ಕಥೆ : ನಾಣ್ಯಗಳು

ಕಥೆ : ನಾಣ್ಯಗಳು

 ನಾಣ್ಯಗಳು

                     ಬೆಳಿಗ್ಗೆ ಪತ್ರಿಕೆ ಓದುತ್ತಿದ್ದ ರಾಚಯ್ಯನವರನ್ನು ಸುದ್ದಿಯೊಂದು ಚಿಂತನೆಗೆ ಹಚ್ಚಿತು. ಸುದ್ದಿ ಇಷ್ಟೆ. “ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಹಳೇ ನಾಣ್ಯಗಳಿರುವ ಕುಡಿಕೆಯೊಂದು ಮನೆ ಪಾಯಾ ತೋಡುವಾಗ ದೊರೆತಿದ್ದು ಇದರಿಂದ ಲಕ್ಕುಂಡಿಯ ಇತಿಹಾಸದ ಮೇಲೆ ಇನ್ನಷ್ಟು ಬೆಳಕು ಬೀರುವ ಸಾಧ್ಯತೆ ಇದೆ.” ಇತ್ಯಾದಿಯಾಗಿ ವಿವರಗಳಿದ್ದವು. ರಾಚಯ್ಯನವರು ನಾಣ್ಯಗಳ ಕುರಿತು ಆಸಕ್ತಿ ಹೊಂದಿದ್ದರು. ಅವರಲ್ಲಿ ಅಪರೂಪವೆನಿಸುವ ಅಮೂಲ್ಯವಾದ ನಾಣ್ಯ,ನೋಟುಗಳ ಸಂಗ್ರಹವಿತ್ತು. ಮುಂದೆ ಸುದೈವವಶಾತ್ ಈ ಹವ್ಯಾಸಕ್ಕೆ ಸಹಾಯವಾಗುವಂತಹ ಅಕೌಂಟ್ಸ ಇಲಾಖೆಯಲ್ಲಿ ಕ್ಯಾಶಿಯರ್ ಹುದ್ದೆಗೆ ನೌಕರಿಗೆ ಸೇರಿದರು. ಮುಂದೆ ಅಕೌಂಟ್ಸ ಆಫೀಸರ ಹುದ್ದೆವರೆಗೂ ಏರಿ ನಿನ್ನೆಯಷ್ಟೆ ನಿವೃತ್ತಿಯಾಗಿದ್ದರು.

       ‘ರಾಚಯ್ಯನವರು ನಮ್ಮ ಕಚೇರಿಯ ದಕ್ಷ ಸಿಬ್ಬಂದಿ, ಅವರು ಇಂದು ನಮ್ಮ ಕಚೇರಿಯಿಂದ ನಿವೃತ್ತಿ ಹೊಂದುತ್ತಿದ್ದು, ಅವರ ನಿವೃತ್ತಿಯಿಂದ ಒಬ್ಬ ದಕ್ಷ ಸಿಬ್ಬಂದಿಯನ್ನು ಕಳೆದುಕೊಂಡಂತಾಗಿದೆ(?). ಅವರು ನಮಗೆ ಹಿರಿಯರಾಗಿದ್ದು, ಕಚೇರಿಗೆ ಆಗಾಗ ಬಂದು ನಮಗೆ ಮಾರ್ಗದರ್ಶನ ಮಾಡಬೇಕು. ದೇವರು ಅವರಿಗೆ ಆಯುರಾರೋಗ್ಯ ಸಂಪತ್ತು ನೆಮ್ಮದಿ ನೀಡಲೆಂದು ಪ್ರಾರ್ಥಿಸಿ ಅವರಿಗೆ ಶುಭ ಕೋರುತ್ತೇನೆ.’ ಮುಂತಾಗಿ ಭಾಷಣ ಮಾಡಿದ ಅವರ ಕಚೇರಿ ಮುಖ್ಯಸ್ಥ ಶಾಲು ಹೊದಿಸಿ ಸನ್ಮಾನ ಮಾಡಿದರು. ಶಾಲು ಸನ್ಮಾನ ಸ್ವೀಕರಿಸುತ್ತಾ ಅವರ ಕಣ್ಣು ತೇವಗೊಡಿತ್ತು. ಹಾಗೆ ತೇವಗೊಂಡ ಕಣ್ಣುಗಳಿಂದಲೇ ಸಭಿಕರತ್ತ ಕಣ್ಣು ಹಾಯಿಸಿ ನೋಡಿದರು. ಅಲ್ಲಿ ಅವರಿಗೆ ಅವರ ಮಗ ವಿವೇಕಾನಂದನೇನೂ ಕಾಣಿಸಲಿಲ್ಲ. ಸನ್ಮಾನಾರ್ಥ ವಂದನೆ ಅರ್ಪಿಸಿದರು. ಸಮಾರಂಭ ಮುಗಿದು ಸಹೊದ್ಯೋಗಿಗಳ ಅಭಿವಂದನೆ ಸ್ವೀಕರಿಸಿ ಪುನ: ಸಾಹೇಬರ ಕೊಠಡಿಗೆ ನಡೆದರು. ಸಾಹೇಬರು ಅವರನ್ನು ಆದರದಿಂದ ಸ್ವಾಗತಿಸಿ ಕುಳಿತುಕೊಳ್ಳಲು ತಿಳಿಸಿದರು.

