ಆಟೋ ಪ್ರಯಾಣ
ಆಟೋ ಪ್ರಯಾಣದ ಅನುಭವ
ಸಾಮಾನ್ಯವಾಗಿ ಆಟೋ ಪ್ರಯಾಣ ಅಂದ ಕೂಡಲೇ ನಮ್ಮ ಮನಸ್ಸಿಗೆ ಬರುವುದು, ಮೀಟರ್‍ನ್ನು ಸಿಕ್ಕಾಪಟ್ಟೇ ಏರಿಸಿ ನಮ್ಮನ್ನು ಏಮಾರಿಸುವುದೇ. ಇಲ್ಲವೇ, ಗಿರಾಕಿಗೆ ಸ್ಥಳದ ಪರಿಚಯವಿಲ್ಲವೆಂಬ ಸುಳಿವು ಸಿಕ್ಕುತ್ತಿದ್ದಂತೆಯೇ, ಐದೇ ಮಾರು ದೂರದಲ್ಲಿರುವ ಸ್ಥಳಕ್ಕೆ ಇಡೀ ಊರಿನ ದರ್ಶನ ಮಾಡಿಸಿ, ಹಣ ಪೀಕಿಸುವ ಆಟೋ ಚಾಲಕರು ನೆನಪಾಗುತ್ತಾರೆ. ಈ ಅನುಭವಗಳಂತೂ ಆಟೋ ಪ್ರಯಾಣ ಮಾಡಿದ ಜನಗಳಲ್ಲಿ ಒಂದಿಲ್ಲೊಂದು ಸಂದರ್ಭಗಳಲ್ಲಿ, ಖಂಡಿತಾ ಆಗಿರುತ್ತದೆ. ಎಲ್ಲ ಆಟೋ ಚಾಲಕರೂ ಹೀಗೆಯೇ ಎಂದು ಸಾಮಾನ್ಯೀಕರಿಸುವ ತಪ್ಪನ್ನು ನಾನು ಮಾಡಲಾರೆ. ಆದರೆ, ನನ್ನ ದುರದೃಷ್ಟ, ಹಣೆಬರಹದ ಲೆಕ್ಕಕ್ಕೆ ಇಂಥ ಅನುಭವಗಳೇ 80% ಆಗಿದೆಯೆಂದರೆ, ಏನು ಮಾಡೋಣ ! ‘ಅವಶ್ಯಮನುಭೋಕ್ತವ್ಯಂ, ಕೃತಂ ಕರ್ಮ ಶುಭಾಶುಭಂ’ ಅಂತ ಶ್ರೀ ಕೃಷ್ಣ ಗೀತೆಯಲ್ಲಿ ನುಡಿದಿದ್ದಾನಷ್ಟೇ. ಹಾಗೆಯೇ, ಮತ್ತೆ ಕೆಟ್ಟ ಅನುಭವವಾಗಲಾರದೆಂಬ ಆಶಾವಾದದಿಂದ, ನಾನು ಮತ್ತೆ ಮತ್ತೆ ಆಟೋ ಪ್ರಯಾಣ ಕೈಗೊಳ್ಳುತ್ತಲೇ ಇದ್ದೇನೆ. (ಆನ್ಯಥಾ ಬೇರೆ ದಾರಿ ಇಲ್ಲ ಬಿಡಿ !)
ಆಟೋ ಪ್ರಯಾಣದ ಅನುಭವಗಳನ್ನು ಇದಮಿತ್ಥಂ ಎಂದು ಮೂರ್ನಾಲ್ಕು ವಿಭಾಗಗಳಲ್ಲಿ ವಿಂಗಡಿಸಿ ಸಾಮಾನ್ಯೀಕರಿಸಲು ಆಗುವುದಿಲ್ಲ. ಚಾಲಕರ ಮಾನಸಿಕತೆಗೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ, ಹಾಗೆಯೇ ಪ್ರಯಾಣಿಕರ ದೃಷ್ಟಿಕೋನಕ್ಕೆ ತಕ್ಕಂತೆ ಅನುಭವಗಳು ಒಂದೊಂದೂ ಭಿನ್ನ, ವಿಭಿನ್ನವಾಗಿರುತ್ತವೆ. “ಲೋಕೋಭಿನ್ನರುಚಿಃ” ಅನ್ನುವುದು ಅದಕ್ಕೇ ಇರಬೇಕು. ಹಾಗಾಗಿ, ಆಟೋ ಪ್ರಯಾಣದ ನನ್ನ ಕೆಲ ಅನುಭವಗಳನ್ನು ಇಲ್ಲಿ ಹಂಚಿಕೊಳ್ಳುವ ತವಕ ನನ್ನದು.
