ಪ್ರಜ್ಞಾಚಕ್ಷು ವಿರಜಾನಂದರ ಸಾಧನೆ

ಪ್ರಜ್ಞಾಚಕ್ಷು ವಿರಜಾನಂದರ ಸಾಧನೆ

      ಮಹರ್ಷಿ ದಯಾನಂದ ಸರಸ್ವತಿಯವರಂತಹ ಪುರುಷ ಸಿಂಹನನ್ನು ಜಗತ್ತಿಗೆ ಧಾರೆಯೆರೆದು ಕೊಟ್ಟ ವಿರಜಾನಂದರು ಹುಟ್ಟು ಕುರುಡರು. ಮೂಲತಃ ಪಂಜಾಬಿನ ಕರ್ತಾರಪುರದಲ್ಲಿ ಕ್ರಿ.ಶ. 1778ರಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲೇ ತಂದೆ-ತಾಯಿಯವರನ್ನು ಕಳೆದುಕೊಂಡಿದ್ದರು. ಅವರ ಅತ್ತಿಗೆ, ಅಣ್ಣ ಈ ಕುರುಡ ಹುಡುಗನನ್ನು 'ಏಕೆ ಈ ಶನಿಯನ್ನು ನಮ್ಮ ತಲೆಗೆ ಕಟ್ಟಿಹೋದರೋ ಅಪ್ಪ, ಅಮ್ಮ, ಇವನು ಎತ್ತಲಾದರೂ ತೊಲಗಿ ಹೋಗಬಾರದೇ' ಎಂದು ಪ್ರತಿನಿತ್ಯವೆನ್ನುವಂತೆ ಹಂಗಿಸುತ್ತಿದ್ದರು, ರೇಗುತ್ತಿದ್ದರು. ಈ ಬಯ್ಗಳವನ್ನು ಇನ್ನು ಸಹಿಸುವುದು ಕಷ್ಟ ಎಂಬ ಸ್ಥಿತಿಗೆ ತಲುಪಿದ ಆ ಬಾಲಕ ಒಂದು ದಿನ ಮನೆಯಿಂದ ಹೊರಟೇಬಿಟ್ಟ. ಆಗ ಆತನಿಗೆ ಕೇವಲ ಎಂಟು ವರ್ಷ. ಒಂದು ಕೈಯಲ್ಲಿ ಲಾಠಿ ಹಿಡಿದುಕೊಂಡು ನಡೆದೇ ನಡೆದ. ಊಹಿಸುವುದೂ ಕಷ್ಟವಾಗುತ್ತದೆ. ಈಗಿನಂತೆ ರಸ್ತೆಗಳಿಲ್ಲದ, ಕಾಡು-ಮೇಡುಗಳಿಂದ ಕೂಡಿದ ಪ್ರದೇಶಗಳಲ್ಲಿ ಕೋಲಿನ ಆಧಾರದಲ್ಲಿ ತಡವರಿಸಿ ನಡೆಯುತ್ತಾ ಸುಮಾರು 2000 ಮೈಲುಗಳಷ್ಟು ದೂರ ಕ್ರಮಿಸಿ ಆತ ತಲುಪಿದ್ದು ಹರಿದ್ವಾರವನ್ನು!  