ರಾಜಸ್ಥಾನವೆಂಬ ಸ್ವರ್ಗದ ತುಣುಕು - 10 ಖ್ವಾಜಾ ಮೊಯಿನುದ್ದೀನ ಚಿಸ್ತಿ ಸನ್ನಿಧಿಯಲ್ಲಿ -ಲಕ್ಷ್ಮೀಕಾಂತ ಇಟ್ನಾಳ

ರಾಜಸ್ಥಾನವೆಂಬ ಸ್ವರ್ಗದ ತುಣುಕು - 10 ಖ್ವಾಜಾ ಮೊಯಿನುದ್ದೀನ ಚಿಸ್ತಿ ಸನ್ನಿಧಿಯಲ್ಲಿ -ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

       ಉದಯಪುರದ ಸಿಟಿಪ್ಯಾಲೇಸ್ನಿಂದ ಈಗ ನಾವು ಸರೋವರವೊಂದನ್ನು ಸುತ್ತುಹಾಕುತ್ತ ಶಿಲ್ಪಗ್ರಾಮದೆಡೆಗೆ ತೆರಳಿದೆವು. ಈ ಶಿಲ್ಪಗ್ರಾಮದ ಕುರಿತು ಈಗಾಗಲೇ ಈ ಲೇಖನಮಾಲೆಯ ಹಿಂದಿನ ಕಂತಿನಲ್ಲಿ ವಿಚಾರಗಳನ್ನು ಹಂಚಿಕೊಂಡಿರುವುದನ್ನು ನೆನಪಿಸಲು ಬಯಸುತ್ತೇನೆ. ಯಾರೇ ಕಲಾಕಾರರಿರಲಿ, ಕಲಾಪ್ರೇಮಿಗಳಿರಲಿ, ಜನಪದೀಯ ಈ ನೆಲದ ಜನಸಂಪ್ರದಾಯಗಳನ್ನು ತಿಳಿದುಕೊಳ್ಳುವ ಬಯಕೆಯುಳ್ಳ ಸಹಜ ಆಸಕ್ತರು ಈ ಶಿಲ್ಪಗ್ರಾಮಕ್ಕೊಮ್ಮೆ ಭೇಟಿ ನೀಡಲೇಬೇಕೆಂಬ ಹಕ್ಕೊತ್ತಾಯ ನನ್ನದು. ನಮ್ಮ ಆಸಕ್ತಿಗೂ ಮೀರಿ ಅಲ್ಲಿ ಆ ಗ್ರಾಮವನ್ನು ಸುಮಾರು ಎಪ್ಪತ್ತು ಎಕರೆಗಳಲ್ಲಿ ಜನಪದೀಯವಾಗಿಯೇ, ಗ್ರಾಮೀಣ ಸೊಗಡಿನಿಂದಲೇ, ಸ್ಥಳೀಯ ಕಲ್ಲು ಮಣ್ಣುಗಳಿಂದಲೇ, ಅನೇಕ ತರಹದ ಜನಪದೀಯ ಜನಾಂಗಗಳ ಜೀವಂತ ಉಸಿರಾಡುವ ಭಾರತೀಯ ಆತ್ಮವೊಂದನ್ನು ಅಲ್ಲಿ ನೀರೆರೆದು ಪೋಷಿಸಿ ನೆಡಲಾಗಿದೆ.

       ಪ್ರತಿವರ್ಷವೂ ಡಿಶೆಂಬರ 20 ರಿಂದ 30 ರವರೆಗೆ ಶಿಲ್ಪಗ್ರಾಮ ಫೆಸ್ಟಿವಲ್(ಹಬ್ಬ) ನ್ನು ಶಿಲ್ಪಗ್ರಾಮ ಆಡಳಿತದಿಂದ ಆಯೋಜಿಸಲಾಗುತ್ತದೆ. ಅದರಲ್ಲಿ ಎಲ್ಲಾ ತರದ ಥೇಟರ್ ಕಲಾವಿದರ ನಾಟಕಗಳನ್ನೊಳಗೊಂಡಂತೆ, ಜನಪದೀಯ ವಿವಿಧ ಕಲೆಗಳ ಕಾರ್ಯಕ್ರಮಗಳನ್ನು, ಕಲಾಕಾರರನ್ನು, ಸಂಗೀತ ಸಾಧಕರನ್ನು ಆಹ್ಹಾನಿಸಿ ಪರಿಚಯಿಸುವ ಸತ್ ಸಂಪ್ರದಾಯ ಮನದೂಗಿಸುತ್ತದೆ. ನಮ್ಮಲ್ಲಿಯೂ ಕೂಡ ಇಂತಹ ಪ್ರಯತ್ನಗಳು ಆಗುತ್ತಿರಬಹುದು. ಕಲೆಗಳು ನಿಲುಕಲಾರದ ನೆಲೆಯಲ್ಲಿರಬಾರದು. ಮಾಡುತ್ತಿದ್ದೇವೆ ಎಂದಾದರೆ ಎಷ್ಟು ಶಾಲೆಯ ಮಕ್ಕಳೆದೆಗೆ ನಾವು ಈ ಕಲೆಗಳನ್ನು ಉಣಿಸಿದ್ದೇವೆ ? ಯಾವ ಶಾಲೆಯ ಮಗು ಇಂದು ರಂಗಗೀತೆ, ಜನಪದ ಗೀತೆ ಹಾಡುತ್ತದೆ. ಇಲ್ಲವೇ ಇಲ್ಲ ಅಲ್ಲವೇ. ಇವುಗಳಲ್ಲಿ ಒಂದಿಷ್ಟಾದರೂ ಕಲೆಗಳನ್ನು ಒಯ್ದು ಅವರಿಗೆ ಖುದ್ದು ಕೇಳಿಸಲಾಗಿದೆಯೇ, ಪರಿಚಯಿಸಲಾಗಿದೆಯೇ ಒಮ್ಮೆಯಾದರೂ. ಇಲ್ಲ. ಖಂಡಿತ ಇಲ್ಲ. ಇದೇ ನಾವು ಸೋತಿದ್ದೇವೆ ಎಂದು ಹೇಳುವುದು. ನಮ್ಮ ನೆಲದ ಶತಮಾನಗಳ ವಿವಿಧ ಕಾಲಘಟ್ಟಗಳನ್ನು ಬಾಯಿಂದ ಬಾಯಿಗೆ ಸಾಗಿಸಿದ ಇತಿಹಾಸ, ಸಂಗೀತವನ್ನೇ ನಾವು ಮರೆತುಬಿಟ್ಟಿದ್ದೇವೆ.

      ಇವುಗಳನ್ನೆಲ್ಲ ನಮ್ಮ ಪೀಳಿಗೆಗೆ ತಲುಪಿಸಲು, ಇಂತಹ ಹಲವಾರು ಆಯೋಜಿತ ಮಾನದಂಡಗಳಿಂದ, ಇವೆಲ್ಲವುಗಳಿಗೆ ಮರುಜೀವಕೊಡುವ ಕೆಲಸವಾಗಬೇಕಿದೆ., ಹೇಗೆ ಇನ್ನಷ್ಟು ಬಹಳಷ್ಟು ಜನರೆದೆಗಳಿಗೆ, ಅವರ ಬಾಗಿಲುಗಳಿಗೆ ಅದನ್ನು ತಲುಪಿಸಬಹುದು ಎನ್ನುವ ಕುತೂಹಲ ಉಳ್ಳವರು ಇದಕ್ಕೆ ಭೇಟಿ ನೀಡಲೆಂಬ ಕೋರಿಕೆ ನನ್ನದು. ದೇಶವಿದೇಶಗಳಿಂದ ಸುಮಾರು ಐದಾರು ಲಕ್ಷದಷ್ಟು ಆಸಕ್ತರು ಮುಗಿಬೀಳುವ ಈ ಜಾತ್ರೆಯು ದೇಶದ ಅನೇಕ ಕುತೂಹಲಗಳನ್ನು ಒಳಗೊಂಡ ವೈವಿಧ್ಯಪೂರ್ಣ ಆಯೋಜನೆಗಳಲ್ಲೊಂದು. ಮಿಸ್ ಮಾಡ್ಬೇಡಿ. ಸಾಯೋದ್ರೊಳಗೊಮ್ಮೆ…….

      ಹೊಸ ಹೊಸ ವಿಚಾರಗಳ ತಾಕಲಾಟಗಳು ತಲೆತುಂಬ ಈಗ. ಇವೆಲ್ಲವುಗಳನ್ನು ಶಿಲ್ಪಗ್ರಾಮದಿಂದ ಹೊತ್ತುತಂದು, ಅಲ್ಲಿಂದ ಹೊರಬರುತ್ತ, ಅಲ್ಲಿಯೇ ಸಿಹಿ ಸಿಹಿಯಾದ ಸೀಬೆ ಹಣ್ಣುಗಳನ್ನು ಸವಿಯುತ್ತ, ಉದಯಪುರವೆಂಬ ಕನಸಿನ ತೇಲುವ ಮಾಯಾ ಶ್ವೇತನಗರಿಯನ್ನು ಬೆನ್ನು ಹಿಂದೆ ಬಿಡುತ್ತ ಅಜಮೇರ್ ದೆಡೆಗೆ ಹೊರಟೆವು.

