ಅಲೋಕ (7) - ಕಡೆಯ ದಿನ
ಅಲೋಕ (7) - ಕಡೆಯ ದಿನ .
ಕತೆ : ಅಲೋಕ
ದಿನಗಳೊ, ತಿಂಗಳೊ, ವರ್ಷವೋ ಕಳೆಯಿತು ಎಷ್ಟು ಅಂತ ತಿಳಿಯಲಿಲ್ಲ. ನಾನು ಎಲ್ಲ ನಿರೀಕ್ಷೆಗಳನ್ನು ಬಿಟ್ಟು ಬಿಟ್ಟಿದ್ದೆ. ಎಲ್ಲ ಕುತೂಹಲಗಳಿಗೆ, ಎಲ್ಲ ಉತ್ಸಾಹಗಳಿಗೆ ಹೊರತಾಗಿದ್ದೆ. ಅಲ್ಲಿ ವಿಧಿಸುವ ಕರ್ತವ್ಯಗಳನ್ನು ಮಾತ್ರ ಚಾಚು ತಪ್ಪದೆ ಮಾಡುತ್ತಿದ್ದೆ. ದಿನದಿನವೂ ಅವರು ಕೊಡುವ ಕೆಲಸಗಳು ಹೊಸತಾಗಿರುತ್ತಿದ್ದವು. ಕೆಲವೊಮ್ಮೆ ಅವರು ಕೊಡುವ ಕೆಲಸಗಳ ಉದ್ದೇಶವೇನು ? ಏತಕ್ಕಾಗಿ ಅನ್ನುವುದು ಸಹ ತಿಳಿಯುತ್ತಿರಲಿಲ್ಲ .
ಒಮ್ಮೆ ಅಂದಿನ ಕೆಲಸವೆಂದು ತಿಳಿಸಿ. ನಿಂತಜಾಗದಲ್ಲಿಯೆ ದಿನಪೂರ್ತಿ ಹೆಜ್ಜೆಯನ್ನು ಎತ್ತದೆ ನಿಂತಿರುವಲ್ಲಿಯೆ ನಿಲ್ಲು ಎಂದು ತಿಳಿಸಿದರು. ನನ್ನ ಮುಂದಿದ್ದ ಆ ಪಿತೃ ಯಾರೆಂದು ತಿಳಿಯದು ಅವನ ಮುಂದೆ ದಿನಪೂರ್ತಿ ನಿಂತಿದ್ದೆ ಒಮ್ಮೆ ಕೂಡ ಹೆಜ್ಜೆಯನ್ನು ಅಲುಗಿಸದೆ. ಆ ಪಿತೃರೂಪದಲ್ಲಿ ಕುಳಿತವನ್ಯಾರೋ ತಿಳಿಯದು ಅವನದಾದರೆ ಇನ್ನೂ ವಿಚಿತ್ರ ನಾನು ನಿಂತಿರುವ ತನಕ ಅವನು ಒಮ್ಮೆಯಾದರು ಕದಲಲಿಲ್ಲ, ಕಣ್ಣು ಮಿಟುಕಿಸಲಿಲ್ಲ. ಮುಖದ ಭಾವ ಬದಲಿಸಲಿಲ್ಲ. ಸುಮ್ಮನೆ ನನ್ನನ್ನೆ ನೋಡುತ್ತಿದ್ದ.
ಒಂದು ದಿನ ಹೊಸಬ ಅನ್ನಿಸುವ ದೂತನೊಬ್ಬ ಬರುವುದು ಕಾಣಿಸಿತು . ಹೌದಲ್ಲ ಇಲ್ಲಿ ಪ್ರತಿದಿನವೂ ಬರುವ ದೂತರು ಹೊಸಬರೆ ಆಗಿರುತ್ತಾರೆ, ಒಮ್ಮೆ ಬಂದವರು ಮತ್ತೆ ಕಾಣಿಸರು.
ಅವನು ನನ್ನನ್ನು ಮಾತನಾಡಿಸಿದ.
