ಮಂತ್ರಶಕ್ತಿ

ಮಂತ್ರಶಕ್ತಿ

ಪುಸ್ತಕದ ಲೇಖಕ/ಕವಿಯ ಹೆಸರು
ಇಂದಿರತನಯ
ಪ್ರಕಾಶಕರು
ಅಂಕಿತ ಪ್ರಕಾಶನ
ಪುಸ್ತಕದ ಬೆಲೆ
೧೫೦

ಸ್ನೇಹಿತನಿಂದ "ಮಂತ್ರಶಕ್ತಿ" ಎಂಬ ಕಾದಂಬರಿಯೊಂದನ್ನು ತಂದು ಸ್ವಲ್ಪ ಓದಿದೆ ಆದರೆ ಅದನ್ನು ಪುರ್ಣಗೊಳಿಸಲು ಸಮಯವೇ ಸಿಗುತ್ತಿರಲಿಲ್ಲ.ಒಂದು ದಿನ ವಾರಂತ್ಯದಲ್ಲಿ ಒಬ್ಬನೇ ರೂಂ ನಲ್ಲಿ ಇದ್ದೆ ತುಂಬಾ ಬೇಸರವಾಗಲಾರಂಬಿಸಿತು ಆಗ ಏನನ್ನಾದರೂ ಓದೋಣವೆಂದು ಅಪೂರ್ಣಗೊಳಿಸಿದ್ದ ಈ ಕಾದಂಬರಿ ತೆರೆದೆ ಓದುತ್ತಾ ಎಷ್ಟು ಕುತೂಹಲವಾಯಿತೆಂದರೆ ೨೫೦ ಪುಟಗಳ ಪುಸ್ತಕ ಮುಗಿದಿದ್ದೆ ತಿಳಿಯಲಿಲ್ಲ.
"ಶವವಾಗಿದ್ದ ಯುವತಿ ಜೀವಂತ ಎದ್ದು ನಿಂತಳು......"
"ಸದಾ ಮರವೇರಿ ಕುಳಿತರುತ್ತಿದ್ದ ಹುಡುಗ ಕೆಳಗಿಳಿದು ಬಂದು ಬಾಳುವೆ ಮಾಡತೊಡಗಿದ......"
"ಕಣ್ಣಿನ ದೃಷ್ಟಿಯಿಂದಲೇ ಮೋಹಿತಳಾದ ಹೆಂಗಸೋಬ್ಬಳು ಕಂಡುಕೇಳರಿಯದವನೋಬ್ಬನ ದುರಾಸೆಗೆ ಬಲಿಯಾದಳು..... "
ಇವು ಈ ಗ್ರಂಥದಲ್ಲಿ ನಡೆಯುವ ಅಸಂಖ್ಯಾತ ಘಟನೆಗಳಲ್ಲಿ ಒಂದೆರಡಷ್ಟೆ.ನಮ್ಮ ಇಂದಿನ ಯಾಂತ್ರಿಕ ಜೀವನದಲ್ಲಿ,ನಾಗರಿಕತೆಯ ಹೆಸರಿನಲ್ಲಿ,ವಿಜ್ಞಾನದ ಬೆಳಕಿನಲ್ಲಿ ತರ್ಕಕ್ಕೆ ಸಿಕ್ಕದ ಇಂಥ ಘಟನೆಗಳು ಅತೀಂದ್ರಿಯ ಲೋಕವೊಂದನ್ನು ಧ್ವನಿಸುತ್ತವೆ.ಮನುಷ್ಯನ ಎಲ್ಲೆಯಿರದ ಮನಃಶಕ್ತಿಯನ್ನು ಮನವರಿಕೆ ಮಾಡಿಕೊಡುವ ಈ ಕೃತಿ ಒಂದು ಅರ್ಥದಲ್ಲಿ ಕಾದಂಬರಿ,ನಿಜ.