     ದಾರಿಯ ಎಡಬಲಕ್ಕೆ ತುಸು ಅಡವಿಯಂತಹದು. ಬೆಟ್ಟಗಳು ಪ್ರಸ್ಥವಾಗುತ್ತ, ಮುಂದೆ ಬರಬರುತ್ತ ಹೊಲಗಳ ಸಮತಟ್ಟು. ಇದೇ ದಾರಿಯಲ್ಲಿ ಅಲ್ಲವೇ ಚಿತ್ತೋರಿನ ರಾಣಾ ಉದಯಸಿಂಗ್, ರಾಣಾ ಪ್ರತಾಪರೊಂದಿಗೆ ಯುದ್ಧ ಮಾಡುವ ಸಂದರ್ಭಗಳಲ್ಲಿ, ಮೊಘಲರ ಅದರಲ್ಲೂ ಮುಖ್ಯವಾಗಿ ಅಕ್ಬರನ ಅಗಾಧ ಸೈನ್ಯ ಇಲ್ಲೇ ನೆರೆಹೊರೆಗಳ ನೆಲೆಗಳಲ್ಲಿ ತಂಗಿ, ಮುಂಪಡೆ, ಹಿಂಪಡೆಗಳಾಗಿ ಕೆಲವೊಮ್ಮೆ ಅಜ್ಮೇರಿನತ್ತ ಪ್ರಯಾಣಿಸಿ ತಂಗುತ್ತಿದ್ದುದು. ಅವರ ಕಾಲ್ದಳಗಳ, ಕುದುರೆಪಡೆಗಳ ಖುರಪುಟಗಳ ಸದ್ದು, ಕುದುರೆಗಳ ಹೇರವ, ಒಂಟೆಗಳ ಕೆಣೆತ, ಆನೆಗಳ ಘೀಳಿಡುವ ಸದ್ದು ಕೇಳುವುದೇನೋ ಎಂದು ಕಣ್ಣಾರೆ ಕಿವಿಯಾದೆ. ತಣ್ಣನೆಯ ಗಾಳಿಮಾತ್ರ, ಅಂದಿನ ಕುರುಹುಗಳನ್ನು ಹುದುಗಿಸಿ ಅದರಲ್ಲಿ ಬೆರೆತು ಕರಗಿದೆಯಷ್ಟೆ. ಅದೇ ದಾರಿಯ ಕಣ ಕಣಗಳಲ್ಲಿ. ಇತಿಹಾಸ ಮರೆಯಲಾರದ ಅಗಣಿತ ವಿಸ್ಮಯ ಘಟನೆಗಳನ್ನೆಲ್ಲ ತನ್ನಲ್ಲಿ ಹುದುಗಿಸಿಕೊಂಡ ನೆಲ ತನ್ನೆದೆ ತೆರೆದುಕೊಂಡು ಸದ್ದಿಲ್ಲದೇ ನಮ್ಮ ಮುಂದೆಯೇ ಉದ್ದಕ್ಕೂ ಚಾಚುತ್ತ ಮಲಗಿಬಿಟ್ಟಿತ್ತು , ಅವೆಲ್ಲ ಯುದ್ಧದ ಕ್ಷಣಗಳನ್ನು ಕುಳಿತು ಬೆರಗಿನಿಂದ ನೋಡಿದ ಸುತ್ತ ಬೆಟ್ಟಗಳು ಕಣ್ಬಿಟ್ಟು ಹಾಗೆಯೇ ಕುಳಿತಿವೆ ಇನ್ನೂ ಅಲ್ಲಲ್ಲಿ,, ದಾರಿಯ ಅಕ್ಕ ಪಕ್ಕಗಳಲ್ಲಿ, ರಾಣಾ ಪ್ರತಾಪನನ್ನು ಅವನ ಬಲಗೈ ಬಂಟ ‘ಚೇತಕ’ ನನ್ನು ತಮ್ಮ ಒಡಲೊಳಗಿಟ್ಟು ಸಾಕಿಕೊಂಡಿದ್ದವಲ್ಲವೇ ಈ ಬೆಟ್ಟಗಳು. ನಿಮ್ಮ ಎದೆಯೊಳಗೆ ಹುದುಗಿದ ಆತ್ಮಗಳೇ ನಿಮಗೆ ಸಲಾಮ್ ಎಂದೆ ಅವುಗಳತ್ತ ಪ್ರೀತಿಯಿಂದ......

     ಅದೇ ಅಕ್ಬರನಂತಹ ಅಕ್ಬರ, ಬಹತೇಕ ಇಡೀ ಭರತಖಂಡದ ಚಕ್ರವರ್ತಿ ಸಾಮ್ರಾಟನೊಬ್ಬ ಕೇವಲ ಬರಿಗಾಲಿನಲ್ಲಿ ಅಜ್ಮೇರಿನ ಖ್ವಾಜಾ ಮೊಯಿನುದ್ದೀನ ಚಿಸ್ತಿ ದರ್ಗಾಕ್ಕೆ ನಡೆದು ಬರುವಂತೆ ಮಾಡಿದ, ಅವನನ್ನು ಆ ರೀತಿ ಕರೆತಂದ ದಾರಿ ಇದೇ ಅಲ್ಲವೇ. ಅವನ ಸಾಮ್ರಾಜ್ಯ ವಿಸ್ತಾರದ ದಾಹ ಹೀಗೆ ಮಾಡಿಸಿತ್ತು . ಚಿತ್ತೊರ ಎಂಬ ಶೂರ ಕೋಟೆಯು ಒಲಿಯಲೆಂದು ಅಂದು ಒಂದೊಂದು ಹೆಜ್ಜೆಯಲ್ಲೂ ಬೇಡುತ್ತ ನಡೆದಿದ್ದನಲ್ಲವೇ?. ಆ ಒಂದೊಂದು ಹೆಜ್ಜೆಗೂ ರಾಣಾ ಪ್ರತಾಪನ ತಿರುಗಿ ಬೀಳುವ ದಾಳಿಯ ಅಂಜಿಕೆ ಇದ್ದಿರಲೂಬಹುದು ಅಲ್ಲವೇ. ಅಕ್ಬರನನ್ನು ಹಣಿಯಲು ಅಹೋರಾತ್ರಿ ಇಪ್ಪತ್ತೈದು ಮೂವತ್ತು ವರುಷ ಕಾಡಿನಲ್ಲಿ ಅಲೆಯುತ್ತಿದ್ದನಲ್ಲವೇ ರಾಣಾ ಪ್ರತಾಪ. ಚಿತ್ತೋರನ್ನು ಮರುವಶಪಡಿಸಿಕೊಳ್ಳುವವರೆಗೆ ನೆಲದ ಮೇಲೆಯೇ ಮಲಗುವುದಾಗಿ ಶಪಥ ತೊಟ್ಟ ಪ್ರತಾಪರನ್ನು ಆ ಕಾಡಿನ ಬೆಟ್ಟಗುಡ್ಡಗಳ ಗುಹೆಗಳಲ್ಲಿ ಶೂರ ಬಿಲ್ಲುಗಾರರು, ಆದಿವಾಸಿಗಳು ಪ್ರತಾಪರನ್ನು ತಮ್ಮ ಕಣ್ಣ ರೆಪ್ಪೆಗಳಲ್ಲಿ ಕಾಪಾಡಿಕೊಳ್ಳುತ್ತ, ವೈರಿಯೊಂದಿಗೆ ಸೆಣಸುತ್ತ ಬಂದದ್ದು ಸಾಮಾನ್ಯವೇ. ನಮ್ಮ ಮದಕರಿ ವೆಂಕಟಪ್ಪ ನಾಯಕನೂ ತನ್ನ ಸೇನೆಯಲ್ಲಿದ್ದ ಬಾಡಿಗೆ ಪಡೆಗಿಂತ ಜೀವಕ್ಕೆ ಜೀವ ಕೊಡುವ ನಿಷ್ಠಾವಂತ ಗಿರಿಜನ ಪಡೆಯನ್ನು ಮುತುವರ್ಜಿ ವಹಿಸಿ ಹುಟ್ಟು ಹಾಕಿದ್ದರೆ, ಅವನೆಂದೂ ಸೋಲುತ್ತಿರಲಿಲ್ಲ ಎಂದೆನಿಸುತ್ತದೆ.. ಆದರೆ ಇತಿಹಾಸಕ್ಕೆ ಅದು ಬೇಕಿರಲಿಲ್ಲವೆಂದು ಕಾಣುತ್ತದೆ.

       ಇರಲಿ. ..ನಾನೂ ಮಹಾನ್ ಸೂಫಿ ಸಂತ ಶರೀಫ್ ಖ್ವಾಜಾ ಮೊಯಿನುದ್ದೀನ ಚಿಸ್ತಿಯ ದಗರ್ಾದ ಪುಣ್ಯ ದರ್ಶನಕ್ಕೆ ಈಗ ಅದೇ ದಾರಿಯಲ್ಲಿ ಪಯಣಿಸುತ್ತಿರುವೆ ಯುಗಗಳ ನಂತರ….. ಉದಯಪುರದಿಂದ ಸುಮಾರು 270 ಕಿಮೀ ದೂರ,. ಈಗ ಅದು ರಾಷ್ಟ್ರೀಯ ಹೆದ್ದಾರಿ -8. ಸುಮಾರು ನಾಲ್ಕು ಗಂಟೆಗಳ ಪಯಣದ ನಂತರ ನಾವು ಅಜ್ಮೇರ್ನ್ನು ತಲುಪಿದೆವು. ಮೊಘಲ್ರ ವಶವಾಗುವುದಕ್ಕಿಂತ ಮೊದಲು, ದೆಹಲಿ ಗದ್ದುಗೆ ಆಳುತ್ತಿದ್ದ ಕೊನೆಯ ಹಿಂದು ಸಾಮ್ರಾಟ ಮಹಾನ್ ಶೂರ ರಾಜಾ ಪೃಥ್ವಿರಾಜ್ ಚೌಹ್ಹಾನ್ ದೆಹಲಿಯೊಂದಿಗೆ ಅಜ್ಮೇರಿನ ರಾಜಧಾನಿಯನ್ನು ಆಳುತ್ತಿದ್ದ ಎಂಬುದು ಕೂಡ ಇಲ್ಲಿ ಪ್ರಸ್ತುತ.