ಕಣ್ಣಿರುವವರು, ಧೃಢಕಾಯರೂ ಆ ರೀತಿ ಕ್ರಮಿಸಲು ಹಿಂಜರಿಯುವ ಕಾಲವದು. ಆ ಅಂಧ ಬಾಲಕ ಅದನ್ನು ಮಾಡಿದ್ದೇ ಒಂದು ದೊಡ್ಡ ಕೆಲಸ. ಆತನ ಸಾಧನೆ ಅಲ್ಲಿಗೇ ನಿಲ್ಲಲಿಲ್ಲ. ಆತನ ಬುದ್ಧಿ ಎಷ್ಟು ತೀಕ್ಷ್ಣ ಅಂದರೆ, ಕೃಷ್ಣಶಾಸ್ತ್ರಿ ಅನ್ನುವವರು ಗಂಗಾನದಿಯಲ್ಲಿ ನಿಂತುಕೊಂಡು ಋಗ್ವೇದ ಹೇಳುತ್ತಿದ್ದುದನ್ನು ಕೇಳುತ್ತಾ ನಿಂತಿದ್ದ ಅವರು ಕೇಳಿದರು, 'ಶಾಸ್ತ್ರಿಗಳೇ, ಇನ್ನೊಂದು ಒಂದು ಸಲ ಹೇಳಿ'. ಅವರು ಹೇಳಿದರು.  ಇವರು ಸ್ವಲ್ಪವೂ ಮರೆಯದೆ ಕಲಿತರು. ಅವರ ಅದ್ಭುತ ಗ್ರಹಣ ಶಕ್ತಿಯಿಂದಾಗಿ ಒಂದು ಸಲ ಕೇಳಿದರೆ ಸಾಕು, ಅದು ಅವರಿಗೆ ಮನದಟ್ಟಾಗಿಬಿಡುತ್ತಿತ್ತು. ನಂತರದಲ್ಲಿ ಹೆಸರಾಂತ ಸಂಸ್ಕೃತ ವಿದ್ವಾಂಸರಾಗಿದ್ದ ಸ್ವಾಮಿ ಪೂರ್ಣಾನಂದರ ಶಿಷ್ಯರಾಗಿ ಪುರಾತನ ಋಷಿ-ಮುನಿಗಳು ರಚಿಸಿದ ಸಾಹಿತ್ಯ, ಸಂಸ್ಕೃತ ವ್ಯಾಕರಣ, ನಿರುಕ್ತ, ಮುಂತಾದುವನ್ನು ಕಲಿತರು ಎಂದು ಹೇಳುತ್ತಾರೆ. ಹಿಂದೂ ತತ್ತ್ವದರ್ಶನಗಳ ಮೂಲವಿಚಾರಗಳನ್ನು ಮನನ ಮಾಡಿಕೊಂಡವರು ಅವರು. ಪವಿತ್ರ ಗಾಯತ್ರಿ ಮಂತ್ರವನ್ನು ವರ್ಷಗಳ ಕಾಲ ಪಠಿಸುತ್ತಿದ್ದ ಅವರಿಗೆ ಪ್ರಾಪ್ತವಾದ ದಿವ್ಯದೃಷ್ಟಿಯಿಂದ ಜ್ಞಾನೋದಯವಾಗಿ ಅವರಿಗೆ ಆಧ್ಯಾತ್ಮಿಕ ಉನ್ನತಿ ಮತ್ತು ಮಂತ್ರಗಳಲ್ಲಿ ಸ್ವಾಮಿತ್ವ ದೊರಕಿತು ಎನ್ನಲಾಗಿದೆ. ಇದು ಏನೇ ಇರಲಿ, ಕುರುಡರಾಗಿದ್ದರೂ ಅವರು ನಾಲ್ಕೂ ವೇದಗಳಲ್ಲಿ ಪಾಂಡಿತ್ಯ ಹೊಂದಿದ್ದಂತೂ ನಿರ್ವಿವಾದದ ವಿಚಾರವಾಗಿತ್ತು.  ಕಣ್ಣಿರುವವರಿಗೂ ಕಷ್ಟವಾದ ಈ ಜ್ಞಾನ ಪ್ರಜ್ಞಾಚಕ್ಷುವಾಗಿದ್ದ ವಿರಜಾನಂದರಿಗೆ ಲಭ್ಯವಾಗಿತ್ತು.

