ಕೊಳಲು - ಲಕ್ಷ್ಮೀಕಾಂತ ಇಟ್ನಾಳ

ಕೊಳಲು - ಲಕ್ಷ್ಮೀಕಾಂತ ಇಟ್ನಾಳ

ಚಿತ್ರ

ಕೊಳಲು - ಲಕ್ಷ್ಮೀಕಾಂತ ಇಟ್ನಾಳ

ಯಾರಿದ್ದೀರಿ, ತೆರೆದ ಮನೆಯಲ್ಲಿ?
ನಾವಿದ್ದೇವೆ, ನಾವು,.... ನಾವೆಂದರೆ?
ನಾನು ಇವಳು ಮತ್ತೆ ಮಗಳು
ಮೂರೇ ಜನಾನಾ?

ಇಲ್ಲ ಇಲ್ಲ, ಪುಟ್ಟ ಖುಷಿ,  ವಯಸ್ಸಾದ ಬುದ್ಧಿಯೂ ಇದೆ,
ಈ ಖುಷಿಯಂತೂ ಓಡಾಡಿಕೊಂಡಿರುತ್ತದೆ ನಮ್ಮ ಮುಖಗಳಲ್ಲಿ , ಮನಗಳಲ್ಲಿ
ತಂಗಾಳಿಯಂತೆ...ಮುದವಾಗಿರುತ್ತದೆ,
ಒಂದೇ ಕಡೆಗಿರುವುದಿಲ್ಲ ಅದು....ಬೆಕ್ಕಿನಂತೆ
ಈ ಸಾರಿ ಕೈಗೆ ಸಿಕ್ಕರೆ, .....ಬೆಲ್ಟ್ ಹಾಕಿ ಬಿಡಬೇಕು ಅದಕ್ಕೆ!

ಬುದ್ಧಿಗೆ ಕಾಲಿಲ್ಲ, ಹೀಗಾಗಿ ಬಿದ್ದುಕೊಂಡಿದೆ, ವಟ ವಟ ಹಚ್ಚಿರುತ್ತದೆ,
ನಾವು ಚಹ ಕುಡಿದರೆ, ಕಷಾಯದ ಬಗ್ಗೆ ಹೇಳುತ್ತದೆ,' ಕುರುಕುರು' ಮೆದ್ದರೆ, ಊಟದ ಮಾತಾಡುತ್ತದೆ,
ಇನ್ನು ಪಿಜ್ಜಾ ಬರ್ಗರ್‍ಗಳನ್ನು ಅದರ ಕಣ್ತಪ್ಪಿಸಿಯೇ ತಿನ್ನಬೇಕು,
ಬೆಳಿಗ್ಗೆ ಬೇಗ ಏಳಲು, ವ್ಯಾಯಾಮ ಮಾಡಲು, ವಾಕಿಂಗ್ ಹೋಗಲು ಪೀಡಿಸುತ್ತಿರುತ್ತದೆ,
ಪ್ರತಿಸಾರಿ ಬತ್ತಳಿಕೆಯಿಂದ ನೆಪಗಳನ್ನು ಹುಡುಕುತ್ತಲೇ ಇರುತ್ತೇನೆ ನಾನೂ
 