‘ನಿಮ್ಮ ನಿವೃತ್ತಿ ಜೀವನ ಹೇಗೆ?’ ಎಂದು ಕೇಳಿದರು.

 ‘ಏನೂ ಯೋಚನೆ ಮಾಡಿಲ್ಲ ಸರ್! , ನೀವು ಇದೀಗ ಹೇಳಿದಂತೆ ಆಗಾಗ ಬಂದು ಕಚೇರಿ ಕೆಲಸಗಳನ್ನೆ ಮಾಡಲು ಸಹಾಯ ಮಾಡುತ್ತೇನೆ, ಹೇಗೂ ನನ್ನ ಸ್ಥಳಕ್ಕೆ ಇನ್ನೂ ಯಾರು ಹಾಜರ್ ಆಗಿಲ್ಲವಲ್ಲ’ ಎಂದುತ್ತರಿಸಿದರು.

“ಎಲಾ ಇವನ ! ಸಭಾ ಮರ್ಯಾದೆಗೆಂದು ಹೇಳಿದ ಮಾತನ್ನು ಈವಯ್ಯ ನನಗೇ ತಿರುಗಿಸುತ್ತಿದ್ದಾನಲ್ಲ” ಎಂದು ಸಾವರಿಸಿಕೊಂಡು

‘ರಾಚಯ್ಯನವರೇ ಮುವತ್ತೆರಡು ವರ್ಷ ದುಡಿದು ದಣಿದಿದ್ದೀರಿ ವಿಶ್ರಾತಿ ಪಡೆಯಿರಿ ಮತ್ತೇ ಈ ಹಾಳು ಕಚೇರಿಗೆ ಯಾಕೆ ಬರುತ್ತೀರಿ ? ನಾಳೆ ನಾಡಿದ್ದರಲ್ಲಿ ನಿಮ್ಮ ಜಾಗೆಗೆ ಆ ವೆಂಕಟೇಗೌಡ ಬರುತ್ತಾನೆ. ನಿನ್ನೆನೆ ಫೋನು ಮಾಡಿದ್ದ. ಸರಿ ಮನೆಗೆ ಹೋಗಲು ಕಾರು ಕಳಿಸುತ್ತೇನೆ’ ಎಂದವರೇ ಬೆಲ್ ಮಾಡಿ ಡ್ರೈವರ್ ಕರೆದು

‘ಇವರನ್ನು ಮನೆಗೆ ಬಿಟ್ಟು ಬಾ’

ಎಂದು ಮತ್ತೆ ತಮ್ಮ ಕೆಲಸದಲ್ಲಿ ತೊಡಗಿದರು. ರಾಚಯ್ಯ ‘ನಮಸ್ಕಾರ’ ಹೇಳಿ ಎದ್ದು ಬಂದರು. ಕಾರಿನಲ್ಲಿ ಮನೆಗೆ ಬಂದು ತಾವೇ ಬೀಗ ತೆಗೆದು ಒಳ ನಡೆದರು. ಅಷ್ಟರಲ್ಲಿ ಡ್ರೈವರ್ ಶಾಲು ಸನ್ಮಾನದ ಸಾಮಾನು ತಂದು ಒಳಗಿಟ್ಟು

‘ನಮಸ್ಕಾರ ಸಾರ್ ಬರ್ತಿನಿ’ ಎಂದ. ಅವನ ಕೈಗೆ ನೂರರ ನೋಟು ಕೊಟ್ಟು

‘ಹೋಗಿ ಬಾರಯ್ಯ, ನೆನಪಿರಲಿ, ಖುಷಿಯಿಂದ ಕೊಟ್ಟಿದೀನಿ ಬೇಡಾ ಅನ್ನಬೇಡಾ ಇಟ್ಕೊ’ ಎಂದು ಕಳಿಸಿಕೊಟ್ಟರು.