     ಮೋಕ್ಷ ಸಾಧನೆಗೆ ಮೂರ್ತಿಪೂಜೆಯ ಅಗತ್ಯವಿಲ್ಲವೆಂದು ತಮ್ಮ ಶಿಷ್ಯರಿಗೆ ಹೇಳುತ್ತಿದ್ದ ಅವರು ದೇವರನ್ನು ತಮ್ಮ ಸುತ್ತಮುತ್ತಲಿನಲ್ಲೇ ಎಲ್ಲಾ ಜೀವಿಗಳಲ್ಲಿ, ವಸ್ತುಗಳಲ್ಲಿ, ಸ್ವತಃ ತಮ್ಮ ಹೃದಯಗಳಲ್ಲೇ ಕಾಣಬೇಕೆಂದು, ಅವನನ್ನು ಕೇವಲ ದೇಗುಲಗಳಲ್ಲಿನ ವಿಗ್ರಹಗಳಲ್ಲಿ ಮಾತ್ರ ಕಾಣಲು ಪ್ರಯತ್ನಿಸಬಾರದೆಂದು ಒತ್ತಿ ಹೇಳುತ್ತಿದ್ದರು. ಕಷ್ಟದಲ್ಲಿದ್ದರೂ ವಿರಜಾನಂದರು ವಿನೋದ ಪ್ರವೃತ್ತಿಯವರೂ ಆಗಿದ್ದರು. ಒಮ್ಮೆ ಮಥುರಾ ನಗರದಲ್ಲಿ ನಡುಬೇಸಿಗೆಯ ಮಧ್ಯಾಹ್ನದಲ್ಲಿ ಕೋಲೂರಿಕೊಂಡು ಹೋಗುತ್ತಿದ್ದರು. ಅದೇ ಸಮಯದಲ್ಲಿ  ಒಂದು ಚಿಕ್ಕ ರಥದ ಮೇಲೆ ದೇವರನ್ನು ಕೂರಿಸಿಕೊಂಡು ಭಕ್ತಾದಿಗಳು ಬರುತ್ತಿದ್ದರು. ಬಿಸಿಲು ಜೋರಾಗಿದ್ದರಿಂದ ರಥವನ್ನು ನಡುರಸ್ತೆಯಲ್ಲೇ ಬಿಟ್ಟು ಮರದ ನೆರಳಿನಲ್ಲಿ ಭಕ್ತರು ಸುಧಾರಿಸಿಕೊಳ್ಳುತ್ತಿದ್ದರು. ಈ ಪುಣ್ಯಾತ್ಮ ಕೋಲೂರಿಕೊಂಡು ಹೋಗುತ್ತಾ ಹೋಗುತ್ತಾ ಆ ರಥದ ಮೇಲೇ ಬಿದ್ದುಬಿಟ್ಟರು. ಭಕ್ತರು ಕಿರುಚಿದರು, "ಏಯ್, ಕುರುಡಾ, ದೇವರು ಇರೋದು ಗೊತ್ತಾಗಲ್ವಾ?" ವಿರಜಾನಂದರು ನಗುತ್ತಲೇ ಹೇಳಿದ್ದರು, "ನಾನು ಕುರುಡ ಅನ್ನೋದು ಜಗತ್ತಿಗೇ ಗೊತ್ತು, ಆ ನಿಮ್ಮ ದೇವರೂ ಕುರುಡನೇ ಇರಬೇಕು, ಪಾಪ, ಮುದುಕ, ಕುರುಡ ಬರ್ತಾ ಇದಾನೆ ಅಂತ ಪಕ್ಕಕ್ಕೆ ಸರಿಯೋಕೆ ಆಗ್ತಾ ಇರಲಿಲ್ವಾ?"

