ರಾಜಸ್ಥಾನವೆಂಬ ಸ್ವರ್ಗದ ತುಣುಕು - 9 ರಾಣಾ ಪ್ರತಾಪನ ನೆಲದಲ್ಲಿ ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು - 9 ರಾಣಾ ಪ್ರತಾಪನ ನೆಲದಲ್ಲಿ ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ರಾಜಸ್ಥಾನವೆಂಬ ಸ್ವರ್ಗದ ತುಣುಕು - 9 ರಾಣಾ ಪ್ರತಾಪನ ನೆಲದಲ್ಲಿ

     ರಾಣಕ್‍ಪುರದಿಂದ ಅರಾವಳಿ ಬೆಟ್ಟ ಕಾಡುಗಳ ಮಡಿಕೆಗಳಲ್ಲಿ, ಪದರುಗಳಲಿ, ತಿರುವುಗಳಲ್ಲಿ ತಂಪನೆಯ ಹವೆಯನ್ನು ಮೊದಲ ಬಾರಿ ಅನುಭವಿಸಿದೆವು. ಕಾರಿನ ಏಸಿ ಬಂದ್ ಮಾಡಿ, ಗ್ಲಾಸುಗಳನ್ನು ಓಪನ್ ಮಾಡಿ ಆ ತಂಪನ್ನು ಮೈಮನಗಳಿಗೆಲ್ಲಾ ಮೆತ್ತಿಕೊಂಡೆವು, ನೆಂದುಕೊಂಡೆವು. ಕಾಡಿನ ಕಣಿವೆಗಳಲ್ಲಿ ಸುಳಿವ ಆ ತಂಪನೆಯ ಆಹ್ಲಾದಕರ ಗಾಳಿಯನ್ನು ಮೊದಲ ಬಾರಿ ರಾಜಸ್ಥಾನದಲ್ಲಿ ಮನದುಂಬಿ ಅನುಭವಿಸಿದೆವು.

     ಹೀಗೆ ಬೆಟ್ಟಗಳನ್ನು ಏರಿಳಿಯುತ್ತ ಸಾಗುತ್ತಿದ್ದಾಗ ತಿರುವಿನಲ್ಲಿ ಸಣ್ಣ ಹೊಲವೊಂದರಲ್ಲಿ ರೈತನೊಬ್ಬ ತನ್ನ ಮಟ್ಟಿಬಾವಿ (ಚರ್ಮದ ಮಟ್ಟಿಯನ್ನು ಅಳವಡಿಸಿದ ತೆರೆದ ಬಾವಿ) ಯಿಂದ ತನ್ನ ಎಮ್ಮೆಗಳನ್ನು ನೊಗಕ್ಕೆ ಹೂಡಿ, ಮಟ್ಟಿಯೊಂದರಿಂದ ನೀರನ್ನು ಹೊರತೆಗೆಯುತ್ತ ಹೊಲಕ್ಕೆ ಉಣಿಸುವ ನೋಟ ಮನಸೆಳೆಯಿತು, 'ಎಲಾ ಇವನ! ಇಲ್ಲಿ ಇದು ಇನ್ನೂ ಜೀವಂತ ಇದೆಯೇ?' ಎಂದು, ನಿಬ್ಬೆರಗಾದೆ. ನಾವು ಸಣ್ಣವರಿದ್ದಾಗ ಹೊಳೆದಂಡೆಗೆ ತಾಗಿದ ಅಥವಾ ಸಮೀಪದ ಹೊಲಗಳಲ್ಲಿ, ನೀರಿರುವ ತಾಣಗಳಲ್ಲಿ, ವಿದ್ಯುತ್ ಮೋಟಾರುಗಳು ಇನ್ನೂ ಬಂದಿರದ ಕಾಲದಲ್ಲಿ, ಆದರೆ ಇಲ್ಲಿ ಈಗಲೂ ಇರುವುದು ಬೆರಗು ಮೂಡಿಸಿತು. ಬಹುಶ: ಬಾವಿಯಿಂದ ನೀರನ್ನು ಎಮ್ಮೆಗಳು ಮಟ್ಟಿಯೆಂಬ ತೊಗಲಿನ ಚೀಲವೊಂದರಿಂದ ಮೇಲೆತ್ತಿ ಹೊಲಕ್ಕೆ ಸಣ್ಣ ದಬೆದಬೆಯಂತೆ ಸುರಿದು, ಉಣಿಸುತ್ತಿರುವ ಈ ನೋಟ ವಿದೇಶೀಯರನ್ನೂ ಆಕರ್ಷಿಸಿರಬಹುದು, ಹತ್ತಾರು ವಿದೇಶೀಯರು ತಮ್ಮ ವಾಹನಗಳನ್ನು ರಸ್ತೆಯ ತಿರುವುಗಳಲ್ಲಿ ನಿಲ್ಲಿಸಿ, ಬೆಟ್ಟದಿಂದ ಇಳಿದು ಅವನ ಹೊಲದಲ್ಲಿ ಇನ್ನೊಂದು ಬದಿಯಲ್ಲಿ ನೊಗಕ್ಕೆ ಭುಜ ಕೊಟ್ಟು ಊಳುತ್ತಿದ್ದರು. ಕೆಲವರು ಅವನ ಹಾಡನ್ನು ಅನುಕರಿಸುತ್ತಿದ್ದರು, ರಸಿಕರು, ಕೆಲವರು ನೇಗಿಲದ ಹಿಂದಿನಿಂದ ಅದರ ಮೇಲೆ ಕಾಲಿಟ್ಟು ದಿಕ್ಕನ್ನು ನಿಯಂತ್ರಿಸುತ್ತಿದ್ದ್ದುದು ಬಲು ಖುಷಿ ಬಲು ಖುಷಿ. ಹೆಂಗಳೆಯರು ಈ ಎಲ್ಲದರ ಫೋಟೋಗಳನ್ನು ತೆಗೆದುಕೊಳ್ಳುವುದರಲ್ಲಿ ಮಗ್ನರಾಗಿದ್ದರು,. ನಾವು ಇಳಿಯದಿದ್ದರೂ ಕಾರು ನಿಲ್ಲಿಸಿ, ಈ ದೃಶ್ಯ ನೋಡುತ್ತ ನಿಂತುಬಿಟ್ಟೆವು. ನೇರವಾಗಿ ಭಾರತಾಂಬೆಯ ಆತ್ಮದೊಂದಿಗೆ ಸಂವಾದಿಸುತ್ತಿದ್ದರವರು ಯವನರು. ರೈತ ಖುಷಿಯ ಕಣ್ಣುಗಳಲ್ಲಿ ಅವರಿಗೆ ಎಲ್ಲವನ್ನೂ ವಿವರಿಸುತ್ತಿರುವುದು ಕಾಣಬರುತ್ತಿತ್ತು. ಹೀಗೆ ರಾಜಸ್ಥಾನ ನನ್ನ ಇನ್ನೊಂದು ಬಾಲ್ಯದ ವಿಳಾಸದ ಲಕೋಟೆಯನ್ನು ಸದ್ದಿಲ್ಲದೇ ನಮಗೆ ನೀಡಿದ್ದು ಮನಹಿಗ್ಗಿ ಕುಣಿವ ನವಿಲಿನಂತಾಗಿದ್ದೆ.

