ಅಲೋಕ (3) - ಸೇವೆಗೆ ನಿಯೋಜನೆ

ಅಲೋಕ (3) - ಸೇವೆಗೆ ನಿಯೋಜನೆ

ಅಲೋಕ (3) - ಸೇವೆಗೆ ನಿಯೋಜನೆ
ಕತೆ : ಅಲೋಕ 

ಆತ ಮಾತನಾಡಿದ
"ಈಗ ನನ್ನ ಮಾತನ್ನು ಕೇಳಿಸಿಕೊಳ್ಳಿ, ನಿಮ್ಮಲ್ಲಿ ಅಪೂರ್ಣವಾಗಿರುವ ಕೆಲವು ಅನುಭವ , ಕರ್ತವ್ಯಗಳು ಇಲ್ಲಿ ಪೂರ್ಣಗೊಳ್ಳ ಬೇಕಾಗಿದೆ. ಅಲ್ಲಿಯವರೆಗೂ ನೀವು ಇಲ್ಲಿ ಇರಲೇ ಬೇಕಾದ ಅಗತ್ಯವಿದೆ. ಅದನ್ನು ನೀವು ಶಿಕ್ಷೆ ಎಂದು ಕರೆದರು, ಭಾವಿಸಿದರು ನಮ್ಮ ಅಭ್ಯಂತರವಿಲ್ಲ" ಎಂದ

ನನಗೀಗ ತೋಚುತ್ತಿತ್ತು, ನಾನು ನೆನೆಸಿರುವಂತೆ ಇದು ನರಕ ಅಥವ ಯಮಲೋಕ ಎನ್ನುವುದು ಸತ್ಯವೇ ಆಗಿರಬಹುದು. ಆದರೆ ನಾನು ತಿಳಿದಿರುವಂತೆ ಪಾಪಿಗಳ ಕಾಲು ಕತ್ತರಿಸುತ್ತಾರೆ, ಬೆಂಕಿಯಲ್ಲಿ ಬೇಯಿಸುತ್ತಾರೆ, ಕುದಿವ ಎಣ್ಣೆಯಲ್ಲಿ ಹಾಕುತ್ತಾರೆ ಎನ್ನುವದೆಲ್ಲ ಸತ್ಯವಲ್ಲ ಎಂದೇ ತೋರುತ್ತದೆ. ಏಕೆಂದರೆ ಈ ಶಿಕ್ಷೆಗಳೆಲ್ಲ ದೈಹಿಕವಾದದ್ದು. ಭೂಮಿಯ ಕಲ್ಪನೆಗೆ ಹೊಂದುವಂತದ್ದು. ಇಲ್ಲಿ ದೇಹಭಾವವೆ ಇಲ್ಲದಿರುವಾಗ ನೋವಿನ, ಶಿಕ್ಷೆಯ ಕಲ್ಪನೆಗಳೆಲ್ಲ ತಪ್ಪು ಕಲ್ಪನೆಗಳಂತೆ ತೋರುತ್ತಿದೆ . 

ನನ್ನ ಯೋಚನೆ ಸಾಗಿರುವಂತೆ ಅವನು ನಗುತ್ತ ನನ್ನತ್ತ ನೋಡಿ, 
"ಹೆಚ್ಚು ಚಿಂತಿಸದಿರುವುದು ಒಳ್ಳೆಯದು. ಅಲ್ಲಿಯ ಹೋಲಿಕೆಗೆ ಹೋಗದೆ ಇಲ್ಲಿಯ ಕರ್ತವ್ಯಗಳನ್ನು ನೆರವೇರಿಸಿದರೆ ಅದು ನಿಮಗೆ ಶ್ರೇಯಸ್ಸು. ಈಗ ಇವರ ಜೊತೆ ಹೋದರೆ ನೀವು ಮಾಡಬಹುದಾದ ಕರ್ತವ್ಯ ತಿಳಿಯುತ್ತದೆ"

ಸತ್ತುಹೋಗಿಯೆ ಆಗಿದೆ ಇನ್ನು ಯಾವ ಶ್ರೇಯಸ್ಸು ಇವನ ಮಾತೊಂದು ಎಂದು ಕೊಂಡವನು ,  ಹೆಚ್ಚು ಯೋಚಿಸದಿರುವುದೇ ಒಳ್ಳೆಯದು. ಮಾತುಗಳನ್ನಂತು ಆಡುವಂತಿಲ್ಲ ಆಗಲೆ ನಾಲಿಗೆ ಕಿತ್ತುಹಾಕಿದ್ದಾರೆ ಎಂದುಕೊಂಡು ಸುಮ್ಮನಾದೆ.

