ಸುದ್ದಿವಾಹಿನಿಗಳ ಮೇಲಾಟ
`ಸರ್ವೇ ಗುಣಾಃ ಕಾಂಚನಮಾಶ್ರಯಂತಿ' `ದುಡ್ಡೇ ದುಡ್ಡಪ್ಪ' ಮತ್ತಿತರ ಲೋಕೋಕ್ತಿಗನುಗುಣವಾಗಿ, ಯಾವುದೇ ಉದ್ಯಮ, ಲಾಭವನ್ನಷ್ಟೇ ಗುರಿಯಾಗಿರಿಸಿಕೊಂಡಿರುತ್ತವೆ. ಸಾಮಾಜಿಕ ಜವಾಬ್ದಾರಿಯ ಬಗ್ಗೆ ಕನಿಷ್ಠ ಚಿಂತನೆಯನ್ನೂ ಅವು ಹೊಂದವು. ಬಹು ಲಾಭ ತಂದುಕೊಡುವ ಉದ್ಯಮಗಳೆಂದರೆ, ಶಿಕ್ಷಣ ಉದ್ಯಮ, ಆರೋಗ್ಯ ಉದ್ಯಮ ಹಾಗೂ ರಾಜಕಾರಣದುದ್ಯಮ ! ಈ ಸಾಲಿಗೆ ಇತ್ತೀಚಿನ ಸೇರ್ಪಡೆ – ಮಾಧ್ಯಮೋದ್ಯಮ! ಅದರಲ್ಲೂ ಹೆಚ್ಚು ಪರಿಣಾಮಕಾರಿಯಾದ ದೃಶ್ಯ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿ ಮರೆತು `ದುಡ್ಡು' ಮಾಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವುದು ಶೋಚನೀಯ. ಈ ಕಾರಣಕ್ಕಾಗಿಯೇ ತಾ ಮೇಲು ತಾ ಮೇಲು ಎನ್ನುವಂತೆ ನಮ್ಮ ಸುದ್ಧಿ ವಾಹಿನಿಗಳ ಮೇಲಾಟ. ಅವುಗಳ ಲಾಭ-ಜಾಹೀರಾತುಗಳಿಂದ. ಜಾಹೀರಾತುದಾರರೋ ವಾಹಿನಿಯ TRP ಅನ್ನುವ ರಾಂಕಿಂಗ್ ಮೇಲೆ ಹಣ ಹೂಡುವ ಹೂಡಿಕೆದಾರರು. ಹಾಗಾಗಿಯೇ TRP ಮೇಲೇ ಎಲ್ಲ ಸುದ್ಧಿವಾಹಿನಿಗಳ ಕಣ್ಣು. ಈ TRP ಗಾಗಿ ಏನು ಮಾಡಲೂ ಹೇಸದ ಪರಿಸ್ಥಿತಿಯನ್ನು ಸ್ವತಃ ತಂದುಕೊಂಡಿದ್ದರಿಂದ, ಈ ಸುದ್ಧಿ ವಾಹಿನಿಗಳ ಮೇಲಾಟ ನಮಗೆ ಹೇಸಿಗೆಯನ್ನುಂಟು ಮಾಡುತ್ತದೆಯೇ, ಶಿವಾಯಿ ಖುಷಿಯನ್ನಲ್ಲ.
ಇತ್ತೀಚೆಗಂತೂ ನಾನು ಯಾವುದೇ ಸುದ್ಧಿಯನ್ನು ಬರೀ ಮಾಹಿತಿಯುಕ್ತ, ಉಪಯುಕ್ತ ಸುದ್ಧಿಯಾಗಿ ಕೇಳಿಲ್ಲ. ನಮ್ಮ ಸುದ್ದಿ ವಾಹಿನಿಗಳು ಅದಕ್ಕೆ ಅನಗತ್ಯ ಮಸಾಲಾಗಳನ್ನು ಬೆರೆಸಿ, `ರೋಚಕ' ವನ್ನಾಗಿಸಿ ಪ್ರಸಾರ ಮಾಡುತ್ತಾರೆ. "ಕಳ್ಳನಿಗೆ ಸಾರ್ವಜನಿಕರಿಂದ ಧರ್ಮದೇಟು" ಅನ್ನುವ live ಸುದ್ಧಿಯನ್ನು ಪ್ರಸಾರ ಮಾಡುವಾಗ, ಅಲ್ಲಿನ ಜನಗಳೂ ಹುಚ್ಚೆದ್ದು ಕ್ಯಾಮೆರಾಗಾಗಿ ಒಂದಿಷ್ಟು ತದಕುತ್ತಾರೆ, ತಮಗೆ ವಿಚಾರವೇನೂ ತಿಳಿಯದಿದ್ದರೂ ಸಹ ! ಇವೆಲ್ಲಾ ಯಾತಕ್ಕಾಗಿ? ತುಂಡು TRP ಗಾಗಿ!
