ಆಹಾ.... ಅದ್ಭುತವೇ ! - ಕವನ

ಆಹಾ.... ಅದ್ಭುತವೇ ! - ಕವನ

ಬರಹ

ಆಹಾ.... ಅದ್ಭುತವೇ !

ಗರಬಡಿದು ಕುಳಿತವನಿಗೆ ಸಿಡಿಲ ಸದ್ದು !
ಮೊಬೈಲಿನೊಡಲಲ್ಲಿ
ಸಂದೇಶದ ಸುಖಪ್ರಸವ!

ನಲುಗುತ್ತಿಲ್ಲ ಗಾಳಿಗೆ ಮಲ್ಲಿಗೆ ಬಳ್ಳಿ,
ನಗುವಿಲ್ಲ ಕನಸಿಗೆ ಬಂದ ಮಲ್ಲಿ ಮೊಗದಲ್ಲಿ.
"ಹಾಳು... ಎಸ್ಸೆಮ್ಮೆಸ್ಸು....!"
ವಿಧಿಯಿಲ್ಲದೆ ಕಣ್ಣಾಡಿತು.

ಮಲ್ಲಿಗೆಬಳ್ಳಿ ಮೆಲ್ಲಗೆ ಕಂಪಿಸಿತು.

ಅನಾಮಿಕ ಸಂದೇಶ
ಜೊತೆಗೊಂದು ಸಾಲು-
"ಅದ್ಭುತ ಘಟಿಸುತ್ತದೆ, ಇದನ್ನು ರವಾನಿಸಿದರೆ.
ನಾಲ್ಕು ಜನರಿಗಾದರೆ ನಾಲ್ಕು ಗಂಟೆಗಳಲ್ಲಿ,
ಎಂಟು ಜನರಿಗಾದರೆ ಎರಡೇ ಗಂಟೆಗಳಲ್ಲಿ."

ಎಂಟು ದುಬಾರಿಯಾಗಿ, ನಾಲ್ಕು ಆಯ್ಕೆಯಾಯಿತು.
ಸಂದೇಶ ರವಾನೆಯಾಯಿತು.

ಇದೀಗ ಅದ್ಭುತಕ್ಕೆ ಕಾಯುವ ಸರದಿ.,

ಸಂಜೆ ಇಳಿದಿತ್ತು, ಹೊನ್ನೆ ಬಾಗಿತ್ತು.
ಭೂರಮೆಯ ಮೂಗುತಿ ನೀರ ನಡುವೆ ಮುಳುಗುತ್ತಿತ್ತು.
ಗಾಳಿ ತಂಪಿತ್ತು. ತೇಲಿ ಬರುತ್ತಿತ್ತು,
ನವ ಸುಗಂಧವ ಹೊತ್ತು, ಮೂಗುಳ್ಳವರಿಗೆ ನತ್ತು!

ಹೆಜ್ಜೆ ಹಾಯಿತು ಮನೆಯೆಡೆಗೆ.
ದಾರಿಯಲ್ಲಿ ಅದ್ಭುತದ ಸುಳಿವಾಗಲಿಲ್ಲ!

ಮನೆಯಲ್ಲಿ-
ಮುಂಜಾನೆ ಮುನಿದ ಶ್ರೀಮತಿ ಮಾತೊಗೆಯಲಿಲ್ಲ.
ತಿಂಗಳಾರಾದರೂ ಗೆಳೆಯ ಸಾಲ ತೆಗೆಯಲಿಲ್ಲ.
ಇದು ಅದ್ಭುತವಿರಬಹುದೆ?
ಛೆ! ಎಲ್ಲಾಧರೂ ಉಂಟೆ?
ಅದ್ಭುತ ಹೀಗೆ ನಡೆವುದುಂಟೆ?
(ಶ್ರೀಮತಿಯ ಮೌನ, ಕೆಲವೊಮ್ಮೆ ವರದಾನ)

ಆಗುತ್ತಿದೆ ರಾತ್ರಿ ಹನ್ನೊಂದು,
ಘಟಿಸಲಿಲ್ಲ ಇನ್ನೂ ಏನೊಂದು.
ಎಷ್ಟು ಜನರಿದ್ದಾರೊ ಪಾಪ ಅದ್ಭುತಕ್ಕೆ..?
ಅವರನ್ನೆಲ್ಲಾ ಮುಗಿಸಿ ಬರಬೇಕಲ್ಲಾ!
ಸಮಾಧಾನ ಮನಸ್ಸಿಗೆ.

ಇವಳೇ, ಲಾಟರಿ ಏನಾದರೂ ಕೊಂಡೆಯಾ? ಎಂಬ ಮಾತು
ಮುಂಜಾವಿನ ಮುನಿಸು ಮುಂದುವರೆಸಲು ಸಹಕರಿಸಿತು.

ಹತ್ತಿರ ಹತ್ತಿರ ಹನ್ನೆರಡು.
ಅದ್ಭುತವ ಕಾದಿವೆ ಕಣ್ಣೆರಡು!
ಒಂದಕ್ಕೊಂದು ಚುಂಬಿಸಿ,
ಅಗಲಿದವು ಮುಳ್ಳು!

ಬೋಧಿವೃಕ್ಷವ ಹಾಯ್ಧು ಬಂತು,
ತಣ್ಣನೆ ಗಾಳಿ ಮೂಗಿಗಡರಿ.
"ಅರೆ.. ನಾನಿನ್ನೂ ಬದುಕಿರುವೆನಲ್ಲಾ...!

ರಚ್ಚೆ ಹಿಡಿದ ಮಗು ತಾಯಿಗವುಚಿ ಮಲಗಿತ್ತು.

ಯಜಮಾನ್ ಫ್ರಾನ್ಸಿಸ್
೨೬/೧೧/೨೦೦೪