        ಅಜಮೇರ್ ತಲುಪಿದ ತಕ್ಷಣ ವಾಹನವನ್ನು ಬಹಳಷ್ಟು ದೂರವೇ ನಿಲ್ಲಿಸಬೇಕಾಗುತ್ತದೆ. ಏಕೆಂದರೆ ದರ್ಗಾ ಇರುವುದು ಇಕ್ಕಟ್ಟಾದ ಊರೊಳಗಿನ ಗಲ್ಲಿಗಳಲ್ಲೊಂದರಲ್ಲಿ. ದರ್ಗಾ  ಶರೀಫಗೆ ಹೋಗಬೇಕೆನ್ನುವಾಗಲೇ, ಸರವನ್ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ನೀಡಿದ. ತನಗೆ ಪರಿಚಿತ ಗೆಳೆಯ ಸಯ್ಯದ ಎಂಬ ಗೈಡ್ನನ್ನು ನಮ್ಮೊಡನೆ ಜೋಡಿಸಿದ. ಸೈಯ್ಯದ್ ಮೊದಲು ನಮ್ಮಲ್ಲಿಯ ಆಭರಣ, ಹಣ ಇತ್ಯಾದಿಗಳನ್ನು ಇಲ್ಲಿಯೇ ನಮ್ಮ ವಾಹನದಲ್ಲಿಯೇ ಭದ್ರವಾಗಿ ತೆಗೆದಿರಿಸಲು ಸೂಚಿಸಿದ. ನಮಗೆ ಮುಜುಗುರವಾದರೂ ಅಲ್ಲಿರುವ ಸಂದಣಿಯಲ್ಲಿ ಬಡತನದ ಸುಳಿಯಲ್ಲಿ ಸಿಲುಕಿದ ಅಸಹಾಯಕ ಕೈಗಳಿಂದ ಏನಾದರೂ ಹೆಚ್ಚು ಕಡಿಮೆಯಾಗದಿರಲಿ ಎಂಬುದು ಅವರ ಮುಂಜಾಗರೂಕತೆ. ಅಯ್ಯಾ, ಹಸಿವೇ, ಬಡತನವೇ ನೀನಿಲ್ಲಿಗೂ ಬಂದೆಯಾ? ಎಂದು ಕೇಳಬೇಕೆಂದವನು ಸುಮ್ಮನೆ ಅವರು ಹೇಳಿದಷ್ಟು ಮಾಡಿದೆ. ಹಸಿವಿನ ಮುಂದೆ ದೇವರೂ ಅಸಹಾಯಕ ಎಂಬುದು ಎಷ್ಟೊಂದು ಸತ್ಯ ಸಂಗತಿ ಅಲ್ಲವೇ . ಇಲ್ಲಿನ ಟ್ರಾವೆಲಿಂಗ್ ಎಜೆನ್ಸಿಗಳು, ಡ್ರೈವರುಗಳು ತಮ್ಮ ಪ್ರವಾಸಿಗರ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಅದರಲ್ಲಿ ಎಳ್ಳಷ್ಟೂ ಸಂಶಯವೇ ಬೇಡ. ಅಷ್ಟೊಂದು ನಿಷ್ಠಾವಂತರು. ಹೀಗಾಗಿ ನಮಗೆ ತಕ್ಷಣಕ್ಕೆ ಎಷ್ಟು ಬೇಕೊ ಅಷ್ಟನ್ನು ಮಾತ್ರ ತೆಗೆದುಕೊಂಡು, ಉಳಿದುದನ್ನು ನಿಶ್ಷಿಂತೆಯಿಂದ ನಮ್ಮಲ್ಲಿರುವ ತುಸು ಹಣ ಆಭರಣಗಳನ್ನು ಅಲ್ಲಿಯೇ ವಾಹನದಲ್ಲಿ ಬ್ಯಾಗೊಂದರಲ್ಲಿ ತೆಗೆದಿರಿಸಿದೆವು.

       ಈಗ ನಾವು ಮಹಾನ್ ಸಂತ ಶರೀಫ್ ಖ್ವಾಜಾ ಮೊಯಿನುದ್ದೀನ್ ಚಿಸ್ತೀ ದರ್ಗಾ ದೆಡೆಗೆ ಕಾಲುನಡಿಗೆಯಲ್ಲಿ ನಡೆಯ ಹತ್ತಿದೆವು. ಬಲು ಸಣ್ಣ ಸಣ್ಣ ಸಂದಿಗಳು ನಮ್ಮನ್ನು ಎದುರ್ಗೊಂಡು ದರ್ಗಾದೆಡೆಗೆ ಕರೆದೊಯ್ಯುತ್ತಿದ್ದವು. ಕಲ್ಲು ಚಪ್ಪಡಿ ಹೊದಿಸಿದ ಕೇವಲ ಆರೇಳು ಫೂಟುಗಳ ಅಗಲವಿರುವ ಬಡ ಸಂದಿಗಳ ಮೂಲಕ ನಡೆಯುವುದೇ ಒಂದು ಮಜಕೂರ ಸಂಗತಿ. ಎರಡೂ ಬದಿಗೂ ಎತ್ತರೆತ್ತರ ಗೋಡೆಗಳು, ಸುಮಾರು ಮೂರು ಮೂರು ಅಂತಸ್ತಿನ ಕಲ್ಲು ಇಟ್ಟಿಗೆಗಳಿಂದ ನಿಮರ್ಿಸಿದ ಹಳೆಯ ಮನೆಗಳು. ತಟ್ಟನೇ ಎದುರಿನಿಂದ ಮೋಟರ್ ಸೈಕಲ್ಲೊಂದು ಬುರ್ರನೇ ಬಂದು ಬಿಟ್ಟಿತು, ಕೂಡಲೇ ಸಯ್ಯದ್ನ ಸಲಹೆಯಂತೆ ಒಂದೇ ಕಡೆಗೆ ಗೋಡೆಯ ಕಡೆಗೆ ಮುಖಮಾಡಿ ನಿಂತು ಅದಕ್ಕೆ ದಾರಿ ನೀಡಿದೆವು. ಹೀಗೆ ಮುಂದುವರಿದಂತೆಲ್ಲ ಇದೇ ಅಭ್ಯಾಸ . ಏನೂ ಆಗಿಲ್ಲವೇನೋ ಎನ್ನುವಷ್ಟು ನಿರ್ಲಿಪ್ತತೆ ಅಜ್ಮೇರ್ ಜನಗಳಿಗೂ ಮತ್ತೆ ಆ ರಸ್ತೆಗೂ. ನಮಗೋ ಮಜವೋ ಮಜ. ಜೇಮ್ಸ್ ಬಾಂಡ್ ಚಿತ್ರವೊಂದರ ಚೇಜ್ನಲ್ಲಿ ಓಡಾಡಿದಂತೆ ಚಿಕ್ಕ ಚಿಕ್ಕ ಸಂದಿಗೊಂದಿಗಳು. ಅದೊಂದು ಜಿಲ್ಲಾ ಸ್ಥಳವಿದ್ದರೂ, ನಾವು ನಡೆಯುತ್ತಿದ್ದುದು ಹಳೆಯ ಅಜ್ಮೇರ್ ಇರಬಹುದು. ಹೀಗಾಗಿ ತುಂಬ ಇಕ್ಕಟ್ಟು.

     ಗುಲ್ಜಾರರ, ‘ಇನ್ ರೇಶಿಮೆ ರಾಹೋಂ ಮೆ , ಇಕ್ ರಾಹ ತೊ ವೋ ಹೋಗೀ, ತುಮ್ ತಕ್ ಜೋ ಪಹುಂಚತೀ ಹೈ, ಉಸ್ ಮೋಡ್ ಪೆ ಜಾತೇ ಹೈಂ’ ಎನ್ನುವಂತೆ ಶರೀಫರೆಡೆಗೆ ಕರೆದೊಯ್ಯುವ ದಾರಿಯದು. ನಮಗಾಗಿ ತೆರೆದುಕೊಳ್ಳುತ್ತಿತ್ತು , ನಮ್ಮ ಮುಂದೆ ಮುಂದೆ.

      ಖ್ವಾಜಾ ಮೊಯಿನುದ್ದೀನ್ ಚಿಸ್ತಿ ಯವರ ದರ್ಗಾಕ್ಕೆ ದರ್ಗಾ ಶರೀಫ ಹಾಗೂ ಅಜ್ಮೇರ್ ಶರೀಫ ಎಂತಲೂ ಕರೆಯುವರು. ಖ್ವಾಜಾ ಮೊಯಿನುದ್ದೀನ ಚಿಸ್ತಿ ಇಂದಿನ ಅಪಘಾನಿಸ್ತಾನ ಇರಾನ ಮಧ್ಯದ ಪ್ರದೇಶವೊಂದರಿಂದ ಲಾಹೋರ ಮೂಲಕ ಅಜ್ಮೇರ್ಗೆ ಬಂದು ನೆಲೆಸಿದ. ಶರೀಫರ ಕಾಲಾವಧಿ ಕ್ರಿಶ 1141 ರಿಂದ 1236 ರವರೆಗೆ. ಇವರು ಸಯ್ಯದ್ರಾಗಿದ್ದು ಮೊಹಮ್ಮದರ ವಂಶಸ್ಥರೆಂದು ನಂಬಲಾಗಿದೆ. ಇಸ್ಲಾಮ್ನ ತತ್ವಜ್ವಾನಿ. ಗುರು ಉಸ್ಮಾನ್ ಹರೂನಿಯೊಂದಿಗೆ ಮಧ್ಯಪ್ರಾಚ್ಯದ ಮಕ್ಕಾ ಮದೀನಾಗಳಿಗೆ ಭೇಟಿನೀಡಿದ್ದಲ್ಲದೇ, ..ತತ್ವಜ್ಞಾನವನ್ನು ಅರಸುತ್ತ ಸಮರಖಂಡ, ಬುಖಾರಾಗಳಿಗೆ ತೆರಳಿ, ಇಸ್ಲಾಮ್ನ ಅಧ್ಯಯನ ಮಾಡಿದರು. ಅವರಿಗೆ ಬಿದ್ದ ಕನಸೊಂದರಲ್ಲಿ ಮೊಹಮ್ಮದ್ ಇವರಿಗೆ ಅಜ್ಮೇರ್ಗೆ ತೆರಳಲು ಆದೇಶ ನೀಡಿದ್ದರಿಂದ, ಈ ಕನಸೇ ಇವರನ್ನು ಲಾಹೋರಿನ ಮುಖಾಂತರ ಅಜ್ಮೇರಿಗೆ ಕರೆತಂತು.

      ಇಲ್ಲಿಂದಲೇ ಚಿಸ್ತಿ ಪರಂಪರೆ ಶುರುವಾಯಿತು ನೋಡಿ….. ಈ ಪರಂಪರೆಯ ಸಂತರು ಸೂಫೀ ಪಂಥದ ಬಹುಶ್ರೇಷ್ಠ ಸಂತರಲ್ಲಿ ಎಣಿಕೆಸಲ್ಪಡುವರು. ಅವರಲ್ಲಿ ಮುಖ್ಯವಾಗಿ ಕುತ್ಬುದ್ದೀನ ಭಕ್ತಿಯಾರ್ ಕಾಕಿ, ಫರೀದುದ್ದೀನ, ನಿಜಾಮುದ್ದೀನ ಔಲಿಯಾ ಮುಂತಾದವರು ಈ ಪರಂಪರೆಯ ಬಹುದೊಡ್ಡ ಹೆಸರುಗಳು. ಸೂಫಿ ಪಂಥದ ಈ ಚಿಸ್ತಿ ಸಂತರು ಮುಸ್ಲಿಮ್ ಹಾಗು ಮುಸ್ಲಿಮರಲ್ಲದ ಸಮುದಾಯಗಳನ್ನು ಸಮಷ್ಟಿಯಾಗಿಯೇ ಸ್ವೀಕರಿಸಿ, ಎರಡೂ ಸಮುದಾಯಗಳಲ್ಲಿ ಸಾಮರಸ್ಯ ಬೆಸೆಯುವಲ್ಲಿ ಬಹುದೊಡ್ಡ ಪಾತ್ರ ನಿರ್ವಹಿಸಿತ್ತ ಬಂದಿರುವುದು ಇತಿಹಾಸಕ್ಕೆ ನೀಡಿದ ಬಹುದೊಡ್ಡ ಕೊಡುಗೆಗಳಲ್ಲೊಂದು. ಸೂಫಿ ಎಂಬ ವಿಶಿಷ್ಟ ಸಂಗೀತದ ಮೂಲಕ ತಮ್ಮ ಬೋಧನೆಗಳನ್ನು ಬೋಧಿಸುತ್ತ ಜನರ ಪ್ರೀತಿ ಗಳಿಸಿದರು. ಈಗ ಸೂಫಿ ಸಂಗೀತವೆಂದೆ ಅದು ಜನಪ್ರಿಯತೆ ಪಡೆದಿದೆ. ಸೂಫೀ ಹಾಡುಗಳನ್ನು ಕೇಳುವವರು ನಿಜಕ್ಕೂ ಖುದಾನೊಂದಿಗೆ, ದೇವರೊಂದಿಗೆ ಕನೆಕ್ಟ್ ಆಗುವರೆನ್ನುವ ಮಾತು ಸುಳ್ಳಲ್ಲವೆಂದೆನಿಸುತ್ತದೆ. ಅಷ್ಟು ಸಮ್ಮೋಹಿಸುವ ಸಂಗೀತ ಪ್ರಕಾರವದು.

