ಪರಿಪೂರ್ಣ ಆನಂದ

ಪರಿಪೂರ್ಣ ಆನಂದ

ಸುಖ ಬೇಕು ಮನುಜನಿಗೆ ದುಃಖ ಬೇಡ

ಸುಖಿಯು ತಾ ಹೆಚ್ಚು ಸುಖ ಬಯಸುವನು |

ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು

ಸುಖವ ನಿನ್ನೊಳಗೆ ಅರಸು ಮೂಢ ||

    'ಆ ಆನಂದ ಪರಮೋಚ್ಛ, ಅದು ಪರಿಪೂರ್ಣ, ಅದು ಅಖಂಡ, ಶಾಶ್ವತ, ಅದು ಸಚ್ಚಿದಾನಂದ!'- ಪರಮಾತ್ಮನನ್ನು, ಪರಮಾನಂದನನ್ನು ಹೀಗೆ ವರ್ಣಿಸುತ್ತಾರೆ. ನಿಜವಾದ ಆನಂದ ಶಾಶ್ವತವಾದದ್ದಾದರೆ, ಅದೇ ಆನಂದ ಅನ್ನುವುದಾದರೆ ನಾವು ವಿಷಯೋಪಭೋಗಗಳಲ್ಲಿ, ಇನ್ನಿತರ ಬಾಹ್ಯ ಸಂಗತಿಗಳಲ್ಲಿ ಸಂತೋಷ ಕಾಣುತ್ತೇವಲ್ಲಾ, ಇದ ಹೇಗೆ? ಅಶಾಶ್ವತವಾದ ಸಂಗತಿಗಳಲ್ಲಿ ಆನಂದವಿರುವುದಿಲ್ಲವೆಂದಾದರೆ, ಅಂತಹುದರಲ್ಲಿ ಆನಂದ ಕಾಣಸಿಗುವುದರಲ್ಲಿ ಏನೋ ರಹಸ್ಯವಿರಬೇಕು. ಅದೇನಿರಬಹುದು? ನಶ್ವರವಾದ ಸಂಗತಿಗಳಲ್ಲಿ ಆನಂದ ಸಿಗುವುದೇ ಇಲ್ಲವೆಂದಾದರೆ ಯಾರೂ ಸಹ ಐಹಿಕ ಸುಖ-ಭೋಗಗಳಲ್ಲಿ ತೊಡಗುವುದೇ ಇಲ್ಲವಲ್ಲವೇ? ನಿಜಸಂಗತಿಯೆಂದರೆ, ಪರಮಾನಂದದ ಅಸ್ತಿತ್ವ ಪ್ರತಿಯೊಂದರಲ್ಲೂ ಒಂದಲ್ಲಾ ಒಂದು ರೀತಿಯಲ್ಲಿ ಕಂಡುಬರುತ್ತದೆ. ಈ ರೀತಿ ಕಂಡುಬರುವ ಸಂತೋಷ ಅಥವ ಆನಂದದ ಹಿಂದೆ ಆನಂದದ ದೊಡ್ಡ ಸಂಗ್ರಹವೇ ಇದೆಯೆಂದು ತೋರಿಸಿಕೊಡುವ ರೀತಿ ಇದಾಗಿದೆ. ನಶ್ವರವಾದ ವಿಷಯಗಳಲ್ಲಿ ಸಿಗುವ ಅಲ್ಪ ಮತ್ತು ಕ್ಷಣಿಕ ಆನಂದದ ಘಳಿಗೆಗಳಲ್ಲೂ ಆನಂದದ ಪರಿಪೂರ್ಣ ತೋರಿಕೆಯ ಅನುಭವವಾಗುತ್ತದೆ. ಪರಿಪೂರ್ಣ ಎಂದು ಅನ್ನಿಸುವ ಎಲ್ಲಾ ಸಂಗತಿಗಳಲ್ಲೂ ಆನಂದ ಎನ್ನುವುದು ಇದ್ದೇ ಇರುತ್ತದೆ.

     ಪ್ರಾಪಂಚಿಕ ಆನಂದ ಬಯಸುವವರು ಮತ್ತು ಬಯಸುವ ವಿಷಯದ ಸಂಗಮವಾದಾಗ ಅದನ್ನು ಹುಡುಕುತ್ತಿರುವ, ಆಶಿಸುತ್ತಿರುವ ಮನಸ್ಸಿಗೆ ತಾನು ಬಯಸಿದ್ದು ಸಿಕ್ಕಿತೆಂಬ ಸಂದೇಶ ರವಾನೆಯಾಗುತ್ತದೆ. ಆಗ ತನ್ನ ಗುರಿ ಈಡೇರಿತೆಂಬ ಭಾವದೊಂದಿಗೆ ಪರಿಪೂರ್ಣತೆಯ ತೃಪ್ತಿ ಲಭ್ಯವಾಗುತ್ತದೆ ಮತ್ತು ಪರಿಣಾಮವಾಗಿ ಆನಂದದ ಸುಖಾನುಭವವಾಗುತ್ತದೆ. ಮನಸ್ಸಿಗೆ ತಾನು ಕೇಳಿದ್ದು ಸಿಕ್ಕಿತೆಂದು ಸಂತೋಷವಾಗುತ್ತದೆ. ಆದರೆ, ಈ ಆನಂದ ಸ್ವಲ್ಪ ಕಾಲ ಮಾತ್ರ ಇರುತ್ತದೆ. ಆಗ ಮನಸ್ಸು ಅಶಾಂತಗೊಳ್ಳುತ್ತದೆ.  ಇನ್ನೊಂದು ಸಂತೋಷದ ಸಂಗತಿಗಾಗಿ ಹಾತೊರೆಯುತ್ತದೆ ಮತ್ತು ಚಡಪಡಿಕೆ ಮತ್ತೆ ಆರಂಭವಾಗುತ್ತದೆ. ಆ ಆನಂದ ಕ್ಷಣಿಕವಾಗಿ ಬರುವಂತಹದು ಮತ್ತು ಮರೆಯಾಗುವಂತಹದು. ಅಲ್ಲೇ ನೆಲೆಸುವಂತಹದು ಅಲ್ಲ. ಇದೇ ಸಮಸ್ಯೆ.  ಪ್ರಾಪಂಚಿಕ ಸಂಗತಿಗಳಲ್ಲಿ ಆನಂದ ಅರಸುವವರು ಯಾರಲ್ಲೇ ಆಗಲಿ, ಅವರು ಆ ಆನಂದವನ್ನು ಸತತವಾಗಿ ಅನುಭವಿಸುತ್ತಿರುವವರನ್ನು ಯಾರನ್ನಾದರೂ ಕಂಡಿದ್ದೇವೆಯೇ? ಮನೆ ಕಟ್ಟಿಸುವುದಿರಬಹುದು, ಸಾಮಾಜಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಉನ್ನತಿ ಹೊಂದುವುದಾಗಿರಬಹುದು, ಅಧಿಕಾರ ಪಡೆಯುವುದಾಗಿರಬಹುದು, ಉತ್ತಮ ಸಂಗಾತಿಯನ್ನು ಹೊಂದುವುದಾಗಿರಬಹುದು, ಅದು ಏನೇ ಇರಬಹುದು, ಅಂತಹ ಇಚ್ಛೆ ಈಡೇರಿದಾಗಲೂ ಹೊಂದುವ ಆನಂದ ಪರಿಪೂರ್ಣವೆಂದು ಭಾವಿಸುವವರು ಮತ್ತು ಅದನ್ನು ಸದಾಕಾಲ ಆನಂದದ ಸ್ಥಿತಿಯಲ್ಲಿಯೇ ಆನುಭವಿಸುವವರು ಇರುತ್ತಾರೆ ಅಂದರೆ ಅದು ವಿಶೇಷವೇ ಸರಿ. ಏಕೆಂದರೆ ಮನಸ್ಸು ಪಡೆದಷ್ಟಕ್ಕೇ ಒಪ್ಪಿ ಸುಮ್ಮನಾಗವುದೇ ಇಲ್ಲ. ಅದು ಇನ್ನೂ ಹೆಚ್ಚಿನದನ್ನು ಬಯಸಲು ಪ್ರಾರಂಭಿಸುತ್ತದೆ. ಹೀಗೆ ಬಯಸುವ ಮತ್ತು ಬಯಸಿದ್ದು ಸಿಕ್ಕಿದಾಗ ಸಿಗುವ ಆನಂದದಲ್ಲಿ ಏನೋ ಒಂದು ಕೊರತೆ ಇರುತ್ತದೆ. ಗೀತೆ ಹೇಳುವಂತೆ ಪ್ರತಿ ಯೋಗದ ಹಿಂದೆ ವಿಯೋಗವೂ ಇದ್ದೇ ಇರುತ್ತದೆ. ಈ ಪ್ರಪಂಚದಲ್ಲಿ ಪ್ರಾಪಂಚಿಕ ಸಂಗತಿಗಳಲ್ಲಿ ಆನಂದವೆಂಬುದು ತೋರಿಕೆಗಾಗಿ ಕಾಣುವಂತಹುದಾಗಿದೆಯೆಂಬುದು ಅವುಗಳ ಅಲ್ಪಕಾಲಿಕ ಮತ್ತು ಕ್ಷಣಿಕ ಸ್ವರೂಪದಿಂದ ತಿಳಿದುಬರುವುದಿಲ್ಲವೇ? ಎಲ್ಲದರ ಹಿಂದೆ ಪರಮೋಚ್ಛ ಆನಂದದ ಪ್ರಭಾವ ಇರುವುದರಿಂದಲೇ ಕ್ಷಣಿಕವಾಗಿಯಾದರೂ ಪ್ರಾಪಂಚಿಕ ವಿಷಯಗಳಲ್ಲಿ ಆನಂದದ ಅನುಭವ ಜೀವಿಗಳಿಗೆ ಆಗುತ್ತಿರುತ್ತದೆ.

