್ಯಾಪಕರು ಕೇಳುತ್ತಿದ್ದ ಎಲ್ಲಾ ಪ್ರಶ್ನೆಗಳಿಗೂ ಭಟ್ಟ ವಿಶ್ವಾಸಾರ್ಹ ಉತ್ತರಗಳನ್ನು ನೀಡುತ್ತಿದ್ದನು. ಸಭಾಂಗಣದ ವೇದಿಕೆಯ ಮೇಲೆ ನಿಂತಿದ್ದ ಭಟ್ಟ ಮುಂದಿನ ಪ್ರಶ್ನೆಯನ್ನು ನಿರೀಕ್ಷಿಸುತ್ತಾ ಬಂದಿದ್ದ ಏಳು ಪ್ರಾಧ್ಯಾಪಕರ ಕಡೆ ನೋಡಿದ. ಮುಂದಿನ ಸಾಲಿನಲ್ಲಿ ಕುಳಿತಿದ್ದ ಪ್ರೊಫೆಸರ್ ರಾಯ್ ಹಿಂದೆ ತಿರುಗಿ ಬಾಕಿ ಪ್ರಾಧ್ಯಾಪಕರಿಗೆ, “Are there any more questions or comments?”, ಎಂದು ಕೇಳಿದರು. ನಿಧಾನವಾಗಿ ಒಬ್ಬ ಪ್ರೊಫೆಸರ್ ಉತ್ತರಿಸಿದರು - “No. I think it is a nice piece of reseach”.  ಉಳಿದ ಪ್ರಾಧ್ಯಾಪಕರು ಸಮ್ಮತಿಯನ್ನು ಸೂಚಿಸಲು ತಲೆದೂಗಿದರು. ಪ್ರೊಫೆಸರ್ ರಾಯ್ ಮುಂದೆ ತಿರುಗಿ,“Ok. I think we all agree here that you have earned your PhD. Congratulations, Dr. Aradhya Bhat!”, ಎಂದರು. ಎಲ್ಲರ ಜೊತೆ ಚಪ್ಪಾಳೆ ಹೊಡೆಯುತ್ತಿರುವಾಗ ವಿಶ್ವ ಭಟ್ಟನನ್ನೇ ನೋಡಿದ. ಭಟ್ಟ ಪೋಡಿಯಮ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು, ಕಿಟಕಿಗಳ ಒಳಗಿಂದ ಬರುತ್ತಿದ್ದ ಸೂರ್ಯನ ಕಿರಣಗಳನ್ನು ಸದ್ದಿಲ್ಲದೆ ನೋಡುತ್ತಾ ನಿಂತಿದ್ದನು.   

 

“ಮಗ್ನೆ, ಡಾಕ್ಟ್ರು ಆಗ್ಬಿಟ್ಯಲೋ!”, ಎಂದು ಹೇಳುತ್ತಾ ವಿಶ್ವ ಬಂದು ಭಟ್ಟನನ್ನು ತಬ್ಬಿಕೊಂಡನು. ಸಭಾಂಗಣದಲ್ಲಿ ಸೇರಿದ್ದ ಮಂದಿಯೆಲ್ಲಾ ಈಗ ಹೊರಡುತ್ತಿದ್ದರು. ವಿಶ್ವ ಮತ್ತು ಭಟ್ಟ ವೇದಿಕೆಯ ಕೆಳಗೆ ನಿಂತಿದ್ದರು. “ಗುರೂ! ಏನ್ ವಿಷ್ಯಾ? ಹೇಗಿದೆ ಅಮೇರಿಕಾ?”, ಭಟ್ಟ ವಿಚಾರಿಸಿದ. 

“ಚೆನಾಗಿದೆ. ಅಲ್ಲಿ ನಾನು ಮತ್ತೆ … “.  

“ಕಂಗ್ರಾಟ್ಸ್ ಆರಾಧ್ಯ. ತುಂಬಾ ಚೆನ್ನಾಗಿ ಮಾತಾಡಿದ್ರಿ”, ವಿಶ್ವನ ಮಾತಿಗೆ ಒಂದು ಮಧುರವಾದ ಧ್ವನಿ ಅಡ್ಡ ಬಂತು. ಅವನು ಹಿಂದೆ ತಿರುಗಿ ನೋಡಿದ. ಹಿಂದೆ ಹಸಿರು ಸೀರೆಯ ಹುಡುಗಿ ನಗುತ್ತಾ ನಿಂತಿದ್ದಳು. ಭಟ್ಟ ನುಡಿದ - “ಥ್ಯಾಂಕ್ಸ್ ಪ್ರತಿಮಾ ಅವ್ರೆ! ನೀವಿಬ್ರು ಬಂದಿದ್ದು ತುಂಬಾ ಸಂತೋಷ ಆಯ್ತು. ವಿಶ್ವ ಹೇಳಿದ್ದ, ಮೇನಲ್ಲಿ ಮೂರು ವಾರಕ್ಕೆ ಇಂಡ್ಯಾಗೆ ಬರ್ತಾಯ್ದೀರ ಅಂತ. ಅದಕ್ಕೆ ಹೇಳ್ದೆ, “ಗುರು, ಮರೀದೆ ನನ್ನ ಪಿಎಚ್‌ಡಿ ಪ್ರಸ್ತುತಿಗೆ ಬಾ, ಅದೇ ಸಮಯದಲ್ಲಿ ಇದೆ. ಕಾಲೇಜ್ ದಿನಗಳ ತರ, ಯಾವ್ದಾದ್ರೂ ಉತ್ತರ ಗೊತ್ತಾಗ್ದಿದ್ದ್ರೆ ನೀ ಹೇಳ್ಕೊಡ್ಬೋದು”, ಅಂದೆ”. ಮೂವರೂ ನಕ್ಕರು. 

ವಿಶ್ವ ಹುಡುಗಿಯ ಕಡೆ ತಿರುಗಿ, “ಭಟ್ಟಂಗೆ ಏನೋ ತಂದಿದ್ವಲ್ಲಾ, ಅದು ಕಾರಲ್ಲೇ ಇದೆ. ತರೋದು ಮರತ್ಬಿಟ್ಟೆ. ಒಂದ್ ನಿಮ್ಷ ಹೋಗಿ ತರ್ತ್ಯಾ?”, ಎಂದು ಹೇಳಿ ಕಾರಿನ ಕೀಯನ್ನು ಅವಳಿಗೆ ಕೊಟ್ಟನು. ಅವಳು ಅವನನ್ನೇ ನೋಡುತ್ತಾ, “ಅಷ್ಟೇನಾ ಯಜಮಾನ್ರೆ? ಅಥ್ವಾ ಇನ್ನೇನಾದ್ರೂ ಬೇಕಾ?”, ಎಂದು ಮುಗುಳ್ನಗುತ್ತಾ ಕೇಳಿದಳು. ವಿಶ್ವ ಗಂಭೀರವಾಗಿ, “ಇನ್ನೇನು ಬೇಕು ಅಂತ ಆಮೇಲೆ ಹೇಳ್ತೀನಿ”, ಎಂದನು. ಭಟ್ಟ ಎರಡು ಬಾರಿ ಕೊಕ್ಕಕೊಕ್ಕ ಕೆಮ್ಮಿದ. ವಿಶ್ವ ಥಟ್ಟನೆ ಅವನಿಗೆ, “ಸ್ವಲ್ಪ ಸಮಾದಾನ ಮಾಡ್ಕೋ”, ಎಂದನು. ಹುಡುಗಿ ಮತ್ತು ಭಟ್ಟ ಜೋರಾಗಿ ನಕ್ಕರು. 

ಹುಡುಗಿ ಹೊರಗೆ ಹೋದ ನಂತರ ಭಟ್ಟ ವಿಶ್ವನನ್ನುದ್ದೇಶಿಸಿ - “ನಮ್ಮ ಪ್ರೀತಿಯ ಮೆಂಟಲ್ ಮಂಜನ್ನೂ ಈ ಕಾರ್ಯಕ್ರಮಕ್ಕೆ ಕರ್ದಿದ್ದೆ. ಅವರು ಈ ಟೈಮಲ್ಲಿ ಸಿಡ್ನಿಯ ಮಗಳ ಮನೇಲಿ ಇರ್ತೀನಿ ಅಂದ್ರು. “ನಂಗೆ ನಿನ್ಬಗ್ಗೆ ತುಂಬಾ ಹೆಮ್ಮೆ ಆಗತಪ್ಪ. ನನ್ನ ಆಶೀರ್ವಾದ ನಿನ್ಮೇಲೆ ಇದ್ದೇ ಇರುತ್ತೆ”, ಅಂದ್ರು ಪಾಪ”. ವಿಶ್ವ ತಲೆ ಆಡಿಸಿ, “ಹೂಂ. ನಾನೂ ಅವರ್ಗೆ ಒಂದ್ಸಲಿ ಫೋನ್ ಮಾಡ್ಬೇಕು”, ಎಂದನು.  