                        ***** ***** *****

       ರಾಚಯ್ಯನವರು ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನ ಕೆಂಗೇರಿವಾಸಿಯಾಗಿದ್ದರು. ಕೆಂಗೇರಿ ಆಗ ಬೆಂಗಳೂರಿಗೆ ತುಂಬಾ ದೂರದಲ್ಲಿತ್ತು. ಈಗ ಬೆಂಗಳೂರು ಕೆಂಗೇರಿಯಾಚೆಗೂ ಬೆಳೆದು ಕೆಂಗೇರಿಯನ್ನೆ ಊರ ಮಧ್ಯಕ್ಕೆ ತಂದಿದೆ. ರಾಚಯ್ಯನವರ ಹೆಂಡತಿ ಎರಡು ವರ್ಷದ ಹಿಂದೆ ತೀರಿಕೊಂಡರು. ಕೆಲವು ದಿನಗಳಿಂದ ಹುಷಾರಿಲ್ಲ, ಹುಷಾರಿಲ್ಲ ಎನ್ನುತ್ತಿದ್ದ ಆಕೆಯನ್ನು ಒಂದು ದೊಡ್ಡಾಸ್ಪತ್ರೆಗೆ ಒಯ್ದು ತೊರಿಸಿದರೆ ಕ್ಯಾನ್ಸರ್ ಕೊನೆ ಹಂತದಲ್ಲಿದೆ ಎನ್ನಬೇಕೆ ಆ ಡಾಕ್ಟರು. ಇರುವ ಒಬ್ಬ ಮಗ, ಮಗಳು ಮದುವೆಯಾಗಿದ್ದಾರೆ. ಮಗಳು ದೂರದ ದೆಹಲಿ ಹತ್ತಿರದ ಗುಡಗಾಂವ್ನಲ್ಲಿದ್ದಾಳೆ. ಮಗ ಇಂಜಿನಿಯರಾಗಿ ಬೆಂಗಳೂರಲ್ಲೆ ಇಲೆಕ್ಟ್ರಾನಿಕ್ಸ ಸಿಟಿಯಲ್ಲಿದ್ದಾನೆ. ಅವನ ಹೆಂಡತಿಯೂ ಕೆಲಸ ಮಾಡುತ್ತಿದ್ದು ಅವಳು ಬಿ.ಇ. ಎಮ್. ಬಿ. ಎ ಮಾಡಿದ್ದಾಳೆ. ಮಗನಗಿಂತಾ ಹೆಚ್ಚು ಸಂಬಳ ತರುತ್ತಾಳೆ. ಮದುವೆಯಾದ ಸ್ವಲ್ಪ ದಿನಗಳಲ್ಲೆ ಅವರು ಬೇರೆ ಹೊರಟರು. ಇದಕ್ಕೆ ಬೇಡ ಅನ್ನದ ರಾಚಯ್ಯನವರು ತಾವೇ ಖುದ್ದಾಗಿ ಓಡಾಡಿ ಮನೆ ಹುಡುಕಿ ಕೊಟ್ಟರು. ಅವರಿಗಿನ್ನೂ ನೆನಪಿದೆ. ಮಗನಿಗೆ ಬಿ.ಇ. ಮುಗಿದ ಕೂಡಲೇ ನೌಕರಿ ಸಿಕ್ಕಿತು. ಒಂದು ವರ್ಷ ನೌಕರಿ ಮಾಡಿದ ಮಗ ಒಂದು ದಿನ ತಾಯಿ ಮೂಲಕ ಕಾರಿಗೆ ಬೇಡಿಕೆ ಇಟ್ಟ. ಅದೇ ತಾನೇ ಮೆಚ್ಯುರಾಗಿ ಬಂದಿದ್ದ ಕೆ.ಜಿ.ಐ.ಡಿ ಹಣದಲ್ಲಿ ಒಂದೂವರೆ ಲಕ್ಷ ತೆಗೆದು ಕೊಟ್ಟರು. ಉಳಿದಿದ್ದನ್ನು ಅವನೇ ಹಾಕಿ ಮಾರುತಿ 800 ಕಾರು ತಂದ. ಆಗಿನ್ನೂ ಕೆಂಗೇರಿಯಲ್ಲಿ ಅಷ್ಟು ಕಾರುಗಳು ಓಡಾಡುತ್ತಿದ್ದಿಲ್ಲ, ಇವರ ಕಾರು ಕೆಂಗೇರಿಯ ಕೆಲ ಜನರ ಗಮನ ಸೆಳೆದಿತ್ತು. ಕಾರು ತಂದ ದಿನವೇ ಮಗ ಅಪ್ಪ ಅಮ್ಮರನ್ನು ಕಾರಿನಲ್ಲಿ ಇಸ್ಕಾನ್ ಟೆಂಪಲ್‍ಗೆ ಕರೆದುಕೊಂಡು ಹೋಗಿ ಬಂದ. ಹೋಗುವಾಗ ದಾರಿಯಲ್ಲಿ ‘ಅಪ್ಪಾ ನೀವು ರಿಟೈರ್ ಆದ ದಿವ್ಸ ಇದೇ ಕಾರು ತರ್ತಿನಿ, ನೀವು ನಿಮ್ಮ ಸ್ವಂತ ಕಾರಲ್ಲಿ ಮನೆಗೆ ಬರ್ಬೇಕು’ ಎಂದು ಹೇಳಿದ್ದ. ಮುಂದೆ ವರ್ಷಕ್ಕೆ ಅವನ ಮದುವೆಯಾಯಿತು. ಅವನ ಹೆಂಡತಿ ಆಗಲೇ ಫಾರಿನ್ಗೆ ಹೋಗಿ ಬಂದವಳಾದ್ದರಿಂದ ಅವರೆಲ್ಲರ ಅಭಿಮಾನದ ಸಂಕೇತವಾಗಿದ್ದ ಈ ಕಾರು ಅವಳಿಗೆ ಅವಮಾನದ ಸಂಕೇತವೆನಿಸತೊಡಗಿತು. ರಾಚಯ್ಯನವರ ವಿರೋಧದ ಹೊರತಾಗಿ ಮಾರುತಿ 800 ಕಾರನ್ನು ಬದಲಾಯಿಸಿ ಒಂದು ಲಕ್ಷುರಿ ವಿದೇಶಿ ಕಾರನ್ನು ಬ್ಯಾಂಕ್ ಸಾಲ ಪಡೆದು ಕೊಂಡುಕೊಂಡರು. ಆಗಲೂ ಎಲ್ಲರೂ ಸೇರಿ ಇಸ್ಕಾನ್ ಟೆಂಪಲ್‍ಗೆ ಹೋಗಿ ಬಂದರು. ಮU ಈಗ ಮತ್ತೆ ಕಾರು ಬದಲಾಯಿಸಿದ್ದಾನಂತೆ.