      ಶರೀಫರು ತಮ್ಮ ಅನುಯಾಯಿಗಳಿಗೆ ಪರಧರ್ಮ ಸಹಿಸ್ಣುತೆ, ನದಿಯಂತಹ ಮುಕ್ತತೆ, ಸೂರ್ಯನ ಬೆಳಕಿನಂತಹ ಪ್ರೀತಿ, ಭೂಮಿಯಂತಹ ಆತಿಥ್ಯ ಗುಣಗಳನ್ನು ಬೆಳಸಿಕೊಳ್ಳಲು ಕರೆನೀಡಿ , ಅದರಂತೆ ಬದುಕಿ ತೋರಿದವರು. ಹೀಗಾಗಿ ಅವರ ಭಕ್ತವೃಂದದಲ್ಲಿ ಹಿಂದು ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದವಿಲ್ಲ. ಭಕ್ತಿಯ ಸೇವೆಯೆಂದರೆ ಅಸಹಾಯಕರ ಬೇಡಿಕೆಗಳನ್ನು ಈಡೇರಿಸುವುದು, ಹಾಗೂ ಹಸಿವಿನಿಂದ ಬಳಲುವವರಿಗೆ ಅನ್ನ ನೀಡುವುದೇ ನಿಜವಾದ ದೇವರ ಸೇವೆ ಎಂಬುದು ಶರೀಫರ ಚಿಂತನೆ, ಬೋಧನೆಗಳು ಜನಮಾನಸಕ್ಕೆ ಬಲು ಬೇಗ ತಲುಪಿತು.

      ಕೊನೆಯ ತಿರುವು ಬರುತ್ತಲೇ ಸೈಯ್ಯದ್ ನಮಗೆ ತಲೆಮೇಲೆ ಏನಾದರೂ ಹಾಕಿಕೊಳ್ಳಿ ಸರ್ ಎಂದು ಸೂಚಿಸಿದ. ನಾವು ಹಾಗೆ ಮಾಡಿದೆವು ಅಲ್ಲೆಲ್ಲ ಭಕ್ತರ ಜಾತ್ರೆಯೇ ಜಾತ್ರೆ. ಎಲ್ಲಿ ನೋಡಿದರೂ ಭಕ್ತರ ದಂಡು. ಬಹುತೇಕರೆಲ್ಲ ಪ್ರವಾಸಿಗರೇ…. ಈಗ ನಮಗೆ ಶರೀಫ ಮೊಯಿನುದ್ದೀನ್ ಚಿಸ್ತಿ ದರ್ಗಾದ ದಾರಿ ತೆರೆದುಕೊಂಡಿತು. ಹೊರಾಂಗಣದಲ್ಲಿಯೇ ಸಾಲು ಸಾಲು ಹೂ, ಚಾದರುಗಳ ಅಂಗಡಿಗಳು. ಅಂಗಡಿಯೊಂದರಲ್ಲಿ ಗುಲಾಬಿ ಹೂವುಗಳನ್ನು ಹಾಗೂ ಚಾದರೊಂದನ್ನು ಕೊಂಡು ನಿಜಾಮ್ ಗೇಟ್ ಎಂಬ ಹೆಬ್ಬಾಗಿಲನ್ನು ಪ್ರವೇಶಿಸಿದೆವು. ಇನ್ನಷ್ಟು ಮುಂದಕ್ಕೆ ಹೆಜ್ಜೆ ಹಾಕಿದವರಿಗೆ ಶಹಾಜಹಾನ್ ಹೆಬ್ಬಾಗಿಲು ಎದುರಾಗಿತ್ತು. ಅದನ್ನು ದಾಟಿದರೆ ಬುಲಂದ ದರ್ವಾಜಾ ಎಂಬ ಕೊನೆಯ ಬಾಗಿಲು ದರಗಾಕ್ಕೆ  ತೆರೆದುಕೊಳ್ಳುತ್ತದೆ. ಈಗ ದರ್ಗಾ ಶರೀಫ ಕಣ್ಣಮುಂದೆಯೇ. ಈಗ ನಾವು ದರ್ಗಾದ ಆವರಣದಲ್ಲಿದ್ದೆವು. ಓಹ್, ಎಂತಹ ಶಾಂತಿ, ನೆಮ್ಮದಿ, ಭಕ್ತಿ , ಸಾಮರಸ್ಯ ನೆಲೆಸಿದ ತಾಣವಿದು. ಶರೀಫರ ದರ್ಶನಕ್ಕೆ ಸಣ್ಣ ಸಾಲೊಂದಿತ್ತು. ಭಕ್ತರ ಸಾಲುಗಳಲ್ಲಿ ನಿಂತು ಒಳಪ್ರವೇಶವಾಗುತ್ತಲೇ ಒಂದು ರೀತಿಯ ಕೃತಕೃತ್ಯತೆ ಮೈಯಲ್ಲಾ ಸಂಚರಿಸಿ, ವಿನೀತ ಭಾವದೊಂದಿಗೆ ಶರೀಫರ ಗದ್ದುಗೆಗೆ ವಂದಿಸಿದೆವು. ನೆಮ್ಮದಿಯಿಂದ ಉದ್ದಕ್ಕೂ ಮಲಗಿದ ಶರೀಫರ ಗದ್ದುಗೆಗೆ ನಮ್ಮ ಭಕ್ತಿ ಭಾವಗಳ ಕೈಗಳಿಂದಲೇ ಚಾದರನ್ನು ಹೊದಿಸಲು ಅನುವು ಮಾಡಿಕೊಟ್ಟರು ಅಲ್ಲಿಯ ಮೌಲ್ವಿಗಳು…ಸಂಜೆಯ ರಸಮ್ ಗಳು ನಡೆದಿದ್ದವು,. ಅಲ್ಲಿ ನವಿಲುಗರಿಗಳ ಚಾಮರಗಳಿಂದ ಭಕ್ತರಿಗೆಲ್ಲ ಆಶಿರ್ವದಿಸುತ್ತಿದ್ದರು. ಸಣ್ಣ ಸಂದಣಿಯಲ್ಲೂ ಸೈಯ್ಯದ ನಮಗೆ ಚಿಸ್ತಿ ಶರೀಫ ಸಾಹೇಬರ ಗದ್ದುಗೆಗೆ ಮುಟ್ಟಿಸಿ ನಮ್ಮ ಕೈಗಳಿಗೆ ದಾರಗಳನ್ನು ಕಟ್ಟಿದ. ಇನ್ನಷ್ಟು ನಮಗೆ ಕೊಟ್ಟು, ನಮ್ಮ ನಮ್ಮ ಪ್ರಾರ್ಥನೆಗಳನ್ನು ಮಾಡಿಕೊಳ್ಳಬಹದು ಎಂದು ಹೇಳಿ ಅಲ್ಲಿಯೇ ಪಕ್ಕದಲ್ಲಿ ನಮಗೆ ಜಾಗ ಮಾಡಿಕೊಟ್ಟ. ಇನ್ನೊಂದು ಬದಿಯಲ್ಲಿ ನಿಂತು ಗುಂಪೊಂದು ಕುರಾನಿನ ಸಾಲುಗಳನ್ನು ಸಾಮೂಹಿಕವಾಗಿ ಪಠಿಸುತ್ತಿತ್ತು. ಬಲು ಭಕ್ತಿಯಲ್ಲಿ ಮಿಂದ ಗಳಿಗೆಗಳವು.

      ಹೀಗೆಯೇ ಕಣ್ಣುಮುಚ್ಚಿ ಶರೀಫರಲ್ಲಿ ಪ್ರಾರ್ಥಿಸುವವನಿಗೆ ಅಸಂಖ್ಯ ಕೋಟಿ ಭಕ್ತಜನ ಕಾಣಹತ್ತಿದರು ಮುಚ್ಚಿದ ಕಣ್ಣಪರದೆಯ ಮುಂದೆ. ಅಲ್ಲಿಯೇ ಪಕ್ಕದಲ್ಲೇ ಯಾರದೋ ಭುಜ ತಾಕಿದಂತಾಯಿತು. ಓಹ್ ಅದು ಶಹಾಜಹಾನ್! ಶಹಾಜಹಾನ್ ನನ್ನ ಪಕ್ಕದಲ್ಲೇ ನಿಂತು ಪ್ರಾರ್ಥಿಸಿದಂತಿತ್ತು, ಕೇಳಬೇಕೆನಿಸಿತು ಅವನಿಗೆ, ನೆನಪಿದೆಯಾ ಶಹಜಹಾಂ, 1627 ರಲ್ಲಿ ಇದೇ ಜಾಗದಲ್ಲಿ ನಿಂತು ನಿನ್ನ ತಂದೆ, ದೊರೆ ಜಹಾಂಗೀರ ತೀರಿಕೊಂಡಾಗ, ನೀನೇ ಮೊಘಲ್ ಸಾಮ್ರಾಟನೆಂದು ಘೋಷಿಸಿಕೊಂಡದ್ದು ಇಲ್ಲಿಂದಲೇ ಅಲ್ಲವೇ, ಮರೆತಿಲ್ಲ ತಾನೇ?,… ಮತ್ತೇ ಈಗ ಜೀವಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಮುಮತಾಜಳನ್ನು ಮರಳಿಸುವ ಭಿಕ್ಷೆ ಕೇಳಬಂದಿರುವೆಯೋ ಹೇಗೋ, ಶರೀಫರಲ್ಲಿ? ಮತ್ತೇನು ಬೇಕಾದೀತು ಸಾಮ್ರಾಟನಿಗೆ, ಮುಮತಾಜಳ ಪಾದಗಳನ್ನು ಸ್ಪರ್ಶಿಸಲು ಹೂಗಳಿಗೆ ಮಾತ್ರ ವಿನಾಯತಿ ಇತ್ತಲ್ಲವೇ! ‘ಪಾಂವ್ ಛೂಲೆನೇದೋ ಫೋಲೋಂ ಕೊ ಇನಾಯತ್ ಹೋಗೀ…’ ಅಂತಹ ಹೂ ಹೃದಯದ ಪ್ರಿಯತಮೆ ಮುಮತಾಜ್ ಈಗ ಎಂದೂ ಮರಳದ ದಾರಿಯಲ್ಲಿ ತೆರಳಿದ್ದು, ಅವಳಿಗಾಗಿ ಏನನ್ನು ಕೇಳುತ್ತಿರಬಹುದು? ‘ಜೋ ವಾದಾ ಕಿಯಾ ಹೋ ನಿಭಾನಾ ಪಡೇಗಾ’ ,….’ ಬಹುಶ: ಅವಳಿಗಾಗಿಯೇ ಬೇಡಿಕೆಯೊಂದನ್ನು ಈಡೇರಿಸಲು ಸಹಾಯವನ್ನೇನಾದರೂ ಕೇಳುತ್ತಿರಬಹುದೇ!. ತನಗಾಗಿ ಬೇಡಲು ಅವನಲ್ಲಿ ಏನೆಲ್ಲವೂ ಇತ್ತಲ್ಲವೇ….ಬೇಡ ಶಹಾಜಹಾನ್ ಮುಮ್ ತಾಜ್ ಳನ್ನು ಮರಳಿಸುವ ಬೇಡಿಕೆಯನ್ನು ಮಾತ್ರ ಶರೀಫರಲ್ಲಿ ಇಡುವುದು ಬೇಡ. ಅದೊಂದು ವಿಧಿಯ ಆಟವಷ್ಟೆ. ಅದನ್ನು ಮನ್ನಿಸಲೇಬೇಕು. ಒಪ್ಪಲೇಬೇಕು ಎಂದು ಹೇಳಬೇಕೆನಿಸಿತು,

