ಪಡಿತರ‌ (ಅ)ವ್ಯವಸ್ಥೆ

ಪಡಿತರ‌ (ಅ)ವ್ಯವಸ್ಥೆ

    `ಆಹಾರ ಭದ್ರತೆ ಕಾಯ್ದೆ' ಹಾಗೂ `ಕೇಜಿಗೊಂದು ರೂ. ನಂತೆ 30 ಕೆ.ಜಿ. ಅಕ್ಕಿಯ ಅನ್ನ ಭಾಗ್ಯ' ಮುಂತಾದ ಯೋಜನೆಗಳ ಆರ್ಭಟಕ್ಕೆ  ಬಡವರು ಕಂ ಮತದಾರರು ದಿಗ್ಭ್ರ‌ಮೆಗೊಂಡು ತಾವು ಕೇಳುತ್ತಿರುವುದು ನಿಜವೇ ಎಂದು ಚಿವುಟಿ ನೋಡಿಕೊಳ್ಳುತ್ತಿದ್ದಾರೆ. ಇತ್ತ ಭ್ರಷ್ಟಾಚಾರಿಗಳು ಈ ಯೋಜನೆಗಳಿಂದ  ತಮ್ಮ `ಉನ್ನತಿ' ಗೆ ಮಾರ್ಗೋಪಾಯಗಳನ್ನು ಹುಡುಕುವುದರಲ್ಲಿ  ನಿರತರಾಗಿದ್ದರೆ, ಮತ್ತೊಂದು ವರ್ಗವಾದ ಬುದ್ಧಿಜೀವಿಗಳಲ್ಲಿ ಬಲಪಂಥೀಯರು ಯೋಜನೆಯ ವಿರುದ್ಧವಾಗಿಯೂ, ವಾಮಪಂಥೀಯರು ಯೋಜನೆಯ ಪರವಾಗಿಯೂ  ತಂತಮ್ಮ ದಾಳಗಳನ್ನು ಉರುಳಿಸುತ್ತಿದ್ದಾರೆ.  ಹಾಗಾಗಿಯೇ, ಯಾವ `ಇಸಂ'ಗೂ ಒಳಗಾಗದ  ಅಲಿಪ್ತ ಇಸಮುಗಳಾಗಿ ಯೋಚನೆ ಮಾಡಿದಲ್ಲಿ, ನನಗನಿಸಿದ್ದೆಂದರೆ, ಈ ಯೋಜನೆಗಳನ್ನು ಕಾರ್ಯಗತಗೊಳಿಸುವ  ಮುನ್ನವೇ, ನಾವು ನಮ್ಮ ಪಡಿತರ  ವ್ಯವಸ್ಥೆಯನ್ನು ಸುಧಾರಿಸುವ ಕಾಯಕಲ್ಪ ಅತ್ಯಂತ ಜರೂರಿನದು, ಇಲ್ಲವಾದಲ್ಲಿ ಯೋಜನೆಗಳ ಮುಲೋದ್ಧೇಶವೇ ತಲೆ ಕೆಳಗು. ಈ ಕೆಳಗಿನಂತೆ  ಸುಧಾರಣೆಗಳನ್ನು ತಂದಲ್ಲಿ ರಾಮರಾಜ್ಯ ಖಾತ್ರಿ  ಎಂದೇನೂ ಅಲ್ಲ, ಆದರೆ, ರಾಮರಾಜ್ಯ ದತ್ತ ಒಂದು ಸಣ್ಣ ದಿಟ್ಟ ಹೆಜ್ಜೆ ಆಗಬಹುದೆಂಬ ಸದಾಶಯ.
    ಸದ್ಯದ ಪಡಿತರದ ಅವ್ಯವಸ್ಥೆಯಲ್ಲಿ ಮೂರು ವಿಭಾಗಗಳನ್ನು ಗುರ್ತಿಸಬಹುದು.
1.    ಫಲಾನುಭವಿಗಳ ಆಯ್ಕೆ
2.    ವಿತರಣಾ ವ್ಯವಸ್ಥೆ
3.    ಪೂರೈಕೆ ವ್ಯವಸ್ಥೆ
    ನಮ್ಮ ಪಡಿತರ ವ್ಯವಸ್ಥೆಯ ಇಂಚಿಂಚೂ  ಸ್ವಾರ್ಥ, ದುರ್ಬಳಕೆ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗುತ್ತಿರುವುದರಿಂದ, ಇದಕ್ಕೆ ಕಾಯಕಲ್ಪ ಕಲ್ಪಿಸುವುದು ಯಾವುದೇ ಸರ್ಕಾರಕ್ಕೂ  ಸವಾಲೇ ಸರಿ – ಆದರೆ  ಅಸಾಧ್ಯವಾದದ್ದಲ್ಲ – ಮನಸ್ಸುಪಟ್ಟಲ್ಲಿ ಯಾ ರಾಜಕೀಯ ಇಚ್ಛಾಶಕ್ತಿ ತೋರಿದಲ್ಲಿ.
    ಈ ಯೋಜನೆಗಳು  ಅರ್ಹರನ್ನಷ್ಟೇ ತಲುಪಿ, ಸಫಲವಾಗುವಲ್ಲಿ  ಮೊದಲ ಆದ್ಯತೆಯ ಕೆಲಸವೆಂದರೆ, ಅರ್ಹ ಫಲಾನುಭವಿಗಳ ಆಯ್ಕೆ .  ಈ ಆಯ್ಕೆ ಸರಳ ಮಾನದಂಡಗಳಿಂದ ಆಗಿ, ಸಮಿತಿಗಳ ಮೂಲಕ ಆದಲ್ಲಿ, ಈ ಯೋಜನೆಗಳಿಗೆ  ಅನರ್ಹರು ನುಸುಳುವಿಕೆಯ ಸಾಧ್ಯತೆ ತುಂಬಾ ಕ್ಷೀಣಿಸುತ್ತದೆ.
    ಸರಳ ಮಾನದಂಡಗಳಿಂದ ಈ ಕೆಳಗಿನಂತೆ ನಾವು ಫಲಾನುಭವಿಗಳನ್ನು ನಾಲ್ಕು ವರ್ಗವಾಗಿ ವರ್ಗೀಕರಿಸಬಹುದು.
1.    ಸೂರಿಲ್ಲದ ಕಡುಬಡವರು (ಇವರಿಗೆ 90% ಸಬ್ಸಿಡಿ)