ಕೆಲವೊಮ್ಮೆ, ನಾನು ಆಟೋ ಹತ್ತುವ ಮುನ್ನ, ಇಡೀ ಆಟೋ ಪ್ರಯಾಣದಲ್ಲಿ ನಿದ್ರಾಸುಖವನ್ನು ಅನುಭವಿಸುವ ಯೋಜನೆಯನ್ನು ಹಾಕಿಕೊಂಡಿದ್ದಿದೆ. ಆದರೆ, ಅಂಥ ಸಂದರ್ಭದಲ್ಲೆಲ್ಲಾ ನನಗೆ ವಾಚಾಳಿ ಆಟೋ ಚಾಲಕರೇ ಸಿಕ್ಕಿದ್ದಾರೆ ! ಆಟೋ ಹತ್ತಿದಾಗ ಶುರುವಾಗುವ ಆತನ ಮಾತಿನ ಓಘ ನಿಲ್ಲುವುದು, ನನ್ನ ಗಮ್ಯಸ್ಥಾನ ಬಂದಾಗಲೇ ! ಆಟೋನ ಮೀಟರ್‍ನೊಂದಿಗೆ ಆತನ ಮಾತನ್ನು ಸಮೀಕರಿಸುವ ಹಾಗಿಲ್ಲ – ಏಕೆಂದರೆ, ಸಿಗ್ನಲ್‍ಗಳ ಬಳಿ ಮೀಟರ್ ಓಡುವುದು ನಿಂತಿರುತ್ತದೆ -- ಆದರೆ, ಆತನ ಮಾತಲ್ಲ ! ಮನಃಶಾಸ್ತ್ರಜ್ಞರ ಮಾತಿನ ಪ್ರಕಾರ ಹೇಳುವುದಾದಲ್ಲಿ, ಇದಕ್ಕೆ ಕಾರಣ, ಅಂಥ ಚಾಲಕರಿಗೆ ಮನೆಯಲ್ಲಿ ಬಾಯಿ ತೆರೆಯಲು ಅವಕಾಶ ಸಿಗದಿರುವುದೇ ಆಗಿರುತ್ತದೆ. ನಾನಿದನ್ನು ಸಾರಾಸಗಟಾಗಿ ಒಪ್ಪುವುದಿಲ್ಲ. ಏಕೆಂದರೆ, ಇದು ಅವನೊಬ್ಬನ ಕಥೆಯಲ್ಲವಲ್ಲಾ - ನಮ್ಮೆಲ್ಲರ ಕಥೆ ಅಷ್ಟೇ ತಾನೇ?! ವಿಶ್ವೇಶ್ವರ ಭಟ್ಟರ ವಕ್ರತುಂಡೋಕ್ತಿಯೊಂದರಲ್ಲಿ ಬಂದಂತೆ, “ಗಂಡಸಲು ಮನೆಯಲ್ಲಿ ಬಾಯ್ದೆರೆಯುವುದು ಎರಡೇ ಸಲ - ಒಂದು ಆಹಾರ ಸೇವನೆಗೆ, ಮತ್ತೊಂದು ಹಲ್ಲುಜ್ಜಲು” (ಅದೂ ಉಜ್ಜಿದರೆ !)
ಇಂಥ ವಾಚಾಳಿ ಚಾಲಕರಲ್ಲೂ ಎರಡು ವಿಧ. ಕೆಲವರು ತಮ್ಮ ಸ್ಥಿತಿ ಬಗ್ಗೆ ಮಾತಾಡಿದರೆ, ಮತ್ತೆ ಕೆಲವರು ದೇಶದ ಸ್ಥಿತಿಗತಿ ಬಗ್ಗೆ ಮಾತಾಡುತ್ತಾರೆ. ಕೆಲ ವಾಚಾಳಿಗಳು ನಿಮ್ಮಿಂದ ಬರುವ ಪ್ರತಿಕ್ರಿಯೆಯನ್ನು ಸ್ವೀಕರಿಸುವಷ್ಟು ಉದಾರ ಹೃದಯದವರಾಗಿರುತ್ತಾರೆ. ಆದರೆ, ಹೆಚ್ಚಿನಂಶ ಇಂಥವರಲ್ಲ. ಕೆಲವೊಮ್ಮೆ ಚಾಲಕರು ತಮ್ಮ ದಯನೀಯ ಸ್ಥಿತಿ / ಕಥೆಯನ್ನು ಮುಂದಿಡುತ್ತಿದ್ದರೆ, ಸೂಕ್ಷ್ಮಮತಿಯವರು ಕಣ್ಣೀರ್ಗರೆದು, ಮೀಟರಿನ ಎರಡು ಪಟ್ಟು ತಾವಾಗೇ ತೆರುವುದೂ ಉಂಟು !
