ಮೇಘ

ಮೇಘ

 

“ಸರ್, ಸಾಮಾನ್ಯ ಜ್ಞಾನದ ಪುಸ್ತಕಗಳು ಯಾವ ವಿಭಾಗದಲ್ಲಿದೆ ಸ್ವಲ್ಪ ಹೇಳ್ತೀರ”, ಶ್ರೀನಾಥ ಗ್ರಂಥಪಾಲಕನನ್ನು ಕೇಳಿದ. ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದ ಆತ, ತಲೆಯನ್ನೂ ಎತ್ತದೆ, “ಆ ಕಡೆ ಕೊನೆಯ ಸಾಲಲ್ಲಿ ಇರ್ಬೋದು”, ಎಂದು ಚಾವಣಿಯ ದಿಕ್ಕಿನಲ್ಲಿ ಕೈ ತೋರಿಸುತ್ತಾ ಹೇಳಿ ಸುಮ್ಮನಾದ.

“ಕೊನೆಯ ಸಾಲಲ್ಲಿ ಈಗತಾನೆ ಹುಡುಕಿ ಬಂದೆ. ಅಲ್ಲಿ ಇರ್ಲಿಲ್ಲ”, ಶ್ರೀನಾಥ ಗ್ರಂಥಪಾಲಕನ ಉಡಾಫೆ ಉತ್ತರಕ್ಕೆ ಹಿಂಜರಿಯಲಿಲ್ಲ.

“ಅಂದ್ರೆ ಏನಂತ ಅರ್ಥ? ಆ ಪುಸ್ತಕಗಳನ್ನೆಲ್ಲಾ ಯಾರೋ ತೊಗೊಂಡು ಹೋಗಿದ್ದಾರೆ ಅಂತ ತಾನೆ?”, ಗ್ರಂಥಪಾಲಕ ಶ್ರೀನಾಥನ ಕಡೆ ಸಂಕ್ಷಿಪ್ತವಾಗಿ ನೋಡಿ ಸಿಡುಕಿದ.

ಶ್ರೀನಾಥ ಮೊಬೈಲ್ ಪೀಡಿತನಾದ ಗ್ರಂಥಪಾಲಕನನ್ನೇ ಎರಡು ಕ್ಷಣ ನೋಡಿದ. ಇದನ್ನು ಗಮನಿಸಿದ ಆತ, “ಏನ್ ನೋಡ್ತಾಯ್ದ್ಯಾ ?”, ಎಂದು ವಜ್ರಮುನಿಯವರಂತೆ ಒಂದು ಕಣ್ಣನ್ನು ಅರೆ ಮುಚ್ಚಿ ಕೇಳಿದ.

“ನಿನ್ ಮುದ್ದು ಮುಖವನ್ನ ನೋಡ್ತಾಯ್ದೀನಿ”.

“ಏನಂದಿ ಮತ್ತೇಳು?”, ಗ್ರಂಥಪಾಲಕ ದಿನದ ಆರಂಭಿಕ ಐಕ್ಕಲಕಡಿ ಜಗಳಕ್ಕೆ ತಯಾರಾದ.

“ಬರಿ ಬುದ್ದಿ ಮಂದ ಅನ್ಕೊಂಡಿದ್ದೆ. ಕಿವಿ ಕಿವ್ಡು ಅಂತಾನೂ ಈಗ ತಿಳಿತು”.

“ಏಯ್!”, ಎಂದು ಕೈ ತೋರಿಸುತ್ತಾ ಗ್ರಂಥಪಾಲಕ ಎದ್ದು ನಿಂತ. ಅವನು ಮಾತನ್ನು ಬೆಳೆಸುವ ಮುನ್ನ, ಹತ್ತಿರವೇ ಪುಸ್ತಕವನ್ನು ಹುಡುಕುತ್ತಿದ್ದ ಹಿರಿಯ ನಾಗರಿಕರೊಬ್ಬರು ಮಧ್ಯ ಬಂದರು, “ಇಬ್ಬರೂ ದಯವಿಟ್ಟು ಸಮಾದಾನಗೊಳ್ಳಿ. ಗ್ರಂಥಾಲಯದಲ್ಲಿ ಈ ರೀತಿಯ ಮಾತುಕತೆ ಸಭ್ಯವಲ್ಲ. ನಿಮಗೆ ಸಾಮಾನ್ಯ ಜ್ಞಾನದ ಪುಸ್ತಕಗಳು ಬೇಕು ಅಲ್ವೇ? ನಾ ತೋರಿಸ್ತೀನಿ ಬನ್ನಿ... “.

ಶ್ರೀನಾಥ ಗ್ರಂಥಪಾಲಕನನ್ನು ದಿಟ್ಟಿಸಿ ನೋಡುತ್ತಾ ಹಿರಿಯರನ್ನು ಹಿಂಬಾಲಿಸಿ, ಗ್ರಂಥಾಲಯದ ಒಳಭಾಗದ ಕಡೆ ನಡೆದನು. ಗ್ರಂಥಪಾಲಕ ಉಪ್ ಎಂದು ಮುಖ ದಪ್ಪ ಮಾಡಿಕೊಂಡು, ಮೊಬೈಲ್ ತಿಕ್ಕುವುದನ್ನು ಮುಂದುವರೆಸಿದನು.

 

ಹಿರಿಯರು ತೋರಿದ ‘ಪ್ರಸಕ್ತ ವಿದ್ಯಮಾನಗಳು’ ವಿಭಾಗದಲ್ಲಿ ಶ್ರೀನಾಥ ‘ಸ್ಪರ್ಧಾತ್ಮಕ ಯಶಸ್ಸಿನ ವಿಮರ್ಶೆ (ಸಿಎಸ್ಆರ್)’, ಎಂಬ ಹೆಸರಿನ ಪತ್ರಿಕೆಯನ್ನು ಆರಿಸಿ, ಹಿರಿಯರಿಗೆ ಧನ್ಯವಾದಗಳನ್ನು ಅರ್ಪಿಸಿದನು. ನಂತರ, ಉದ್ದ ಮೇಜೊಂದರ ಮುಂದೆ ಕುಳಿತು ಆಯ್ದ ಪತ್ರಿಕೆಯನ್ನು ಓದಲು ಮುಂದಾದನು. ಹಿರಿಯರು ಅವನ ಎದುರಿನ ಚೇರಿನಲ್ಲಿ ಕುಳಿತು ‘ಹಿಂದೂ’ ದಿನಪತ್ರಿಕೆಯ ಆಳವಾದ ಅಧ್ಯಯನಕ್ಕೆ ಸಜ್ಜಾದರು.

ಅರ್ಧ ಗಂಟೆಯ ನಂತರ ಹಿರಿಯರು ತಮ್ಮ ಮುಖವನ್ನು ಹಿಡಿದ ದಿನಪತ್ರಿಕೆಯಿಂದ ಹೊರಪಡಿಸಿ ಶ್ರೀನಾಥನ ಕಡೆ ನೋಡಿದರು. ಅವನು ಸಾಮಾನ್ಯ ಜ್ಞಾನದ ಸಿಎಸ್ಆರ್ ಪತ್ರಿಕೆಯನ್ನು ಓದುತ್ತಾ, ಜೊತೆ ಜೊತೆಗೆ ಒಂದು ಕಿರುಪುಸ್ತಕದಲ್ಲಿ ಟಿಪ್ಪಣಿಗಳನ್ನು ಬರೆಯುತ್ತಿದ್ದನು. ಹಿರಿಯರು ಶ್ರೀನಾಥನನ್ನು ಉದ್ದೇಶಿಸಿ - “ಎಕ್ಸ್ಕ್ಯೂಸ್ ಮಿ. ನೀವು ಯಾವುದಾದರು ಪರೀಕ್ಷೆಗೆ ಪ್ರಿಪೇರ್ ಅಗ್ತಿದೀರ?”.

ನೋಟ್ಸ್ ಬರೆಯುತ್ತಿದ್ದ ಶ್ರೀನಾಥ ತಲೆಯೆತ್ತಿ - “ಹೌದು ಸರ್. ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡಸ್ತಾಯ್ದೀನಿ”.

