ಮೋದಿ ಸರ್ಕಾರ ಬಂದು ಒಂದು ವರ್ಷ, ಬದಲಾವಣೆ ನಾಸ್ತಿ

ಮೋದಿ ಸರ್ಕಾರ ಬಂದು ಒಂದು ವರ್ಷ, ಬದಲಾವಣೆ ನಾಸ್ತಿ

ಅಬ್ಬರದ ಕಾರ್ಪೋರೇಟ್ ಬೆಂಬಲದ ಚುನಾವಣಾ ಪ್ರಚಾರದ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಸ್ವಂತ ಬಲದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಸಮೀಪಿಸುತ್ತಿದೆ.   ಮೋದಿ ಬಂದು ಏನಾದರೂ ಬದಲಾವಣೆ ಆಗಿದೆಯಾ ಎಂದು ನೋಡಿದರೆ ಗಮನಾರ್ಹ ಬದಲಾವಣೆ ಕಂಡುಬರುವುದಿಲ್ಲ.  ಪರಿಸ್ಥಿತಿ ಹಿಂದಿನ ಸರ್ಕಾರದ ಅವಧಿಗೂ ಇಂದಿನ ಸರ್ಕಾರದ ಅವಧಿಗೂ ವ್ಯತ್ಯಾಸವೇನೂ ಇಲ್ಲ.  ಲಂಚ ಕೊಡದೆ  ಕೆಲಸ ಮೊದಲೂ ಆಗುತ್ತಿರಲಿಲ್ಲ, ಈಗಲೂ ಆಗುವುದಿಲ್ಲ ಎಂಬುದು ಶ್ರೀಸಾಮಾನ್ಯನ ಅನುಭವ.  ಅತ್ಯಾಚಾರಗಳು ಹಿಂದೆ ನಡೆಯುತ್ತಿದ್ದಂತೆ ಈಗಲೂ ನಡೆಯುತ್ತಿವೆ.  ಬಿಜೆಪಿ ಸರ್ಕಾರ ಬಂದರೆ ಅತ್ಯಾಚಾರ ನಡೆಯದೆ ದೇಶ ರಾಮರಾಜ್ಯವಾಗುತ್ತದೆ ಎಂದು ಪ್ರಚಾರ ಮಾಡಿದರೂ ಇಂದು ಕೂಡ ಹಿಂದಿನಂತೆಯೇ ಅತ್ಯಾಚಾರಗಳು ನಡೆಯುತ್ತಿವೆ.  ಬಿಜೆಪಿ ಸರ್ಕಾರ ಬಂದರೆ ಕಪ್ಪು ಹಣ ವಿದೇಶಗಳಿಂದ ತಂದು ದೇಶದಲ್ಲಿ ಸುಭಿಕ್ಷ ಉಂಟುಮಾಡುತ್ತೇವೆ ಎಂದು ಹೇಳಿದವರು ಈಗ ಆ ಬಗ್ಗೆ ಚಕಾರ ಕೂಡ ಎತ್ತುವುದಿಲ್ಲ.  ಕಾಂಗ್ರೆಸ್ ನೇತೃತ್ವದ  ಯುಪಿಎ ಸರ್ಕಾರದ ತಪ್ಪು ಅರ್ಥಿಕ ನೀತಿಗಳಿಂದ ರೂಪಾಯಿ ವಿರುದ್ಧ ಡಾಲರ್ ಬೆಲೆ ಹೆಚ್ಚಳ ಆಗಿ ದೇಶ ಸಂಕಷ್ಟ ಎದುರಿಸಿದೆ ಎಂದು ಪ್ರಚಾರ ಮಾಡಿದವರು ಈಗ ಆ ಬಗ್ಗೆ ಮಾತನ್ನೇ ಆಡುವುದಿಲ್ಲ.  ಈಗಲೂ ರೂಪಾಯಿ ವಿರುದ್ಧ ಡಾಲರ್ ವಿನಿಮಯ ದರ ಹಿಂದಿದ್ದ ಮಟ್ಟಕ್ಕಿಂತ ಈ ಒಂದು ವರ್ಷದ ಅವಧಿಯಲ್ಲಿ ಕಡಿಮೆಯೇನೂ ಆಗಲಿಲ್ಲ.  ಹಾಗಾದರೆ ಸರ್ಕಾರ ಬದಲಿ ಜನಸಾಮಾನ್ಯನಿಗೆ ಏನು ಪ್ರಯೋಜನ ಆಗಿದೆ ಎಂದರೆ ಯಾವುದೇ ಪ್ರಯೋಜನ ಆಗಿಲ್ಲ ಎಂಬುದೇ ಉತ್ತರ.
ಹಿಂದಿನ ಸರ್ಕಾರಗಳು ಗ್ರಾಮೀಣ ಪ್ರದೇಶಗಳನ್ನು ತೀರ ನಿರ್ಲಕ್ಷಿಸಿರಲಿಲ್ಲ.  ಈಗಿನ ಬಿಜೆಪಿ ಸರ್ಕಾರ ಗ್ರಾಮೀಣ ಮೂಲಭೂತ ಸೌಕರ್ಯ ಹೆಚ್ಚಿಸುವತ್ತ ಯಾವುದೇ ಗಮನ ಹರಿಸಿಲ್ಲ.  ಅದು ಕೇವಲ ಭಾರತ ಎಂದರೆ ನಗರದಲ್ಲಿ ಮಾತ್ರ ಇದೆ ಎಂದು ಭಾವಿಸಿದೆ.  ಸ್ಮಾರ್ಟ್ ಸಿಟಿಗಳನ್ನು ಕಟ್ಟುವ ಮಾತನ್ನು ಆಡುತ್ತಿದೆಯೇ ಹೊರತು ಗ್ರಾಮೀಣ ಭಾರತದ ಮೂಲಭೂತ ಸೌಕರ್ಯಗಳ ವೃದ್ಧಿಗೆ ಯಾವುದೇ ಗಮನ ನೀಡುತ್ತಿಲ್ಲ.  ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಇದ್ದದ್ದಕ್ಕಿಂಥ ಗ್ರಾಮೀಣ ಅಂತರ್ಜಾಲ ಲಭ್ಯತೆಯಲ್ಲಿ ಯಾವುದೇ ಸುಧಾರಣೆ ಆಗಿಲ್ಲ.  ಭಾರತದ ಹಳ್ಳಿಗಳಲ್ಲಿ 3ಜಿ ಮೊಬೈಲ್ ಅಂತರ್ಜಾಲ ಇಂದಿಗೂ ಲಭ್ಯವಿಲ್ಲ.  2010ರಲ್ಲಿಯೇ 3ಜಿ ತರಂಗಾಂತರ ಹರಾಜು ನಡೆದು ನಾಲ್ಕೈದು ವರ್ಷಗಳಾದರೂ ಭಾರತದ ಹಳ್ಳಿಗಳಿಗೆ 3ಜಿ ಮೊಬೈಲ್ ಅಂತರ್ಜಾಲ ತಲುಪಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂಬುದು ಎಂಥ ನಾಚಿಕೆಗೇಡು.  ಅಂತರ್ಜಾಲ ಎಂಬುದು ಇಂದು ಮಾಹಿತಿ ಹಾಗೂ ಪ್ರಗತಿಯ ವಾಹಕವಾಗಿದೆ.  ಹೀಗಾಗಿ ಅಂತರ್ಜಾಲ ಲಭ್ಯವಿಲ್ಲದ ಹಳ್ಳಿಗಳು ಪ್ರಗತಿಯಲ್ಲಿ ಹಿಂದೆ ಬೀಳುತ್ತಿವೆ.  ಹಲವು ದೇಶಗಳು ಉಪಗ್ರಹ ಆಧಾರಿತ ಬ್ರಾಡ್ಬ್ಯಾಂಡ್ ಅಂತರ್ಜಾಲವನ್ನು ಡಿಟಿಎಚ್ ಮಾದರಿಯಲ್ಲಿಯೇ ಗ್ರಾಹಕರಿಗೆ ಒದಗಿಸುವ ವ್ಯವಸ್ಥೆಯನ್ನು ಮಾಡಿವೆ.  ಆದರೆ ನಮ್ಮ ದೇಶವು ಮಂಗಳನ ಅಂಗಳಕ್ಕೆ ಉಪಗ್ರಹಗಳನ್ನು ಹಾರಿಬಿಡುತ್ತಿದೆ.  ಅದೇ ವೇಳೆಗೆ ಶೇಕಡಾ 50ಕ್ಕಿಂತಲೂ ಹೆಚ್ಚು ಜನ ವಾಸಿಸುವ ಗ್ರಾಮೀಣ ಪ್ರದೇಶಗಳಿಗೆ ಉತ್ತಮ ಬ್ರಾಡ್ಬ್ಯಾಂಡ್ ಅಂತರ್ಜಾಲ ವ್ಯವಸ್ಥೆ ಲಭ್ಯವಾಗಿಸುವಲ್ಲಿ ಸೋತಿದೆ.  ನಮ್ಮ ನೀತಿ ನಿರೂಪಕರಿಗೆ, ವಿಜ್ಞಾನಿಗಳಿಗೆ, ಆಡಳಿತಗಾರರಿಗೆ ಹಾಗೂ ಪ್ರಧಾನ ವಾಹಿನಿಯ ಮಾಧ್ಯಮಗಳಿಗೆ ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬ ಮೂಲಭೂತ ಜ್ಞಾನವೂ ಇಲ್ಲ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.  ಇದು ನಾಚಿಕೆಗೇಡು.  ಡಿಜಿಟಲ್ ಇಂಡಿಯಾ ಎಂದು ಮಾತಿನಲ್ಲಿ ಅರಮನೆ ಕಟ್ಟುವ ಮೋದಿ ನೇತೃತ್ವದ ಸರ್ಕಾರ ಬಂದರೂ ಈ ದಿಶೆಯಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಆದ ಪ್ರಗತಿ ಒಂದು ದೊಡ್ಡ ಶೂನ್ಯ ಬಿಟ್ಟರೆ ಮತ್ತೇನೂ ಇಲ್ಲ.