ಟಿ.ವಿ.ಯಲ್ಲಿ ಬರುವ ಅಸಂಖ್ಯಾತ ಗೋಳಿನ ಮೆಗಾ ಧಾರಾವಾಹಿಗಳಿಗೆಲ್ಲ ಸ್ಪೂರ್ತಿ, ಇಂಥ ಆಟೋ ಪ್ರಯಾಣದ ಅನುಭವವೇ ಎಂಬುದು ನನ್ನ ಬಿಡಿಸಲಾರದ ಪ್ರಶ್ನೆ. ಮತ್ತೆ ಕೆಲವರು, ತಾವೇನಾಗಬೇಕಿತ್ತೆಂದು ಕನಸು ಕಟ್ಟಿರುತ್ತಾರೋ, ಅಂಥ ಜೀವನವನ್ನು ತಮ್ಮ ಅನುಭವವೆಂಬಂತೆ ಬಿಂಬಿಸುತ್ತಾ ತಮ್ಮನ್ನು ತಾವೇ ಹೊಗಳಿಕೊಳ್ಳುತ್ತಾರೆ. ಇವೆಲ್ಲವನ್ನೂ ನೀವು ಗತ್ಯಂತರವಿಲ್ಲದೇ ಕೇಳಬೇಕು. ಸಿಟ್ಟು ಬಂತೆಂದು ಚಲಿಸುತ್ತಿರುವ ಆಟೋದಿಂದ ಧುಮುಕಿದರೆ, ಹೋಗುವುದು ನಮ್ಮ ಪ್ರಾಣವಷ್ಟೇ ! ನೆಗಡಿಯೆಂದು ಮೂಗು ಕೊಯ್ದುಕೊಳ್ಳಲಾದೀತೇ ?! ಇನ್ನು ಕೆಲವರ ಮಾತು, ದೇಶದ ಈಗಿನ ದುಸ್ಥಿತಿ ಹಾಗೂ ಅವಕ್ಕೆ ಪರಿಹಾರೋಪಾಯಗಳೇನು ಎಂಬುದನ್ನು ತೆರೆದಿಡುತ್ತ್ತವೆ. ಅವರ ಮಾತಿನಲ್ಲಿ ಈಗಿನ ಪ್ರಧಾನಿ ಮೋದಿ ತನ್ನ ಮುಂದೇನೂ ಅಲ್ಲ, ತಾನು ಎಲ್ಲ ಭಾರತೀಯರಿಗಿಂತ ಆಲೋಚನೆಗಳಲ್ಲಿ ಮೇಲು ಎನ್ನುವ ಸಾರ್ಥಕ ಭಾವ ಇಣುಕುತ್ತಿರುತ್ತದೆ. ಅದನ್ನು ನೀವು ನಿರ್ಲಕ್ಷಿಸಿದಲ್ಲಿ, ಮುಂದಿನ ನಾಲ್ಕೈದು ರಸ್ತೆ ಉಬ್ಬು - ಹೊಂಡಗಳಲ್ಲಿ ರಿಕ್ಷಾವನ್ನು ಜೋರಾಗಿ ಓಡಿಸಿ, ನಿಮ್ಮ ಬೆನ್ನೆಲುಬು ನೂರಿಪ್ಪತ್ತೇಳು ಚೂರುಗಳಾಗುವುದು ಖಂಡಿತ. ನಾನಂತೂ ಇಂಥ ತಪ್ಪನ್ನು ಕನಸಿನಲ್ಲಿಯೂ ಮಾಡುವುದಿಲ್ಲ. ಅನುಭವ ಸ್ವಾಮಿ !
ಕೆಲ ಆಟೋ ಚಾಲಕರಿಗೆ, ಜೋರು ಧ್ವನಿಯಲ್ಲಿ ಕ್ಯಾಸೆಟ್ಟಿನದೋ / ಎಫ್.ಎಂ. ರೇಡಿಯೋದೋ ಹಾಡು / ಕಾರ್ಯಕ್ರಮ ಬರದಿದ್ದಲ್ಲಿ, ಆಟೋ ಓಡಿಸಲೇ ಆಗುವುದಿಲ್ಲವೆಂದೆನಿಸುತ್ತದೆ. ಗಣೇಶೋತ್ಸವಗಳಲ್ಲಿ ಇಡೀ ಕೇರಿ ಕೇಳಿ “ಸಂಭ್ರಮಿಸಲಿ” ಎಂದು ಕರ್ಕಶವಾಗಿ ಹಾಡುಗಳನ್ನು ಹಾಕಿರುತ್ತಾರಲ್ಲಾ, ಆ ಕರ್ಕಶತೆಗೆ ಸರಿಸುಮಾರು ಹತ್ತಿರಕ್ಕೆ ಬರುವಷ್ಟಿರುತ್ತದೆ, ಈ ಆಟೋ ಚಾಲಕರ ‘ಗಾಯನ’! ಹಾಡು ಬೇಡವೆಂದು ನೀವು ವಿನಂತಿಸಿದಲ್ಲಿ ಕೆಲವರು ಕೇಳಿಯಾರು. ಮತ್ತೆ ಕೆಲವರಿಂದ ಮಾತಿನ ಕೂರಂಬು ಸಿದ್ಧವಿರುತ್ತದೆ – ‘ಅಷ್ಟಿದ್ದರೆ, ಟ್ಯಾಕ್ಸಿ ಮಾಡ್ಕೊಂಡು ಹೋಗ್ಬೇಕಿತ್ತು’ ಅಂತ ! “ಭಾರದ ಕಿಸೆ”ಯ ಅನುಭವವೇ ನನಗೆ ಈವರೆಗೆ ಇಲ್ಲವಾದ್ದರಿಂದ ನನಗೆ ಆಟೋ ಪ್ರಯಾಣವೇ ಖಾತ್ರಿ ! ಹಾಡಿನ ಕರ್ಕಶತೆಗಿಂತ ನನಗೆ, ಈ ಹಾಡಿನ ಗುಂಗಿನಲ್ಲಿ ಮುಳುಗಿ ಚಾಲಕ ನನ್ನನ್ನೂ ಎಲ್ಲಿ “ಮುಳುಗಿಸುತ್ತಾನೋ” ಎಂಬ ಭಯ. ಅವನ ವೇಗದ ಚಾಲನೆ ಸಿನಿಮಾಗಳಲ್ಲಿ ಅಷ್ಟೇ ರಂಜಕ, ನಿಜ ಜೀವನದಲ್ಲಿ ಭಯಾನಕ ! ಇಂಥ ವೇಗದ ಪ್ರಯಾಣಗಳಲ್ಲಿ ಅಪಘಾತ ಕೂದಲೆಳೆÉಯಲ್ಲಿ ತಪ್ಪಿದ್ದು ಬಹಳ ಹಾಡಿನ ‘ಆವೇಗ’ಕ್ಕೆ ತಕ್ಕಂತೆ ಚಾಲಕನ ‘ಈ ವೇಗ’ ಇದ್ದಲ್ಲಿ ಪ್ರಯಾಣಿಕರ ಮೊರೆ ಆಲಿಸುವವರಾರು?