ಮೊನ್ನೆ ಕನ್ನಡ ಸುದ್ದಿವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ವಾಹಿನಿಯ ಪ್ರಚಾರ - `ನಿಮ್ಮಲ್ಲಿ ಯಾರಾದರೂ ಕಳ್ಳ ಬಾಬಾ ಯಾ ಗುರುಗಳಿದ್ದಾರೆಯೇ? ನಮ್ಮನ್ನು ಸಂಪರ್ಕಿಸಿ. ನಾವು ಅವರಿಗೆ ತಕ್ಕ ಪಾಠ ಕಲಿಸುತ್ತೇವೆ. ಸಂಪರ್ಕಿಸಿ ಮೊಬೈಲ್ ನಂ. -------------" ಇದಾದ ಮರುಕ್ಷಣದಲ್ಲಿ, ಅದೇ ವಾಹಿನಿಯಲ್ಲಿ ಪ್ರಸಾರವಾಗುವ `ಬ್ರಹ್ಮಾಂಡ' ವೆಂಬ ಬ್ರಹ್ಮಾಂಡ ಭವಿಷ್ಯದ ಕಾರ್ಯಕ್ರಮದ ಪ್ರಸಾರ! ಇಂಥ `ಬ್ರಹ್ಮಾಂಡ' ಕಾರ್ಯಕ್ರಮಕ್ಕೂ, ಕಳ್ಳ ಬಾಬಾಗಳಿಗೂ, ನಿತ್ಯಾನಂದನಂಥವರಿಗೂ ಏನಾದರೂ ವ್ಯತ್ಯಾಸವುಂಟೇ? ಖಂಡಿತಾ ಇಲ್ಲ, ಇದು ವಾಹಿನಿಯವರಿಗೆ ತಿಳಿದಿಲ್ವೇ? ಖಂಡಿತಾ ತಿಳಿದಿರ್ತದೆ. ಆದರೂ ಈ ಆಷಾಢಭೂತಿತನ ಯಾಕೆ ಗೊತ್ತೇ? ತುಂಡು TRP ಗಾಗಿ ಸ್ವಾಮಿ, ತುಂಡು TRP ಗಾಗಿ !
ಇನ್ನು ಅಪರಾಧ ಜಗತ್ತಿನ ಅನಾವರಣ. ವಾಹಿನಿಗಳ ಅಪರಾಧ ಸಂಬಂಧೀ ಕಾರ್ಯಕ್ರಮಗಳಂತೂ ಭಾವೀ ರೌಡಿ ಯಾ ಪಾತಕರಿಗೆ "ದೂರ ಶಿಕ್ಷಣ" ಕಾರ್ಯಕ್ರಮಗಳಂತಿರುತ್ತವೆ ಮತ್ತು ಇಲ್ಲಿ ವಾಹಿನಿಯವರೇ ಅಂತಿಮ ತೀರ್ಪುಗಾರರೂ ಆಗಿ ಬಿಡುತ್ತಾರೆ. ಪೋಲಿಸರ ತನಿಖೆ ಎಲ್ಲಾ ಬದಿಗೊತ್ತಿ ತಮ್ಮ ಮೂಗಿನ ನೇರಕ್ಕೇ ಪರಾಮರ್ಶಿಸಿ, ಅಮಾಯಕರ `ಅತ್ಯಾಚಾರ' ಮಾಡುತ್ತಾರೆ. ಊಹೆಗಳಿಗೆ ಸಮರ್ಥವಾದ ಕಥೆಯ ಉಡಿಗೆ ತೊಡಿಸಿ ಜನರಿಂದ ತಮ್ಮ ಪೂರ್ವ ನಿರ್ಧಾರಿತ ವ್ಯಾಖ್ಯೆಗನುಗುಣವಾಗಿ ಉತ್ತರ `ಬರಿಸಿ', ಅದಾಗದಿದ್ದಾಗ `ಸಂಕಲನ' (editing) ಆಯುಧದಲ್ಲಿ ಕಥೆಯನ್ನು ಕೆತ್ತಿ, ಮುಂದಿಟ್ಟಾಗ, ಆರೋಪಿಯೂ ಒಂದು ಕ್ಷಣ ಬೆರಗಾಗಿ `ಹೀಗೂ ಉಂಟೆ' ಎಂದಾನು ! (ಅದರ ಮುಂದಿನ ಕಾರ್ಯಕ್ರಮವಾಗಿ `ಹೀಗೂ ಉಂಟೇ' ಅನ್ನುವುದು ಪ್ರಸಾರವಾದಲ್ಲಿ ಅದು ಕಾಕತಾಳೀಯ ಮಾತ್ರ !) ಇವೆಲ್ಲಾ ಯಾಕಂತೀರಾ ? ತುಂಡು TRP ಗಾಗಿ !
ಹೊಸ ಹೊಸ ಸುದ್ದಿಯನ್ನು ಜಾಸ್ತಿ ಪ್ರಸಾರ ಮಾಡುವ ಧಾವಂತದಲ್ಲಿ ಇತ್ತೀಚೆಗೆ ವಾಹಿನಿಯವರು ಸುದ್ದಿಯ `ಸೃಷ್ಟಿಕರ್ತ'ರಾಗುತ್ತಿದ್ದಾರಾ ಎಂಬ ಅನುಮಾನ ನನಗೆ ಇತ್ತೀಚೆಗೆ ಬರತೊಡಗಿದೆ. ಈ ಹಿಂದೊಮ್ಮೆ ಅಂಬರೀಷ್ ಅಭಿನಯದ ನ್ಯೂ ಡೆಲ್ಲಿ ಚಲನಚಿತ್ರದಲ್ಲಿ ಹೀಗಾಗಿತ್ತು. ಅದರದು ರೀಲ್ ಆಗಿತ್ತು. ಇದು ರಿಯಲ್ ಆಗಿದೆಯಲ್ಲಾ ಏನೆನ್ನೋಣ? ಎಲ್ಲಾ ತುಂಡು TRP ಗಾಗಿ!
ಈ ಹಿಂದೆ ಸುದ್ದಿ ಅನ್ನುವುದು ಸತ್ಯ ಎನ್ನುವುದರ ಸಮಾನಾರ್ಥಕ ಪದವಾಗಿತ್ತು. ಹೌದು, ನೀವು ಸರಿಯಾಗಿಯೇ ಓದಿದ್ದೀರಿ – ಆಗಿತ್ತು ಎಂದಲೇ ಬರೆದಿದ್ದೇನೆ. ಏಕೆಂದರೆ, ಇಂದಿನ ಪರಿಸ್ಥಿತಿಯಲ್ಲಿ ಸತ್ಯ ಯಾ ಸುದ್ದಿ ಸಮಯಕ್ಕನುಗುಣವಾಗಿ ಬದಲಾಗುವ ಛಾತಿಯನ್ನು ಹೊಂದಿದೆ! ಸುದ್ದಿವಾಹಿನಿಗಳು ಸತ್ಯ ನಿಷ್ಠೆಯನ್ನು ಕೈ ಬಿಟ್ಟು, `ಆರು ರೊಟ್ಟಿ ಕೊಟ್ರೆ ಅತ್ತೆ ಕಡೆ, ಮೂರು ರೊಟ್ಟಿ ಕೊಟ್ರೆ ಮಾವನ ಕಡೆ' ವಿಧಾನವನ್ನನುಸರಿಸ ತೊಡಗಿರುವುದರಿಂದ, ಯಾವ ವಾಹಿನಿಯ ಸುದ್ದಿಯನ್ನು ನಂಬಬಹುದೋ ಯಾವುದನ್ನು ಬಿಡಬೇಕೋ ತಿಳಿಯದೇ ನೋಡುಗ ಮಹಾಶಯ ತಲೆ ತಲೆ ಚಚ್ಚಿಕೊಳ್ಳುತ್ತಿದ್ದಾನೆ. `editing' ಅನ್ನುವ ಆಯುಧವನ್ನು ಉಪಯೋಗಿಸಿ ಈಗ ವಾಹಿನಿಗಳು ಎಂಥ ಸುದ್ದಿಯನ್ನಾದರೂ ತಮ್ಮ ಮೂಗಿನ ನೇರಕ್ಕೆ ತಿರುಚಬಲ್ಲವಾಗಿದೆ! `ನನ್ನ ಹೇಳಿಕೆಯನ್ನು ತಿರುಚಲಾಗಿದೆ' ಎನ್ನುವ ರಾಜಕಾರಣಿಗಳ ಖಾಯಂ ಹೇಳಿಕೆಯ copy rights ನ್ನು ನಮ್ಮ ಸುದ್ದಿವಾಹಿನಿಗಳು ಸಾರಾಸಗಟಾಗಿ ಕದ್ದು ಬಿಟ್ಟಿವೆ. ಇದರಿಂದಾಗಿಯೇ ಎಷ್ಟೋ ಮಂದಿ, ಭಯೋತ್ಪಾದಕರಿಗೆ ಹೆದರದಿದ್ದರೂ, ಈ `ಸುದ್ದಿಯುತ್ಪಾದಕ' ರಿಗೆ ಹೆದರುವುದುಂಟು ! ಇಷ್ಟೆಲ್ಲಾ ಸರ್ಕಸ್ ಏತಕ್ಕಾಗಿ ಅಂತೀರಿ? ತುಂಡು TRP ಗಾಗಿ ಸ್ವಾಮಿ, ತುಂಡು TRP ಗಾಗಿ !
ಸುದ್ದಿವಾಹಿನಿಗಳ ಬಹುಮುಖ್ಯ ಜೀವಾಳ – ಈ breaking news ! ಸುದ್ದಿಯನ್ನು ಎಲ್ಲರಿಗಿಂತ ಮುಂಚೆ ಪ್ರಕಟಿಸಬೇಕೆಂಬ ಹಪಾಹಪಿಯಲ್ಲಿ, ಸುದ್ದಿಯ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚದೇ ಪ್ರಸಾರಿಸುತ್ತವೆ. ಇದಕ್ಕೆ ಒಂದು ಹಿಂದಿನ ಉದಾಹರಣೆಯೆಂದರೆ, ಪಾಕ್ನ ಹೀರಾ ರಬ್ಬಾನಿ ಹಾಗೂ ಬಿಲಾಲ್ ನಡುವಿನ ಪ್ರೇಮ ಪ್ರಸಂಗದ ಸುದ್ದಿ. ಈ ಸುದ್ದಿಯಂತೂ ಎಲ್ಲ ಮಾಧ್ಯಮಗಳಲ್ಲೂ ತುಂಬಾ ಮಹತ್ವದ್ದೆನ್ನುವ ಸ್ಥಾನವನ್ನಲಂಕರಿಸಿತು, ಪ್ರೇಮಕ್ಕಾಗಿ ಹೀರಾ ತನ್ನ ಕುಟುಂಬವನ್ನೂ, ಬಿಲಾಲ್ ತನ್ನಪ್ಪನನ್ನೂ ತೊರೆದು ಪರದೇಶಕ್ಕೆ ಹೋಗಲಿದ್ದಾರೆ ಅನ್ನುವವರೆಗೂ ಸುದ್ದಿ ಬಂತು! ಆದರೆ ಅಂಥದ್ದೇನೂ ಇಲ್ಲದೇ ಈ ವಾರ್ತಾಲಾಪ ಠುಸ್ ಎಂದಿತು! ಇದಕ್ಕೆ `ಸುದ್ದೀಕರಣ' ಅನ್ನುವುದು. ಈ `ಸುದ್ದೀಕರಣ'ದ ಶುದ್ಧೀಕರಣ ಆಗಬೇಕಿದೆ. (ಆದರೆ `ಶುದ್ದೀಕರಣ'ಕ್ಕೆ `ಸುದ್ದೀಕರಣ' ಅಂತ ಅನ್ನುವವರೇನೂ ಕಡಿಮೆಯಿಲ್ಲ ನಮ್ಮಲ್ಲಿ!) ಎಲ್ಲಾ TRP ಮಹಾತ್ಮೆ.