ಮೋದಿ ಅಧಿಕಾರಕ್ಕೆ ಬರುವ ಮುನ್ನ ಪಾಕಿಸ್ತಾನದ ಜೊತೆಗೆ ಸಂಘರ್ಷದ ಮಾತನ್ನು ಆಡುತ್ತಿದ್ದರು ಹಾಗೂ ಸಂಘ ಪರಿವಾರದವರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಪಾಕಿಸ್ತಾನದ ಜೊತೆ ಮಾತುಕತೆ ಆಡುವುದನ್ನು ವಿರೋಧಿಸುತ್ತಿದ್ದರು.  ಈಗ ಅಧಿಕಾರಕ್ಕೆ ಬಂದ ನಂತರ ಇವರೆಲ್ಲರ ಬಾಯಿ ಬಂದಾಗಿದೆ.  ಈಗ ಪಾಕಿಸ್ತಾನ ಏನೇ ತಂಟೆ ಮಾಡಿದರೂ ಯುದ್ಧದ ಮಾತನ್ನು ಆಡುತ್ತಿಲ್ಲ.  ಇದು ಇವರಲ್ಲಿ ಸಮಚಿತ್ತದ ಮನೋಭಾವ ಇಲ್ಲ ಎಂಬುದನ್ನು ತೋರಿಸುತ್ತದೆ.  ಮೋದಿ ಅಧಿಕಾರಕ್ಕೆ ಬಂದ ನಂತರ ದೇಶವಿದೇಶಗಳಲ್ಲಿ ಮೋದಿಭಜನೆ ಅವ್ಯಾಹತವಾಗಿ ಸಾಗಿದೆ.  ಮೋದಿಯವರ ಸ್ವಚ್ಛಭಾರತ ಅಭಿಯಾನ ನಡೆಯುತ್ತಿದ್ದರೂ ದೇಶವು ಹಿಂದಿದ್ದಕ್ಕಿಂಥ ಇಂದು ಹೆಚ್ಚು ಸ್ವಚ್ಛವಾಗಿರುವುದು ಕಂಡುಬರುವುದಿಲ್ಲ.  ಸ್ವಚ್ಛಭಾರತದ ತಿಳುವಳಿಕೆ ಮೂಡಿಸುವಲ್ಲಿ ಸರ್ಕಾರ ಭಾರೀ ಪ್ರಚಾರ ನಡೆಸುತ್ತಿದ್ದರೂ ಅದರ ಪ್ರಯೋಜನ ಮಾತ್ರ ಕಾಣುತ್ತಿಲ್ಲ ಏಕೆಂದರೆ ಸ್ವಚ್ಛ ಭಾರತಕ್ಕೆ ಬೇಕಾದ ವ್ಯವಸ್ಥೆಯನ್ನು ರೂಪಿಸುವಲ್ಲಿ ಸರ್ಕಾರ ಗಮನ ಹರಿಸಿಲ್ಲ.  ಉದಾಹರಣೆಗೆ ಇಂದು ಪ್ಲಾಸ್ಟಿಕ್ ಬಳಕೆ ಎಲ್ಲ ಕ್ಷೇತ್ರಗಳಲ್ಲಿಯೂ ವ್ಯಾಪಿಸಿದೆ.  ಹೀಗಾಗಿ ಪ್ಲಾಸ್ಟಿಕ್ ಕಸದ ಉತ್ಪತ್ತಿ ಹಳ್ಳಿ, ಪಟ್ಟಣ, ನಗರ ಎನ್ನದೆ ಎಲ್ಲೆಡೆ ನಡೆಯುತ್ತಿದೆ.  ಇಂಥ ಪ್ಲಾಸ್ಟಿಕ್ ಅನ್ನು ಬಳಸಿ ಇದನ್ನೇ ಇಂಧನವನ್ನಾಗಿ ರೂಪಿಸುವ ತಂತ್ರಜ್ಞಾನ ಕೈಗೆಟಕುವ ದರದಲ್ಲಿ ದೇಶೀಯವಾಗಿ ಅಭಿವೃದ್ಧಿಗೊಳಿಸುವಲ್ಲಿ ಸರ್ಕಾರವಾಗಲಿ, ಮಾಧ್ಯಮಗಳಾಗಲಿ, ಇಂಜಿನಿಯರಿಂಗ್ ಕಾಲೇಜುಗಳಾಗಲಿ ಗಮನ ಹರಿಸಿಲ್ಲ.  ಕೆಲವು ಇಂಜಿನಿಯರಿಂಗ್ ಕಾಲೇಜುಗಳು ಇಂಥ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದರೂ ಸರ್ಕಾರ ಅದನ್ನು ಜನಪ್ರಿಯಗೊಳಿಸುವಲ್ಲಿ ಗಮನವನ್ನೇ ಹರಿಸಿಲ್ಲ ಹಾಗೂ ಅದು ಜನರಿಗೆ ತಲುಪುವಂತೆ ನೋಡಿಕೊಂಡಿಲ್ಲ.  ಪ್ರತಿ ಗ್ರಾಮಪಂಚಾಯತುಗಳಲ್ಲಿ ಪ್ಲಾಸ್ಟಿಕ್ ಕಸವನ್ನು ಬಳಸಿ ಇಂಧನ ತಯಾರಿಸುವ ಯಂತ್ರಗಳನ್ನು ಸ್ಥಾಪಿಸಿದರೆ ದೇಶದ ಬಹುತೇಕ ಪ್ಲಾಸ್ಟಿಕ್ ಕಸದ ನಿರ್ಮೂಲನೆ ಸಾಧ್ಯ.  ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು ಅಷ್ಟೇ.  ಅದು ಕೇಂದ್ರದ ಅಬ್ಬರದ ಪ್ರಚಾರದ ಮೋದಿ ಸರ್ಕಾರದಲ್ಲೂ ಕಾಣಿಸುತ್ತಿಲ್ಲ, ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿಯೂ ಕಾಣಿಸುತ್ತಿಲ್ಲ.  ಕಸವನ್ನು ಎಲ್ಲೆಂದರಲ್ಲಿ ಹಾಕುವುದು ಭಾರತೀಯರ ಮೂಲಭೂತ ಗುಣವೂ ಆಗಿದೆ.  ಇದು ಭಾರತೀಯರ ರಕ್ತದಲ್ಲೇ ಬಂದ ಮೂಢನಂಬಿಕೆಗಳಂತೆ ಒಂದು ನಿವಾರಿಸಲಾರದ ರೋಗವಾಗಿರುವಂತೆ ಕಂಡುಬರುತ್ತದೆ.  ಇಂದು ಕೊಳ್ಳುಬಾಕ ಸಂಸ್ಕೃತಿಯನ್ನು ಕೈಗಾರೀಕರಣ ಹಾಗೂ ನಗರೀಕರಣ, ಮಾಧ್ಯಮಗಳ ಅಬ್ಬರದ ಜಾಹೀರಾತುಗಳು ಹೆಚ್ಚಿಸುತ್ತಿರುವ ಕಾರಣ ಪ್ಲಾಸ್ಟಿಕ್ ಬಳಕೆ ಎಲ್ಲ ಕ್ಷೇತ್ರಗಳಲ್ಲಿಯೂ ಆವರಿಸಿದೆ.  ಪ್ಲಾಸ್ಟಿಕ್ ನಿಷೇಧಿಸುವುದು ಇದಕ್ಕೆ ಪರಿಹಾರ ಅಲ್ಲವೇ ಅಲ್ಲ.
ಮೋದಿ ಸರ್ಕಾರ ಬಂದ ನಂತರ ಕಾಕತಾಳೀಯವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಇಂಧನ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂತು.  ಹೀಗಾಗಿ ಹಣದುಬ್ಬರ ಸ್ವಲ್ಪ ನಿಯಂತ್ರಣಕ್ಕೆ ಬಂದದ್ದೇ ಹೊರತು ಇದರಲ್ಲಿ ಮೋದಿ ಸರ್ಕಾರದ ಸಾಧನೆ ಏನೂ ಇಲ್ಲ.  ಒಂದು ವೇಳೆ ಪೆಟ್ರೋಲಿಯಂ ಇಂಧನ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಡಿಮೆಯಾಗದೇ ಇದ್ದಿದ್ದರೆ ದೇಶದಲ್ಲಿ ನಾಗರಕ ಅತೃಪ್ತಿ ಹೆಚ್ಚುತ್ತಿತ್ತು ಹಾಗೂ ಹಣದುಬ್ಬರವೂ ನಿಯಂತ್ರಣಕ್ಕೆ ಸಿಗದೇ ಜನರ ಬದುಕು ಇನ್ನಷ್ಟು ದುಸ್ತರವಾಗುತ್ತಿತ್ತು.  ಮೋದಿ ಸರ್ಕಾರ ಗ್ರಾಮೀಣ ಭಾರತದ ಅಭಿವೃದ್ಧಿಗೆ ಯಾವುದೇ ಯೋಜನೆಗಳನ್ನೂ ರೂಪಿಸಿಲ್ಲ.  ಅದರ ಗಮನ ನಗರ ಭಾರತದ ಅಭಿವೃದ್ಧಿ ಮಾತ್ರ.  ಇದೊಂದು ಪಾಶ್ಚಾತ್ಯ ದೇಶಗಳ ಅಂಧಾನುಕರಣೆಯೇ ಹೊರತು ಮತ್ತೇನೂ ಅಲ್ಲ.  ಹಿಂದೆ ನೆಹರೂರವರನ್ನು ಪಾಶ್ಚಾತ್ಯ ನಾಗರಿಕತೆಯ ಆರಾಧಕ ಹಾಗೂ ಪಾಶ್ಚಾತ್ಯ ಕೈಗಾರಿಕೀಕರಣದ ಅಂಧಾನುಯಾಯಿ ಎಂದು ಹಂಗಿಸುತ್ತಿದ್ದ ಸಂಘ ಪರಿವಾರವು ಈಗ ಮೋದಿ ಅದೇ ಪಾಶ್ಚಾತ್ಯ ಕೈಗಾರಿಕೀಕರಣ, ನಗರೀಕರಣವನ್ನು ಸರ್ವಶ್ರೇಷ್ಠ ಮಾದರಿ ಎಂದು ಅಂಧಾನುಕರಣೆ ಮಾಡುತ್ತಿರುವಾಗ ಬಾಯಿ ಮುಚ್ಚಿ ಕುಳಿತಿರುವುದು ವಿಪರ್ಯಾಸ.  ಹಳ್ಳಿಗಳಿಂದ ನಗರದತ್ತ ಜನರ ವಲಸೆ ತಡೆಯಲು ಮೋದಿ ಸರ್ಕಾರ ಯಾವುದೇ ಕ್ರಮಗಳನ್ನೂ ಕೈಗೊಳ್ಳುತ್ತಿಲ್ಲ.  ಜನ ಹಳ್ಳಿಗಳಲ್ಲಿ ಆರೋಗ್ಯಕರ ಪರಿಸರದಲ್ಲಿ ಬದುಕುವ ಸಾಧ್ಯತೆ ಇರುವಾಗಲೂ ನಗರಗಳೆಡೆಗೆ ವಲಸೆ ಬರುತ್ತಿದ್ದಾರೆ.  ಉದ್ಯೋಗ ಇಲ್ಲದೆ ಮಾತ್ರ ಜನ ವಲಸೆ ಬರುತ್ತಿರುವುದು ಅಲ್ಲ.  ಇಂದು ಗ್ರಾಮೀಣ ಭಾಗದಲ್ಲಿ ಬೇಕಾದಷ್ಟು ಜಮೀನು ಇರುವವರೂ ನಗರ ಜೀವನದ ಮೋಹಕ್ಕೆ ಒಳಗಾಗಿ ವಲಸೆ ಹೋಗುತ್ತಿದ್ದಾರೆ.  ಜನರ ಮಾನಸಿಕತೆ ಇದಕ್ಕೆ ಕಾರಣ.  ಇದನ್ನು ಬದಲಾಯಿಸುವ ನಿಟ್ಟಿನಲ್ಲಿ ಸ್ವದೇಶೀ ಸಂಸ್ಕೃತಿಯ ಬಗ್ಗೆ ಬೊಬ್ಬೆ ಹೊಡೆಯುವ ಸಂಘ ಪರಿವಾರದ ಗರಡಿಯಲ್ಲಿ ಬೆಳೆದಿರುವ ಮೋದಿ ಯಾವುದೇ ಕ್ರಮಗಳನ್ನೂ ಕೈಗೊಳ್ಳದೆ ಇರುವುದು ಶೋಚನೀಯವಲ್ಲದೆ ಮತ್ತೇನು?