ಆಟೋ ಚಾಲಕರ ಇಂಥ ಅಪಾಯಕಾರಿ ಚಾಲನೆ ಬಗ್ಗೆ ಜೋಕೊಂದಿದೆ –
ಸಮಾರಂಭವೊಂದರಲ್ಲಿ, ವಿವೇಕಾನಂದರ ಬಗ್ಗೆ ಭಾಷಣಕಾರ ಮಾತಾಡುತ್ತಿದ್ದ, ಗುಂಡ ಹಾಗೇ ನಿದ್ದೆ ಹೋಗಿದ್ದವನು, ಅದೇಕೋ ಎಚ್ಚರವಾಯ್ತು. ಭಾಷಣಕಾರ ಹೇಳುತ್ತಿದ್ದುದು, ಅವನಿಗೆ ಕೇಳಿಸತೊಡಗಿತು. ಅವನಿಗೆ ಕೇಳಿಸಿದ್ದಿಷ್ಟೇ – “ . . . . ಅವರು, ಯಾರಿಗೂ ಹೆದರದೇ ತಮ್ಮ ದಾರಿಯಲ್ಲಿ ಮುನ್ನುಗ್ಗುವ ಸ್ವಭಾವದವರು. ಯಾವ ದಾಕ್ಷಿಣ್ಯಕ್ಕೂ ಬಗ್ಗದೇ, ಮುಂದಿನ ಪರಿಣಾಮಗಳಿಗೆ ಹೆದರದೇ, ಬೆದರದೇ, ತಮ್ಮದೇ ದಾರಿಯಲ್ಲಿ ಸಾಗುವವರು ಇವರು. ಅಕ್ಕ ಪಕ್ಕ ಗಮನವೀಯದೇ ಕೇವಲ ತಮ್ಮ ಗಮ್ಯಸ್ಥಾನದ ಬಗ್ಗೆಯಷ್ಟೇ ಇವರ ಯೋಚನೆ”. ಅಷ್ಟಾದ ಮೇಲೆ ಅವರು ಸಭಿಕರಿಗೆ ಪ್ರಶ್ನೆ ಎಸೆದರು – “ಇವರಾರೆಂದು ಹೇಳಬಲ್ಲಿರಾ?” ಗುಂಡ, ಥಟ್ಟನೆ ಉತ್ತರಿಸಿದ – “ಆಟೋ ಚಾಲಕ !” ಎಂದು !
ಆಟೋ ಚಾಲಕರ ಮೇಲಿನ ಮತ್ತೊಂದು ಸಾಮಾನ್ಯ ಆರೋಪವೆಂದರೆ, ಅವರು, ನಾವು ಕರೆದಲ್ಲಿಗೆ ಬರವೊಲ್ಲರೆಂಬುದು. ನನ್ನ ಅನುಭವವೂ ಇದಕ್ಕೆ ಭಿನ್ನವಿಲ್ಲ. ಎಷ್ಟೋ ಚಾಲಕರು ಪೇಪರನ್ನೋದುತ್ತಾ ಸುಮ್ಮನಿರುತ್ತಾರೆಯೇ, ಶಿವಾಯಿ, ನೀವು ಕರೆದಲ್ಲಿಗೆ ಬರುವುದಿಲ್ಲ. ಅವರಿಗೆ ‘ಅನುಕೂಲಕರ’ವಾದ ಕಡೆ ಹೋಗಲು ಕೇಳಿದಿರೋ, ಅವರು ಬರುತ್ತಾರೆ, ಇಲ್ಲವಾದಲ್ಲಿ ನಿಮ್ಮಲ್ಲಿಗೆ ಒಂದು ದಿವ್ಯ ನಿರ್ಲಕ್ಷ್ಯದ ಭಾವ ಬರುವುದು ಖಚಿತ. ವ್ಯಾಪಾರ ಜಾಸ್ತಿಯಾದಲ್ಲಿ ಲಾಭ ಜಾಸ್ತಿ ಎಂದು ಕೊಂಡಿರುವ ನಮ್ಮ ನಿಮ್ಮ ಅರ್ಥಶಾಸ್ತ್ರವೇ ಬೇರೆ, ಅವರ ಅರ್ಥಶಾಸ್ತ್ರವೇ ಬೇರೆ. ನನ್ನ ಆಟೋ, ನನ್ನಿಷ್ಟ ಎಂದು ಅವರಂದಲ್ಲಿ ಹುಲುಮಾನವರಾದ ನಾವು ತಾನೇ ಏನು ಮಾಡಲಾದೀತು? ಇದು ಪ್ರಜಾಪ್ರಭುತ್ವ ಸ್ವಾಮೀ !
