ರಾಜಸ್ಥಾನವೆಂಬ ಸ್ವರ್ಗದ ತುಣುಕು -5 (ಜೈಸಲ್ಮೇರ್ ಎಂಬ ಮರಳರಾಣಿಯ ತೆಕ್ಕೆಯಲ್ಲಿ) - ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು -5 (ಜೈಸಲ್ಮೇರ್ ಎಂಬ ಮರಳರಾಣಿಯ ತೆಕ್ಕೆಯಲ್ಲಿ) - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ರಾಜಸ್ಥಾನವೆಂಬ ಸ್ವರ್ಗದ ತುಣುಕು -5

(ಜೈಸಲ್ಮೇರ್ ಎಂಬ ಮರಳರಾಣಿಯ ತೆಕ್ಕೆಯಲ್ಲಿ) - ಲಕ್ಷ್ಮೀಕಾಂತ ಇಟ್ನಾಳ

      ಕರ್ಣಿ ಮಾತಾ ಮಂದಿರದಿಂದ ಸೀಧಾ ಲಾಡ್ಜಿಗೆ ನಮ್ಮ ಸವಾರಿ ಹೊರಟಿತು. ಲಾಡ್ಜ್ ತುಂಬ ಲಕ್ಷುರಿಯಿಂದ ಐಶಾರಾಮಿಯಾಗಿತ್ತು. ಹೆಚ್ಚಿನ ಭಾಗ ವಿದೇಶೀಯರಿಂದಲೇÀ ತುಂಬಿತ್ತು. ತಿರುಗಾಟದಲ್ಲಿ ತುಸು ಹೆಚ್ಚೇ ದಣಿದಿದ್ದುದರಿಂದ ಹಸಿವಾಗಿತ್ತು. ರಾಜಸ್ಥಾನಿ ಬಾಜರಾ ರೋಟಿಯ ಬಿಸಿಯಾದ, ರುಚಿಯಾದ ಭೋಜನ ಸವಿದು, ಬೇಗನೇ ನಿದ್ದೆಗೆ ಜಾರಿದೆವು. ಬೆಳಿಗ್ಗೆ ಬೇಗ ಎದ್ದು ರೆಡಿಯಾಗಿ, ಹೊರಟಾಗ, ಅಂಥ ಗದ್ದಲದಲ್ಲಿಯೂ ಕೂಡ, ನಾವು ಹಾಗೆಯೇ ಹೊರಗೆ ನಮ್ಮ ರಥ ಇನೋವಾ ಕಡೆಗೆ ಹತ್ತಲು ಅಣಿಯಾಗುತ್ತಿದ್ದಂತೆ, ಹೋಟಲ್ ಪರಿಚಾರಕ ಬಂದು ಕಾಳಜಿಯಿಂದ ತಾವು ಬ್ರೇಕ್ ಫಾಸ್ಟ್ ಮಾಡದೇ ಹೋಗುತ್ತಿದ್ದೀರಲ್ಲ ಸರ್, ನಮ್ಮಲ್ಲಿ ಕಾಂಪ್ಲಿಮೆಂಟ್ ಬೆಳಗಿನ ತಿಂಡಿ ಇದೆ. ತಾವು ಟಿಫನ್ ಮಾಡಿಯೇ ಹೋಗಿ, ಎಂದು ಕರೆದ. ವಿದೇಶೀಯರಿಂದಲೇ ತುಂಬಿದ್ದರಿಂದ ಹಾಗೂ ನಮಗೆ ಬಹಳ ಬೇಗ ತಿಂಡಿ ತಿಂದು ಅಭ್ಯಾಸವಿಲ್ಲದ್ದರಿಂದ ಮುಂದೆಲ್ಲಾದರೂ ನೋಡಿದರಾಯಿತು ಎಂದುಕೊಂಡೇ ಕೆಳಗೆ ಇಳಿದಿದ್ದೆವು ಹಾಗೂ ನಮಗೆ ಅಲ್ಲಿ ಕಾಂಪ್ಲಿಮೆಂಟರಿ ಟಿಫನ್ ಇರುವುದೂ ಕೂಡ ತಿಳಿದಿರಲಿಲ್ಲ. ಹೀಗಾಗಿ ಅವನ ಕರೆಗೆ ಓಗೊಟ್ಟು, ಅಲ್ಲಿಯೇ ಸ್ವಾದಿಷ್ಠವಾದ ಬಗೆ ಬಗೆಯ ಬಫೆಯ ತಿಂಡಿ ತಿಂದು ಧನ್ಯವಾದ ಹೇಳಿ ಹೊರಹೊರಟೆವು.

      ಬೀಕಾನೇರ್ ಸಿಹಿ ತಿಂಡಿಗೆ ಸುಪ್ರಸಿದ್ಧ. ಅಲ್ಲಿಯ ಸ್ವೀಟ್ ಅಂಗಡಿಯೊಂದರಲ್ಲಿ ತರತರಹದ ತಿನಿಸುಗಳ ಹೆಸರು ನೆನಪಿಲ್ಲ, ಹಾಂ! ಬಿಸಿ ಜಿಲೇಬಿಯ ಮುಖ ಮಾತ್ರ ಗುರುತು ಸಿಕ್ಕಿತು, ಉಳಿದಂತೆ ಎಲ್ಲಾ ಅಪರಿಚಿತ ಮುಖಗಳೇ. ಕೆಲ ಗುಂಡಗೆ ಕೆಲ ಚಪ್ಪಟೆ, ಇನ್ನು ಕೆಲವಕ್ಕೆ ಆಕಾರವೇ ಇಲ್ಲ, ಅಮೀಬಾ ಅನ್ನಬಹುದು, ಒಂದು ಮಾತ್ರ ಖರೆ, ಎಲ್ಲಾ ತುಪ್ಪದಲ್ಲಿ ಮಾಡಿದ್ದು.. ಹೀಗೆ ಸಿಹಿ ಮಿಕ್ಷರ್‍ಗಳ ತಿನಿಸುಗಳ ಪ್ಯಾಕೇಟ್ ಕಟ್ಟಿಸಿಕೊಂಡು ಜೈಸಲ್ಮೇರನೆಡೆ ನಮ್ಮ ಪ್ರಯಾಣಕ್ಕೆ ಚಾಲನೆ ನೀಡಿದೆವು. ದಾರಿಯಲ್ಲಿ ಅವುಗಳನ್ನು ಒಂದೊಂದಾಗಿ ಬಿಚ್ಚಿ ತಿನ್ನತೊಡಗಿದರೆ, ನನಗೊಬ್ಬನಿಗೇ ಇವೆಲ್ಲ ಇದ್ದರೆ ಚನ್ನಾಗಿತ್ತಲ್ಲವೆ ಎಂಬ ಮಗುವಿನ ಮೊದ್ದು ತನದ ಆಶೆಯೊಂದು ಮನದಲ್ಲಿ ಮೂಡಿ, ಒಂದಿಷ್ಟು ಹೆಚ್ಚಿಗೆ ತಿಂದಿದ್ದನ್ನು ಆ ಮೇಲೆ ಅವರಿಗೆ ಹೇಳಿದೆ, ಮೊದಲೇ ಹೇಳಿದ್ದರೆ ನಮ್ಮದನ್ನೂ ಕೊಡುತ್ತಿದ್ದೆವಲ್ಲ ಎಂದು ಬಿಡೆಬೇಕೇ! 'ಎಲಾ ಸ್ವಾರ್ಥವೇ , ನೋಡು , ಕಲಿ', ಎಂದೆ ಮನಸ್ಸಿಗೆ, . ಉಹೂಂ, ಪ್ರೀತಿಯಲ್ಲಿ, ಊಟದಲ್ಲಿ ಎಲ್ಲಾ ಸರಿಯೇ ಎಂದಿತು ಸೋಲದ ಮನಸ್ಸು. !

      ಬೀಕಾನೇರನ ನೆಲದ ಕೆಲ ಭಾಗಕ್ಕೆ ಗ್ರೇಟರ್ ಗ್ಯಾಂಜಿಸ್ ( ಇಂದಿರಾ ಕೆನಾಲ್) ಪ್ರೊಜೆಕ್ಟ್‍ನ ಕಾಲುವೆ ಹರಿದಿದ್ದು, ಅದರ ಕೆಲ ಭಾಗಗಳಿಗೆ ನೀರು ಲಭ್ಯವಿದೆ ಹಾಗೂ ನೀರಾವರಿ ಸೌಲಭ್ಯವಿದೆ ಎಂದು ಸರವನ್ ತಿಳಿಸಿದ. ನಾವು ಹೊರಟ ದಾರಿಯಲ್ಲಿ ಅದರ ಸುಳಿವೆಲ್ಲೂ ಕಾಣಿಸಲಿಲ್ಲ, ಅದೇ ಬಂಜರು ಬರಡು ಕುರುಚಲು ಪೊದೆಗಳ ಸಮತಟ್ಟಾದ ಒಣ ಭೂಮಿ ಸುತ್ತಲೂ , ಮುಂದೆಯೂ, ಹಿಂದೆಯೂ ಎಡಕ್ಕೂ ಬಲಕ್ಕೂ . ಎಲ್ಲಿಯೂ ಸಣ್ಣ ಬೆಟ್ಟಗಳೂ ಕೂಡ ಇಲ್ಲ, ಎಲ್ಲವೂ ಸಾಗರದಂತೆ ಸಮತಟ್ಟು. ತೆರೆ ತೆರೆಗಳಲ್ಲಿ. ತುಸು ಏರು ಇಳಿವುಗಳಲ್ಲಿ. ಕಾಣುತ್ತಲೇ ಇರುತ್ತದೆ ನಮ್ಮ ಕಣ್ಣುಗಳಿಗೆ.. .....ಅಡೆತಡೆಗಳೇ ಇಲ್ಲ. ಜಾಲಿಯ ಗಿಡಗಳೂ ಕೂಡ ಬರಬರುತ್ತ ವಿರಳವಾಗುತ್ತ ಸಾಗುತ್ತದೆ ದಾರಿ. ರಾಜಸ್ಥಾನದಲ್ಲಿ ರಸ್ತೆಗಳನ್ನು ತುಂಬ ಉತ್ತಮ ಗುಣಮಟ್ಟದಲ್ಲಿ ಕಾಯ್ದುಕೊಂಡಿದ್ದಾರೆ. ನಾವು ಇದುವರೆಗೂ ಪಯಣಿಸುತ್ತಿದ್ದುದು ರಾಷ್ಟ್ರೀಯ ಹೆದ್ದಾರಿಗಳಲ್ಲಿ. ಈಗ ನಾವು ಚಲಿಸುತ್ತಿದ್ದುದು ಕೂಡ ಎನ್ ಹೆಚ್ 15 ರಲ್ಲಿ. ಬೀಕಾನೇರ್‍ದಿಂದ ಜೈಸಲ್ಮೇರ್ ಸುಮಾರು 330 ಕಿಮೀ. ಹೀಗಾಗಿ ನಮ್ಮ ಪಯಣದ ವೇಗ 80 ಕಿಮೀ ಕಾಯ್ದುಕೊಂಡಿದ್ದ ಸರವನ್. ಆದರೂ ನಡುನಡುವೆ ರಸ್ತೆ ಮಧ್ಯೆ ಕುರಿ, ಆಡುಗಳ ಹಿಂಡುಗಳು, ಜಿಂಕೆಗಳು, ನವಿಲುಗಳು ಬಹಳ ಸಂಖ್ಯೆಯಲ್ಲಿ ಕಾಣಸಿಗುತ್ತವೆ, ಹೀಗಾಗಿ ಸ್ವಲ್ಪ ಕಡಿಮೆ ವೇಗದಲ್ಲಿ ನಡೆಸಲು ಇಷ್ಟಪಡುತ್ತಾರೆ ಡ್ರೈವರುಗಳು. ಕಾನೂನುಗಳು ಬಹಳ ಸ್ಟ್ರಿಕ್ಟ್ ಅಲ್ಲಿ, ಹೀಗಾಗಿ ಬಹಳ ಜಾಗ್ರತೆ ವಹಿಸಲೇಬೇಕು. ಅದು ಇರಬೇಕು ಕೂಡ ಅಲ್ಲವೇ.. ನಾವಂತೂ ಅವನಿಗೆ ಯಾವುದೇ ರಿಸ್ಟ್ರಿಕ್ಷನ್ ಹಾಕಿರಲಿಲ್ಲ. ಬಿ ಕಂಫರ್ಟೇಬಲ್ ಎಂದೇ ಹೇಳುತ್ತಿದ್ದೆ..