ಅಲ್ಲಿನ ವಾತವರಣಕ್ಕೆ ಚಿಂತನೆಗೆ ತರ್ಕಕ್ಕೆ ನಾನು ಹೊಂದಿಕೊಳ್ಳುತ್ತ ಹೋದಂತೆ , ಅವರಿಬ್ಬರ ಚಹರೆ ಹೆಚ್ಚು ಸ್ವಷ್ಟವಾಗುತ್ತ ಹೋಯಿತು. ಬಹುಶಃ ಭೂಮಿಯ ಭೌತಿಕ ಅನ್ನಬಹುದಾದ ಗುಣಸ್ವಭಾವಗಳು ದೂರಸರಿಯುತ್ತಿವೆ ಅನ್ನಿಸಿತು.

ಆತನ ಹಿಂದೆ ಮೌನವಾಗಿ ನಡೆದೆ. ಅದ್ಯಾವುದೋ ಜಾಗ ಪ್ರವೇಶಿಸಿದೆ. ಅಲ್ಲಿ ಹಲವಾರು , ಬಹುಶಃ ನೂರಾರು ಜನ ಮಂಚಗಳ ಮೇಲೆ ಸಾಲಾಗಿ ಮಲಗಿ ವಿಶ್ರಾಂತಿ ಪಡೆಯುತ್ತಿರುವುದು ಕಾಣಿಸಿತು. ತೀರ ಆಶ್ಚರ್ಯವೆನಿಸಿತು  ಯಾರಿರಬಹುದು ಇವರೆಲ್ಲ ?

ಅವನು ಹೇಳಿದ.
"ನೀನು ಇವರೆಲ್ಲರ ಸೇವೆ ಮಾಡಬೇಕು"

ನನಗೆ ಅರ್ಥವಾಗಲಿಲ್ಲ ಸೇವೆ ಅಂದರೆ ಏನೆಂದು. ಅವನ ಮುಖ ನೋಡಿದೆ.

"ಅಂದರೆ ಅವರ ಕಾಲು ಒತ್ತುವುದು ಇತ್ಯಾದಿ, ಅವರು ನಿರೀಕ್ಷಿಸುವ ಯಾವುದೇ ಸೇವೆ" ಅವನು ತಿಳಿಸಿದ

ನನ್ನ ಸ್ವಾಭಿಮಾನ ತಲೆ ಎತ್ತಿತು. ಇವರೆಲ್ಲ ಯಾರೋ ಅನಾಮದೇಯರು, ನಾನು ಇವರ ಕಾಲು ಒತ್ತಬೇಕೆ ?  ಸೇವೆ ಮಾಡಬೇಕೆ?. ನನಗೂ ಇವರಿಗೂ ಯಾವ ಸಂಬಂಧ? 
ನಂತರ ನಾನೇ ಚಿಂತಿಸಿದೆ , ಹಾಗೆಲ್ಲ  ನಾನಿಲ್ಲಿ ಸ್ವತಂತ್ರನಲ್ಲ , ನನ್ನ ಅಭಿಮಾನ ಬಿಡುವುದೇ ಒಳ್ಳೆಯದು

ಅವನು ಮತ್ತೆ ನುಡಿದ
"ನೀವು ಭೂಮಿಯಲ್ಲಿ ತಂದೆ ತಾಯಿಯರ ಸೇವೆ ಮಾಡದೇ ವಂಚಿತರಾಗಿದ್ದೀರಿ, ಅಂತಹ ಅನುಭವ ಇಲ್ಲಿ ಪೂರ್ಣವಾಗಲಿ" 

ನನಗೆ ಮತ್ತೆ ಕೋಪ ಭುಗಿಲೆದ್ದಿತು!

ಚಿಕ್ಕವಯಸಿಗೆ ತಂದೆ ತಾಯಿಯರನ್ನು ಕಿತ್ತುಕೊಂಡಿದ್ದು ಇದೇ ವಿಧಿ . ಈಗ ಅವರ ಸೇವೆ ಮಾಡಿಲ್ಲ ಎಂದು ಆಪಾದನೆ ಹೊರಸುವದಾದರೆ ಇದೆಂತಹ ಮೋಸ. ತಂದೆ ತಾಯಿ ನನ್ನ ಜೊತೆ ಇರುವದಾಗಿದ್ದರೆ ಖಂಡಿತ ಸೇವೆ ಮಾಡಿರುತ್ತಿದ್ದೆ

ಮತ್ತೆ ನೆನಪಿಗೆ ಬಂದಿತು, ಭೂಮಿಯ ನ್ಯಾಯವೆ ಬೇರೆ , ಇಲ್ಲಿಯ ನ್ಯಾಯವೇ ಬೇರೆ . ಅಷ್ಟಕ್ಕೂ ಇಲ್ಲಿರುವರೆಲ್ಲ ನನಗಿಂತ ಹಿರಿಯರು ಹಾಗಿರುವಲ್ಲಿ ಕಾಲು ಒತ್ತುವುದು ಸೇವೆ ಮಾಡುವುದು ಅವಮಾನ ಎಂದು ಭಾವಿಸುವುದು ತಪ್ಪು . 