ನನ್ನ ಕಛೇರಿಯ ಇನ್ಸ್‍ಪೆಕ್ಷನ್ ನಡಿತಾ ಇದೆ, ಬೇಗ ತಲುಪಬೇಕು ಎಂತ ಹೊರಟಿರೋ ದಿವಸ, ನನಗೆ ಯಾವಾಗಲೂ ಡೆಡ್ ಸ್ಲೋ ಆಗಿ ಚಾಲನೆ ಮಾಡೋ ಚಾಲಕನ ಆಟೋನೇ ಸಿಗತ್ತೆ. ಇದು ಪೂರ್ವಜನ್ಮಕೃತ ಪಾಪದ ಸಂಕೇತವೋ ಏನೋ ತಿಳೀದು. ಬಸ್ ಸ್ಟಾಂಡಿನಲ್ಲಿ ಮೈಸೂರಿಗೆ ಹೊರಟಾಗ, ಮೈಸೂರಿನ ಒಂದು ಬಸ್ಸೂ ಸಿಗದೇ, ಹಾಸನದ ಕಡೆ ಹತ್ತಿಪ್ಪತ್ತು ಬಸ್ಸು ಹೋಗುವುದನ್ನು ನೋಡುತ್ತೇವೆ. ಅದೇ ಹಾಸನಕ್ಕೆ ಪಯಣಿಸಬೇಕಾದಾಗ ಬಸ್ಸು ಸಿಗದೇ ಮೈಸೂರಿಗೆ ಒಂದರ ಹಿಂದೊಂದರಂತೆ ಖಾಲಿ ಬಸ್ಸುಗಳು ಹೋಗುವುದನ್ನು ನೋಡಿ ಕೈಕೈ ಹಿಸುಕಿಕೊಳ್ಳುತ್ತೇವಲ್ಲಾ, ಹಾಗೇ ಇದೂನೂ. ಆ ತರಹ ಅನ್ನಿಸುವುದು ನಿಜವಲ್ಲ - ಭ್ರಮೆ ಅಷ್ಟೇ ಅಂತಹ ಮನಃಶಾಸ್ತ್ರಜ್ಞರು ಹೇಳುತ್ತಾರೆ. ಆದರೆ, ನನಗಂತೂ ಹಾಗನ್ನಿಸೋಲ್ಲ. ಏಕೆಂದರೆ, ಈ ವಿಚಾರ ಮನಃಶಾಸ್ತ್ರಜ್ಞರಿಗೆ ಗೊತ್ತು. ಆ ಬಸ್ಸುಗಳಿಗೆ ಗೊತ್ತೇ ?!
ಆಟೋ ಚಾಲಕ ಅತ್ಯಂತ ನಿಧಾನವಾಗಿ ಓಡಿಸುವಾಗ, ನನಗೆಷ್ಟೋ ಸಲ ಅನ್ನಿಸಿದ್ದಿದೆ - ನಡೆದು ಹೋಗಿದ್ದರೆ, ಇದಕ್ಕಿಂತ ಬೇಗ ತಲುಪುತ್ತಿದ್ದೆನೋ ಏನೋ, ಅಂತ. ವೇಗದ ಮಿತಿ 20 ಕಿ.ಮೀ., 10 ಕಿ.ಮೀ. ಅಂತೆಲ್ಲಾ ಬೋರ್ಡ್ ಹಾಕಿರುತ್ತಾರಲ್ಲಾ, ಅವೆಲ್ಲ ಸೂಚನೆಗಳನ್ನೂ ಪಾಂಕ್ತವಾಗಿ ಪಾಲಿಸುತ್ತಾ ಹೋಗುವ ಚಾಲಕನಿಗೆ, ನಿಮ್ಮ ತುರ್ತಿನ ಬಗ್ಗೇನಾದರೂ ಹೇಳಿದಿರೋ ಮುಗೀತು, ಚಾಲಕನಿಂದ ‘ಜೀವನ್ ಭದ್ರಾಣಿ ಪಶ್ಯತಿ’ ಉಕ್ತಿಗನುಗುಣವಾಗಿ ಜೀವದ ಸುರಕ್ಷತೆಯ ಬಗ್ಗೆ ಒಂದು ‘ಪುಟ್ಟ’ ಭಾಷಣ ಆಯಾಚಿತವಾಗಿ ಉಚಿತವಾಗಿ ಸಿಗುತ್ತದೆ. ಅದೂ ಆಟೋ ನಿಲ್ಲಿಸಿ ಹೇಳಿದರಂತೂ, ನೀವು ಕಛೇರಿ ತಲುಪಿದಂತೆಯೇ !
