ವಾಗರ್ಥ

ವಾಗರ್ಥ

ಈ ಮಾತುಗಳೇಕೆ ಹೀಗೆ?
ಹೇಳಿದರೂ ಹೇಳದಂತೆ,
ಕೇಳಿದರೂ ಕೇಳದಂತೆ,
ಅರಿತರೂ ಅರಿಯದಂತೆ!

ಪದಗಳನ್ನು ಪೋಣಿಸಿದ
ಮಾತುಗಾರನ ಆಂತರ್ಯದಲ್ಲಿ
ಹೇಳಲೇ, ಹೇಳದೇ ಉಳಿದುಬಿಡಲೇ
ಎಂಬ ಗೊಂದಲದ ನೆರಳು!

ಕಿವಿಗೆ ಬಿದ್ದ ಸ್ವರವ ಆಯ್ದ
ಕೇಳುಗನ ಅಂತರಾಳದಲ್ಲಿ
ಕೇಳಿದ ಮಾತು ಸತ್ಯವೇ ಅಥವಾ
ಕೇಳಿದ್ದೇ ಸುಳ್ಳೇ ಎಂಬ ಗೋಜಲು

ಪುನರಚಿತ ಶಬ್ದ ಮಾಲೆಗೆ
ಅರ್ಥ ತುಂಬುವ ಕೇಳುಗನಿಗೆ
ಕಹಿ ಸತ್ಯದ ದರ್ಶನವಾದರೆ,
ತಿಳಿದದ್ದೂ ತಿಳಿಯದಂಥ ಕತ್ತಲು!

ಹೇಳುಗನು ಹೇಳಬಯಸುವ ಮಾತು
ಕೇಳುಗನು ಕೇಳಬಯಸುವ ಮಾತಿನ
ಅರ್ಥ ವ್ಯತ್ಯಾಸದಲಿ ಕಳೆದುಹೋದರೆ,
ಈ ಮಾತಿನರ್ಥ ಯಾರ ಸ್ವತ್ತು?

Rating
No votes yet

Comments

Submitted by nageshamysore Wed, 06/24/2015 - 03:28

ಯಾವುದೆ ನಿರೀಕ್ಷೆಯಿಲ್ಲದ ಮಾತು ಬರಿಯ ಶಬ್ದ ತರಂಗವಷ್ಟೆ ಏನೊ ? ಆಡಿದ ಮಾತಿನ ಹೂರಣ ಆಡಿದವರ ಮತ್ತು ಕೇಳುಗರಿಬ್ಬರ ಭಾವ, ಪೂರ್ವನಿರೀಕ್ಷೆ, ಅನಿಸಿಕೆಗಳನುಸಾರ ಅವರವರದೆ ಇಚ್ಛಾ-ವಿಶ್ಲೇಷಣೆಯಂತೆ ಪ್ರಕ್ಷೇಪಗೊಳ್ಳುವುದರಿಂದ ನಡುವೆ ಕಳುವಾಗುವ ನೈಜಾರ್ಥ ಅನಾಥವಾಗಿಬಿಡುತ್ತದೆ. ಬಹುಶಃ ಅವರವರ ಅಹಮಿಕೆ ಹಮ್ಮು ಬಿಮ್ಮುಗಳ ಬಲೆಯಲ್ಲಿ ಸಿಕ್ಕಿದ ಇಬ್ಬರು ಆ ಕಳುವಾದ ಮಾಲು ತಮ್ಮದಲ್ಲವೆಂಬ ಉಢಾಫೆ ಮಾಡಿದರು, ಸೂಕ್ಷ್ಮ ಮನಸಿನ ವೀಕ್ಷಕರಿಗೆ ಅದು ಕಾಣುವ ಬಗೆ ಮಾತ್ರ ಸೋಜಿಗ. ಆ ಸೋಜಿಗ ಕವನವಾದ ರೀತಿ ಸೊಗಸಾಗಿ ಮೂಡಿಬಂದಿದೆ - ಅಭಿನಂದನೆಗಳು :-)

Submitted by Indushree Tue, 06/30/2015 - 10:51

In reply to by nageshamysore

ಹೌದು... ಎಲ್ಲರಿಗೂ ತಮಗೆ ಕಂಡದ್ದಷ್ಟೇ ಸತ್ಯ...ಮಾತಿಗೆ ಪ್ರತಿಸ್ಪಂದನ ಅತ್ಯಗತ್ಯ... ಇಲ್ಲವಾದಲ್ಲಿ ಅದು ಕೇವಲ ಶಬ್ದ ತರಂಗಗುಚ್ಛವಾಗಿ ಉಳಿದುಬಿಡುತ್ತದೆ...
ಮೆಚ್ಚುಗೆಗೆ ಧನ್ಯವಾದಗಳು

Submitted by kavinagaraj Mon, 06/29/2015 - 14:41

ಮಾತುಗಳೇ ಹಾಗೆ! ಇದ್ದದ್ದು ಇದ್ದಂತೆ ಹೇಳಲಾಗದ, ಕೇಳಲಾಗದ ಕಾರಣಗಳೂ ಸಹ ಇದಕ್ಕೆ ಕಾರಣ!!

Submitted by Indushree Tue, 06/30/2015 - 10:55

In reply to by kavinagaraj

ಎಲ್ಲರಿಗೂ ಪ್ರಿಯವಾದುದನ್ನಷ್ಟೇ ಹೇಳುವ ಕೇಳುವ ಬಯಕೆ... ಹೇಳ್ತಾರಲ್ಲ ಅಪ್ರಿಯಂ ಸತ್ಯಂ ನ ವದೇತ್ ಅಂತ... ಹೇಳಿದ್ರೂ ಅದನ್ನು ಹೇಳುವ- ಕೇಳುವ ಈ ಸಂವಹನದಲ್ಲಿ ನೈಜಾರ್ಥ ಕಾಣೆಯಾಗಿಬಿಡುತ್ತದೆ... :-)