“ಓಹ್. ವೆರಿ ಗುಡ್. ಬೈ ದಿ ಬೈ, ನಾನು ಡಾ. ಬಲ್ಲಾಳ್. Nice to meet you”, ಎಂದು ಹೇಳಿ ಬಲ್ಲಾಳರು ಎದ್ದು ನಿಂತು ಶ್ರೀನಾಥನ ಕೈಕುಲುಕಿದರು.

“ನಮಸ್ತೆ. ನನ್ ಹೆಸ್ರು ಶ್ರೀನಾಥ್. ನಾನು ಇಲ್ಲೇ ಮೈಸೂರ್ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂಎ ಮಾಡ್ತಿದೀನಿ”, ಶ್ರೀನಾಥ ತನ್ನ ಪರಿಚಯವನ್ನು ಮಾಡಿಕೊಂಡನು.

ಬಲ್ಲಾಳರು ವಾಪಸ್ಸು ತಮ್ಮ ಕುರ್ಚಿಯಲ್ಲಿ ಕುಳಿತು - “ಸಂತೋಷ. ಎಕ್ಚುಲಿ, ನನ್ನ ಮಗ ೨೦೦೪ ಅಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾದ. ಈಗ ಅವನು ಹರ್ಯಾಣದ ಒಂದು ಊರಿನಲ್ಲಿ ಡಿಸಿ ಆಗಿದಾನೆ”.

“ಹೌದಾ? ಹೇಗೆ ತಯಾರಿ ನಡೆಸಿದ್ದರು ಅವರು ಪರೀಕ್ಷೆಗೆ?”

“He was very hardworking. ಅವ್ನು ಎರಡು ವರ್ಷ, ಮನೆಯಲ್ಲೇ ಕುಳಿತು, ಪರೀಕ್ಷೆಗೇ ಅಂತ ಮುಡಿಪಿಟ್ಟಿದ್ದ. ಕೋಚಿಂಗೂ ಹೋಗ್ಲಿಲ್ಲ ಅವ್ನು. ಎಕ್ಸಾಮ್ ಹತ್ರ ಬರ್ತ ಬರ್ತ, ಊಟ, ನಿದ್ರೆ, ಎಲ್ಲವನ್ನೂ ಮರಿತಾಯ್ದ”.

“ಓ”, ಎಂದು ಶ್ರೀನಾಥ ಪ್ರತಿಕ್ರಯಿಸಿ, ಕಿಟಕಿಯ ಹೊರಗೆ ನೋಡುತ್ತಾ, ದೀರ್ಘ ಆಲೋಚನೆಯಲ್ಲಿ ಮಗ್ನನಾದ.

ಬಲ್ಲಾಳರು ಮುಂದುವರೆದರು - “My son was also ambitious. ಮನುಷ್ಯಂಗೆ ಯಾವಾಗಲೂ ಒಂದು ಸ್ಪಷ್ಟ ಗುರಿ ಇರ್ಬೇಕು. ಆಕಾಂಕ್ಷೆ ಇರ್ಬೇಕು. ಸಮಾಜದಲ್ಲಿ ತನ್ನದೇ ಆದ ಸ್ಥಾನವನ್ನ, ಸ್ವಪ್ರಯತ್ನದ ಮೂಲಕ, ಸೃಷ್ಟಿಸಿಕೊಳ್ತೀನಿ ಅನ್ನೋ ಛಲ ಇರ್ಬೇಕು. ಆಗಲೇ ಎಲ್ಲಾ ರೀತಿಯ ಸಾಧನೆಗಳ ದ್ವಾರ ತೆರೆಯಲು ಸಾಧ್ಯ”.

ಶ್ರೀನಾಥ ಬಲ್ಲಾಳರ ಮಾತಿಗೆ ತಲೆದೂಗಿದನು.

ಅವರು, ಓದುತ್ತಿದ್ದ ದಿನಪತ್ರಿಕೆಯನ್ನು ಮಡಚಿ, ಹೊರಡಲು ಎದ್ದು ನಿಂತು, “Anyway. ನಿಮ್ಮ ಪರಿಶ್ರಮಕ್ಕೆ ಉತ್ತಮ ಪ್ರತಿಫಲ ಸಿಗ್ಲಿ ಅಂತ ಹಾರೈಸ್ತೀನಿ. All the best”, ಎಂದರು.

“Thank you sir”.

ಬಲ್ಲಾಳರು ನಿರ್ಗಮಿಸಿದ ನಂತರ ಶ್ರೀನಾಥ ಪೆನ್ನು-ಪೇಪರ್ ಹಿಡಿದು ಟಿಪ್ಪಣಿಗಳನ್ನು ಬರೆಯುವುದನ್ನು ಮುಂದುವರೆಸಿದನು.

 

ಅರ್ಧ ಗಂಟೆಯ ನಂತರ, ಶ್ರೀನಾಥನ ಜ್ಞಾನ ಸಂಗ್ರಹ ಇನ್ನೂ ಭರದಿಂದ ಸಾಗುತ್ತಿತ್ತು. ಮೈಸೂರಿನ ಕುವೆಂಪುನಗರದ ನಗರ ಕೇಂದ್ರ ಗ್ರಂಥಾಲಯದಲ್ಲಿ ಈ ದಿನ ಹೆಚ್ಚು ಜನರಿರಲಿಲ್ಲ. ಅಷ್ಟಕ್ಕೂ, ಗ್ರಂಥಾಲಯದಲ್ಲಿ ಯಾವತ್ತಾದರೂ ನೂಕು ನುಗ್ಗಲು ಉಂಟಾಗಲು ಸಾಧ್ಯವೇ? ಈ ಸ್ಥಳದ ಅಪರೂಪದ ಮೌನ ಶ್ರೀನಾಥನಿಗೆ ಕನ್ನಡ ಸಾಹಿತ್ಯದ ಅಧ್ಯಯನಕ್ಕೆ ಮತ್ತು, ಇತ್ತೀಚಿನ ದಿನಗಳಲ್ಲಿ, ಯುಪಿಎಸ್‌ಸಿ ಪರೀಕ್ಷೆಯ ಓದಿಗೆ ಪೂರಕವಾಗಿತ್ತು.

“Alpha sine omega t”.

ಶ್ರೀನಾಥ ನೋಟ್ಸ್ ಬರೆಯುವುದನ್ನು ನಿಲ್ಲಿಸಿ, ಕೇಳಿದ ಧ್ವನಿಯ ಮೂಲವನ್ನು ಹುಡುಕಲು ಅಕ್ಕ ಪಕ್ಕ ನೋಡಿದ. ತನ್ನ ಎಡಗಡೆ, ಓರೆಯಾಗಿ ಎದುರಾದ ಕುರ್ಚಿಯಲ್ಲಿ ಕೂತಿದ್ದ ಯುವಕನೊಬ್ಬನು ಕಣ್ಣಿಗೆ ಬಿದ್ದನು. ಸುಮಾರು ಹದಿನಾರು ವಯಸ್ಸಿನ ಆ ಯುವಕ  ಶ್ರೀನಾಥನಿಗೆ ಸ್ವಲ್ಪ ವಿಚಿತ್ರವಾಗಿ ಕಂಡು ಬಂದನು. ತಲೆ ಕೂದಲು ಪಾರ್ಥೇನಿಯಮ್ ಗಿಡದಂತೆ ಎರ್ರಾ ಬಿರ್ರಿ ಬೆಳೆದುಕೊಂಡು, ವಿದ್ಯುದೀಕರಿಸಿದಂತೆ ಎದ್ದು ನಿಂತಿದ್ದವು. ಮುಖದಲ್ಲಿ ಲಘು ಗಡ್ಡ, ಕಣ್ಣಿಗೆ ಫ್ರೇಮ್ ರಹಿತವಾದ ಚಶ್ಮ. ಹೊಟ್ಟೆಗೆ ಸ್ವಲ್ಪ ಅನ್ನ-ಸಾರು-ಪಲ್ಯ ಬಿದ್ದರೆ ಚಿಗಿತುಕೊಳ್ಳಬಹುದಾದ ಕೊಂಚ ಒಣಗಿದ ಮೈಕಟ್ಟು. ಶ್ರೀನಾಥನಿಗೆ ಯುವಕನ ದೈಹಿಕ ಸ್ವರೂಪಕ್ಕಿಂತ ಅವನ ವರ್ತನೆ ವಿಚಿತ್ರವೆನಿಸಿತು.