    ಮೊದಲು ಈಗ ಒಂದಿಪ್ಪತ್ತು ವರ್ಷಗಳ ಹಿಂದೆ ಅಲ್ಲಿ ದಾರಿ ಮಧ್ಯದಲ್ಲಿ ಅಲ್ಲಲ್ಲಿ ಅಪರೂಪವಾಗಿ ಹಳ್ಳಿಗಳ ಹೊರತಾಗಿ,, ಎಲ್ಲಿಯೂ ಜನವಸತಿಗಳೇ ಇರುತ್ತಿರಲಿಲ್ಲ. ಈಗ ಬೋರವೆಲ್‍ಗಳು ಬಂದ ಮೇಲೆ, ಕೆಲವು ಜಾಗಗಳಲ್ಲಿ ಕೆಲ ಬೊಗಸೆಯಷ್ಟಾದರೂ ಉಪ್ಪು ನೀರಾದರೂ (ಖಾರೇ ಪಾನೀ) ದೊರೆಯುತ್ತದೆ. ಹೀಗಾಗಿ ಅಲ್ಲಲ್ಲಿ ಹೊಲಗಳಲ್ಲಿ ಜನ ತಮ್ಮ ಜಾನುವಾರುಗಳೊಂದಿಗೆ ಅಪರೂ¥ವಾಗಿ ವಾಸವನ್ನೂ ಮಾಡತೊಡಗಿದ್ದಾರೆ ಎಂದು ಹೇಳುತ್ತಿದ್ದ, ಇವೂ ಕೂಡ ವಿರಳಾತಿ ವಿರಳ. ಮೊದಲು ಅಲೆಮಾರಿ (ನೋಮ್ಯಾಡಿಕ್) ಕುರಿಗಾಹಿಗಳು ರಸ್ತೆ ಅಂಚಿಗೆ ನಿಂತು, ನೀರಿಗಾಗಿ ಕೈಚಾಚಿ ನಿಲ್ಲುತ್ತಿದ್ದರಂತೆ, ಆ ಕಡೆ ಹೋಗುವ ಲಾರಿಗಳವರು ಇವರಿಗಾಗಿ ಖಾಲಿ ಬಾಟಲಿಗಳನ್ನು ತುಂಬಿಟ್ಟುಕೊಂಡು ಇವರು ಕಂಡಲ್ಲೆಲ್ಲ ಅವರತ್ತ ಎಸೆಯುತ್ತಿದ್ದರು, ಮತ್ತು ಈ ಪದ್ಧತಿ ಈಗಲೂ ಪ್ರಚಲಿತದಲ್ಲಿದೆಯಂತೆ.

    ತೀರ ಇತ್ತೀಚೆಗೆ ಸರವನ್ ಒಂದು ಕೋಲ್ಕತ್ತದ ಕುಟುಂಬವನ್ನು ರಾಜಸ್ಥಾನದ ಪ್ರವಾಸಕ್ಕೆ ಕರೆದೊಯ್ದಿದ್ದನಂತೆ. ಈ ಬಟಾ ಬಯಲು ನೋಡಿ ಅವರಿಗೆ ಅತೀವ ಖುಷಿಯಾಗಿತ್ತು. ಹೀಗೂ ಇರಲು ಸಾಧ್ಯವೇ? ' ಕಿತನಾ 'ಫಾಕಾ ಫಾಕಾ (ಖಾಲೀ ಖಾಲೀ) ', ಹಮ್ ಉಧರ್ ಕಿತನಾ ಛೋಟಾ ಜಗಾ ಮೆಂ ರಹತೇ ಹೈಂ. ಯಹಾಂ ತೊ ಆಸಮಾನ್ ಜೈಸೆ ಸೈಟ್ಸ್ ಪಡೇ ಹೈಂ,' ( ಇಲ್ಲಿ ಎಷ್ಟೆಲ್ಲಾ ಖಾಲಿ ಆಗಸದಷ್ಟು ಅಗಲ ಸೈಟುಗಳಿವೆ, ಅಲ್ಲಿ ಕಲ್ಕತ್ತೆಯಲ್ಲಿ ನಿಲ್ಲಲೂ ಆಗದಷ್ಟು ಸಣ್ಣ ಸಣ್ಣ ಮನೆಗಳಲ್ಲಿ ವಾಸಿಸುತ್ತೇವೆ ನಾವು) ಎಂದು ಉದ್ಘರಿಸಿದ್ದನಂತೆ'

    ಹೈನೋದ್ಯಮಕ್ಕೆ ಬರಡು ಕುರುಚಲು ವಿಶಾಲ ನೆಲ ಹೇಳಿಮಾಡಿಸಿದಂತಿದೆ, ಅಲ್ಲಲ್ಲಿ ಜರ್ಶಿ ದನ ಕರುಗಳನ್ನು, ಆಡು ಕುರಿಗಳನ್ನು, ಒಂಟೆಗಳನ್ನು ಯಥೇಚ್ಛವಾಗಿ ದೊಡ್ಡ ದೊಡ್ಡ ಎಕರೆಗಟ್ಟಲೆ ಕಂಪೌಂಡುಗಳ ಒಳಗೆ ಸಾಕಿರುತ್ತಾರೆ. ಅಲ್ಲಲ್ಲಿ ವಿಶಾಲ ಪ್ರದೇಶಗಳಲ್ಲಿ ಸೋಲಾರ್ ಪ್ಯಾನಲ್‍ಗಳನ್ನು ಕಿಮೀಗಟ್ಟಲೆ ಅಳವಡಿಸಿ, ಖಾಸಗಿಯಾಗಿ ವಿದ್ಯುತ್ ಉತ್ಪಾದಿಸಲಾಗುತ್ತಿದೆ.

    ಬಿಕಾನೇರ್ ದಿಂದ ಜೈಸಲ್ಮೇರ್ ಮಧ್ಯದಲ್ಲಿ ಭರತಖಂಡ ಮರೆಯಲಾರದ ಜಗವೊಂದು ಬರುವುದು. ಒಮ್ಮೆ ಬೋರ್ಡನಲ್ಲಿ ಅದರ ಹೆಸರು ನೋಡಿ, ಥ್ರಿಲ್ ಅನಿಸಿತು. ಓಹೋ! ನಾನು ಅಲ್ಲಿಗೆ ಹೋಗುವೆನೇ. ಖುಷಿಯಿಂದ ಅರಳಿ ಕುಣಿದಾಡಿತು ಮನಸ್ಸು. ಅದೇ ಬಿಕಾನೇರ್‍ದಿಂದ ಈ ರೂಟ್‍ನಲ್ಲಿ 225 ಕಿಮೀ ದೂರದಲ್ಲಿ ಇರುವ ಪೋಕರಾನ್, ಎಂಬ ಊರು. ನೆನಪಿದೆಯೇ ಭಾರತದ ಸೈನ್ಯ ಪಡೆಗೆ ಅಣುಬಾಂಬುಗಳನ್ನು ಸೇರಿಸಿದ, ಭಾರತೀಯ ಸೇನೆಯ ಹೆಮ್ಮೆಯ ಕಾಶಿ ಇದು. ಸುತ್ತಲಿನ ಜಗತ್ತು ಒಂದೊಮ್ಮೆ ಬಂದೂಕಿನ ಗುರಿಯನ್ನು ನಮ್ಮೆಡೆಗೆ ಮಿಸೈಲ್‍ನ ಟ್ರಿಗರನ್ನು ಒತ್ತಲು, ಹತ್ತು ಸಾರಿ ಯೋಚಿಸುವಂತೆ ಮಾಡಿದ ಸ್ಥಳವಿದು. ದೇಶಕ್ಕೆ ಒಂದು ರೀತಿಯ ವಜನು, ವರ್ಚಸ್ಸು ತಂದುಕೊಟ್ಟ ಪವಿತ್ರ ಮಣ್ಣಿನ ನೆಲವಿದು. ಸುಮಾರು ಮೂರು ಗಂಟೆಗಳ ಪ್ರಯಾಣದಲ್ಲಿ ಒಂದೊಂದು ಮೈಲಿಗಲ್ಲನ್ನು ಎಣಿಸುತ್ತ, ಕುತೂಹಲದ ರೆಕ್ಕೆಗಳಲ್ಲಿ, ಸ್ಥಬ್ಧ ಚಿತ್ರದಲ್ಲಿ ಹಾಯ್ದು ಬಂದೆವು. ದಾರಿಯಲ್ಲಿ ಫಲೋಡಿ ಎಂಬ ಸ್ಥಳ ಬಂತು. ಇಲ್ಲಿ ಬೆಂಕಿಪೊಟ್ಟಣದಿಂದ ಬೆಂಕಿ ಹೊತ್ತಿಸಲು ಕಡ್ಡಿಯನ್ನು ಅದಕ್ಕೆ ಗೀರ ಬೇಕಿಲ್ಲ. ಅದು ತಂತಾನೇ ಹೊತ್ತಿಕೊಳ್ಳುತ್ತದೆ ಎಂದು ನಗುತ್ತ ಹೇಳಿದ ಸರವನ್. ರಾಜಸ್ಥಾನದ ' ಹಾಟೆಸ್ಟ್ ' ಪ್ರದೇಶವಿದು ಎಂದು ಹೇಳಿದ. ಅಲ್ಲಿಂದ ತುಸುವೇ ದೂರ ಚಲಿಸಿ, ನಾವು ಪೋಕರಾನ್‍ಗೆ ತಲುಪಿದಾಗ . ಮಟ ಮಟ ಮಧ್ಯಾಹ್ನದ ಸಮಯ. ಬಿಸಿಲು ಜೋರಾಗಿತ್ತು. ಪೋಖ್ರಾನ್ ಇದು ಒಂದು ಪುಟ್ಟ ಪಟ್ಟಣ. ಇತಿಹಾಸ ಕಾಲದಿಂದಲೂ ಕೋಟೆಗಳು, ಕೊತ್ತಲುಗಳು, ಜೋಧಪುರ ಮಹಾರಾಜರ ಮಾಂಡಲಿಕ ರಾಜರು ಆಳಿದ ಊರು ಇದು.. . ಎಲ್ಲ ಕಡೆಗೂ ಮಿಲಿಟರಿಯು ಇರುವುದನ್ನು ಗುರುತಿಸಿದೆ. ಆ ಯುವ ಮೀಸೆಯ ಉತ್ಸಾಹೀ ಪಡೆಯನ್ನು ನೋಡಿ ಅವರ ಬಗ್ಗೆ ಒಂದು ರೀತಿಯ ಗೌರವ ತಾನೇ ತಾನಾಗಿ ಬಂದು, ಅವರ ಕೈಂಕರ್ಯಗಳಿಗೆ, ಅವರ ಸೇವೆಗೆ ಮನ ನಮಿಸಿತು.

     ಒಂದು ವೇಳೆ ನಿದ್ದೆ ಆವರಿಸಿದ್ದರೆ ದಾಟಿ ಹೋಗಬಾರದಲ್ಲ!, ಎಂದು ಈ ನೆಲ ತಲುಪುತ್ತಲೇ ಸರವನ್‍ಗೆ ಗಾಡಿ ನಿಲ್ಲಿಸಲು ಮೊದಲೇ ಹೇಳಿ ಇಟ್ಟಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಅಸಲಿಗೆ ನಿದ್ದೆಯೇ ಎದ್ದು ಕುಳಿತಿತ್ತು, ಆ ನೆಲವನ್ನು ಆಹ್ವಾಹಿಸಲು. ಗಾಡಿಯಿಂದ ಕೆಳಗಿಳಿದೆ. ನಮಗೆಲ್ಲಾ ಪವಿತ್ರವೆನ್ನಿಸಲೇಬೇಕಾದ,, ನಮ್ಮ ನೆರೆಹೊರೆ ದೇಶಗಳು, ಅದೇಕೆ ಅಮೇರಿಕೆಯಂತಹ ದೊಡ್ಡಣ್ಣರಂತವರು ಕೂಡ ನಮ್ಮೆಡೆಗೆ ಅಕ್ಷರಶ: ಕೆಮ್ಮಲಾರದಂತೆ ಮಾಡಿದ ಪುಣ್ಯಭೂಮಿ ಇದು. 1974ರ ಅಣುಸ್ಫೋಟದಿಂದ, 'ಬುದ್ಧನನ್ನು ನಗಿಸಿದ' ಆ ಮಹಾ ಐತಿಹಾಸಿಕ ಸ್ಫೋಟ, ಮತ್ತೆ 1998 ರಲ್ಲಿ ಮತ್ತೊಮ್ಮೆ ಜಗತ್ತನ್ನೇ ಎದುರು ಹಾಕಿಕೊಂಡು ಬ್ಲಾಸ್ಟಿಸಿದ 5 ಅಣುಪ್ರಯೋಗಗಳು ಭರತಖಂಡವನ್ನೇ ಎದೆಯುಬ್ಬಿಸಿ ನಿಲ್ಲುವಂತೆ ಮಾಡಿದ್ದು ಸಾಮಾನ್ಯವೇ. ಕೆಳಗೆ ಇಳಿದೆ ಎಂದು ಹೇಳಿದೆನಲ್ಲವೇ, ರಸ್ತೆಯಿಂದ ತುಸು ದೂರ ಶ್ವೇತ ಮರಳು ದಿನ್ನೆಯತ್ತ ಸಾಗಿ, ಆ ಮಣ್ಣಿನತ್ತ ಬಾಗಿ. ಅದರ ಆ ಪವಿತ್ರ ಮಣ್ಣನ್ನು ಮುಷ್ಠಿಯಲ್ಲಿ ಹಿಡಿದು ಹಣೆಯ ವಿಭೂತಿಯಾಗಿಸಿದೆ. ಡಾ. ಹೋಮಿ ಜಹಾಂಗಿರ ಭಾಭಾ, ಅಣು ಕೇಂದ್ರದ ವಿಜ್ಞಾನಿಗಳಿಗೆ, ಡಾ, ಅಬ್ದುಲ್ ಕಲಮ್‍ರಿಗೆ, ರಾಜಾ ರಾಮಣ್ಣ ಆದಿಯಾಗಿ ಎಲ್ಲ ವಿಜ್ಞಾನಿಗಳಿಗೆ ನನ್ನ ಮನದಾಳದ ಹೃನ್ನಮನವನ್ನು ಇದೇ ಪುಣ್ಯಭೂಮಿಯಿಂದ ಅಣುಸ್ಫೋಟಿಸಿದ ದಿಕ್ಕಿನತ್ತ, ಒಂದು ಸೆಲ್ಯೂಟ್ ಸಲ್ಲಿಸಿ, ಕೃತಜ್ಞನಾದೆ. ನಾನು ಮಾಡುತ್ತಿರುವುದನ್ನು ದೂರದಿಂದ ಗಮನಿಸಿದ ಇಂಡಿಯನ್ ಆರ್ಮಿಯ ಸೈನಿಕನೊಬ್ಬ ತನ್ನ ದೊಡ್ಡದೊಂದು ಟ್ರಕ್‍ನಿಂದ ಹೃತ್ಫೂರ್ವಕ ನಗೆಬೀರಿ, ಜಯದ ಸಂಕೇತ ತೋರಿ , ತನ್ನ ಏಕೆ -47 ರೈಫಲ್‍ನ್ನು ತನ್ನ ಬಲಿಷ್ಠ ತೋಳುಗಳಲ್ಲಿ ಎತ್ತಿ ಹಿಡಿದು, ನಗುಮೊಗದಿಂದ ಅಭಿನಂದಿಸಿದ. ನನ್ನತ್ತ ಹೆಬ್ಬೆರಳು ಪ್ರದರ್ಶಿಸಿ ಭೇಷ್ ಎನ್ನುವಂತೆ ತೋರಿದ..

