ದೇವರೊಡನೆ ಸಂದರ್ಶನ - 3

ದೇವರೊಡನೆ ಸಂದರ್ಶನ - 3

     ಕಛೇರಿಗೆ ಹೋದಾಗಲೂ ಗಣೇಶರು ಮರುದಿನ ದೇವರಿಗೆ ಏನೇನು ಪ್ರಶ್ನೆ ಕೇಳಬೇಕು ಎಂಬ ಬಗ್ಗೆಯೇ ತಲೆ ಕೆಡಿಸಿಕೊಂಡಿದ್ದರು. ಅಂದು ರಾತ್ರಿ ಸಹ ಅವರಿಗೆ ಸರಿಯಾಗಿ ನಿದ್ರೆ ಬರಲಿಲ್ಲ. ಗೊರಕೆಯ ಸದ್ದು ಕೇಳುತ್ತಾ ನಿದ್ದೆ ಮಾಡುವ ಅಭ್ಯಾಸವಾಗಿದ್ದ ಅವರ ಪತ್ನಿಗೆ ಸಹ ಗೊರಕೆ ಕೇಳದ ಕಾರಣದಿಂದ ಸರಿಯಾಗಿ ನಿದ್ದೆ ಬಂದಿರಲಿಲ್ಲವಂತೆ! ಮರುದಿನ ಬೆಳಿಗ್ಗೆ ಬೇಗ ಎದ್ದು ವಾಕಿಂಗಿಗೆ ಹೊರಡಲು ಸಿದ್ಧರಾದ ಗಣೇಶರಿಗೆ ಅವರ ಪತ್ನಿ, "ಹುಷಾರಿಲ್ಲದಿದ್ದರೆ ಇವತ್ತು ವಾಕಿಂಗಿಗೆ ಹೋಗಬೇಡಿ. ರಾತ್ರಿ ನೀವು ಸರಿಯಾಗಿ ನಿದ್ದೆ ಮಾಡಿಲ್ಲ. ಡಾಕ್ಟರಿಗಾದರೂ ತೋರಿಸಿ" ಎಂದಾಗ, "ಅಯ್ಯೋ, ನನಗೇನಾಗಿದೆ. ಇವತ್ತು ವಾಕಿಂಗ್ ತಪ್ಪಿಸಿಕೊಳ್ಳುವಂತೆಯೇ ಇಲ್ಲ" ಎಂದು ಲಗುಬಗೆಯಿಂದ ಕುರ್ಚಿಯ ಮೇಲೆ ಕುಳಿತು ಶೂ ಕಟ್ಟಿಕೊಳ್ಳುತ್ತಾ ಹೇಳಿದರು. ಗಡಿಯಾರ ನೋಡಿಕೊಳ್ಳುತ್ತಾ ರತ್ನಗಿರಿಬೋರೆಯ ಕಡೆಗೆ ದಾಪುಗಾಲು ಹಾಕಿ ಹತ್ತೇ ನಿಮಿಷಕ್ಕೆ ಬೋರೆಯ ಕಲ್ಲುಬೆಂಚಿನ ಮೇಲೆ 'ಉಸ್ಸಪ್ಪಾ' ಎಂದು ಕುಸಿದು ಕುಳಿತರು. ಸಾಮಾನ್ಯಕ್ಕಿಂತ ವೇಗವಾಗಿ ಹೆಜ್ಜೆ ಹಾಕಿದ್ದರಿಂದ ಉಸಿರು ಸಾಮಾನ್ಯ ಸ್ಥಿತಿಗೆ ಬರಲು ಐದು ನಿಮಿಷ ಹಿಡಿಯಿತು. ಅಶರೀರವಾಣಿ ಕೇಳಿಸಿತು: "ಸುಧಾರಿಸಿಕೊಂಡಿದ್ದು ಆಯಿತಾ? ಪ್ರಶ್ನೆ ಕೇಳಲು ಚೆನ್ನಾಗಿ ತಯಾರಿ ಮಾಡಿಕೊಂಡಂತಿದೆ."