      ಅಥವಾ….ಅವಳನ್ನು ಸದಾ ತಾನೆಷ್ಟು ಪ್ರೀತಿಸುತ್ತಿದ್ದೆ ಅನ್ನುವುದನ್ನು ಈ ಇಳಾದೇವಿಯ ಮೇಲೆ ಯಾರೂ ಮುಂದೆಂದೂ ತೋರಲು ಸಾಧ್ಯವಾಗದಂತಹ ಅಗಾಧ ಮಹಲೊಂದನ್ನು ಕಟ್ಟಲು ಬಯಸಿ ಅದನ್ನು ಕಾರ್ಯಗತಗೊಳಿಸಲು ಅನುಮತಿಯ ಆಶೀರ್ವಾದ ಕೋರಿ ಶರೀಫರಲ್ಲಿ ಬಂದಿರಬಹುದೇ! ಏನು ಕೇಳಿಕೊಳ್ಳುತ್ತಿದ್ದನೋ ಶಹಾಜಹಾನ್! ಇದೇ ನಾನು ನಿಂತ ಜಾಗದಲ್ಲಿ ಮತ್ತೆ ಮತ್ತೆ ನಿಂತು ಪ್ರಾರ್ಥಿಸಿದ್ದನಲ್ಲವೇ ಅಂದು, ನನಗಿಂತ ಯುಗಗಳಷ್ಟು ಹಿಂದೆ….. ‘ಛೋಡ ದೇ ಸಾರೀ ದುನಿಯಾ ಕಿಸೀ ಕೆ ಲಿಯೆ,….. ಪ್ಯಾರ ಸಬ್ ಕುಛ್ ನಹೀಂ ಜಿಂದಗೀ ಕೆ ಲಿಯೆ’ ಇಂದೀವರ್ನ ಸಾಲುಗಳನ್ನು ಹೇಳಬೇಕೆಂದವನಿಗೆ, ಬೇಡ ಬೇಡ ಅವನಿಗಿಷ್ಟ ಬಂದ ದಾರಿಯಲ್ಲಿ ಸಾಗಲೆಂದು ಸುಮ್ಮನಾದೆ. ಅವನದು ಪ್ರೀತಿ ಪ್ರೇಮಗಳ ಝರಿಗಳನ್ನೇ ಹೊಂದ ನದಿಯನ್ನೇ ಆವ್ಹಾಹಿಸಿದ ಯುಗಾಂತರಗಳ ಪಯಣ.

      ಮುಂದೊಂದು ದಿನ ತನ್ನ ಅಣ್ಣ ದಾರಾ ಶಿಕೋನನ್ನೇ ಭಯಂಕರ ಕಾಳಗದಲ್ಲಿ ವಧಿಸಿ, ಗದ್ದುಗೆಗೆ ಏರಿದ, ಔರಂಗಜೇಬ ಇಲ್ಲಿಂದಲೇ ಸಾಮ್ರಾಟನಾದದ್ದೂ ಎಷ್ಟೊಂದು ಕಾಕತಾಳೀಯವಲ್ಲವೇ. ಎಷ್ಟೊಂದು ಇತಿಹಾಸವನ್ನು ಎದೆಯಲ್ಲಿ ಹುದುಗಿಕೊಂಡಿದೆಯಲ್ಲಾ ಈ ಅಜ್ಮೇರ್ ಎಂಬ ವಿಸ್ಮಯ ಪವಿತ್ರನಗರಿ. ‘ಒಬ್ಬರನ್ನು ತಿಂದು ಬದುಕುವುದು ಬಾಳಲ್ಲ, ಒಬ್ಬರನ್ನು ಅರಿತು ಬದುಕುವುದು ಬಾಳು’ ಎಂದರಲ್ಲವೇ, ಬೇಂದ್ರೆ, ಅಂಬಿಕಾತನಯದತ್ತನೆಂಬ್ತ ಅಜ್ಜ ಅಂದಿನ ಕಾಲದಲ್ಲಿ ಹುಟ್ಟಿದ್ದಲ್ಲಿ ಆ ಘೋರ ನಡೆಯುತ್ತಿರಲಿಲ್ಲ ವೇನೋ! ದುಡುಕಿಬಿಟ್ಟೆ ಔರಂಗಜೇಬ್ ಎಂದೆ ಅವನತ್ತ!

      ಹಾಂ, … ಅಲ್ಲೇ ಶಹಾಜಹಾನ್ ಗಿಂತ ಹಿಂದೆ ಅಂದರೆ ನನ್ನ ಎಡಬಲಗಳಲ್ಲೇ ಭಕ್ತರ ಸಾಲುಗಳಲ್ಲಿ ಇಲ್ಲೇ ನಿಂತು ಪ್ರಾರ್ಥಿಸಿದ್ದನಲ್ಲವೇ, ಈ ಅಕ್ಬರ್, ತನಗೆ ಇಪ್ಪತ್ತೇಳು ವರ್ಷದವರೆಗೂ ಯಾವ ರಾಣಿಯರಿಂದಲೂ ಗಂಡು ಸಂತಾನ ಭಾಗ್ಯ ಲಭಿಸದಾದಾಗ ರಾಜಪೂತ ರಾಣಿಯಲ್ಲಿ ಜನಿಸಿದ ಆ ಗಂಡುಮಗುವಿನ ಹರಕೆ ತೀರಿಸಲು ಆಗ್ರಾದಿಂದ ಬರಿಗಾಲಿನಿಂದ 1560 ರ ದಶಕಗಳಲ್ಲಿ ನಡೆದು ಬಂದು ನಿಂತಿದ್ದನೋ ಅಥವಾ ಚಿತ್ತೋರಿನ ಕೋಟೆಯನ್ನು ವಶಪಡಿಸಿಕೊಳ್ಳಲಾಗದೇ ಯುದ್ಧ ವರ್ಷಗಳಗಟ್ಟಲೇ ಮುಂದುವರೆದದ್ದು ಆತಂಕಿತನಾಗಿ, ಜಯ ದೊರಕಿಸಿಕೊಡಲು ಚಿತ್ತೋರಿನ ಮರಳದಾರಿಯಲ್ಲಿ ಸುಡುವ ಕಾಲುಗಳಲ್ಲಿ ಜಯವನ್ನು ಬೇಡಿ ಬಂದಿರುವನೋ ಏನೋ ಅಕ್ಬರ್?, ಈಗೇನು ಬೇಡುತ್ತಿದ್ದಾನೆಂದು ಅವನನ್ನೇ ಕೇಳಬೇಕೆನಿಸಿತು, ಮುಕೇಶನ ಹಾಡು, ‘ಫಿರ್ ಜಾವೋ ಕಾಶೀ, ಫಿರ್ ಜಾವೋ ಕಾಬಾ, ಪೆಹಲೇ ಪಡೋಶೀ ಕೊ ಪ್ಯಾರ ಕರೋ ಬಾಬಾ’ ಎನ್ನುವ ಹಾಡು ಕೇಳಿಲ್ಲವೇ ಸಾಮ್ರಾಟ? ಕೇಳಬೇಕೆನಿಸಿತು ಅವನಿಗಷ್ಟೆ ಕೇಳುವ ಹಾಗೆ, ಕಿವಿಯಲ್ಲಿ, …ಅಕ್ಬರ್ ನಾಮಾ ಕೈಲಿ ಹಿಡಿದಿದ್ದ,, ಅದು ಇಂದಿಗೂ ಜೀವಂತವಿದೆ ಎಂದೆ ಅವನತ್ತ….

      ಆದರೆ ಅವರು ಯಾರೊಡನೆಯೂ ನೋಡುತ್ತಿರಲಿಲ್ಲ. ಕೇವಲ ಶರೀಫರೊಂದಿಗೆ ಮಾತ್ರ ‘ಕನೆಕ್ಟ್’ ಆಗಿದ್ದರು ಸಾಮ್ರಾಟರು. ಇನ್ನೂ ಅದೆಷ್ಟೋ ಮಂದಿ ಸರತಿಯ ಸಾಲುಗಳಲ್ಲಿ ಕಂಡರು, ಅವರವರ ಕಾಲಘಟ್ಟಗಳಲ್ಲಿ ನಿಂತು. …ಆದರೂ ವರ್ತಮಾನದ ಈ ಗಳಿಗೆಯಲ್ಲಿ ಈಗ ಮಹಾನ್ ಸಂತ ಶರೀಫ ಖ್ವಾಜಾ ಮೊಯಿನುದ್ದೀನ ಚಿಸ್ತೀ ಸಂತರಲ್ಲಿ ಬೇಡಿಕೆ ಸಲ್ಲಿಸಿ, ಪ್ರಾಥರ್ಿಸುವ ಸರದಿ ನನ್ನದಾಗಿತ್ತು! ಓಹ್, ಎಷ್ಟೊಂದು ಮಹಾನ್ ಆತ್ಮಗಳ ಹೆಜ್ಜೆಗಳೊಂದಿಗೆ ನನ್ನನ್ನು ಜೋಡಿಸಿತ್ತು ಈ ಪವಿತ್ರ ಜಾಗ….ಜಗಕ್ಕೆ ವರ, ಶಾಂತಿ ಕರುಣೆ, ಸಾಮರಸ್ಯ ಉಣಿಸಿದ ಭಕ್ತಿ ರಸದ ಈ ದರ್ಗಾ!