    ಯಾವ ತಾಯಿಯ ಪುಣ್ಯ ಮಗನೋ, ಅಸಲು ಅಭಿನಂದಿಸಬೇಕಾದವನು ನಾನು, ತಮ್ಮ ಮುದ್ದಿನ ಮಡದಿ ಮಕ್ಕಳಾದಿ, ಮುಪ್ಪಿನ ಅಪ್ಪ ಅಮ್ಮಂದಿರನ್ನು ಬಿಟ್ಟು ಅಲ್ಲಿ ಬಾರ್ಡರ್‍ನಲ್ಲಿ ರಣಬಿಸಿಲಿನಲ್ಲಿ ನಮಗಾಗಿ ಜೀವ ಸವೆಸುತ್ತಾರಲ್ಲ, ಅವರೆಲ್ಲರ ನೆನಪಾಗಿ, ಇದು ನಿನಗೆ ಎಂದು ಅವನೆಡೆ ಕೈ ತೋರಿ ಒಂದು ಸೆಲ್ಯೂಟ್ ಹೊಡೆದೆ. ಖುಷಿಯಿಂದ ನಕ್ಕಿತು ಇಂಡಿಯನ್ ಆರ್ಮಿ. ದೇವರು ನಿಮಗೆ ಸುಖವಾಗಿಡಲಪ್ಪ ಎಂದು ಹೇಳಿ ಎರಡು ಕೈಮೇಲೆದೋರಿ ಅವನೆಡೆ ಬಾಗಿದೆ. ಅವನ ಕಣ್ಣುಗಳು ಮಿಂಚಿದ್ದನ್ನು ಗ್ರಹಿಸಿದೆ. ಎಷ್ಟೊಂದು ಅಭಿಮಾನ ಪಟ್ಟಿತು ಆ ಜೀವ. ಟ್ರಕ್ಕಿನೊಳಗಿನ ಗೆಳೆಯರನ್ನು ಕರೆದನೆಂದು ತೋರುತ್ತದೆ, ಅವರು ನನ್ನತ್ತ ಅಭಿಮಾನದಿಂದ, ಮನೆಯ ಅಣ್ಣನನ್ನು ಅಕ್ಕರೆಯಿಂದ ನೋಡುವಂತೆ, ನೋಡುತ್ತ ನಿಂತುಬಿಟ್ಟಿದ್ದನ್ನು, ಆ ಅಕ್ಕರೆಯ ನಿಷ್ಕಲ್ಮಷ ನಗುವಿನ, ಮೆಚ್ಚುಗೆಯ ನೋಟಗಳನ್ನು ಎಂದಿಗೂ ಮರೆಯಲಾರೆ. ಕ್ಷಣಮಾತ್ರದಲ್ಲಿ ಜರುಗಿದ ಸಣ್ಣ ಘಟನೆಯೊಂದು ಜೀವಮಾನವಿಡೀ ನೆನಪಿಡುವಂತಾಗಿತ್ತು. ಅಲ್ಲಿ ತಮಗೆ ಬೇಕಿರುವುದನ್ನು ಖರೀದಿಸಲು ಆ ಯುವ ಸೈನಿಕ ಬಂಧುಗಳ ಟೀಮ್ ನಿಂತಿದ್ದಿರಬಹುದೇನೋ. . ಇವರೇ ಅಲ್ಲವೇ ನಮ್ಮೆಲ್ಲರ ನೆಮ್ಮದಿಗೆ, ನಿದ್ದೆಗೆ ಕಾರಣರಾದವರು. ನಮಸ್ತೆ ಗೆಳೆಯರೆ, ನಮಸ್ತೆ ನಿಮಗೆ, ನೂರು ಶರಣು, ನೂರು ಹರಕೆ ನಮ್ಮದು ನಿಮಗೆ,....

    ಇದನ್ನೆಲ್ಲ ನೋಡುತ್ತಿದ್ದ, ಸರವನ್ ನನ್ನತ್ತ ದಿಙ್ಮೂಢನಾಗಿ ಬಂದು, ಮಾತೇ ಹೊರಡದೇ ನಿಂತುಬಿಟ್ಟ. ತುಸು ತಡೆದು 'ಆಪ್ ಭಾರೀ ಹೈ ಸಾಬ್' ಎಂದು ನನ್ನ ಕೈ ಹಿಡಿದು ಹಣೆಗೆ ಒತ್ತಿಕೊಂಡ. ಅವನ ಕಣ್ಣಾಲಿಗಳು ತುಂಬಿಬಂದಿದ್ದವು. 'ಮುಝೆ ಗರ್ವ ಮೆಹಸೂಸ್ ಹೋರಹಾ ಹೈ ಸರ್, ಎಂದ, ಕಣ್ಣೆವೆ ಪಿಳುಕಿಸದೇ ನಿಂತುಬಿಟ್ಟಿದ್ದ. ......ನಕ್ಕು ಮೈದಡವಿದೆ.

     ಇಲ್ಲಿಯ ನೀರು ಗಾಳಿಯನ್ನು ಇನ್ನಷ್ಟು ಹೆಚ್ಚು ಸವಿಯುವ ಆಸೆಯಿಂದ, ಇನ್ನಷ್ಟು ಹೊತ್ತು ಇರಬೇಕೆಂದು, ಇಲ್ಲಿಯೇ ತುಸು ಚಹ ಕುಡಿಯೋಣವೆಂದು ಅಲ್ಲಿಯೇ ಸಮೀಪದಲ್ಲಿ ಇದ್ದ, ರಸ್ತೆ ಪಕ್ಕದ ಹೋಟಲ್‍ವೊಂದಕ್ಕೆ ಹೋಗಿ ಕುಳಿತೆವು. ಹಾಗೆಯೇ ಅದರ ಮಾಲೀಕ ಸುಮಾರು ಅರವತ್ತರ ಆಸುಪಾಸು ಇರುವುದನ್ನು ಗಮನಿಸಿ, ಅವರತ್ತ ತೆರಳಿ, ಪೋಕರಾನ್ ಅಣುಸ್ಫೋಟವಾದದ್ದು ಗೊತ್ತೇ, ಭಯೀ ಸಾಬ್ ಎಂದೆ.. ಅಂದರೆ ಅವರು ಆಗ ಅಲ್ಲಿ ಇದ್ದರೋ ಇಲ್ಲವೋ ಎಂಬ ಅನುಮಾನದಿಂದ ಕೇಳಿದ್ದೆ ಅಷ್ಟೆ. ನನ್ನೆಡೆ ನಿರ್ಲಿಪ್ತನಾಗಿ ಕೇಳಿದ,.' ಕಹಾಂ ಸೆ ಆಯೇ ಹೈಂ ಸರ್, ' ಎಂದು ಕೇಳಿದ. 'ಬೆಂಗಳೂರು' ಎಂದೆ. 'ಖುಷಿಯಿಂದ , ಗಿರಾಕಿಯೊಬ್ಬರಿಗೆ ಚಿಲ್ಲರೆ ಕೊಟ್ಟು, ತುಸು ತಡೆದು ನಾವು ಕುಳಿತಲ್ಲಿಗೆ ಆತ್ಮೀಯವಾಗಿ ಬಂದು ಅದರ ಬಗ್ಗೆ ಪ್ರೀತಿಯಿಂದ ವಿವರವಾಗಿ ಹೇಳಿದ, 'ಹಮೇಂ ಅಭೀ ಭೀ ವೊ ದಿನ್‍ಯಾದ ಹೈ , ಯೇ ರಾತ ಮೇಂ ಹುವಾ ಥಾ, , ಘರ ಮೇಂ, ಕಿಚನ್ ಪೆ ಥಾಲಿ, ಲೋಟಾ ಗಿರ್ ಪಡೇ ಥೇ, , ಭೂಕಂಪ್ ಜೈಸಾ ಹುವಾ ಥಾ, ರಾತ್ ಮೇಂ ಹಮ್ ಸಬ್ ಭೂಕಂಪ ಹೀ ಸಮಝೇ ಥೇ, ಜಬ್ ಸುಬಹ್ ರೇಡಿಯೋ, ಪೇಪರ್‍ಮೇಂ ಪಡಾ ತೋ, ಸಾರಾ ಗಾಂವ್ ರಸ್ತೇ ಪೆ ಥಾ, ಜಸ್ನ್ ಮನಾನೇ ಕೆ ಲಿಯೆ, ಪೂರಾ ಕಾ ಪೂರಾ ರಾಜಸ್ಥಾನ ಉಸ್ ದಿನ್ ಜಸ್ನ್ ಮನಾಯಾ, , ಆಜ್ ಭೀ ರೋಮ್‍ತೇ ಖಡೇ ಹೋತೇ ಹೈಂ, ಉಸ್‍ಕೋ ಗರ್ ಯಾದ ಕಿಯೇ ತೊ'' ಭಾರೀ ಯಾದ ತಾಜಾ ಕರವಾದಿಯೇ ಭಾಯೀ ಸಾಬ್ ಎಂದ. ( ಅದು ಭೂಕಂಪವೆಂದೇ ಬಗೆದಿದ್ದೆವು, ಅಡಿಗೆ ಮನೆಯಲ್ಲಿಯ ಕೆಲ ಸಾಮಾನುಗಳು ಉರುಳಾಡಿದ್ದವು. ಮರುದಿನ ಪೇಪರ್ ರೇಡಿಯೋಗಳಲ್ಲಿ ಕೇಳಿ, ಇಡೀ ಊರಿಗೆ ಊರೇ, ಅಷ್ಟೇ ಅಲ್ಲ ಪೂರಾ ರಾಜಸ್ಥಾನ ಅಂದು ಇಡೀ ದಿನ ಕುಣಿದಾಡಿತ್ತು, ರಸ್ತೆಗಳಿದು ಕುಣಿದು ಕುಪ್ಪಳಿಸಿತ್ತು.. ಅದನ್ನು ನೆನೆದರೆ ಇಂದಿಗೂ ಮೈಗೂದಲು ನಿಮಿರುತ್ತವೆ' ಒಂದೊಳ್ಳೆಯ ನೆನಪು ಮಾಡಿಸಿದ್ದಕ್ಕೆ ಸಲಾಮ್ ಭಾಯಿ ಎಂದು ಇಷ್ಟಗಲವಾಗಿ ಹೇಳಿದ. ಆ ಜಾಗವೆಲ್ಲಿದೆ, ನೀವು ನೋಡಿರುವಿರಾ? ಎಂದದ್ದಕ್ಕೆ, ಅದು ಇಲ್ಲಿಂದ 17 ಕಿಮೀ ಆಗುತ್ತದೆ, 'ಪೂರಾ ಮಿಲಿಟರಿ ಹೈ ವಹಾಂ, ಆಮ್ ಆದಮೀ ನಹೀ ಜಾ ಸಕತಾ' ( ಮಿಲಿಟರಿ ವಶದಲ್ಲಿದೆ, ಸಾಮಾನ್ಯರು ಅಲ್ಲಿಗೆ ಹೋಗಲಾರರು ) ಎಂದ.      