    ಬೆಟ್ಟಗಳು ಹೆಚ್ಚು ಕಡಿಮೆ ಉದಯಪುರದವರೆಗೂ ನಮ್ಮೊಡನೆಯೇ ಬಂದವು.. ಪ್ರತಿ ತಿರುವಿನಲ್ಲೂ ನಮ್ಮನ್ನು ತಲೆಯೆತ್ತಿ ನಾವೆಲ್ಲಿದ್ದೇವೆ ಎಂದು ಕಾಲೆತ್ತರಿಸಿ ನೋಡುತ್ತಿದ್ದವು. ಒಂದು ಕಡೆಯಲ್ಲಿ ಹಳದಿಘಾಟಿ ಎಂದು ಅದರೆಡೆಗಿನ ದಿಕ್ಕು ತೋರಿದ ಬೋರ್ಡೊಂದು ಎಂಥಾ ರೋಮಾಂಚನ ಕೊಟ್ಟಿತೆಂದರೆ ಹಳದಿಘಾಟಿ ಯುದ್ಧದಲ್ಲಿಯ ಶೂರ ಪ್ರತಾಪಸಿಂಹನ ಕತ್ತಿಯ ಕಾಳಗದ ಸದ್ದು ಕೇಳೀತೇ ಎಂದು ತವಕಿತನಾಗಿ ಹುಡುಕಿದೆ ಅದಕ್ಕೆ. ಸಾಕ್ಷಾತ್ ಸಾಮ್ರಾಟ್ ರಾಣಾ ಪ್ರತಾಪ್ ಯುದ್ಧ ಮಾಡಿದ 'ಮಶಹೂರ' ಭೂಮಿಯಲ್ಲವೇ ಇದು. ಇಲ್ಲಿಯೇ ಅಲ್ಲವೇ ಅವನ ಬಂಟ ಕುದುರೆ, 'ಚೇತಕ್' ಆ ಬೆಟ್ಟಗಳಲ್ಲೊಂದರಿಂದ ಜಿಗಿದು ತನ್ನ ಯಜಮಾನನನ್ನು ಬದುಕಿಸಿ ತಾನು ಆಹುತಿಯಾಗಿದ್ದು,... ಸಾಮಾನ್ಯ ಇತಿಹಾಸವಲ್ಲ ಇದು, ತನ್ನ ಮಾತೃಭೂಮಿಗಾಗಿ ದಶಕಗಳಷ್ಟು ದೀರ್ಘವಾಗಿ ಅನ್ನಾಹಾರ ತೊರೆದು, ಹೋರಾಡಿದ ಇಡೀ ಭರತಖಂಡ ಎದೆ ಸೆಟೆಸಿ ಗರ್ವ ಪಡಬೇಕಾದ ಮಹಾನ್ ಯೋಧನೊಬ್ಬನು ಹೋರಾಡಿದ ಪುಣ್ಯಭೂಮಿಯಿದು,. ಅವನ ಪಾದಧೂಳಿಯ ನೆಲವಿದು. ಭಾರತಾಂಬೆಯ ಶೂರ ಪುತ್ರನ ಮಹಾಧರೆ ಇದು. ಇದೇ ಗುಂಗಿನಿಂದ ಹೊರಬರುವಷ್ಟರಲ್ಲಿಯೇ ಗುಡ್ಡಗಳ ಏರುಳಿವುಗಳನ್ನು ದಾಟಿ ನಾವು ಉದಯಪುರದಲ್ಲಿದ್ದೆವು.

    ಮೊದಲಿಗೆ ನಾವು ಭೇಟಿಕೊಟ್ಟದ್ದು 'ಸಹೇಲಿಯೋಂಕಿ ಬಾಡಿ'. ಬಹಳ ಚನ್ನಾಗಿ ನಿರ್ವಹಣೆಯಲ್ಲಿರುವ ಸುಂದರ ನೀರು ಕಾರಂಜಿಗಳ ಉದ್ಯಾನವಿದು. ಟಿಕೆಟ್ ಪಡೆದು ಒಳಹೋದ ಕೂಡಲೇ ಹತ್ತಾರು 'ಗೈಡ್'ಗಳು ಎದುರಾಗಿ ದುಂಬಾಲು ಬೀಳುತ್ತಾರೆ, ಒಬ್ಬ ಗೈಡ್ ಗೊತ್ತು ಪಡಿಸಿಕೊಂಡು ನಾವು ಒಳಹೋದ ಕೂಡಲೇ ಅಲ್ಲಿಯೇ ಎಡಬಲಕ್ಕೂ ಸಣ್ಣಸರೋವರದ ನೀರಿನಲ್ಲಿ ಹಾದು ಹೋಗುವ ರಸ್ತೆಯ ಮೇಲೆ ಚಲಿಸುತ್ತಿದ್ದಂತೆಯೇ ನಡುವೆ ನಿಂತ 'ಗೈಡ್' ಚಪ್ಪಾಳೆ ತಟ್ಟಿದ ಕೂಡಲೇ ರಸ್ತೆಯ ಎರಡೂ ಪಕ್ಕದ ಎಲ್ಲ ಕಾರಂಜಿಗಳು ಉದ್ದಕ್ಕೂ ಒಮ್ಮಲೇ ಅಷ್ಟೆತ್ತರ ಎದ್ದು ಕೊಡಲಿಯಾಕಾರದಲ್ಲಿ ಚಿಮ್ಮಲಾರಂಭಿಸಿದವು. ನಮಗೆ ಚಪ್ಪಾಳೆ ತಟ್ಟಲು ಹೇಳಿದ ಗೈಡ್. .. ಸರಿ, ಚಪ್ಪಾಳೆ ತಟ್ಟಿದೆವು. ಅರೆ! ಎಲ್ಲ ಕಾರಂಜಿಗಳೂ ಸ್ಥಬ್ಧವಾದವು. ಮಜವೆನಿಸಿತು. ಹೃದಯಗಳಲ್ಲಿ ಕಾರಂಜಿ ಪುಟಿಯಹತ್ತಿದ್ದವು. 'ಪಂಖ ಹೋತೀ ತೋ ಉಡ ಆತೀ ರೇ',ಅನ್ನುವ ಸ್ಥಿತಿ ಮನದಲ್ಲಿ,