      ಅದೊಂದು ಅಭೂತಪೂರ್ವ ಗಳಿಗೆ ನನಗೆ. ಯಾವ ಸೂಫಿ ಸಂತನ ಹೆಸರು ಕೇಳಿಯೇ ಜಗತ್ತು ಪುಣೀತವಾಗುತ್ತದೋ, ಸಾಕ್ಷಾತ್ ಅದೇ ಸೂಫಿ ಸಂತನ ಪಕ್ಕದಲ್ಲಿಯೇ, ಸಾನಿಧ್ಯದಲ್ಲಿಯೇ ನಾನಿದ್ದೇನೆ ಎನ್ನುವ ಸಂಗತಿಯೇ ರೋಮಾಂಚನವನ್ನು ಉಂಟು ಮಾಡುತ್ತಿತ್ತು. ಇಲ್ಲೇ ಅಲ್ಲವೇ ಜಗತ್ತಿನ ಮಹಾನ್ ಮಹಾನ್ ನಾಯಕರೆನಿಸಿಕೊಂಡವರು, ನಿಂತು ದರುಶನ ಪಡೆದುಕೊಂಡಿದ್ದು, ಪಡೆದುಕೊಳ್ಳುತ್ತಿರುವುದು. ತಮ್ಮ ಸ್ವಂತದ ದುಗುಡಗಳನ್ನು, ತಮ್ಮ ಬೇಡಿಕೆಗಳನ್ನು ಕೋರಿಕೊಳ್ಳುವುದು.. ಈ ಬೇಡಿಕೆ ಎನ್ನುವುದು ‘ಸದಿ’ಗಳಿಂದ ಇದ್ದೇ ಇದೆಯಲ್ಲವೇ. ಇದ್ದುದನ್ನು ಮರೆತು ಇಲ್ಲದ್ದಕ್ಕೆ ಆಶೆ ಪಡುವುದು ‘ಜಮಾನಾ’ದಿಂದ ಇದೆಯಲ್ಲವೇ….. ಮದನ ಭಾರತಿಯ ಸಾಲುಗಳು, ‘ಗಗನ ಯೆ ಸಮಝೆ ಚಾಂದ ಸುಖೀ ಹೈ, ಚಾಂದ ಕಹೆ ಸಿತಾರೆ’ ಇದ್ದದ್ದು ಮರೆಯೋಣ, ಇಲ್ಲದ್ದು ಕರೆಯೋಣ, ಅಂದರಲ್ಲವೇ ಅಜ್ಜ ಬೇಂದ್ರೆ. ಎಲ್ಲವೂ ಒಳ ಹಸಿವಿನ ಸಂಕೇತಗಳೇ!….ದೀನನಾಗಿ ಶಾಂತಿ ನೆಮ್ಮದಿಗಳನ್ನು ಬಯಸಿ ಶರೀಫರಲ್ಲಿ ಬೇಡಿಕೊಂಡೆ. ನನ್ನ ಬದುಕಿನ ಎಂದೂ ಮರೆಯಲಾರದ ಗಳಿಗೆಯೊಂದು ಸದ್ದಿಲ್ಲದೇ ಹೀಗೆ ದಾಖಲಾಗುತ್ತಿತ್ತು. ಮಹಾನ್ ಮಹಾನ್ ಸಾಮ್ರಾಟರ ಆತ್ಮಗಳೊಂದಿಗೆ ನನ್ನ ಗಳಿಗೆಗಳು ಹೀಗೆ ಹೆಣೆದುಕೊಂಡವು.

      ಭಕ್ತಿವೆತ್ತ ಮನದಾಳದಲ್ಲಿ ಮಿಂದೆದ್ದು, ಅದೇ ಗಂಧದಮಲುಗಳಿಂದ ಮೈಮನಗಳಲ್ಲಿ ನೆಂದು, ಹೊರಪ್ರಾಂಗಣದಲ್ಲಿ ಬಂದೆವು. ಅಲ್ಲಿ ಸುತ್ತಲೂ ಪ್ರಾಂಗಣಗಳಲ್ಲಿ ಭಕ್ತರು ಕುಳಿತು ತಮ್ಮ ಭಕ್ತಿಯುತ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು. ವಿಶಾಲ ಪ್ರಾಂಗಣದ ಒಂದು ಜಾಗದಲ್ಲಿ ಕುಳಿತೆವು. ಸುತ್ತೆಲ್ಲ ಅಹವಾಲುಗಳೊಂದಿಗೆ ಬೇಡಿಕೆಗಳ ಪ್ರಾರ್ಥನೆಗಳು ಸುತ್ತಲೂ….ದುಗುಡ ತುಂಬಿದ ಹಿರಿಯಜ್ಜಿಯೊಂದು ತನ್ನ ಎರಡೂ ಕೈಗಳನ್ನು ದೇವರೆಡೆಗೆ ಚಾಚಿ ತನ್ನದೇ ಭಾಷೆಯಲ್ಲಿ ಜಪಮಾಡುತ್ತ ಪ್ರಾರ್ಥಿಸುವ ನೋಟ ಮನಸೆಳೆಯಿತು. ಮುಖದಲ್ಲಿ ಇನ್ನೆಲ್ಲೂ ಜಾಗವಿಲ್ಲದಂತೆ ನೆರಿಗೆಗಳು ತುಂಬಿಕೊಂಡಿದ್ದವು. ಒಂದೊಂದು ನೆರಿಗೆಗೂ ಒಂದೊಂದು ಕಥೆ ಇದ್ದಿರಲೇಬೇಕು.. ಕೈಯಲ್ಲಿ ಜಪಮಣಿಯಂತಹದನ್ನು ಎಣಿಸುತ್ತ ಅವಳು ಪ್ರಾರ್ಥಿಸುವ ಆ ನೋಟ ನಿಜಕ್ಕೂ ಕರುಣಾಪೂರಿತ. ದೇವರು ಇದ್ದಾನೆಯೇ ಎಣಿಸುವಂತಿತ್ತು. ಭಕ್ತಿಯ ಪರಾಕಾಷ್ಠತೆಯಲ್ಲಿ ಬೇಡಿಕೆ ಇಡುತ್ತಿದ್ದ ನೋಟಕ್ಕೆ ಮನ ಕರಗಿ ಮೌನ ಕಂಬನಿಯಾದೆ.

ಪ್ರಾರ್ಥನೆಯ ಕುರಿತು ಗುಲ್ಜಾರರ ‘ಖುದಾ’ ಕವನದ ಸಾಲುಗಳು ನೆನಪಾದವು.

ದುವಾ!

ಅಜೀಬ್ ಸಾ ಅಮಲ್ ಹೈ ಯೆ

ಯೆ ಏಕ್ ಫರ್ಜ್ ಏ  ಗುಫ್ತ್ಗೂ,

ಔರ್ ಏಕ್ ತರ್ಫಾ – ಏಕ್ ಐಸೆ ಶಖ್ಸ್ ಸೆ,

ಖ್ಯಾಲ್ ಜಿಸ್ಕೀ ಶಕ್ಲ್ ಹೈ

ಖ್ಯಾಲ್ ಹೀ ಸಬೂತ್ ಹೈ !

(ಈ ಪ್ರಾರ್ಥನೆ !

ವಿಚಿತ್ರ ಶಾಸನವಪ್ಪಾ ಇದು

ಶಬ್ದಗಾರುಡಿತನದ ಹೆಣಿಕೆಯೊ, ಕುಣಿಕೆಯೊ

ಮತ್ತೊಂದೆಡೆ – ಹೀಗೊಂದು ಆ ಆಕಾರಕ್ಕೆ

ಕೇವಲ ಊಹೆಯಲ್ಲಿರುವ ಆ ರೂಪಕ್ಕೆ,

ಊಹೆಯೇ ಪುರಾವೆ ಅದಕ್ಕೆ!)

     ದೇವರೇ ನೀನೆಲ್ಲಿದ್ದರೂ, ಆ ಅಜ್ಜಿಯ ಕೋರಿಕೆಯನ್ನು ಮೊದಲು ಮಣ್ಣಿಸು ಎಂದು ಬೇಡಿಕೊಂಡೆ. ತನ್ನ ಕೊನೆಯ ಗಳಿಗೆಗಳನ್ನಾದರೂ ನೆರಿಗೆಯ ಹಂಗಿಲ್ಲದೇ ಕಳೆಯಲೆಂಬ ಉತ್ಕಟ ಹಂಬಲ ನನ್ನಲ್ಲಿ ಮೂಡಿತ್ತು, ಅವಳಿಗಾಗಿ, ಅವಳ ಬೇಡಿಕೆಗಳಿಗಾಗಿ.

     ಅಷ್ಟರಲ್ಲಿ ಭಕ್ತರ ದಂಡೊಂದು ಬಹುದೊಡ್ಡ ಚಾದರೊಂದನ್ನು ಎಲ್ಲರೂ ಅಂಚುಗಳಲ್ಲಿ ಹೊತ್ತುಕೊಂಡು, ಆಯತೇ ಪಠಿಸುತ್ತ, ದಗರ್ಾ ಪ್ರವೇಶಿಸಿದರು. ಇನ್ನೂ ಕೆಲವರು ದೊಡ್ಡ ಅಗಲ ಬುಟ್ಟಿಗಳಲ್ಲಿ ತಮ್ಮ ಹರಕೆಯ ವಸ್ತು ಗಳನ್ನು ತಲೆಯ ಮೇಲೆ ಹೊತ್ತು ಸಾಗುವುದು ಸಾಮಾನ್ಯ ದೃಶ್ಯಗಳಲ್ಲೊಂದಾಗಿತ್ತು ಅಲ್ಲಿ.