     ಮತ್ತೆ ಮುಂದುವರೆಸಿದ, 'ಏ ಜೊ ಬಗಲ್ ಮೇಂ ಛೋಟಾ ದೇಸ್ ಹೈ ನಾ, ಇತನಾ ಮಸ್ತಿ ಕರತಾ ರಹತಾಹೈ,.... ಇಸ್ ಕೊ ಖಾನೇ ಕೊ..... ಯೆ ಆರ್ಮಿ ನಹೀಂ..., ಇಸ್ ವತನ್ ಕೆ ಆಮ್ ಆದಮೀ ಹೀ ಕಾಫೀ ಹೈ,...ಇಸಕೋ ಖಾಕೆ ಛೊಡತೇ ಹೈಂ, ಹಮೇಂ ಛೋಡಕೆ ದೇಖೋ' ಸ್ವಲ್ಪು ತಡೆದು ಹೇಳಿದ, '' ...ಮಗರ್ ದೋನೋಂ ಮುಲ್ಕೋಂ ಕೆ ಆಮ್ ಆವಾಮ್ ಅಭೀ ಭೀ ವಹೀ ಕೆ ವಹೀ ಹೈ' ...' ಮಗರ್ ಸರಕಾರ ವಹಾಂ ಕೆ, ಕುಛ ಜ್ಯಾದಾ ಹೀ ಬಿಗಡಾ ಹೈ ಮಾಹೋಲ್ ಕೊ'....' (ಇಷ್ಟು ಮಾತ್ರ ಖರೆ. ಎರಡೂ ದೇಶಗಳ ಜನ ಇನ್ನೂ ಒಂದೇ ಇದ್ದಾರೆ, ಅಲ್ಲಿನ ಆಳುವವರು ಸ್ವಾರ್ಥಕ್ಕಾಗಿ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದ್ದಾರೆ') ಅವರಲ್ಲಿ ಸಹಜವಾಗಿ ಪುಟಿಯುತ್ತಿದ್ದ, ವೀರಾವೇಶದ ಮಾತುಗಳನ್ನು ಕೇಳುತ್ತಿದ್ದರೆ, ಮೈಯೆಲ್ಲ ಪುಳಕ. ಅವರ ದೇಶಪ್ರೇಮಕ್ಕೆ ಸುಮ್ಮನೆ ತಲೆಬಾಗಿಸಿದೆ. ಅವರು ಹೇಳುವ ವಿಚಾರಗಳಿಗೆ, ಅವರಲ್ಲಿ ಹುದುಗಿದ ದೇಶಪ್ರೇಮ ನನ್ನನ್ನು ಮೂಕವಿಸ್ಮಿತನನ್ನಾಗಿಸಿತ್ತು. ಆ 'ಮಿಟ್ಟಿ'ಯೇ ಹಾಗೇನೋ! ಇನ್ನೊಂದು ಕಣ್ಣಿಗೆ ಬಿದ್ದ ಖುಷಿಯ ವಿಷಯವೆಂದರೆ, ನಮ್ಮ ಪ್ರಕಾಶ ರೈನೊಂದಿಗೆ ಫೋಟೋ ತೆಗೆಸಿಕೊಂಡು ಆ ಮೆನೇಜರ್ ತನ್ನ ಹಿಂದೆ ಗೋಡೆಗೆ ನೇತು ಹಾಕಿಕೊಂಡಿದ್ದು ದನ್ನು ಕಂಡೆ. 'ಎಲ್ಲಿ 'ಎಂದೆ? 'ಯಹೀಂ' ಎಂಬಂತೆ ಗೋಣು ಹಾಕಿದ. ' ಒಹೋ, ಯು ಆರ್ ಲಕೀ ಭಾಯೀ ಸಾಬ್' ಎಂದೆ, ನಕ್ಕು ಬೀಗಿದ, ಹಕ್ಕು ಎಂಬಂತೆ.! ನಿಜಕ್ಕೂ ಸೊಕ್ಕಿದ್ದು ನಾನು ಎಂಬುದು ಅವನ ಅಳಿವಿಗೆ ದಕ್ಕಲಿಲ್ಲ. ಅವನಿಗೆ ಮತ್ತೊಮ್ಮೆ ವಂದಿಸಿ, ಹೊರಬಂದಿತು ತಂಡ.

     ಇಲ್ಲಿಂದ ಮತ್ತೆ ಮುಂದುವರೆಯಿತು ನಮ್ಮ ಪಯಣ, ಜೈಸಲ್ಮೇರ್‍ನೆಡೆಗೆ,. ಇಲ್ಲಿಂದ ಇನ್ನು ಜೈಸಲ್ಮೇರ ಕೇವಲ ಸುಮಾರು ನೂರು ಕಿಮೀಗಳಷ್ಟೆ. ಸುತ್ತಲೂ ಪ್ರಖರ ಬಿಸಿಲು. ಎತ್ತಲೂ ಕುರುಚಲು, ನಮ್ಮ ಬಳ್ಳಾರಿ ಜಾಲಿ ತರಹದ ಕಂಟಿಗಳು. ಅಲ್ಲಲ್ಲಿ ಜಿಂಕೆಗಳು ಕಂಡುಬಂದವು, ಹಿಂಡುಗಳಲ್ಲಿ, ಕುರಿಗಾಹಿಗಳು ತಮ್ಮ ಕುರಿಮಂದೆಯೊಂದಿಗೆ ರಸ್ತೆ ಬದಿಯಲ್ಲಿ ಹೊರಟಿದ್ದಾಗ ಕಣ್ಣಿಗೆ ಬೀಳುತ್ತವೆ.. ಸುಮ್ಮನೆ ಸ್ವಪ್ನ ಲೋಕದತ್ತ ಹೋಗುತ್ತಿರುವೆವೋ, ಮನುಷ್ಯರನ್ನೆಲ್ಲಾ ಹಿಂದೆ ಬಿಟ್ಟು! ಕಾರಣ, ಎದುರು ಯಾವ ವಾಹನವೂ ಬರುವುದಿಲ್ಲ. ನಾವು ಹೋಗುವುದಷ್ಟೆ. ನಮ್ಮ ಹಿಂದೆಯೂ ಯಾವ ವಾಹನವು ಇಲ್ಲ. ಮುಂದೆಯೂ ಇಲ್ಲ. ವಿಚಿತ್ರ ಪಯಣವಿದು.. ಆಗಾಗ ಎದುರಿನಿಂದ ಮಿಲಿಟರಿ ಗಾಡಿಗಳು ಮಾತ್ರ ಬರುತ್ತಿದ್ದವು. ನಮ್ಮತ್ತ ನೋಡಿ ಮುಗುಳ್ನಗುವಿನೊಂದಿಗೆ ಸಾಗುತ್ತಿದ್ದರು. ಅವರೂ ಕೂಡ ಕುರಿಮಂದೆಗಳ ಹತ್ತಿರ ನಿಂತೇ ಸಾವಧಾನದಿಂದಲೇ ಸಾಗುತ್ತಾರೆ, ಪ್ರತಿಯೊಬ್ಬರೂ ಅಲ್ಲಿಯ ನೆಲದ ಬದುಕಿನ ಸಂಪ್ರದಾಯವನ್ನು ಬಹಳ ಗೌರವಿಸುತ್ತಾರೆ. ಆ ಅಲೆಮಾರಿ (ನೊಮ್ಯಾಡಿಕ್)ಗ ರೊಂದಿಗೆ ಮಾತಿಗೆ ಇಳಿಯುತ್ತಾರೆ. ಅವರಿಗೆ ನೀರು ಒದಗಿಸುತ್ತಾರೆ. ರಕ್ಷಣಾ ದೃಷ್ಟಿಯಿಂದ ಮಿಲಿಟರಿ ಬಗ್ಗೆ ವಿವರ ಬರೆಯುವುದು ಬೇಡ. . ಅವರು ಅಲ್ಲಿ ಎಲ್ಲೆಲ್ಲೂ ಇದ್ದಾರೆ ಅಷ್ಟು ಸಾಕು. ಅಭಿಮಾನ ಪಡುವಷ್ಟು ಅಹರ್ನಿಷಿ ಸನ್ನದ್ಧ ಸ್ಥಿತಿ ಅಲ್ಲಿ, ಸಾಮಾನ್ಯರಾಗಿ ಅಷ್ಟು ಗ್ರಹಿಸಿದರೆ ಸಾಕು. ಏಕದಂ ಅಪ್‍ಡೇಟೆಡ್.

     ಪಯಣ ಮುಂದುವರೆದಂತೆ, ಇನ್ನೇನು ಬಂದೇ ಬಿಟ್ಟಿತು ಎನ್ನುವಷ್ಟರಲ್ಲಿ, ಸರವನ್ ಜೈಸಲ್ಮೇರ್ ಇನ್ನು ಎರಡು ಕಿಮೀ ನಷ್ಟೆ ಇರುವಾಗ, ಊರ ಹೊರಭಾಗದಲ್ಲಿ ಒಂದು ದೊಡ್ಡ ಕೋಟೆಯಂತಹ ನೋಟಹೊಂದಿದ ಕಟ್ಟಡವೊಂದನ್ನು ತೋರಿಸಿ, ಪಕ್ಕಕ್ಕೆ ನಿಲ್ಲಿಸಿದ. ಅದು ದಿನವೂ ನಮ್ಮ ಮನೆಗಳ ಟಿವಿಗಳಲ್ಲಿ ಬರುವ 'ಬಾಲಿಕಾ ಬಧು' ಧಾರಾವಾಹಿವೊಂದರ ದೊಡ್ಡ ಶಾಹಿ ಕುಟುಂಬವೊಂದರ ಹವೇಲಿ. ಅರೇ ಇದಿಲ್ಲಿದೆಯೇ. ನಮಗೆ ಅದರ ಒಳಗೆ. ಅಡಿಗೆ ಮನೆಯವರೆಗೂ ಎಲ್ಲವೂ ಗೊತ್ತು ಮಾರಾಯರೆ. ಅದು ನಮ್ಮದೇ ಎನ್ನುವಷ್ಟು ಪ್ರೀತಿ ಬಂದು ಬಿಟ್ಟಿತು ಅದರ ಮೇಲೆ. ನಿತ್ಯವೂ ಕಲರ್ಸ ಟಿವಿಯಲ್ಲಿ ಅದರ ದರ್ಶನವಾಗುತ್ತದೆ, ಇದೇ ಇಲ್ಲಿಯ 'ಡೆಸರ್ಟ್ ಟುಲಿಪ್' ಎಂಬ ರಿಸಾರ್ಟ್ ಇದು. ದೊಡ್ಡದಾದ ಕೋಟೆ ತರಹ, ರಸ್ತೆಯಿಂದ ಕಾಣುವುದು, ಅಲ್ಲಿ ಅದನ್ನು ಕ್ಲಿಕ್ಕಿಸಿದೆ.

    ಮುಂದೆ ನಮ್ಮ ವಾಹನ ತುಸು ದೂರವೇ ಚಲಿಸಿ, ಕಲವೇ ಕ್ಷಣಗಳಲ್ಲಿ ಮೋಹೆಂಜೊದಾರೋ, ಹರಪ್ಪಗಳೊಂದಿಗೆ ಕಾಲು ಚಾಚಿಕೊಂಡಿರುವ, ಅದರೊಂದಿಗೆ ಬಾಹು ಬಂಧನ ಹೊಂದಿದ, ಸಿಂಧೂ ನದಿಯ ಮುಖಜವನ್ನು ತನ್ನ ಶ್ವೇತನಾಲಗೆಯಿಂದ ಚಪ್ಪರಿಸಿದ, ಜೈಸಲ್ಮೇರ ಎಂಬ ಥಾರ್ ಮರಳ ರಾಣಿಯ ಸಿಲ್ಕ ರೂಟಿನÀ ಆತ್ಮದೊಳಗೆ ಒಳಪ್ರವೇಶ ಪಡೆದೆವು. ಒಳಗೆಲ್ಲೋ ಸಣ್ಣಗೆ ಅರುಹಲಾರದ ಆನಂದದ ನಡುಕವೊಂದು ಬಂದು, ರೋಮಾಂಚನ ಅನುಭವಿಸಿದೆ. ಎಡಬಲಕ್ಕೂ ಜೈಸಲ್ಮೇರ ಆಡಳಿತದ ಬೋರ್ಡಗಳೊಂದಿಗೆ ಮಿಲಿಟರಿ ಹೆಡ್‍ಕ್ವಾರ್ಟರ್‍ಗಳ 'ವೆಲ್‍ಕಮ್' ಬೋರ್ಡಗಳು ನಮ್ಮನ್ನು ಸಾಗತಿಸಿದವು.

    ಮೊದಲು ಊರಗಡಿಯಲ್ಲೇ ಸಿಗುವ, 'ಗಡಿಸರ ಲೇಕ್' ನೋಡಲು ತೆರಳಿದೆವು. ಕೆರೆಗೆ ಹೋಗುವ ಮಹಾದ್ವಾರ ಅದ್ಭುತ ವಾಗಿದೆ. ಇಲ್ಲಿ ಕಟ್ಟಡಗಳನ್ನು ಸ್ವರ್ಣರಂಗಿನ ಕಲ್ಲುಗಳಿಂದ ಕಟ್ಟಿದ್ದು, ಅವು, ಬಂಗಾರ ವರ್ಣಸೂಸುತ್ತ ಸಹಜವಾಗಿ, ಸುಂದರವಾಗಿ ರಮ್ಯತೆಯಿಂದ ಕಾಣುತ್ತವೆ. ಮೇಲಿನ ಮರಳುಗಾಡಿನಿಂದ ಹರಿದು ಬರುವ ನೀರನ್ನು ಸಂಗ್ರಹಿಸಲು, ನಮ್ಮ ರಾಜ ಮಹಾರಾಜರುಗಳ ಶಾಹಿ ಆಡಳಿತ ಒಂದು ಕೆರೆ ಕಟ್ಟಿಸಿದೆ. ಕೆರೆ ಏರಿಯ ಮೇಲೆ ಸುಂದರ ಕುಸುರಿ ಕಲೆಯ ಕಲ್ಲುಗಳ ಕಟ್ಟಡಗಳನ್ನು , ಗೋಪುರಗಳನ್ನು ನಿರ್ಮಿಸಿದ್ದಾರೆ. ಕೆರೆ ನೀರಲ್ಲಿ ದೋಣಿಯಲ್ಲಿ ವಿಹರಿಸಲು ಹತ್ತಾರು ದೋಣಿಗಳು, ಮರುಳುಗಾಡಿನಲ್ಲೂ ದೋಣಿ ವಿಹಾರ! ಅದ್ಭುತವಲ್ಲವೇ! ನಡುವೆ ನಡುಗಡ್ಡೆ ನಿರ್ಮಿಸಿ ಅಲ್ಲೊಂದು ಮಂದಿರ ಕಟ್ಟಿದ್ದಾರೆ. ನೋಡಲು ಸುಂದರವಾಗಿದೆ. ಕೆರೆಯ ಸುತ್ತ ಪರಿಸರವನ್ನು ಚಂದ ಮಾಡಬಹುದಾದದ್ದನ್ನೆಲ್ಲ ಮಾಡಲು ಪ್ರಯತ್ನಿಸಿದ್ದಾರೆ. ಎಲ್ಲ ಕಡೆಯೂ ಅಲ್ಲಿ ಪಾರಿವಾಳಗಳಿವೆ. ಇಡೀ ರಾಜಸ್ಥಾನದಲ್ಲಿ ಪಕ್ಷಿಗಳನ್ನು ಹೆಚ್ಚು ಪ್ರೀತಿಸುತ್ತಾರೆ. ವಾಹ್! ಅಲ್ಲಿಯ ನಡುಗಡ್ಡೆಯ ಮಂದಿರದ ಗೋಪುರವೇ ಕಾಣದಷ್ಟು ಪಾರಿವಾಳಗಳು,,ಹಕ್ಕಿಗಳು, ಲೇಕ್ ತುಂಬ ಎಲ್ಲೆಡೆಗೂ ಲೆಕ್ಕವಿಲ್ಲದಷ್ಟು ಕಾಣಸಿಗುತ್ತವೆ. ನಿಸರ್ಗದೊಂದಿಗೆ ಬೆರೆತು, ನಮ್ಮ ಬಾಲ್ಯದ ಕ್ಷಣಗಳನ್ನೂ , ಆ ಹಳೆಯ ದಿನಗಳ ಉಸಿರನ್ನು ಇನ್ನೂ ಉಳಿಸಿಕೊಂಡಿದೆ ಇದು ಈ ಜೈಸಲ್ಮೇರ, ಅದನ್ನೇ ಉಸಿರಾಡುತ್ತಿದೆ, ಸಿಲ್ಕ್ ರೂಟಿನ ಕಾಲದಿಂದಲೂ, ಈಗಲೂ ಭದ್ರವಾಗಿ ಅಂದಿನ ಕೊಂಡಿಗಳನ್ನು ತನ್ನ ಮಡಿಲಲ್ಲಿ ಹಿಡಿದಿಟ್ಟುಕೊಂಡಿದೆ ಅನ್ನಿಸಿತು.