‘ಇಲ್ಲಿ ಸೇವೆ ಮಾಡುತ್ತಿರುವಿರಲ್ಲ ನಿಮಗೇನು ಅನ್ನಿಸದೇ? ಯಾರದೋ ಸೇವೆ ಮಾಡುತ್ತಿರುವೆ ಎನ್ನುವ ಭಾವ ಕಾಡಿಸುತ್ತಿಲ್ಲವೆ ?”
ಆದರೆ ನಾನು ಹೇಗೆ ಉತ್ತರಿಸಲಿ, ನನ್ನ ನಾಲಿಗೆ ಕಿತ್ತುಹಾಕಿದ್ದವರು ಅವರೇ ಅಲ್ಲವೇ ?.
ಸುಮ್ಮನೆ ಅವನ ಮುಖ ನೋಡಿದೆ ಅವನು ನಗುತ್ತ ನುಡಿದ
‘ಇಲ್ಲ ಈಗ ಮಾತನಾಡಬಹುದು. ನಿಮ್ಮ ಕಾರ್ಯ ತತ್ಪರತೆಯಿಂದ, ನಿಮ್ಮದೇ ಶ್ರಮದಿಂದ ಪುನಃ ನಿಮ್ಮ ನಾಲಿಗೆ ಗಳಿಸಿದ್ದೀರಿ’ ‘ಹೌದಾ!!’ ನನಗೆ ಸಮಾದಾನ ಅನ್ನಿಸಿತು. ನಾನು ಅವನ ಪ್ರಶ್ನೆಗೆ ಉತ್ತರಿಸಿದೆ
‘ಇಲ್ಲಿ ನನ್ನವರು, ಅಥವ ಬೇರೆಯವರು ಎಂದು ಭಾವಿಸುವದರಿಂದ ವ್ಯೆತ್ಯಾಸ ಏನಾಗುವದಿಲ್ಲ. ನನಗೆ ನಿಗದಿಗೊಳಿಸಿರುವ ಕಾರ್ಯ ಪೂರ್ಣಗೊಳಿಸುವುದು ಅನಿವಾರ್ಯ. ಹಾಗಿರುವಲ್ಲಿ ಅಂತಹ ಭಾವಗಳು ಕಾಡಿಸಲಿಲ್ಲ’
ಅವನು ಪುನಃ ನುಡಿದ
‘ಚಿಂತೆಯಿಲ್ಲ, ಇಲ್ಲಿಗೆ ಬಂದ ನಂತರ ನಾನು ನನ್ನವರು ಅನ್ನುವ ಭಾವನೇ ಹೋಗಲೇ ಬೇಕು. ಆದರೂ ನಿಮಗೆ ಗೊತ್ತಿರಲಿ ಎಂದು ತಿಳಿಸುವೆ, ನೀವು ಇಲ್ಲಿಯವರೆಗೂ ಸೇವೆಗೈದ ಬಹುತೇಕರು ನಿಮ್ಮ ಹಿರಿಯರು. ಅವರೆಲ್ಲ ನಿಮ್ಮ ಸೇವೆಯಿಂದ ಸಂತಸಗೊಂಡು ನಿಮ್ಮನ್ನು ಹರಸಿದ್ದಾರೆ. ಸುಪ್ರೀತರಾಗಿದ್ದಾರೆ’
ನನ್ನಲ್ಲಿ ಸಹ ತೃಪ್ತಭಾವ ಮೂಡಿತು.
ಅವನು ನುಡಿದ ‘ ಇವೆಲ್ಲ ಮುಗಿಯಿತಲ್ಲ, ಈಗ ನನ್ನ ಜೊತೆ ಬನ್ನಿ’ ಸುಮ್ಮನೆ ಅವನ ಜೊತೆಗೆ ಹೊರಟೆ .
ಆದಿನ ಬೇರೆ ಕಾರ್ಯ ವಹಿಸಲಾಯಿತು. ‘ಇಲ್ಲಿ ಸಾಲು ಸಾಲು ಮಲಮೂತ್ರ ವಿಸರ್ಜನ ಕೇಂದ್ರಗಳಿವೆ,. ಇವನ್ನೆಲ್ಲ ಶುದ್ಧಗೊಳಿಸುವ ಕಾರ್ಯ ಪ್ರಾರಂಭಿಸಿ’
ಅವನ ಮುಖದಲ್ಲಿ ಅದೇ ಸಮಾದಾನ.