ಗಣೇಶ: ನಮಸ್ಕಾರ ದೇವರೇ. ನನಗೆ ಈಗಲೂ ನೀನು ಇದೀಯೋ, ಇಲ್ಲವೋ ಎಂಬ ಬಗ್ಗೆ ಗ್ಯಾರೆಂಟಿ ಇಲ್ಲ. ಎಂತಹದೋ ಒಂದು ಶಕ್ತಿ ಅಂದುಕೊಳ್ಳುತ್ತೇನೆ.

ದೇವರು: ನೀನು ಏನು ಬೇಕಾದರೂ ಅಂದುಕೊಳ್ಳಬಹುದು. ನನಗೇನೂ ತೊಂದರೆಯಿಲ್ಲ.

ಗಣೇಶ: ನೀನು ಇರುವ ಜಾಗ ಯಾವುದು? ಅಂದರೆ ನೀನು ಎಲ್ಲಿ ಇರುತ್ತೀಯಾ ಅಂತ?

ದೇವರು; ಎಲ್ಲಾ ಜಾಗವೂ ನಾನು ಇರುವ ಸ್ಥಳವೇ ಆಗಿದೆ.

ಗಣೇಶ: ನನ್ನ ಪ್ರಶ್ನೆ ನಿನಗೆ ಅರ್ಥವಾಗಲಿಲ್ಲವೆಂದು ಕಾಣುತ್ತದೆ. ನಾನು ಕೇಳಿದ್ದು ನೀನು ಅಯೋಧ್ಯೆಯಲ್ಲಿ ಇರುತ್ತೀಯೋ, ಮಥುರಾದಲ್ಲಿ ಇರುತ್ತೀಯೋ, ಮೆಕ್ಕಾ-ಮದೀನದಲ್ಲಿ ಇರುತ್ತೀಯೋ, ವ್ಯಾಟಿಕನ್ ದೇಶದಲ್ಲಿರುತ್ತೀಯೋ, ದೇವಸ್ಥಾನಗಳಲ್ಲಿ ಇರುತ್ತೀಯೋ, ಚರ್ಚು, ಮಸೀದಿ, ಗುರುದ್ವಾರಗಳಲ್ಲಿ ಇರುತ್ತೀಯೋ ಅಂತ. ನಿನ್ನನ್ನು ನೋಡಬೇಕೆನ್ನುವವರಿಗೆ ನಿನ್ನ ವಿಳಾಸ ಇರಬೇಕಲ್ಲವಾ?

ದೇವರು (ನಗುತ್ತಾ): ನನ್ನ ಉತ್ತರ ನಿನಗೆ ಅರ್ಥವಾಗಲಿಲ್ಲ, ಗಣೇಶಾ. ನಾನು ಎಲ್ಲೆಲ್ಲೂ ಇರುತ್ತೇನೆ.

ಗಣೇಶ: ಹಾಗಾದರೆ ಈ ದೇವಸ್ಥಾನ ಚರ್ಚು, ಮಸೀದಿಗಳಿಗೆ ಅರ್ಥವೇ ಇಲ್ಲವಾ? ಅಲ್ಲೆಲ್ಲಾ ನೀನು ಇದ್ದೀಯ ಅಂತ ಜನ ಹಿಂಡು ಹಿಂಡಾಗಿ ಹೋಗುತ್ತಿರುತ್ತಾರೆ.

ದೇವರು: ಗಣೇಶ, ಈ ದೇವಸ್ಥಾನ, ಮಸೀದಿ, ಚರ್ಚು, ಇವೆಲ್ಲವನ್ನೂ ಕಟ್ಟಿದವನು ನಾನೋ? ನೀವೋ? ಇಡೀ ಬ್ರಹ್ಮಾಂಡವೇ ನನ್ನ ಮನೆಯಾಗಿದೆ. ನೀವು ಕಟ್ಟುವ ಮನೆಗಳು, ಕಟ್ಟಡಗಳು ನಿಮಗಾಗಿ, ನಿಮ್ಮ ಅನುಕೂಲಕ್ಕಾಗಿ, ನಿಮ್ಮ ಉಪಯೋಗಕ್ಕಾಗಿ ಕಟ್ಟಿಕೊಂಡದ್ದೇ ಆಗಿದೆ.