ಜೊತೆಗೆ breaking news ಕೊಡಲೇಬೇಕೆನ್ನುವ ಹುಚ್ಚಿಗೆ ಒಳಗಾಗಿ, ಮಹತ್ವದ್ದಲ್ಲದ ಸಾಮಾನ್ಯ ಸುದ್ದಿಯನ್ನೂ breaking news ಅಂತ ಕೊಟ್ಟು ಕೊಟ್ಟು, breaking news ನ ಅರ್ಥವನ್ನೇ ಕೆಡಿಸಿಬಿಟ್ಟಿದ್ದಾರೆ, ಈ ವಾಹಿನಿಯವರು. Breaking news ನಲ್ಲಿ "ಹಾಸನದ ಅರಕಲಗೂಡಿನಲ್ಲಿ ಗೋಪಾಲ್ ಅನ್ನುವವರ ಮನೆಯಲ್ಲಿ ಹಸುವಿನಿಂದ ಒಂದು ಕರು ಜನನ, ಕರು ಆರೋಗ್ಯವಾಗಿದೆ" ಈ ಸುದ್ದಿ ಬಂದರೆ breaking news ಗೆ ಅರ್ಥ ಇರುತ್ತದೆಯೇ? ಎಲ್ಲಾ TRP ಮಹಾತ್ಮೆ.
ಒಂದು ಕಾಲದಲ್ಲಿ ಸುದ್ದಿ ಅಪರೂಪದ್ದಾಗಿತ್ತು. ದಿನಕ್ಕೆ 1/2 ಘಂಟೆ ಮಾತ್ರ DD ಯಲ್ಲಿ ಬರುತ್ತಿದ್ದ ಸುದ್ದಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿದ್ದುದಿತ್ತು. ಆದರೀಗ? ಅಸಂಖ್ಯಾತ ಸುದ್ದಿವಾಹಿನಿಗಳಷ್ಟೇ ಅಲ್ಲ, ಇವು ದಿನದ ಇಪ್ಪತ್ನಾಲ್ಕು ತಾಸೂ ಸುದ್ದಿಯನ್ನು ಬಿತ್ತರಿಸುತ್ತಿದ್ದು, ಸುದ್ದಿಯೆಂದರೆ ಹೆದರಿಕೆಯಾಗುವಂತಾಗಿದೆ. ಇವಕ್ಕಾದರೂ ಅಷ್ಟು ಸುದ್ದಿ ಸಿಕ್ಕಾವೆಯೇ? ಖಂಡಿತಾ ಇಲ್ಲ. ಹಾಗಾಗಿಯೇ ಈ ವಾಹಿನಿಗಳು ತಮ್ಮ `ಸೃಷ್ಟಿ'ಯ ಸುದ್ದಿಗಳು, `ರೋಚಕ' ಸುದ್ದಿಗಳು, ಚರ್ವಿತ ಚರ್ವಣ ಸುದ್ದಿ, ಪೀತ ಮಾಧ್ಯಮದ ಸುದ್ದಿಗಳಿಂದ ತಮ್ಮ TRP ಹೆಚ್ಚಿಸಿಕೊಳ್ಳುವ ಯತ್ನದಲ್ಲಿರುತ್ತವೆ. ಇವುಗಳ ಭರದಲ್ಲಿ ನಿಜವಾದ ಸುದ್ದಿಗಳೇ ಮೂಲೆಗುಂಪಾಗುತ್ತವೆ. ಆದರೆ ಈ ವಾಹಿನಿಗಳ bye line - `ನೇರ, ದಿಟ್ಟ, ನಿರಂತರ', ಸುದ್ದಿಯೋ, ನೋಡುಗರ ಶೋಷಣೆಯೋ ಗೊತ್ತಾಗೋಲ್ಲ! ಈ ಅಸಂಖ್ಯಾತ ಸುದ್ದಿವಾಹಿನಿಗಳ ಮೇಲಾಟದಲ್ಲಿ, ನೋಡುಗ ಎಲ್ಲೋ ಕಳೆದು ಹೋಗಿದ್ದಾನೆ, ನಿಮಗೆ ಸಿಕ್ಕಲ್ಲಿ, ತಿಳಿಸುವಿರಾ?!