    ಅಲ್ಲಿ ದಂಡೆಯ ಮೇಲೆ ಕುಳಿತು ಯಾವುದೋ ಗೋವಿನಜೋಳದ ಅರಳಿನ ಪ್ಯಾಕೇಟ್ ಕೊಂಡು ಒಡೆದು ತಿನ್ನುವುದರಲ್ಲಿ ಕೆಲ ಅರಳು ಕೆಳಗೆ ಉದುರಿತು, ಅರೆ, ಏನಿದು, ನಾವು ಕಳೆದುಕೊಂಡ, ಆ ಮಧುರ ಕ್ಷಣಗಳ ತುಣುಕುಗಳು, ನಮ್ಮ ಬಾಲ್ಯದ ಗಳಿಗೆಗಳು, ಸಮಯಗಳ ಕೊಂಡಿಗಳು ಅಲ್ಲಿ ದಾಖಲಾಗಿ ಬಿಟ್ಟಿದ್ದವು. 'ಇಕ್ ಬಾರ್ ವಕ್ತ್ ಸೆ , ಲಮ್ಹಾ ಗಿರಾ ಕಹೀಂ, ವಹಾಂ ದಾಸ್ತಾ ಮಿಲೀ, ಲಮ್ಹಾ ಕಹೀಂ ನಹೀ, '(ಕಾಲ ದೆಳೆಯಿಂದ ಕಳಚಿ ಕ್ಷಣ ತುಣುಕು ಉದುರಿತೆಲ್ಲೋ,ಕಥೆ ಕಂತೆ ದೊರೆತವಲ್ಲಿ ಕ್ಷಣವೆಲ್ಲೂ ದೊರೆಯದಲ್ಲಿ) ಎಂದರಲ್ಲವೇ ಗುಲ್ಜಾರರು,. .. ಏನು ಹಾಗಂದರೆ, ಏನು ಒಗಟದು, ನನ್ನ 'ಅಆಇಈ' ದಿನಗಳಲ್ಲಿ ನನ್ನ ಪಕ್ಕದಲ್ಲಿಯೇ ಓಡಾಡುತ್ತ, ಚಿಂವ್ ಚಿಂವ್ ಅನ್ನುತ್ತಿದ್ದವಲ್ಲ, ನಮ್ಮೆಲ್ಲರ ಗೆಳೆಯರು, ಕಣ್ರಿ,.... 'ಗುಬ್ಬಚ್ಚಿಗಳು, ....ಥೇಟ್ ನಮ್ಮ ಶಾಲಾ ದಿನಗಳ ಅವೇ ಗುಬ್ಬಚ್ಚಿಗಳು, ಸಾಕ್ಷಾತ್ ನಮ್ಮ ಕಣ್ಣ ಮುಂದೆಯೇ, ನಮ್ಮ ಬಾಲ್ಯವನ್ನು ಹಿಡಿದು ನಮ್ಮ ಕಾಲ ಬಳಿ ಇಟ್ಟಿದ್ದವು. ಕೈಲಿದ್ದ ಆ ಎಲ್ಲಾ ಪಾಕೇಟ್‍ನ್ನು ಅವುಗಳಿಗೆ ಸುರಿದೆ. ಇನ್ನಷ್ಟು ಮತ್ತಷ್ಟು ಬಂದವು. ಅದೇ ಕಾಗೆಗಳು 'ಕಾಂವ್ ಕಾಂವ್' ಎಂದು ಸುತ್ತ ನೆರೆದವು. ಗುಬ್ಬಚ್ಚಿಗಳೊಂದಿಗೆ ಆಟವಾಡುತ್ತ ತಿನ್ನತೊಡಗಿದೆವು. ಪಾರಿವಾಳಗಳೂ...........ಎಲ್ಲವೂ ಹಾಜರು. ಹೌದು ಇವು ಇಲ್ಲಿ ಹೇಗೆ ಬಂದೆವು?. ಮೋಬೈಲ್‍ಗಳ ತರಂಗಗಳಿಂದ ಮಾಯವಾದವು ಅನ್ನುತ್ತಾರಲ್ಲ,? ಅದೇ ಕಾರಣವೋ ಅಥವಾ ...ಮತ್ತೇನಾದರೂ ಕಾರಣವೋ?

    ಕಂಡು ಬರುವ ಇನ್ನೊಂದು ಅಂಶವೆಂದರೆ, ಇಲ್ಲಿ ಹೊಲಗದ್ದೆಗಳಿಲ್ಲ, ಹೀಗಾಗಿ ಯೂರಿಯಾದಂತಹ ಹಕ್ಕಿ, ಪಿಕ್ಕಿಗಳಿಗೆ ವಿಷಕಾರಿ ಗೊಬ್ಬರಗಳ ಪ್ರಯೋಗ ಈ ಮಾತೃ ಮಣ್ಣಿನ ದೇಹದ ಮೇಲೆ ಇನ್ನೂ ಆಗಿಲ್ಲದಿದ್ದುದಕ್ಕೆ ಇವು ಇಲ್ಲಿ ಜೀವಂತ ಇರುವವೋ? ಯಾವುದು ಸರಿ? ಅಧ್ಯಯನಕ್ಕೆ ಯೋಗ್ಯ ವಿಷಯ ಇದು. ಹೀಗೆ ನನ್ನ ಬಾಲ್ಯದೊಂದಿಗೆ ನನ್ನನ್ನು ಜೋಡಿಸಿ ಬಿಟ್ಟಿತು ಜೈಸಲ್ಮೇರ್. ...ನಾವು ನಮ್ಮ ಹಳೆಯ ಕೊಂಡಿಗಳನ್ನು ಕಳಚಿಕೊಂಡಿದ್ದೇವೆ ಇಲ್ಲಾ ಕಳೆದುಕೊಂಡಿದ್ದೇವೆ. ಆದರೆ ಜೈಸಲ್ಮೇರ್ ಹಾಗಲ್ಲ, ಸಮಯ ಹೊದ್ದು ಮಲಗಿ ಬಿಟ್ಟಿದೆ ಅಲ್ಲಿ., ಸ್ಥಬ್ಧ ಚಿತ್ರದಂತೆ, ಹುಡುಕಿದರೆ ಇತಿಹಾಸದ ಎಲ್ಲ ಕಾಲಘಟ್ಟಗಳೂ, ಹಳೆಯ ಪುಸ್ತಕದ ಪುಟ ಪುಟಗಳಲ್ಲಿ ದೊರೆವ ನವಿಲುಗರಿಗಳಂತೆ, ಪುಸ್ತಕದೊಳಗಿನ ಸುವಾಸಿತ ಹೂವುಗಳಂತೆ ದೊರೆತಾವು. ಹುಡುಕಬೇಕಷ್ಟೆ. ...ಎದುರಿನ ಮರಳುಗಾಡಿನಿಂದ ಜಿಂಕೆಯಾದಿಯಾಗಿ ಪ್ರಾಣಿಗಳು ಈ ಕೆರೆಯ ನೀರನ್ನು ಕುಡಿಯಲು ಬರುವುದು ಸಾಮಾನ್ಯವಂತೆ. ಕೆರೆದಂಡೆಯ ಮೇಲೆ ಅಲ್ಲಿಯ ಕರಕುಶಲ ಬಟ್ಟೆ, ಬರೆ, ಆಟಿಕೆಗಳ ಸಣ್ಣ ಸಣ್ಣ ಅಲೆಮಾರಿ ಮಳಿಗೆಗಳಿವೆ. ಏನಾದರೂ ಕೊಳ್ಳಿ , ಅವರಿಗೆ ಒಂದು ದಿನದ ಊಟ ನೀಡಿದಂತಾಗುತ್ತದೆ, ಎಂದೆ ಕಿವಿಯಲ್ಲಿ ಇವಳಿಗೆ, ತುಸು ಹೆಚ್ಚೇ ಖರೀದಿಸಿದರೆನ್ನಿ... ಅವನೆಲ್ಲ ಹೊತ್ತು ತಂದು ಗಾಡಿಯಲ್ಲಿ ಹಾಕುವ ಮಾಲಿಯ ಪಾತ್ರ ಖುಷಿಯಿಂದ ನಿಭಾಯಿಸಿದೆ.

    ಸರವನ್ ಬೇಗ ಹೋಗದಿದ್ದರೆ ಡೆಸರ್ಟ್‍ನಲ್ಲಿ ಸೂರ್ಯಾಸ್ತ ನೊಡುವುದು ತಪ್ಪುತ್ತದೆ ಎಂದದ್ದಕ್ಕೆ ಚಹ ಕುಡಿಯಬೇನ್ನುವ ಬೇಡಿಕೆ ಬಿಟ್ಟು, ಅದರತ್ತ ಓಡಿದೆವು. ಅಲ್ಲಿಂದ ಸುಮಾರು 50-60 ಕಿಮೀಗಳ ಪಯಣ.. ಖುರಿ ಎಂಬ ಗ್ರಾಮ. ಅಲ್ಲಿ ಹೆಚ್ಚಿನ ವಿಶಾಲತೆಯ ಮರುಳುಗಾಡಿದೆ. ಇಲ್ಲೇ ಸಮೀಪದಲ್ಲೂ ಕೂಡ ನಾವು ಅದನ್ನು ಕಾಣಬಹುದು ಆದರೂ ಅವು ತುಂಬ ಸೊಗಸಾಗಿವೆ. ಅಲ್ಲಿಗೆ ಹೋಗೋಣ ಎಂದ. ಅವರು ನಮಗಾಗಿ ಎರಡು ಒಳ್ಳಯ ಡೆಸರ್ಟ್ ರಿಸಾರ್ಟ್‍ಗಳನ್ನು ನೋಡಿ ಇಟ್ಟಿದ್ದರು. ನಾವು ಎಲ್ಲಿ ಅಂತಿಮಗೊಳಿಸುತ್ತೇವೆಯೋ, ಅಲ್ಲಿಯೇ ವಾಸ್ತವ್ಯ ಮಾಡಿಸುವವರಿದ್ದರು. ಖುರಿಯನ್ನು ತಲುಪಿದಾಗ, ಸುಮಾರು 4.00 ಸಂಜೆ. ಅಲ್ಲಿ ಖುರಿಯಲ್ಲಿ ಹಲವಾರು ರೆಸಾರ್ಟ್‍ಗಳಿವೆ. ಆದರೆ ನಮಗೆ ಯಾವುದೂ ನಿಸರ್ಗದಲ್ಲಿದ್ದಂತೆ ಅನಿಸಲಿಲ್ಲ. ಹಾಗೆಯೇ ಮುಂದೆ ಇನ್ನೂ ಹತ್ತು ಹನ್ನೆರಡು ಕಿಮೀಗಳಷ್ಟು ಒಳಹೋದರೆ, ನಮಗೆ ಪಕ್ಕಾ ಮರುಭೂಮಿಯ ನಟ್ಟ ನಡುವಿನಲ್ಲಿಯೇ ಸ್ಥಾಪಿಸಿದ್ದೊಂದು ಮೆಚ್ಚುಗೆಯಾಯಿತು. ಅಲ್ಲಿನ ವ್ಯವಸ್ಥೆ ಉಳಿದವುಗಳಿಗಿಂಗ ತುಸು ಕಡಿಮೆಯಾದರೂ, ನಾವು ಈಗಾಗಲೇ ಇದಕ್ಕೂ ಹೆಚ್ಚಿನ ಕಂಫರ್ಟ ಲೆವಲ್‍ಗೆ ಹಣ ಕೊಟ್ಟಿದ್ದರೂ ಇದರಲ್ಲೇ ಉಳಿಯಲು ಮನಸ್ಸು ಮಾಡಿದೆವು. ಅಲ್ಲಿ ನಮ್ಮ ಲಗೇಜ್‍ಗಳನ್ನು ಇಟ್ಟು ನಮ್ಮನ್ನು ಒಂಟೆ ಸಫಾರಿಗೆ ಕರೆದೊಯ್ದರು