      ಪ್ರಾಂಗಣದ ಇನ್ನೊಂದೆಡೆ ಅಲ್ಲಿಯೇ ಮುದ್ದಾದ ಮಗುವೊಂದು ಆಪ್ತ ಧಿರಿಸಿನಲ್ಲಿ ತನ್ನೆರಡು ಕೈಗಳನ್ನು ಪುಸ್ತಕದಂತೆ ತೆರೆದು ಹಿಡಿದು ಪ್ರಾಥಿಸುತ್ತಿತ್ತು, ಮಾತುಗಳಿನ್ನೂ ಮೂಡದ ವಯಸಿನ ಕೂಸು. ಒಂದು ತರಹದ ಅನೂಹ್ಯವಾದ, ಅದ್ಭುತವಾದ, ಕಲ್ಮಷದ ಲವಲೇಶವೂ ಇಲ್ಲದ ನೆಮ್ಮದಿಯ ಶಾಂತಿಯ ನದಿಯನ್ನೇ ಮುಖದಲ್ಲಿ ಪ್ರವಹಿಸುತ್ತ , ಬುದ್ಧನ ಮಂದಹಾಸವನ್ನೇ ಹೊತ್ತು ಪ್ರಾಥರ್ಿಸುತ್ತಿತ್ತು …. ಬಹುಶ: ಆ ಮಗವೇ ದೇವರಿಗೆ ತುಸು ನೆಮ್ಮದಿಯೊಂದನ್ನು , ಕರುಣೆಯೊಂದನ್ನು ದಯಪಾಲಿಸುತ್ತಿತ್ತೋ ಏನೋ! ಇಂತಹ ಕರುಣೆಗಳನ್ನೇ ಕೂಡಿಟ್ಟು , ಮತ್ತೆ ದೇವನವನು ಜಗಕ್ಕೆ ಅವೆಲ್ಲವುಗಳನ್ನು ಹಂಚುವನೇನೋ! ಜಗಕೆಲ್ಲ ಶಾಂತಿಯ ಮಂತ್ರವನ್ನು ಬೋಧಿಸುವ ಪ್ರಶಾಂತ ಮುಖಮುದ್ರೆಯ ಹಸುಗೂಸು. ಬಟ್ಟಲುಗಣ್ಣುಗಳನ್ನು ತೆರೆದಾಗ ಅದಮ್ಯ ದಿವ್ಯ ಚೇತನದ ಕಾಡಿಗೆಗಣ್ಣುಗಳು. ಬಲು ಸುಂದರ ಜಗದ ಬಳುವಳಿ. ಆ ಮಗುವಿನೆಡೆ ಹೋಗಿ ಅದನ್ನು ಎತ್ತಿಕೊಳ್ಳಬೇಕೆಂಬ ಬಯಕೆ ಮೂಡುತ್ತಲೇ , ಅದೇ ಕ್ಷಣದಲ್ಲಿ, , ‘ಹಾಥ್ ಸೆ ಛೂಕೆ ಇಸೆ ರಿಸ್ತೋಂ ಕಾ ಇಲ್ಜಾಮ ನ ದೋ’ ಗುಲ್ಜಾರರ ಸಾಲುಗಳು ನೆನಪಾಗಿ ಆ ವಿಚಾರವನ್ನು ಕೈಬಿಟು, ‘ಗಾಡ್ ಬ್ಲೆಸ್ ಯೂ ಮೈ ಚೈಲ್ಡ್’ಎಂದು ಅಲ್ಲಿಂದಲೇ ಪ್ರಾರ್ಥಿಸಿದೆ.

      ಜಗಜಿತ್ ಸಿಂಗರ ‘ನ ದುನಿಯಾ ಕಾ ಗಮ್ ಥಾ , ನ ರಿಸ್ತೋಂ ಕಾ ಬಂಧನ್ ಬಡೀ ಖೂಬಸೂರತ್ ಥಿ ವೋ ಜಿಂದಗಾನೀ’ ಎನ್ನುವ ಸಾಲುಗಳು ಇಂತಹ ಬಾಲ್ಯಕ್ಕಾಗಿಯೇ ಅಲ್ಲವೇ ಹಾಡಿರುವುದು. ಓಹ್, ಮಗು,,, ನೀನೆಷ್ಟು ಸುಖಿ….ಸುಖವರಳಿ ಹರಸಿತು ಮನ.

     ಹಾಗೆಯೇ ಎದ್ದು ನಮ್ಮ ಪ್ರಾರ್ಥನೆಗಳನ್ನು ಮತ್ತೊಮ್ಮೆ ಶರೀಫರಲ್ಲಿ ಸಲ್ಲಿಸಿ, ಪ್ರಾಂಗಣದ ವಿವಿಧೆಡೆ ಸುತ್ತು ಹಾಕತೊಡಗಿದೆವು. ನಾವು ಅಲ್ಲಿಂದ ಎದ್ದ ಕೂಡಲೇ ಅದುವರೆಗೂ ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟಿದ್ದ ಗೈಡ್ ಸಯ್ಯದ್ ಈಗ ನಮಗೆ ಒಳಗೆಲ್ಲ ಸುತ್ತು ಹಾಕಿಸಿದ. ಅಲ್ಲಿ ಒಂದೆಡೆ ದೊಡ್ಡದಾದ ಕೊಪ್ಪರಿಗೆಯೊಂದರಲ್ಲಿ ದಿನವೂ ಅನ್ನವನ್ನು ತಯಾರಿಸಿ ನಿತ್ಯವೂ ಭಕ್ತರಿಗೆ ಬಡಿಸಲಾಗುತ್ತದೆ. ನಮ್ಮ ಆಲೆಮನೆಗಳಲ್ಲಿ ಬೆಲ್ಲದ ಕೊಪ್ಪರಿಗೆ ಇರುತ್ತದಲ್ಲವೇ, ಅದಕ್ಕಿಂತ ದೊಡ್ಡದದು. ಅದನ್ನು ಸಾಮ್ರಾಟ್ ಅಕ್ಬರ್ 1560 ರ ದಶಕಗಳಲ್ಲಿ ಕಾಲ್ನಡಿಗೆಗಳಲ್ಲಿ ಬರುವ ವೇಳೆ ಕೊಡಮಾಡಿದ್ದು. ಇನ್ನೂ ಸುಸ್ಥಿತಿಯಲ್ಲಿದೆ. ಇದರಲ್ಲೇ ನಿತ್ಯ ಅನ್ನ ತಯಾರಿಸಲಾಗುತ್ತದೆ. ಇನ್ನೊಂದು ಇಂತಹುದೇ ಕೊಪ್ಪರಿಗೆಯೊಂದನ್ನು ಭಕ್ತರು ತಮ್ಮ ಭಕ್ತಿಯ ಕಾಣಿಕೆಗಳನ್ನು ಹಾಕಲು, ಹಾಗೂ ಆಹಾರ ಪದಾರ್ಥಗಳನ್ನು ದಾನರೂಪವಾಗಿ ನೀಡಿದ್ದನ್ನು ಸಂಗ್ರಹಿಸಲು ಇಡಲಾಗಿದೆ. ಭಕ್ತರು ಅದರಲ್ಲಿ ತಮ್ಮ ತಮ್ಮ ಭಕ್ತಿಯ ಕಾಣಿಕೆಗಳನ್ನು ನೀಡುತ್ತಿರುವುದನ್ನು ಗಮನಿಸಿದೆ. ತಾವೇನಾದರೂ ಭಕ್ತಿಯನ್ನು ಸಮರ್ಪಿಸುವವರಿದ್ದಲ್ಲಿ, ತಾವು ಅಲ್ಲಿಯ ಆಡಳಿತ ಕಚೇರಿಯಲ್ಲಿ ನೀಡಬಹುದಾಗಿದೆ. ಒತ್ತಾಯವಿಲ್ಲ ಎಂದು ನಮ್ರನಾಗಿ ನುಡಿದ ಸಯ್ಯದ್. ಹೀಗೆ ಕೂಡಿದ ಆಹಾರವನ್ನೇ ನಿತ್ಯ ದಾಸೋಹಕ್ಕಾಗಿ ಬಳಸಲಾಗುವುದು ಎಂದ ಸಯ್ಯದ್.