ಆ ಯುವಕ ತನ್ನೊಂದಿಗೆ ತಾನೇ ಮಾತಾಡಿಕೊಳ್ಳುತ್ತಿದ್ದನು. ಅವನ ಮುಂದೆ ಮೇಜಿನಲ್ಲಿ, ಎರಡು ಇಟ್ಟಿಗೆಗಳಷ್ಟು ದಪ್ಪನೆಯ ಒಂದು ಪುಸ್ತಕವಿತ್ತು. ಶ್ರೀನಾಥ ಪುಸ್ತಕದ ಶೀರ್ಷಿಕೆಯನ್ನು ಓದಿದ - “IIT-JEE All In One Tutor”. ಯುವಕ ಭಾರತದ ಅತ್ಯಂತ ಕಠಿಣ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಐಐಟಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾನೆ ಎಂದು ಶ್ರೀನಾಥ ತಿಳಿದುಕೊಂಡನು. ಅವನು ಯುವಕನ ಸ್ವಯಂ ಉದ್ದೇಶಿತ ಮಾತನ್ನು ಗ್ರಹಿಸಲು ಪ್ರಯತ್ನಿಸಿದ -

“Phase velocity of the wave is the ratio of omega and k, whereas the group velocity is the derivative of omega with respect to k. Why are you forgetting? Remember man!!”

ಕೊನೆಯ ವಾಕ್ಯವನ್ನು ಉಚ್ಚರಿಸಿದ ಯುವಕ ತನ್ನ ಕೈಯನ್ನು ಹತಾಶೆಯಿಂದ ಮೇಲೆತ್ತಿ, ಮರುಕ್ಷಣ ಕೈಯನ್ನು ಕೆಳಗಿಳಿಸಿ ಮೇಜನ್ನು ಗುದ್ದಿದ. ಶ್ರೀನಾಥ, ಮತ್ತ್ಯಾರಾದರೂ ಈ ಯುವಕನ ವರ್ತನೆಯನ್ನು ಗಮನಿಸುತ್ತಿರುವರ ಎಂದು ತಿಳಿಯಲು, ಉದ್ದ ಮೇಜಿನ ಎರಡೂ ಕಡೆಗಳಲ್ಲೂ ನೋಡಿದ. ಮೇಜಿನ ಕೊನೆಯಲ್ಲಿ ಕೂತಿದ್ದ ಒಬ್ಬ ಅಜ್ಜ ಬಿಟ್ಟರೆ ಸುತ್ತಾ ಮುತ್ತಾ ಯಾರೂ ಇರಲಿಲ್ಲ. ಅಜ್ಜ ತಾವು ಓದುತ್ತಿದ್ದ ದಿನಪತ್ರಿಕೆಯನ್ನು ಎದೆಯ ಮೇಲಿರಿಸಿ, ಓದುವ ಕನ್ನಡಕವನ್ನು ಹಣೆಯ ಮೇಲೆ ಟಿಕಾಣಿ ಹೂಡಿ, ಕಿರು ನಿದ್ರೆಗೆ ಜಾರಿಕೊಂಡಿದ್ದರು. ಶ್ರೀನಾಥ ಮತ್ತೆ ಯುವಕನ ದಿಕ್ಕಿನಲ್ಲಿ ನೋಡಿದ.

ಪರೀಕ್ಷಾ ಸಿದ್ಧತೆಯಲ್ಲಿ ಮಗ್ನನಾದ ಯುವಕನಿಗೆ ಸುತ್ತ ಮುತ್ತಲಿನ ವಾತಾವರಣದ ಅರಿವೇ ಇಲ್ಲವೆಂದು ಕ್ರಮೇಣ ಶ್ರೀನಾಥನಿಗೆ ಭಾಸವಾಯಿತು -

“What is that symbol in Schrodinger’s equation? Ahhhhh…..Che!”, ಎಂದು ಯುವಕ ಸಿಟ್ಟಿನಿಂದ ಉದ್ಗರಿಸಿ, ತಲೆಯನ್ನು ಲಕಲಕನೆ ಮೂರ್ನಾಲ್ಕು ಬಾರಿ ತ್ವರಿತವಾಗಿ ಅಲ್ಲಾಡಿಸಿದನು. ಮರುಕ್ಷಣ ಶಿರಸ್ಸನ್ನು ಮೇಜಿನ ಮೇಲಿರಿಸಿ, ಅದನ್ನು ಕೈಗಳಿಂದ ಸುತ್ತುವರಿದು ಮಲಗಿದನು. ಆಗಲೂ, ಕೈಗಳ ಸಂದಿಯಿಂದ ಯುವಕನ ಮಾತು, ನಿದ್ರೆಯಲ್ಲಿ ಕನವರಿಸುತ್ತಿರುವಂತೆ, ಶ್ರೀನಾಥನಿಗೆ ಕೇಳಿಬರುತ್ತಿತ್ತು.

ಶ್ರೀನಾಥ ಹುಡುಗನಿಂದ ಕಣ್ಣು ಸೆಳೆದು ನೇರವಾಗಿ ನೋಡುತ್ತಾ ಕುಳಿತ. ಅವನ ಹಣೆಯಿಂದ ಬೆವರಿಳಿಯಲು ಶುರುವಾಯಿತು. ಎದೆಬಡಿತ ಹೆಚ್ಚಾಯಿತು. ಶ್ರೀನಾಥ ತಾನು ಕೂತಿದ್ದ ಕುರ್ಚಿಯನ್ನು ಗಟ್ಟಿಯಾಗಿ ಹಿಡಿದು, ನಿಧಾನವಾಗಿ ಉಸಿರಾಡಿದ. ತಾನು ಓದುತ್ತಿದ್ದ ಸಿಎಸ್ಆರ್ ಪತ್ರಿಕೆಯ ಕಡೆ ಕಣ್ಣು ಹಾಯಿಸಿದ. ಥಟ್ಟನೆ ಮೈಯೆಲ್ಲಾ, ಜ್ವರ ಆವರಿಸಿರುವಂತೆ, ಬಿಸಿಯಾಯಿತು. ಮುಂದಿದ್ದ ಗ್ರಂಥಾಲಯದ ಕಿಟಕಿಯ ಕಡೆ ನೋಡುತ್ತಾ, ದೀರ್ಘ ಉಸಿರು ತೆಗೆದುಕೊಂಡನು.

ಐದು ನಿಮಿಷವಾಯಿತು. ಶ್ರೀನಾಥ ಇನ್ನೂ ಕಿಟಕಿಯ ಕಡೆ ನೋಡುತ್ತಾ ನಿಶ್ಚಲವಾಗಿ ಕುಳಿತುಬಿಟ್ಟಿದ್ದ. ಒಂದೆರಡು ಬಾರಿ ಕಣ್ಣು ಮಿಟುಕಿಸಿ, ನಂತರ ಕಣ್ಣನ್ನು ಮುಚ್ಚಿದ. ನುಡಿಗೆ ಸಿಲುಕದ ಆಳವಾದ ದುಃಖವೊಂದು ಅವನ ಮನವನ್ನು ಆವರಿಸಿತು. ಮುಚ್ಚಿದ ಕಣ್ಣುಗಳಿಂದ ಹನಿ ರೂಪದಲ್ಲಿ ಕಣ್ಣೀರು ಹೊರ ಹೊಮ್ಮಿತು. ಸ್ವಲ್ಪ ಹೊತ್ತು ತಲೆ ತಗ್ಗಿಸಿಕೊಂಡು ಕುಳಿತನು.

ಶ್ರೀನಾಥ ಕರವಸ್ತ್ರದಿಂದ ಕಣ್ಣೊರೆಸಿಕೊಂಡು, ಮುಂದಿದ್ದ ಕಿಟಕಿಯ ಕಡೆ ನಡೆದು, ಹೊರಗಿನ ವಾತಾವರಣವನ್ನು ನೋಡುತ್ತಾ ನಿಂತನು.