   ಸಫಾರಿಯಲ್ಲಿ ನಮಗೊದಗಿಸಿದ ಒಂಟೆಗಳ ಹೆಸರು, ಸಂಯ್ಯಾ ಮತ್ತೆ ರಾಜೂ. ಅವುಗಳ ಮೇಲೆ ಹತ್ತಲು ಹರಸಾಹಸ. ಕಾಲು ಅದರ ಬೆನ್ನ ಮೇಲೆ ಹಾಕಲು ಬರುವದೇ ಇಲ್ಲ. ಒಮ್ಮೆ ಹತ್ತಿದರೆ, ಅದರ ಥಡಿಗೆ ಕಟ್ಟಿದ ಕೋಲಿನ ತರಹದ್ದೊಂದನ್ನು ಹಿಡಿದು ಕೂರಬೇಕು. ಅದರ ಮಾವುತರಂತೂ ಆ ಒಂಟೆಗಳಂತೆಯೇ . ಹೊರಜಗತ್ತನ್ನು ಎಂದೂ ನೋಡದವರು. ಜೈಸಲ್ಮೇರ್ ಆಚೆ ಹೆಜ್ಜೆಯನ್ನೇ ಹಾಕದವರು. ಅಸಲಿಗೆ ಮಾತೇ ಇಲ್ಲ., ಮುಗುಳು ನಗುವೇ ಎಲ್ಲ. ಬಲು ಮುಗ್ಧ ಜೀವಗಳು. ತಾನಾಯಿತು ತನ್ನ ಒಂಟೆಯಾಯಿತು. ತನ್ನ ತಾಯಿ ಮರುಭೂಮಿಯಾಯಿತು. ಇದಿಷ್ಟೆ ಅವರ ಪ್ರಪಂಚ. ಅವರೊಡನೆ ಮಾತಿಗಿಳಿದರೆ, ಬರೀ ನನ್ನವೇ ಮಾತುಗಳು. ಅವರವು ಒಂಟೆಗಳೊಂದಿಗೆ ಸಂಜ್ಞಾರೂಪದ ಮಾತುಗಳು. ಹಗಲೆಲ್ಲ ನಮ್ಮೆಡೆಗೆ ತಿರುತಿರುಗಿ ನೋಡಿ ನಗುತ್ತ, ಎಲ್ಲಾ ಠೀಕ್ ಇದೆಯೇ ಎಂದು ಕೇಳುತ್ತಿದ್ದರು, ಕೈ ಸನ್ನೆಯಲ್ಲಿ.. ಏನನ್ನಾದರೂ ಕೇಳಿದರೆ, 'ಹುಕುಂ ಸಾ' ಎಂದು ಗೋಣು ಹಾಕುವರು. ಹಿರಿಯ ಮಾವುತ ಸುಮಾರು 70 ವರ್ಷದವನು. ಇನ್ನೊಬ್ಬ ಮೂವತ್ತೆಂಟು ವರ್ಷದವನು. ಮರುಭೂಮಿ ಮನುಷ್ಯನನ್ನು ಬೇಗ ಮುಪ್ಪು ಮಾಡಿಬಿಡುತ್ತದೆ ಎಂದು ಕಾಣುತ್ತದೆ. 38 ರವನೂ ಕೂಡ 70 ರಂತೆಯೇ ಕಾಣುತ್ತಿದ್ದ..

     ಮುಂದೆ ಒಂದು ಸ್ಥಳದಲ್ಲಿ ಗ್ರಾಮದ ಹೆಂಗಳೆಯರು ನೀರಿಗಾಗಿ ಮರುಭೂಮಿಯಲ್ಲಿ ಕಟ್ಟಲಾದ ಕೆಲ ಕಟ್ಟೆಯಂತಹ ಜಾಗದಲ್ಲಿ ಬಗ್ಗಿ ನೀರು ಸೇದುತ್ತಿದ್ದುದನ್ನು ಕಂಡೆ. ನಮ್ಮ ಕುತೂಹಲ ಕಂಡು ನಮ್ಮನ್ನು ಅಲ್ಲಿಗೇ ಕರೆದೊಯ್ದರು. ಸಮೀಪದಲ್ಲೆಲ್ಲೋ ಇರುವ ಹಳ್ಳಿಯಿಂದ ಹೆಣ್ಣುಮಕ್ಕಳು ನೆಲಮಟ್ಟದ ಕಟ್ಟೆಯ ಮೇಲೆ ಕುಳಿತು ನೀರು ಸೇದುತ್ತಿದ್ದರು. ತಮ್ಮ ಕೊಡಗಳ ಮೇಲೆ ಎರಡು ಮೂರು ಕೊಡಗಳನ್ನು ಇಟ್ಟುಕೊಂಡು ಗುಂಪುಗಳಲ್ಲಿ ಮನೆಯತ್ತ ಹೆಜ್ಜೆಹಾಕುತ್ತಿದ್ದರು. ಅಲ್ಲಿ ಒಂಟೆಗಳ ಕಾರವಾನ್ ಇರುವಂತೆ, ಈ ಹೆಂಗಳೆಯರ ಗುಂಪಿಗೆ 'ಘೂಂಘಟ್ ಕಾರವಾಂ' ಎಂದೆ, ಇವಳು ಮುಗಳ್ನಕ್ಕಳು. ಅವರು ನೀರಿಗಾಗಿ ಪಡುವ ಕಷ್ಟವನ್ನು ನೋಡಿ ಸಂಕಟವೆನಿಸಿತು. ಎಲ್ಲರೂ ತಮ್ಮ ಮುಖ ಮಾತ್ರ ಕಾಣದಂತೆ ಘೂಂಘಟ್ ಹೊದ್ದವರೇ, ಹುಟ್ಟಿನಿಂದಲೇ ಇದು ಅಭ್ಯಾಸವಿರುವ ಅವರಿಗೆ ಇದೊಂದು ಕೊರತೆ ಅನಿಸುವುದೇ ಇಲ್ಲ. ಅವರ ಪರಿಶ್ರಮಕ್ಕೆ ತಲೆ ಬಾಗಿದೆ. ಮರುಭೂಮಿಯಲ್ಲಿ ಬದುಕು ನೆಲೆಗೊಳ್ಳಲು ಇವರೇ ಮೂಲ ಬೇರುಗಳು ಅಲ್ಲವೇ. ನಿಜಕ್ಕೂ ಈ ತಾಯಿ ಎನ್ನುವ ಜೀವ ಈ ಭೂಮಿಯೆಂಬ ಇಳಾದೇವಿಯು ಎಂತಹ ಕಷ್ಟಗಳನ್ನಾದರೂ ಸಹಿಸುವ ಪರಿ ಅದ್ಭುತ, ವಿಸ್ಮಯಕರವಲ್ಲವೇ? ಧನ್ಯ ತಾಯಿ ಧನ್ಯ, ಈ ತಾಯಿಯೆಂಬ ನೆಲದಾಯಿಯ ಜೀವಸೆಲೆಗೆ ನೂರು ಸಾಸ್ಟಾಂಗಗಳು. ಅಲ್ಲಲ್ಲಿ ಮಳೆನೀರು ಕೊಯ್ಲು ತರಹ ಮಾಡಿ ಅದಕ್ಕೆ ಕಟ್ಟೆ ಕಟ್ಟಿ ಮರಳಿನ ಆಳದಲ್ಲಿ ಸಂಗ್ರಹವಾದ ನೀರೇ ಇವರಿಗೆ ವರ್ಷವಿಡೀ ಕುಡಿಯಲು ಆಧಾರ. ಸಹಜ ಬಾವಿಗಳಂತೂ ಪಾತಾಳದಷ್ಟು ಆಳವಿರುತ್ತವಂತೆ. ಬಹು ಕಷ್ಟಜೀವಿಗಳು. ಘೂಂಘಟ್ ಪದ್ಧತಿಯ ಆಚರಣೆಯ ಪಾಲನೆ ಬಲು ಕಟ್ಟು ನಿಟ್ಟು.

    ಸುಮ್ಮನೆ ಒಂದು ಫೋಟೋ ಪೋಸ್ ಕೊಡಿ ಎಂದು ನನ್ನ ಕೋರಿಕೆಯಂತೆ, ನಮ್ಮ ಡ್ರೈವರ್ ಆ ತಾಯಂದಿರಿಗೆ ವಿನಂತಿಸಿದ , ಊಹೂಂ, ಅವರು ಸ್ಪಂದಿಸಲೇ ಇಲ್ಲ, ತಮ್ಮಷ್ಟಕ್ಕೆ ತಾವು ನೀರು ತುಂಬಿದ ಕೊಡಗಳೊಂದಿಗೆ ಗುಂಪುಗಳಲ್ಲಿ 'ಘೂಂಘಟ್ ಕಾರವಾಂ' ಹೊರಟೇ ಬಿಟ್ಟಿತು. ಎಲ್ಲಿದ್ದವೋ ಅವರ ನಿವಾಸಗಳು, ನಮಗಂತೂ ಕಣ್ಣಿಗೆ ಬೀಳಲಿಲ್ಲ, ಸ್ಯಾಂಡ್‍ಡ್ಯೂನ್‍ಗಳ ಆಚೆಯೆಲ್ಲೋ ಸುಮಾರು 2 ರಿಂದ 3 ಕಿಮಿಗಳಷ್ಟು ದೂರದಿಂದ ಬಂದಿರುತ್ತಾರೆ ಎಂದ ಸರವನ್. ಎಂತಹ ಕಷ್ಟಜೀವಿಗಳು. ನಮ್ಮಲ್ಲಿ ನಲ್ಲಿ ತಿರುಗಿದರೆ ಬರುವ ನೀರಿಗಾಗಿ, ಅವರು ಅರ್ಧ ಜೀವಮಾನ ಸವೆಸುವ ಪರಿಗೆ ಮನ ಮುದುಡಿತು.

     ಅಲ್ಲಿಂದ ಮುಂದೆ ನಡೆದರೆ ಕಣ್ಣಿಗೆ ಬಿದ್ದದ್ದು ಅಚ್ಚ ಬಿಳಿ ಬಣ್ಣದ ವಿಶಾಲವಾಗಿ ತನ್ನಷ್ಟಕ್ಕೆ ತಾನು ಕಾಲವನ್ನು ಹೊದ್ದು, ಅಲ್ಲಲ್ಲ, ಕಾಲವೇ ಹೊದ್ದು ಮಲಗಿದೆಯೇನೋ ಎನ್ನುವಂತೆ ಸ್ಥಬ್ಧ ರೂಪಕ, ಮರಳುಭೂಮಿಯ ರೂಪದಲ್ಲಿ. ಇದುವೇ ಥಾರ್‍ನ ಅಸಲಿ ಮುಖ.. ಶ್ವೇತ ಶ್ವೇತವಾಗಿ ತೆರೆದುಕೊಂಡ ಮರಳಿನ ಪ್ಯಾಕೆಟ್‍ಗಳಿವೆ. ಸುಮಾರು 8 -10 ಕಿಮೀಗಳಷ್ಟು ವಿಶಾಲತೆಯಲ್ಲಿ ಅಲ್ಲಲ್ಲಿ ಇರುತ್ತವೆ. ಆ ನಂತರ ಒಂತರಹದ ಒಣ ಕುರುಚಲು ನೆಲ, ಮತ್ತೆ ಮರುಭೂಮಿಯ ಪಾಕೆಟ್ ತೆರದುಕೊಳ್ಳುತ್ತದೆ. ಇದಕ್ಕೂ ಮುಂದೆ ಇದ್ದರೂ, ಇಲ್ಲಿಂದ ಮುಂದೆ ಪಾಕಿಸ್ತಾನದ ಬಾರ್ಡರ್ ಅತಿ ಸಮೀಪವಾಗುವುದರಿಂದ ಮುಂದಕ್ಕೆ ಹೊರಗಿನಿಂದ ಬರುವ ಪ್ರವಾಸಿಗರಿಗೆ ಪ್ರವೇಶವಿಲ್ಲ. ಸ್ಥಳೀಯ ಹಳ್ಳಿಗಳ ಜನ ಮಾತ್ರ ಆ ಕಡೆಗಳಲ್ಲಿ ಓಡಾಡುತ್ತಾರೆ ಎಂದು ತಿಳಿಯಿತು. 'ಮೇ ಬಿ, ಡ್ಯು ಟು ಸೆಕ್ಯುರಿಟಿ ರೀಸನ್ಸ್ ಇರಬೇಕು' ಎಂದುಕೊಂಡೆ.