ಕೆಲವರು ಇದರ ಇನ್ನೊಂದು ಧ್ರುವ. ಅವರ ವೇಗದ ಚಾಲನೆ ನೋಡಿ ನಮಗೆ, ನಮ್ಮ ಹೃದಯ ಬಾಯಿಗೆ ಬಂದಿರುವುದು ನಿಶ್ಚಿತ. ಅವರ ವೇಗಕ್ಕೆ ಹೆದರಿ ಉಳಿದವರು ದಾರಿ ಬಿಡಬೇಕೆಂಬುದೇ ಇವರ ಆಂತರ್ಯ. ಕೂದಲೆಳೆಯಲ್ಲಿ ಅಪಘಾತ ತಪ್ಪಿದರೂ, ತಮ್ಮ ವೇಗವನ್ನು ಇವರು ತಗ್ಗಿಸುವವರಲ್ಲ. ಇವೆಲ್ಲ ಸಾಮಾನ್ಯ ಎಂದು ಪರಿಭಾವಿಸುವ ಸ್ಥಿತ ಪ್ರಜ್ಞರು ಇವರು. ಆದರೆ, ನಮ್ಮ ಗತಿ? ಒಂದೇ ಪ್ರಯಾಣದಲ್ಲಿ ಹಲವಾರು ಬಾರಿ ಯಮಲೋಕ ದರ್ಶನದ ಭಾಗ್ಯ ಪ್ರಾಪ್ತಿಯಾದಂತೆ ! ಮೀಸೆ ತೂರಲು ಜಾಗ ಸಿಕ್ಕರೆ ಸಾಕು, ಇಡೀ ಜಿರಲೆ ತೂರಿಬಿಡುತ್ತದೆ. ಅನ್ನೋ ಮಾತಿದೆಯಲ್ಲಾ, ಅಂತೆಯೇ ಈ ಆಟೋ ಚಾಲಕರೂ ಅಷ್ಟೇ. ಅವರಿಗೆ ತಮ್ಮ ರಿಕ್ಷಾದ ಕಿರಿದಾದ ಮುಂಭಾಗ ತೂರಲು ಜಾಗ ಸಿಕ್ಕರೆ ಸಾಕು, ಹೋಗಿ ಬಿಡುತ್ತಾರೆ, ಹಿಂಭಾಗ ಹೇಗಾದರೂ ಬಂದೇ ಬರುತ್ತದೆ ಅನ್ನುವ ಖಚಿತವಾದ ನಂಬಿಕೆಯಿಂದ ! ಚಾಲಕರ ಆ ವೇಗಕ್ಕೆ ಅವರ ಆವೇಗ ಕಾರಣವೇ? ಬೇಗ ಮನೆ ತಲುಪುವ ಧಾವಂತವೇ, ಗೊತ್ತಿಲ್ಲ. ಒಮ್ಮೆ, ಗುಂಡ ಬಹಳ ವೇಗದಲ್ಲಿ ಚಾಲನೆ ಮಾಡುತ್ತ ಪೋಲೀಸರಿಗೆ ಸಿಕ್ಕಿ ಬಿದ್ದ. ಅಷ್ಟು ವೇಗಕ್ಕೆ ಕಾರಣ ಕೇಳಿದ್ದಕ್ಕೆ, ಗುಂಡ ಏನಂದ ಗೊತ್ತೇ – “ಅಪಘಾತಕ್ಕೀಡಾಗದೇ ಬೇಗ ಮನೆ ತಲುಪಿಕೊಳ್ಳುವಾ” ಅಂತ ! ಹೀಗಾಯ್ತು ನಮ್ಮ ಪರಿಸ್ಥಿತಿ.
ಕೆಲ ಆಟೋ ಚಾಲಕರದ್ದು ಏಕಪಕ್ಷೀಯ ಪೂರ್ವ ನಿರ್ಧಾರಿತ ದರಪಟ್ಟಿ. ಅವರ ರಿಕ್ಷಾದಲ್ಲಿ ಪೂಜಾ ಕೈಂಕರ್ಯಗಳಿಗಾಗಷ್ಟೇ ಮೀಟರ್ ಇರುತ್ತದೆ. ಇಂಥವರೊಂದಿಗೆ ಬಾಯಿದ್ದವರಷ್ಟೇ ಏಗಲು ಸಾಧ್ಯ. ಅತ್ತ ಕಡೆಯಿಂದ ಪ್ರಯಾಣಿಕರು ಸಿಗೋಲ್ಲ ಮುಂತಾದ ಪುಂಖಾನುಪುಂಖವಾಗಿ ಕಾರಣಗಳನ್ನು ಮುಂದಿಟ್ಟು, ನಿಮ್ಮ ತುರ್ತಿಗನುಗುಣವಾಗಿ ದರವನ್ನು ಪಾವತಿಸಬೇಕಾಗುತ್ತದೆ. ಪ್ರಯಾಣದ ತುರ್ತು ಜಾಸ್ತಿ ಇರುವ ಹಬ್ಬ - ಹರಿದಿನಗಳಲ್ಲಿ ಸರ್ಕಾರವೇ ಪ್ರಯಾಣ ದರ ಏರಿಸುತ್ತದೆಯೆಂದರೆ, ಈ ಆಟೋ ಚಾಲಕರ ‘ತುರ್ತಿಗನುಗುಣವಾದ’ ದರಪಟ್ಟಿಯ ಬಗ್ಗೆ ಯಾರಿಗೆ ಹೇಳೋಣ? ‘ಹರ ಕೊಲ್ಲಲ್, ಪರ ಕಾಯ್ವನೇ . . .’ ಎಂದಂತಾಗುತ್ತದೆ ನಮ್ಮ ಪರಿಸ್ಥಿತಿ. ಇಂಥ ತುರ್ತಿಗೆ, ಮತ್ತೊಂದು ಸೇರ್ಪಡೆ, ಮಳೆಯ ಸಂದರ್ಭ. ಬೆಂಗಳೂರಿನಲ್ಲಂತೂ ಇತ್ತೀಚೆಗೆ ಯಾವಾಗ ಮಳೆ ಬಂದೀತೆಂಬುದನ್ನು ಊಹಿಸಲೂ ಸಾಧ್ಯವಿಲ್ಲ. ಅಚಾನಕ್ಕಾಗಿ ಮಳೆ ಬಂದಾಗ, ಸಹಜವಾಗಿ ಆಟೋದವರಿಗೆ ಸುಗ್ಗಿ, ಒಬ್ಬನಲ್ಲದಿದ್ದರೆ, ಮತ್ತೊಬ್ಬ ಜಾಸ್ತಿ ಕೊಡುವ ಮಿಕ ಸಿಕ್ಕೇ ಸಿಗುತ್ತದೆಂಬ ಖಾತ್ರಿ ಹಾಗೂ ಅವರ ಅನುಭವವೇ ಅವರನ್ನು ಹೀಗೆ ಆಡಿಸುತ್ತದೆ. ಮಳೆಯ ಸಂದರ್ಭ ಅವರಿಗೆ ಒಂದು ‘ಅವಕಾಶ’. ‘ಅವಕಾಶ’ಗಳನ್ನು ಬಾಚಿಕೊಂಡು, (ಕೆಲವೊಮ್ಮೆ ಸೃಷ್ಟಿಸಿಕೊಂಡು) ಲಾಭ ಮಾಡಿಕೋ ಎಂಬುದು ವ್ಯಾಪಾರದ ಮೂಲತತ್ವ. ನಾವು ಇದನ್ನು ಅನುಸರಿಸುವುದನ್ನು ತಪ್ಪು ಎಂದೆಣಿಸದಿದ್ದರೆ, ಆಟೋ ಚಾಲಕರ ಈ ಪ್ರವೃತ್ತಿಯಲ್ಲಿ ತಪ್ಪೇನಿದೆ? ಅದಕ್ಕೇ ಹೇಳಿರೋದು – ‘ವ್ಯಾಪಾರಂ ದ್ರೋಹ ಚಿಂತನಂ’ – ಅಂತ.
ಆಟೋ ಚಾಲಕರು ಕೆಲವೊಮ್ಮೆ ನೀವು ಹೇಳಿದ ಗಮ್ಯ ಸ್ಥಾನಕ್ಕೆ ಹೇಗೆ ಹೋಗಬೇಕೆಂದು ಅವರೇ ನಿರ್ಧರಿಸಿ ನಿಮ್ಮ ಒಂದೂ ಮಾತೂ ಕೇಳದೇ ನಿರ್ಲಿಪ್ತವಾಗಿ ಚಾಲನೆ ಮಾಡುತ್ತಿರುತ್ತಾರೆ. ಅವರ ದಿವ್ಯ ನಿರ್ಲಕ್ಷ್ಯ ಎಂಥವನ ಅಹಂಕಾರವನ್ನೂ ನೆಲಮಟ್ಟಕ್ಕಿಳಿಸಿಬಿಡುತ್ತದೆ. ಮತ್ತೆ ಕೆಲವರು ತಾವು ತುಳಿಯದ “ಆ ಹಾದಿ’ಯ ಬಗ್ಗೆ ವಿಚಿತ್ರ, ಸಚಿತ್ರ ಸಹಸ್ರಾರು ‘ಸಕಾರಣ’ಗಳನ್ನು ಹೇಳಿ ನಿಮ್ಮನ್ನು ಗೊಂದಲಕ್ಕೀಡು ಮಾಡುತ್ತಾರೆ. ತಾವು ಮಾತ್ರ ಗೊಂದಲಕ್ಕೀಡಾಗದೇ, ತಾವಂದು ಕೊಂಡಂತೇ ಗಮ್ಯಸ್ಥಾನ ತಲುಪುತ್ತಾರೆ. ಕೆಲವೊಮ್ಮೆ ದಾರಿ ಮಧ್ಯದಲ್ಲಿ, ಈ ರಸ್ತೆಯಲ್ಲಿ ಹೋಗಲಾ ಅಥವಾ ಆ ರಸ್ತೆಯಲ್ಲಿ ಹೋಗಲಾ ಎಂದು ಕೇಳಿ ನಿಮ್ಮ ‘ಪಥ ಪರೀಕ್ಷೆ’ಯನ್ನು ಮಾಡುತ್ತಾರೆ. ಪ್ರಯಾಣಿಕನಿಗೆ ಗೊತ್ತಿಲ್ಲ ಎಂಬ ಅರಿವಾದೊಡೆ, ಚಾಲಕನೇ ಆಟೋ ರಾಜ. ಇಂಥ ಸಂದರ್ಭಕ್ಕೀಡಾಗಿ ಎಷ್ಟೋ ಬಾರಿ ನೂರು - ನೂರೈವತ್ತರ ಆಸುಪಾಸಿನಲ್ಲಿ ದರ ಪೀಕಿದ್ದಿದೆ ನಾನು.