2.    ಸಣ್ಣ ಬಾಡಿಗೆ  ಮನೆಯವರು (ಇವರಿಗೆ 70% ಸಬ್ಸಿಡಿ)

3.    ಸಣ್ಣ ಸ್ವಂತ ಮನೆಯುಳ್ಳವರು  (ಇವರಿಗೆ 40% ಸಬ್ಸಿಡಿ) ಹಾಗೂ

4.    ಮಿಕ್ಕೆಲ್ಲರು (ಇವರಿಗೆ ಸಬ್ಸಿಡಿ ಇಲ್ಲ)

    ಈ ಸರಳ ಮಾನದಂಡಗಳಿಗನ್ವಯವಾಗುವಂತೆ, ಫಲಾನುಭವಿಗಳನ್ನು ಗುರ್ತಿಸಿ, ವರ್ಗೀಕರಿಸುವ ಕಾರ್ಯವನ್ನು ಒಂದು ಸಮಿತಿ ಮಾಡಬೇಕು.  ಹಾಲೀ ಶಾಸಕರ ಅಧ್ಯಕ್ಷತೆಯಲ್ಲಿನ ಈ ಸಮಿತಿಗೆ ಸದಸ್ಯರಾಗಿ, ಚುನಾವಣೆಯಲ್ಲಿ 2ನೇ ಸ್ಥಾನವನ್ನು ಪಡೆದ ಅಭ್ಯರ್ಥಿ, ತಾಲ್ಲೂಕು ಆಫೀಸ್ ಅಧಿಕಾರಿಗಳು,  NGO ಅಥವಾ ಸಮಾಜಸೇವಾ ಸಂಘಟನೆಗಳ ಕಾರ್ಯಕರ್ತರು ಹಾಗೂ ಆಯಾ ವಾರ್ಡ್‍ಗಳಲ್ಲಿನ ಕೆಲ ಜನಗಳು ಇರಬೇಕು. ಆಗ ಆಯಾ ವಾರ್ಡ್‍ಗಳಲ್ಲಿ ಇರುವ ಫಲಾನುಭವಿಗಳ ಆಯ್ಕೆಯಲ್ಲಿ ಸ್ವಜನ ಪಕ್ಷಪಾತ ತಲೆದೋರದೇ, ಪಾರದರ್ಶಕವಾಗಿರಲು ಸಾಧ್ಯವಾಗುತ್ತದೆ.  ಆಯ್ಕೆಯಲ್ಲಿ ಬಹುಮತವೇ ಮುಖ್ಯವಾದಲ್ಲಿ, ಜಗಳಗಳಿಗೆ ಆಸ್ಪದವಿರದು. ಅನರ್ಹರು  ಫಲಾನುಭವಿಗಳಾಗಲು  ಅಸಾಧ್ಯವಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ.
    
    ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯ ದಿನಾಂಕ ಹಾಗೂ ಸಮಯವನ್ನು ಮುಂಚೆಯೇ  ಆಯಾಯಾ ವಾರ್ಡ್‍ಗಳಲ್ಲಿ  ನಿಗದಿಪಡಿಸಬೇಕು.  ಇದು ಈ ನಿಟ್ಟಿನಲ್ಲಿ ಉದ್ಭವಿಸಬಹುದಾದ ದೂರುಗಳನ್ನು ಕಡಿಮೆಗೊಳಿಸುತ್ತದೆ.  ಶಾಸಕರು, ಅಧಿಕಾರಿಗಳು ಹಾಗೂ  NGO ಕಾರ್ಯಕರ್ತರು ತಿಂಗಳೊಂದರಲ್ಲಿ ತಮ್ಮ ವ್ಯಾಪ್ತಿಯ ತಾಲ್ಲೂಕಿನಾದ್ಯಂತ  ಎಲ್ಲಾ ಕ್ಷೇತ್ರಗಳಲ್ಲಿಯೂ ಈ ಆಯ್ಕೆ ಪ್ರಕ್ರಿಯೆಯನ್ನು ಮುಗಿಸಬಹುದು.  ಇದರಿಂದ ಈ ಎಲ್ಲರಿಗೂ  ಕ್ಷೇತ್ರದ ಎಲ್ಲ ಜನರ ಸ್ಥಿತಿಗತಿಗಳ ಅರಿವೂ ಉಂಟಾಗುತ್ತದೆ. ಇದರಂತೆಯೇ  ಪ್ರತಿ ವರ್ಷ, ಈ ಸಮಯದಲ್ಲಿ ಈ `ಕ್ಷೇತ್ರದರ್ಶನ' ಕಾರ್ಯಕ್ರಮವನ್ನು ಹಮ್ಮಿಕೊಂಡು ಹೊಸಬರ ಸೇರ್ಪಡೆ ಯಾ ತೆಗೆದು ಹಾಕುವ ಪ್ರಕ್ರಿಯೆಯನ್ನು ಪೂರ್ತಿಗೊಳಿಸಬಹುದು.

    ಸರಿಯಾದ ಫಲಾನುಭವಿಗಳ ಆಯ್ಕೆಯ  ಈ ಪ್ರಕ್ರಿಯೆ, ಆಹಾರ ಭದ್ರತೆಯಂಥ ಯೋಜನೆಗಳಷ್ಟೇ ಅಲ್ಲ, ಯಾವುದೇ ಸರ್ಕಾರದ ಬಡವರ ಪರವಾದ ಯೋಜನೆಗಳೂ ಸರಿಯಾಗಿ ಅರ್ಹರಿಗಷ್ಚೇ ತಲುಪುವುದು ಸಾಧ್ಯವಾಗಿಸುತ್ತದೆ.  ಆಗಷ್ಟೇ ನಿಜವಾದ ಅರ್ಥದಲ್ಲಿ `ಬಡತನ ನಿರ್ಮೂಲನಾ' ಕಾರ್ಯಕ್ರಮ ಆರಂಭವಾಗುತ್ತದೆ.