ನನ್ನನ್ನು ಎರಡು ಎರಡು ಭಾವಗಳು ಒಮ್ಮೆಲೆ ಕಾಡಿದವು. ಅಸಹ್ಯ ಹಾಗು ಅಭಿಮಾನ.
ಮಲಮೂತ್ರಗಳು ಸಹಜ ಕ್ರಿಯೆಯಾದರು ನಂತರ ಅವು ಅಸಹ್ಯ ಹುಟ್ಟಿಸುವ ವಸ್ತುಗಳೆ. ಹಾಗಿರಲು ಯಾರದೋ ಮಲಮೂತ್ರಗಳನ್ನು ಶುದ್ದಗೊಳಿಸುವ ಅಸಹ್ಯಭಾವ ನನ್ನನ್ನು ತುಂಬಿಕೊಂಡಿತು ಜೊತೆಗೆ ಯಾರದೋ ಮಲಮೂತ್ರಗಳನ್ನು ನಾನು ಶುದ್ದಗೊಳಿಸಬೇಕೇಕೆ ಅನ್ನುವ ಮನೋಭಾವ.
ಇದೆಂತಹ ಅವಮಾನ, ನಾನು ಇದನ್ನು ಏಕೆ ಸಹಿಸಬೇಕು ? ಇದನ್ನು ವಿರೋಧಿಸಲೇಬೇಕು.
ತಕ್ಷಣ ಎಲ್ಲಿಂದಲೋ ವಿವೇಕ ಎಚ್ಚರಗೊಂಡಿತು. ಹಿಂದೊಮ್ಮೆ ಹೀಗೆ ತರ್ಕರಹಿತನಾಗಿ ಕೂಗಾಡಿ ನಾಲಿಗೆ ಕಳೆದುಕೊಂಡಿದ್ದೆ. ಇಲ್ಲಿ ನನ್ನನ್ನು ಬೆಂಬಲಿಸುವರಾಗಲಿ ಅಥವ ಅಯ್ಯೋ ಪಾಪ ಅನ್ನುವರಾಗಲಿ ಯಾರು ಇಲ್ಲ. ಇಲ್ಲಿ ಅವರು ಹೇಳಿದ್ದನ್ನೆಲ್ಲ ಕೇಳಲೇ ಬೇಕಾದ ಅನಿವಾರ್ಯತೆ ಇದೆ. ಅಷ್ಟಕ್ಕೂ ಇದು ಯಾವ ಪರೀಕ್ಷೆಗೋ ? ನೋಡೋಣ ಎನ್ನುವ ಅಲೋಚನೆ ಸುಳಿಯಿತು.
‘ಆಗಲಿ’ ಅನ್ನುವಂತೆ ನಿಧಾನವಾಗಿ ತಲೆ ಆಡಿಸಿದೆ ಅಲ್ಲಿದ್ದ ಶುದ್ದಗೊಳಿಸುವ ಪರಿಕರಗಳನ್ನು ಹಿಡಿದು ಕೆಲಸ ಪ್ರಾರಂಭಿಸಿದೆ.
ನಿಶ್ಚಯಿಸಿದೆ ಮೊದಲು ನನ್ನಲ್ಲಿರುವ ಅಸಹ್ಯಭಾವ ದೂರವಾಗಬೇಕು. ಕೆಲಸ ಮಾಡಲು ಪ್ರಾರಂಭಿಸಿದಂತೆ ಮನದ ಕುದಿತ ಕಡಿಮೆ ಆಗುತ್ತ ಹೋಯಿತು . ಕಣ್ಣಿನಿಂದ ಎದುರಿಗೆ ಬಿದ್ದಿರುವ ಮಲ ಮೂತ್ರಗಳನ್ನು ಕಾಣುವಾಗಲು , ಕೈ ಕೆಲಸಮಾಡುತ್ತಿರುವಾಗಲು ಮನ ಶಾಂತವಾಗಿತ್ತು. ಹಾಗೆ ಅನ್ನಿಸಿತು. ಮಲಮೂತ್ರ ಅನ್ನುವಾಗ ಅದು ಸಹ ಸೃಷ್ಟಿಯಲ್ಲಿನ ಪ್ರಕೃತಿದತ್ತವಾದ ಒಂದು ವಸ್ತು ಅಷ್ಟೆ. ಎಲ್ಲವೂ ನಮ್ಮದೇ ದೇಹದಿಂದ ಜನ್ಯ. ಹಾಗಿರಲು ತನ್ನ ಹಾಗು ಪರಕೀಯ ಮಲ ಅನ್ನುವ ಭಾವ ಅಸಹ್ಯಗಳೆಲ್ಲ ಮನಸಿನ ಅಹಂ ಹಾಗು ಭ್ರಮೆಯ ರೂಪಗಳಷ್ಟೆ ಅನ್ನಿಸಿತು. ಆ ದಿನ ಪೂರ್ತಿ ಅದೇ ಕೆಲಸವಾಯಿತು.