ಸುಖವು ಸ್ವಾಭಾವಿಕ ದುಃಖವಾಗಂತುಕನು

ಯೋಗವನುಸರಿಸುವುದು ನಿಜವಿಯೋಗ |

ದುಃಖಸಂಯೋಗ ವಿಯೋಗವೀವುದು ಸುಖ

ವಿಯೋಗವೆ ಯೋಗವೆನುವರು ಮೂಢ ||

     ಸಂಗಮದಲ್ಲಿ ಸುಖವಿದೆ, ಹೌದು, ಸಂಗಮದಲ್ಲಿ ಸುಖವಿದೆ. ನಾವು ಇದುವರೆವಿಗೂ ಹೇಳಿದ್ದು ಇದನ್ನೇ! ಬಯಸುವ ಮತ್ತು ಬಯಸಿದ್ದು ಸಿಗುವ ಸಂಗಮದಲ್ಲಿ ಸುಖವಿದೆ. ಅದು ವಸ್ತುವಾಗಬಹುದು, ವ್ಯಕ್ತಿಯಾಗಬಹುದು, ವ್ಯಕ್ತಿಗಳಾಗಬಹುದು, ಗುಂಪಾಗಬಹುದು, ಸಮಾಜವಾಗಬಹುದು. ಇಲ್ಲಿ ಪ್ರಧಾನ ಸಂಗತಿಯನ್ನು ಗುರುತಿಸೋಣ. ಆ ಪ್ರಧಾನ ಸಂಗತಿಯೆಂದರೆ 'ಒಂದಾಗುವುದು' ಆಗಿದೆ. ನೈಜವಾಗಿ ಒಂದಾಗಲು ಸಾಧ್ಯವಾದರೆ ಅಲ್ಲಿ ನೈಜ ಮತ್ತು ಪೂರ್ಣ ಆನಂದ ಸಿಗುತ್ತದೆ. ಯಾವುದಾದರೂ ವಸ್ತುವಿನೊಂದಿಗೆ ಪೂರ್ಣವಾಗಿ ಒಂದಾಗಲು ಸಾಧ್ಯವೇ? ವ್ಯಕ್ತಿಯೊಂದಿಗೆ ಒಂದಾಗಲು ಸಾಧ್ಯವೇ? ಒಂದಾಗಲು ಪ್ರಯತ್ನಿಸಿ ಬೇರೆಯಾಗುವುದರಿಂದ ಸಿಗುವ ಆನಂದ ಸಹ ಕ್ಷಣಿಕ ಮತ್ತು ಅಲ್ಪಕಾಲಿಕವಾಗಿರುತ್ತದೆ. ಯೋಗದೊಂದಿಗೇ, ಅದರ ಬೆನ್ನ ಹಿಂದೆಯೇ ವಿಯೋಗವೂ ಹಿಂಬಾಲಿಸುತ್ತದೆ. ಇನ್ನು ಸಾಮಾಜಿಕವಾಗಿ ಒಂದುಗೂಡುವಿಕೆ ಅನ್ನುವುದು ಒಂದುಗೂಡುವಿಕೆಯೇ ಅಲ್ಲ. ಭೌತಿಕವಾಗಿ, ಮಾನಸಿಕವಾಗಿ ಅಥವ ಸಾಮಾಜಿಕ ಪ್ರಜ್ಞೆಯ ಕಾರಣಗಳಿಂದ, ಧಾರ್ಮಿಕ ಕಾರಣಗಳಿಂದ ಒಂದಾಗಿರುವಂತೆ ತೋರಬಹುದಾದರೂ ಅದು ನಿಜವಾದ ಒಂದಾಗುವಿಕೆಯಂತೂ ಅಲ್ಲ. ಯಾರಾದರೂ ಇಬ್ಬರು ವ್ಯಕ್ತಿಗಳು ಅಥವ ಗುಂಪು ಅಥವ ಸಮಾಜ ಒಂದಾಗಿರುವುದನ್ನು ನಾವು ನೋಡಿಲ್ಲ. 'ಎರಡು ದೇಹ ಒಂದು ಆತ್ಮ' ಎಂಬಂತಹ ಮಾತುಗಳನ್ನು ಇಬ್ಬರ ನಡುವಿನ ಅನ್ಯೋನ್ಯತೆಯ ಸ್ನೇಹದ ಕಾರಣದಿಂದಾಗಿ ಹೇಳುವುದನ್ನು ಕೇಳಿದ್ದೇವೆ. ಆದರೆ ವಾಸ್ತವಿಕವಾಗಿ ಇಬ್ಬರೂ ಒಂದೇ ವ್ಯಕ್ತಿತ್ವದವರಾಗಿ ಹೊರಹೊಮ್ಮುವುದಂತೂ ಅಸಾಧ್ಯವೇ ಸರಿ. ಹೀಗೆ ಎಲ್ಲಿಯವರೆಗೆ ಎರಡು ಸಂಗತಿಗಳು 'ಒಂದಾಗುವುದು' ಸಾಧ್ಯವಿಲ್ಲವೋ ಅಲ್ಲಿಯವರೆಗೆ ಪರಿಪೂರ್ಣ ಆನಂದ ಅನ್ನುವುದು ಸಿಗುವುದು ಸಾಧ್ಯವಿಲ್ಲ.

     ಈ ಪ್ರಪಂಚದಲ್ಲಿ ಆನಂದಕ್ಕಾಗಿ ಅರಸುವುದು ಅಂದರೆ ಮರಳುಗಾಡಿನಲ್ಲಿ ನೀರಿನ ತೊರೆ ಅರಸಿದಂತೆಯೇ ಸರಿ. ಪ್ರಾಪಂಚಿಕ ಸಂಗತಿಗಳಲ್ಲಿ ಆನಂದ ಸಿಗುವುದಿಲ್ಲವೆಂಬುದು ಖಚಿತವಾಯಿತು. ಪರಿಪೂರ್ಣತೆಯಲ್ಲಿ, ಸಚ್ಚಿದಾನಂದದಲ್ಲಿ ಒಂದಾದಾಗ ಮಾತ್ರ ನೈಜ ಆನಂದ ಸಿಗುತ್ತದೆ ಎಂದಾಯಿತು. ಅದೇನೋ ಸರಿ, ಆದರೆ ಈ ಪರಿಪೂರ್ಣತೆ, ಈ ಸಚ್ಚಿದಾನಂದ ಎಂದರೆ ಏನೆಂದು ತಿಳಿಯದೇ ಜೀವಿ ಅದರೊಂದಿಗೆ ಹೇಗೆ ಒಂದಾದೀತು?