    ಇನ್ನು ಪಡಿತರ ವಿತರಣಾ ವ್ಯವಸ್ಥೆ. ಒಂದು ವಾರ್ಡಿಗೆ ಒಂದು ನ್ಯಾಯಬೆಲೆ ಅಂಗಡಿಯಿದ್ದಾಗ, ನಿಗದಿ ಮಾಡಿಕೊಂಡು  ಆತ ತಿಂಗಳಿಗೆ ಮೂರು ಯಾ ನಾಲ್ಕು ದಿನ ಅಂಗಡಿ ತೆರೆದರೂ ಸಾಕು, ಆ ವಾರ್ಡಿನ ಎಲ್ಲ ಫಲಾನುಭವಿಗಳು ತಂತಮ್ಮ ಪಡಿತರ  ಪಡೆಯಲು. ಆ ದಿನಗಳಲ್ಲಿ  ಅಂಗಡಿಯಾತ ಪಡಿತರವನ್ನು NGO ಕಾರ್ಯಕರ್ತರ ಮೇಲ್ವಿಚಾರಣೆಯಲ್ಲಿ ವಿತರಿಸತಕ್ಕದ್ದು.  ಇದರಿಂದ ಪಡಿತರದ ಕಲಬೆರಕೆ, ತೂಕದಲ್ಲಿ ಮೋಸ ಅಥವಾ ಬೇನಾಮಿಯಾಗಿ ಪಡಿತರ‌ ಪಡೆಯುವಿಕೆಗೆ ಅವಕಾಶವಿಲ್ಲದಂತಾಗುತ್ತದೆ.  ಈ ಪಾರದರ್ಶಕತೆ  ಪಡಿತರ ಅನ್ಯಾಯವಾಗಿ ಅನರ್ಹರ ಪಾಲಾಗುವುದನ್ನು ತಪ್ಪಿಸುತ್ತದೆ.  ಇದರಿಂದ ಸರ್ಕಾರಕ್ಕೆ ಬಹುದೊಡ್ಡ ಲಾಭವಾಗಲಿದೆ.

    ಇನ್ನು ಭ್ರಷ್ಟಾಚಾರಿಗಳ  ಕೂಟ‌ ನ್ಯಾಯಬೆಲೆ ಅಂಗಡಿಯನ್ನು `ಕಮಿಷನ್ ಸಾಲದೆಂಬ' ಕಾರಣ ಕೊಟ್ಟು ನಡೆಸದಾದರೆ, ಅವುಗಳನ್ನು  NGO ಗಳಿಗೆ ಹೊರಗುತ್ತಿಗೆ ನೀಡುವುದೇ ಅಂಥವರಿಗೆ ಸರಿಯಾಗಿ ಪಾಠ ಕಲಿಸಲು ಕ್ರಮ. 