ಮಗನ ರೂಮಲ್ಲಿ ಕಾಲಿಟ್ಟರೆ 'ಖಾಲಿ'ಯೊಂದು ಅಪ್ಪಿ ಬಿಡುತ್ತದೆ
ಆದರೂ ನನಗೆ  ಒಂಟಿಯಾಗಲು ಬಿಡುವುದಿಲ್ಲ ಅದು,
ಹಳೆಯ ಘಟನೆಗಳು, ಕಳೆದ ಗಳಿಗೆಗಳನ್ನು ಹೆಗಲೇರಿಸಿ ಬಿಡುತ್ತದೆ,
 ಎಷ್ಟೊಂದು ಓದು ಅವನದು, ತೆರೆಗಳಂತೆ  ಮುಗಿಯುತ್ತಿರಲೇ ಇಲ್ಲ,
ಅವನಿತ್ತ ತಿರುಗಿದರೆ ನಾನು, ಅತ್ತ ಅಮ್ಮ, ಜೊತೆಯಲ್ಲೆ ಸುಮ್ಮನೆ,
ರಾತ್ರಿ ಬಹುಹೊತ್ತು ಉರಿಯುತ್ತಿತ್ತಲ್ಲವೇ ದೀಪ ಅವನ ರೂಮಲ್ಲಿ,
ಅವ ಮರೆತ ಊಟ, ಕುಡಿಯದ ಹಾಲಿನ ಲೋಟಗಳಿಗೆ ಲೆಕ್ಕವೇ ಇಲ್ಲ
ಬಲು ಅಭಿಮಾನದ ಕೂಸು, ಕಣ್ಣಲ್ಲಿ ಕನಸೇ ಕುಣಿಯುತ್ತಿದ್ದವು,
ಮಲಗಿದಾಗ ತಲೆಯನ್ನು ನೇವರಿಸುತ್ತ ಕುಳಿತುರುತ್ತಿತ್ತು ಜೀವ,
ನಾವೆಂದರೆ ಅದೆಷ್ಟು ಕಾಳಜಿ, ಪ್ರೀತಿ

ಅದು ಹಾಗಲ್ಲ, ....ಅದು ಅವನ ಸ್ವಭಾವ ಇವಳನ್ನುತ್ತಿದ್ದಳು.. .
ಅಕಸ್ಮಾತ್ ಏನಾದರೂ ಹುಡುಕಿ ಹೋದರೆ,
ಕೆಲವೊಮ್ಮೆ ಅವನ ಆ ಶರ್ಟುಗಳು, ಸೂಟುಗಳು ನನ್ನೆಡೆ ದಿಟ್ಟಿಸಿ ನೋಡುತ್ತವೆ,
ಮುಟ್ಟಿದರೆ ಮುತ್ತಿ ಬಿಡುತ್ತವೆ ನೆನಪುಗಳು! ಉಕ್ಕಿಬರುತ್ತವೆ ಕಂಬನಿಗಳು, ಅದೆಲ್ಲಿರುತ್ತವೋ!

ದುಡಿತದ ಕಾಲುಗಳಿಗೆ ಸರಹದ್ದುಗಳು ನೆರೆಮನೆಗಳೀಗ,
ಅವನು ವಿದೇಶದಿಂದ ಬಂದಾಗ ನೋಡಬೇಕು, ಈ ರೂಮಿಗಷ್ಟೇ ಅಲ್ಲ, ಮನೆತುಂಬ ಖುಷಿ ಹೊಕ್ಕುಬಿಟ್ಟಿರುತ್ತದೆ,..,
'ನಗು'ವಿನ ಕಿಲಕಿಲ ಗೋಡೆ ಬಾಗಿಲುಗಳಿಗೂ.... ಮನೆಯೆಂಬ ಮನೆ ವiಯನ ಮಹಲು...,
ಕಿಟಕಿಗಳು ಖುಷಿ ಹಂಚಿಕೊಳ್ಳುವುದನ್ನು ನೋಡಿದ್ದೇನೆ, ..ತಂಗಾಳಿ ತೀಡಿದಾಗ
'ಮಲಕೊಳ್ಳಿರಿ ಸಾಕಿನ್ನು' ಎಚ್ಚರಿಸುತ್ತದೆ ಬುದ್ಧಿ, ನಗು ಕಲರವಕ್ಕೆ  ನಿದ್ದೆ ಬರದೇ

ಈ ನಗುವಿಗೂ ಖುಷಿಗೂ ಬಿಟ್ಟಿರದ ವಾತ್ಸಲ್ಯ ,
ಮಗನಿಗೂ ಅಮ್ಮನಿಗೂ ಇರುವ ಹಾಗೆ!