    ನಗುಮೊಗದಲ್ಲಿ ಮುಂದುವರೆದಂತೆ, ಅಲ್ಲಿಯೇ ಪಕ್ಕದಲ್ಲಿ ನನ್ನ ಕನಸನ್ನು ನನಸು ಮಾಡುವ ಮಳಿಗೆಯೊಂದು ಅಲ್ಲಿತ್ತು. ರಾಜಸ್ಥಾನೀ (ಫೋಕ್), ಜನಪದೀಯ ಧಿರಿಸಿನಲ್ಲಿ ಸಿಂಗರಿಸಿ ಸಜಾಯಿಸಿ, ಫೋಟೋ ತೆಗೆದು ಕೊಡುತ್ತಿದ್ದರು. ಕೂಡಲೇ ಮಗಳು ಅನೂಷಾಳಿಗೆ ಫುಸಲಾಯಿಸಿ, ಒಪ್ಪಿಸಿದೆ. ರಾಜಸ್ಥಾನಿ ಡ್ರೆಸ್‍ನಲ್ಲಿ ತುಂಬ ಮುದ್ದಾಗಿ ಕಾಣುತ್ತಿದ್ದಳು. ನಾನು ಕ್ಲಿಕ್ಕಿಸಿದ ಪ್ರವಾಸಿ ತರುಣಿಯೊಬ್ಬಳನ್ನು ಈ ಧಿರಿಸಿನಲ್ಲಿ ಸಿಂಗರಿಸಿಕೊಂಡದ್ದನ್ನು ಕ್ಲಿಕ್ಕಿಸಿ ಸಂಗ್ರಹಿಸಿಟ್ಟುಕೊಂಡೆ.. ಮುಂದೆ ಹೋದಾಗ ಗೈಡ್‍ನ ಹೆಸರು ಕೇಳಿದೆ, 'ರಾಜು' ಎಂದ. ಓಕೆ. ಎಂದೆ. 'ಸರ್ ಇಲ್ಲಿರುವ ಎಲ್ಲಾ ಗೈಡ್‍ಗಳ ಹೆಸರುಗಳೂ 'ರಾಜು'ನೇ ಎಂದ. ಅದೇಕೆ ಎಂದಾಗ, ನಿಮಗೆ 'ಗೈಡ್' ಸಿನಿಮಾ, ದೇವಾನಂದನದು ನೆನಪಿದೆಯೇ? ಅದರಲ್ಲಿ ದೇವಾನಂದ ಒಬ್ಬ ಗೈಡ್. ಅದರಲ್ಲಿ ಅವನ ಹೆಸರು ' ರಾಜು'. ಆ ಸಿನೇಮಾದ ಶೂಟಿಂಗ್ ಆಗಿದ್ದು ಇಲ್ಲೇ ಅಲ್ಲವೇ ಸರ್. ಅದಕ್ಕೆ ಎಲ್ಲ ಗೈಡ್‍ಗಳ ಹೆಸರು ಇಲ್ಲಿ 'ರಾಜು' ನೇ ಎಂದ. . ಅಂದರೆ ಇಲ್ಲಿ ಎಲ್ಲರೂ ದೇವಾನಂದರೇ ಎಂದು ನಕ್ಕ. ' ಓಹೋ ಬಾಲಿವುಡ್ ಕಾ ಹೆರಿಟೇಜ್ ಸೈಟ್! 'ಎಂದು ನಾವೂ ನಕ್ಕೆವು..

     ಅಲ್ಲಿಯೇ ಇನ್ನೂ ಮಂದಕ್ಕೆ ಉದ್ಯಾನದಲ್ಲಿ ಸುತ್ತು ಹಾಕುತ್ತ, ಇನ್ನೊಂದು ನೀರಿನ ಕೊಳವೊಂದರ ನಟ್ಟನಡುವಿನಲೆ ಒಂದು ಕಾರಂಜಿ ಗೋಪುರ. ಅದರ ಮೇಲೆ ಅಲ್ಲಲ್ಲಿ ಕೆಲ ಎತ್ತರಕ್ಕೆ ಅಲ್ಲಲ್ಲಿ ಗುಂಡಗೆ ನೀರಿನ ಚಿಲುಮೆಗಳು. ಕೊಳದ ಸುತ್ತಲೂ ಕಾರಂಜಿಗಳು. ನಾವು ಹೋಗಿ ನಿಲ್ಲುತ್ತಲೇ ಗೈಡ್ ಮತ್ತೆ ಚಪ್ಪಾಳೆ ತಟ್ಟಿದ. ಅರೆ! ಮತ್ತೆ ಎಲ್ಲ ಕಾರಂಜಿಗಳೂ ಜೀವಪಡೆದಂತೆ ಚಿಮ್ಮಿದವು. ಮತ್ತೊಂದು ಚಪ್ಪಾಳೆಗೆ ಎಲ್ಲ ಮಲಗಿಬಿಟ್ಟವು. ಅದೊಂದು ಅದ್ಭುತ ಹಾಗೂ ಬೆರೆಗು ಮೂಡಿಸುವ ನೋಟ. ಪಾಂಡಿನ ಅಂಚಿನಲ್ಲಿ ಆನೆಯ ಶಿಲ್ಪಗಳಿವೆ. ಅದರ ಸೊಂಡಿಲಿನಿಂದ ನಟ್ಡ ನಡುವಲ್ಲಿರುವ ಗೋಪುರಕ್ಕೆ ನೀರು ಚಿಮ್ಮುತ್ತದೆ. ಈ ಚಿಮ್ಮುವಿಕೆ ಆ ಗೋಪುರದ ತುದಿಯನ್ನು ಮುಟ್ಟಿದಾಗ ಅದರ ಹಿಂದಿನ ಸರೋವರ,ಲೇಕ್ ಪಿಚೋಲಾ ತುಂಬಿದೆ ಎಂದರ್ಥವಂತೆ. ಇಲ್ಲಿ ವಿಹಾರಕ್ಕಾಗಿ ಕುಳಿತ ರಾಜ ಪರಿವಾರದವರಿಗೆ ಇಲ್ಲಿಂದಲೇ ಆ ಜಲಮೂಲಗಳ ಕೆರೆಕಟ್ಟೆಗಳು ತುಂಬಿದ ಮಾಹಿತಿ ಲಭ್ಯವಾಗುತ್ತಿತ್ತು ಎಂಬ ವಿವರದಿಂದ ನಮ್ಮ ಜನಪದೀಯ ವಿಜ್ಞಾನಕ್ಕೆ ಮೆಚ್ಚುಗೆಯಾಯಿತು.

    ಹಾಗೆಯೇ ಇನ್ನೂ ಮುಂದೆ ಇನ್ನೊಂದು ಸಣ್ಣ ಕೊಳ.. ಅದರ ಸುತ್ತಲೂ ಎತ್ತರದ ಫರ್ನ್, ಬಾಳೆಯ ಜಾತಿಯ ಅಗಲ ಎಲೆಗಳ ಗಿಡಗಳು, ಬಳ್ಳಿಗಳು. ಕಾರಂಜಿಯ ನೀರು ಅವುಗಳ ಮೇಲೆ ಬಿದ್ದರೆ ಥೇಟ್ ಮಳೆ ಬರುವ ಸದ್ದು ಕಿವಿಗೆ ಅಪ್ಪಳಿಸುತ್ತದೆ. ಹಾಗೂ ಕಾರಂಜಿಯ ತುಂತುರು ನಮಗೆಲ್ಲ ಸಿಡಿಯುತ್ತದೆ. ರಾಣಿಯೊಬ್ಬಳಿಗೆ ಮಳೆಯ ಅನುಭವವನ್ನು ಪಡೆಯಲು ಬಲು ಅಭಿಲಾಷೆ ಇತ್ತಂತೆ. ಹೆಚ್ಚು ಮಳೆ ಬೀಳದ ಉದಯಪುರದಲ್ಲಿ ಅವಳ ಅಭಿಲಾಷೆಯನ್ನು ಈಡೇರಿಸಲು ರಾಜ ಕೈಕೊಂಡ ಉಪಾಯವಿದು. ಭಲೇ ಎಂದಿತು ಮನಸು. 'ಜಿಂದಗೀ ಭರ್ ನ ಭೂಲೇಗೀ ವೊ ಬರಸಾತ್ ಕೀ ರಾತ್' ಹಾಡಿನ ಮಾಧುರ್ಯವನ್ನು ಅಕ್ಷರಶ: ಅನುಭವಿಸಿದ್ದಿರಬೇಕು ರಾಣಿಯ ಆತ್ಮ.