Comments
ಉ: ಸುದ್ದಿವಾಹಿನಿಗಳ ಮೇಲಾಟ
ಚೆನ್ನಾಗಿದೆ,
ಮಾಧ್ಯಮಗಳು ಜನರ ಅಭಿರುಚಿಗೆ ತಕ್ಕಂತೆ ಸುದ್ದಿಯ ಪ್ರಸಾರದ ಆಳ ಅಗಲ ನಿರ್ಧರಿಸುತ್ತಾರೆ, ಆದರೆ ಮಾಧ್ಯಮಕ್ಕೆ ಜನರ ವಿವೇಚನೆ ವೈಚಾರಿಕತೆಯನ್ನು ಹೆಚ್ಚಿಸುವ ಅವಕಾಶವಿದೆಯೆಂದು ಮರೆಯಬಾರದು. ಬದಲಾವಣೆಯ ಗಾಳಿ ಎರಡೂ ಕಡೆಯಿಂದ ಬೀಸಬೇಕಿದೆ, ಆದರೆ ಮೊದಲು ಎತ್ತಲಿನಿಂದ, ಎಂಬುದೆ ಕಗ್ಗಂಟಾಗಿದೆ.
In reply to ಉ: ಸುದ್ದಿವಾಹಿನಿಗಳ ಮೇಲಾಟ by Hanumesh
ಉ: ಸುದ್ದಿವಾಹಿನಿಗಳ ಮೇಲಾಟ
ಧನ್ಯವಾದಗಳು ಹನುಮೇಶ್ ಅವರೇ,
ನನಗನ್ನಿಸೋ ಮಟ್ಟಿಗೆ ಈಗ Journalism ಓದೋವ್ರಿಗೆ "ಪತ್ರಿಕಾ ಧರ್ಮ" ಅನ್ನೋ ವಿಷಯಾನೇ ಬೋಧಿಸೋದಿಲ್ವಾಂತ ಅನುಮಾನ!! ಅದಕ್ಕೇ ಈ ಪರಿ ವಿಚಿತ್ರ ವ್ಯವಹಾರ.
ಉ: ಸುದ್ದಿವಾಹಿನಿಗಳ ಮೇಲಾಟ
ಸಂತೋಷ ಶಾಸ್ತ್ರಿ ಯವರಿಗೆ ವಂದನೆಗಳು
ತಾವು ಬರೆದದ್ದು ಅಕ್ಷರಶಃ ನಿಜ ಆದರೆ ಜನಗಳೆ ಅಂ ತಹ ಕಾರ್ಯಕ್ರಮಗಳನ್ನು ನೋಡುವುದನ್ನು ನಿಲ್ಲಿಸಬೇಕು ಅಂ ದರೆ ಮಾತ್ರ ಇಂತಹವುಗಳಿಂದ ಮುಕ್ತಿ ಸಾಧ್ಯ, ಧನ್ಯವಾದಗಳು.
In reply to ಉ: ಸುದ್ದಿವಾಹಿನಿಗಳ ಮೇಲಾಟ by swara kamath
ಉ: ಸುದ್ದಿವಾಹಿನಿಗಳ ಮೇಲಾಟ
ಕಾಮತರಲ್ಲಿ ಧನ್ಯವಾದಗಳು.
ನೀವು correct ಆಗಿ ಹೇಳಿದ್ದೀರಿ. "ಅಹಂಕಾರಕ್ಕೆ ಉದಾಸೀನವೇ ಮದ್ದು" ಎಂಬಂತೆ, ಇಂಥ ಕಾರ್ಯಕ್ರಮಗಳನ್ನು ಉದಾಸೀನ ಮಾಡಿದರಷ್ಟೇ ಇವು ತಹಬಂದಿಗೆ ಬರೋದು.