ಹೆಗಲ ಮೇಲೆ ಟವೆಲ್ ಹಾಕಿಕೊಂಡಿದ್ದ, ಕೇಶರಹಿತನಾದ ಒಬ್ಬ ಯುವಕ, ಕುಡಿದ ಕಾಫಿ ಲೋಟಗಳನ್ನು ತೆಗೆದುಕೊಂಡು ಹೋಗುತ್ತಿದ್ದನು. ಭಟ್ಟ ಏನನ್ನೋ ನೆನಪಿಸಿಕೊಂಡು - “ಅಂದಂಗೆ ವಿಶ್ವ! ಈವತ್ತು ಇಲ್ಲೀಗೆ ಬರ್ತಾ ದಾರೀಲಿ ಬೆಣ್ಣೆ ಗೋವಿಂದಪ್ಪ ಚೌಲ್ಟ್ರಿ ಕಾಣಸ್ತು. ಈ ದಿನ ಅಲ್ಲಿ ಮದ್ವೆ ಸಮಾರಂಭ ಇರೊಂಗೆ ಇದೆ. ಛತ್ರವನ್ನು ನೋಡಿ ನಮ್ಮ ಕಾಲೇಜು ದಿನಗಳು ನೆನಪಾದವು. ಇವತ್ ಸಾಯಂಕಾಲ ನೀನು ಬಿಡುವಿದ್ರೆ, ಕೊನೆಯ ಬಾರಿಗೆ ಇಬ್ರು ಅಲ್ಲಿನ ರಿಸೆಪ್ಶನ್ ಗೆ ಒಂದ್ ವಿಸಿಟ್ ಹಾಕಣ್ವ?”. 

ವಿಶ್ವ ಕ್ಷಣಿಕವಾಗಿ ಪ್ರಶ್ನೆಯನ್ನು ಅವಲೋಕಿಸಿ, “ಯಾರ್ದು ಮದ್ವೆ?”, ಎಂದು ಕೇಳಿದ. 

ಭಟ್ಟ ಭಾವರಹಿತವಾಗಿ ಉತ್ತರಿಸಿದ - “ಗೊತ್ತಿಲ್ಲ”. 

ಹೊರಗೆ ಹೊಳೆಯುತ್ತಿದ್ದ ಸೂರ್ಯನನ್ನು ವಿಶ್ವ ಮೌನವಾಗಿ ಒಮ್ಮೆ ನೋಡಿದ. 

“ಸಾಯಂಕಾಲ ಏಳು ವರೆಗೆ ಛತ್ರದ ಹೊರಗೆ ಭೇಟಿಯಾಗೋಣ”. 

ಎಲ್ಲೋ ದೂರದಲ್ಲಿ, ‘ಬರ್ಬಾದ್ ಬಿಲ್ಡಿಂಗ್ ಬಾಡಿಗೆ ರೂಂ’, ಹಾಡಿನ ತಮಟೆ ಹೊಡೆಯಲು ಶುರುವಾಯಿತು. 

 

 

Comments

Submitted by kavinagaraj Thu, 04/30/2015 - 08:29

ಮೆಂಟಲ್ ಮಂಜನ ಸಹಕಾರದಿಂದ ಭಟ್ಟನ ಸಂಕಲ್ಪ ಸಾಧನೆಯಾಯಿತು. ವಿಶ್ವನಿಗೆ ಸದ್ದಿಲ್ಲದೆ ಸಂಗಾತಿ ಸಿಕ್ಕಳು. ಚೆನ್ನಾಗಿದೆ, ಪ್ರದ್ಯುಮ್ನರವರೇ. ಓದಿಸಿಕೊಂಡು ಹೋಗುತ್ತದೆ.