   ಗೈಡ್ ಹೇಳಿದ, ' ಅಬ್ ಥೋಡಾ ಠೆಹರಿಯೇ ಸರ್, ಮೈ ಏಕ್ ರಾಜ್ ಕೀ ಬಾತ್ ಬತಾತಾ ಹೂಂ. ಆಪ್‍ಕೊ ಮಿಸ್‍ಗೈಡ್ ನಹೀಂ ಕರನಾ ಚಾಹತಾ ಹೂಂ. ಕ್ಯೂಂಕಿ ಮೈ ಏಕ್ ಗೈಡ್ ಹೂಂ, ಗೈಡ್ ಕೆ ಸಾಥ್ ಸಾಥ್ ಆಪ್‍ಕೊ ಎಂಟರ್‍ಟೇನ್‍ಮೆಂಟ್ ಭೀ ಕರ್ ಲೇತೇ ಹೈಂ. ಅಭೀ ತಕ್ ಜೋ ಆಪ್‍ನೇ ದೇಖಾ ಹೈ ನಾ ಸರ್. ವೊ ಕ್ಲಾಪ್ಸ್ ಮಾರತೇ ಹೀ ಫೌಂಟೇನ್ ಓಪನ್ ಹೋತೇ ಹೈಂ. ಔರ್ ಏಕ ಕ್ಲಾಪ್ಸ್ ಸೆ ಬಂದ್ ಹೋತೆ ಥೆ ನ ಸರ್. ವೊ ಖಾಲೀ ಹಮಾರೀ ನಾಟಕ್ ಥಾ. ಉಧರ್ ದೇಖಿಯೇ', ( ಗೈಡ್ ಹೇಳಿದ, ತುಸು ನಿಲ್ಲಿ ಸರ್, ಇದುವರೆಗೂ ಈ ಕಾರಂಜಿಗಳು ಚಪ್ಪಾಳೆ ತಟ್ಟುತ್ತಲೇ ಪುಟಿದು, ಇನ್ನೊಂದಕ್ಕೆ ತಣ್ಣಗಾಗುವುದಕ್ಕೆ ನಮ್ಮ ಕೈಚಳಕವೇ ಕಾರಣ ಎಂದು ಹೇಳುತ್ತ, ಅಲ್ಲಿ ಮರೆಯಲ್ಲಿ ಇದೆಲ್ಲವನ್ನೂ ನಿರ್ವಹಿಸುತ್ತಿದ್ದ ಮಾಲಿಯನ್ನು ತೋರಿಸಿದ. ಸುಮ್ಮನೆ ಎಂಟರ್‍ಟೇನ್‍ಮೆಂಟ್ ಸರ್, ಎಂದು ನಕ್ಕ. ಮಿಸ್ ಗೈಡ್ ಆಗಬಾರದಲ್ಲ ಎಂಬ ಕಾಳಜಿ ಅವನಿಗೆ) ಎಂದು ಕೈ ತೋರಿದ. ಅಲ್ಲಿಯೇ ಹೂಗಿಡಗಳ ಮಧ್ಯದಿಂದ ವಾಲ್ವ್ ಚಾಲೂ ಹಾಗೂ ಬಂದ್ ಮಾಡುವ ಮನಷ್ಯ ಎದ್ದು ನಮಗೆ ನಮಸ್ಕರಿಸಿದ. ಅಂದರೆ ನಾವು ಕ್ಲಾಪ್ಸ್ ಹಾಕುತ್ತಲೇ ಅವನು ವಾಲ್ಷ್ ಚಾಲೂ ಮಾಡುತ್ತಿದ್ದ, ಇನ್ನೊಂದು ಕ್ಲಾಪ್ಸ್ ಗೆ ವಾಲ್ವ್ ಬಂದ್ ಮಾಡುತ್ತಿದ್ದ. ಈಗ ಪೆಚ್ಚಾಗಿ ನಗುವ ಸರದಿ ನಮ್ಮದಾಗಿತ್ತು. ಅವರ ಅದ್ಭುತ ಚಾಕಚಕ್ಯತೆಗೆ, ಮನರಂಜನಾ ಕಲಾವಂತಿಕೆಗೆ ಮನಸಾರೆ ವಂದಿಸಿ, ಹೊರಬಂದೆವು.

    ಬೆಳಿಗ್ಗೆ ಬೇಗ ಎದ್ದು ಮಾನಸಪೂರ್ಣ ಕರ್ಣಿಮಾತಾ ಮಂದಿರದೆಡೆ ಕರೆದೊಯ್ದ ಸರವನ್. ರೋಪ್ ವೇ ಕೇಬಲ್ ಕಾರ್ ಮುಖಾಂತರ ಬೆಟ್ಟದ ಮೇಲೆ ಹೋದೆವು. ಇದಕ್ಕೆ ಹತ್ತಿಬರುವ ಕಾಲುದಾರಿಯೂ ಇದೆ. ಇದೇ ಬೆಟ್ಟದ ಮೇಲೆ ಕರ್ಣಿಮಾತಾ ಮಂದಿರ ಸ್ಥಾಪಿಸಲಾಗಿದೆ. ಅಲ್ಲಿಂದ ಸುತ್ತಲೂ ಬಹುತೇಕ ಉದಯಪುರದ ನೋಟವೆಲ್ಲ ಕಾಣುತ್ತದೆ. ಉದಯಪುರದ ಐದು ಸರೋವರಗಳು ಲೇಕ್ ಪಿಚೋಲಾ, ಫತೇಸಾಗರ್ ಲೇಕ್, ರಂಗಸಾಗರ್ ಲೇಕ್, ಉದಯಸಾಗರ ಲೇಕ್, ದೂಧ ತಲಾಯಿ ಲೇಕ್‍ಗಳೆಂಬ ಸುಂದರ ಜಗದ ತಿಳಿನೀರ ಸರೋವರಗಳು ಎಲ್ಲವೂ ಕಾಣಬರುತ್ತವೆ. ಉದಯಪುರವೆಂಬ ಕನಸಿನ ನಗರ ನೀರಿನಲ್ಲಿ ಹಡಗುಗಳಂತೆ ತೇಲಿದಂತೆ ಬಲು ಚಲುವಾಗಿ ಬಳುಕಿ ಚಲಿಸಿದಂತೆ ಕಾಣುತ್ತದೆ. ಇದಕ್ಕೆ ಅಲ್ಲವೇ ಈ ನಗರವನ್ನು 'ವೆನಿಸ್ ಆಫ್ ಈಸ್ಟ್' 'ಸಿಟಿ ಆಫ್ ಲೇಕ್ಸ್' ಎನ್ನುವರು. ಎತ್ತರವಾದ ಬೆಟ್ಟದ ಮೇಲಿರುವುದರಿಂದ ತಣ್ಣನೆಯ ತಂಗಾಳಿ ಬೀಸುತ್ತ ವಾತಾವರಣ ಆಹ್ಲಾದಕರವಾಗಿತ್ತು. ಮಂದಿರದಲ್ಲಿ ಮಾತಾ ಮಾನಸ್‍ಪೂರ್ಣ ಕರ್ಣಿಯ ದರ್ಶನ ಪಡೆದು ಬೆಟ್ಟದ ಮೇಲಿನಿಂದ ಎಲ್ಲ ಕಡೆಗೂ ಕಾಣುವ ಉದಯಪುರವೆಂಬ ಅದ್ಭುತ ರಾಜನಗರಿಯನ್ನು ಎಂಜಾಯ್ ಮಾಡುತ್ತ, ನೋಡುತ್ತಿದ್ದೆವು. ಮುಖ್ಯರಸ್ತೆಗಳು ವಿಶಾಲವಾಗಿ ಉದ್ದಕ್ಕೂ ನೆಲದ ಮೇಲೆ ನೇರವಾಗಿ, ಗೆರೆ ಕೊರೆದಂತೆ ಕಾಣುತ್ತಿದ್ದವು. ಚಿತ್ರಕಾರನೊಬ್ಬ ಬರೆದ ಚಿತ್ರದಂತೆ ಕಾಣುತ್ತಿತ್ತು, ಶುಭ್ರ ಶ್ವೇತ ಉದಯಪುರವೆಂಬ ಮಾಂತ್ರಿಕ ನಗರಿ.