    ಮೂರನೆಯದಾಗಿ  ಪಡಿತರ ಪೂರೈಕೆ ಲಾಬಿ. ಬರುವ ಪಡಿತರದಲ್ಲೊಂದಿಷ್ಟು ಕಲಬೆರಕೆಯಾಗಿ ಜನರನ್ನು ಸೇರಿದರೆ, ರಾಮ-ಕೃಷ್ಣರ ಲೆಕ್ಕಾಚಾರದಲ್ಲಿ ಉಳಿದ 75 ಪ್ರತಿಶತ ಕಾಳ ಸಂತೆಯನ್ನು ಸೇರುತ್ತಿರುವುದು ಎಲ್ಲರಿಗೂ  ತಿಳಿದ ನಗ್ನಸತ್ಯವಾಗಿದೆ.  ಇದಕ್ಕೆ ಸರ್ಕಾರೀ ನೌಕರರ ಭ್ರ‌ಷ್ಟತೆ ಒಂದು ಕಾರಣವಾದರೆ, ಇಂಥವನ್ನು ತಡೆಯುವಲ್ಲಿ ಅಗತ್ಯವಾದ ಸರ್ಕಾರೀ ಅಧಿಕಾರಿಗಳ ಸಂಖ್ಯೆಯಲ್ಲಿನ ಅತೀವ ಕೊರತೆಯು ಇನ್ನೊಂದು ಕಾರಣ. ಹೀಗೆ ಪಡಿತರ ಕಾಳಸಂತೆಗೆ ಹೋಗಿ ಸರ್ಕಾರೀ ಹಣ ಪೋಲಾಗುವುದನ್ನು ತಡೆಯುವ ನಿಟ್ಟಿನಲ್ಲಿ, ಸರ್ಕಾರ ಅಗತ್ಯವಾದ ಅಧಿಕಾರಿ ಸಿಬ್ಬಂದಿಯ ನೇಮಕಾತಿ ಮಾಡಿದಲ್ಲಿ, ಸರ್ಕಾರವು ಈ ಸಿಬ್ಬಂದಿಯ ಸಂಬಳ ಸವಲತ್ತುಗಳಿಗಾಗಿ ಮಾಡುವ ಖರ್ಚಿಗಿಂತ, ಈ ಸಿಬ್ಬಂದಿಯ ಕರ್ತವ್ಯದಿಂದ `ನಷ್ಟವಾಗದಿರುವಿಕೆ'ಯ ಬಾಬ್ತೇ ಹೆಚ್ಚಾಗುತ್ತದೆ.  ಸಾವಿರಾರು ಕೋಟಿ ನಷ್ಟವಾಗುವುದನ್ನು ತಪ್ಪಿಸುವುದೂ ಸರ್ಕಾರದ ಲಾಭವೇ ಅಲ್ಲವೇ? NGO ಗಳ ಸಹಭಾಗಿತ್ವದಲ್ಲಿ ಪಡಿತರ ವ್ಯವಸ್ಥೆ ಇರುವಾಗ ಭ್ರಷ್ಟಾಚಾರ ತಳಮುಟ್ಟುವುದರಲ್ಲಿ, ಸಂಶಯವಿಲ್ಲ,  NGO ಗಳೂ ಭ್ರಷ್ಟರಾದರೆ . . . ? ಅನ್ನುವ ಸಿನಿಕರಿಗೆ ನನ್ನ ಬಳಿ ಉತ್ತರವಿಲ್ಲ, ನಾನಂತೂ ಆಶಾವಾದಿ, ಪ್ರಯತ್ನವಷ್ಟೇ ನಮ್ಮದು, ಉಳಿದದ್ದು ಮೇಲಿನಾತನದು !

    ಇನ್ನು ಈ ಯೋಜನೆಗಳಿಗೆ `ಉಳ್ಳವರ' ವಿರೋಧ ಇಂತಿನಂತಿವೆ.
1.    ಇವು ನಮ್ಮ ಆಹಾರ ಸಂಸ್ಕೃತಿಗೆ ಮಾರಕವಾಗುತ್ತಿವೆ.
2.    ಇವು ಜನರನ್ನು ಸೋಮಾರಿಗಳನ್ನಾಗಿಸುತ್ತವೆ.