ಹೊರಗೆ ಬಾನಿನಲ್ಲಿ ಮೋಡ ಕವಿದು, ಸೂರ್ಯ ಮರೆಯಾಗಿದ್ದನು. ಗ್ರಂಥಾಲಯದ ರಸ್ತೆ ಸಾಮಾನ್ಯವಾಗಿ ಜನರಹಿತವಾಗಿದ್ದರೂ, ಈಗ ಏಳೆಂಟು ಹುಡುಗರು ಗುಂಪು ಕಟ್ಟಿಕೊಂಡು ನಡೆಯುತ್ತಿದ್ದರು. ಶ್ರೀನಾಥ ನೋಡು ನೋಡುತ್ತಿದ್ದಂತ್ತೆಯೇ ಆ ಹುಡುಗರ ಗುಂಪಿನ ಹಿಂದೆ ಒಂದು ಟೆಂಪೋ ಪ್ರತ್ಯಕ್ಷವಾಯಿತು. ಹುಡುಗರನ್ನು ಹಿಂಬಾಲಿಸುತ್ತಾ ನಿಧಾನವಾಗಿ ಸಾಗುತ್ತಿದ್ದ ಆ ಟೆಂಪೋವಿನ ಸರಕು ಜಾಗದ ಆವರಣ ತೆರೆಯಲಾಗಿತ್ತು. ಅದೇ ಜಾಗದಲ್ಲಿ ಗಣಪತಿ, ಟೆಂಪೋ ಚಲಿಸುತ್ತಿದ್ದ ದಿಕ್ಕಿನ ಅಭಿಮುಖವಾಗಿ ಆಸೀನನಾಗಿ, ಹೊಸ ವಾತಾವರಣವನ್ನು ಗಮನಿಸುತ್ತಿದ್ದನು. ಮುಂದೆ ನಡೆಯುತ್ತಿದ್ದ ಸುಮಾರು ಹದಿನೆಂಟು-ಇಪ್ಪತ್ತು ವಯಸ್ಸಿನ ಹುಡುಗರು ಒಂದೇ ದನಿಯಲ್ಲಿ ಕೂಗಿದರು - “ಗಣಪತಿ ಬಪ್ಪಾ, ಮೋರ್ಯಾ! ಮಂಗಳಮೂರ್ತಿ, ಮೋರ್ಯಾ!”

ವಿನಾಯಕನ ವಿಸರ್ಜನಾ ಯಾತ್ರೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಮನೆಯವರು ಹೊರಬಂದು ಕುತೂಹಲದಿಂದ ನೋಡತೊಡಗಿದರು. ಟೆಂಪೋವಿನ ಹಿಂದೆ ನಡೆಯುತ್ತಿದ್ದ ಸುಮಾರು ಏಳೆಂಟು ವರ್ಷದ ಬಾಲಕನೊಬ್ಬ ಶ್ರೀನಾಥನ ಗಮನವನ್ನು ಸೆಳೆದನು. ಆ ಬಾಲಕ ತನ್ನ ಹಿರಿಯ ಸ್ನೇಹಿತರೊಡನೆ, “ಮೋರ್ಯಾ!”, ಎಂದು ಕೂಗುತ್ತಾ ಅನುಕ್ರಮವಾಗಿ ಕೈಯಲ್ಲಿದ್ದ ಬುಟ್ಟಿಯಿಂದ ಪುಷ್ಪಗಳನ್ನು ಗಣಪತಿಗೆ ಅರ್ಪಿಸುತ್ತಿದ್ದನು. ಶ್ರೀನಾಥ ಆ ಹುಡುಗನನ್ನೇ ಗಮನಿಸುತ್ತಿರುವಂತೆಯೇ, ಟೆಂಪೋ ರಸ್ತೆಯ ಮಧ್ಯದಲ್ಲೇ ನಿಂತಿತು. ಟೆಂಪೋವಿನ ಮುಂದಿನ ಎರಡು ಬಾಗಿಲು ತೆರೆದವು; ತಮಟೆಯನ್ನು ಹಿಡಿದಿದ್ದ ಇಬ್ಬರು ಯುವಕರು ಹೊರಗಿಳಿದರು. ಅವರಿಬ್ಬರು ಟೆಂಪೋವಿನ ಎರಡು ಬದಿಯಲ್ಲಿ ನಿಂತು ಶುರು ಹಚ್ಚಿಕೊಂಡರು -

“ಢಣ್.ಢಣ್.ಢಣ್     ಟಕ್ ಟಕ       ಟಕ್ ಟಕ      ಟಕ್ ಟಕ”

“ಢಣ್.ಢಣ್.ಢಣ್     ಟಕ್ ಟಕ       ಟಕ್ ಟಕ      ಟಕ್ ಟಕ”

ಯುವಕರೆಲ್ಲಾ ತಮಟೆಯ ಸದ್ದಿಗೆ ಅನುಗುಣವಾಗಿ ಸ್ಟೆಪ್ ಹಾಕಲಾರಂಭಿಸಿದರು. ಟೆಂಪೋ ಹಿಂದಿದ್ದ ಬಾಲಕ, ಹೂ ಬುಟ್ಟಿಯನ್ನು ಗಣಪನ ಪಾದದ ಬಳಿ ಇಟ್ಟು, ಯುವಕರೊಡನೆ ಜಿಗಿದು ಜಿಗಿದು ಕುಣಿದನು.

“ಡಗಡ ಡಗಡ      ಢಣ್ ಢಣ್”

ಡಗಡ ಡಗಡ       ಢಣ್ ಢಣ್”

ಬಾಲಕ ಈಗ ಅಲ್ಲಲ್ಲೇ ಪಲ್ಟಿ ಹಾಕಲು ಶುರು ಮಾಡಿದನು. ಕಿಟಕಿಯಿಂದ ನೋಡುತ್ತಿದ್ದ ಶ್ರೀನಾಥನಿಗೆ ಬಾಲಕನ ನೃತ್ಯವನ್ನು ನೋಡಿ, ಎದೆಯಲ್ಲಿ ಹರ್ಷೋಲ್ಲಾಸ ತುಂಬಿಕೊಂಡು, ಮೆಲ್ಲನೆ ಚಪ್ಪಾಳೆ ಹೊಡೆಯುತ್ತಾ ನಗಲಾರಂಭಿಸಿದನು. ಬಾಲಕ ಭಾಂಗ್ರಾ ನೃತ್ಯದ ಶೈಲಿಯಲ್ಲಿ ಕೈ-ಭುಜಗಳನ್ನು ಕುಲುಕುತ್ತಾ, ಮನೆಯ ಮುಂದೆ ನಿಂತು ನೃತ್ಯವನ್ನು ನೋಡುತ್ತಿದ್ದ ಒಬ್ಬಾತನ ಬಳಿ, ನರ್ತಿಸುತ್ತಲೇ ಹೋದನು. “ಅಣ್ಣ, ಬಾರಣ್ಣ ನೀನು!”, ಎಂದು ಹೇಳುತ್ತಾ ಆತನ ಕೈಯನ್ನು ಹಿಡಿದು, ಅವರು ಬೇಡ ಬೇಡ ಎನ್ನುತ್ತಿರುವಾಗಲೇ, ತಪಾಂಗುಚಿ ಹಾಕುತ್ತಿದ್ದ ಯುವಕರ ಗುಂಪಿನ ಕಡೆ ಸೆಳೆದಿಯೇ ಬಿಟ್ಟನು. ಪಂಚೆ ಬನಿಯನ್ ಧರಿಸಿದ್ದ ಆತ, ಆಗತಾನೇ ಮಧ್ಯಾಹ್ನದ ಕಿರುನಿದ್ರೆಯನ್ನು ಮುಗಿಸಿ ಬಂದವರಂತೆ ಕಾಣುತ್ತಿದ್ದರೂ, ಹುಡುಗರ ಚೈತನ್ಯವನ್ನು ಮೈಗೂಡಿಸಿಕೊಂಡು ಜೋಶಿನಿಂದ ಕುಣಿಯಲು ಶುರು ಮಾಡಿದರು.  