ಭ್ರಷ್ಟಾಚಾರದ ಬಗ್ಗೆ ಲೋಕಸಭಾ ಚುನಾವಣೆಗೂ ಮೊದಲು ಭಾರೀ ಬೊಬ್ಬೆ ಹಾಕುತ್ತಿದ್ದ ಮೋದಿ ಈಗ ಅಧಿಕಾರಕ್ಕೆ ಬಂದ ನಂತರ ಸಿಬಿಐ ಎಂಬ ತನಿಖಾ ಸಂಸ್ಥೆಯನ್ನು ರಾಜಕೀಯಮುಕ್ತ ಗೊಳಿಸಿ ಸ್ವತಂತ್ರ ಸಂಸ್ಥೆಯನ್ನಾಗಿ ಮಾಡಲು ಯಾವುದೇ ಕ್ರಮ ಕೈಗೊಳ್ಳದೆ ಇರುವುದು ವಿಚಿತ್ರವಾಗಿದೆ.  ಸಿಬಿಐ ಎಂದರೆ ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂದು ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿಗರು ಈಗ ಅವರದೇ ಸರ್ಕಾರ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿರುವಾಗ ಏಕೆ ಅದನ್ನು ರಾಜಕೀಯಮುಕ್ತಗೊಳಿಸಿ ಸ್ವಾಯತ್ತ ಸಂಸ್ಥೆಯನ್ನಾಗಿ ಮಾಡುವುದಿಲ್ಲ?  ಚುನಾವಣೆಗೂ ಮೊದಲು ಭ್ರಷ್ಟಾಚಾರದ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದ ಮೋದಿ ಈಗ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಪಾಲ್ ವ್ಯವಸ್ಥೆಯನ್ನು ಏಕೆ ಶೀಘ್ರವಾಗಿ ತರುತ್ತಿಲ್ಲ?  ಭಾರತದಲ್ಲಿ ಏಕೆ ಎಲ್ಲ ಪಕ್ಷಗಳೂ ಅಧಿಕಾರಕ್ಕೆ ಬಂದ ನಂತರ ಮೊದಲು ತಾವೇ ಬೊಬ್ಬೆ ಹೊಡೆಯುತ್ತಿದ್ದ ವಿಷಯದ ಬಗ್ಗೆ ಮೌನವಾಗುತ್ತಿವೆ?  ದೆಹಲಿಯಲ್ಲಿ ಭಾರೀ ಭ್ರಷ್ಟಾಚಾರ ವಿರೋಧಿ ಹೋರಾಟದ ಫೋಸು ನೀಡಿ ಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವೂ ಈಗ ಬಲಿಷ್ಠ ಲೋಕಾಯುಕ್ತ ವ್ಯವಸ್ಥೆ ತರುವ ಬಗ್ಗೆ ಮಾತೇ ಆಡುತ್ತಿಲ್ಲ.  ಹಾಗಾದರೆ ಇವರ ಹೋರಾಟ ಎಲ್ಲ ಅಧಿಕಾರದ ಗದ್ದುಗೆ ಏರಲು ಮಾತ್ರ ಎಂದಾಯಿತೇ?  ಪ್ರತಿಭಾವಂತರಿಂದ ಹಾಗೂ ಸಾಂಪ್ರದಾಯಿಕ ರಾಜಕೀಯಕ್ಕೆ ಹೊರತಾದ ಹಿನ್ನೆಲೆಯಿಂದ ಬಂದ ಕೇಜ್ರಿವಾಲ್ ಹಾಗೂ ಸಂಗಡಿಗರೂ ಉಳಿದ ರಾಜಕಾರಣಿಗಳಂತೆ ಆದರೆ ಜನ ಯಾರನ್ನು ನಂಬಬೇಕು?  ಪ್ರತಿಭಾವಂತರೂ, ಯೋಚಿಸಬಲ್ಲ ಸಾಮರ್ಥ್ಯ ಉಳ್ಳವರೂ ಹೀಗೆ ಮಾಡಿದರೆ ಬದಲಾವಣೆ ತರುವುದು ಹೇಗೆ ಸಾಧ್ಯ?  ಭಾರತದಲ್ಲಿ ಮಾತ್ರ ಏಕೆ ಹೀಗಾಗುತ್ತಿದೆ ಎಂಬುದು ಯೋಚಿಸಬೇಕಾದ ವಿಚಾರ.

ಭಾರತದಲ್ಲಿ ಇಂದು ಪ್ರತಿಭಾವಂತರು ಹಣ ಮಾಡಿ ಐಶಾರಾಮದ ಜೀವನ ಕಳೆಯುವುದರಲ್ಲಿಯೇ ಜೀವನದ ಸಾರ್ಥಕ್ಯ ಕಾಣುತ್ತಿದ್ದಾರೆ.  ಒಟ್ಟೂ ಸಮಾಜವೂ ಇದೇ ದಿಕ್ಕಿನಲ್ಲಿಯೇ ಯೋಚಿಸುತ್ತಿದೆ.  ನಾಯಕತ್ವದ ಗುಣ ಉಳ್ಳವರು ಇನ್ನಷ್ಟು ಮತ್ತಷ್ಟು ಹಣ ಮಾಡುವುದರಲ್ಲಿ, ಭೌತಿಕ ಸಂಪತ್ತು ಕೂಡಿಹಾಕುವುದರಲ್ಲಿ ಮೈಮರೆತಿದ್ದಾರೆ.  ದೇಶದಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಸಂಸ್ಥೆಗಳನ್ನು ಕಟ್ಟಿದಂತೆ ರಾಜಕೀಯ ನಾಯಕತ್ವ ರೂಪಿಸುವ ಸಂಸ್ಥೆಗಳನ್ನು ಕಟ್ಟಬೇಕಾದ ಅಗತ್ಯ ಇದೆ.  ನಮ್ಮ ದೇಶದಲ್ಲಿ ಇಂಥ ಸಂಸ್ಥೆಗಳೇ ಇಲ್ಲ.  ಇದರ ಪರಿಣಾಮವೇ ನಮ್ಮಲ್ಲಿ ಪ್ರತಿಭಾವಂತ ಹಾಗೂ ಸಮತೂಕದ, ಸಮಚಿತ್ತದ, ಮುಂದಾಲೋಚನೆ ಇರುವ ನಾಯಕರ ಕೊರತೆ ಇಂದು ಕಂಡುಬರುತ್ತಿರುವುದು.   ದೇಶದ ಪ್ರತಿಭಾವಂತರು, ಮಾಧ್ಯಮಗಳು ಇಂದು ಈ ಬಗ್ಗೆ ಯೋಚಿಸಬೇಕಾದ ಅಗತ್ಯ ಇದೆ.
 