ಗಣೇಶ: ಹಾಗಾದರೆ ದೇವಸ್ಥಾನ, ಚರ್ಚು, ಮಸೀದಿಗಳಲ್ಲಿ ನೀನು ಇಲ್ಲವಾ?

ದೇವರು: ಪತ್ರಕರ್ತನಂತೆ, ಟಿವಿ ಪ್ರಶ್ನಕಾರನಂತೆ ಕೇಳಿದ್ದನ್ನೇ ಬೇರೆ ಬೇರೆ ರೀತಿ ಮತ್ತೆ ಮತ್ತೆ ಕೇಳುವ ಛಲ ಬಿಡದ ತ್ರಿವಿಕ್ರಮನಂತೆ ಕೇಳುತ್ತಿರುವೆ. ಮನೆಯಲ್ಲಿ ಅಡುಗೆ ಕೋಣೆ, ಶೌಚಾಲಯ, ಶಯನಗೃಹ, ಇತ್ಯಾದಿ ಇರುತ್ತವೆ ಅಲ್ಲವಾ? ಶೌಚಾಲಯ ಶೌಚಕ್ರಿಯೆಗೆ ಬಳಸುತ್ತಾರೆ. ಅಡುಗೆ ಮನೆಯನ್ನು ಅಡುಗೆ ಮಾಡಲು ಬಳಸುತ್ತಾರೆ. ಹಾಗೆಯೇ ದೇವಾಲಯವನ್ನು ನನ್ನನ್ನು ಪೂಜಿಸಲು, ನೆನೆಯಲು, ಭಜಿಸಲು ನೀವುಗಳು ಕಟ್ಟಿಕೊಂಡಿರುವ ಸ್ಥಳಗಳಾಗಿವೆ. ಎಲ್ಲಾ ಕಡೆಯೂ ಇರುವ ನಾನು ದೇವಸ್ಥಾನದಲ್ಲೂ ಇರುತ್ತೇನೆ, ಚರ್ಚಿನಲ್ಲೂ ಇರುತ್ತೇನೆ, ಮಸೀದಿಯಲ್ಲೂ ಇರುತ್ತೇನೆ. ನಾನು ಅಲ್ಲಿ ಮಾತ್ರ ಇರುತ್ತೇನೆಂದು ಪ್ರಚಾರ ಮಾಡುತ್ತಿರುವವರು, ನನ್ನನ್ನು ಅಲ್ಲೇ ಕಟ್ಟಿಹಾಕಲು ನೋಡುತ್ತಿರುವವರು ನೀವುಗಳೇ!

ಗಣೇಶ: ನಿನಗೆ ಹಣ್ಣು-ಕಾಯಿ ನೈವೇದ್ಯ ಮಾಡುತ್ತಾರೆ, ಕುರಿ, ಕೋಳಿ ಬಲಿ ಕೊಡುತ್ತಾರೆ, ಇನ್ನೂ ಏನೇನೋ ಮಾಡುತ್ತಾರೆ. ನಿನ್ನ ಹೆಸರಿನಲ್ಲಿ, ನಿನ್ನ ಪ್ರೀತಿಗಾಗಿ, ಸ್ವರ್ಗಪ್ರಾಪ್ತಿಗಾಗಿ ಜಿಹಾದ್ ಅನ್ನುತ್ತಾ ಸಾವಿರಾರು ಜನರನ್ನು ಬಲಿ ಕೊಡುವವರೂ ಇದ್ದಾರೆ. ಹೀಗೆ ಮಾಡಿದರೆ ಅದು ನಿನಗೆ ತಲುಪುತ್ತಾ? ಅದರಿಂದ ನಿನಗೆ ಸಂತೋಷ ಆಗುತ್ತಾ?