ಕಡೆಗೊಮ್ಮೆ ಹೊರಗೆ ಬಂದು ಶುದ್ದವಾಗಿ ಹರಿಯುತ್ತಿದ್ದ ವೈತರಣಿಯಲ್ಲಿ ನಾನು ಸಹ ಶುದ್ದಗೊಂಡೆ. ನನ್ನಲ್ಲಿದ್ದ ಅಸಹ್ಯ ಎನ್ನುವ ಎಲ್ಲ ಭಾವವನ್ನು ಆ ನದಿ ಕೊಚ್ಚಿಕೊಂಡು ಹೋಯಿತು.
ವೈತರಣೀ ದಡದ ಮೇಲೆ ನೀರನ್ನು ನೋಡುತ್ತ ಕುಳಿತಿರುವಾಗ ಎಂತಹುದೋ ಒಂದು ಭಾವ ಕಾಡಲು ಪ್ರಾರಂಭವಾಯಿತು ಅನುಮಾನ ನನ್ನನ್ನು ಕಾಡಿತು. ನಾನು ಈ ಲೋಕಕ್ಕೆ ಬಂದ ದಿನದಿಂದಲೂ ಯಾವುದೇ ದೇಹ ಭಾದೆಗಳಿರಲಿಲ್ಲ. ಮಲಮೂತ್ರ ವಿಸರ್ಜನೆ ಅನ್ನುವ ಕ್ರಿಯೆಗಳೆ ಅಲ್ಲಿರಲಿಲ್ಲ. ಅಷ್ಟಕ್ಕೂ ನಾನು ಜಲ ಅಥವ ಅಹಾರ ಏನನ್ನು ತೆಗೆದುಕೊಂಡಿರಲಿಲ್ಲ. ಭೋಜನ ಎಂದು ಅವರು ಹೇಳುವುದು ಸಹ ಮಂತ್ರರೂಪ , ಮಂತ್ರರೂಪಕ ಅಷ್ಟೆ ಹೊರತಾಗಿ ನಿಜವಾದ ಊಟವಾಗಿರಲಿಲ್ಲ. ನಾನಷ್ಟೆ ಅಲ್ಲ ಇಲ್ಲಿರುವ ಯಾರು ಸಹ ಮಲಮೂತ್ರ ಅಂತ ಓಡಿಯಾಡಿದ್ದು ಕಂಡಿರಲಿಲ್ಲ. ಹಾಗಿರಲು ನಾನು ಈದಿನದ ಕರ್ತವ್ಯ ಎಂದು ಸ್ವಚ್ಛಮಾಡಿದ ಮಲಮೂತ್ರಗಳು ಈ ಲೋಕಕ್ಕೆ ಎಲ್ಲಿಂದ ಬಂದಿತು.
ಬೆಳಗ್ಗೆ ನನ್ನನ್ನು ಕೆಲಸಕ್ಕೆ ನಿಯೋಜನೆಗೊಳಿಸಿದ್ದ ಆತ ಬರುತ್ತಿರುವುದು ಕಾಣಿಸಿತು. ಎದ್ದು ನಿಂತೆ
‘ಎಲ್ಲ ಕೆಲಸವು ಮುಗಿದಿದೆ’ ಆತನಲ್ಲಿ ಅದೇ ಸಮಾದಾನ.
ನಾನು ಏನು ಮಾತನಾಡಲಿಲ್ಲ.