    ಹೀಗೆ ಹಿಂದಿನ ನೆನಪುಗಳೊದಿಗೆ ನಿವೃತ್ತಿ ನಂತರದ ರಾತ್ರಿ ಕಳೆದ ರಾಚಯ್ಯನವರನ್ನು ಬೆಳಿಗ್ಗೆ ಪತ್ರಿಕೆಯಲ್ಲಿದ್ದ ನಾಣ್ಯದ ಸುದ್ದಿ ಆಕರ್ಷಿಸಿತ್ತು. ಲಕ್ಕುಂಡಿ ತಮ್ಮ ಸ್ವಂತ ಊರ ಹತ್ತಿರದ ಊರಾದ್ದರಿಂದ ಅದಕ್ಕೆ ವಿಶೇಷ ಗಮನಕೊಟ್ಟಿದ್ದರು. ರಾಚಯ್ಯನವರು ಪ್ರೈಮರಿ ಶಾಲೆಯಲ್ಲಿದ್ದಾಗ ‘ನಾನು ಪತ್ರಕರ್ತನಾದರೆ’ ಎಂದು ನಿಭಂಧವೊಂದನ್ನು ಬರೆದು ಬಹುಮಾನ ಪಡೆದಿದ್ದರು. ಅದೀಗ ನೆನಪಾಗಿ ನಾನೇಕೆ ಪತ್ರಕರ್ತನಾಗಬಾರದು ಎಂಬ ವಿಚಾರ ಬಂದು ಪೆನ್ನು ಕಾಗದ ತೆಗೆದುಕೊಂಡು ನಾಣ್ಯಗಳ ಮೇಲೆ ಒಂದು ಲೇಖನ ಬರೆಯಲು ಕುಳಿತರು. ಇದೂವರೆಗೂ ಸರ್ಕಾರಿ ಭಾಷೆಯಲ್ಲಿ ಬರೆದ ಅವರಿಗೆ ಲೇಖನದ ಭಾಷೆ ಏನು ಎಂಬುದೇ ಹೊಳೆಯಲಿಲ್ಲ. ಆದರೆ ಲೇಖನ ಬರೆಯುವ ಹುಮ್ಮಸ್ಸು ಕಡಿಮೆ ಆಗಲಿಲ್ಲ. ಎಷ್ಟೇ ಕಷ್ಟಪಟ್ಟರೂ ಒಂದು ಪುಟ ಬರೆಯಲಾಗಲಿಲ್ಲ. ತಮ್ಮ ಹಳೇ ನಾಣ್ಯದ ಸಂಗ್ರಹವನ್ನು ಹರಡಿಕೊಂಡು ಕುಳಿತರು. ಅವರ ಸಂಗ್ರಹದಲ್ಲಿ ತುಂಬ ಅಪರೂಪದ ನೋಟು ನಾಣ್ಯಗಳು ಇದ್ದವು, ಅವುಗಳ ಪೈಕಿ ಕೆಲವು ಚಲಾವಣೆ ಕಳೆದುಕೊಂಡು ದಶಕಗಳೇ ಆಗಿದ್ದವು. ಒಂದು ಕ್ಷಣ ಅವುಗಳ ಮೇಲೆಲ್ಲಾ ಕೈ ಆಡಿಸಿ, ಅವು ತಮ್ಮ ಸಂಗ್ರಹಕ್ಕೆ ಸಿಕ್ಕ ಸಂಧರ್ಭ ನೆನೆಸಿಕೊಂಡು ಸಂತೋಷಪಟ್ಟರು. ಒಂದು ಐದರ ನೋಟು ನೋಡಿದರು ಅದರಲ್ಲಿ ಮೇಲೆ ಮುದ್ರಿಸಿದ ನಂಬರು ಮತ್ತು ಕೆಳಗೆ ಮುದ್ರಿಸಿದ ನಂಬರಿನಲ್ಲಿ ವ್ಯತ್ಯಾಸವಿತ್ತು, ಇನ್ನೊಂದು ಹತ್ತರ ನೋಟು ನೋಡಿದರು ಅದರಲ್ಲಿ ಮೇಲೆ ಮಾತ್ರ ನಂಬರನ್ನು ಮುದ್ರಿಸಲಾಗಿತ್ತು. ಇನ್ನೊಂದು ನಾಣ್ಯವನ್ನು ನೋಡಿದರು, ಇದರಲ್ಲಿ ಅಶೋಕ ಸ್ಥಂಭವಿತ್ತು ಆದರೆ ಕೆಳಗೆ ‘ಸತ್ಯಮೇವ ಜಯತೇ’ ಅಚ್ಚಾಗಿರಲಿಲ್ಲ. ಇಷ್ಟೆಲ್ಲ ಸಂಗತಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೂ ಅದರಿಂದ ಲೇಖನಕ್ಕೆ ಯಾವ ಸಹಾಯವೂ ಆಗಲಿಲ್ಲ. ಮತ್ತೆ ಎಲ್ಲವನ್ನೂ ಗೂಡಿಸಿ ಕಟ್ಟಿ ಇಟ್ಟರು.