Comments

Submitted by DR.S P Padmaprasad Thu, 05/07/2015 - 17:08

ಹೊಸ‌ ಕೇ0ದ್ರ‌ ಸರ್ಕಾರದ‌ ಈ ಕೆಲವು ಕೆಲಸಗಳನ್ನು ನಾವು ಗಮನಿಸಬೇಕು:
1. ಕೋಲ್ ಬ್ಲಾಕ್ ಗ‌ಳನ್ನು ಮರು ಹ0ಚಿಕೆ ಮಾಡುವ‌ ಮೂಲಕ‌ ದೇಶದ‌ ಬೊಕ್ಕಸಕ್ಕೆ 1.6 ಲಕ್ಷ‌ ಕೋಟಿ ರೂ. ಸೇರುವ0ತೆ ಮಾಡಿದ್ದು.
2. ವಿದೇಶದಲ್ಲಿನ‌ ಕಪ್ಪು ಹಣ‌ ವಾಪಸ್ ತರುವುದಕ್ಕೆ ನಿರ0ತರ‌ ಪ್ರಯತ್ನ‌ ನಡೆಯುತ್ತಿದೆ. ಹಿ0ದಿನ‌ ಸರ್ಕಾರ‌ ಆ ಬಗ್ಗೆ ಸುಪ್ರೀ0 ಕೋರ್ಟ್ ನ‌ ನಿರ್ದೇಶನವಿದ್ದರೂ ವಿಶ್ಹೇಷ‌ ತನಿಖಾ ತ0ಡವನ್ನು ನೇಮಿಸಿರಲಿಲ್ಲ‌.ಈ ಸರ್ಕಾರ‌ ಕೆಲವೇ ತಿ0ಗಳಲ್ಲಿ ಅದನ್ನು ನೇಮಿಸಿತು. ಅದು ತನ್ನ‌ ಕೆಲಸ‌ ಮಾಡುತ್ತಿದೆ.
3 ಸ್ಮಾರ್ಟ್ ಸಿಟಿ ಎ0ದರೆ ಅದೇನೂ ಇ0ದ್ರನ‌ ಅಮರಾವತಿಯಲ್ಲ‌.ಸ್ವಚ್ಚತೆ, ಎಲೆಕ್ರ್ಟಾನಿಕ್ ಸ0ಪರ್ಕವ್ಯವಸ್ತೆ , ಮೂಲಭೂತ‌ ಸೌಕರ್ಯಗಳಿರುವ‌ ಪಟ್ಟಣ‌ ಎ0ದರ್ಥ‌.ನಮ್ಮ‌ ಕೆಲವು ಪಟ್ಟನಗಳಲ್ಲಿಯದರೂ ಅ0ಥ‌ ವ್ಯವಸ್ಥೆ ಅಗತ್ಯ‌.
3. ಬೆಳೆ ಹನಿಗೆ ಪರಿಹರ‌ ಕೊಡುವ‌ ಮಿತಿ ಮೊದಲು ಶೇ. 50 ಬೆಳೆ ಹನಿಯದವರಿಗೆ ಮಾತ್ರ‌ ಇತ್ತು. ಈ ಸರ್ಕರ‌ ಅದನ್ನು ಶೇ. 33 ಕ್ಕೆ ಇಳಿಸಿದೆ. ಇದರಿ0ದ‌ ಲಕ್ಷಾ0ತರ‌ ಜನರಿಗೆ ಉಪಯೋಗವಾಗುತ್ತದೆ.
4. ಆಮದು ಸಕ್ಕರೆಯ‌ ಮೇಲಿನ‌ ಆಮದು ಸು0ಕವನ್ನು ಶೇ. 40 ಕ್ಕೆ ಹೆಚ್ಚಿಸಿ, ಎಥೆನಾಲ್ ಉತ್ಪಾದನೆ ಮೆಲಿನ‌ ಶೇ. 12 ರ‌ ವ್ಯಾಟ್ ಅನ್ನು ತೆಗೆದು ಹಕಿರುವುದರಿ0ದ‌ ಸಕ್ಕರೆ ಕಾರ್ಖಾನೆಗಳವರು ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ. ಅವರು ರೈತರಿಗೆ ಕಬ್ಬಿನ‌ ಬಾಕಿ ಪಾವತಿ ಮಾಡಲು ಸಹಯವಾಗುತ್ತಿದೆ.
5. ಗ್ರಾಮೀಣ‌ ಪ್ರದೇಶಗಳಲ್ಲಿ ಇ0ಟರ್ನೆಟ್ ಸೌಲಬ್ಯಗಳನ್ನು ವಿಸ್ತರಿಸಲು ಸ0ಬ0ಧಿತ‌ ಇಲಾಕೆ ಈಗಾಗಲೇ ಕ್ರಮ‌ ಕೈಗೊ0ಡಿದೆ. ಆದರೆ ತಾ0ತ್ರಿಕ‌ ಸೌಲಬ್ಯಗಳನ್ನು ಪೂರೈಕೆ ಮಡಿಕೊಳ್ಳಲು ಸ್ವಲ್ಪ‌ ಕಲ‌ ಹಿಡಿಯುತ್ತದೆ. ಬಹುಶ: ಇನ್ನು ಒ0ದು ವರ್ಷ‌ ಅದಕ್ಕೆ ತಗುಲಬಹುದು.
6 ವಿದ್ಯುತ್ ಪೂರೈಕೆ ಉತ್ತಮೆಗೊಳ್ಳುವ0ತೆ ಮಾಡಲು ಸೋಲಾರ್ ವಿದ್ಯುತ್ ಉತ್ಪಾದನೆಗೆ ಉದ್ಯಮಿಗಳಿಗೆ ಉತ್ತೇಜಿಸಲಾಗುತ್ತಿದೆ. ಇದರಿ0ದ‌ ಗ್ರಾಮೀಣ‌ ಬಾಗದಲ್ಲಿ ಉದ್ಯೋಗಾವಕಾಶ‌ ಸ್ಱುಷ್ಟಿಯಗುತ್ತದೆ ಕೂಡಾ.
ಮೋದಿ ಸರ್ಕಾರವನ್ನು ನವು ಆರಿಸಿರುವುದು ಐದು ವರ್ಷ‌ ಅವಧಿಗೆ. ಒ0ದೇ ವರ್ಷದಲ್ಲಿ ಎಲ್ಲವನ್ನೂ ಸಾಧಿಸುತ್ತೇವೆ0ದು ಮೋದಿ ಹೇಳಿರಲಿಲ್ಲ‌.
ಕ್ಱುಷಿಯ‌ ಮೇಲೆ ಅವಲ0ಬಿತರಾಗಿರುವ‌ ಜನರ‌ ಸ0ಖ್ಯೆ ಕಡಿಮೆಯದಗ‌ ಮತ್ರ‌ ರೈತ‌ ಸುಖವಾಗಿರಲು ಸಾಧ್ಯ‌. ಅದಕ್ಕೆ ಕೈಗಾರಿಕೆಗಳು ಹೆಚ್ಚಬೇಕು. ಹಾಗಾಗಲು ಬ0ಡವಾಳಗಾರರನ್ನು ಉತ್ತೇಜಿಸುವ0ಥ‌ ಕೆ0ಪು ಪಟ್ಟಿ ರಹಿತವಾದ‌, ಕ್ಷಿಪ್ರವಾಗಿ ಕೆಲಸವಾಗುವ0ಥ‌ ಆಡಳಿತ‌ ವ್ಯವಸ್ಥೆ ಇರಬೇಕು. ಮೋದಿ ಸರ್ಕರ‌ ಅದಕ್ಕಗಿ ಪ್ರಯತ್ನಿಸುತ್ತಿದೆ. ಆದರೆ ಹಗಗಿ ಬಿಟ್ಟರೆ ಅವರಿಗೆ ಒಳ್ಳೇ ಹೆಸರು ಬ0ದು ಮು0ದಿನ‌ ಬಾರಿಯೂ ಗೆದ್ದು ಬಿಡುತ್ತಾರಲ್ಲಾ ಎ0ಬ‌ ಕಾರಣಕ್ಕಾಗಿ ಹೊಸ‌ ಕನೂನುಗಳು ಜರಿಗೆ ಬರದ0ತೆ ಪ್ರತಿಪಕ್ಷಗಳು ಲೋಕಸಬೆಯಲ್ಲಿ ನೋಡಿಕೊಳ್ಳುತ್ತಿವೆ.
ಸರ್ಕಾರಿ ನೌಕರರಲ್ಲಿ ಬ್ರಷ್ಟಾಚಾರ‌ ಹಾಗೇ ಇದೆ ಎ0ಬುದು ನಿಜ‌.ಆದರೆ ಇದರ‌ ವಿರುದ್ಧ‌ ದೂರು ಕೊಡಬೇಕಾದವರು ಯಾರು? ಲ0ಚ‌ ಕೊಟ್ಟು ಕೆಲಸ‌ ಮಡಿಸಿಕೊಳ್ಳುವವರೇ ಎಲ್ಲ‌ ಆಗಿರುವಾಗ‌ ನೌಕರರಾದರೂ ಯಕೆ ಬದಲಾಗುತ್ತಾರೆ?
ಸ್ವಚ್ಚತೆಯನ್ನು ಕಾಪಾಡುವಲ್ಲಿ, ಬ್ರಷ್ಟಾಚಾರ‌ ತಡೆಯುವಲ್ಲಿ ಜನರ‌ ಪತ್ರ‌ ದೊಡ್ಡದು. ಜನ‌ ಆ ಕೆಲಸ‌ ಮಾಡದಿದ್ದರೆ, ಯಾವ‌ ಸರ್ಕಾರವೂ ಏನೂ ಮಾಡಲಾಗದು.
ಕೇ0ದ್ರ‌ ಕಾನೂನು ಇಲಾಖೆ ಹಲವು ಕನುನುಗಳನ್ನು ರೂಪಿಸುವ‌ ಕೆಲಸ‌ ಮಡುತ್ತಿದೆ. ಆದ್ದರಿ0ದ‌ ಹೊಸ‌ ಲೋಕಪಾಲ‌ ಮಸೂದೆಯನ್ನು ಇನ್ನೂ ಮ0ಡಿಸಲು ಸಾಧ್ಯವಾಗಿರಲಿಕ್ಕಿಲ್ಲ‌. ಅದನ್ನು ಮ0ಡಿಸಿದರೂ ಕಾ0ಗ್ರೆ ಅದನ್ನು ವಿರೋಧಿಸುತ್ತದೆ.

