ಚಿತ್ರಕಲ್ಲು ದುರ್ಗದ ಮಾತೆ Chitrakalludurga Lady

ಚಿತ್ರಕಲ್ಲು ದುರ್ಗದ ಮಾತೆ Chitrakalludurga Lady

ಬರಹ

ಯೇಸುಕ್ರಿಸ್ತನನ್ನು ತೋಳಲ್ಲಿ ಹಿಡಿದ ವಾತ್ಸಲ್ಯಮಯಿ ತಾಯಿಯಾಗಿ ಕಂಡುಬರುತ್ತಾಳೆ ಚಿತ್ರಕಲ್ಲುಮಾತೆ ಅರ್ಥಾತ್ ಮರಿಯಾಮಾತೆ. ಬಿದಿಗೆ ಚಂದ್ರನ ಮೇಲೆ ವಿರಾಜಮಾನರಾಗಿರುವ ಮರಿಯಾಮಾತೆಯು ನಿರಾಭರಣಳಾಗಿ ನಿರ್ಮಲವದನಳಾಗಿ ಕಂಗೊಳಿಸುತ್ತಿದ್ದಾಳೆ. ಅವಳ ಒಂದು ಕೈಯಲ್ಲಿ ಪುಟ್ಟಬಾಲಕ ಯೇಸು ಕುಳಿತು ಹಸನ್ಮುಖನಾಗಿ ನೋಡುತ್ತಿದ್ದಾನೆ. ಮರಿಯಳ ಮೊಗದಲ್ಲಿ ವಾತ್ಸಲ್ಯ ದಯಾರ್ದ್ರತೆಗಳು ಎದ್ದುಕಾಣುತ್ತವೆ.
ಹೈದರಾಲಿಯ ಸೇನೆಯಲ್ಲಿದ್ದ ಕ್ರೈಸ್ತ ತುಕಡಿಯೊಂದರ ದೈವವಾಗಿದ್ದ ಈ ಎರಡು ಅಡಿ ಎತ್ತರದ ಮರಿಯಾ ಮಾತೆಯ ಮರದ ಪ್ರತಿಮೆ ಆ ಸೇನೆಯೊಂದಿಗೇ ರಣರಂಗಗಳನ್ನು ಸುತ್ತುತಿದ್ದುದು ಟಿಪ್ಪುವಿನ ಕಾಲದಲ್ಲಿ ಕ್ರೈಸ್ತ ತುಕಡಿಯ ಬರಖಾಸ್ತಿನೊಂದಿಗೆ ನೆಲೆ ಕಳೆದುಕೊಂಡಿತು. ಬ್ರಿಟಿಷ್ ಪಡೆಗಳು ಶ್ರೀರಂಗಪಟ್ಟಣದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ದಾರಿಯಲ್ಲಿ ಸಿಗುವ ಕ್ರೈಸ್ತ ನೆಲೆಗಳಲ್ಲಿ ತಂಗುತ್ತಾ ಬರಹುದು ಎಂಬ ಆತಂಕದಲ್ಲಿ ಟಿಪ್ಪು ಸುಲ್ತಾನನು ಚಿಕ್ಕರಸಿನಕೆರೆ, ಪಾಲಳ್ಳಿ, ಗಂಜಾಂ, ಕಿರಂಗೂರು ಮುಂತಾದ ಊರುಗಳಲ್ಲಿನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಘಟನೆಗೆ ಪೂರಕವಾಗುವ ದೇವಾಲಯ(ಚರ್ಚ್)ಗಳನ್ನು ಹಾಳುಗೆಡವಿದ್ದ. ಇದರಿಂದ ಕ್ರೈಸ್ತರಲ್ಲಿ ಜೀವಭಯ ಹುಟ್ಟಿ ಕೈಗೆ ಸಿಕ್ಕ ವಸ್ತುಗಳನ್ನು ತೆಗೆದುಕೊಂಡು ಸುರಕ್ಷಿತ ನೆಲೆಗಳಿಗೆ ಓಡಿಹೋಗಿರಬಹುದೆನ್ನಿಸುತ್ತದೆ.

ಅಂಥ ಸುರಕ್ಷಿತ ತಾಣ ಹಾರೋಬೆಲೆ ಎಂಬ ಊರಿನಲ್ಲಿ ಇಂದಿಗೂ ಸಿಪಾಯಿ ಜೋಸೆಫ್, ಪಟ್ಟಣದ ಚೌರಪ್ಪ, ಗಂಜಾಂ ಚೌರಣ್ಣ, ಪಾಲಳ್ಳಿ ಜೋಸೆಫ್ ಹೆಸರಿನ ಮನೆತನಗಳನ್ನು ಕಾಣಬಹುದಾಗಿದೆ. ಬಹುಶಃ ಈ ಜನರೊಂದಿಗೇ ಬಂದು ಇಲ್ಲಿ ನೆಲೆನಿಂತ ಚಿತ್ರಕಲ್ಲುಮಾತೆಯ ಪ್ರತಿಮೆ ಇಂದಿಗೂ ಕನ್ನಡಕ್ರೈಸ್ತರ ಜಾನಪದ ದೈವವಾಗಿ ಜನರನ್ನು ಪೊರೆಯುತ್ತಿದೆ. ಹಿರಿಯ ತಲೆಗಳು ಇಂದಿಗೂ ದೇವಾಲಯದಲ್ಲಿರುವ ಚಿತ್ರಕಲ್ಲುಮಾತೆಯ ಪ್ರತಿಮೆಯ ಮುಂದೆ ಮೊಣಕಾಲೂರಿ ಪ್ರಾರ್ಥನೆ ಸಲ್ಲಿಸುತ್ತಾರೆ. ವರ್ಷಕ್ಕೊಂದು ಸಾರಿ ಈ ಚಿತ್ರಕಲ್ಲುಮಾತೆಯ ಪ್ರತಿಮೆಯನ್ನು ಹೊರತಂದು ತೇರಿನಲ್ಲಿ ಕೂರಿಸಿ ಊರಲ್ಲೆಲ್ಲಾ ಮೆರವಣಿಗೆ ಸಾಗುತ್ತಾರೆ. ಆ ಸಂದರ್ಭದಲ್ಲಿ ಕೋಲಾಟವನ್ನೂ ಆಡುತ್ತಾರೆ.