        ಸಂಜೆ ವಾಕಿಂಗ ಹೋದಾಗ ಲೇಖನ ಕುರಿತು ವಿಚಾರ ಮಾಡಿ ರೂಪ ರೇಷೆ ಸಿದ್ಧ ಮಾಡಿದರು. ಆದರೆ ಮನೆಗೆ ಬಂದು ಲೇಖನ ಸಿದ್ಧಗೊಳಿಸಲು ಕುಳಿತರೆ ಶೂನ್ಯ ಆವರಿಸುತಿತ್ತು, ಲೇಖನ ಸಿದ್ಧಗೊಳಿಸಲು ಸಾಧ್ಯವಾಗುತ್ತಿರಲಿಲ್ಲ. ಆಗ ಅವರಿಗೆ ನೆನಪಾಗಿದ್ದೇ ನರಸಿಂಹಮೂರ್ತಿ. ಪತ್ರಕರ್ತರಾಗಿದ್ದ ನರಸಿಂಹಮೂರ್ತಿ ಅವರೂ ಕೆಂಗೇರಿ ವಾಸಿಯಾಗಿದ್ದರು, ಹೆಚ್ಚೂ ಕಮ್ಮಿ ಇಬ್ಬರ ಮನೆಗಳೂ ಒಮ್ಮಿಗೆ ಸಿದ್ಧವಾಗಿದ್ದವು. ನಮಸ್ಕಾರ !  ಹಲೋ ! ಎಂಬಷ್ಟು ಪರಿಚಯ ಅವರ ನಡುವಿತ್ತು. ಈಗ ನರಸಿಂಹಮೂರ್ತಿ ಹೆಸರಾಂತ ಪತ್ರಿಕೆಯೊಂದರಲ್ಲಿ ಮುಖ್ಯ ಉಪ ಸಂಪಾದಕರಾಗಿದ್ದರು. ಅವರ ಪ್ರಯತ್ನದಿಂದಾಗಿ ಕೆಂಗೇರಿಯ ಉಪವನಕ್ಕೆ ಮೀಸಲಾದ ಸ್ಥಳದ ಕಬಳಿಕೆ ತಪ್ಪಿತ್ತು, ಅಲ್ಲದೇ ಸ್ವತ: ಮುಖ್ಯಮಂತ್ರಿಗಳೇ ಬಂದು ಉಪವನಕ್ಕೆ ಅಡಿಗಲ್ಲು ಹಾಕಿದ್ದರು. ಮುಂದೆ ಯಾವಾಗಲೋ ಇನ್ನೊಬ್ಬ ಮುಖ್ಯಮಂತ್ರಿ ಅದರ ಉದ್ಘಾಟನೆ ನೆರವೇರಿಸಿದ್ದರು. ಅದರಲ್ಲಿ ವಾಕಿಂಗ ಪಾಥ್ ಜೋಕಾಲಿ ಇತ್ಯಾದಿಗಳು ಬಂದು ವೃದ್ಧರಿಗೆ ಮಕ್ಕಳಿಗೆ ಅನುಕೂಲವಾಗಿತ್ತು. ಅವರ ಬಳಿ ಹೋಗಿ ತನ್ನ ಲೇಖನಕ್ಕೆ ಮಾರ್ಗದರ್ಶನ ಪಡೆದುಕೊಂಡರೆ ಹೇಗೆ ಎಂದು ವಿಚಾರ ಮಾಡಿ ಅವರ ಮನೆಗೆ ಹೊರಟರು. ಮನೆಗೆ ಹೋಗಿ ಬೆಲ್ ಮಾಡಿ ಪರಿಚಯ ಮಾಡಿಕೊಂಡರು. ಬಾಗಿಲು ತೆರೆದ ಅವರ ಹೆಂಡತಿ ‘ಪ್ರೆಸ್ಸಿಗೆ ಹೋಗಿದ್ದಾರೆ ನಾಳೆ ಬೆಳಿಗ್ಗೆ ಬನ್ನಿ ಸಿಕ್ತಾರೆ’ ಎಂದು ಹೇಳಿದರು.