     ಅದ್ವಿತೀಯ ಸಂನ್ಯಾಸಿ ದಯಾನಂದ ಸರಸ್ವತಿ ಗುರುವನ್ನು ಅರಸುತ್ತಾ ಸ್ವಾಮಿ ವಿರಜಾನಂದರ ಬಳಿಗೆ ಬಂದಾಗ ದಯಾನಂದರಿಗೆ 36 ವರ್ಷ ವಯಸ್ಸು. ಮಥುರಾದ ವಿಶ್ರಾಂತ್ ಘಾಟಿಗೆ ಹೋಗುವ ದಾರಿಯಲ್ಲಿದ್ದ ವಿರಜಾನಂದರ ಶಾಲೆಯ ಬಳಿಗೆ ಬಂದ ದಯಾನಂದರು ಬಾಗಿಲು ಬಡಿದಿದ್ದರು. ಒಳಗಿನಿಂದ ಒಂದು ಗಂಭೀರ ಧ್ವನಿ ಕೇಳಿಬಂದಿತು, "ಯಾರದು?"

ದಯಾನಂದ: ಗುರುದೇವಾ, ನಾನು ನಿಮ್ಮ ಸೇವಕ. ನನ್ನನ್ನು ದಯಾನಂದ ಸರಸ್ವತಿ ಎಂದು ಕರೆಯುತ್ತಾರೆ.

ವಿರಜಾನಂದ: ನಿನಗೇನು ಬೇಕು?

ದಯಾನಂದ: ಜ್ಞಾನದ ಬೆಳಕಿಗಾಗಿ ನಿಮ್ಮನ್ನು ಹುಡುಕಿಕೊಂಡು ಬಂದಿರುವೆ.

ವಿರಜಾನಂದ: ನಿನಗೆ ವ್ಯಾಕರಣ ಗೊತ್ತಿದೆಯೇ?

ದಯಾನಂದ: ನಾನು ಕೌಮುದಿ ಮತ್ತು ಸಾರಸ್ವತಗಳನ್ನು ಓದಿಕೊಂಡಿದ್ದೇನೆ. (ಎರಡು ಸಂಸ್ಕೃತ ವ್ಯಾಕರಣದ ಪ್ರಸಿದ್ಧ ಗ್ರಂಥಗಳು.)

ವಿರಜಾನಂದ: ಏನು? ಕೌಮುದಿ, ಸಾರಸ್ವತ? ಇಲ್ಲಿಂದ ಹೊರಟು ಹೋಗು. ಆ ಉಪಯೋಗವಿಲ್ಲದ ಪುಸ್ತಕಗಳು! ಅವನ್ನು ಯಮುನಾ ನದಿಯಲ್ಲಿ ಬಿಸಾಕು, ಆಮೇಲೆ ಬಾ. ಆ ನಂತರವೇ ನಾನು ಬಾಗಿಲು ತೆಗೆಯುವೆ.

     ಗುರುವಿನ ಆದೇಶದಂತೆ ದಯಾನಂದರು ನೇರವಾಗಿ ಯಮುನಾ ನದಿಯ ಬಳಿಗೆ ಹೋದರು. ನೂರಾರು ಮೈಲುಗಳು ದೂರ ಪ್ರಯಾಣ ಮಾಡುತ್ತಾ ಅವರು ಈ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ತಂದಿದ್ದರು. ಆದರೆ ಈಗ ಅವುಗಳ ಕುರಿತು ಯಾವುದೇ ವ್ಯಾಮೋಹ ಇಟ್ಟುಕೊಳ್ಳದೆ ನದಿಗೆ ಎಸೆದುಬಿಟ್ಟರು ಮತ್ತು ಗುರುಗಳ ಮನೆಗೆ ಹಿಂತಿರುಗಿ ಬಂದು ಹೇಳಿದರು, "ಗುರುದೇವಾ, ನಿಮ್ಮ ಆದೇಶವನ್ನು ಪಾಲಿಸಿದ್ದೇನೆ." ಶಿಷ್ಯನಿಗಾಗಿ ಗುರುಗಳ ಶಾಲೆಯ ಬಾಗಿಲು ತೆರೆಯಲ್ಪಟ್ಟಿತು.