    ಈ ನಿಟ್ಟಿನಲ್ಲಿಯೂ ಚಿಂತಿಸಿ  ಯೋಜನೆಗೆ ತಕ್ಕ ಮಾರ್ಪಾಟು ಮಾಡಬೇಕೇ ವಿನಾ,  ಯೋಜನೆಯನ್ನು ಸ್ಥಗಿತಗೊಳಿಸುವುದು ಮೂರ್ಖತನವಾದೀತು, ಹೌದು, ಅಕ್ಕಿ ದಕ್ಷಿಣ ಕರ್ನಾಟಕದ ಕೆಲವೆಡೆ ಮುಖ್ಯ ಆಹಾರಧಾನ್ಯ. ಉಳಿದೆಡೆ ರಾಗಿ, ಗೋಧಿ, ಜೋಳಗಳೂ ಮುಖ್ಯ ಆಹಾರಧಾನ್ಯ. ತಲೆಗೆಲ್ಲಾ ಒಂದೇ ಮಂತ್ರ ಎಂಬಂತೆ, ಈ ಯೋಜನೆಯಡಿ ಅಕ್ಕಿಯನ್ನಷ್ಟೇ ಪಡಿತರವೆಂದು ತೀರ್ಮಾನಿಸದೇ, ಆಯಾಯಾ ಪ್ರಾಂತದ ಆಹಾರ ಧಾನ್ಯವನ್ನು ಪಡಿತರವೆಂದೆಣಿಸುವುದು ಬುದ್ಧಿವಂತರ ಲಕ್ಷಣವಾಗುತ್ತದೆ.  ಈ ತತ್ವ ಅಳವಡಿಸಿಕೊಂಡಲ್ಲಿ, ಸರ್ಕಾರಕ್ಕೂ ಆರಾಮ (ನಾವೆಲ್ಲ ನೋಡುತ್ತಿರುವಂತೆಯೇ ನಂ ಸಿದ್ರಾಮಣ್ಣ ಅನ್ನಭಾಗ್ಯಕ್ಕೆ ಅಕ್ಕಿ ಹೊಂದಿಸಲು ಎಷ್ಟು ಪರಿಪಾಟಲು ಪಡುತ್ತಿದ್ದಾರೆ). ಆಯಾಯಾ ಪ್ರಾಂತದ ಜನರಿಗೂ  ಆರಾಮ, ಕಡಿಮೆ ದರದಲ್ಲಿ ದೊರಕುತ್ತದೆಯೆಂಬ ಒಂದೇ ಕಾರಣಕ್ಕೆ ಅವರು ತಮ್ಮ ಆಹಾರ ಕ್ರಮವನ್ನೇ ಬದಲಿಸಬೇಕೇ?

    ಅಕ್ಕಿಯನ್ನಷ್ಟೆ ಕೊಡುವುದರಿಂದ ಎರಡೆರಡು ಹಾನಿಗಳು ಒಂದು, ಬೇಡಿಕೆ ವಿಪರೀತವಾಗಿರುವುದರಿಂದ ಸರ್ಕಾರಕ್ಕೆ ವಿಪರೀತ ಖರ್ಚಿನ ಬಾಬ್ತು, ರೈತರೆಲ್ಲರೂ ಆಯಾಯಾ ಪ್ರಾಂತದ  ಪರಿಸರದ ವಿರುದ್ಧ ಅಕ್ಕಿಯನ್ನಷ್ಟೇ ಬೆಳೆಯಲು ಮೊದಲು ಮಾಡಿದಲ್ಲಿ  ಪರಿಸರದ ಅಸಮತೋಲನಕ್ಕೂ ಕಾರಣವಾಗುತ್ತದೆ. ಇದರ ದೀರ್ಘ ಕಾಲೀನ ಪರಿಣಾಮ ಅನೂಹ್ಯ ಹಾಗಾಗಿ, ಆಯಾಯಾ  ಪ್ರಾಂತದ  ಆಹಾರ ಧಾನ್ಯವನ್ನು ಪಡಿತರವೆಂದು ವಿತರಿಸಿದಲ್ಲಿ, ಯಾವ ವಿಪರೀತಕ್ಕೂ ಹೋಗದೇ ಜನಗಳಿಗೆ  ಅನುಕೂಲವಾಗುತ್ತದೆ.