‘ಸರಿ ಬನ್ನಿ’ ಆತ ಹೊರಟ. ಎಂದಿನಂತೆ ಭೋಜನಕ್ಕೆ ಅನ್ನಿಸುತ್ತೆ,
ನಾನು ಇಲ್ಲಿ ಬಂದು ಎಷ್ಟು ದಿನ ಅಥವ ವರ್ಷಗಳಾದವೋ ಗೊತ್ತಾಗಲೆ ಇಲ್ಲ . ಹಾದಿಯಲ್ಲಿ ಅವನೊಡನೆ ಮಾತನಾಡಿದೆ
‘ನಿಮ್ಮೊಡನೆ ಒಂದು ಪ್ರಶ್ನೆ ಕೇಳುವದಿದೆ. ಕೇಳಬಹುದೇ ?”
‘ಕೇಳಿ, ಏನನ್ನಾದರು ಕೇಳಬಹುದು’ ಅವನು ಶಾಂತನಾಗಿಯೆ ನುಡಿದ .
ನಾನು ಅನುಮಾನದಿಂದಲೇ ಕೇಳಿದೆ,
’ಇಲ್ಲಿ ಯಾರು ಮಲಮೂತ್ರ ಅಂತ ಭಾದೆಯೆ ಪಡದಿದ್ದಾಗ, ಅಂತಹ ಕ್ರಿಯೆಯೆ ಇಲ್ಲ ಅನ್ನಿಸುತ್ತಿರುವಾಗ, ನಾನು ಬೆಳಗಿನಿಂದ ಸ್ವಚ್ಛಗೊಳಿಸಿದ ಮಲಮೂತ್ರವಾದರು ಎಲ್ಲಿಂದ ಬಂದಿತು”.
ಅವನು ನಗುತ್ತ ನುಡಿದ
‘ನಿಮ್ಮದು ಸರಿಯಾದ ಅನುಮಾನವಾಗಿದೆ. ನೀವು ಹೇಳಿದಂತೆ ಇಲ್ಲಿ ಅಂತಹ ಸಮಸ್ಯೆಯೇ ಇಲ್ಲ. ನಿಜಕ್ಕೂ ನೀವು ಬೆಳಗಿನಿಂದ ಸ್ವಚ್ಛಗೊಳಿಸಿದ್ದು ನಿಮ್ಮಲ್ಲಿ ಉಳಿದಿದ್ದ ಅಸಹ್ಯ ಅನ್ನುವ ಭಾವವನ್ನು. ನಾನು ಶ್ರೇಷ್ಠ ಅನ್ನುವ ವ್ಯಸನವನ್ನು”
ಅವನು ಮತ್ತೆ ನುಡಿದ
‘ಈದಿನ ಈ ಲೋಕದಲ್ಲಿ ನಿಮ್ಮ ವಾಸ ಕಡೆಯ ದಿನ. ಭೋಜನದ ನಂತರ ವಿಶ್ರಾಂತಿ ಪಡೆಯಿರಿ.” ,
ನನ್ನನ್ನು ಭೋಜನ ಶಾಲೆಗೆ ತಲುಪಿಸಿ ಹೊರಟುಹೋದ. ಒಂದು ಕ್ಷಣ ಕುತೂಹಲ ಅನ್ನಿಸಿತು. ಅದೇನು ಕೊನೆಯದಿನ ಅಂದರೆ ಏನು. ನನ್ನನ್ನು ಪುನಃ ಇಲ್ಲಿಂದ ಎಲ್ಲಿಗೆ ಕಳಿಹಿಸುವರು. ಪುನಃ ಭೂಲೋಕಕ್ಕೆ ಹೋಗುವೆನಾ ? . ನಂತರ ಮನ ನಿರ್ಲಿಪ್ತವಾಯಿತು. ನಾಳೆ ಹೇಗೂ ತಿಳಿಯುವದಲ್ಲ. ಸುಮ್ಮನೆ ಏಕೆ ಕುತೂಹಲ ಪಡುವುದು ಅನ್ನಿಸಿತು.