ಆದರೆ ವ್ಯಾಪಕ ಅರ್ಥದಲ್ಲಿ ಸಂಕಲ್ಪ ಶಕ್ತಿಯಿಂದ ಪ್ರೇರಿತವಾದ ಮಾನವಮನಸ್ಸಿನ ಸೂಕ್ಷ್ಮಗಳನ್ನು ಆಧಾರಗಳ ಮೂಲಕ ನಿರೂಪಿಸುವ ಅಪೂರ್ವ ಗ್ರಂಥ.ಕನ್ನಡದಲ್ಲಿ ಈ ಬಗೆಯ ಕಾದಂಬರಿಗಳನ್ನು ಮೊಟ್ಟಮೊದಲಿಗೆ ಬರೆದವರು ಇಂದಿರಾತನಯ ಎಂದು ಕರೆಯಲ್ಪಡುವ ಶ್ಯಾಮ್. ಅತ್ಯಂತ ಕ್ಲಿಷ್ಟವಾದ ಮಂತ್ರತಂತ್ರ ವಿದ್ಯೆಗಳನ್ನು ಸಮಾಜ ಜೀವನದ ಗಾಜಿನ ಮೂಲಕ ಹಾಯಿಸಿ,ಒಂದು ಗಾಢ ಅನುಭವ ಉಂಟಾಗುವಂತೆ ಮಾಡುವ ಅವರ ಬರವಣಿಗೆ ನಮ್ಮ ಸಾಹಿತ್ಯ ಸಂದರ್ಭದಲ್ಲಿ ತೀರ ಅಪರೂಪವಾದದ್ದು.ನೇರವಾಗಿ ಕತೆ ಹೇಳುವ ಜಾಣ್ಮೆ, ಉದ್ದೇಶಿಸಿರುವುದಕ್ಕಿಂತ ಹೆಚ್ಚು ಧ್ವನಿಸುವ ಪಾರದರ್ಶಕ ಭಾಷೆ,ಪಾತ್ರಗಳ ಅಂತರಂಗವನ್ನು ನಿರಾಯಾಸವಾಗಿ ತೆರೆದಿಡಬಲ್ಲ ಕಲಾತ್ಮಕ ಅಭಿವ್ಯಕ್ತಿ -ಇವುಗಳಿಂದಾಗಿ ಈ ಕೃತಿ ಮತ್ತೆ ಮತ್ತೆ ಓದಬೇಕನ್ನಿಸುವ ಅನನ್ಯ ಕೃತಿಯೆನಿಸಿದೆ.ಇಲ್ಲಿ ನಿರೂಪಿತವಾಗಿರುವ ಘಟನೆಗಳು ಮೊದಲ ನೋಟಕ್ಕೆ ಹೆದರಿಕೆ ಹುಟ್ಟಿಸುವಂತಿದ್ದರೂ,ಪುಸ್ತಕ ಓದಿ ಮುಗಿಸಿದಾಗ ಮನಶ್ಯಕ್ತಿಯ ಸಾಧ್ಯತೆಗಳನ್ನು ಮನದಟ್ಟು ಮಾಡಿಕೊಡುವ ಅನುಭವ ಘಟಕಗಳಾಗಿಯೂ ಅವು ಕೆಲಸ ಮಾಡುತ್ತವೆ.ಲೇಖಕರ ಅತೀಂದ್ರಿಯ ಅನುಭವಗಳ ಅಭಿವ್ಯಕ್ತಿಗೆ ಕಾದಂಬರಿ ಪ್ರಕಾರ ಒಂದು ವಾಹಕವಷ್ಟೆ.ಅತೀಂದ್ರಿಯ ಲೋಕವನ್ನು ಕಣ್ಣೆದುರು ತರುವ ಇಂದಿರಾತನಯರವರ "ಮಂತ್ರಶಕ್ತಿ" ಒಂದು ಉತ್ತಮ ಕಾದಂಬರಿಯಾಗಿದೆ.