ಪರಮಾತ್ಮ ರಚಿಸಿಹನು ಭವ್ಯ ಬ್ರಹ್ಮಾಂಡ

ಬ್ರಹ್ಮಾಂಡಕಿಂ ಹಿರಿದಲ್ತೆ ಅಂತರಂಗದ ಹರವು |

ಪರಮಾತ್ಮ ಕಾಣನೆ ಒಳಗೆ ನಿನ್ನೊಳಗೆ

ಅಣೋರಣೀಯನ ಮಹತಿಯಿದು ಮೂಢ ||

     ಆತ್ಮ ಮತ್ತು ಪರಮಾತ್ಮಗಳ ಒಂದಾಗುವಿಕೆಂದ ಪರಮಾನಂದ ಸಿಗುತ್ತದೆ ಎನ್ನುತ್ತಾರೆಂದರೆ ಮೊದಲು ಆತ್ಮದ ಅರಿವು ನಮಗಾಗಬೇಕು. ನಮ್ಮ ಹುಡುಕಾಟ ಹೊರಗೆ ಬಿಟ್ಟು ಒಳಗೆ ನಡೆಯಬೇಕು. ನಮ್ಮ ಆನಂದದ ಅನುಭವ ಬರುವುದು, ಆಗುವುದು ಎರಡೂ ನಮ್ಮ ಒಳಗಿನಿಂದ. ನಮ್ಮ ಅಂತರಂಗ ಬಿಟ್ಟು ಬೇರೆ ಏನೂ ನಮಗೆ ಕಾಣುವುದಿಲ್ಲವೋ, ನಮ್ಮ ಅಂತರಂಗ ಹೇಳುವುದನ್ನು ಬಿಟ್ಟು ಬೇರೆ ಏನೂ ನಮಗೆ ಕೇಳುವುದಿಲ್ಲವೋ, ನಮ್ಮ ಅಂತರಂಗವನ್ನು ಬಿಟ್ಟು ಬೇರೆ ಏನೂ ನಮಗೆ ಅರ್ಥವಾಗುವುದಿಲ್ಲವೋ ಅದೇ ಪೂರ್ಣಸ್ಥಿತಿ. ಇದಕ್ಕೆ ವಿರುದ್ಧವಾಗಿ ನಮಗೆ ಅಂತರಂಗ ಬಿಟ್ಟು ಹೊರಗಿನ ಸಂಗತಿಗಳು ಮಾತ್ರ ಕಾಣುವುವೋ, ಕೇಳುವುವೋ, ಅರ್ಥವಾಗುವುವೋ ಅದು ಅಪೂರ್ಣಸ್ಥಿತಿ.

