ಪೋಷಕರಿಗೆ ಕೆಲವು ಸಲಹೆಗಳು

ಪೋಷಕರಿಗೆ ಕೆಲವು ಸಲಹೆಗಳು

ಬಾಲ್ಯದಲ್ಲಿ ಕಲಿತದ್ದೇ ಬದುಕಿನಲ್ಲಿ ಉಳಿಯುವುದರಿಂದ ಪೋಷಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರಗಳನ್ನು ಕಲಿಸಬೇಕು. "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ" ಎಂಬ ಮಾತನ್ನು ಕೇಳಿದ್ದೀರಲ್ಲವೇ...? ಹಾಗೆ ನಾವು ಬಾಲ್ಯದಲ್ಲಿ ಒಳ್ಳೆಯ ಸಂಸ್ಕಾರಗಳನ್ನು ಕಲಿಸದಿದ್ದರೆ ಬೆಳೆದು ದೊಡ್ಡವರಾದ ಮೇಲೆ ಅವರ ಭವಿಷ್ಯಕ್ಕೇ ನಾವೇ ಕುತ್ತು ತಂದಿಟ್ಟಂತೆ ಆಗುತ್ತದೆ.ಹಾಗಾಗಿ ಕೆಲವು ಅಂಶಗಳನ್ನು ಅವರಿಗೆ ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿಸಬೇಕು. ಉದಾಹರಣೆಗೆ.....

1) ಮಕ್ಕಳು ರಸ್ತೆ ದಾಟುವಾಗ ನಿಗದಿತ ಸ್ಥಳದಲ್ಲೇ ದಾಟುವಂತೆ ಅಭ್ಯಾಸ ಮಾಡಿಸಿ. ಸಂಚಾರ ನಿಯಮಗಳ ಬಗ್ಗೆ ತಿಳಿಸಿ, ಅದನ್ನು ಪಾಲಿಸುವಂತೆ ಆದೇಶಿಸಿ. ಇದರಿಂದ ಅವರಲ್ಲಿ ರಸ್ತೆ ಶಿಸ್ತು ಬೆಳೆದು, ಅಪಘಾತಗಳೂ ಸಹ ಕಡಿಮೆಯಾಗುತ್ತದೆ.

2 ) ಮಕ್ಕಳು ಒಳ್ಳೆಯ ಕೆಲಸ ಮಾಡಿದಾಗ ಅವರಿಗೆ ಬಹುಮಾನವಾಗಿ ಪುಸ್ತಕಗಳನ್ನು ಕೊಡಿ, ಇದರಿಂದ ಅವರಲ್ಲಿ ಓದುವ ಹವ್ಯಾಸ ರೂಢಿಯಾಗಿ ಪುಸ್ತಕ ಪ್ರೀತಿಯೂ ಬೆಳೆಯುತ್ತದೆ.

3 ) ಮಕ್ಕಳ ಮಾತಿಗೆ ದೊಡ್ಡವರ ಹತ್ತಿರ ಜಗಳ ಮಾಡುವುದು ಸರಿಯಲ್ಲ, ಇದರಿಂದ ವೃಥಾ ಮನಸ್ತಾಪ ಉಂಟಾಗಿ ಮಕ್ಕಳಿಗೂ ಕೆಟ್ಟ ಉದಾಹರಣೆ ಕೊಟ್ಟಂತಾಗುತ್ತದೆ.

4 ) ಅಂಗಡಿಗೆ ಹೋದಾಗ ಮಕ್ಕಳು ನೋಡಿದ ಆಟಿಕೆ ಬೇಕೆಂದು ಹಠ ಮಾಡುವುದು ಸಹಜ, ಕೇಳಿದ ಕೂಡಲೇ ಕೊಡಿಸುವುದರ ಬದಲು ಒಂದು ಪುಸ್ತಕ ಓದಿದರೆ, ಅಥವಾ ಪರೀಕ್ಷೆಯಲ್ಲಿ ಹೆಚ್ಚು ಅಂಕ ಬಂದರೆ ಕೊಡಿಸುವುದಾಗಿ ಹೇಳಿ, ಅದನ್ನು ಮಾಡಿದಾಗ ತಪ್ಪದೇ ಕೊಡಿಸಿ.

5 ) ದೊಡ್ಡವರೊಟ್ಟಿಗೆ ಮಾತಾಡುವಾಗ ವಿನಯ ವಿಧೇಯತೆಗಳಿಂದ ಮಾತನಾಡುವುದನ್ನು ಅಭ್ಯಾಸ ಮಾಡಿಸಿ.

6 ) ಕಿರಿಯರು ಏನಾದರೂ ಹೇಳಿದಾಗ ನಿನಗೇನು ಗೊತ್ತು ಸುಮ್ಮನಿರು ಎಂದು ಗದರಿ ಅವರ ಬಾಯಿ ಮುಚ್ಚಿಸುವ ಬದಲು ಶಾಂತಚಿತ್ತರಾಗಿ ಅವರ ಮಾತುಗಳನ್ನು ಆಲಿಸಿ, ಅವರಿಗೆ ತಿಳಿಯದ ವಿಷಯದ ಬಗ್ಗೆ ಅವರಿಗೆ ಅರ್ಥ ಮಾಡಿಸಿ, ಅಥವಾ ಮಕ್ಕಳಿಂದ ನಾವು ಎಷ್ಟೋ ಕಲಿಯಬಹುದು.

