ಇಂಜಿನಿಯರನ ಪ್ರೇಮ ಪತ್ರ

ಇಂಜಿನಿಯರನ ಪ್ರೇಮ ಪತ್ರ

ಪ್ರೀತಿಯ ಹುಡುಗಿ,,,,

ಹೆಚ್ಚು ಪ್ರೇಮ ಪತ್ರ ಬರೆದು ಅನುಭವ ಇಲ್ಲದೇ ಇದ್ದರೂ, ನಿನ್ನ ಮಂಪರಿನಲಿ ಬರೆದ ಒಂದೆರಡು ಪತ್ರಗಳು ನಿನ್ನ ಕೈ ಸೇರಲಿಲ್ಲ ಎನ್ನುವ ಖೇದವಿದೆ,

ನೀನು ಈ ಪತ್ರವನ್ನು ಓದಿ ಒಂದು ಮುಗುಳ್ನಗುವನ್ನಾದರೂ ನನ್ನೆಡೆಗೆ ಚೆಲ್ಲುವೆಯಲ್ಲಾ, ಅದನ್ನೇ ಯುರೆನಿಯಮ್ಮಿನಂತೆ ಹೆಚ್ಚಿಸುತ್ತಾ, ಮತ್ತೆ ಮತ್ತೆ ತುಂಬಿಕೊಳ್ಳುತ್ತೇನೆ, ಆತ್ಮೀಯತೆಯಿಂದಾ

     ಅಂದು ನೀ ನನ್ನ ಪಕ್ಕ ಕುಳಿತು, “ನನ್ನ ನೀನೆಷ್ಟು ಪ್ರೀತಿಸುವೆ”? ಎಂದು ಕೇಳಿದಾಗ, ನಟ್ಟೊಂದು ಬೋಲ್ಟನ್ನು, ಅಪ್ಪಿ ಹಿಡಿದು, ತುಕ್ಕು ಹಿಡಿದು ಉದುರುವಷ್ಟು ಕಾಲ ಜೊತೆಗಿದ್ದು ಪ್ರೀತಿಸುತ್ತದಲ್ಲ, ಅದಕ್ಕಿಂತ ಹೆಚ್ಚು ನಾನು ನಿನ್ನ ಪ್ರೀತಿಸುವೆ ಎಂದಾಗ ನೀನು ಏನೂ ಅರ್ಥ ಆಗದವಳಂತೆ ನನ್ನನ್ನೇ ನೋಡುತ್ತಾ ಹುಬ್ಬು ಮೇಲೇರಿಸಿದ್ದೆ, ನಾನು ಶಬ್ದ ಮಾಡದ ಎಲೆಕ್ಟ್ರಿಕ್ ಎಂಜಿನ್ನಿನಂತೆ ಸುಮ್ಮನೆ ಮುಗುಳ್ನಕ್ಕೆ,

   ಆ ದಿನ ಕಾಲೇಜಿನಿಂದ ಪೆಟ್ರೋಲಿನ ವಾಸನೆಯನ್ನು ಮೈಗಂಟಿಸಿಕೊಂಡು, ನಿನ್ನ ನೋಡುವ ಆತುರದಲ್ಲಿ ಸರಿಯಾಗಿ ಕೈಯನ್ನೂ ತೊಳೆಯದೇ ಓಡಿ ಬಂದಾಗ, ನನ್ನ ಪರಿಮಳವನ್ನು ಆಸ್ವಾದಿಸಲಾಗದೇ ನೀನು ಮೂಗು ಮುಚ್ಚಿದ್ದೆ, ನಾನು ಎಂದೂ ಮುಗಿಯದ ಪೆಟ್ರೊಲಿನಂತೆ ನಿನ್ನ ಒಡಲೊಳಗೆ ಪ್ರೀತಿ ತುಂಬುವೇ ಎಂದಾಗ ನೀನು ಹುಬ್ಬೇರಿಸಿ, ನಿನ್ನ ಕೈಯಾರೆ ಮಾಡಿದ ಚಿತ್ರಾನ್ನವನ್ನು ನನ್ನ ಬಾಯಿಗಿಟ್ಟು, ಮಾತನಾಡದೆ ಸುಮ್ಮನೆ ತಿನ್ನೆಂದು ಗದರಿದ್ದೆ,

ನಾನು ನಿಧಾನವಾಗಿ ನನ್ನ ಬ್ಯಾಗಿನಿಂದ ಹೊರ ತೆಗೆದ ನಟ್ಟು, ಬೋಲ್ಟನ್ನು ನೋಡಿ ಏನಿದು ಎಂದು ಕೇಳಿದಾಗ, ನಾನು ಅವೆರಡನ್ನೂ ಸಂಪೂರ್ಣ ಟೈಟ್ ಮಾಡಿ, ಇದು ನೀನು, ಅದು ನಾನು, ನಾವಿಬ್ಬರೂ ಯಾವ ಸ್ಪಾನರ್-ನಿಂದಲೂ ಬಿಡಿಸಲಾಗದಷ್ಟು ಗಟ್ಟಿ ಬಂದಕ್ಕೊಳಗಾಗಬೇಕು ಎಂದಾಗ ನೀನು ಅರ್ಥವಾದವಳಂತೆ ನಕ್ಕಿದ್ದೆ,,,,,, ಆ ನಟ್ಟು ಬೋಲ್ಟುಗಳ ಬಂದ ಇನ್ನೂ ಹಾಗೆಯೇ ಇದೆ, ಆದರೆ ನೀನು!!!!