“ಢಣ್     ಢಣ್     ಢಣ್     ಢಣ್   ಢಣ್.ಢಣ್.ಢಣ್.ಢಣ್   ಢಢಣ್   ಢಣ್.ಢಢಣ್”

ತಮಟೆ ಬಡಿತದ ವೇಗ ಹೆಚ್ಚಾಯಿತು. ಯುವಕರು ತಮ್ಮ ಗುಂಪಿನ ನವಯುವಕನನ್ನು ಸೇರಿಸಿಕೊಂಡು ವೃತ್ತಾಕಾರದಲ್ಲಿ ಸುತ್ತುತ್ತಾ ಜಗ್ಗೇಶ್ ಅವರ ಶೈಲಿಯಲ್ಲಿ ಕುಣಿದರು. ಸುತ್ತಲಿದ್ದ ಜನರೆಲ್ಲಾ ನಗುತ್ತಾ ಚಪ್ಪಾಳೆ ಹೊಡೆದರು. ಗ್ರಂಥಾಲಯದಿಂದ ಮೈಮರೆತು ನೋಡುತ್ತಾ ನಿಂತಿದ್ದ ಶ್ರೀನಾಥನಿಗೆ ನಕ್ಕೂ ನಕ್ಕೂ ಕಣ್ಣಲ್ಲಿ ನೀರು ತುಂಬಿಕೊಂಡಿತು.

“ಡಗ ಡಗ್”

ತಮಟೆಗಾರರು ತಮಟೆ ಹೊಡೆಯುವುದನ್ನು ನಿಲ್ಲಿಸಿದರು. ಕುಣಿಯುತ್ತಿದ್ದ ಬಾಲಕ ಯುವಕರ ಜೊತೆ ರಸ್ತೆಯ ಬದಿಯಲ್ಲಿ ಕೈ ತೊಳೆದು, ಹೊರಗೆ ಬಂದಿದ್ದ ಅಕ್ಕ ಪಕ್ಕದ ಮನೆಯವರಿಗೆ ಪ್ಯಾಕೆಟ್ ಪ್ರಸಾದವನ್ನು ಹಂಚಿದನು. ಗಣಪನ ಟೆಂಪೋ ವಾಹನ ನಿಧಾನವಾಗಿ ಮುಂದೆ ಚಲಿಸಿತು. ಹುಡುಗರು “ಮೋರ್ಯಾವಳಿ”ಯನ್ನು ಪುನರಾರಂಭಿಸಿ, ಟೆಂಪೋವಿನ ಜೊತೆ ಮುಂದೆ ನಡೆದರು. ಬಾಲಕ ಹೂ ಬುಟ್ಟಿಯನ್ನು ಕೈಯಲ್ಲಿ ಹಿಡಿದು, ಪುಷ್ಪಗಳನ್ನು ವಿನಾಯಕನಿಗೆ ಅರ್ಪಿಸುತ್ತಾ ಶ್ರೀನಾಥನ ದೃಷ್ಟಿ ವಲಯದಿಂದ ಹೊರ ನಡೆದನು.

ಶ್ರೀನಾಥ ಮೂರ್ನಾಲ್ಕು ಬಾರಿ ಕಣ್ಣು ಮಿಟುಕಿಸಿ ಈಗ ಮತ್ತೆ ಶಾಂತವಾದ ರಸ್ತೆಯ ಕಡೆ ನೋಡಿದ. ನಂತರ, ಕಿಟಕಿಯಿಂದ ಎರಡು ಹೆಜ್ಜೆ ಹಿಂದೆ ಸರೆದು, ಒಂದು ಚೇರಿನ ಮೇಲೆ ವರಗಿ ನಿಂತನು. ಅವನಿಗೆ ಆ ಕ್ಷಣ ದೇಹದಿಂದ ಒಂದು ತೂಕವಾದ ವಸ್ತುವನ್ನು ಹೊರ ತೆಗೆದ ನಂತರದ ಹಗುರತೆಯ ಅನುಭವವಾಯಿತು. ಕಳೆದ ಐದಾರು ವರ್ಷಗಳಿಂದ ಮನದಲ್ಲಿ ನೆಲೆಗೊಂಡಿದ್ದ ಅಪರಿಚಿತ ಪ್ರಶ್ನೆಗೆ, ಉತ್ತರ ಸಿಗುವ ಬದಲು, ಪ್ರಶ್ನೆಯೇ ಮಾಯವಾಯಿತು. ಇಷ್ಟು ಹೊತ್ತಿನವರೆಗೂ ಮೋಡಗಳ ಹಿಂದೆ ವಿಶ್ರಾಂತಿ ಪಡೆಯುತ್ತಿದ್ದ ಸೂರ್ಯ ಈಗ ಪೂರ್ಣ ಪ್ರಕಾಶಭರಿತನಾಗಿ ಹೊರ ಬಂದನು. ಅವನ ಮೃದು ಕಿರಣಗಳು ಗ್ರಂಥಾಲಯದ ಕಿಟಕಿಯಿಂದ ಪ್ರವೇಶಿಸಿ, ಶ್ರೀನಾಥನ ಮೊಗವನ್ನು ಸ್ಪರ್ಶಿಸಿದವು. ಶ್ರೀನಾಥ ಕಿಟಕಿಯಿಂದ ಬಾನಿನ ಕಡೆ ನೋಡುತ್ತಾ ನಿಂತನು.

 

*****

 

ಸಮಯ ಸಂಜೆ ಐದು ಐವತ್ತೈದು. ಗಡಿಯಾರದ ಕಡೆ ನೋಡಿದ ಶ್ರೀನಾಥ ತಾನು ಓದುತ್ತಿದ್ದ ಕಾಳಿದಾಸನ ‘ಮೇಘದೂತ’ ಕಾವ್ಯದ ಕನ್ನಡಾನುವಾದ ಪುಸ್ತಕವನ್ನು ಮುಚ್ಚಿದ. ಗ್ರಂಥಾಲಯದಲ್ಲಿ ಈಗ ಇದ್ದದ್ದು ತನ್ನನ್ನು ಬಿಟ್ಟರೆ ಇಬ್ಬರು ಪುರುಷರು.  ಶ್ರೀನಾಥ ರಿಜಿಸ್ಟರ್ ಅಲ್ಲಿ ಸಹಿ ಹಾಕಿ, ಕಂಪ್ಯೂಟರ್ ಅನ್ನು ಮಲಗಿಸಿದ. ಗ್ರಂಥಾಲಯಕ್ಕೆ ಕಾಣಿಕೆಗಳಾಗಿ ನೀಡಲಾಗಿದ್ದ ಪುಸ್ತಕಗಳನ್ನು ಪೆಟ್ಟಿಗೆ ಸಮೇತ ತನ್ನ ಡೆಸ್ಕಿನ ಮೇಲಿಟ್ಟನು. ಗ್ರಂಥಾಲಯದ ಹಿರಿಯ ಸದಸ್ಯರಾದ ರಂಗಾಚಾರ್ಯರು ಕೋಲು ಹಿಡಿದು ಮೆಲ್ಲನೆ ನಡೆಯುತ್ತಾ, ಶ್ರೀನಾಥನ ಡೆಸ್ಕಿನ ಬಳಿ ಬಂದರು. ಪೆಟ್ಟಿಗೆಯಲ್ಲಿದ್ದ ಪುಸ್ತಕಗಳನ್ನು ಹೊರ ತೆಗೆದು ಜೋಡಿಸುತ್ತಿದ್ದ ಅವನನ್ನು ನೋಡಿ, ರಂಗಾಚಾರ್ಯರು ನುಡಿದರು - “ಏನಯ್ಯಾ! ಶನಿವಾರಾನೂ ಕೆಲ್ಸ ಮಾಡ್ತಾಯ್ದ್ಯಲಾ... “.

ಶ್ರೀನಾಥ ತನ್ನ ಡೆಸ್ಕಿನ ಮುಂದೆ ಬಂದು - “ಆಚಾರ್ಯರೇ! ವೀಕೆಂಡ್ ಅಂದ ಮಾತ್ರಕ್ಕೆ ವಿಶ್ರಾಂತಿ ಪಡಿಬೇಕು ಅನ್ಸಲ್ವೆ! ಗ್ರಂಥಾಲಯ ಮುಚ್ಚುವ ಸೋಮವಾರವೇ ನನ್ನ ಭಾನುವಾರ”.

“ನೀ ಸೇರ್ದಾಗಿಂದ ರಜಾ ತೊಗೊಂಡೇ ಇಲ್ಲ ಅನ್ಸತ್ತೆ. ಗ್ರಂಥಾಲಯದಲ್ಲಿ ನೀನು ನೌಕ್ರಿ ಶುರು ಮಾಡಿ ಎಷ್ಟು, ಒಂದು ವರ್ಷವಾಯಿತೇ?”