      ಸುತ್ತುಹಾಕುವಾಗ ಅಲ್ಲಿಯೇ ಒಂದು ಕಟ್ಟೆಯಂತಹ ಜಾಗದಲ್ಲಿ ಕುಳಿತು ಒಂದು ಸೂಫಿ ಗುಂಪು ಸೂಫಿ ಭಕ್ತಿಗೀತೆಗಳನ್ನು ಹಾಡುತ್ತಿದ್ದುದು ಮನಸೆಳೆಯಿತು. ತುಂಬ ರಾಗಬದ್ಧವಾಗಿ ಭಕ್ತಿಯಲ್ಲಿ ಆವೇಶ ಬಂದು ಹಾಡುತ್ತಿದ್ದುದು, ಅವರು ‘ಟ್ರಾನ್ಸ್’ ನಲ್ಲಿ ಹೋಗಿ, ದೇವನಲ್ಲಿ ಲೀನವಾಗಿ ಹಾಡುತ್ತಿದ್ದರು. ಆ ಮಾಹೋಲಿಗೊಂದು ಅದ್ಭುತ ಕಳೆ ಬಂದಿತ್ತು. ಎಷ್ಟೊಂದು ಸಲೀಸಾಗಿ ಆ ಪಿಯಾನೋಗಳನ್ನು, ಢೋಲುಗಳನ್ನು ಅವರು ನುಡಿಸುತ್ತಿದ್ದುದು, ಅದೊಂದು ತುಂಬ ರಿಯಾಜ್ ಮಾಡಿದ ತಂಡವೆಂಬುದು ಕ್ಷಣಮಾತ್ರದಲ್ಲಿ ಮನವರಿಕೆಯಾಗುವಂತಿತ್ತು. ಅದನ್ನು ಕೇಳುತ್ತ ಕುಳಿತುಕೊಳ್ಳಬೇಕೆನಿಸುತ್ತಿತ್ತು. ಸುತ್ತ ಅದೆಷ್ಟೋ ಮಂದಿ ಕುಳಿತು ಸೂಫಿ ಸಂಗೀತದ ಭಜನೆಯನ್ನು ಆಲಿಸುವುದರಲ್ಲಿ ಮಗ್ನರಾಗಿ, ಅದರಲ್ಲೇ ತೊಯಿದು ತೊಪ್ಪಡಿಯಾಗುತ್ತಿದ್ದರು, ‘ಹಮ್ ನೆ ಪತ್ಥರ್ ಸೆ ಜಿನ್ ಕೊ ಬನಾಯಾ ಕಭಿ, ವೊ ಖುದಾ ಹೋಗಯೇ ದೇಖತೇ ದೇಖತೇ …..’ ಎಂಥ ಸೂಫಿ, ಓಹ್, ಬದುಕಿನಲ್ಲಿ ಇಂತಹುದನ್ನೇ ಕೇಳುತ್ತ ಕೇಳುತ್ತ ಇಹಲೋಕ ಮರೆಯುವ ಅವಕಾಶ ಎಲ್ಲರಿಗೂ ಸಿಗಲಾರದಲ್ಲವೇ? ತಮ್ಮನ್ನೇ ಮರೆತು ಮೈದೂಗುತ್ತಿದ್ದವರ ಮುಖಗಳಲ್ಲಿ ಮೂಡಿದ್ದ ಆ ಭಾವರಸವನ್ನು ಹೇಗೆ ಹಿಡಿದಿಡಲಿ! ಏನೆಂದು ವರ್ಣಿಸಲಿ? ಕೆಲವೊಂದು ಸಾಲುಗಳಲ್ಲಂತೂ ಸೂಫಿ ಸಂಗೀತದ ದಿಗ್ಗಜ ನುಸ್ರತ್ ಫತೇ ಅಲಿ ಖಾನ್ ಹಾಡಿದಷ್ಟು ಸುಶ್ರಾವ್ಯವಾಗಿತ್ತು. ಕೇಳುತ್ತ ಕುಳಿತುಬಿಟ್ಟಿದ್ದೆವು, ಅದೆಷ್ಟೋ ಹೊತ್ತು!, ಸೂಫಿಯನ್ನು ಅನುಭವಿಸಿ ಸವಿಯುತ್ತಿದ್ದವನಿಗೆ ಹೆಗಲಮೇಲೊಂದು ಕೈ ಇಟ್ಟಂತಾಗಿ ತಿರುಗಿ ನೋಡಿದೆ. ಸಯ್ಯದ್ ನಿಂತಿದ್ದ. ಸಾಬ್, ಇನ್ನು ಈಗ ದರ್ಗಾ ಶರೀಫ ಬಂದ ಆಗುತ್ತದೆ. ಹೊರಡೋಣ ಎಂದ. ನೋಡಿದರೆ ಆಗಲೇ ರಾತ್ರಿಯ ಒಂಭತ್ತು ಗಂಟೆ ಮೀರಿದ ಸಮಯವಾಗಿತ್ತು. ಈಗ ನಾವು ಅಲ್ಲಿಂದ ಹೊರಬರಲೇಬೇಕಾಯಿತು. ಅದೊಂದು ಅಪ್ರತಿಮ ಬೆರಗಿನ ಸ್ಥಳಕ್ಕೆ ಮತ್ತೆ ಮತ್ತೆ ವಂದಿಸಿ, ಭಕ್ತಿ ಪರವಶರಾಗಿ ಒಲ್ಲದ ಮನದಿಂದ ಹೊರಬಂದೆವು ಪುನೀತರಾಗಿ., ವಿನೀತರಾಗಿ…

     ಹೊರಗೆ ಬರುತ್ತಲೇ ಭಿಕ್ಷಾ ಪಾತ್ರೆ ಹಿಡಿದ ಭಿಕ್ಷುಕರ ಸಾಲುಗಳು. ಸಾಲಾಗಿ ಕುಳಿತವರಿಗೆ ನನ್ನಲ್ಲಿರುವ ಚಿಲ್ಲರೆಯಾದಿಯಾಗಿ ಸ್ವಲ್ಪ ಹಣ ಒಬ್ಬೊಬ್ಬರಿಗೂ ಅವುಗಳು ತೀರುವವರೆಗೂ ನೀಡುತ್ತ ಹೆಜ್ಜೆಹಾಕಿದೆವು. ಶರೀಫರ ಸಾನಿಧ್ಯದಲ್ಲಿ ಬದುಕುತ್ತಿರುವ ಜೀವಗಳು. ನನಗ ಎಲ್ಲರಲ್ಲೂ ಶರೀಫರೇ ಕಾಣುತ್ತಿದ್ದರು. ಮನಸ್ಸು ಬಹಳ ನಿರಾಳವಾಗಿತ್ತು,. ಜಗದ್ವಿಖ್ಯಾತ ಸಂತನೊಬ್ಬನೊಬ್ಬನ ನೆರಳನ್ನು ಅನುಭವಿಸಿದ್ದಲ್ಲದೇ, ನನಗೆ ಶಾಂತಿ ನೆಮ್ಮದಿ ಕರುಣಿಸಿದಂತೆನಿಸಿ ಮಹಾ ಚೇತನಕ್ಕೆ ಮತ್ತೆ ಮತ್ತೆ ನಮಿತ ಮನದಿಂದ ತೃಪ್ತರಾಗಿ ವಾಹನದೆಡೆ ಸಾಗಿದೆವು.

     ನಮ್ಮ ಗಮ್ಯಕ್ಕೆ ತಲುಪಿದ ನಂತರ ಸರವನ್ , ನಮ್ಮ ದುಡ್ಡು ಒಡವೆಗಳು ಸರಿಯಾಗಿವೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಲು, ಒತ್ತಾಯದ ಕೋರಿಕೆ ಇಟ್ಟ. ಇರಲಿ ಬಿಡಿ ಎಂದರೂ ಕೇಳಲಿಲ್ಲ. ಕೊನೆಗೂ ಅವನ ಕೋರಿಕೆಗೆ ಒಪ್ಪಿ ನೋಡಿ, ಎಲ್ಲವೂ ಸರಿ ಇದೆ ಎಂದೆವು. ಗೈಡ್ ಸೈಯ್ಯದ್ ದರ್ಗಾ ದವರೆಗೂ ಕರೆದುಕೊಂಡು ಹೋಗಿ ಬಂದುದಕ್ಕೆ ಕೃತಜ್ಞತಾ ಪೂರ್ವಕವಾಗಿ ಅಲ್ಲಿಯೇ ನಿಂತಿದ್ದವನಿಗೆ ತುಸು ಭಕ್ಷೀಸು ಪ್ರೀತಿಯಿಂದ ನೀಡಲು ಹೋದೆ, ಮೊದಲು ನಿರಾಕರಿಸಿದ. ಅಮೇಲೆ ಒತ್ತಾಯಿಸಿದ ಮೇಲೆ,” ಓಹ್ ತೋಫಾ, ನಹೀಂ ದಿಯೇ ತೋ ಭೀ ಚಲ್ತಾ ಥಾ , ಸಾಬ್’ ಎಂದು ವಿನಮ್ರನಾಗಿ ಸ್ವೀಕರಿಸಿದ. ನೋಡಲು ತೆಳ್ಳಗೆ ಎತ್ತರವಾಗಿ ಸ್ಫುರದ್ರೂಪಿ, ಅವನೊಬ್ಬ ಸಂತನಂತೆಯೇ ಕಾಣುತ್ತಿದ್ದ, ಹಾಗೆಯೇ ಇದ್ದ ಕೂಡ ಎಂಬುದು ಅವನ ನಡವಳಿಕೆಯಿಂದಲೂ ತಿಳಿದು ಬಂತು. ಸಯ್ಯದ್ ಗೆ ವಂದಿಸಿ ಮುನ್ನಡೆದೆವು.

(courtesy: internet)

Rating
No votes yet

Comments

Submitted by nageshamysore Wed, 07/22/2015 - 05:00

ಇಟ್ನಾಳರೆ ಇದೇನು ರಾಜಾಸ್ತಾನದ ಅಜ್ಮೀರದ ಪಯಣವೊ ಅಥವ ಇತಿಹಾಸದ ಜತೆಗಿನ ಮೈ ಜುಮ್ಮೆನಿಸುವ ಯಾತ್ರೆಯೊ ? ಪಯಣದ ನಿಮ್ಮ ಅನುಭಾವ, ಅನುಭೂತಿಗಳೆಲ್ಲ ಅಕ್ಷರಗಳಾಗಿ ಭಟ್ಟಿ ಇಳಿದು ತೆರೆದಿಟ್ಟುಕೊಂಡ ಬಗೆ ಅಮೋಘ. ನೀರಸ ದೃಶ್ಯ ವೈಭವ ವರ್ಣನೆಯನ್ನು ಇತಿಹಾಸದ ದೃಶ್ಯಗಳಿಗೆ ಜೋಡಿಸಿ, ಸಮೀಕರಿಸಿದ ಸಾಲುಗಳು ನಿಮ್ಮ ಅನುಭವವನ್ನು ನಾವೆ ಅನುಭವಿಸಿದಂತಹ ಅನಿಸಿಕೆಯನ್ನು ಕಟ್ಟಿಕೊಡುತ್ತಿವೆ ! ಅಭಿನಂದನೆಗಳು ಮತ್ತು ಧನ್ಯವಾದಗಳು :-)

ನಾಗೇಶ ಜಿ, ತಮ್ಮ ವಿಶೇಷ ಮೆಚ್ಚುಗೆಗೆ ತಲೆದೂಗಿದ ಮನದಿಂದ ವಂದನೆಗಳು ಸರ್. ಸುಮ್ಮನೆ ತಿಳಿದಂತೆ ಭಾವಗಳನ್ನು ದಾಖಲಿಸುತ್ತ ಸಾಗಿದಾಗ ಈ ರೀತಿ ಮೂಡಿಬಂತು. ಇತಿಹಾಸದ ಘಟನೆಗಳನ್ನು ಕಾಲದ ಮಾನವನ್ನು ತೆಗೆದು ನೋಡಿದಾಗ, ಎಲ್ಲವೂ ಅಕ್ಕಪಕ್ಕಗಳಲ್ಲೇ ಇರಬೇಕಲ್ಲವೇ ಸರ್. ತಮ್ಮ ಪ್ರೀತಿಯ ಪ್ರತಿಕ್ರಿಯೆಗೆ ಧನ್ಯ ಸರ್.

Submitted by kavinagaraj Sat, 07/25/2015 - 12:51

ಪ್ರವಾಸದುದ್ದಕ್ಕೂ ಹೆಜ್ಜೆಹೆಜ್ಜೆಗೂ ಇರುವ ಇತಿಹಾಸ ತಿಳಿದು ಪರಿಚಯಿಸುವ ಉತ್ತಮ ಕೆಲಸವನ್ನು ಚೆನ್ನಾಗಿ ಮಾಡುತ್ತಿರುವಿರಿ. ಪುನಃ ಅಭಿನಂದನೆಗಳು.

ನಾಡ ಚಿಂತಕ, ಸಮಾಜ ವಿಶ್ಲೇಷಕ ಕವಿನಾಗರಾಜ್ ಸರ್, ತಮ್ಮ ಶುಭ ನುಡಿಗಳಿಗೆ ಶರಣು ಮನದಿಂದ, ಸರ್, ವಂದನೆಗಳು