     ಅಲ್ಲಿಯೇ ಬೆಟ್ಟದ ಮೇಲೆ ಗಿಡಗಂಟಿಗಳ, ಪೊದೆಗಳ ಕೊರಳುಗಳಲ್ಲಿ ನನ್ನ ಬಾಲ್ಯದ ಗುಬ್ಬಚ್ಚಿಗಳು ನಮ್ಮ ಮುಂದೆ ಎಗ್ಗಿಲ್ಲದೇ ಹಾರುತ್ತಿರುವುದನ್ನು ನೋಡಿ ಮನ ಪ್ರಫುಲ್ಲವಾಯಿತು. ಅಲ್ಲಿ ನನ್ನ ಗುಬ್ಬಚ್ಚಿಗಳೊಂದಿಗೆ ನಮ್ಮ ಅಂಗಳಗಳ ಮೈನಾ, ಬುಲ್ ಬುಲ್, ಗಿಳಿ, ಕರಿಗುಬ್ಬಿ, ಕಾಜಾಣ, ಕಾಗೆ, ಪಾರಿವಾಳಗಳು ಯಥೇಚ್ಛವಾಗಿದ್ದವು. . ಮಗನನ್ನು ಹೆಗಲಮೇಲೆ ಕುಳ್ಳಿರಿಸಿಕೊಂಡಿದ್ದ ಅಪ್ಪನೊಬ್ಬ ಅವನಿಗೆ ಕಾಗದದ ವಿಮಾನವನ್ನು ಮಾಡಿಕೊಡುತ್ತ ಬೆಟ್ಟದ ಮೇಲಿಂದ ಗಾಳಿಯಲ್ಲಿ ಹಾರಿಸಲಿಕ್ಕೆ ತಯಾರು ಮಾಡಿಕೊಡುತ್ತಿದ್ದ. ಈ ಗುಬ್ಬಿಗಳು ಹಾಗೂ ಈ ಅಪ್ಪ, ನನ್ನನ್ನು ಅನಾಯಾಸವಾಗಿ ಮತ್ತೊಮ್ಮೆ ಬಾಲ್ಯಕ್ಕೆ ಕರೆದೊಯ್ದವು..........

. ......... ಹಠಹಿಡಿದು ಅಪ್ಪನ ಕೈಹಿಡಿದು, ಸಂತೆಗೆ ಹೋಗಿ ಬರ್ಫ್ ಕೊಡಿಸಿಕೊಳ್ಳುವುದು, ಆ ಸಾಹೇ¨ ಬರ್ಫಕೊರೆಯುವುದನ್ನು ತದೇಕವಾಗಿ ನೋಡುತ್ತ, ಆ ಕಡ್ಡಿಗೆ ಅದನ್ನು ಉಂಡೆಕಟ್ಟಿ, ತನ್ನ ಬಣ್ಝ ಬಣ್ಣದ ಸಿಹಿ ನೀರನ್ನು ಉಂಡೆಗೆ ಉಣಿಸಿ ನಮ್ಮ ಕೈಯಲ್ಲಿ ನೀಡಿದಾಗ, ಥೇಟ್ ಕಾಮನ ಬಿಲ್ಲನ್ನೇ ಪಡೆದಷ್ಟು ಸಂಭ್ರಮ. .......ಸಂತೆಯ ಆ ಶರಬತ್ ಕುಡಿಯುವುದೆಂದರೆ .... ಎಂತಹ ಲಕ್ಷುರಿ ಅಂತೀರಿ........ ಜಾತ್ರೆಗೆ ಹೋದಾಗ ಅಪ್ಪನ ಹೆಗಲ ಮೇಲೆ ಕುಳಿತು ಜಾತ್ರೆಯ ತೇರಿಗೆ ಉತ್ತತ್ತಿ ಒಗೆಯುವ ಆ ಸುಖ ಈಗಲೂ ನೆನಪಿದೆ. 'ಗರ್ದಿ ಗಮ್ಮತ್ ನೆನಪಿದೆಯೇ? ಎಂದಳು ಪೂರ್ಣಿಮಾ. ಹಾಗೆ ಕಾಣುತ್ತಿದೆ ಉದಯಪುರ ಇಲ್ಲಿಂದ' ಎಂದಳು. ಜಗಜಿತ್ ಸಿಂಗ್ ಹಾಡು ತೇಲುತ್ತ ಕಣ್ಣಮುಂದೆಯೇ ಬಂದು , ಕಿವಿಯಲ್ಲಿ ನಿನಾದಗೊಳ್ಳುತ್ತ ಕಳೆದುಹೋದ ಬಾಲ್ಯಕ್ಕೆ ಮತ್ತೆ ಮತ್ತೆ ಜೋಗುಳ ಹಾಡುತ್ತ, ಬಾಲ್ಯದ ಆ ಮಧುರ ಗಳಿಗೆಗಳನ್ನು ನೆನಪಿಸುವ ಸಾಲುಗಳು ಮತ್ತೆ ಮತ್ತೆ ನಾಲಗೆ ಮೇಲೆ ನಲಿಯಹತ್ತಿದವು. ಹಳೆಯ ಆರ್ಕೈವ್‍ಗಳೆಲ್ಲ ಪುಟಿಪುಟಿದು ಜೀವಪಡೆದು ಕಣ್ಮುಂದೆ ನಲಿಯಹತ್ತಿದವು.

'ಯೆ ದೌಲತ್ ಭೀ ಲೇಲೋ, ಯೆ ಶೊಹರತ್ ಭೀ ಲೇಲೋ,

ಭಲೇ ಛೀನ್ ಲೋ ಮುಝ್ ಸೆ ಮೇರೀ ಜವಾನೀ,

ಮಗರ್ ಮುಝಕೋ ಲೌಟಾದೋ , ಬಚಪನ್ ಕಾ ಸಾವನ್

ವೊ ಕಾಗಜ್ ಕಿ ಕಸ್ತೀ, ವೋ ಬಾರಿಶ್ ಕಾ ಪಾನೀ'

(ಈ ಸಿರಿ ಸಂಪತ್ತು ಖ್ಯಾತಿ ಮರಳಿಸುವೆ,

ಯೌವ್ವನವಿದನ್ನೂ ಕೇಳಿದರೂ ಕೊಡುವೆ,

ಆದರೆ ಬಾಲ್ಯದ ಆ ಮಳೆಯ ದಿನಗಳ ನಾ ಬಿಟ್ಟ

ಆ ಕಾಗದದ ದೋಣಿ ಮತ್ತೆ ನನ್ನಾಟದ ಆ ಮಳೆನೀರನ್ನು ಮರಳಿಸುವೆಯಾ!).

ಮಧುರ ಭಾವಗಳಲ್ಲಿ ಮಿಂದು ನೆಂದು, ಕಂಪಿನ ಇಂಪಿನ ತಂಪಿನ ಕ್ಷಣಗಳನ್ನು ನೇರವಾಗಿ ಎದೆಗುಣಿಸಿ, ಬೆಟ್ಟದಿಂದ ನಗರ ಸೌಂದರ್ಯವನ್ನು ಕಣ್ಚುಂಬಿ, ಕಾರಕೇಬಲ್ ಮೂಲಕ ಅದ್ಭುತ ಅನುಭವಗಳೊಂದಿಗೆ ಕೆಳಗಿಳಿದೆವು.