       ಮರುದಿನ ಬೆಳಿಗ್ಗೆ ವಾಕಿಂಗ ಮುಗಿಸಿ ಪುನ: ಮನೆಗೆ ಹೋದರೆ ‘ಅವರು ಇನ್ನೂ ವಾಕಿಂಗನಿಂದ ಬಂದಿಲ್ಲ, ಒಂದೊಂದು ಸಾರಿ ವಾಕಿಂಗನಿಂದ ಪ್ರೆಸ್ಸಿಗೆ ಹೋಗಿಬಿಡುತ್ತಾರೆ ಈಗ ಚುನಾವಣೆ ಹತ್ತಿರವಾಯಿತಲ್ಲ ಅದಕ್ಕೆ’ ಎಂದು ಹೇಳುತ್ತಾ ಕುಳಿತುಕೊಳ್ಳಿ ಎಂದು ಸಿಟ್‍ಔಟ್‍ನಲ್ಲಿ ಅವರ ಹೆಂಡತಿ ಕೂಡಿಸಿದರು. ಏನೋ ಗುನು ಗುನು ಹಾಡು ಹೇಳುತ್ತಾ ಕೈ ತೋಟದ ಹೂ ಬಿಡಿಸಿಕೊಂಡು ಹೋಗಿ ಒಳಗಿನಿಂದ ಚಹ ತಂದುಕೊಟ್ಟರು. ರಾಚಯ್ಯನವರಿಗೆ ಚಹ ನೋಡಿದ ಕೂಡಲೇ ನೆನಪಾಯಿತು. ಇಷ್ಟು ದೊಡ್ಡ ವ್ಯಕ್ತಿಯನ್ನು ನೋಡಲು ಹಾಗೇ ಬಂದೆನಲ್ಲ ಹಣ್ಣನ್ನಾದರೂ ತರಬೇಕಿತ್ತು ಎಂದುಕೊಂಡರು.

 ‘ಅಮ್ಮಾ ನಿಮ್ದು ಯಾವೂರು’

 ‘ನಮ್ದು ಗದಗರಿ’

‘ಅದಕ್ಕೆ ಅಂದುಕೊಂಡೆ, ನಿಮ್ಮ ಮನೆ ಬೊರ್ಡಿನಲ್ಲಿ ನರಸಿಂಹಮೂರ್ತಿ.ಕುಲಕರ್ಣಿ ಅಂತಿದೆ, ನಮ್ಮದೂ ಗದಗರೀ ಒಕ್ಕಲಗೇರ ಓಣ್ಯಾಗ ನಮ್ಮ ಮನಿ ಇತ್ತು’

‘ನಮ್ಮ ಮನಿ ಮಸಾರ್ಯಾಗ ಅದರಿ’ ಎನ್ನುತ್ತಾ ಅವರು ಸಿಟ್‍ಔಟ್ ಗೊಡೆಗೆ ಆತುಕೊಂಡು ನಿಂತು ಆಕೆ ಹೇಳತೊಡಗಿದರು.

‘ನೊಡ್ರಿ, ಇವ್ರು ರಿಟಾಯರಾಗಿ ಐದು ವರ್ಷಾತು, ಆದ್ರೂ ಪ್ರೆಸ್ಸಿಗೆ ಹೊಗೂದ ಬಿಟ್ಟಿಲ್ಲ, ಇವ್ರು ರಿಟಾಯರಾದ ದಿವ್ಸ ನನ್ನೂ ಕರೆದು ಜೋಡಿಲೇ ಸನ್ಮಾನ ಮಾಡಿದರು. ಇವರ ಮ್ಯಾಲೆ ಅವರ ಸಾಹೇಬರಿಗೆ ಭಾಳ ಪ್ರೀತಿರಿ. ಅವರು ರಾಮಸ್ವಾಮಿ ಅಂತ, ಅಯ್ಯಂಗಾರ ಪೈಕಿರಿ, ಈ ಅಯ್ಯಂಗಾರ ಮಂದಿಗೆ ಉಳಿದವರು ಮಾಡಿದ ಕೆಲ್ಸಾ ಮನಸಿಗೇ ಬರೂದಿಲ್ಲ, ಆದರ ನಮ್ಮ ಮನಿಯವರ ಕೆಲ್ಸಾ ಮೆಚ್ಚಿಕೊಂಡಿದ್ದರು. ಆವತ್ತ ರಿಟಾಯರ್ ಆಗೋ ದಿವ್ಸ ಏನಂದ್ರು ಗೊತ್ತೇನ್ರಿ?’