Submitted by anand33 Fri, 05/08/2015 - 10:25

In reply to by DR.S P Padmaprasad

ಮೋದಿ ಅವರು ಆಡಳಿತದಲ್ಲಿ ಪಾರದರ್ಶಕತೆ ತರುವುದು, ಭ್ರಷ್ಟಾಚಾರದ ವಿರುದ್ಧ ಕ್ರಮದ ಭರವಸೆಯನ್ನು ಚುನಾವಣೆಯ ಮೊದಲು ಅಬ್ಬರದಿಂದ ಪ್ರಚಾರ ಮಾಡುತ್ತಿದ್ದರು. ಈಗ ಅಧಿಕಾರಕ್ಕೆ ಬಂದಾಗ ಇದೆಲ್ಲ ಅವರಿಗೆ ಮರೆತುಹೋಗಿರುವುದು ಶೋಚನೀಯ. ಕಳೆದ ಆಗಸ್ಟ್ ೨೦೧೪ರಿಂದ ಸಿಐಸಿ (ಮುಖ್ಯ ಮಾಹಿತಿ ಆಯುಕ್ತ) ಹುದ್ದೆ ಖಾಲಿ ಬಿಟ್ಟಿದ್ದಾರೆ, ಕಳೆದ ಸೆಪ್ಟೆಂಬರ್ ೨೦೧೪ರಿಂದ ಸಿವಿಸಿ (ಮುಖ್ಯ ವಿಜಿಲೆನ್ಸ್ ಆಯುಕ್ತ) ಹುದ್ದೆ ಖಾಲಿ ಬಿಟ್ಟಿದ್ದಾರೆ. ಚುನಾವಣಾ ಆಯೋಗದ ಸದಸ್ಯ ಹುದ್ದೆಗಳನ್ನು ಖಾಲಿ ಬಿಟ್ಟಿದ್ದಾರೆ. ಇದನ್ನು ತುಂಬಲು ಭಾರೀ ಸಮಯವೇನೂ ಬೇಕಾಗಿಲ್ಲ. ಲೋಕಾಯುಕ್ತವನ್ನು ನೇಮಕ ಮಾಡುವ ವಿಚಾರದಲ್ಲಿ ದಿವ್ಯ ಉದಾಸೀನ ಕಂಡುಬರುತ್ತಿದೆ. ಸಿಬಿಐ ಅನ್ನು ಸ್ವಾಯತ್ತ ಸಂಸ್ಥೆಯಾಗಿ ಮಾಡುವಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಇದೆಲ್ಲ ಈ ಒಂದು ವರ್ಷದಲ್ಲಿ ಧಾರಾಳವಾಗಿ ಮಾಡಲು ಸಾಧ್ಯವಿತ್ತು.

ಮೋದಿ ಗುಜರಾತಿನಲ್ಲಿ ಮುಖ್ಯಮಂತ್ರಿ ಆಗಿದ್ದಾಗಲೂ ಲೋಕಾಯುಕ್ತ ನೇಮಕ ಮಾಡದೆ ಹಲವಾರು ವರ್ಷ ಕಾಲಹರಣ ಮಾಡಿದ್ದರು ಮತ್ತು ಕೊನೆಗೆ ಲೋಕಾಯುಕ್ತ ಕಾಯಿದೆಗೆ ತಿದ್ದುಪಡಿ ತಂದು ಅದನ್ನು ಸರ್ಕಾರದ ಬಾಲಂಗೋಚಿ ಸಂಸ್ಥೆಯನ್ನಾಗಿ ಮಾಡಿ ದುರ್ಬಲಗೊಳಿಸಿದ ಇತಿಹಾಸ ಇದೆ. ಸರ್ಕಾರವು ಎಚ್ಚರದಿಂದ ನಡೆಯಬೇಕಾದರೆ ಅದರ ಕೆಲಸಗಳನ್ನು ತಪಾಸಣೆ ಮಾಡುವ ಸ್ವತಂತ್ರ ಸಂಸ್ಥೆಗಳು ಬೇಕಾಗುತ್ತವೆ. ಅವುಗಳನ್ನೇ ದುರ್ಬಲಗೊಳಿಸಿದರೆ ಅಥವಾ ನೇಮಕ ಮಾಡದೆ ಕಾಲಹರಣ ಮಾಡುವುದು ಪಾರದರ್ಶಕ ಆಡಳಿತದ ವಾಗ್ದಾನಕ್ಕೆ ವಿರುದ್ಧವಾಗುತ್ತದೆ.

ಮೋದಿ ಸರ್ಕಾರ ಕಲ್ಲಿದ್ದಲು ಬ್ಲಾಕ್ಗಳನ್ನು ಹರಾಜು ಮಾಡಿ ೧.೬ ಲಕ್ಷ ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ಸೇರುವಂತೆ ಮಾಡಿರಬಹುದು. ಕೇಂದ್ರದಲ್ಲಿ ಯಾವ ಸರ್ಕರವಿದ್ದರೂ ಇಂದು ಹಾಗೇ ಮಾಡಬೇಕಾಗುತ್ತಿತ್ತು ಏಕೆಂದರೆ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಚಾಟಿ ಬೀಸುವ ಹೆದರಿಕೆ ಇಂದು ಇದೆ. ಹಾಗಾಗಿ ಇದು ದೊಡ್ಡ ಸಾಧನೆ ಎನಿಸಿಕೊಳ್ಳಲಾರದು. ಇದರ ಶ್ರೇಯಸ್ಸು ಈ ವಿಚಾರದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಹೋರಾಡುತ್ತಿರುವ ಮಹನೀಯರಿಗೆ ಹೋಗಬೇಕು. ಅದೇ ರೀತಿ ಮೊಬೈಲ್ ತರಂಗಾಂತರ ಹರಾಜು ವಿಷಯದಲ್ಲಿ ಕೂಡ ಸರ್ಕಾರಕ್ಕೆ ದಕ್ಕಿದ ಹಣದ ಶ್ರೇಯಸ್ಸು ಸುಪ್ರೀಂ ಕೋರ್ಟಿನಲ್ಲಿ ಹೋರಾಡುತ್ತಿರುವ ಮಹನೀಯರಿಗೆ ಹೋಗುತ್ತದೆ. ಕಪ್ಪು ಹಣದ ವಿಚಾರದಲ್ಲಿಯೂ ವವಾಸ್ತವ ಇದಕ್ಕಿಂಥ ಭಿನ್ನವಾಗಿಲ್ಲ. ಮೋದಿ ಸರ್ಕಾರವೂ ಕೂಡ ಕಪ್ಪು ಹಣದ ವಿಚಾರದಲ್ಲಿ ಕಾಲಹರಣ ಮಾಡುವುದರಲ್ಲಿತ್ತು, ಸುಪ್ರೀ ಕೋರ್ಟ್ ಚಾಟಿ ಬೀಸಿದ ನಂತರ ವಿಧಿಯಿಲ್ಲದೇ ತನಿಖಾ ತಂಡ ರಚಿಸಿದೆ ಅಷ್ಟೇ. ಕಪ್ಪು ಹಣವು ಈಗಾಗಲೇ ನೇರ ವಿದೇಶಿ ಬಂಡವಾಳದ ರೂಪದಲ್ಲಿ ದೇಶದೊಳಕ್ಕೆ ನುಗ್ಗುತ್ತಿದೆ ಆದರೆ ಅದನ್ನು ಪತ್ತೆ ಮಾಡುವುದು ಸಾಧ್ಯವಾಗುತ್ತಿಲ್ಲ ಎಂದು ಪ್ರಶಾಂತ್ ಭೂಶಣ್ ಹೇಳಿದ್ದಾರೆ. ಅಲ್ಲಿಗೆ ಕಪ್ಪು ಹಣ ಬಿಳಿಯಾದಂತೆ.

ಮೊಬೈಲ್ ತರಂಗಾಂತರ ಹರಾಜಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಸರ್ಕಾರ ಸಂಗ್ರಹಿಸಿದೆ. ಇದರ ಒಂದು ಅಂಶವನ್ನು ಗ್ರಾಮೀಣ ಅಂತರ್ಜಾಲ ವ್ಯವಸ್ಥೆ ರೂಪಿಸಲು ಸರ್ಕಾರ ಬಳಸಬಹುದಾಗಿತ್ತು. ಈ ಹಣವನ್ನು ಬಳಸಿ ಗ್ರಾಮೀಣ ಪ್ರದೇಶಗಳಲ್ಲಿ ೩ಜಿ ಮೊಬೈಲ್ ಸೇವೆಗಳನ್ನು ಬಿಎಸ್ಸೆನ್ನೆಲ್ ಮೂಲಕ ನೀಡಲು ಆರು ತಿಂಗಳು ಸಾಕು. ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು ಅಷ್ಟೇ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್ಸೆನ್ನೆಲ್ ೨ಜಿ ಮೊಬೈಲ್ ಟವರುಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ೩ಜಿ ಸೌಲಭ್ಯವನ್ನು ಅಳವಡಿಸಲು ಬಹಳ ಖರ್ಚೇನೂ ಆಗಲಿಕ್ಕಿಲ್ಲ ಏಕೆಂದರೆ ಎಲ್ಲ ಮೂಲಭೂತ ಸೌಲಭ್ಯಗಳು ಈಗಾಗಲೇ ಇವೆ. ಹೊಸದಾಗಿ ಟವರ್ ನಿರ್ಮಾಣ ಮಾಡಬೇಕಾದ ಅಗತ್ಯವೇನೂ ಇಲ್ಲ .