    ಇಲ್ಲಿಂದ ಸೀದಾ ಅರಮನೆಯೆಡೆಗೆ ನಮ್ಮ ಪ್ರಯಾಣ. ಅರಮನೆ ಹಾಗೂ ಮ್ಯೂಜಿಯಂಗಳಿಗೆ ಟಿಕೆಟ್ ಕೊಂಡು ಒಳಹೋದೆವು. ದಾರಿಯಲ್ಲಿ ಪಕ್ಕದಲ್ಲಿಯೇ ಲೇಕ್ ಪಿಚೋಲಾದಲ್ಲಿ ಕಟ್ಟಿದ ಜಲನಿವಾಸ ಐಲ್ಯಾಂಡ್‍ನಲ್ಲಿ ನಿರ್ಮಿಸಿದ ಲೇಕ್ ಪ್ಯಾಲೇಸ್ ತುಂಬ ಮನಮೋಹಕವಾಗಿದೆ. ಶ್ವೇತ ಮಾರ್ಬಲ್ ಕಲ್ಲುಗಳಿಂದ ನಿರ್ಮಿತ ಇದು ಸರೋವರದಲ್ಲಿ ತೇಲುತ್ತಿರುವ ಹಡಗಿನಂತಿದೆ. ಸುಮಾರು 83 ವಿಶಾಲ ರೂಮುಗಳನ್ನು ಹೊಂದಿ ನಾಲ್ಕು ಎಕರೆಯಷ್ಟು ಜಾಗದಲ್ಲಿ ಈ ಅರಮನೆ ಇದೆ. ಈಗ ಅದೊಂದು ಫೈವ್ ಸ್ಟಾರ್ ಹೋಟಲ್. ಇಲ್ಲಿ ಲೇಕ್‍ನಲ್ಲಿ ಬೋಟಿಂಗ್ ಮಾಡುತ್ತ ಉದಯಪುರ ಹಾಗು ಈ ಲೇಕ್ ಪ್ಯಾಲೇಸ್, ಸಿಟಿ ಪ್ಯಾಲೇಸ್ ಮುಂತಾದ ಅರಮನೆಗಳ ಮತ್ತೊಂದು ಬದಿಯ ನೋಟವನ್ನು ಸವಿಯಬಹುದು.

   ಅರಮನೆಯ ಒಳಪ್ರವೇಶವಾಗುತ್ತಲೇ, ಗೈಡ್ ನ್ನು ಗೊತ್ತುಪಡಿಸಿಕೊಂಡು ಸುತ್ತಲು ಶುರುಮಾಡಿದೆವು. ಬಹಳ ಅಂದರೆ ಬಹಳ ದೊಡ್ಡ ಅರಮನೆಯಿದು. ಬಹುತೇಕ ಭಾಗಗಳು ಹೋಟಲ್‍ಗಳು, ರಸ್ಟೋರಂಟುಗಳು, ಹಾಗೂ ಮದುವೆ ಸಮಾರಂಭಗಳಿಗೆ ಮೀಸಲಾಗಿವೆ. ಮದುವೆ ಸಮಾರಂಭಗಳಂತೂ ಕೋಟಿ ಲೆಕ್ಕಗಳಲ್ಲಿ ಮಾತ್ರ ಎಂದ ಗೈಡ್. ಒಂದು ಮದುವೆಗೆ ಸಿದ್ಧವಾಗುತ್ತಿದ್ದ ಮಂಟಪವೊಂದಕ್ಕೆ ಕರೆದೊಯ್ದು ಅಲ್ಲಿಯ ಆಗು ಹೋಗುಗಳನ್ನು ಗಮನಿಸಿದೆ. ಅದೇ ತಾನೇ ಕೀನ್ಯಾದಿಂದ ಒಂದು ಫೂಟಿನಷ್ಟು ಉದ್ದದ ಸುಗಂಧರಾಜ, ರಜನಿಗಂಧಾ ಹೂವಿನ ಬಳ್ಳಿಯ ಸಮೇತವಾಗಿ ಅಲಂಕಾರಗೊಳ್ಳುತ್ತಿತ್ತು. ಅಲಂಕಾರಕ್ಕಾಗಿ ಬಂದ ಹೂವುಗಳೇ ಎರಡು ಮೂರು ಟ್ರಕ್ಕಿನಷ್ಟಿದ್ದವು. ಲೈಟಿಂಗ್ ಝೂಮರ್‍ಗಳ ಬಗ್ಗೆ ಮಾತಾನಾಡುವುದೇ ಬೇಡ, ಅಂದರೆ ಆ ಲಕ್ಷುರಿ ನಮಗಲ್ಲ ಬಿಡಿ, ಅದನ್ನು ನೋಡಿಯೇ ಸವಿಯಬೇಕು.

   ಬಹುತೇಕ ಬಾಲಿವುಡ್ ತಾರೆಯರ, ಭಾರತೀಯ ದೊಡ್ಡ ದೊಡ್ಡ ರಾಜಕಾರಣಿಗಳ, ಮಂತ್ರಿಗಳ, ರಾಜಪರಿವಾರದವರ ಮದುವೆಗಳು ಅಲ್ಲಿ ಜರುಗುತ್ತವೆ, ಏನೂ ಇಲ್ಲದಲ್ಲೂ ಎಲ್ಲವನ್ನೂ ಸೃಷ್ಟಿಸಿಕೊಂಡಿದ್ದಾರೆ ಈ ರಾಜಸ್ಥಾನೀಗಳು ಎನಿಸುತ್ತದೆ, ಅದರ ಹಿಂದೆ ಅವರ ವ್ಯವಹಾರ ಕುಶಲತೆ ಗಮನಿಸುವಂತಿತ್ತು. ನಾವು ನೋಡಿ, ಎಲ್ಲವೂ ಯಥೇಚ್ಛ ಇದ್ದೂ, ಅದರ ಸದುಪಯೋಗ ಮಾಡಿಕೊಳ್ಳುವುದಿಲ್ಲ ಅನಿಸಿತು.

   ಸಿಟಿ ಪ್ಯಾಲೇಸ್ ಬಗ್ಗೆ ತುಸು ಇತಿಹಾಸವನ್ನು ಗೈಡ್ ಹೇಳುತ್ತಿದ್ದ, 1559 ರಲ್ಲಿ ಎರಡನೆಯ ಮಹಾರಾಣಾ ಉದಯಸಿಂಗ್ ಈ ಅರಮನೆಯನ್ನು ಕಟ್ಟಲು ಪ್ರಾರಂಭಿಸಿದ. ಅರಮನೆಯಲ್ಲಿ ಅನೇಕ ಅರಮನೆಗಳ ಸಮುಚ್ಛಯಗಳೇ ಇವೆ. ಇದನ್ನು ನಾಲ್ಕುನೂರು ವರ್ಷಗಳ ವರೆಗೆ ಮೇವಾರ್ ಸಾಮ್ರಾಟರು ನಿರ್ಮಿಸುತ್ತ ಬಂದರು. ಮೊದಲಿಗೆ ಚಿತ್ತೊರಿನಿಂದ ರಾಜಧಾನಿಯನ್ನು ಹೆಚ್ಚು ಅಪಾಯವಿಲ್ಲದಂತಹ ಜಾಗವನ್ನಾರಿಸಿ ಎರಡನೆಯ ಉದಯಸಿಂಗ್ ಈ ಅರಮನೆಗೆ ಚಾಲನೆ ನೀಡಿದ. ಹಾಗೂ ಚಿತ್ತೋರ್‍ನಿಂದ ಉದಯಪುರಕ್ಕೆ ರಾಜಧಾನಿಯನ್ನು ಸ್ಥಳಾಂತರಿಸಿದ. ಲೇಕ್ ಪಿಚೋಲಾದಲ್ಲಿ ಜಗಮಂದಿರÀವೆಂಬ ಇನ್ನೊಂದು ಅರಮನೆಯಿದೆ. ಮಾನ್ಸೂನ್ ಪ್ಯಾಲೇಸ್ ಎಂಬ ಬೇಸಿಗೆ ಅರಮನೆಯನ್ನು ಸಮೀಪದ ಬೆಟ್ಟದ ಮೇಲೆ ನಿರ್ಮಿಸಲಾಗಿದೆ.