ಮುಂದುವರೆಯುವುದು
Comments
ಉ: ಅಲೋಕ (7) - ಕಡೆಯ ದಿನ
ಶೀರ್ಷಿಕೆ ನೋಡಿ ಇಷ್ಟು ಬೇಗ ಮುಗಿದು ಹೋಯಿತೇ ಅಂದುಕೊಂಡೆ, ಸದ್ಯ, ಇನ್ನೂ ಇದೆ!
In reply to ಉ: ಅಲೋಕ (7) - ಕಡೆಯ ದಿನ by smurthygr
ಉ: ಅಲೋಕ (7) - ಕಡೆಯ ದಿನ
ಮೂರ್ತಿಗಳೆ ನಮಸ್ಕಾರ
ಇಂತಹ ಕತೆಗಳನ್ನು ಪ್ರಾರಂಭಮಾಡಬಹುದು ಆದರೆ ಮುಗಿಸಲು ಸಾಕಷ್ಟು ಕಷ್ಟಪಡಬೇಕು.
ಕತೆಗೊಂದು ತಾರ್ಕಿಕ ಅಂತ್ಯಕೊಡುವುದು ಸಾಹಸ ಅನಿಸುತ್ತದೆ. ಪ್ರಯತ್ನಿಸಿದ್ದೇನೆ.
ಹಾಗೆ ನರಕದ ವರ್ಣನೆ ಹೇಗೊ ಬರೆಯಬಹುದು ಆದರೆ ಸ್ವರ್ಗ ಎನ್ನುವಾಗ ಎಲ್ಲರ ನಿರೀಕ್ಷೆ ಮೀರುವುದು ಬಹಳವೇ ಕಷ್ಟ
ಇನ್ನು ಮೂರು ಅಥವ ನಾಲಕ್ಕು ಕಂತಿನಲ್ಲಿ ಮುಗಿಸುವ ಪ್ರಯತ್ನವಿದೆ ! :)
ವಂದನೆಗಳೊಡನೆ
ಪಾರ್ಥಸಾರಥಿ
ಉ: ಅಲೋಕ (7) - ಕಡೆಯ ದಿನ
ಮುಂದೇನು ಎನ್ನುವ ಕುತೂಹಲವಿದೆ. ನೋಡೋಣ. ಮುಂದುವರೆಸಿರಿ, ಪಾರ್ಥರೇ.
In reply to ಉ: ಅಲೋಕ (7) - ಕಡೆಯ ದಿನ by kavinagaraj
ಉ: ಅಲೋಕ (7) - ಕಡೆಯ ದಿನ
ಖಂಡಿತ ನಾಗರಾಜ ಸಾರ್ ಮುಂದುವರೆಸಿದ್ದೇನೆ, ಈ ಬರಹಕ್ಕೆ ನಿಮ್ಮ ಬರಹಗಳ ಸ್ಪೂರ್ತಿ ಬಹಳವಿದೆ !
ಉ: ಅಲೋಕ (7) - ಕಡೆಯ ದಿನ
ಪಾರ್ಥರೆ,
ನಮ್ಮ ಸಂಪದ ಮಿತ್ರ ಇಟ್ನಾಳರು ರಜೆಯಲ್ಲಿ ರಾಜಸ್ಥಾನ ಇತ್ಯಾದಿ ಕಡೆ ಸುತ್ತುವಂತೆ, ನಾವೂ ಸಹ ಮೂಡ್ ಬಂದ ಹಾಗೇ ಅಂಡಾಂಡ ಬ್ರಹ್ಮಾಂಡ ಸುತ್ತಾಡುತ್ತಿರುತ್ತೇವೆ. ಅ(ನೇಕ)ಲೋಕಗಳನ್ನು- ಕೈಲಾಸ, ವೈಕುಂಠ, ಬ್ರಹ್ಮಲೋಕ ಗೋಲೋಕ, ಹಾಗೇ ಭೂಮಿ ಕೆಳಗೆ ಅತಳ, ವಿತಳ, ಸುತಳ, ತಳಾತಳ, ಮಹಾತಳ,ಪಾತಾಳ ನೋಡಿದ್ದೇವೆ. ಹಾಗೇ ತಾಮಿಶ್ರಾದಿ ೧೮ ನರಕಕ್ಕೂ, ಸ್ವರ್ಗಲೋಕಕ್ಕೂ ಭೇಟಿಯಿತ್ತಿದ್ದೇವೆ.ಎಲ್ಲೂ ನಾವು ಈ "ಅಲೋಕ"ದ ಬಗ್ಗೆ ಕೇಳಿರಲಿಲ್ಲ.. ಈಗ ಓದಿದೆ..ವ್ಹಾ...ನಿಮ್ಮ ಈ ಅಲೋಕದ ಎದುರು ಮೇಲಿನ ಎಲ್ಲಾ ಲೋಕ ಸುತ್ತಾಟ ವ್ಯರ್ಥ. ಮೊದಲೇ ಹೇಳಿದ್ದರೆ ನಾವೂ ಜತೆಯಲ್ಲಿ ಬರುತ್ತಿದ್ದೆವು..