"ಸರಿ" ಎನ್ನುವಂತೆ ತಲೆ ಆಡಿಸಿದೆ. 

ಅವನು ನಸುನಗುತ್ತ ಅಲ್ಲಿಂದ ಹೊರಟುಹೋದ. ಎಲ್ಲೆಲ್ಲೂ ಕತ್ತಲು ಕತ್ತಲು ಎನ್ನುವಂತಹ ವಾತಾವರಣ.

 

ಮುಂದುವರೆಯುವುದು ......

Comments

Submitted by nageshamysore Fri, 05/15/2015 - 17:28

ಪಾರ್ಥಾ ಸಾರ್, ಅದು ನರಕವೆ ಆಗಿರಲಿ, ಮತ್ತಾವುದೊ ಲೋಕವೆ ಆಗಿರಲಿ - ಅದರ ವಿವರ ಸಾದೃಶ್ಯ ವರ್ಣನೆ / ಚಿತ್ರಣ ಮಾತ್ರ ತೀರಾ ವಿಭಿನ್ನ ಹಾಗು ಹೊಸ ತರ. ಭೌತಿಕ ಅಸ್ತಿತ್ವವಿರದಿದ್ದರು ವೈಯಕ್ತಿಕ ಅಸ್ತಿತ್ವವನ್ನುಳಿಸಿಕೊಂಡ ಆ 'ಅದು' ( ಬದುಕಿದ್ದ ಮಾನವನ ಮನಸಿನ ಹಾಗೆ ಆಲೋಚಿಸುತ್ತಿರುವುದರಿಂದ 'ಮನಸು' ಎಂದೆ ಕರೆಯಬಹುದೇನೊ?) ಹೊರಟಿರುವ ಯಾತ್ರೆ ಹೇಗೆ ಮುಂದುವರೆಯಲಿದೆ ಎಂಬ ಕುತೂಹಲ ಮೂಡುತ್ತಿದೆ. ಮುಂದುವರೆಸಿ :-)

Submitted by partha1059 Fri, 05/15/2015 - 22:04

In reply to by nageshamysore

ನಾಗೇಶ‌ ನಮಸ್ಕಾರ‌
ಭೌತಿಕ‌ ಅಸಿತ್ವವನ್ನು ಉಳಿಸಿಕೊಂಡು 'ಅದು' .......
ನಿಮ್ಮ‌ ಅನುಮಾನ‌ ನನ್ನನ್ನು ಕಾಡಿತು
ಆದರೆ ಸತ್ತ‌ ಮೇಲು ನಮ್ಮ‌ ಅಸ್ತಿತ್ವ‌ ಇರುತ್ತದೆ ಅನ್ನುವುದೇ ನಮ್ಮ‌ ನಂಭಿಕೆಯಲ್ಲವೆ . ನೀವು ಯಾವುದನ್ನು ಮನಸು ಎಂದು ಕರೆಯುತ್ತಿದ್ದೀರೋ ಅದು ಮನಸಾಗಿರಲು ಸಾದ್ಯವಿಲ್ಲ‌ ಅನ್ನಿಸುತ್ತೆ, ಏಕೆಂದರೆ ಮನಸ್ಸು ಸಹ‌ ಬೌತಿಕವೆ ದೇಹಕ್ಕೆ ಸಂಬಂಧಿಸಿದ್ದು ಅಲ್ಲವೆ ?
ಆದನ್ನು ಆತ್ಮ‌ ಎಂದು ಕರೆಯಲು ಸಾದ್ಯವಿಲ್ಲವೆ ? :‍)
.
ಮತ್ತೆ , ಭೌತಿಕ‌ ಅಸ್ತಿತ್ವವಿರದಾಗಲು ಆ 'ನಾನು' ಎನ್ನುವದನ್ನು ಮತ್ತೊಂದು ಕಾರಣಕ್ಕೆ ಉಳಿಸಿಕೊಂಡಿದ್ದೇನೆ
ಆ ನಾನು ಇರದಿದ್ದರೆ ಕತೆಗೆ ಅಸ್ತಿತ್ವವೇ ಇಲ್ಲ‌ .
ನಿಮಗೆ ಕತೆ ಹೇಳುವರಾದರು ಯಾರು , ಅದಕ್ಕಾಗಿ ಅ 'ನಾನು' ಉಳಿಸಿಕೊಂಡಿರುವೆ
ವಂದನೆಗಳೊಡನೆ
ಪಾರ್ಥಸಾರಥಿ