     ದಯಾನಂದರು ಒಳಗೆ ಪ್ರವೇಶಿಸಿ ನೋಡಿದರೆ ಗುರು ವಿರಜಾನಂದರು ಕೃಷ್ಣಾಜಿನದ ಮೇಲೆ ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತಿದ್ದರು. ಕೇವಲ ಚರ್ಮ ಮತ್ತು ಮೂಳೆಗಳು ಕಾಣುತ್ತಿದ್ದ ಕೃಷಕಾಯದ ವಿರಜಾನಂದರ ಮುಖ ತೇಜಸ್ಸಿನಿಂದ ಕೂಡಿತ್ತು. ಆ ವೈರಾಗ್ಯನಿಧಿಯ ಪಾದಗಳಿಗೆ ನಮಿಸಿದ ದಯಾನಂದರ ತಲೆಯ ಮೇಲೆ ಗುರು ಪ್ರೀತಿಪೂರ್ವಕವಾಗಿ ಕೈಯಾಡಿಸಿದರು. ದಯಾನಂದರು ಅಂಧರಾಗಿದ್ದ ಗುರುಗಳ ಕಡೆಗೆ ಆಶ್ಚರ್ಯದಿಂದ ನೋಡಿದರು. ಕುರುಡರಾಗಿದ್ದ ಗುರುಗಳು ಒಂದು ಅಕ್ಷರವನ್ನೂ ಓದಲು ಸಾಧ್ಯವಿರಲಿಲ್ಲ. ಆದರೆ ಅವರು ಜ್ಞಾನಸಮೃದ್ಧತೆಯ ಜೀವಂತ ಪ್ರತಿರೂಪವಾಗಿದ್ದರು ಮತ್ತು ಶಿಷ್ಯರ ಎಲ್ಲಾ ಸಂದೇಹಗಳನ್ನು ವೇದಗಳ, ಎಲ್ಲಾ ಗ್ರಂಥಗಳ ಮಂತ್ರಗಳು, ಉದಾಹರಣೆಗಳೊಂದಿಗೆ ಸಾಧಾರವಾಗಿ ಪರಿಹರಿಸುತ್ತಿದ್ದರು. ಯೋಗ್ಯ ಗುರುಗಳಿಗಾಗಿ 15 ವರ್ಷಗಳಿಂದ ನಡೆಸಿದ್ದ ದಯಾನಂದರ ಹುಡುಕಾಟ ಕೊನೆಗೊಂಡಿತ್ತು. ಗುರುವಿನ ಪಾದತಲದಲ್ಲಿ ಅವರು ತಮ್ಮನ್ನು ತಾವು ಅರ್ಪಿಸಿಕೊಂಡುಬಿಟ್ಟರು.

     ದಯಾನಂದರ ಅರ್ಪಣಾ ಮನೋಭಾವ, ಕಲಿಯುವ ಆಸಕ್ತಿಗಳು ಅವರನ್ನು ಗುರುವಿನ ಮೆಚ್ಚಿನ ಶಿಷ್ಯರನ್ನಾಗಿಸಿದವು. ದಯಾನಂದರು ಪ್ರತಿದಿನ ಬೆಳಿಗ್ಗೆ ಚಳಿಯಿರಲಿ, ಬಿಸಿಲಿರಲಿ, ಮಳೆಯಿರಲಿ ಯಮುನಾ ನದಿಯಿಂದ ಗುರುಗಳ ಸ್ನಾನಕ್ಕೆ ಮತ್ತು ಇತರ ಉಪಯೋಗಗಳಿಗಾಗಿ ನೀರು ಹೊತ್ತು ತರುತ್ತಿದ್ದರು. ನೆಲವನ್ನು ಗುಡಿಸಿ, ಸಾರಿಸುವ ಕೆಲಸವೂ ಅವರದೇ ಆಗಿತ್ತು. ಯಾವುದೇ ಕೆಲಸವನ್ನೂ ಅಳುಕಿಲ್ಲದೆ, ಹಿಂದೆ ಮುಂದೆ ನೋಡದೆ, ಹಿಂಜರಿಯದೆ ಮಾಡುತ್ತಿದ್ದ ಅವರನ್ನು ಕಂಡರೆ ಗುರುವಿಗೆ ವಿಶೇಷ ಅಕ್ಕರೆಯಿತ್ತು. 