-ಅಂಡಾಂಡಭಂಡ ಸ್ವಾಮಿ.
In reply to ಉ: ಅಲೋಕ (7) - ಕಡೆಯ ದಿನ by ಗಣೇಶ
ಉ: ಅಲೋಕ (7) - ಕಡೆಯ ದಿನ
ಬಹಳ ಕಾಲ ನಿರೀಕ್ಷೆ ಮಾಡಿದ್ದೆ. ಗಣೇಷರು ಕಡೆಗೂ ಕಾಣಿಸಿದರು ಎಂದು ಖುಶ್ಹಿಯಾಯಿತು.
ಅಲೋಕವನ್ನು ಮೊದಲ ಬಾಗದಿಂದ ಓದಿ ಅಭಿಪ್ರಾಯ ತಿಳಿಸಿ.
ನಾನು 18 ನರಕವನ್ನಾಗಲಿ , ಸ್ವರ್ಗವನ್ನಾಗಲಿ ಕಂಡವನಲ್ಲ :)
ಕಲ್ಪನೆಯಷ್ಟೆ :)
In reply to ಉ: ಅಲೋಕ (7) - ಕಡೆಯ ದಿನ by partha1059
ಉ: ಅಲೋಕ (7) - ಕಡೆಯ ದಿನ
ಇಲ್ಲೇಏಏ ಸ್ವರ್ಗ....ಇಲ್ಲೇಏಏನರಕಾ....ಬೇರೇನಿಲ್ಲಾ ..ಸುಳ್ಳು..ಹಾಡು ನೆನಪಾಯಿತು.
ಪಾರ್ಥರೆ, ನಿಮ್ಮಷ್ಟೆ ನನಗೂ ಸಂತೋಷವಾಗಿದೆ. ಸಂಜೆ ನಾಲ್ಕು ಗಂಟೆಯಿಂದಲೇ ಸಂಪದ ಓದುತ್ತಿರುವೆ. ಎಲ್ಲಾ ಬಿಡದೇ ಓದಿದರೇ ತೃಪ್ತಿ(ಈಗ ನಾಗೇಶರ ಅರೋಹಣದ ಎರಡನೇ ಮೆಟ್ಟಲೂ ಓದಿಯಾಗಿದೆ :) ) ಬಾಕಿ ಸಂಪದಿಗರು ಪ್ರತಿಕ್ರಿಯೆ ನೀಡಿರುವುದರಿಂದ ಊಟದ ವಿಷಯ, ಕತ್ತರಿಸಿದ ನಾಲಗೆ ಬಂದ ತಿರುವು ಎಲ್ಲಾ ಸೂಪರ್ ಎಂದು ಬರೆಯದೇ, ನೇರ ಅಲೋಕ ೭ಕ್ಕೆ ಬಂದೆನು.
ಮುಗಿಸುವ ಯೋಚನೆ ಮಾಡಬೇಡಿ..ಹೊಸಹೊಸತು ಹೊಳೆದ ಹಾಗೇ ಸೇರಿಸುತ್ತಾ ಹೋಗಿ...ಲೇಖನ ತುಂಬಾ ತುಂಬಾ ಇಷ್ಟವಾಯಿತು.
In reply to ಉ: ಅಲೋಕ (7) - ಕಡೆಯ ದಿನ by ಗಣೇಶ
ಉ: ಅಲೋಕ (7) - ಕಡೆಯ ದಿನ
ಗಣೇಶರು ಗಣೇಶರೇ ! :)