    ಎರಡನೆಯ ಆರೋಪ ಜನಗಳನ್ನು ಸೋಮಾರಿಗಳನ್ನಾಗಿಸುವುದರ ಬಗ್ಗೆ. ಜನ ಈಗ 30 ರೂಗೆ  30 ಕೆಜಿ ಅಕ್ಕಿ ಕೊಂಡು, ತಮ್ಮ ದುಡಿತವನ್ನೆಲ್ಲ ಮದ್ಯದಂಗಡಿಗೆ  ಸುರಿಯುತ್ತಿದ್ದಾರೆನ್ನುವುದು, ಇದು ಸಾರಾಸಗಟಾಗಿ ಸತ್ಯ ಎನ್ನಲಾಗದಿದ್ದರೂ ಬಹುಶಃ ಸತ್ಯವೆನ್ನುವುದನ್ನು  ಯಾರಾದರೂ  ಒಪ್ಪುವರೇ. ಹಾಗಾಗಿ ಒಂದು ಬಡ ಕುಟುಂಬ ದಿನಕ್ಕೆ ರೂ. 150ರಂತೆ  ದುಡಿಯುತ್ತದೆಂದೆಣಿಸಿದರೂ  (ಈಗ ಕೃಷಿ ಕೂಲಿಕಾರರು ರೂ. 200-250 ಕೊಟ್ಟರೂ ಬರಲಾರದು ಅನ್ನುವ ಮಾತಿದೆ) ವರ್ಷದ 50% ಕೆಲಸ ಸಿಕ್ಕೀತೆಂದು ಭಾವಿಸಿದರೂ ಅದರ ವಾರ್ಷಿಕ ಆದಾಯ ರೂ. 150 x 200= ರೂ. 30,000/- ಯಾ ತಿಂಗಳಿನ ಆದಾಯ ರೂ. 2500/- ಆಗುತ್ತದೆ. ಇದರರ್ಧದಷ್ಟನ್ನಾದರೂ ಅವರ `ಪಡಿತರ' ಖರೀದಿಗೆ ವಿನಿಯೋಗಿಸುವಂತೆ, ಪಡಿತರದ ದರವನ್ನು ನಿರ್ಧರಿಸಬೇಕು. ಸುಖಾ ಸುಮ್ಮನೆ ರೂ. 1 ಕ್ಕೊಂದು ಕೇಜಿಯಂತಲ್ಲ, ಆವಾಗ, ಅವರು ದುಡಿಯದೇ  ಪಡಿತರ ಪಡೆಯಲು ಅಶಕ್ತರಾಗುತ್ತರೆ.  ಹಾಗಾಗಿ ಸರ್ಕಾರ ಅವರನ್ನು ಸೋಮಾರಿಗಳನ್ನಾಗಿಸುತ್ತಿರುವ ಆರೋಪದಿಂದ ಮುಕ್ತವಾಗುತ್ತದೆ. 

    ಇದರಲ್ಲಿಯೂ ಸಮಾಜ ಸೇವೆ (ನಿಜವಾದ ಅರ್ಥದಲ್ಲಿ) ಯಲ್ಲಿ ತೊಡಗಿಸಿಕೊಂಡ ಸಂಘಟನೆಗಳ ಪಾತ್ರ ಬಹು ದೊಡ್ಡದಿರುತ್ತದೆ.  ಕೂಲಿ ನಾಲಿ ಮಾಡುವ ಅಸಂಘಟಿತ  ವರ್ಗಕ್ಕೆ ಹೆಗಲಾಗಿ ನಿಂತು, ಕೆಲಸವಿಲ್ಲದೇ ಒದ್ದಾಡದಂತೆ ಕೃಷಿ ವಲಯದಲ್ಲಿರುವ ಅಗಾಧ ಶ್ರಮಿಕ ಶಕ್ತಿಯ ಪೂರೈಕೆಯಾಗಿಸುವತ್ತ ಸಹಾಯ ಮಾಡಿದರೆ, ಕೃಷಿ ಕ್ಷೇತ್ರವೂ ಉಳಿಯುತ್ತದೆ.  ಈ ದುರ್ಬಲ ವರ್ಗದವರಿಗೂ ಸಾಕಷ್ಟು ಕೆಲಸ, ಹಣ ದೊರೆಯುತ್ತದೆ, ಆ ಹಣವನ್ನವರು ಮದ್ಯದಂಗಡಿಗೆ  ಹಾಕಿ `ಮನೆಹಾಳು' ಕೆಲಸವನ್ನು ಮಾಡದಂತೆ  ಮನವೊಲಿಸುವುದೂ NGO ಗಳ ಕಾಯಕವಾಗುತ್ತದೆ.