 ‘ಈ ನರಸಿಂಹಮೂರ್ತಿ ಸಂಪಾದಕೀಯ ಮತ್ತು ಲೇಖನಗಳಿಲ್ಲದ ಪತ್ರಿಕೆ ಓದಬೇಕಲ್ಲಾ ಎಂದು ದು:ಖ ಆಗ್ತಾ ಇದೆ, ಅಂತ್ಹೇಳಿ ಭಾಳ ತಾಪ ಮಾಡಿಕೊಂಡರು, ಆಮ್ಯಾಲ ನಮ್ಮ ಮನಿಯವ್ರು  ನಾನು ನಿವೃತ್ತಿ ಆದರೂ ಆಫೀಸಿಗೆ ಬರ್ತೀನಿ, ನನ್ನ ವಯಸ್ಸು, ಆರೋಗ್ಯ ಘಟ್ಟಿ ಇರೋತನಕಾ ಕೆಲ್ಸಾ ಮಾಡ್ತಿನಿ ಅಂತ ಸಮಾಧಾನ ಮಾಡಿದರು. ಅದಕ್ಕೆ ಅವರ ಸಾಹೇಬರು ‘ಅಷ್ಟು ಮಾಡು ಕಣಯ್ಯಾ, ನಿನಗೇನಂಥಾ ಮಹಾ ವಯಸ್ಸಾಗಿದೆ ನಾಳೇನೇ ನಿನಗೊಂದು ಸ್ಪೇಶಲ್ ಏ.ಸಿ. ಚೇಂಬರ್ ವ್ಯವಸ್ಥಾ ಮಾಡ್ತೀನಿ, ಅಂತ್ಹೇಳಿ ಸನ್ಮಾನಾ ಮಾಡಿದರು.’ ಇಷ್ಟು ಹೇಳುತಿದ್ದಂತೆ ರಾಚಯ್ಯನವರಿಗೆ ನಿವೃತ್ತಿ ದಿವಸ ತನ್ನ ಸಾಹೇಬ ತನಗೆ ಹೇಳಿದ ಮಾತು ನೆನಪಾಗಿ ಚುಚ್ಚಿದಂತಾಯಿತು. ಆದರೂ ಅದು ಸರ್ಕಾರಿ ಕಚೇರಿ ಅಲ್ಲಿ ಹಾಗೆಲ್ಲ ಆಗದು ಎಂದು ಸಮಾಧಾನಿಸಿಕೊಂಡು

‘ಪುನ: ಬರ್ತೀನಮ್ಮಾ’ ಎಂದು ಹೇಳಿ ಹೊರಟರು.

   ಮನೆಗೆ ಬಂದು ನಾಣ್ಯಗಳೆನೆÀಲ್ಲ ಹರಡಿಕೊಂಡು ಲೇಖನ ಬರೆಯ ಕುಳಿತರೆ ಬರೀ ಸಂಸಾರದ ಹಳವಂಡಗಳು ನೆನಪಾಗಿ ಏನೂ ಬರೆಯಲಾಗಲಿಲ್ಲ. ರಾತ್ರಿಯಾಗುತ್ತಲೇ ಬಾಗಿಲು ಬಂದು ಮಾಡಿ ಲೈಟು ಹಚ್ಚಿ ನಾಣ್ಯಗಳನ್ನು ಕೈಯಲ್ಲಿ ಹಿಡಿದು ನೋಡಿದರು. ಅದರಲ್ಲಿ ಒಂದು ನಾಣ್ಯ ಒಂದೇ ಬದಿಗೆ ಅಚ್ಚಾಗಿತ್ತು. ಇನ್ನೊಂದು ಬದಿ ಸಪಾಟಾಗಿತ್ತು. ಹಾಗೇ ನೋಡುತ್ತಾ ಅದನ್ನ ಕೈಯಲ್ಲಿ ಹಿಡಿದುಕೊಂಡೇ ಸೋಫಾ ಮೇಲೆ ಒರಗಿದರು.

        ರಾಚಯ್ಯನವರ ಮನೆ ಮುಂದಿನ ಲಾನ್‍ದಲ್ಲಿ ಮೂರು ದಿನಗಳಿಂದ ಪೇಪರು, ಹಾಲಿನ ಪಾಕೀಟು ಹಾಗೇ ಬಿದ್ದಿದ್ದವು. ಅವನ್ನು ಎತ್ತಿಕೊಳ್ಳಲು ಅಲ್ಲಿ ಯಾರೂ ಇರಲಿಲ್ಲ.