“ಎರಡು ವರ್ಷ ಆಯಿತು ಗುರುಗಳೇ! ಎಂಎ ಪದವಿ ಮುಗಿಸಿದ ಒಂದು ವಾರಕ್ಕೆ ಕೆಲಸ ಸಿಕ್ಕಿದೆ ಅಂತ ಸುದ್ದಿ ಬಂತು. ಶ್ರೀ ಗಣೇಶಾಯ ನಮಃ ಅನ್ಕೊಂಡು ಮೂರು ದಿವಸಕ್ಕೆ ನಾ ಇಲ್ಲಿ ಹಾಜರಿ”.

“ಹಾ, ನೋಡು ಮತ್ತೆ? ಎರಡು ವರ್ಷ ಆಗಿದ್ದ್ರೂ ನೀನು ರಜಾ ಹಾಕಿಲ್ಲ. ಇರ್ಲಿ, ಇರ್ಲಿ. ಹೊಸದಾಗಿ ಲಗ್ನ ಆಗಿದೆ ಆಲ್ವಾ? ಕೂಡಿಟ್ಕೊಂಡಿರೊ ಇಎಲ್ ಅನ್ನು ಹೆಂಡ್ತಿ ಖಾಲಿ ಮಾಡಸ್ತಾಳೆ... “

“ಹೌದಾ? ಇದೇ ಮಾತಾ? ಚಾಲೆಂಜ್?”

“Accepted”, ಎಂದು ನಗುತ್ತಾ ನುಡಿದ ರಂಗಾಚಾರ್ಯರು ಹೊರದ್ವಾರದಲ್ಲಿ ನಿಂತು - “ಆಯ್ತು ಕಣಯ್ಯಾ. ಬರ್ತೀನಿ. ಶುಭ ರಾತ್ರಿ”.

“ನಾಳೆ ನೋಡೋಣ ಆಚಾರ್ಯರೇ”.     

ಶ್ರೀನಾಥ ಕೊನೆಯ ಪುಸ್ತಕವನ್ನು ಎತ್ತಿಟ್ಟು ತನ್ನ ಚೇರಿನಲ್ಲಿ ಕುಳಿತನು. “ಟಕ್ ಟಕ್” - ತನ್ನ ಮೊಬೈಲಿಗೆ ಹೊಸ ಮೆಸೇಜೊಂದು ಆಗಮಿಸಿತು. ಅದನ್ನು ತೆಗೆದು ಓದಿದ - “ಊಟಕ್ಕೆ ಅವಲಕ್ಕಿ ಒಗ್ಗರಣೆ ಮಾಡುವ ಪ್ಲಾನ್ ಇತ್ತು. ಅತ್ತೆ ಮಾವ ಇನ್ನು ಸ್ವಲ್ಪ ಹೊತ್ತಿಗೆ ಬರ್ತೀವಿ ಅಂತ ಫೋನ್ ಮಾಡಿದ್ರು. ಬರ್ತಾ ತರಕಾರಿ ತರ್ತೀರಾ? <ಮುಗ್ಧ ಮುಖದ ಚಿತ್ರಾತ್ಮಕ ಚಿಹ್ನೆ>”.

ಶ್ರೀನಾಥ ಉತ್ತರ ಬರೆದು ಕಳಿಸಿದ - “ಹೂಂ. ಭಕ್ಷ್ಯಕ್ಕೆ ಕ್ಯಾರಟ್ ಹಲ್ವಾ ಮಾಡು. ತುಂಬಾ ದೀಸ ಆಗಿದೆ… <ಸಪ್ಪೆ ಮುಖದ ಚಿತ್ರಾತ್ಮಕ ಚಿಹ್ನೆ>”.

 

“ಎಕ್ಸ್ಕ್ಯೂಸ್ ಮಿ”.

ಶ್ರೀನಾಥ ಮೊಬೈಲನ್ನು ಒಳಗಿಟ್ಟು, ತನ್ನ ಮುಂದೆ ನಿಂತಿದ್ದ ಸುಮಾರು ಇಪ್ಪತ್ತು ವಯಸ್ಸಿನ ಯುವಕನ ಕಡೆ ನೋಡಿದ. ಚಶ್ಮ ಧರಿಸಿದ್ದ, ಅಚ್ಚುಕಟ್ಟಾದ ಕೇಶವಿನ್ಯಾಸದ ಆ ಯುವಕ ಶ್ರೀನಾಥನನ್ನುದ್ದೇಶಿಸಿ, “ನಾನು ‘ನಿಸರ್ಗೋಪಚಾರ್ ವಾರ್ತಾ’ ಎಂಬ ಹೆಸರಿನ ಪ್ರಕೃತಿ ಚಿಕಿತ್ಸೆಯ ಪತ್ರಿಕೆಯನ್ನು ಹುಡುಕ್ತಾಯ್ದೀನಿ, ಸಿಕ್ತಾಯ್ಲ. ಅದರ ಚಂದಾದಾರಿಕೆಯನ್ನು ನಿಲ್ಸಿದೀರ?”.

“ಇಲ್ಲ ಇಲ್ಲ. ಅದರ ಜಾಗ ಈಗ ಬದ್ಲಾಗಿದೆ. ಬನ್ನಿ ತೋರಿಸ್ತೀನಿ”, ಎಂದ ಶ್ರೀನಾಥ ಗ್ರಂಥಾಲಯದ ಪತ್ರಿಕೆ ವಿಭಾಗದತ್ತ ಹುಡುಗನ ಜೊತೆ ನಡೆದ. ಪತ್ರಿಕೆಗಳ ಕಪಾಟಿನ ಮುಂದೆ ನಿಂತು ಹುಡುಗನಿಗೆ ವಿವರಿಸಿದ - “ನೀವು ಮಾಡ್ರನ್ ಮೆಡಿಸಿನ್ ವಿಭಾಗದಲ್ಲಿ ಹುಡುಕ್ತಾಯ್ದ್ರಿ ಅನ್ಸತ್ತೆ. ಈಗ ಆರೋಗ್ಯ ಪತ್ರಿಕೆಗಳನ್ನು ಮಾಡ್ರನ್ ಮೆಡಿಸಿನ್ ಮತ್ತು ಆಯುರ್ವೇದ ಎಂದು ವಿಭಜಿಸಿ ಇಡಲಾಗಿದೆ. ಹಾ! ಇಲ್ಲಿದೆ ನೋಡಿ, ಈ ತಿಂಗಳ ‘ನಿಸರ್ಗೋಪಚಾರ್’”, ಎಂದು ಹೇಳಿ ಕಪಾಟಿನಿಂದ ಒಂದು ಪತ್ರಿಕೆಯನ್ನು ತೆಗೆದು ಯುವಕನಿಗೆ ನೀಡಿದ. ಯುವಕ ಪತ್ರಿಕೆಯ ಪುಟಗಳನ್ನು ಒಂದೆರಡು ಬಾರಿ ತಿರುಗಿಸಿ ನೋಡಿ, ಶ್ರೀನಾಥನಿಗೆ ಧನ್ಯವಾದಗಳನ್ನು ಅರ್ಪಿಸಿದ.