     ಒಮ್ಮೆ ವಿರಜಾನಂದರು ಪಾಠ ಹೇಳಿಕೊಡುತ್ತಿದ್ದಾಗ ಯಾವುದೋ ಕಾರಣಕ್ಕೆ ದಯಾನಂದರ ಮೇಲೆ ಸಿಟ್ಟು ಬಂದು ಅವರ ಬೆನ್ನಿನ ಮೇಲೆ ಬಲವಾಗಿ ಹೊಡೆದಿದ್ದರು. ಹಾಗೆ ಹೊಡೆದಿದ್ದರಿಂದ ಕೇವಲ ಚಕ್ಕಳ-ಮೂಳೆಯ ಕೃಷದೇಹಿ ಗುರುವಿನ ಕೈಯಿಗೇ ನೋವಾಯಿತು. ಕೆಲಕ್ಷಣದ ನಂತರ ದಯಾನಂದರು ನಿಧಾನವಾಗಿ ಗುರುಗಳ ಬಳಿಗೆ ಬಂದು ವಿನೀತರಾಗಿ ಹೇಳಿದ್ದರು, "ಗುರುದೇವಾ, ನನ್ನ ದೇಹ ಕಲ್ಲಿನಂತಿದೆ. ನೀವು ಹೊಡೆದರೆ ಅದಕ್ಕೆ ನೋವಾಗುವುದಿಲ್ಲ. ನಿಮ್ಮ ಕೈಗಳಿಗೇ ನೋವಾಗುತ್ತದೆ. ಇನ್ನು ಮುಂದೆ ನನ್ನನ್ನು ಶಿಕ್ಷಿಸಬೇಕಾದಾಗ ನಿಮ್ಮ ಕೈಗಳ ಬದಲಾಗಿ ಒಂದು ಕೋಲಿನಿಂದ ಹೊಡೆಯಿರಿ." ಹೀಗೆ ಹೇಳಿ ಒಂದು ಕೋಲನ್ನು ತಂದುಕೊಟ್ಟಿದ್ದರು. ಅಂದಿನ ಗುರು-ಶಿಷ್ಯರ ಸಂಬಂಧವನ್ನು ಇಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ದಯಾನಂದರ ಕೋರಿಕೆ ವ್ಯರ್ಥವಾಗಲಿಲ್ಲ. ಮುಂದೊಮ್ಮೆ ವಿರಜಾನಂದರು ಸಿಟ್ಟಿನಲ್ಲಿ ದಯಾನಂದರ ಭುಜದ ಮೇಲೆ ಬಲವಾಗಿ ಬಾರಿಸಿದ್ದರು. ಇದನ್ನು ಕಂಡ ಸಹವಿದ್ಯಾರ್ಥಿ ನಯನಸುಖ ಗುರುವಿಗೆ ಹೇಳಿದ್ದ, "ಗುರುದೇವಾ, ಇಂತಹ ದೊಡ್ಡ ಸಂನ್ಯಾಸಿಯನ್ನು ಈ ರೀತಿ ದಂಡಿಸುವುದು ತರವಲ್ಲ. ಅವರನ್ನು ಗೌರವದಿಂದ ಕಾಣಬೇಕು." ಪಾಠ ಮುಗಿದ ಮೇಲೆ ದಯಾನಂದರು ನಯನಸುಖನಿಗೆ ಆಕ್ಷೇಪಿಸಿ ಹೇಳಿದ್ದರು, "ಗುರುದೇವರು ನನಗೆ ದ್ವೇಷದಿಂದ ಹೊಡೆದರೆಂದು ಭಾವಿಸಿರುವೆಯಾ? ಕುಂಬಾರ ಮಣ್ಣನ್ನು ತುಳಿದು ಹದ ಮಾಡಿ ಅದನ್ನು ಸುಂದರ ಮಡಿಕೆಯನ್ನಾಗಿಸುವಂತೆ, ಗುರು ತನ್ನ ಶಿಷ್ಯರನ್ನು ಹೊಡೆದು, ತಿದ್ದಿ ಶಿಷ್ಯರ ವ್ಯಕ್ತಿತ್ವವನ್ನು ರೂಪಿಸುತ್ತಾರೆ. ಗುರುಗಳಿಗೆ ನೀನು ಆ ರೀತಿ ಮಾತನಾಡಬಾರದಿತ್ತು." ಮುಂದೆ ದಯಾನಂದರು ಮಹರ್ಷಿಯೆನಿಸಿ ಜನರಿಗೆ ಉಪದೇಶ ನೀಡುತ್ತಿದ್ದ ಸಂದರ್ಭದಲ್ಲಿ ತಮ್ಮ ಭುಜದ ಮೇಲೆ ಗುರುಗಳು ಹೊಡೆದಿದ್ದರಿಂದ ಆಗಿದ್ದ ಗುರುತನ್ನು ತೋರಿಸಿ ಹೇಳುತ್ತಿದ್ದರು, "ಇವು ನನ್ನ ಗುರುವಿಗೆ ನಾನು ಯಾವಾಗಲೂ ಕೃತಜ್ಞನಾಗಿರಬೇಕೆಂದು ನೆನಪಿಸುತ್ತವೆ."