ಉ: ಸುದ್ದಿವಾಹಿನಿಗಳ ಮೇಲಾಟ
ನೀವು ಹೇಳಿದು ನಿಜ ಸರ್.TRP ಬಂದ ಮೇಲೆ ಮಾಧ್ಯಮಗಳು ತುಂಬಾ ಬದಲಾಗಿವೆ.ಹುಡುಗಿಯ ಮೇಲೆ ರೇಪವಾದ ಸುದ್ದಿಯನ್ನು ಕ್ರಾಟೂನ್ ಮೂಲಕ ಬಿಂಬಿಸುತ್ತಾ ಮೊದಲು ಹೇಗೆ ಆಯಿತು ಅಂತ ವಿಸತ್ರುತ್ತವಾಗಿ ವಿವರಿಸುತ್ತಾರೆ.ನಿಜಾವಾಗಿಯೂ ಅದರ ಅವಶ್ಯಕತೆ ಇರುತ್ತಾ?.
In reply to ಉ: ಸುದ್ದಿವಾಹಿನಿಗಳ ಮೇಲಾಟ by Nagaraj Bhadra
ಉ: ಸುದ್ದಿವಾಹಿನಿಗಳ ಮೇಲಾಟ
ನಿಜ ಸರ್, ದುಡ್ಡಿಗಾಗಿ ನೈತಿಕತೇನೂ ಮಾರಾಟಕ್ಕಿಟ್ರೆ ಹೀಗೇ ಆಗೋದು.
ಉ: ಸುದ್ದಿವಾಹಿನಿಗಳ ಮೇಲಾಟ
ಎಲ್ಲವನ್ನು ವಾಣಿಜ್ಯೀಕರಣ ಮಾಡಿ ಲಾಭದ ಹಣವಾಗಿ ಬದಲಿಸುವ ಹುನ್ನಾರ ಇದರ ಮುಖ್ಯ ಹಿನ್ನಲೆ. ಆ ಪ್ರಲೋಭನೆಯನ್ನು ಅಧಿಗಮಿಸಿ ತತ್ವ ನಿಷ್ಟ, ಸಿದ್ದಾಂತ ಬದ್ಧವಾಗಿ ನಡೆಯುವ ಉದ್ಯಮ / ಸಂಸ್ಥೆ / ಚಟುವಟಿಕೆಗಳು ತೀರಾ ಅಪರೂಪವೆನ್ನಬೇಕು. ಸದ್ಯ, ಆ ಅಪರೂಪದ ಗುಂಪಿನಲ್ಲಿ ಸಂಪದವೂ ಒಂದು ಎನ್ನುವುದು ಹೆಮ್ಮೆ, ನೆಮ್ಮದಿಯ ವಿಷಯ..
In reply to ಉ: ಸುದ್ದಿವಾಹಿನಿಗಳ ಮೇಲಾಟ by nageshamysore
ಉ: ಸುದ್ದಿವಾಹಿನಿಗಳ ಮೇಲಾಟ
ಅದು ನಿಜ ಸರ್, ಅಪ್ಪ ನೆಟ್ಟಗಿದ್ರೆ ಮಕ್ಕಳು ನೆಟ್ಟಗಿರ್ತವೆ. ಸಂಸ್ಥೆಯ top brass or management ಸರಿ ಇಲ್ದಿದ್ರೆ ಸಂಸ್ಥೆ ಹಾಳಾಗೋದು ಗ್ಯಾರಂಟಿ.
ಉ: ಸುದ್ದಿವಾಹಿನಿಗಳ ಮೇಲಾಟ
ಸತ್ಯ. ಮಾಧ್ಯಮಾಧಮರು ಈ ಕ್ಷೇತ್ರವನ್ನು ಕುಲಗೆಡಿಸಿಬಿಟ್ಟಿದ್ದಾರೆ. ನೈತಿಕ ಮೌಲ್ಯಗಳನ್ನು ಹಾಳುಗೆಡುವುದರಲ್ಲಿ ಈ ಕ್ಷೇತ್ರದ ಕೊಡುಗೆ ಅಪಾರವಾಗಿದೆ,
In reply to ಉ: ಸುದ್ದಿವಾಹಿನಿಗಳ ಮೇಲಾಟ by kavinagaraj
ಉ: ಸುದ್ದಿವಾಹಿನಿಗಳ ಮೇಲಾಟ
ಹೌದು ಸರ್, ನಾವು "ಹಿಂತಿರುಗಿ ಬರಲಾರದಷ್ಟು ದೂರ" ಈ ನಿಟ್ಟಿನಲ್ಲಿ ಬಂದಿದೀವಾ ಅಂತ ಕೆಲವೊಮ್ಮೆ ಸಿನಿಕತನದಿಂದ ಅನ್ನಿಸಿಬಿಡುತ್ತೆ.