    ಒಟ್ಟಿನಲ್ಲಿ ಹೇಳುವುದಾದರೆ, ನೀವೇ ನೋಡಿದಂತೆ ಈ ಎಲ್ಲ ವಿಭಾಗಗಳಲ್ಲಿ ಭ್ರಷ್ಟತೆಯ  ನಿವಾರಣೆಗೆ, ಸಮಾಜ ಸೇವಾಸಕ್ತರ ಅತ್ಯಂತ ಜರೂರಿದೆ.  ಇನ್ನೊಂದು  ಮಾತಿನಲ್ಲಿ ಹೇಳುವುದಾದರೆ, ಭ್ರಷ್ಟಾಚಾರದ ನಿವಾರಣೆಗೆ ಸರ್ಕಾರದ ಕೈಲಿ ಮದ್ದಿಲ್ಲ - ನಮ್ಮ ನಿಮ್ಮ ಕೈಲಿದೆ – ಅಂದರೆ, ಸಮಾಜದ ಕೈಲಿ ಇದೆ, ಅದನ್ನು ಸರಿಯಾಗಿ ಬಳಸುತ್ತಿಲ್ಲ ನಾವು ಅಷ್ಟೇ.

    ಹೀಗೆ, ಮೊದಲು ಪಡಿತರ ವ್ಯವಸ್ಥೆಯನ್ನು ಸರಿ ದಾರಿಗೆ ತಂದು, ನಂತರ ಈ ಅನ್ನ ಭಾಗ್ಯ  ಆಹಾರ ಭದ್ರತೆಯಂಥ ಯೋಜನೆಗಳನ್ನು ತಂದಲ್ಲಿ, ಅವು ಬಡವರ ಪಾಲಿನ ಅಮೃತವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಇಲ್ಲವಾದಲ್ಲಿ, ಹೆಗ್ಗಣಗಳ ಕೋಟೆಯಲ್ಲಿ ಹೆಚ್ಚೆಚ್ಚು ಧಾನ್ಯವನ್ನು ದಾಸ್ತಾನಿಟ್ಟಾಂತಾಗುತ್ತದೆ, ಯಾ ಮನೆ ರೀಪೇರಿ ಮಾಡದೇ ಸುಣ್ಣ ಬಣ್ಣ ಬಳಿದಂತಾಗುತ್ತದೆ.  ಅದರ ಮೂಲೋದ್ದೇಶ ಮಣ್ಣು ಪಾಲಾಗುತ್ತದೆ. ಸರ್ಕಾರಕ್ಕೆ ಬೇಕಿರೋದೂ ಅದೇನಾ ?! ನಂಗಂತೂ ಗೊತ್ತಿಲ್ಲ!

Comments

Submitted by kavinagaraj Fri, 08/07/2015 - 15:41

ಸಮಸ್ಯೆಗೆ ಪರಿಹಾರ ಇಂದಿನ ವ್ಯವಸ್ಥೆಯಲ್ಲಿ ಸರಳವಿಲ್ಲ. ಪರಿಹಾರ ರಾಜಕಾರಣಿಗಳಿಗೆ ಮುಖ್ಯವಲ್ಲ, ತಾತ್ಕಾಲಿಕ ಲಾಭವೇ ಅವರಿಗೆ ಸಾಕು. 'ತಪ್ಪಿಗೆ ಶಿಕ್ಷೆ ತಪ್ಪದು' ಎಂಬ ಸ್ಥಿತಿ ಬರಬೇಕು. ಗ್ರಾಮದಲ್ಲಿ ಎಲ್ಲರಿಗೂ ಹಸಿರು ಕಾರ್ಡು ಕೊಡಬೇಕೆಂದು ಒತ್ತಾಯಿಸಿ ಗ್ರಾಮಲೆಕ್ಕಿಗರನ್ನು, ಪಂ. ಕಾರ್ಯದರ್ಶಿಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದ ಸಂದರ್ಭಗಳೂ ಇದ್ದವು. ನಾನೇ ತಹಸೀಲ್ದಾರನಾಗಿದ್ದಾಗ ಈ ರೀತಿ ಕೂಡಿ ಹಾಕಿದ್ದವರನ್ನು ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿ ಬಿಡಿಸಿಕೊಂಡು ಬಂದಿದ್ದೆ.