ಆದರೆ ಮಗಳ ರೂಮಲ್ಲಿ ಹೆಚ್ಚಾಗಿ ಏಕಾಂತವೇ ಅವಳ 'ಸಾಥಿ'
ಊಟವಾಯಿತೇ ಎಂದರೆ, , ಅದೇ ಗೋಣು ಹಾಕುತ್ತದೆ, ಹೂಂ ಉಹೂಂ ಅಷ್ಟೇ..
ಅವಳ ಪರೀಕ್ಷಾ ಸಮಯದಲ್ಲಿ ಅವಳೊಡನೆ  'ಆತಂಕ ' ಬಿಟ್ಟೇ ಹೋಗುವುದಿಲ್ಲ,
ಅವಳೊಡನೆ  ಪರೀಕ್ಷಾ ಕೋಣೆವರೆಗೂ  ಜೊತೆ ಹೋಗಿರುತ್ತದೆ, ಅಂಥ ಸ್ನೇಹ!
ಆದರೂ ಬರುವಾಗ ಮಾತ್ರ ಹೆಚ್ಚಾಗಿ ಖುಷಿಯೇ ಅವಳನ್ನು ಕರೆತರುತ್ತದೆ

ಮಕ್ಕಳಿವು  ನನಗಿಂತ ದೊಡ್ಡವು ಈಗ,
ವರ್ತಮಾನಗಳೀಗ ಇತಿಹಾಸವಾಗಿ ನನ್ನ ಬುದ್ಧಿಯನ್ನು ತಿದ್ದುತ್ತಿರುತ್ತವೆ
ನನ್ನ ತಿಳುವಳಿಕೆಯನ್ನು ಹದಗೊಳಿಸುತ್ತವೆ ಇನ್ನಷ್ಟು

ಇಂತಿಪ್ಪ ಮನೆಯಲ್ಲಿ,  ಖುಷಿಯೇ ಕುಣಿಯುತ್ತಿದೆ,  ಮನ ಕಾಮನಬಿಲ್ಲಿನ ಶಾಮಿಯಾನಾ,

ಮನೆಯ ಅಂಗಳದಲ್ಲಿ ಹೂವೊಂದು ಅರಳಲಿದೆ
ಇಳಿದು ಬರಲಿವೆ ಚುಕ್ಕಿ ಚಂದ್ರಮರು ಧರೆಗೆ
ತುಂಬಲಿದೆ ಮನೆಯಿದು ನಮ್ಮದು,
ಮನೆಯಲ್ಲಿ  ನೆಲೆಸಿದ ಶಾಂತಿಗೆ ಕಾಂತಿ ಬರಲಿದೆ
ಒಲವಿನ, ಗೆಲುವಿನ, ಚಲುವಿನ, ನಲಿವಿನ
 ಕಾಮನಬಿಲ್ಲಿನ ರಂಗನು ಹೊತ್ತು
 ಖುಷಿ ಬರಲಿದೆ, ಮನೆಗಿನ್ನೊಂದು
ಕಾಲುಗಳು ನೆಲದ ಮೇಲಿಲ್ಲ ನಂದು
ಹೃದಯದ ಹಾಡೀಗ 'ಶೃತಿ' ಶುದ್ಧ ಜೇನು
ಎದೆಯಾಳದ ಕರೆಗೆ ರಂಗೋಲಿಯಾದ ಬಾನು

 ದೀಪದಾರುತಿಯಾಗಿಹವು ಕಂಗಳು
 ನಗುಹೂವಿನ  ಕೊಳಲ ಕರೆಗೆ
ಬರಮಾಡಲು ಅಣಿಯಾಗಿವೆ ಮನ,
ನವ ರಾಗದ ವೀಣೆಯ ಶೃತಿಗೆ,
ಹೊಸ ಹಾಡಿನ ಹೊಸ ಕನಸಿನ ಕುಡಿಗೆ!

Rating
No votes yet

Comments

Submitted by nageshamysore Sat, 07/25/2015 - 05:17

ಇಟ್ನಾಳರೆ ನಮಸ್ಕಾರ. ಎದೆಯೊಳಗಿನ ಖುಷಿ, ಸಂಭ್ರಮ ತನ್ನ ತಹತಹವನ್ನು ಹಿಡಿದಿಡಲೊಲ್ಲದೆ ಮಾತಾಗಿ ಚೆಲ್ಲಿಕೊಂಡಂತಿದೆ. ಚೆಲ್ಲಾಡಿದ ಸುಗಂಧದ ಕಂಪು, ಸಾಂಕ್ರಾಮಿಕತೆ ಓದಿದವರ ತಲೆಗು ನೇರ ಹತ್ತಿಸುವಷ್ಟು ಗಾಢವಾಗಿದೆ. ಖುಷಿಯ ಈ ಗಳಿಗೆಗಳು ಧೀರ್ಘವಾಗಲಿ, ನಿರೀಕ್ಷೆಗಳ ಎಲ್ಲ ಮೊಗ್ಗುಗಳು ಸುಖವಾಗರಳಿ ಹೂವಾಗಿ ರಂಜಿಸಲಿ ಎಂದು ಹಾರೈಸುವೆ :-)