ಮೋದಿ ಸರ್ಕಾರ ಬಂದ ನಂತರ ಗ್ರಾಮೀಣ ಬಿಎಸ್ಸೆನ್ನೆಲ್ ಸೇವೆಗಳು ಮತ್ತಷ್ಟು ಕಳಪೆಯಾಗಿವೆ. ಹೇಳುವವರು ಕೇಳುವವರು ಯಾರೂ ಇಲ್ಲದ ಅರಾಜಕತೆ ಹೆಚ್ಚಾಗಿದೆ. ಇದು ಎಂಥ ಆಡಳಿತವೋ ಮೋದಿಯವರೇ ಹೇಳಬೇಕು. ಕರೆಂಟು ಹೋದರೆ ಇಡೀ ಟೆಲಿಫೋನ್ ಎಕ್ಸ್ಚೇಂಜ್, ಅದರೊಡನೆ ಮೊಬೈಲ್, ಲ್ಯಾಂಡ್ಲೈನ್ ಫೋನ್, ಲ್ಯಾಂಡ್ಲೈನ್ ಬ್ರಾಡ್ಬ್ಯಾಂಡ್ ಎಲ್ಲವೂ ತಟಸ್ಥವಾಗುತ್ತವೆ. ಕರೆಂಟು ದಿನದಲ್ಲಿ ಎಷ್ಟು ಸಲ ಹೋಗುತ್ತದೆಯೋ ಅಷ್ಟು ಸಲ ಇವುಗಳು ಕೂಡ ತಟಸ್ಥವಾಗುತ್ತವೆ. ಮೋದಿ ಬರುವ ಮೊದಲು ಇಷ್ಟು ಅಧ್ವಾನ ಇರಲಿಲ್ಲ. ಸರ್ಕಾರದ ಬಳಿ ಯು. ಎಸ್. ಓ (ಯುನಿವರ್ಸಲ್ ಒಬ್ಲಿಗೆಶನ್ ಸರ್ವಿಸಸ್ ) ನಿಧಿ ಎಂದು ೨೫,೦೦೦ ಸಾವಿರ ಕೋಟಿ ರೂಪಾಯಿಗಳು ಕೊಳೆಯುತ್ತಿವೆ. ಈ ನಿಧಿಗೆ ಖಾಸಗಿ ಟೆಲಿ ಸಂಪರ್ಕ ಸಂಸ್ಥೆಗಳ ಲಾಭದ ಒಂದು ಅಂಶವನ್ನು ಗ್ರಾಮೀಣ ಸೇವೆ ನೀಡಲೆಂದೇ ಪಡೆಯಲಾಗುತ್ತದೆ. ಇದನ್ನು ಬಳಸಿ ಗ್ರಾಮೀಣ ಅಂತರ್ಜಾಲ ಸೇವೆಯನ್ನು ಉತ್ತಮಪಡಿಸಲು ಸರ್ಕಾರಕ್ಕೆ ಮನಸ್ಸಿದ್ದರೆ ಸಾಧ್ಯ. ಆದರೆ ಇಚ್ಛಾಶಕ್ತಿಯೇ ಇಲ್ಲದಿದ್ದರೆ ಏನು ಮಾಡುವುದು?

ಮೊಬೈಲ್ ತರಂಗಾಂತರ ಹರಾಜಿನಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ಸರ್ಕಾರ ಸಂಗ್ರಹಿಸಿದೆ. ಇದರ ಒಂದು ಅಂಶವನ್ನು ಗ್ರಾಮೀಣ ಅಂತರ್ಜಾಲ ವ್ಯವಸ್ಥೆ ರೂಪಿಸಲು ಸರ್ಕಾರ ಬಳಸಬಹುದಾಗಿತ್ತು. ಈ ಹಣವನ್ನು ಬಳಸಿ ಗ್ರಾಮೀಣ ಪ್ರದೇಶಗಳಲ್ಲಿ ೩ಜಿ ಮೊಬೈಲ್ ಸೇವೆಗಳನ್ನು ಬಿಎಸ್ಸೆನ್ನೆಲ್ ಮೂಲಕ ನೀಡಲು ಆರು ತಿಂಗಳು ಸಾಕು. ಸರ್ಕಾರಕ್ಕೆ ಇಚ್ಛಾಶಕ್ತಿ ಬೇಕು ಅಷ್ಟೇ. ಈಗಾಗಲೇ ಗ್ರಾಮೀಣ ಪ್ರದೇಶಗಳಲ್ಲಿ ಬಿಎಸ್ಸೆನ್ನೆಲ್ ೨ಜಿ ಮೊಬೈಲ್ ಟವರುಗಳು ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ೩ಜಿ ಸೌಲಭ್ಯವನ್ನು ಅಳವಡಿಸಲು ಬಹಳ ಖರ್ಚೇನೂ ಆಗಲಿಕ್ಕಿಲ್ಲ ಏಕೆಂದರೆ ಎಲ್ಲ ಮೂಲಭೂತ ಸೌಲಭ್ಯಗಳು ಈಗಾಗಲೇ ಇವೆ. ಹೊಸದಾಗಿ ಟವರ್ ನಿರ್ಮಾಣ ಮಾಡಬೇಕಾದ ಅಗತ್ಯವೇನೂ ಇಲ್ಲ .

ಮೋದಿ ಸರ್ಕಾರ ಬಂದ ನಂತರ ಗ್ರಾಮೀಣ ಬಿಎಸ್ಸೆನ್ನೆಲ್ ಸೇವೆಗಳು ಮತ್ತಷ್ಟು ಕಳಪೆಯಾಗಿವೆ. ಹೇಳುವವರು ಕೇಳುವವರು ಯಾರೂ ಇಲ್ಲದ ಅರಾಜಕತೆ ಹೆಚ್ಚಾಗಿದೆ. ಇದು ಎಂಥ ಆಡಳಿತವೋ ಮೋದಿಯವರೇ ಹೇಳಬೇಕು. ಕರೆಂಟು ಹೋದರೆ ಇಡೀ ಟೆಲಿಫೋನ್ ಎಕ್ಸ್ಚೇಂಜ್, ಅದರೊಡನೆ ಮೊಬೈಲ್, ಲ್ಯಾಂಡ್ಲೈನ್ ಫೋನ್, ಲ್ಯಾಂಡ್ಲೈನ್ ಬ್ರಾಡ್ಬ್ಯಾಂಡ್ ಎಲ್ಲವೂ ತಟಸ್ಥವಾಗುತ್ತವೆ. ಕರೆಂಟು ದಿನದಲ್ಲಿ ಎಷ್ಟು ಸಲ ಹೋಗುತ್ತದೆಯೋ ಅಷ್ಟು ಸಲ ಇವುಗಳು ಕೂಡ ತಟಸ್ಥವಾಗುತ್ತವೆ. ಮೋದಿ ಬರುವ ಮೊದಲು ಇಷ್ಟು ಅಧ್ವಾನ ಇರಲಿಲ್ಲ. ಸರ್ಕಾರದ ಬಳಿ ಯು. ಎಸ್. ಓ (ಯುನಿವರ್ಸಲ್ ಒಬ್ಲಿಗೆಶನ್ ಸರ್ವಿಸಸ್ ) ನಿಧಿ ಎಂದು ೨೫,೦೦೦ ಸಾವಿರ ಕೋಟಿ ರೂಪಾಯಿಗಳು ಕೊಳೆಯುತ್ತಿವೆ. ಈ ನಿಧಿಗೆ ಖಾಸಗಿ ಟೆಲಿ ಸಂಪರ್ಕ ಸಂಸ್ಥೆಗಳ ಲಾಭದ ಒಂದು ಅಂಶವನ್ನು ಗ್ರಾಮೀಣ ಸೇವೆ ನೀಡಲೆಂದೇ ಪಡೆಯಲಾಗುತ್ತದೆ. ಇದನ್ನು ಬಳಸಿ ಗ್ರಾಮೀಣ ಅಂತರ್ಜಾಲ ಸೇವೆಯನ್ನು ಉತ್ತಮಪಡಿಸಲು ಸರ್ಕಾರಕ್ಕೆ ಮನಸ್ಸಿದ್ದರೆ ಸಾಧ್ಯ. ಆದರೆ ಇಚ್ಛಾಶಕ್ತಿಯೇ ಇಲ್ಲದಿದ್ದರೆ ಏನು ಮಾಡುವುದು?