ಉ: ಸುದ್ದಿವಾಹಿನಿಗಳ ಮೇಲಾಟ
ವಾಸ್ತವಕ್ಕೆ ಹಿಡಿದ ಕನ್ನಡಿ, ವಾ,,,,,,,, ಮಾಧ್ಯಮದವರು ಓದಲೇ ಬೇಕಾದ, ನಾವು ಸಿಡಿದೇಳಬೇಕಾದ ಬರಹ.
In reply to ಉ: ಸುದ್ದಿವಾಹಿನಿಗಳ ಮೇಲಾಟ by naveengkn
ಉ: ಸುದ್ದಿವಾಹಿನಿಗಳ ಮೇಲಾಟ
ಧನ್ಯವಾದಗಳು ನವೀನ್ ಜೀ (kn). ಎಂದಾದರೂ ಇದು ಸರಿ ಹೋದೀತೇ?
ಉ: ಸುದ್ದಿವಾಹಿನಿಗಳ ಮೇಲಾಟ
ಶಾಸ್ತ್ರಿಯವರೆ, ಎಲ್ಲಾ ಚಾನಲ್ಗಳು ಹೊಸದರಲ್ಲಿ ನಾವು ಡಿಫರೆಂಟ್ ಎಂದು ಡಂಗುರ ಹೊಡೆದು, ಅದೇ TRPಗೇ ಗಂಟು ಬೀಳುವರು...
>>ಇನ್ನು ಅಪರಾಧ ಜಗತ್ತಿನ ಅನಾವರಣ. ವಾಹಿನಿಗಳ ಅಪರಾಧ ಸಂಬಂಧೀ ಕಾರ್ಯಕ್ರಮಗಳಂತೂ ಭಾವೀ ರೌಡಿ ಯಾ ಪಾತಕರಿಗೆ "ದೂರ ಶಿಕ್ಷಣ" ಕಾರ್ಯಕ್ರಮಗಳಂತಿರುತ್ತವೆ ಮತ್ತು ಇಲ್ಲಿ ವಾಹಿನಿಯವರೇ ಅಂತಿಮ ತೀರ್ಪುಗಾರರೂ ಆಗಿ ಬಿಡುತ್ತಾರೆ.
-ದೂರ ಶಿಕ್ಷಣ :)
೨೦೧೨ರಲ್ಲಿ ಈ ಬ್ರೇಕಿಂಗ್ ನ್ಯೂಸ್ ಬಗ್ಗೆ ಬರೆದಿದ್ದೆ- http://bit.ly/1OZGtqZ
http://bit.ly/1ThLfBs
http://bit.ly/1N1uDOA
ಏನೇ ಹೇಳಿ ಈ ರೋಗ ದಿನದಿಂದ ದಿನ ಜಾಸ್ತಿಯಾಗುತ್ತಿದೆ, ಇದಕ್ಕೆ ಔಷಧಿ ಮಾತ್ರ ಇಲ್ಲ...
In reply to ಉ: ಸುದ್ದಿವಾಹಿನಿಗಳ ಮೇಲಾಟ by ಗಣೇಶ
ಉ: ಸುದ್ದಿವಾಹಿನಿಗಳ ಮೇಲಾಟ
ಗಣೇಶ್ ಜೀ, ನೀವೇ ಹೇಳಿ, 2012 ರಿಂದ 2015ರ ವರೆಗೂ ಏನೂ ಬದಲಾವಣೆ ಇಲ್ವಲ್ಲ (ಇನ್ನಷ್ಟು ಕೆಟ್ಟಿರೋದು ಬಿಟ್ರೆ), ಏನ್ ತಲೆ ಚಚ್ಚಿ ಕೊಳ್ಳೋಣ ಇವರಿಗೆ.