ಹೀಗೆಯೇ ಎಲ್ಲರದ್ದೂ ಹಲವಾರು ರೀತಿಯ ಆಟೋ ಪ್ರಯಾಣದ ಅನುಭವಗಳು. ಆಟೋ ಚಾಲಕರಲ್ಲೂ ಒಳ್ಳೆಯವರು, ಕೆಟ್ಟವರು - ನಮ್ಮಲ್ಲಿರುವಂತೆ – ಇರುತ್ತಾರೆ. ಅವರೂ ಮನುಷಯರೇ ತಾನೇ? ಕೆಲ ಅತಿ ಕೆಟ್ಟ ಚಾಲಕರ ವಿಷಯದ ಬಗ್ಗೂ ಪೇಪರಿನಲ್ಲಿ ಓದುತ್ತಿರುತ್ತೇವೆ. ಅವರು ಮನುಷ್ಯರಲ್ಲ ಬಿಡಿ ! ಅವರು, ತಮ್ಮ ರಿಕ್ಷಾ ಚಾಲನೆಯನ್ನು ಅತ್ಯಾಚಾರ ಮತ್ತಿತರ ಹೀನ ಕೃತ್ಯಗಳಿಗೆ ಬಳಸುತ್ತಾರೆ. ಅವರು ಟೀವಿಯ “ಕ್ರೈಂ ಡೈರಿ” ವಸ್ತುಗಳು ಅಷ್ಟೇ. ಇಂಥ ಕುಲಗೆಟ್ಟ ಚಾಲಕರ ಸಂಖ್ಯೆ ಬಹಳ ಕಡಿಮೆ ಎಂಬುದಷೆಟೀ ನನ್ನ ಆಶಾವಾದ.
ಆಟೋ ಚಾಲಕರೊಂದಿಗಿನ ಕೆಟ್ಟ ಅನುಭವಗಳನ್ನಷ್ಟೇ ಬರೆದು, ಅವರಲ್ಲೂ ಕೆಲವರ ಸ್ನೇಹಪರ, ಸಮಾಜ ಸೇವಾಮುಖೀ ಆಯಾಮದ ಪರಿಚಯ ಮಾಡದಿದ್ದಲ್ಲಿ, ನಾನು ತಪ್ಪಿತಸ್ಥನಾಗುತ್ತೇನೆ. ಸಾಕಷ್ಟು ಆಟೋ ಚಾಲಕರು ಪ್ರೀತಿ - ಸ್ನೇಹಗಳಿಂದ ನಮಗೆ – ಊರಿಗೆ ಹೊಸಬರಾದಲ್ಲಿ - ಸಲಹೆಗಳನ್ನು ಕೊಡುವುದೂ ಉಂಟು. ಮುಖ ಸಪ್ಪಗಿದ್ದಾಗ ನಮ್ಮ ದುಃಖ – ದುಮ್ಮಾನಗಳನ್ನು ಕೇಳಿ ಸಾಂತ್ವನಗೊಳಿಸುವುದೂ ಉಂಟು. ‘ಹೆರಿಗೆಗೆ ಉಚಿತ ಪ್ರಯಾಣ’ ಎಂದು ಹಿಂದೆ ಬೋರ್ಡನ್ನಷ್ಟೇ ಬರೆದುಕೊಳ್ಳದೇ ನಿಜ ಜೀವನದಲ್ಲೂ ಸಹಾಯ ಹಸ್ತ ಚಾಚುವುದುಂಟು.
ಆಟೋ ರಿಕ್ಷಾದ ‘ಹಿಂಬರಹ’ದ ಬಗ್ಗೆ ಹೇಳುವುದಾದರೆ, ಅದಕ್ಕಾಗಿಯೇ ಒಂದು ಲೇಖನ ತಯಾರು ಮಾಡುವಷ್ಟು ಸರಕಿದೆ ! ಕವಿ ಸೂಕ್ತಿಗಳು, ಪ್ರೇಮದ ಹಳವಂಡಗಳು, ತುಂಟ ನುಡಿಗಳು, ಪೋಲಿ ನುಡಿಗಳು, ಹೀಗೇ ಒಂದೇ ಎರಡೇ ಎಲ್ಲ ಭಿನ್ನ, ವಿಭಿನ್ನ.
ಒಟ್ಟಿನಲ್ಲಿ ಆಟೋ ಪ್ರಯಾಣದ ಸಾಕಷ್ಟು ಅನುಭವಗಳು ನಮ್ಮ ನಿಜ ಜೀವನದ ವಿಭಿನ್ನ ಅನುಭವಗಳಿಗಿಂತ ಬೇರಿಲ್ಲ. ನಮ್ಮ ಸಹಜ ಜೀವನದ ಒಳ - ಹೊರಹುಗಳನ್ನು ಈ ಅನುಭವಗಳು, ಸಮರ್ಥವಾಗಿ ಚಿತ್ರಿಸುತ್ತವೆ. ಹಾಗಾಗಿಯೇ ಜನರ ಏನೇ ಅನುಭವದ ಹೊರತಾಗಿಯೂ, ಆಟೋ ಪ್ರಯಾಣ ನಮ್ಮ ಸಮಾಜದ ಅವಿಭಾಜ್ಯ ಅಂಗ.
Comments
ಉ: ಆಟೋ ಪ್ರಯಾಣ
ಆಟೋ ಪ್ರವಾಸ ಕಥನ ಚೆನ್ನಾಗಿದೆ.
ಉ: ಆಟೋ ಪ್ರಯಾಣ
ಕವಿವರ್ಯರಲ್ಲಿ ನಮನಗಳು ಹಾಗೂ ಧನ್ಯವಾದಗಳು.
ಉ: ಆಟೋ ಪ್ರಯಾಣ
ಆಟೊಗಳ ಜೊತೆ ಪಯಣ ಚೆನ್ನಾಗಿದೆ,
In reply to ಉ: ಆಟೋ ಪ್ರಯಾಣ by naveengkn
ಉ: ಆಟೋ ಪ್ರಯಾಣ
ಧನ್ಯವಾದಗಳು ನವೀನ್.