     ಪರಿಪೂರ್ಣ ಆನಂದ ಎನ್ನುವ ಆ ಪರಮಾತ್ಮ ಎಲ್ಲಿದ್ದಾನೆ? ಆಕಾಶ ಎಲ್ಲಿದೆ ಎಂಬ ಪ್ರಶ್ನೆಯಂತೆಯೇ ಈ ಪ್ರಶ್ನೆ ಇದೆ. ಆಕಾಶ ಇಲ್ಲದಿರುವ ಸ್ಥಳ ಇದೆಯೇ? ಹಾಗೆಯೇ ಈ ಪರಮಾತ್ಮ ಇಲ್ಲದಿರುವ ಸ್ಥಳವಿಲ್ಲ. ಎಲ್ಲಿದ್ದಾನೆ ಎಂಬ ಪ್ರಶ್ನೆಯೇ ಅಪ್ರಸ್ತುತವೆನಿಸುತ್ತದೆ. ಏಕೆಂದರೆ ಎಲ್ಲೆಲ್ಲೂ ಇರುವುದನ್ನು ಎಲ್ಲಿಯೋ ಇದೆ ಎಂದು ಭಾವಿಸಿ ಕೇಳಿದಂತೆ ಆಗುತ್ತದೆ ಮತ್ತು ಇರುವ ಸ್ಥಳ ಅದಕ್ಕೆ ಆಧಾರವಾಗಿದೆಯೆಂಬ ಭಾವ ಬರುತ್ತದೆ. ಎಲ್ಲದಕ್ಕೂ ಆಧಾರವಾಗಿರುವುದಕ್ಕೆ ಆಧಾರದ ಅಗತ್ಯವಿದೆಯೇ?  ಈ ಪ್ರಪಂಚದಲ್ಲಿ ಭವ್ಯವಾದ ಬಂಗಲೆಗಳು, ಹೇರಳವಾದ ಆಸ್ತಿ, ಲೆಕ್ಕವಿಲ್ಲದಷ್ಟು ಹಣ, ಸೇವೆ ಮಾಡಲು ಆಳು-ಕಾಳುಗಳು, ಐಷಾರಾಮಿ ಕಾರುಗಳು ಇರುವವರನ್ನು ಶ್ರೀಮಂತರು ಎಂದು ಭಾವಿಸುತ್ತಾರೆ. ಅವರ ಶ್ರೀಮಂತಿಕೆಗೆ, ಸುಖಕ್ಕೆ ಇವುಗಳೆಲ್ಲಾ ಆಧಾರವಾಗಿವೆ. ಆದರೆ ಪರಮಾತ್ಮನ ಪರಮಾನಂದದ ಸ್ಥಿತಿಗೆ ಇಂತಹ ಯಾವುದೇ ಆಧಾರಗಳ ಅಗತ್ಯವಿಲ್ಲ. ಅದು ಸ್ವಯಂ ಆಧಾರಿತ. ಜಗತ್ತಿನ ಎಲ್ಲಾ ಸಂಗತಿಗಳಿಗೆ ಆಧಾರವಾಗಿರುವ ಸಂಗತಿಗೆ ಪ್ರತ್ಯೇಕ ಆಧಾರದ ಅಗತ್ಯವಾದರೂ ಎಲ್ಲಿದೆ?

     ಈ ಪ್ರಪಂಚದಲ್ಲಿ ಯಾವುದೇ ಒಂದು ಸಂಗತಿ ಇನ್ನೊಂದಕ್ಕೆ ಆಧಾರವಾಗಿರುತ್ತದೆ. ಒಬ್ಬರು ಇನ್ನೊಬ್ಬರಿಗೆ ಅವಲಂಬಿತರಾಗಿರುತ್ತಾರೆ. ಹೀಗೆಯೇ ಪ್ರಪಂಚ ಸಾಗುತ್ತಿರುವುದು. ಆದರೆ ಯಾವುದೇ ಆಧಾರದ ಅಗತ್ಯವಿಲ್ಲದೆ ಇರುವುದೆಂದರೆ ಆ ಪರಮ, ಪರಿಪೂರ್ಣತೆ ಮಾತ್ರ. ಹೊರಗಿನ ಸಂಗತಿಗಳಲ್ಲಿ ಆನಂದ ಅರಸುವುದನ್ನು ಬಿಟ್ಟು, ಅದನ್ನು ಒಳಗೆ, ನಮ್ಮೊಳಗೆ, ನಮ್ಮ ಅಂತರಂಗದ ಒಳಗೆ ಅರಸಿದರೆ ನಮ್ಮ ಆತ್ಮದ ಅರಿವು ನಮಗೆ ಆಗದೇ ಇರದು. ಪರಮಾತ್ಮನೂ ಅಲ್ಲಿಯೇ ಸಿಕ್ಕಾನು! ಪರಮಾನಂದದ ಅನುಭವವೂ ಆದೀತು!!

-ಕ.ವೆಂ.ನಾಗರಾಜ್.

*****************

ಚಿತ್ರಕೃಪೆ: https://simonenarcheska.files.wordpress.com/2013/04/heart-violet-expandi...