ಕವನ : ಕಾಳಿ

ಕವನ : ಕಾಳಿ

 

ಸಕಲ ದಿಕ್ಕುಗಳೆಡೆಗೆ ಹೊಯ್ದು ತೂಗುವ ಕೇಶ,
ಬೈತಲೆಯ ಹಾಯ್ದು ಹಣೆಗಿಟ್ಟ ಸಿಂಧೂರ.
ಜ್ವಾಲೆಗಳ ಮುಚ್ಚಿಟ್ಟ ಕಾಡಿಗೆಯ ಹಚ್ಚಿಟ್ಟ
ಮುಕ್ಕಣ್ಣು. ಪದ್ಮಮುಖಿಗೆಂಥ ಸಿಂಗಾರ!
 
ಕತ್ತಲೆಯ ಗರ್ಭವನು ಸೀಳಿ ಕೆಂಬೆಳಕಾಗಿ
ಹೊಳೆವ ಮೂಗುತಿ, ಕರ್ಣಗಳಿಗೆ ಅವತಂಸ.
ನೀಳ ಕೈಗಳು, ಚಾಚಿದೂರಗಲ ನಾಲಗೆಗೆ
ರುಚಿಯಾಯ್ತು  ಸೊಕ್ಕ ರಕ್ಕಸರ ವಿದ್ವಂಸ.
 
ಹುಬ್ಬ ಗಂಟಿಕ್ಕಿ , ತುಟಿಗಳ ಹಲ್ಲಿನೊಳು ಕಡಿದು
ಮಾಲೆಯನಲಂಕರಿಸಿದವು ಅಸುರ ರುಂಡ
ಎಣಿಕೆಯಿಲ್ಲದ ಕಯ್ಯಿಗಳು ಹಿಡಿದು ಎತ್ತಿದವು
ಕರವಾಳ, ಗದೆ, ಬಿಲ್ಲು, ಶೂಲ, ಯಮ ದಂಡ
 
ಜಗ ನಿಯಮವೇ ಲಯವನಾಹತವೆ  ನಾದಸರ,
ಜಗವೆ ನರ್ತನಗೈವ ನೆತ್ತರಿನ ಪೀಠ.
ವಿಶ್ವ ಹಿಡಿಯೊಳು ಸಿಲುಕಿ ನಿಜಭಾವ ಮರೆತದ್ದು,
ಹಡೆದದ್ದು, ಕೊಂದಿದ್ದು ಎಲ್ಲನಿನ್ನಾಟ
 
ನೆತ್ತರಂಟಿದ ಬಾಯಿ, ಕೋರೆದಾಡೆಯ ಬಳಸಿ
ನುಚ್ಚು ನುಚ್ಚಾಗುತಿದೆ ನಿನ್ನವರ ದೇಹ
ಕಾಲಸಿಂಹನ ಕಳುಹಿ ಪಡೆದೆ ನೆತ್ತರ ಕೊಳವ
ಮೊಗೆಮೊಗೆದು ಕುಡಿದರೂ ನಿಲಲಿಲ್ಲ ದಾಹ.
 
ಖಠಖಠನೆ ಹಲ್ಲ ಕಡಿದಡಿಗಡಿಗೆ ತೂಗುತ್ತ
ಉನ್ಮತ್ತಳಾಗಿ ಸತ್ತನಿಬರನು ತಿಂದು,
ಗೊರಗೊರನೆ ತೇಗಿ ಮುಂಬರುವವರ ತುಳಿಯುತ್ತ
ಹುಡಿಮಾಡಿ ನಸುನಕ್ಕೆ ಶವದ ಬಳಿ ಬಂದು.
 
ಏನು ನೃತ್ಯವು ನಿನ್ನದೇನು ಸೊಬಗದು ನಿನ್ನ-
ದೇನು ನಗುವದು ನಿನ್ನದೇನಟ್ಟಹಾಸ!
ಕಂಡುನಿನ್ನಯ ನೃತ್ಯ ಕಂಡು ನಿನ್ನಯ ಸೊಬಗ
ಕಂಡು ನಿನ್ನಯ ನಗುವ ನಾನಾದೆ ದಾಸ.
 

 

Rating
No votes yet

Comments

Submitted by H A Patil 1 Sat, 07/11/2015 - 11:41

ವಿಶ್ವ ಪ್ರಿಯಂ ರವರಿಗೆ ವಂದನೆಗಳು
ಕಾಳಿಯ ಚಿತ್ರವನ್ನು ಅದ್ಬುತವಾಗಿ ಕಟ್ಟಿಕೊಡುವ ಮತ್ತು ಕಾವ್ಯಾತ್ಮಕವಾಗಿ ಬಿಂಬಿಸುವ ಅಕೆಯ ಚಿತ್ರಿಕೆಗಳು ಅದ್ಬುತವಾಗಿ ಮೂಡಿ ಬಂದಿವೆ,ಉತ್ತಮ ಕವನ ನೀಡಿದ್ದಿರಿ ಧನ್ಯವಾದಗಳು.

Submitted by kavinagaraj Mon, 07/20/2015 - 20:41

ಇಂದಿನ ರಕ್ಕಸರ ಮರ್ದನಕ್ಕೂ ಕಾಳಿಯರು ಜನ್ಮಿಸಬೇಕಿದೆ!!