Submitted by lpitnal Sat, 07/25/2015 - 09:46

In reply to by nageshamysore

ಆತ್ಮೀಯ ನಾಗೇಶ ಜಿ, ತಮ್ಮ ವಿಚಕ್ಷಣ ಮನಸ್ಸಿನಿಂದ ಪಾರಾಗುವುದು ಯಾರಿಗೂ ಸಾಧ್ಯವಿಲ್ಲ. ಖುಷಿಯನ್ನು ಹಂಚಿಕೊಳ್ಳಬಯಸಿ, ತುಸು ಹರಿಯಬಿಟ್ಟೆ. ಬದುಕು ಪಲ್ಲವಿಸುವ ಸಮಯ ಎಲ್ಲರಿಗೂ ಒದಗುವು ಹಾಗೆ ವಸಂತ ನಮ್ಮ ಮನೆಯಲ್ಲಿ ತನ್ನ ಹಸಿರನ್ನು ಉಸುರಲಿದೆ. ತಮ್ಮ ಶುಭಕಾಮನೆಗಳಿಗೆ ವಂದನೆಗಳು ಸರ್.

Submitted by kavinagaraj Sun, 07/26/2015 - 11:52

ಮನೋವ್ಯಾಪಾರ, ಬುದ್ಧಿಯ ಅಡೆ-ತಡೆಗಳ ಹದವಾದ ನಿರೂಪಣೆ ಮಾಡಿರುವಿರಿ, ಜೊತೆಯಲ್ಲಿ ನಿಮ್ಮ ಮತ್ತು ಮಕ್ಕಳ ಮನೋಸ್ಥಿತಿಯನ್ನೂ ಬಿಂಬಿಸಿರುವಿರಿ. ಚೆನ್ನಾಗಿದೆ.

Submitted by H A Patil Sun, 07/26/2015 - 18:28

ಲಕ್ಷ್ಮೀಕಾಂತ ಇಟ್ನಾಳರಿಗೆ ವಂದನೆಗಳು
ಕೊಳಲು ಒಂದು ಅದ್ಭುತ ಕವನ ಮನೆಯಲ್ಲಿ ಪುಟ್ಟ ಖುಷಿಯ ಜೊತೆಗೆ ವಯಸ್ಸಾದ ಬುದ್ಧಿಯೂ ಇರಲಿ ಅದರ ಬಗೆಗೆ ಸ್ವಲ್ಪ ಕನಿಕರವಿರಲಿ. ನಿಮ್ಮ ಮನೆಯಂಗಳದಿ ಹೂವೊಂದು ಅರಳಲಿ ಚುಕ್ಕಿ ಚಂದ್ರಮರು ಧರೆಗಿಳಿದು ಬರಲಿ ನಿಮ್ಮ ಕನಸಿನ ಮನೆ ಹರುಷದಿಂದ ತುಂಬಿರಲಿ ಎನ್ನುವ ಸದಾಶಯದೊಂದಿಗೆ ಶುಬ ಸಂಜೆ ಧನ್ಯವಾದಗಳು.

Submitted by lpitnal Mon, 07/27/2015 - 09:14

In reply to by H A Patil

ಹಿರಿಯ ಲೇಖಕ, ಕವಿ ಹನುಮಂತ ಅನಂತ ಪಾಟೀಲ ರವರೇ, ತಮ್ಮ ಎಂದಿನ ಪ್ರೀತಿದುಂಬಿದ ಮೆಚ್ಚುಗೆಯ ನುಡಿಗೆ ಧನ್ಯವಾದಗಳು ಸರ್.