Submitted by partha1059 Sat, 05/16/2015 - 10:31

In reply to by nageshamysore

ನಾಗೇಶ್ ಮೈಸೂರ್ ರವರಿಗೆ
ನಿಮ್ಮ‌ ಒಂದು ಪ್ರಶ್ನೆ ಅನುಮಾನ‌ ನನ್ನನ್ನು ಬಹಳ‌ ಕಾಡಿತು, ಕಡೆಗೆ ಕತೆಯ‌ ಕಡೆಯಲ್ಲೇನೊ ಕೊರತೆ ಇದೆ ಅನ್ನುವ‌ ನನ್ನ‌ ಭಾವನೆಯನ್ನು ನಿವಾರಿಸಿತು. ಈಗ‌ ಆ ಕೊರತೆಯನ್ನು ನೀಗಿಸಿಕೊಂಡೆ ನಿಮ್ಮ‌ ಒಂದು ಪ್ರಶ್ನೆಯಿಂದ‌ :‍)

Submitted by kavinagaraj Mon, 05/18/2015 - 08:02

:) ನೀವು ಸಾರುತ್ತಿರುವ ಸಂದೇಶಕ್ಕೆ ಆಧಾರ ತೆಗೆದುಕೊಳ್ಳಿ, ಪಾರ್ಥರೇ.
ನ ಕಿಲ್ಬಿಷಮತ್ರ ನಾಧಾರೋ ಅಸ್ತಿ ನ ಯನ್ಮಿತ್ರೈಃ ಸಮಮಮಾನ ಏತಿ |
ಅನೂನಂ ಪಾತ್ರಂ ನಿಹಿತಂ ನ ಏತತ್ಪಕ್ತಾರಂ ಪಕ್ವಃ ಪುನರಾ ವಿಶಾತಿ || (ಅಥರ್ವ.೧೨.೩.೪೮)
ಈ ದೇವರ ನ್ಯಾಯವಿಧಾನದಲ್ಲಿ ಯಾವ ಒಡಕೂ, ದೋಷವೂ ಇಲ್ಲ, ಬೇರೆ ಯಾವ ಆಧಾರವೂ ಇಲ್ಲ. ಸ್ನೇಹಿತರ, ಸಹಕಾರಿಗಳ ಸಹಾಯದಿಂದ ಕ್ಷೇಮವಾಗಿದ್ದೇನೆಂದುಕೊಂಡು ಮೋಕ್ಷಕ್ಕೆ ಸೇರುತ್ತೇನೆ ಎಂಬುದೂ ಕೂಡ ಇಲ್ಲ. ನಮ್ಮ ಈ ಒಡಕಿಲ್ಲದ ಅಂತಃಕರಣದ ಪಾತ್ರೆ ಗೂಢವಾಗಿ ಇಡಲ್ಪಟ್ಟಿದೆ. ಬೇಯಿಸಿದ ಅನ್ನ, ಕರ್ಮಫಲವಿಪಾಕ ಅದನ್ನು ಪಾಕ ಮಾಡಿದವನನ್ನು ಪುನಃ ಮರಳಿ ಪ್ರವೇಶಿಸಿಯೇ ತೀರುತ್ತದೆ ಎಂಬುದು ಈ ಮಂತ್ರದ ಅರ್ಥ. 'ಮಾಡಿದ್ದುಣ್ಣೋ ಮಹರಾಯ'! ತಾನು ಮಾಡಿದ ಪಾಪವನ್ನು ಇತರರ ಹೆಗಲಿಗೆ ಹೊರಿಸಿ ಪಾರಾಗಬಹುದೆಂದಾಗಲೀ, ಯಾವುದೇ ಪೂಜಾರಿ, ಪಾದ್ರಿ, ಮೌಲ್ವಿಗಳ ಮಧ್ಯಸ್ತಿಕೆಯಿಂದ ಪುಣ್ಯ ಗಳಿಸಬಹುದೆಂದಾಗಲೀ, ಮುಕ್ತಿ ಹೊಂದಬಹುದೆಂಬುದಾಗಲೀ, ತಪ್ಪುಕಾಣಿಕೆ ಒಪ್ಪಿಸಿ ಮಾಡಿದ ತಪ್ಪಿನಿಂದ ತಪ್ಪಿಸಿಕೊಳ್ಳಬಹುದೆಂದಾಗಲೀ ಇಲ್ಲವೇ ಇಲ್ಲ. ಮಾಡಿದ್ದನ್ನು ಅನುಭವಿಸಲೇಬೇಕು. ನಮ್ಮ ಹಣೆಬರಹಕ್ಕೆ ಹೊಣೆಗಾರರು ನಾವೇ!
ಆಸಕ್ತಿಕರವಾಗಿದೆ, ಮುಂದುವರೆಸಿರಿ.