Submitted by DR.S P Padmaprasad Sat, 05/09/2015 - 18:21

In reply to by anand33

ಮಿತ್ರರೆ,
ವಿದ್ಯುತ್ ಇಲ್ಲದಿದ್ದಾಗ‌ ಫೋನ್ ಕೆಟ್ಟು ಅ0ತರ್ಜಾಲ‌ ಬ0ದಾಗುವುದು ನಿಜ‌.ಆದರೆ ಅದಕ್ಕೆ ಮೋದಿ ಸರ್ಕಾರ‌ ಹೇಗೆ ಹೊಣೆಯಾಗುತ್ತದೆ? ವಿದ್ಯುತ್ ಉತ್ಪಾದನೆ ಹೆಚ್ಚಾಗಿ ರಾಜ್ಯಕ್ಕೆ ಸೇರಿದ‌ ವಿಷಯ‌. ಕೇ0ದ್ರವು ಸೋಲಾರ್ ವಿದ್ಯುತ್ ಬಗ್ಗೆ ವಿಸ್ತಾರವಾದ‌ ಯೋಜನೆ ರೂಪಿಸುತ್ತಿದೆ. ರಾಜ್ಯಗಳ‌ ವಿದ್ಯುತ್ ಯೋಜನೆಗೆ ಕೇ0ದ್ರವು ಬೇಗನೆ ಅನುಮತಿಸುವ‌, ಹಣಕಾಸು ನೆರವು ನೀಡುವ‌ ಕೆಲಸ‌ ಮಾಡಬಹುದು.
ಆದರೆ ರಾಜ್ಯಗಳೂ ಹೇಗೆ ಮಾತಿಗೆ ತಪ್ಪಿ ವರ್ತಿಸುತ್ತವೆ ನೋಡಿ. ತಮಿಳುನಾಡಿನಲ್ಲಿ ಷರತ್ತಿಗೊಳಪಟ್ಟು ಕೇ0ದ್ರವು ಕೂಡ0ಕುಳ0 ಸ್ಥಾವರವನ್ನು ಸ್ಥಾಪಿಸಿತು. ಕಾರ್ಯಾರ0ಭ‌ ಮಾಡುವ‌ ಹ0ತಕ್ಕೆ ಬ0ದಾಗ‌ ಅಧಿಕಾರಕ್ಕೆ ಬ0ದ‌ ಜಯಲಲಿತಾ ಸರ್ಕಾರ‌ ಪೂರ್ಣ‌ ವಿದ್ಯುತ್ ತನಗೇ ಬೇಕೆ0ದು ತಕರಾರು ತೆಗೆಯಿತು.( ಆ ಯೋಜನೆ ಹಿ0ದಿನ‌ ಸರ್ಕಾರದಲ್ಲೇ ಪೂರ್ಣಗೊ0ಡಿತ್ತು). ಆನ0ತರ‌ ಯಾವುದೋ ರಾಜಿ ಸೂತ್ರದ‌ ಮೇಲೆ ಹ0ಚಿಕೆ ನಡೆಯಿತೆನ್ನಿ.ಯಾವುದೆ ಪಕ್ಷದ‌ ಸರ್ಕಾರವಿರಲಿ, ಒಪ್ಪ0ದಗಳನ್ನು ಮುರಿದರೆ ಹೇಗೆ?
ಹಳ್ಳಿಗಳಿಗೆ 3ಜಿ ತರುವುದಕ್ಕೆ ತಾ0ತ್ರಿಕವಾಗಿ ಸುಲಬವಿರಬಹುದು. ಆದರೆ ಅದಕ್ಕೆ ಸಬ0ಧಿಸಿದ‌ ನೀತಿಯಲ್ಲೇ ಮಾರ್ಪಾಟಿನ‌ ಅಗತ್ಯವಿದ್ದರೆ ತಡವಾದೀತು. ಆದರೆ ಕೇ0ದ್ರವು ಸ0ಸತ್ತಿನಲ್ಲಿ ಚರ್ಚೆಯ‌ ಸ0ದರ್ಬದಲ್ಲಿ ಕೊಟ್ಟ‌ ಉತ್ತರದಲ್ಲಿ ಹಳ್ಳಿಗಳ್ಗೂ ಇ0ಟರ್ನೆಟ್ ಸ0ಪರ್ಕಾವನ್ನು ವಿಸ್ತರಿಸುವ‌ ತನ್ನ‌ ಗುರಿಯನ್ನು ಸ್ಪಷ್ಟಪಡಿಸಿದೆ.ನಮ್ಮ‌ ಹಳ್ಳಿಗಳಿಗೆ ಸರಿಯಾದ‌
ರಸ್ತೆ, ವಿದ್ಯುತ್, ಆಸ್ಪತ್ರೆಗಳೇ ಇಲ್ಲವಲ್ಲ‌?
ಲೋಕಪಾಲ‌ ವಿಧೇಯಕ‌ ಮ0ಡನೆಯಾಗಿಲ್ಲ‌,ನಿಜ‌. ಸಿ.ಬಿ ಅಯ್ ಅನ್ನು ಸ್ವಾಯತ್ತ‌ ಸ0ಸ್ಥೆಯಾಗಿಸುವುದು ಇದರ‌ ಒ0ದು ಭಾಗವೇ ಆಗಿದೆ‍‍‍, ಅಣ್ಣಾ ಹಜಾರೆಯವ‌ ಬೇಡಿಕೆಯ0ತೆ.ಇದು ಚರ್ಚಾರ್ಹವಾದ‌ ವಿಷಯ‌. ಈ ವಿಷಯದ‌ ಬಗ್ಗೆ ಒಮ್ಮತದ‌ ನಿಲುವು ಅಗತ್ಯ‌. ಕೇವಲ‌ ಮಸೂದೆ ಮ0ಡಿಸುವುದರಿ0ದ‌ ಪ್ರಯೋಜನವಾಗದು. ಆದರೆ ಈಗ‌ ನಾವು ತಿಳಿಯಬೇಕಾಗಿರುವುದು‍ ಕೊನೆಯ‌ ಪಕ್ಷ‍ ಈ ಮಸೂದೆಯ‌ ಪರಿಷ್ಕರಣೆ ಹಾಗೂ ಒಮ್ಮತ‌ ಮೂಡಿಸುವ‌ ಪ್ರಯತ್ನಗಳಾದರೂ ನಡೆಯುತ್ತಿವೆಯೆ ಎ0ಬುದು. ಆ ವಿಷಯದಲ್ಲಿ ಇನ್ನೂ ಯಾವ‌ ಸ0ಗತಿಯೂ ಬಹಿರ0ಗವಾಗಿಲ್ಲ‌. ನಾವೇ ಯಾರಾದರೂ ಸ0ಸದರಿಗೆ ಹೇಳಿ ಸ0ಸತ್ತಿನಲ್ಲಿ ಪ್ರಶ್ನೆ ಎತ್ತಿಸಬೇಕು.
ಗುಜರಾತಿನಲ್ಲಿ ಹಲವು ವರ್ಷ‌ ಕಾಲ‌ ಲೋಕಾಯುಕ್ತ‌ ಹುದ್ದೆ ಖಾಲಿ ಇದ್ದದ್ದು ನಿಜ‌. ಅದಕ್ಕೆ ಕಾರಣ‍ ಆಗಿನ‌ ಅಲ್ಲಿನ‌ ರಾಜ್ಯಪಾಲರು. ಸರ್ಕಾರ‌ ಕಳಿಸಿದ‌ ಹೆಸರನ್ನು ಅವರು ಒಪ್ಪದೆ, ಸೂಕ್ತ‌ ವ್ಯಕ್ತಿಯನ್ನು ಸರ್ಕರಕ್ಕೆ ಶಿಫಾರಸು ಮಾಡುವ‌ ಬದಲು ತಾವೇ ನೇರವಾಗಿ ನೇಮಕ‌ ಮಾಡಲು ಹೊರಟರು ಯಾವ‌ ಸರ್ಕಾರ‌ ತಾನೇ ಇದನ್ನು ಸಹಿಸೀತು.?
ಬ್ರಷ್ಟಾಚಾರದ‌ ಬಗ್ಗೆ ಮೊದಲು ಮತಾಡುತ್ತಿದ್ದಷ್ಟು ಈಗ‌ ಮೋದಿ ಮಾತಾಡುತ್ತಿಲ್ಲ‌ ಎ0ಬುದು ನಿಜ‌. ಯಾಕೆ0ದರೆ ಈಗ‌ ಅವರು ಬರೀ ಮಾತಾಡಿದರೆ ನಾವು ಒಪ್ಪುವಿದಿಲ್ಲ‌. ಕೆಲಸ‌ ಮಾಡಿ ತೋರಿಸುವುದು ಬೇಕಾಗಿದೆ. ಆದ್ದರಿ0ದಲೇ ಮೋದಿ ಸರ್ಕಾರ‌ ಕೆಲಸದಲ್ಲಿ ತೊಡಗಿದೆ. ಅದರಲ್ಲಿರುವ‌ ಕೆಲವು ಕಷ್ಟ‌ಗಳನ್ನು ಹೊರಗೆ ಹೇಳುತ್ತಿಲ್ಲ‌ ಅಷ್ಟೆ.
ಸುಪ್ರೀಮ್ ಕೋರ್ಟಿನ‌ ಆದೇಶದ‌ ಮೇರೆಗೆ ತನಿಖಾ ತ0ದ‌ ಹಗೂ ಕಲ್ಲಿದ್ದಲು ಹರಾಜುಗಳನ್ನು ನಡೇಸಿದರೆ0ಬುದು ನಿಜ‌. ಆದರೆ ಮುಚ್ಚಿಹಕುವ‌ ಉದ್ದೇಸಶವೇ ಇದ್ದಿದ್ದರೆ ಅದರಲ್ಲಿಯೂ ಹುನ್ನಾರ‌ ಮಡಲು ಸಾಧ್ಯವಿತ್ತು.ಹಿ0ದೆ ಸರ್ಕರಗಳು ಹಾಗೆ ಮಾಡಿದ‌ ಅನೇಕ‌ ಉದಾಹರಣೆಗಳಿವೆ. ಈ ಶ್ರೇಯಸ್ಸಿನ‌ ಗಣನೀಯ‌ ಭಾಗ‌ ಹೋರಾಟಗಾರರಿಗೆ ಹೋಗಬೇಕೆ0ಬುದೂ ನಿಜವೇ. ಕಲ್ಲಿದ್ದಲು ಬ್ಲಾಕ್ ಹಗರಣವನ್ನು ಹಿ0ದೆ ಬಿ. ಜೆ. ಪಿ. ಕೂಡಾ ಸ0ಸತ್ತಿನಲ್ಲಿ ಪ್ರಸ್ತಾಪಿಸಿ ವಿರೋಧಿಸಿತ್ತು ಎ0ಬುದು ಸಹ‌ ನೆನಪಿಡಬೇಕಾದ‌ ಅ0ಶ‌.
ನಾವು ಆಲೋಚಿಸಿದಷ್ಟು ವೇಗವಾಗಿ ನಮ್ಮ‌ ಮನೆ ಕೆಲಸಗಳನ್ನೇ ಮಾಡಿಕೊಳ್ಳಲಾಗುವುದಿಲ್ಲ‌. ಇನ್ನು ಸಾವಿರಾರು ಸಿಕ್ಕುಗಳಿರುವ‌ ಕೇ0ದ್ರ‌ ಸರ್ಕಾರದ‌ ಕೆಲಸಗಳು ನಾವು ಮಾತಾಡುವಷ್ಟು ವೇಗವಾಗಿ ಆಗಬೇಕೆ0ದರೆ ಹೆಗೆ?