ಇಬ್ಬರೂ ವಾಪಸ್ಸು ಗ್ರಂಥಾಲಯದ ಹೊರದ್ವಾರದ ಬಳಿಯಿದ್ದ ಶ್ರೀನಾಥನ ಡೆಸ್ಕಿಗೆ ಮರಳಿದರು. ಶ್ರೀನಾಥ ಯುವಕನಿಂದ ಪತ್ರಿಕೆಯನ್ನು ತೆಗೆದುಕೊಂಡು, ಅದರ ಕೊನೆಯ ಪುಟದಲ್ಲಿದ್ದ ಸಣ್ಣ ಚೀಟಿಯಲ್ಲಿ ಮುದ್ರೆ ಹಾಕಿ, ದಿನಾಂಕವನ್ನು ಬರೆದು ಸಹಿ ಮಾಡಿದನು. ನಂತರ ಕಿರುನಗೆ ಬೀರುತ್ತಾ ಯುವಕನಿಗೆ ಪತ್ರಿಕೆಯನ್ನು ವಾಪಸ್ಸು ನೀಡಿದ. ಯುವಕ ಒಮ್ಮೆ ನಕ್ಕು, ಅದನ್ನು ತೆಗೆದುಕೊಂಡು ಗ್ರಂಥಾಲಯದ ಹೊರಗೆ ನಡೆದ. ಶ್ರೀನಾಥ ಗ್ರಂಥಾಲಯದ ಬೀಗವನ್ನು ಕೈಯಲ್ಲಿ ಹಿಡಿದು, ತನ್ನ ಚೀಲವನ್ನು ಓರೆಯಾಗಿ ಹೆಗಲ ಮೇಲೆ ಹಾಕಿಕೊಂಡು, ಒಳಗಿನ ದೀಪಗಳನ್ನೆಲ್ಲಾ ಆರಿಸಿದ. ಅನಂತರ ಹೊರಗೆ ನಡೆದು, ಕುವೆಂಪುನಗರದ ನಗರ ಕೇಂದ್ರ ಗ್ರಂಥಾಲಯದ ಬಾಗಿಲಿಗೆ ಬೀಗವನ್ನು ಹಾಕಿದ.

 

ರಾಹುಲನಿಗೆ ಮುಂಜಾನೆ ಶುರುವಾದ ತಲೆ ನೋವು ಈಗ ಸ್ವಲ್ಪ ಹೆಚ್ಚಾಗಿತ್ತು. ಎಂಬಿಬಿಎಸ್ ಓದುತ್ತಿದ್ದ ಅವನಿಗೆ ಮುಂದಿನ ವಾರ ದೆಹಲಿಯ ಏಮ್ಸ್ ಸಂಸ್ಥೆಯ ಎಂಡಿ ಪ್ರವೇಶ ಪರೀಕ್ಷೆ ಕಾದು ನಿಂತಿತ್ತು. ಕಳೆದ ಆರು ತಿಂಗಳಿಂದ ಪರೀಕ್ಷೆಗಾಗಿ ಅನುಮಾನಿಸಿಕೊಂಡು ತಯಾರಾದ ಅವನು, ಅದರ ಬಗ್ಗೆ ಸ್ವಲ್ಪವೂ ವಿಶ್ವಾಸವನ್ನು ಇಟ್ಟುಕೊಂಡಿರಲಿಲ್ಲ. ರಾಹುಲ ತಲೆ ಉಜ್ಜಿಕೊಂಡು, ‘ನಿಸರ್ಗೋಪಚಾರ್’ ಪತ್ರಿಕೆಯನ್ನು ತನ್ನ ಚೀಲದಲ್ಲಿ ಹಾಕಿ, ಗ್ರಂಥಾಲಯದ ಮುಂದೆ ನಿಲ್ಲಿಸಿದ್ದ ಪಲ್ಸರ್ ೨೨೦ ಬೈಕನ್ನು ಹತ್ತಿದ. ನಂತರ ಗ್ರಂಥಾಲಯದ ಬಲ ಭಾಗದಲ್ಲಿದ್ದ ರಸ್ತೆಯ ಕಡೆ ನೋಡಿದ. ಆ ಶಾಂತ ರಸ್ತೆಯಲ್ಲಿ ಇದ್ದದ್ದು ಕೆಲವು ಹಳೆಯ ಕಾಲದ ವಿಶಾಲ ಮನೆಗಳು, ರಸ್ತೆಯನ್ನು ಅಪ್ಪಿಕೊಂಡಂತಹ ಬೃಹದಾಕಾರ ಮರಗಳು. ರಾಹುಲ ಗ್ರಂಥಾಲಯದ ಎಡ ಭಾಗದಲ್ಲಿದ್ದ, ಅಂಗಡಿಗಳಿಂದ ಅಲಂಕೃತವಾದ ರಸ್ತೆಯ ಕಡೆ ಬೈಕನ್ನು ತಿರುಗಿಸಿದ. ತಿರುಗಿಸಿದಾಕ್ಷಣ, ರಸ್ತೆಯ ಬದಿಯಲ್ಲಿದ್ದ ಗುಬ್ಬಚ್ಚಿ ಗೂಡಿನಂತಹ ಒಂದು ಕ್ಲಿನಿಕ್ ಅವನ ಕಣ್ಣಿಗೆ ಬಿದ್ದಿತು. ಥಟ್ಟನೆ ಬ್ರೇಕ್ ಹಾಕಿ ಬೈಕನ್ನು ನಿಲ್ಲಿಸಿ, ಕ್ಲಿನಿಕ್ ಅನ್ನು ಗಮನಿಸಿದ. “ಸಂಜೀವಿನಿ ಫ್ಯಾಮಿಲಿ ಕ್ಲಿನಿಕ್”, ಎಂದು ದ್ವಾರದ ಮೇಲಿದ್ದ ಫಲಕ ತಿಳಿಸಿತು. ಕ್ಲಿನಿಕ್ ಹೆಸರಿನ ಕೆಳಗೆ, “ಡಾ. ಶಿವಲಿಂಗಪ್ಪ, ಎಂಬಿಬಿಎಸ್”, ಎಂದು ಮುದ್ರಿಸಲಾಗಿತ್ತು. ರಾಹುಲ ಕ್ಲಿನಿಕ್ಕಿನ ಒಳಗೆ ನೋಡಿದ. ಅಬ್ಬಬ್ಬಾ ಎಂದರೆ ಐದು ಜನ ಕುಳಿತುಕೊಳ್ಳುವಷ್ಟು ಅಗಲವಿದ್ದ ಒಳಗಿನ ಕೊಠಡಿಯಲ್ಲಿ, ವಯಸ್ಸಾದ ಪೇಷಂಟ್ ಒಬ್ಬರು ಬಿಟ್ಟರೆ ಮತ್ತ್ಯಾರೂ ಇರಲಿಲ್ಲ. ದಪ್ಪ ಕನ್ನಡಕ ಧರಿಸಿದ್ದ ಆ ತಾತ, ತಲೆಯ ಮೇಲೆ ಕಂಬಳಿಯನ್ನು ಹೊದ್ದಿಕೊಂಡು ಬೆಚ್ಚಗೆ ನಿದ್ರಿಸುತ್ತಿದ್ದರು. ಕೇವಲ ಎಂಬಿಬಿಎಸ್ ಮುಗಿಸಿದ ಡಾಕ್ಟರಿನ ಕ್ಲಿನಿಕ್ ಅನ್ನು ನೋಡಿದ ರಾಹುಲನಿಗೆ, ಇದ್ದಕ್ಕಿದ್ದಂತೆ ಅಗಾಧ ಖಿನ್ನತೆಯ ಅನುಭವವಾಯಿತು. ತನ್ನ ಈವರೆಗಿನ ಜೀವನ ಪಥವನ್ನು ಸಂಪೂರ್ಣ ಅಜ್ಞಾನದಿಂದ ಅನುಸರಿಸಿರುವಂತೆ ಅವನಿಗೆ ಎನಿಸಲಾರಂಭಿಸಿತು. ಮುಂದಿನ ವಾರದ ಏಮ್ಸ್ ಪರೀಕ್ಷೆಯಲ್ಲಿ ವಿಫಲವಾದರೆ, ಅಲ್ಲ, ವಿಫಲವಾದ ನಂತರದ ತನ್ನ ಜೀವನ ಅರ್ಥಹೀನ ಎಂಬ ಅಂಧಕಾರದ ಭಾವನೆ ರಾಹುಲನ ಮನವನ್ನು ಆವರಿಸಿತು. ಅವನು ತಲೆ ತಗ್ಗಿಸಿ, ಬೈಕನ್ನು ಸ್ಟಾರ್ಟ್ ಮಾಡಿದ.