ಬೆಳಗಿನ ಜಾವ ಓದುವಾಗ ನಿನ್ನ ನೆನಪಾಗಿ, ಥರ್ಮೋಡ್ಯನಮಿಕ್ಸ್ ನ, ಶಾಖದ ಒಳ ಪದರದಲ್ಲಿ, ನಿನ್ನ ನೆನಪಿನ ಶಾಖ ಹೋಲಿಕೆಗೊಂಡು, “ನೆನಪುಗಳನ್ನು ಹುಟ್ಟು ಹಾಕಲೂ ಸಾಧ್ಯವಿಲ್ಲ, ಅವುಗಳನ್ನು ಕೊಲ್ಲಲೂ ಸಾಧ್ಯವಿಲ್ಲ,,,,, ಆದರೆ ಒಂದು ದಿನದಿಂದ ಇನ್ನೊಂದು ದಿನಕ್ಕೆ, ಹೆಚ್ಚಿಸಲು ಸಾಧ್ಯವಿದೆ” ಎಂದು “ನೆನಪುಗಳ ಕನ್ಸರ್ವೇಶನ್ ಲಾ” ಹೇಳಿದಾಗ ನಿನ್ನ ತುಟಿಗಳಿಂದ ಮತ್ತಷ್ಟು ನೆನಪುಗಳನ್ನು ನನ್ನ ಖಾತೆಗೆ ನೀನು ಜಮಾ ಮಾಡಿದ್ದೆ.

  ನನ್ನ ಯಾಂತ್ರಿಕತೆಯ ಬಧುಕಲ್ಲಿ ನೀನೊಂದು ತಂಗಾಳಿಯಾಗಿದ್ದೆ, ಸದಾ ತರ್ಕಗಳಲ್ಲಿ ಬದುಕುತ್ತಿದ್ದ ನನಗೆ, ನೀನು ತರ್ಕಕ್ಕೆ ನಿಲುಕದ ನಕ್ಷತ್ರವಾಗಿದ್ದೆ, ನೆಲೆ ಕಂಡುಕೊಳ್ಳದ ಮನಸಿಗೆ ನೀನು ನಿಲ್ದಾಣವಾಗಿದ್ದೆ, ನಿನ್ನ ಹುಬ್ಬುಗಳು ನನಗೆ ಯಾವಗಲೂ ಕಾಡುತ್ತಿದ್ದ ಚಿಟ್ಟೆಯಾಗುವ ಕಂಬಳಿ ಹುಳದಂತೆ ಕಾಣುತ್ತಿದ್ದವು, ಆಗೊಂದು ಈಗೊಂದು ಸಣ್ಣ ಸ್ಪರ್ಶಕ್ಕೆ ನೀನು ಸಂಪೂರ್ಣ ಅಧುರುತ್ತಾ ತನ್ಮಯಳಾಗುತ್ತಿದ್ದೆ, ನಾನು ನೆಲದ ಮೇಲೆ ನಡೆಯದೇ ಹಾರಿದ್ದಕ್ಕೇ ನೀನೆ ಕಾರಣಳಾಗಿದ್ದೆ, ಯಂತ್ರಗಳ ಶಬ್ಧ ತಣಿಸುವ ಕೂಲೆಂಟಿನಂತೆ ನೀನು ಸದಾ ನನಗೆ ಚಿಲುಮೆಯಾಗಿದ್ದೆ,

ಇಷ್ಟೆಲ್ಲಾ ಆಗಿದ್ದವಳು ಇದ್ದಕ್ಕಿದ್ದಂತೆ ಎತ್ತ ಮರೆಯಾದೆ ಗೆಳತಿ, ವಿಳಾಸ ಸಿಗದಂತೆ,,,,,,, ಇಗೋ ಈಗೊಂದು ಪತ್ರ ಬರೆದಿದ್ದೇನೆ, ಮರೆಯದೇ ಓದು,,,,,,,,,,

ಎಲ್ಲ ಸಾಲುಗಲಲ್ಲಿಯೂ ನಿನ್ನ ಅಪರಿಮಿತ ನೆನಪಿದೆ,,,,,, ಆಸ್ವಾದಿಸು,,,,
 

ಜೀ ಕೇ ನ‌

Comments

Submitted by ಗಣೇಶ Sun, 07/19/2015 - 23:29

ಜೀಕೇನ ಅವರೆ, ಇಂಜಿನಿಯರ್‌ನ ಪ್ರೇಮ ಪತ್ರ ಚೆನ್ನಾಗಿದೆ. ಇಂಜಿನಿಯರ್‌ನ ಒಳಗಿನ ಕವಿ ಮೆಲ್ಲ ಇಣುಕಿದ್ದಾನೆ-"..ನೀನೊಂದು ತಂಗಾಳಿ,...ಚಿಟ್ಟೆಯಾಗುವ ಕಂಬಳಿ ಹುಳದಂತೆ.."

Submitted by kavinagaraj Wed, 07/22/2015 - 12:29

ನಟ್ಟು ಬೋಲ್ಟುಗಳನ್ನು ಇಂಜನಿಯರನ ಹತ್ತಿರವೇ ಬಿಟ್ಟು ಆಕೆ ಹೋದದ್ದಾದರೂ ಎಲ್ಲಿಗೆ, ಏಕೆ ಎಂಬುದರ ಸುಳಿವು . . . . .?? :)