   ಸರಿ, ಈಗ ಸಿಟಿ ಪ್ಯಾಲೇಸ್‍ನಲ್ಲಿದ್ದೆವು. ಅರಮನೆಯ ಒಳಪ್ರವೇಶವಾಗುತ್ತಲೇ ಮ್ಯುಜಿಯಂನ ಒಳಸೇರಿದೆವು. ಆನೆಯಂತಹ ಶಕ್ತಿಯ ಕುದುರೆ ಚೇತಕ ಮೇಲೆ ರಾಣಾ ಪ್ತತಾಪ ಕುಳಿತ ಭಂಗಿಗಳು, ಚೇತಕನ ಮುಖವನ್ನು ಆನೆಯ ಮುಖದಂತೆ ಚಿತ್ರಿಸಿದ ಚಿತ್ರಗಳು ಮನಸೆಳೆದವು. ಹಳದಿಘಾಟಿ ಯುದ್ಧದಲ್ಲಿ ಮಹಾರಾಣಾ ಪ್ರತಾಪ ಯುದ್ಧದಲ್ಲಿ ಗಾಯಗೊಂಡಾಗ ತನ್ನ ಯಜಮಾನನ್ನು ಕುಳ್ಳಿರಿಸಿಕೊಂಡು, ನದಿಯನ್ನು ಹಾರಿ, ಬೆಟ್ಟವೊಂದರಿಂದ ಕೆಳಗೆ ಜಿಗಿದು ಅವನನ್ನು ಅಪಾಯದಿಂದ ಪಾರು ಮಾಡಿ ತಾನು ಮಾತ್ರ ಜೀವಬಿಡುತ್ತಿರುವ ತೈಲ ಚಿತ್ರಗಳು ತುಂಬಾ ಚನ್ನಾಗಿವೆ. ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾದ ಯುದ್ಧದ ಚಿತ್ರಗಳು, ಮಾಹಾರಾಣಾಗಳು ಉಪಯೋಗಿಸಿದ ಡ್ರೆಸ್‍ಗಳು, ರಥಗಳು, ಕುದುರೆಗಳು, ಸಿಂಹಾಸನಗಳು, ಆಯುಧಗಳು, ಶಿರಸ್ತ್ರಾಣಗಳು, ಅಪರೂಪದ ವಸ್ತುಗಳೆಲ್ಲವೂ ಮ್ಯುಜಿಯಂನಲ್ಲಿವೆ. ಅಪರೂಪದ ಚಿತ್ರವೊಂದರಲ್ಲಿ ಇದೇ ವಂಶಸ್ಥ ಸಂತ ಮೀರಾಬಾಯಿ ಶ್ರೀಕೃಷ್ಣನನ್ನು ಭಜಿಸುತ್ತಿರುವ ಚಿತ್ರ ಮನಸೆಳೆಯಿತು.

   ಅರಮನೆಯನ್ನು ಮನದಣಿಯೆ ನೋಡಿ, ತಣಿದು, ಧನ್ಯತೆಯಿಂದ ಹೊರಬಂದೆವು. ಇಲ್ಲೊಂದು ಮಾತು, ವಿಶಾಲವಾದ, ರಂಗುರಂಗಿನ, ಅನೇಕ ಗುಟ್ಟುಗಳನ್ನು ಹೊಟ್ಟೆಯಲ್ಲಿಟ್ಟುಕೊಂಡ ಈ 'ರಾಜಸ್ಥಾನವೆಂಬ ದೇಸ'ವನ್ನು ಸುತ್ತಲು, ಕನಿಷ್ಟ ಹನ್ನೆರಡರಿಂದ ಹದಿನೈದು ದಿನಗಳಾದರೂ ಬೇಕು. ಇಲ್ಲಿ ನೋಡಲೇ ಬೇಕಾದಂತಹ ಸಣ್ಣವು, ದೊಡ್ಡವು ಎಂದು ಅನೇಕ ಜಾಗಗಳಿವೆ.. ಅವುಗಳನ್ನೆಲ್ಲಾ ಒಂದೇ ಪ್ರವಾಸದಲ್ಲಿ ಎಲ್ಲವನ್ನೂ ನೋಡಲಾಗದು ಎಂಬುದನ್ನು ಮೊದಲೇ ತಿಳಿದಿರಬೇಕಾಗುತ್ತದೆ, ಇಲ್ಲದೇ ಹೋದಲ್ಲಿ ಪ್ರವಾಸವೇ ಗೊಂದಲಮಯವಾಗುತ್ತದೆ, ಆದಷ್ಟು ಸಮಯ ಹೊಂದಾಣಿಸಿಕೊಂಡು ಆದಷ್ಟು ಹೆಚ್ಚು ನೋಡುತ್ತ ಸಾಗುವುದರಲ್ಲಿಯೇ ಸುಖವಿದೆ, ಉಳಿದರೆ ಮತ್ತೊಂದು ಸಾರಿ ಬಂದರಾಯಿತು ಎಂದು ಹೇಳಿಕೊಳ್ಳುವುದು ಕ್ಷೇಮ. ಹೀಗಾಗಿ ನಾವೂ ಕೂಡ ಅಲ್ಲಲ್ಲಿ ನೋಡಲಾರದೇ ಉಳಿದ ಜಾಗಗಳನ್ನು ಪಟ್ಟಿಮಾಡುತ್ತ, 72 ವರ್ಷದ ಯುವ ಗೈಡ್ ಮನಮೋಹನ ಸಿಂಗ್‍ರಿಗೆÉ ವಂದಿಸಿ, ಇಲ್ಲಿಂದ ರಾಜಸ್ಥಾನದ ಮೂಲ ಆತ್ಮ, ದ್ರವ್ಯದಂತಿರುವ ಶಿಲ್ಪಗ್ರಾಮದ ಕಡೆಗೆ ನಡೆದೆವು.