                                                                                                                                                             ಶ್ರೀನಿವಾಸ.ಹುದ್ದಾರ

                                                                                                                                                           ಸಂಪರ್ಕ : 9448541024

Comments

Submitted by lpitnal Sat, 07/25/2015 - 09:42

ಆತ್ಮೀಯ ಶ್ರೀನಿವಾಸ ಜಿ, ನಮಸ್ಕಾರ. ತಾವು ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ ಕಥೆಗಾರರು. ತಮ್ಮ ಕಥೆಯನ್ನು ಓದಲು ಕಾತುರನಾಗಿರುವೆ. ಈಗ ಇದನ್ನು ಸಂಪದದಲ್ಲಿ ಅದೇಕೊ ಸಾಧ್ಯವಾಗುತ್ತಿಲ್ಲ. ದಯವಿಟ್ಟು ತಾವು ಈ ಕಥೆಯನ್ನು ಯುನಿಕೋಡ್ ಗೆ ಪರಿವರ್ತಿಸಿ ಅಪಲೋಡ್ ಮಾಡಿ, ಯುನಿಕೋಡ ಹೇಗೆ ಮಾಡಬೇಕೆಂದು 'ಸಂಪದದಲ್ಲಿ ಬರೆಯುವ ಮುನ್ನ' ದಲ್ಲಿ ವಿವಿಧ ಪರಿವರ್ತನೆಗಳ ಕುರಿತು ಮಾಹಿತಿ ಇದೆ. ವಂದನೆಗಳು.

Submitted by swara kamath Sat, 07/25/2015 - 21:02

ಶ್ರೀಯುತ ಹುದ್ದಾರರೆ ತಮ್ಮ ಲೇಖನ ಯುನಿಕೋಡ್ ನಲ್ಲಿ ಇರದ ಕಾರಣ ಲೇಖನ ಓದಲು ಸಾದ್ಯ ವಾಗುತ್ತಿಲ್ಲ.ಸ್ನೇಹಿತರಾದ ಇಟ್ನಾಳ ಸರ್ ತಿಳಿಸಿದ ಹಾಗೆ ಪ್ರಯತ್ನಿಸಿ.ಅಥವ ತಾವು ಗೂಗಲ್ ನಲ್ಲಿ ASCII to unicode ಎಂದು ಟೈಪಿಸಿ.ವೆಬ್ ಪೇಜ್ ತೆರೆದಮೇಲೆ @aravindavk - ASCII to Unicode Convereter for Kannada ಎಂಬುವದರ ಮೇಲೆ ಕ್ಲಿಕ್ಕಿಸಿ.ಅಲ್ಲಿರುವ ಸೂಚನೆಯಂತೆ ನಿಮ್ಮ ನುಡಿ ಯಲ್ಲಿರುವ ಲೇಕನವನ್ನು ಯುನಿಕೋಡ್ ಗೆ ಪರಿವರ್ತಿಸಿ MS office word ನಲ್ಲಿ ಕಾಪಿ ಪೆಸ್ಟಮಾಡಿ ಸೇವ್ ಮಾಡಿಕೊಳ್ಳಿ. ತದನಂತರ ಸಂಪದ ದಲ್ಲಿ ಪ್ರಕಟಿಸಿ.
ವಂದನೆಗಳು .............ರಮೇಶ ಕಾಮತ್

Submitted by smurthygr Mon, 07/27/2015 - 18:39

In reply to by swara kamath

ಒಂದು ಒಳ್ಳೆಯ ಕತೆ. ಸಂಪದದಲ್ಲಿ ಇನ್ನೂ ಬರೆಯಿರಿ.
ಅಂದಹಾಗೆ, ಯೂನಿಕೋಡ್ ಲೇಖನವನ್ನು MS Wordಗೆ ಹಾಕಬಾರದು. ಅದನ್ನು ಯಾವುದಾದರೂ ಸರಳ Text editor (Notepad ಅಂತಹದು) ಗೆ ಹಾಕಿ. MS wordಗೆ ಹಾಕಿದರೆ format ತೊಂದರೆಯಾಗುತ್ತದಂತೆ.

Submitted by Huddar Shriniv… Tue, 07/28/2015 - 15:13

In reply to by hpn

ವಂದನೆಗಳು ಹೆಚ್.ಪಿ.ಎನ್. ಅವರೇ, ನಿಮ್ ಸಹಾಯದಿಂದಾಗಿ ಇದನ್ಫ್ನು ಎಲ್ಲರೂ ಓದುವಂತಾಯಿತು. ಎಲ್ಲದಕೂ ಕಾರಣ‌ ಶ್ರೀ ಇಟ್ನಾಳ‌ ರು ಅವರಿಗೆ ದನ್ಯವಾದಗಳು.

Submitted by lpitnal Wed, 07/29/2015 - 11:04

ಆತ್ಮೀಯ ಶ್ರೀನಿವಾಸ್ ಹುದ್ದಾರ ರವರೇ, ತುಂಬ ಚನ್ನಾದ ಕಥಾನಕ. ಅನುಭವ ಜನ್ಯ. ಬಲು ಮೆಚ್ಚುಗೆಯಾಯಿತು. ಬ್ಯೂಟಿಫುಲ್ ನ್ಯಾರೇಶನ್...ವಂದನೆಗಳು ಸರ್,