Submitted by anand33 Mon, 05/11/2015 - 10:44

In reply to by DR.S P Padmaprasad

ವಿದ್ಯುತ್ ಇಲ್ಲದಿದ್ದಾಗ ಬಿಎಸ್ಸೆನ್ನೆಲ್ ಫೋನ್, ಮೊಬೈಲ್, ಲ್ಯಾಂಡ್ಲೈನ್ ಬ್ರಾಡ್ಬ್ಯಾಂಡ್ ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ ತಟಸ್ಥವಾಗುವುದಕ್ಕೆ ಮೋದಿ ಸರ್ಕಾರದ ನಿರ್ಲಕ್ಷ್ಯವೇ ಕಾರಣ. ಮೋದಿ ಅಧಿಕಾರಕ್ಕೆ ಬರುವುದಕ್ಕೆ ಮೊದಲು ಹೀಗಾಗುತ್ತಿರಲಿಲ್ಲ ಎಂಬುದು ನನ್ನ ಅನುಭವ. ವಿದ್ಯುತ್ ಇಲ್ಲದಿದ್ದರೂ ಏರ್ ಟೆಲ್, ಐಡಿಯಾ ಮೊದಲಾದ ಕಂಪನಿಗಳ ಮೊಬೈಲ್ ಟವರುಗಳ ಸಿಗ್ನಲ್ಲುಗಳು ಒಮ್ಮೆಯೂ ಗ್ರಾಮೀಣ ಪ್ರದೇಶಗಳಲ್ಲಿಯೂ ಒಂದು ನಿಮಿಷವೂ ಇಲ್ಲದಾಗುವುದಿಲ್ಲ. ಅವರ ಬಳಿ ವಿದ್ಯುತ್ ಇಲ್ಲದಿರುವಾಗ ಕಾರ್ಯನಿರ್ವಹಿಸಲು ಸ್ವಯಂಚಾಲಿತ ಸೂಕ್ತ ಬ್ಯಾಟರಿ, ಜನರೇಟರ್ ಸೌಲಭ್ಯ ಇದೆ. ಬಿಎಸ್ಸೆನ್ನೆಲ್ ಬಳಿಯೂ ಇಂಥ ಸೌಲಭ್ಯ ಇದೆ ಆದರೆ ಅದು ಕೆಟ್ಟು ಹೋದಾಗ ಅದನ್ನು ಕೂಡಲೇ ರಿಪೇರಿ ಮಾಡುವ ಅಥವಾ ಹೊಸದನ್ನು ಅಳವಡಿಸುವಲ್ಲಿ ನಿರ್ಲಕ್ಷ್ಯ ಇದೆ. ಹೀಗಾಗಿ ಕರೆಂಟು ಹೋದ ಕೂಡಲೇ ಗ್ರಾಮೀಣ ಪ್ರದೇಶಗಳಲ್ಲಿ ಅಲ್ಲಲ್ಲಿ ಬಿಎಸ್ಸೆನ್ನೆಲ್ ಸಿಗ್ನಲ್ ಆಗಾಗ ತಟಸ್ಥವಾಗುತ್ತದೆ. ಬಿಎಸ್ಸೆನ್ನೆಲ್ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಯಾದ ಕಾರಣ ಇಂಥ ಅವ್ಯವಸ್ಥೆಗೆ ಮೋದಿ ಸರ್ಕಾರವು ಹೊಣೆಯಾಗುತ್ತದೆ. ಬಿಎಸ್ಸೆನ್ನೆಲ್ ಸಂಸ್ಥೆಯನ್ನು ಆಧುನಿಕ ಉಪಕರಣಗಳಿಂದ ಸಜ್ಜುಗೊಳಿಸದೆ ಸಂಸ್ಥೆ ನಷ್ಟದೆಡೆಗೆ ಸಾಗುತ್ತಿದೆ. ಮೊಬೈಲ್ ಸೌಲಭ್ಯ(೨ಜಿ ಮೊಬೈಲ್) ಬಂದಾಗ ಬಿಎಸ್ಸೆನ್ನೆಲ್ ಅದನ್ನು ಅಳವಡಿಸಿಕೊಳ್ಳುವಲ್ಲಿ ವಿಳಂಬ ಧೋರಣೆ ಅನುಸರಿಸಿತು. ಹೀಗಾಗಿ ಖಾಸಗಿ ಮೊಬೈಲ್ ಸಂಸ್ಥೆಗಳ ಮೊಬೈಲ್ ಸೇವೆಗಳಿಗೆ ಗ್ರಾಹಕರು ವರ್ಗಾವಣೆಯಾದರು. ಈಗ ೩ಜಿ ತಂತ್ರಜ್ಞಾನ ಹಾಗೂ ಡಾಟಾ ಸೇವೆಗಳ ಯುಗ ಆರಂಭವಾಗಿದೆ. ಆದರೆ ಬಿಎಸ್ಸೆನ್ನೆಲ್ ಎಂದಿನಂತೆ ನಿದ್ರಾವಸ್ಥೆಯಲ್ಲಿದೆ. ಉಳಿದ ಖಾಸಗಿ ಮೊಬೈಲ್ ಸಂಸ್ಥೆಗಳು ೩ಜಿ ಸೌಲಭ್ಯ ಆರಂಭಿಸಿ ವರ್ಷಗಳ ನಂತರ ಬಿಎಸ್ಸೆನ್ನೆಲ್ ಹಾಗೆ ಆಕಳಿಸುತ್ತಾ ೩ಜಿ ಸೌಲಭ್ಯವನ್ನು ಆರಂಭಿಸುತ್ತದೆ. ಅಷ್ಟರಲ್ಲಾಗಲೇ ಗ್ರಾಹಕರು ಖಾಸಗಿ ಸಂಸ್ಥೆಗಳಿಗೆ ಬದಲಾವಣೆಯಾಗಿ ಒಗ್ಗಿ ಹೋಗಿರುತ್ತಾರೆ. ಬಿಎಸ್ಸೆನ್ನೆಲ್ ಸಂಸ್ಥೆಯನ್ನು ಆಧುನಿಕ ತಂತ್ರಜ್ಞಾನ ಅಳವಡಿಸಿ ಕಾಲಕ್ಕೆ ತಕ್ಕ ಬದಲಾವಣೆ ಮಾಡುವುದು ಸರ್ಕಾರಕ್ಕೆ ಸಾಧ್ಯವಿದೆ. ಆದರೆ ಅದು ಖಾಸಗಿ ಸಂಸ್ಥೆಗಳಿಗೆ ಅನುಕೂಲವಾಗುವಂಥ ನೀತಿಯನ್ನು ಅನುಸರಿಸುವಂತೆ ಕಾಣುತ್ತಿದೆ. ಸರ್ಕಾರದ ಬಳಿ ಯು. ಎಸ್. ಓ. (ಯುನಿವರ್ಸಲ್ ಸರ್ವಿಸಸ್ ಒಬ್ಲಿಗೆಶನ್) ನಿಧಿ ಎಂದು ೨೫,೦೦೦ ಸಾವಿರ ಕೋಟಿ ರೂಪಾಯಿಗಳು ಕೊಳೆಯುತ್ತಿವೆ. ಇದು ಗ್ರಾಮೀಣ ಸಂಪರ್ಕ ಸೇವೆ ಸುಧಾರಣೆಗೆಂದೇ ಮೀಸಲಾಗಿರುವ ನಿಧಿ. ಇದನ್ನು ಬಳಸಿಕೊಳ್ಳದೆ ಸರ್ಕಾರ ಗ್ರಾಮೀಣ ಸಂಪರ್ಕ ಹಾಗೂ ಅಂತರ್ಜಾಲ ವ್ಯವಸ್ಥೆ ಸುಧಾರಣೆ ಮಾಡುವಲ್ಲಿ ದಿವ್ಯ ಉದಾಸೀನ ತೋರಿಸುತ್ತಿದೆ. ಇದು ಮೋದಿ ಅಧಿಕಾರಕ್ಕೆ ಬರುವ ಮೊದಲು ನೀಡಿದ 'ಒಳ್ಳೆಯ ದಿನಗಳ' ಆಶ್ವಾಸನೆಗೆ ವಿರುದ್ಧವಾಗಿದೆ.

ಗುಜರಾತಿನಲ್ಲಿ ಲೋಕಾಯುಕ್ತ ಕಾಯಿದೆಗೆ ಮೋದಿ ಸರ್ಕಾರ ತಿದ್ದುಪಡಿ ತಂದು ಅದನ್ನು ದುರ್ಬಲಗೊಳಿಸಿರುವುದು ಒಳ್ಳೆಯ ಹಾಗೂ ಪಾರದರ್ಶಕ ಆಡಳಿತದ ತತ್ವಕ್ಕೆ ವಿರುದ್ಧವಾಗಿದೆ. ಅಲ್ಲಿ ಈಗ ಲೋಕಾಯುಕ್ತ ನೇಮಕದಲ್ಲಿ ಸರ್ಕಾರಕ್ಕೆ ಬೇಕಾದ ವ್ಯಕ್ತಿಯನ್ನು ನೇಮಿಸುವ ಅಧಿಕಾರ ಬಂದಿದೆ. ಹೀಗಾಗಿ ಲೋಕಾಯುಕ್ತ ಇದ್ದೂ ಇಲ್ಲದಂತೆ ಆಗಿದೆ.

ಗುಜರಾತಿನಲ್ಲಿ ಲೋಕಾಯುಕ್ತ ಕಾಯಿದೆಗೆ ಮೋದಿ ಸರ್ಕಾರ ತಿದ್ದುಪಡಿ ತಂದು ಅದನ್ನು ದುರ್ಬಲಗೊಳಿಸಿರುವುದು ಒಳ್ಳೆಯ ಹಾಗೂ ಪಾರದರ್ಶಕ ಆಡಳಿತದ ತತ್ವಕ್ಕೆ ವಿರುದ್ಧವಾಗಿದೆ. ಅಲ್ಲಿ ಈಗ ಲೋಕಾಯುಕ್ತ ನೇಮಕದಲ್ಲಿ ಸರ್ಕಾರಕ್ಕೆ ಬೇಕಾದ ವ್ಯಕ್ತಿಯನ್ನು ನೇಮಿಸುವ ಅಧಿಕಾರ ಬಂದಿದೆ. ಹೀಗಾಗಿ ಲೋಕಾಯುಕ್ತ ಇದ್ದೂ ಇಲ್ಲದಂತೆ ಆಗಿದೆ.