Rating
No votes yet

Comments

Submitted by H A Patil 1 Wed, 07/15/2015 - 10:41

ಲಕ್ಷ್ಮೀಕಾಂತ ಇಟ್ನಾಳರವರಿಗೆ ವಂದನೆಗಳು
ಪ್ರವಾಸ ಕಥನ ಸೊಗಸಾಗಿದೆ ತಾವು ನಿರೂಪಿಸಿದ ಮಟ್ಟಿ ಭಾವಿಯ ವಿವರ ಮನದುಂಬಿತು, 1962 ರಲ್ಲಿ ನಾವು ಮುಲ್ಕಿ ಪರೀಕ್ಷೆಗೆ ಹೋದಾಗ ಸವಣೂರಿನಲ್ಲಿ ಅಂತಹ ಭಾವಿಗಳನ್ನು ನೋಡಿದ್ದೆವು ಅಲ್ಲಿ ಸ್ನಾನ ಖಾನಾವಳಿಯ ಊಟ ಮಜೀದ್‌ ಹೈಸ್ಕೂಲಿನಲ್ಲಿ ಪರೀಕ್ಷೆ, ಅಂತಹ ಭಾವಿಗಳಿಗೆ ನಮ್ಮ ಕಡೆಗೆ ಕಪ್ಪಲಿ ಭಾವಿಗಳೆಂದು ಕರೆಯುತ್ತಾರೆ. ನೀವು ಹಳದಿ ಘಾಟಿಯಲ್ಲಿ ರಾಣಾಪ್ರತಾಪ ಸಿಂಹನ ಚೇತಕ್ ಕುದುರೆ ನೆನಪಿಗೆ ಬಂದರೆ ನನಗೆ ’ರಾಣಿ ರೂಪಮತಿ’ ಚಿತ್ರದಲ್ಲಿ ಕುದುರೆ ಏರಿ ಓ ಪವನ ಹಂಸ ಕೆ ಉಡನೆವಾಲೆ ಘೋಡೆ ಎಂದು ಹಾಡುತ್ತ ಸಾಗುವ ನಾಯಕಿ ನಿರೂಪ್ ರಾಯ್‌ ನೆನಪಿಗೆ ಬಂದಳು. ನೀವು ಸಹೆಲಿಯೋಂಕಿ ಬಾಡಿ ಬಗ್ಗೆ ನಿರೂಪಣೆ ಮಾಡುವಾಗ ಅಲ್ಲಿರುವ ಎಲ್ಲ ಗೈಡ್‌ಗಳ ಹೆಸರು ರಾಜು ಎಂದು ಉಲ್ಲೆಖಿಸಿದ್ದೀರಿ ಅದರೆ ಗೈಡ್ ಚಿತ್ರದ ಹೆಸರು ಉಲ್ಲೇಖಿಸುತ್ತಿದ್ದಂತೆ ನನ್ನ ನೆನಪಿಗೆ ಬಂದದ್ದು ಕಾಂಟೋಸೆ ಖೀಂಚ್ ಕೆ ಏ ಆಂಚಲ್‌ ಎಂದು ಬಿಂದಾಸ್‌ ಆಗಿ ಹಾಡಿ ಕುಣಿದ ಸುರ ಸುಂದರಿ ವಹಿಧಾ ರೆಹಮಾನ್‌.ಬಹಳ ಅದ್ಬುತವಾದ ಪ್ರವಾಸ ಕಥನ ಸೊಗಸಾದ ನಿರೂಪಣೆ, ನಿಮ್ಮ ಈ ಪ್ರವಾಸ ಕಥನ ರಾಜಸ್ತಾನಿ ಹಿಂದಿ ಮತ್ತು ಆಂಗ್ಲ ಭಾಷೆಗಳಲ್ಲಿ ಅನುವಾದಗೊಂಡರೆ ನನಗೆ ಬಹಳ ಸಂತಸವಾಗುತ್ತದೆ ಅಷ್ಟು ಸೊಗಸಾದ ಅರ್ಥಪೂರ್ಣವಾದ ಪ್ರವಾಸ ಕಥನ ಧನ್ಯವಾದಗಳು.

ಹಿರಿಯ ಚಿಂತಕ ಲೇಖಕ, ಹೆಚ್ ಎ ಪಾಟೀಲ ಜಿ, ತಮ್ಮ ಅನುಭವ ನುಡಿಗಳು ಈ ಸಂದರ್ಭದಲ್ಲಿ ಹಾಡು ಕುಣಿತಗಳೊಂದಿಗೆ ಮಿಳಿತವಾಗಿದ್ದು ಖುಷಿಯೋ ಖುಷಿ. ಹೌದು ಮಟ್ಟಿಬಾವಿಗಳಿಗೆ ಕಪಲಿ ಬಾವಿಗಳೆಂತಲೂ ಅನ್ನುವರು, ಆ ಕ್ಷಣಕ್ಕೆ ಅದು ನೆನಪಾಗಲಿಲ್ಲ. ತಮ್ಮ ಭಾವಪೂರ್ಣ ಅಭಿಮಾನದ ಹಾರೈಕೆಗಳಿಗೆ ಹೃನ್ಮನದಿಂದ ಮತ್ತೆ ಮತ್ತೆ ನಮಿಸುವೆ ಸರ್, ವಂದನೆಗಳು.

Submitted by ಗಣೇಶ Sun, 07/19/2015 - 23:45

೧೦-೧೫ ದಿನ ರಜೆ ಮಾಡಿ ರಾಜಸ್ಥಾನ ತಿರುಗುವುದು ಸದ್ಯಕ್ಕಂತೂ ಸಾಧ್ಯವೇ ಇಲ್ಲ. ಆದರೆ ಇಟ್ನಾಳರೆ, ನಾನು ೧೫ ದಿನ ರಜೆ ಹಾಕಿ ಟೂರ್ ಹೋಗಿದ್ದರೂ ಇಷ್ಟೆಲ್ಲಾ ಗಮನಿಸುತ್ತಿರಲಿಲ್ಲ. ನಿಮ್ಮ ಲೇಖನ ಓದುತ್ತಿರುವಾಗ ಹಾಡು ಹೇಳಿಕೊಂಡು ನಾನೇ ಸುತ್ತಾಡಿದಂತೆ ಆಗುತ್ತಿದೆ. ರಾಜಸ್ಥಾನ ಪ್ರವಾಸಿಗರಿಗೆ ಉತ್ತಮ ಗೈಡ್ ನಿಮ್ಮ ಲೇಖನ.

ಗಣೇಶ ರೇ, ತಮ್ಮ ಆತ್ಮೀಯ ಮೆಚ್ಚುಗೆಗೆ ವಂದನೆಗಳು. ಆದರೂ ಕೆಲವೇ ದಿನಗಳಾದರೂ ರಾಜಸ್ಥಾನಕ್ಕೆ ಕುಟುಂಬ ಸಮೇತ ಹೋಗಿ ಬನ್ನಿರೆಂಬುದು ನನ್ನ ಸದಾಶಯ.

Submitted by kavinagaraj Tue, 07/21/2015 - 21:01

ನಮ್ಮ ದೇಶದ ಮಹಾನತೆ ಕಂಡು ಎದೆ ಉಬ್ಬಿಬಂದಿತು, ಇಟ್ನಾಳರೇ. ನೀವು ಗೈಡುಗಳ ಗೈಡಿನ ರೀತಿಯಲ್ಲಿ ಪ್ರವಾಸದ ವಿವರ ಒದಗಿಸುತ್ತಿರುವುದು ಅಭಿನಂದನೀಯ.

ಕವಿ ಮನದ ಕವಿನಾಗರಾಜ್ ಸರ್, ತಮ್ಮ ಎಂದಿನ ಅಭಿಮಾನದ ನುಡಿಗಳಿಗೆ, ಪ್ರೋತ್ಸಾಹಿಸುವ ಮನಸಿಗೆ ಶರಣು ಸರ್, ಧನ್ಯವಾಯಿತು ಮನ. ವಂದನೆಗಳು ಸರ್,