    ಇಲ್ಲಿ ಕೇವಲ ಕಂಟಿಯಂತಹ ಸಣ್ಣ ಸಣ್ಣ ಗಿಡಗಳು ಮರಳಲ್ಲಿ ವಿರಳಾತಿವಿರಳವಾಗಿ ಬೆಳೆದಿರುವುದನ್ನು ಬಿಟ್ಟರೆ, ಕೇವಲ ಮರಳಿನ ಸ್ಯಾಂಡ ಡ್ಯೂನ್ಸ್(ಮರಳ ದಿನ್ನೆ) ಗಳು ಮಾತ್ರ. ನೋಡಲು ಬಲು ಚಂದ, ಅಂದ. ನಿಸರ್ಗವೇ ತೀಡಿ ಇಟ್ಟಿದೆಯೇನೋ ಗಂಧ, ಇಲ್ಲವೇ, ಶ್ವೇತ ಮೋಡಗಳು ವಿಶ್ರಾಂತಿಗೆಂದು ಕೆಳಗಿಳಿದಿವೆಯೇನೋ. ಅಂಕೆಗೂ ಸಿಗದ ಅಸಾಧ್ಯ ಮೌನದಲ್ಲಿ ಮರಳೆಂಬ ಈ ಸಾಧು ಮೈಗೆಲ್ಲ ಹಾಲುಬಣ್ಣ ಬಳಿದು ತಪಸ್ಸು ಮಾಡುತ್ತಿರುವನೇನೋ, ಹಾಗಾದರೆ ಯಾರಿಗಾಗಿ? ಯಾತಕ್ಕಾಗಿ? ಒಂದೊಂದನ್ನೇ ಮಾತಾಡಿಸಲೇ,!! ಅದರ ಏಕಾಂತವನ್ನು ಒಂದು ಕ್ಷಣವಾದರೂ ನೀಗಿಸುವ ಅದಮ್ಯತೆ, ಒಳ ತುಡಿವ ಮನದಲ್ಲಿ! ಇದು ಸಾಧ್ಯವೇ.... ಈ ಗಾಳಿಯು ತನ್ನ ರೆಕ್ಕೆಗಳಿಗೆ ಸಿಕ್ಕ ಮರಳನ್ನು, ಮೇಲೆ ಕೆಳಗೆ ಚಲಿಸುತ್ತ ಈ ಮರಳು ದಿನ್ನೆಗಳನ್ನು ನಿರ್ಮಿಸುತ್ತಲೇ ಇರುತ್ತದೆ ನಿರಂತರ. ...... ಮರಳಿನ ಮೇಲೆ ಗಾಳಿಯ ಪ್ರೊಡಕ್ಟ್‍ಗಳು ಇವು. ಗಾಳಿಯ ಕೊಯ್ಲು. ಇವುಗಳು ಆಕಾರದಲ್ಲಿ, ಹಾಗೂ ಗಾಳಿಯು ಚಲಿಸಿದ ದಿಕ್ಕಿಗೆ ಚಲಿಸುತ್ತವೆ. ಈ ದಿನ ಇಲ್ಲಿರುವ ದಿನ್ನೆ, ಮರುದಿನ ಅಥವಾ ಮರುಗಳಿಗೆಯಲ್ಲಿ, ಅಥವಾ ಕೆಲದಿನಗಳಲ್ಲಿ ಅಲ್ಲಿರುವುದಿಲ್ಲ. ಈ ಗಾಳಿ ಅದನ್ನು ಇನ್ನಷ್ಟು ಪಕ್ಕಕ್ಕೆ ಸರಿಸಿರುತ್ತದೆ. ಈ ಡ್ಯೂನ್‍ನ ಮೈಮೇಲೆ ಎಂತಹ ಚಂದದ ಚಿತ್ತಾರಗಳು, ಕ್ಷಣಕ್ಷಣಕ್ಕೂ ಬದಲಾಗುತ್ತಲೇ ಇರುತ್ತವೆ. ನಮ್ಮ ಗಮನಕ್ಕೆ ಬರಲು ತುಸು ಗಂಟೆ, ದಿನಗಳೇ ಬೇಕು. ತನ್ನ ಮೈಮೇಲೆ ಹಚ್ಚೆ ಹಾಕಿಕೊಂಡಂತೆ ಅದರ ಮೈಯಲ್ಲಾ ರಂಗೋಲಿಮಯ. ಒಂದೆಡೆ ನೇರ, ಸಮಾನಾಂತರ ರೇಖೆಗಳಿದ್ದರೆ, ಇನ್ನೊಮ್ಮೆ ಹಾವಿನಾಕಾರ. ಹೀಗೆ ಅನೇಕ ಸಾಧ್ಯತೆಗಳಲ್ಲಿ ಕುಸುರಿ ಕಲೆಯನ್ನು ಚಿತ್ರಿಸುತ್ತಲೇ ಇರುತ್ತವೆ, ಈ ಗಾಳಿಯ ಕುಂಚದ ಬೆರಳುಗಳು..

     ಇವೆಲ್ಲ ರಜಿಯಾ ಸುಲ್ಥಾನಳ ಕೈಯ ಮದರಂಗಿಯ ರೇಖೆಗಳೇ! ಗಾಲಿಬ್ ಬರೆದ ಆಯತೇಂ, ಕಪ್ಲೆಟ್‍ಗಳೋ! , ಇಲ್ಲಾ ಶೇರ್ ಶಾಯರೀಗಳೋ, ಗಜಲು ಹೌದೋ!, ಅಥವಾ ಹೀರಳ ದಾವಣಿಯ ಹೆಜ್ಜೆಗಳಲ್ಲಿ ಮೂಡಿದ ಕಮಲವದನದ ಚಿತ್ತಾರಗಳೋ, ಲೈಲಾಳ ಹೆಜ್ಜೆ ಗೆಜ್ಜೆ ನಾದಕ್ಕೆ ಮರುಳಾಗಿ, ಮರುಳನಾಗಿ ಗುಂಗಿನಲ್ಲಿರುವ ಮರಳೇ? ಮೈಮೇಲೆ ಗೆರೆ ಕೊರೆದುಕೊಂಡ ಮರಳು,, ಎಷ್ಟೊಂದು ಸುಂದರಾತಿ ಸುಂದರ ಬೆರಗು ಮೂಡಿಸುವ ಕಲಾಕೃತಿಗಳನ್ನು ಸೃಷ್ಟಿಸುತ್ತಲೇ ನಮ್ಮನ್ನೇ ಮರಳು ಮಾಡಿಬಿಡುತ್ತದೆ ಮೈಕೆಲೆಂಜೆಲೋ ಇವುಗಳನ್ನೇ ಕದ್ದಿದ್ದನೋ, ಲಿಯೋನಾರ್ಡೋ ಡ ವಿಂಚಿಯಿಂದ ಇದೇ ಪಾಠ ಕಲಿಯಿತೋ. ಚಿತ್ರ ವಿಚಿತ್ರ ಚಿತ್ರಿಕೆಗಳ ಲೈವ್ ಮೂಜಿಯಂ ಕಣ್ರೀ. ಅಬ್ಬಾ, ಕೈಯಿಂದ ತುಸು ನೀರು ಜಾರಿ ಬಿದ್ದೊಡನೆ ಎಂತಹ ಅನೂಹ್ಯ , ಅನಿರ್ವಚನೀಯ ಸುವಾಸನೆಯ ಪರಿಮಳದ ಗಂಧವೊಂದು ಹೊರಹೊಮ್ಮಿತು, ಉರ್ದುವಿನ ಮಿಠಾಸಿನಂತೆ, ಆ ಮರಳ ಆತ್ಮದೊಳಗಿಂದ! ಓಹೋ ಏನೋ ಹೊಳೆಯಿತು, ಹೌದು , ಇದು ಗಾಲಿಬ್‍ನ ಕಾಲು ಹೆಜ್ಜೆಗಳು ಬಿದ್ದ ನೆಲವೇ ಇರಬೇಕು. ಇಲ್ಲ ಗಾಲಿಬ್ ಇಲ್ಲ, ನೀನು ಸತ್ತಿಲ್ಲ, ಇಲ್ಲೆಲ್ಲೋ ಬದುಕಿರುವೆ, ಖಂಡಿತ, ನೀನು ಸತ್ತಿಲ್ಲ ! ನೀನು ಎಂದೆಂದೂ ಚಿರಂಜೀವಿ ಕಣೋ!                   ಒಂದೊಂದು ಸ್ಯಾಂಡ್ ಡ್ಯೂನ್ ಒಂದೊಂದು ಪ್ರಕೃತಿ ಪುರುಷರ ಬೆತ್ತಲೆ ರೂಪಕಗಳು. ಬೋರಲು ಮಲಗಿ ಬಿಟ್ಟಿರುತ್ತವೆ. ಕೆಲವು ಜೋಡಿಗಳು ಶೃಂಗಾರಮಯವಾದರೆ, ಇನ್ನು ಕೆಲವು ಚಿರ ವಿರಹಿಗಳಂತಿವೆ. ಕೆಲವು ಒಬ್ಬಂಟಿಯಾಗಿರುತ್ತವೆ. 'ರುಡಾಲಿ'ಯ ಡಿಂಪಲ್‍ ನಂತೆ....ಏಕಾಂತವಾಗಿ ಒಂದೊಂದೇ ಪವಡಿಸಿವೆ. ಖಿನ್ನವಾಗಿ, ಅಗೋಚರದತ್ತ ದೃಷ್ಟಿ ನೆಟ್ಟು, ಹೌದು, .......ಶ್! ಕೇಳಿ ಕಿವಿಗೊಟ್ಟು, ......ಅವು ಏನೋ ಹೇಳುತ್ತಿವೆ,..ಹಾಡುತ್ತಿವೆ, ......ಏನೋ ಅನುರಣಿಸುತ್ತಿವೆ, ......ತಾಳಿ, ತಾಳಿ,..... ಕೇಳಿ ಕೇಳಿ...,ಯಾರಿಗಾಗಿಯೋ ಕೂಗುತ್ತಿವೆ, ಆರ್ತವಾಗಿ, ...'ರೂಹ್'ನೊಳಗಿಂದ, ಶಬ್ದವಿಲ್ಲದ ದನಿಯಲ್ಲಿ,

'ಧೋಲಾ,.... ಧೋಲಾ ....ಧೋಲಾ.....ಧೋಲಾ......!,

ಯಾರಾ ಸೀಲಿ ಸೀಲಿ ಬಿರಹಾ ಕಿ

ರಾತ ಕಾ ಜಲನಾ,

ಯೆ ಭೀ ಕೊಯೀ ಜೀನಾ ಹೈ,,

ಯೆ ಭೀ ಕೊಯೀ ಮರನಾ.

( ಓ, ಗೆಳೆಯಾ ಧೋಲಾ, ಹಸಿ ಹಸಿ ವಿರಹದ ಬೆಂಕೀಲಿ ಬೇಯುವ ಇದೆಂಥ ಜೀವನ ರೀತಿಯೋ, ಈ ರೀತಿಯ ಮರಣವೋ’’)

ಯಾಕೆ ಲತಾ ದೀದಿ ಹಾಡು ಮರೆತಿರಾ, ..ಗುಲ್ಜಾರರ ಈ ಹಾಡು....ಹೇಗೆ ಮರೆಯಲು ಸಾಧ್ಯ ಅಲ್ಲವೇ? , ಹೌದು ಇದೆ ಮಣ್ಣಲ್ಲಿ, ಇದೇ ಹೆಜ್ಜೆಗಳಲ್ಲಿ ಇದೇ ಉಸಿರನ್ನು ಬಗೆದು, ಇದೇ ನೆಲದ ಹೃದಯ ಹುಚ್ಚೆದ್ದು ತನ್ನ' ಯಾರಾ.....(ಇನಿಯ) ನಿಗಾಗಿ ಕೂಗಿ ಕರೆದು, ವಿರಹದುಂಬಿ ಹಾಡಿದ ಹಾಡಿದು. ಸೀದಾ ಎದೆಯಲ್ಲಿ ಬಸಿದು ಬಿಡುವ ಹಾಡು. ಇದುವೇ ರಾಜಸ್ಥಾನದ ನಿಜ ಆತ್ಮ ಗೆಳೆಯರೆ., ಇದುವೇ ನಿಜವಾದ ಅದರ ದನಿ.

   ಎಲ್ಲರಿಗೂ ಕೇಳಿಸುವುದಿಲ್ಲ ಅದು

. 'ವೊ ಮೊರೆ ಚಂದ್ರಮಾ, ತೆರೆ ಚಾಂದನೀ ಅಂಗ ಜಲವಾಯೆ,'

ಇಕ್ ಬೂಂದ ಪಾನೀ ಕೋ, ಮೊರೆ ಅಖಿಯೋಂಸೆ ಬರಸಾವೆ’

(ಒಂದಾದರೂ ಬಿಂದು ಹನಿಯೇ ಈ ಕಂಗಳಿಂದಲೂ ಸುರಿಯೆಯಾ ಓ ನನ್ನ ಚಂದ್ರಮನೆ, ನಿನ ಬೆಳದಿಂಗಳಿದು ಬೆಂಕಿಯುಗಿಳಿದೆ)

ಎಂದು ಗೋಗರೆಯುತ್ತಿವೆ, ಮರಳ ಒಳ ತುಡಿತದ ಆತ್ಮದ ದನಿಯದು

. 'ಜಾನ್ ನಿಸ್ಸಾರ್ ಆಖ್ತರ್‍ನ 'ಐ ದಿಲೇ ನಾದಾನ್' ಮರಳ ಕಣ ಕಣಗಳತ್ತ ಕಣ್ಣಿಟ್ಟು , ಕಿವಿಯಾಣಿಸಿದರೆ, ಕೇಳಿದರೆ ಕೇಳಿಸೀತು , 'ಏ ಜಮೀಂ ಚುಪ್ ಹೈ,....... ಆಸಮಾಂ ಚುಪ್‍ಹೈ, ..