“ತೈ        ತತ್ತೈ         ತಕತೈ         ತಕಜಿಮಿ ತಕಜಣು ತಕಜಿಮಿ ತಕಜಣು”

ರಾಹುಲನಿಗೆ ಎಲ್ಲಿಂದಲೋ ಭರತನಾಟ್ಯದ ತಾಳ ಕೇಳಿಬಂತು. ಕತ್ತೆತ್ತಿ ಮುಂದೆ ನೋಡಿದ. ತಾನು ಗಮನಿಸುತ್ತಿದ್ದ ಕ್ಲಿನಿಕ್ ಪಕ್ಕದಲ್ಲಿದ್ದ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಭರತನಾಟ್ಯದ ತರಬೇತಿ ನಡೆಯುತ್ತಿತ್ತು. ಹೊಂಗೆ ಮರದ ನೆರಳಲ್ಲಿ ಕುಳಿತ ಒಬ್ಬಾಕೆ ತಾಳ ಹಾಕುತ್ತಿದ್ದರು; ಏಳೆಂಟು ಬಾಲಕಿಯರು ನೃತ್ಯಾಭ್ಯಾಸವನ್ನು ಮಾಡುತ್ತಿದ್ದರು. ರಾಹುಲ ಸ್ವಲ್ಪ ಹೊತ್ತಿನ ಹಿಂದೆ ಭೇಟಿಯಾದ ಲೈಬ್ರರಿಯನ್, ಶಾಲೆ ಕಾಂಪೌಂಡಿನ ಹೊರಗೆ ನಿಂತು ನೃತ್ಯವನ್ನು ನೋಡುತ್ತಿದ್ದನು. ಇನ್ನೇನು ರಾಹುಲ ಬೈಕನ್ನು ಮುಂದೆ ಚಲಿಸುವ ಹೊತ್ತಿಗೆ, ಲೈಬ್ರರಿಯನ್ ಥಟ್ಟನೆ ಶಾಲೆ ಕಾಂಪೌಂಡಿನ ಮೇಲೆ ಜಿಗಿದು, ಬಾಲಕಿಯರು ನರ್ತಿಸುತ್ತಿದ್ದ ಜಾಗಕ್ಕೆ ನಡೆದು, ತಾನೂ ಅವರಂತೆಯೇ ಹೆಜ್ಜೆ ಹಾಕಲು ಆರಂಭಿಸಿದನು. ಮರದ ಕೆಳಗೆ ಕುಳಿತ್ತಿದ್ದ ಗುರುಗಳಿಗೆ ಆಶ್ಚರ್ಯವಾದರೂ, ತಕ್ಕ ಮಟ್ಟಿಗೆ ಚೆನ್ನಾಗಿಯೇ ಕೈ-ಕಾಲನ್ನು ಆಡಿಸುತ್ತಿದ್ದ ಆತನನ್ನು ಕಂಡು, ಕಿರುನಗೆ ಬೀರುತ್ತಾ ತಾಳ ಹಾಕುವುದನ್ನು ಮುಂದುವರೆಸಿದರು. ಆತ ಕಮಲದ ಹೂವನ್ನು ಬಿಂಬಿಸುವಂತೆ ಕೈಬೆರಳುಗಳನ್ನು ಅರಳಿಸಿ, ನಂತರ ಬಾಲಕಿಯರಂತೆಯೇ ಕ್ಷಿಪ್ರವಾಗಿ ಕಣ್ಣುಗಳನ್ನು ಎಡ-ಬಲ ಆಡಿಸಿದನು. ಬಳಿಕ, ಬಾಲಕಿಯರು ಸೀತೆ ಹೂಗಳನ್ನು ಪೋಣಿಸುತ್ತಿರುವುದನ್ನು ಚಿತ್ರಿಸಲು, ಹಸ್ತಗಳನ್ನು ಒಟ್ಟಿಗೆ ಜೋಡಿಸಿ, ಅರ್ಧವೃತ್ತಾಕಾರದಲ್ಲಿ ಚಲಿಸಿದರು. ರಾವಣನನ್ನು ಚಿತ್ರಿಸಲು ಕಣ್ಣುಗಳನ್ನರಳಿಸಿ, ಹೆಬ್ಬೆಟ್ಟು ಎತ್ತಿದ ಬಲಗೈಯನ್ನು ಮುಖದ ಹತ್ತಿರ ಸೆಳೆದು, ವೃಕ್ಷಾಸನದಲ್ಲಿ ನಿಂತರು. ಲೈಬ್ರರಿಯನ್ ಇದನ್ನೂ ಮಾಡಲು ಯತ್ನಿಸಿದಾಗ, ಬಾಲಕಿಯರೆಲ್ಲಾ ಕಿಲಿಕಿಲಿ ನಗುತ್ತಾ ನಿಂತರು. ಗುರುಗಳೂ ನಗುವನ್ನು ತಡೆಯಲಾರದೆ ಪುಸುಕ್ ಎಂದು ನಕ್ಕಿ, ತಾಳ ಹಾಕುವ ಬದಲು ಚಪ್ಪಾಳೆ ಹೊಡೆದು ಬಿಟ್ಟರು. ಕೊನೆಗೆ ಆತ, ಭರತನಾಟ್ಯದ ಶೈಲಿಯಲ್ಲಿ ಗುರುಗಳಿಗೆ ಬಗ್ಗಿ ನಮಸ್ಕರಿಸಿ, ಶಾಲೆ ಕಾಂಪೌಂಡಿನ ಹೊರಗೆ ನಡೆದನು. ಇವನ್ನೆಲ್ಲಾ ಬೈಕಿನ ಮೇಲೆ ಕುಳಿತು ಗಮನಿಸುತ್ತಿದ್ದ ರಾಹುಲನ ಮುಖದಲ್ಲಿ, ತನಗೆ ಅರಿವಿಲ್ಲದೆ, ಕಿರುನಗೆ ಹುಟ್ಟಿಕೊಂಡಿತ್ತು.

ಕಾಂಪೌಂಡಿನ ಹೊರಗೆ ಬಂದ ಲೈಬ್ರರಿಯನ್ ಶಾಲೆಯ ಪಕ್ಕದಲ್ಲಿದ್ದ ಹಾಪ್ಕಾಮ್ಸ್ ಹಣ್ಣು-ತರಕಾರಿ ಅಂಗಡಿಯ ಕಡೆ ನಡೆದ. ಅಲ್ಲಿ ತರಕಾರಿಗಳನ್ನು ಖರೀದಿಸಿ, ಅಂಗಡಿಯವನು ನೀಡಿದ ಕಾಗದ ಚೀಲವನ್ನು ಜೋಪಾನವಾಗಿ ತೆಗೆದುಕೊಂಡನು. ನಂತರ ಆತ ರಸ್ತೆ ಪಕ್ಕದಲ್ಲಿದ್ದ ಕಾಲುದಾರಿಯಲ್ಲಿ, ಯಾವುದೋ ಹಾಡನ್ನು ಗುನುಗುನಿಸುತ್ತಾ, ನಡೆಯಲಾರಂಭಿಸಿದನು. ಹತ್ತಿರದಲ್ಲಿದ್ದ ಒಂದು ಪಾರ್ಕಿನ ರಸ್ತೆಯ ಕಡೆ ತಿರುಗಿ, ಕುವೆಂಪುನಗರದ ಶಾಂತ ಬಡಾವಣೆಯೊಂದನ್ನು ಪ್ರವೇಶಿಸಿದನು.

ರಾಹುಲ ತಾನು ಕೂತಿದ್ದ ಬೈಕಿನತ್ತ ಕಣ್ಣು ಸೆಳೆದ. ಐದು ನಿಮಿಷ ಮೌನವಾಗಿ ತಲೆ ಬಗ್ಗಿಸಿಕೊಂಡು ಕುಳಿತು, ನಂತರ ತನ್ನ ಚಶ್ಮವನ್ನು ತೆಗೆದು ಕಣ್ಣೊರೆಸಿಕೊಂಡನು. ತಾನು ಸ್ವಲ್ಪ ಹೊತ್ತಿನ ಹಿಂದೆ ತಲೆ ಕೆಡಿಸಿಕೊಂಡ ವಿಷಯವೇನು ಎಂದು ಜ್ಞಾಪಿಸಿಕೊಳ್ಳಲು ಪ್ರಯತ್ನಿಸಿದ. ಯಾವ ವಿಷಯವೂ ಜ್ಞಾಪಕಕ್ಕೆ ಬರಲಿಲ್ಲ. ರಾಹುಲ ಮುಂದೆ ಇದ್ದ ಎಂಬಿಬಿಎಸ್ ಡಾಕ್ಟರಿನ ಕ್ಲಿನಿಕ್ ಕಡೆಗೆ ನೋಡಿ, ಮೆದುವಾಗಿ ನಕ್ಕನು.