     ಆರ್ಯಸಮಾಜ ಸ್ಥಾಪಕರಾಗಿ ವೇದದ ವಿಚಾರಗಳನ್ನು ಪ್ರಚಾರ ಮಾಡುವಲ್ಲಿ ಅಗ್ರಪಾತ್ರ ವಹಿಸಿದ, ಅಂಧಶ್ರದ್ಧೆ, ಮೂಢನಂಬಿಕೆಗಳನ್ನು ತೊಡೆಯಲು ಸತತ ಪ್ರಯತ್ನ ಮಾಡುತ್ತಾ, ಸತ್ಯಾರ್ಥ ಪ್ರಕಾಶದಂತಹ ಜನರಲ್ಲಿ ವೈಚಾರಿಕ ಕ್ರಾಂತಿ ಮೂಡಿಸುವ ಗ್ರಂಥ ರಚಿಸಿದ, ಸತ್ಯಕ್ಕಾಗಿ ತಮ್ಮ ಜೀವನವನ್ನೇ ಬಲಿದಾನ ಮಾಡಿದ ಮಹರ್ಷಿ ದಯಾನಂದ ಸರಸ್ವತಿಯವರ ವೈಚಾರಿಕ ಪ್ರಖರತೆಯ ಮೂಲ ವಿರಜಾನಂದ ಸರಸ್ವತಿಯವರೇ ಆಗಿದ್ದರು ಎಂಬುದರಲ್ಲಿ ಎರಡು ಮಾತಿರಲಾರದು. 1868ರಲ್ಲಿ 90 ವರ್ಷದವರಿದ್ದಾಗ ವಿರಜಾನಂದರ ದೇಹಾಂತ್ಯವಾಯಿತು. ಕಣ್ಣುಗಳಿದ್ದೂ ಕುರುಡರಾಗಿರವವರೇ ಹೆಚ್ಚಾಗಿರುವಾಗ, ಹುಟ್ಟು ಕುರುಡರಾಗಿದ್ದರೂ ಪ್ರಜ್ಞಾಚಕ್ಷುವಾಗಿದ್ದ, ಅಂತರಂಗದ ದೃಷ್ಟಿಯಿಂದ ಸಕಲವನ್ನೂ ಅರಿತಿದ್ದ ವಿರಜಾನಂದ ಸರಸ್ವತಿಯವರು ಸಾಧಕರಿಗೆ ಅನುಪಮ ಮಾರ್ಗದರ್ಶಿಯಾಗಿದ್ದಾರೆ. 

ತಿಮಿರಾಂಧಕಾರವನು ಓಡಿಸುವ ಗುರುವು

ಸಾಧನೆಯ ಮಾರ್ಗ ತೋರುವನೆ ಗುರುವು |

ಸಂದೇಹ ಪರಿಹರಿಸಿ ತಿಳಿವು ಪಸರಿಸುವ 

ಸದ್ಗುರುವೆ ದೇವರೂಪಿಯೋ ಮೂಢ ||

-ಕ.ವೆಂ.ನಾಗರಾಜ್.

Comments

Submitted by nageshamysore Tue, 06/30/2015 - 05:36

ಕವಿಗಳೆ ನಮಸ್ಕಾರ, ಜನ್ಮಜಾತ ಅಂಧತೆಯ ನಡುವೆಯೂ ಅಂತಃಚಕ್ಷುವಿನ ಮುಖೇನ ಜ್ಞಾನಶ್ರೇಷ್ಠತೆಯ ಪರಮ ಪೀಠವನ್ನೇರಿದ ವಿರಜಾನಂದರ ಪರಿಚಯ ಮಾಡಿಕೊಟ್ಟ ಸುಂದರ ಲೇಖನ. ಬರಿಯ ದಯಾನಂದ ಸರಸ್ವತಿಯವರ ಕುರಿತು ಓದಿದ್ದರೂ, ಆ ಶಿಲ್ಪವನ್ನು ಕೆತ್ತಿದ ಶಿಲ್ಪಿಯ ಕುರಿತು ಗೊತ್ತಿರಲಿಲ್ಲ - ಧನ್ಯವಾದಗಳು.