. ಫಿರ್ ಯೆ ಧಡಕನ್‍ಸೀ ಜುಸ್ತಜೂ ಕ್ಯಾ ಹೈ,

ಯೆ ಕೈಸೀ ಉಲ್‍ಝನ್ ಹೈ, ಕ್ಯಾ ಯೆ ಉಲರhiನ್ ಹೈ'

(ನೆಲ ಮೌನ ಹೊದ್ದಿದೆ, ಗಗನವೂ ನಿರ್ಮೌನ, ಆದರೂ ಮಿಡಿವ ಮನ, ಏನು ಏನು, ಯಾವ ಗುಂ ಗುಂ ಗಾನ ನೀನು)

ಕಿವಿಗೊಟ್ಟು ಕೇಳಿದರೆ ಕೇಳಿಸೀತು, ಅಹರ್ನಿಷಿ ಬೇಗುದಿಯಲ್ಲಿ 'ಹಮ್ ಭಟಕತೇ ಹೈ, ಕ್ಯೂ ಭಟಕತೇ ಹೈಂ' ಎಂದು ಸುಳಿದಾಡುವ ಅದರ ಆತ್ಮದ ಸ್ಪರ್ಶದ ಸಿಂಚನವನ್ನು ಅನುಭವಿಸಲು ಒಳಗಣ್ಣುಗಳು,, ಆಲಿಸುವ ಆದ್ರ್ರಕಿವಿಗಳು ಬೇಕಷ್ಟೆ. ....ಹೇ ಮರುಳು ಮರಳೇ, ಏನು ನಿನ್ನ ವೇದನೆ ಎಂದು ಮಾತಿಗಿಳಿದರೆ, ದ್ವಾಪರದಿಂದಲೇ ಎದೆಯಲ್ಲಿ ಮಥಿಸಿ, ' ವಕ್ತ್ ಕೆ ಸಿತಮ್ ಕಮ್ ಹಸೀಂ ನಹೀಂ' ಎಂದು ಹೇಳಿದ ಕವಿವಾಣಿಯಂತೆ ಮುಚ್ಚಿಟ್ಟುಕೊಂಡ ದಮನಗಳನ್ನೆಲ್ಲಾ ಅರುಹೀತು, ರಾಜಸ್ಥಾನದ ಮಂಗಾನಿಯರ್, ಲಂಗದಾ ಸೂಫಿ ಸರಗಮ್‍ಗಳ ಹಾಡುಗಳ ಮೂಲಕ ಶತಮಾನಗಳಷ್ಟು ಹಳೆಯದಾದ ಕಮಾಯಿಚಾದ ಆಡಿನ ಕರುಳಿನ ತಂತಿಯನ್ನು ಮೀಟಿ ಸುಶ್ರಾವ್ಯವಾಗಿ ವಿಶದಪಡಿಸೀತು. ಅಹೋರಾತ್ರಿ ಕಾನ್‍ಬೇಲಿಯನ್ ನರ್ತಕಿಯರ ನೃತ್ಯಗಳಲ್ಲಿ, ಅವರ ಕಾಲ ಗೆಜ್ಜೆಗಳಲ್ಲಿ, ತನ್ನೆಲ್ಲ ಏಕಾಂತವನ್ನು, ಖಿನ್ನತೆಯನ್ನು ನಿತ್ಯ ರಾತ್ರಿಯೂ ಮರೆಯಲು ಪ್ರಯತ್ನಿಸುತ್ತಿದೆಯೇನೋ!

'ಆರಜೂವೋಂ ನೆ ಹರ್ ಕಿಸೀ ದಿಲ್‍ಕೋ ದರ್ದ ಬಾಂಟೆ ಹೈ,

ಕಿತನೇ ಘಾಯಲ್ ಹೈ, ಕಿತನೇ ಬಿಸಮಿಲ್ ಹೈ, ಏಕ್ ತೂ ಕ್ಯಾ ಹೈ'

(ಆಸೆಗಳೆಲ್ಲ ಪ್ರತಿ ಹೃದಯಕ್ಕೂ ನೋವನ್ನೇ ಹಂಚುವವು, ಗಾಸಿಗೊಂಡವರೆಷ್ಟೊ, ಮಣ್ಣಾದವರೆಷ್ಟೊ, ಇನ್ನು ನೀನ್ಯಾವ ಲೆಖ್ಖವೋ!)

ಎಂತಹ ಅದ್ಭುತ ಸಾಲುಗಳು. ಈ ಸಾಲುಗಳಲ್ಲಿ ಬರುವ 'ಏಕ್ ತೂ ಕ್ಯಾ ಹೈ' ಸಾಲು ನೋಡಿ, ಮನುಷ್ಯನೆಂಬ ಮನುಷ್ಯನ ಅರೆಕ್ಷಣ ಬದುಕಿನ ಕಾಲಯಾಣದ ಕ್ಷಣಿಕ ಗಳಿಗೆಯನ್ನು ಹೇಗೆ ಬಿಡಿಸಿ ತೆರದು ತೋರಿಬಿಡುತ್ತವೆ, ಎರಡು ಕ್ಷಣಗಳ ಬದುಕಿನ ಈ ಭೂವಿಯ ಋಣ ಸಂಬಂಧದ ಭೇಟಿಯ ನಂಟಿನ ಕ್ಷಣಗಳನ್ನು ತೆರೆದಿಟ್ಟ ಬಗೆ. ಇಲ್ಲಿ ಕೇವಲ ಕೆಲ ಗಳಿಗೆಯ ಅತಿಥಿ ಅಷ್ಟೆ ನಾವು. ಕಾಲಯಮನ ಮುಂದೆ, ಕ್ಷಣಮಾತ್ರದವರು. ಯುಗಯುಗಗಳ ಇತಿಹಾಸದ ಕೊಂಡಿಗಳೂ ಹರಳುಗಟ್ಟಿದ ಮರಳ ಕಣ ಕಣಗಳಲ್ಲಿ ದೊರೆತಾವು. ಅದರ ಆತ್ಮವನ್ನು ನಮಗೆ ಪರಿಚಯಿಸಿದ ಲತಾ ದೀದಿಗೆ, ಜಾನ್ ನಿಸ್ಸಾರ್ ಅಖ್ತರ್‍ಗೆ ಹೃದಯನಾಥ ಮಂಗೇಶಕರ, ಖಯಾಮ್, ಗುಲ್ಜಾರರಿಗೆ ಇದೇ ಸ್ಯಾಂಡ ಡ್ಯೂನ್‍ನಿಂದಲೇ ಸಲಾಮ್ ಹೇಳದಿದ್ದರೆ, ಮನುಷ್ಯನೆನಿಸಿಕೊಳ್ಳಲಾರೆ ಎಂದೆನಿಸಿ ಅವರೆಲ್ಲರಿಗೊಂದು ತುಂಬು ಮನದ ಸಲಾಮ್ ಹೇಳಿಬಿಟ್ಟೆ. ಇರಲಿ.....ಸಂಜೆಯ ಸೂರ್ಯಸ್ತವನ್ನು ನೋಡಲು ಅಲ್ಲಿನ ಸುತ್ತಮುತ್ತಲಿನ ಡೆಸರ್ಟ್ ರೆಸಾರ್ಟ್‍ನ ಪ್ರವಾಸಿಗರು ಒಂಟೆಗಳ ಕಾರವಾನ್‍ಗಳಲ್ಲಿ ಇಂತಹ ಮರಳುದಿನ್ನೆಗಳ ಮೇಲೆ ಸೇರುತ್ತಾರೆ. ಸೂರ್ಯಸ್ತವು ಇಲ್ಲಿ ತುಂಬ ನಯನ ಮನೋಹರವಾಗಿರುತ್ತವೆ. ಆ ಸಂಜೆಗೆಂಪಿನ ಆಗಸದ ಅಂಚಲ್ಲಿ ನಿಧಾನವಾಗಿ ಮುಳುಗುವ ಸೂರ್ಯ, ಒಂದೇನೋ ಅನೂಹ್ಯವಾದ, ಅವಿರ್ವಚನೀಯವಾದ ಭಾವವೊಂದರಲ್ಲಿ ನಮ್ಮನ್ನು ಅದ್ದಿ, ತಾನು ಮುಳುಗಿ, ನಮ್ಮನ್ನು ಧನ್ಯತೆಗೆ ದೂಡುತ್ತಾನೆ. ಅವ ಮುಳುಗಿದ ಮೇಲೆ ಆಗಸದಲ್ಲಿ ಆಗುವ ಆ ಬೆಳಕಿನ ಹೊಂಬಣ್ಣದ ಕಿರಣಗಳಲ್ಲೂ ಅಗಸದಿಂದ ಪ್ರತಿಫಲಿತವಾಗಿಯೂ, ಮಂದಬೆಳಕಿನಲ್ಲಿ ರಂಗೋಲಿಯ ಗೆರೆಗಳನ್ನು ತುಂಬ ಸುಂದರವಾಗಿ ಹೊದ್ದ, ಆ ಮರಳ ದಿನ್ನೆ, ಅದರ ಏರು ಇಳಿವುಗಳು, ಹೊರಳುಗಳು, ಮಗ್ಗಲುಗಳು, ಎಷ್ಟೊಂದು ರಮ್ಯವೆನಿಸುತ್ತವೆ, ಅದರ ಜೀವಂತ ಉಸಿರಾಟದಂತೆ, ಅದರ ಕ್ಷಣ ಕ್ಷಣವೂ ಬದಲಾಗುವ ಆ ದೃಶ್ಯವೈಭವ ಅನನ್ಯ. ........ನೋಡಿ ಆನಂದ ಪಡವುದಷ್ಟೆ ನಾವು ಮಾಡಬಹುದಾದ ಬಹುದೊಡ್ಡ ಕೆಲಸ ಅಲ್ಲಿ.. ಏನು ವರ್ಣಿಸಿದರೂ ಬೊಗಸೆ ಮಾತ್ರ!

.........ಆ ರಮ್ಯತೆಯನ್ನು ಇಡಿಯಾಗಿ ಹಿಡಿದಿಡಲು ಸಾಧ್ಯವಾಗದು. ಅದೊಂದು ಅದ್ಭುತ ಅನುಭವವಾಗಿ, ಬಹುಶ: ಪ್ರತಿಯೊಬ್ಬ ಪ್ರವಾಸಿಯ ನೆನಪಿನಾಳದಲ್ಲಿ ಖಾಯಂ ಅತಿಥಿಯಾಗಿ ಪ್ರತಿಷ್ಠಾಪಿಸಿಬಿಡುತ್ತದೆ. ಗೆಳೆಯರೆ, ನೆನಪಾದರೂ ಎಂಥ ನೆನಪು ಅಂತೀರಿ. ಈ ತ್ರೀ ಡಿ, ಅನ್ನುವರಲ್ಲ, ಅಲ್ಲ, ಅದು ಅದರ ನೂರು ಪಟ್ಟು. ಅಲ್ಲಲ್ಲ ಅದರ ಹತ್ತುಪಟ್ಟು! ಮರಳದಿನ್ನೆಗಳ ಮೇಲೆ ಅಲ್ಲಲ್ಲಿ ಆಸಕ್ತ ಪ್ರವಾಸಿಗರ ಮುಂದೆ ಕುಳಿತು ಈ ನೆಲದ ಮೂಲಜೀವಗಳಾದ ಮಂಗಾನಿಯರ್. ಲಂಗದಾ ಪ್ರತಿನಿಧಿ, ಜನಪದೀಯ ಹಾಡುಗಾರ ಸ್ವರೂಪಖಾನ್ ಸರಗಮ್‍ನೊಂದಿಗೆ ಢೋಲು ನುಡಿಸುತ್ತ, ಸುಶ್ರಾವ್ಯವಾಗಿ, ''ಕೇಸರಿಯಾ ಬಾಲಮ್, ಆವೋ...ಪಧಾರೋ .............ಮಾರೇ ದೇಸ್, ಸಾಜನ್ ಸಾಜನ್....'' ಹಾಡುವಾಗಿನ, ಆ ನಿಸರ್ಗದ ರಂಗೋತ್ಸವದ ಕ್ಷಣಗಳನ್ನು ಸವಿಯುವಾಗ, ನೀಲಾಕಾಶವನ್ನಾವರಿಸಿದ ಆ ರಂಗೀನ ಕಲಾ ವೈಭವದ ಮೆರುಗುಗಳು, ಆ ಹಕ್ಕಿ ಸಂಕುಲಗಳ ಬಾನಾಡಿಗಳ ಕಲರವಗಳು, ಆ ಸೂರ್ಯನ ಸ್ವರ್ಣ ಕಿರಣಗಳು ಮರಳ ಮೈದಡವುವ ಆ ಸುಖಸ್ಪರ್ಶ ಲೋಲುಪದ ಗಳಿಗೆಯ ಆ ಅನುಭವಗಳ ಸುರಿಮಳೆಯೊಂದಿಗೆ ಮನದ ಪಟಲದಲ್ಲಿ ಈ ಮನಸೆಂಬ ಮನಸು, ಬಣ್ಣಬಣ್ಣದ ಕುಂಚಗಳಿಂದ ಅಂತಿಮವಾಗಿ, ಎಂದೂ ಮರೆಯಲಾರದ ಶಾಶ್ವತ ಅಪರೂಪದ ಜೀವದುಂಬಿದ ಉಬ್ಬು ಸ್ಥಬ್ದ ಚಿತ್ರವೊಂದನ್ನು ನಮ್ಮಲ್ಲಿ ಹಚ್ಚೆ ಹಾಕಿದಂತೆ ಬಿಡಿಸಿಬಿಡುತ್ತದೆ, ಸ್ಮøತಿಪಟಲದಲ್ಲಿ. ......ಅದನ್ನು ಮತ್ತೆ ಮತ್ತೆ ಆಸ್ವಾದಿಸಲು ಕಣ್ಣು ತೆರೆಯಬೇಕಿಲ್ಲ, ......ಮುಚ್ಚಬೇಕಷ್ಟೆ!

Rating
No votes yet

Comments

Submitted by kavinagaraj Fri, 06/26/2015 - 09:14

ಪೋಕರಾನ್ ಭೇಟಿಯ ವಿವರ ಓದಿ ಖುಷಿಯಾಯಿತು. ಹೆಮ್ಮೆ ಮರುಕಳಿಸಿತು. ಉಳಿದಂತೆ ಪ್ರವಾಸದ ಚಿತ್ರಗಳು, ವಿವರಗಳು ಮುದ ನೀಡಿದವು.

ಕ ವಿ ನಾಗರಾಜ್ ಸರ್, ತಮ್ಮ ಎಂದಿನ ಹೃತ್ಪೂರ್ವಕ ಪ್ರತಿಕ್ರಿಯೆಗೆ ಧನ್ಯ ಸರ್. ವಂದನೆಗಳು