7 ) ಕುಟುಂಬದ ಪರಿಚಿತರನ್ನು ಕುರಿತು ಮಕ್ಕಳೊಂದಿಗೆ ಮಾತನಾಡುವಾಗ ಅವರ ಒಳ್ಳೆಯ ಗುಣಗಳನ್ನು ಕುರಿತು ಹೆಚ್ಚು ಹೇಳಬೇಕೇ ಹೊರತು ಕೆಟ್ಟಗುಣಗಳ ಬಗ್ಗೆ ಅಲ್ಲ. ಇದರಿಂದ ಮಕ್ಕಳು ಅವರನ್ನು ಕಂಡಾಗ ಅವರ ಬಗ್ಗೆ ಕೆಟ್ಟ ಭಾವನೆಗಳಿಲ್ಲದೆ ಚೆನ್ನಾಗಿ ವರ್ತಿಸುತ್ತಾರೆ.

8 ) ಶಾಲೆಯಿಂದ ಮಕ್ಕಳು ಬಂದೊಡನೆ ಈ ದಿನ ಶಾಲೆಯಲ್ಲಿ ಏನೇನು ಮಾಡಿದೆ, ನಿನ್ನ ಗೆಳೆಯರು ಏನು ಹೇಳಿದರು, ಇತ್ಯಾದಿಗಳನ್ನೆಲ್ಲ ಮಾತಾಡಿಸಿ, ಬೆಳಗ್ಗೆಯಿಂದ ಅಪ್ಪ, ಅಮ್ಮನನ್ನು ಬಿಟ್ಟಿದ್ದ ಅವರಿಗೆ ತುಂಬಾ ಸಂತೋಷವಾಗುತ್ತದೆ.

9 ) ಕಾರಿನಲ್ಲಿ ಕೂರುವಾಗ ಮತ್ತು ಇಳಿಯುವಾಗ ಅದರ ಬಾಗಿಲನ್ನು ಟಪಾರೆಂದು ಹಾಕಿ ಕರ್ಕಶವಾಗಿ ಶಬ್ದ ಮಾಡುತ್ತಾರೆ, ಅದರ ಬಗ್ಗೆ ಮನವರಿಕೆ ಮಾಡಿಸಿ, ಬಾಗಿಲು ಹಿಡಿದು ಹತ್ತಿರಕ್ಕೆ ಬಂದು ಧೃಡವಾಗಿ ಮುಚ್ಚಿದರೆ ಸಾಕೆಂದು ತಿಳಿಸಿ.

10 ) ಮುಖ್ಯವಾಗಿ ಮಕ್ಕಳಿಗೆ ತಟ್ಟೆಯಲ್ಲಿ ಊಟ ಹಾಕಿ ಕೊಟ್ಟರೆ ಸರಿಯಾಗಿ ತಿನ್ನದೆ ತಿನ್ನುವ ಪದಾರ್ಥಗಳನ್ನು ಹಾಳು ಮಾಡುತ್ತಾರೆ, ಪೋಷಕರಾದ ನಾವು ಅನ್ನದ ಪ್ರಾಮುಖ್ಯತೆಯನ್ನು ಅವರಿಗೆ ತಿಳಿಸಿ, ತಿನ್ನುವ ಪದಾರ್ಥಗಳಿಗೆ ಬೆಲೆ ಕೊಡುವುದನ್ನು ಕಲಿಸಬೇಕು.

ಇನ್ನೂ ಎಷ್ಟೋ ಇವೆ. ಎಲ್ಲಾ ಸಾಧ್ಯವಾಗದಿದ್ದದರೂ ನಮಗೆ ಸಾಧ್ಯವಾದಷ್ಟು ಬಾಲ್ಯದಿಂದಲೇ ಕಲಿಸಿದರೆ ದೊಡ್ಡವರಾದ ಮೇಲೆ ಅವರು ಅವರ ಮಕ್ಕಳಿಗೆ ಕಲಿಸುತ್ತಾರೆ

Comments

Submitted by kavinagaraj Wed, 07/01/2015 - 14:50

ಮಾಡು, ಮಾಡಬೇಡಗಳ ಬಗ್ಗೆ ತಿಳುವಳಿಕೆ ಕೊಡುವುದರೊಂದಿಗೆ ಉತ್ತಮ ಸಂಸ್ಕಾರಕ್ಕೆ ಪೂರಕವಾದ ನಡವಳಿಕೆಗಳನ್ನು ಪೋಷಕರು ಸ್ವತಃ ಮೊದಲು ಅಳವಡಿಸಿಕೊಳ್ಳಬೇಕು. ಸರಳವಾದ ನಡೆ: ಕೆಟ್ಟದ್ದನ್ನು ನೋಡದಿರುವುದು, ಆಡದಿರುವುದು, ಕೇಳದಿರುವುದು!!