ದೇವರು: ಹಣ್ಣು-ಕಾಯಿ, ಕುರಿ, ಕೋಳಿ. ಇಂತಹವೆಲ್ಲಾ ನನ್ನ ಸೃಷ್ಟಿಯೇ ಅಲ್ಲವೇ? ನನ್ನದನ್ನು ನನಗೇ ಕೊಟ್ಟರೆ ಪ್ರಯೋಜನ ಏನು? ಜೀವಿಗಳೆಲ್ಲವೂ ನನ್ನ ಮಕ್ಕಳಿದ್ದಂತೆ. ನನ್ನ ಮಕ್ಕಳ ಬಲಿಯನ್ನು ನಾನೇ ಬಯಸಿದರೆ ನಾನು ದೇವರು ಅನ್ನಿಸಿಕೊಂಡೇನೇ? ನಿಮ್ಮದು ಅನ್ನುವುದು ಇದ್ದರೆ ಅದನ್ನು ಕೊಟ್ಟರೆ ನನಗೆ ಸಂತೋಷ ಆಗುತ್ತೆ. ನನಗೆ ಕೃತಜ್ಞತೆ ತೋರಿಸಬೇಕು, ನನ್ನಿಂದ ಒಳ್ಳೆಯದಾಗಬೇಕು ಎಂದು ನಿರೀಕ್ಷಿಸಿ ಹೀಗೆಲ್ಲಾ ಮಾಡುತ್ತಾರೆ.

ಗಣೇಶ: ಎಲ್ಲವೂ ನಿನ್ನದೇ ಅಂದರೆ ನಮ್ಮದಾಗಿ ಏನಿರುತ್ತೆ?

ದೇವರು: ಈ ಜಗತ್ತಿನಲ್ಲಿ ಮೂರು ಸಂಗತಿಗಳು ಶಾಶ್ವತವಾಗಿರುತ್ತವೆ. ಒಂದು, ನೀವು ದೇವರು ಎನ್ನುವ ಪರಮಾತ್ಮ; ಎರಡು,ಜೀವಿಗಳಲ್ಲಿರುವ ಜೀವಾತ್ಮ ಮತ್ತು ಮೂರನೆಯದು, ಪ್ರಕೃತಿ. ನಿಮ್ಮಲ್ಲಿರುವ ಜೀವಾತ್ಮಕ್ಕೆ ಪಂಚಭೂತಗಳಿಂದಾದ ಶರೀರ ಆಶ್ರಯ ಕೊಟ್ಟಿದೆ. ಪಂಚಭೂತಗಳಾದ ನೆಲ, ಜಲ, ವಾಯು, ಅಗ್ನಿ ಮತ್ತು ಆಕಾಶಗಳನ್ನು ಅವುಗಳಿಗೆ ಹಾನಿ ಆಗದಂತೆ ಸಂರಕ್ಷಿಸುವ ಕೆಲಸ ಮಾಡಿದರೆ ಅದು ನಿಮ್ಮಲ್ಲಿರುವುದನ್ನು ನನಗೆ ಕೊಟ್ಟಂತೆ ಆಗುತ್ತದೆ. ಆಗ ನನಗೆ ಸಂತೋಷ ಆಗುತ್ತದೆ.

ಗಣೇಶ: ಎಲ್ಲಾ ಗೋಜಲು, ಗೋಜಲಾಯಿತು. ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೆ, ಇರೋ ಅಷ್ಟು ದಿನ ಮಜಾ ಮಾಡಿ ಹೋಗೋದು ಒಳ್ಳೆಯದು. ಇರಲಿ, ನನಗೆ ಒಂದು ಅನುಮಾನ ಇದೆ. ಎಲ್ಲಾ ಜೀವಿಗಳೂ ನಿನ್ನ ಮಕ್ಕಳು ಅಂತೀಯ. ಯುದ್ಧ ಮಾಡಿ ನೂರಾರು, ಸಾವಿರಾರು ಜನ ಸತ್ತರೆ ಅದು ನಮ್ಮದೇ ತಪ್ಪು. ಆದರೆ ಇದ್ದಕ್ಕಿದ್ದಂತೆ ಬರುವ ಚಂಡಮಾರುತ, ಸುನಾಮಿ, ಪ್ರವಾಹ ಮುಂತಾದುವುಗಳಿಂದ ಲಕ್ಷಾಂತರ ಜನ, ಪ್ರಾಣಿಗಳು, ಜೀವಿಗಳು ಸಾಯುತ್ತಾರಲ್ಲಾ? ನಿನಗೆ ಏನೂ ಅನ್ನಿಸಲ್ಲವಾ? ಒಳ್ಳೆಯವರು, ಕೆಟ್ಟವರು ಎಲ್ಲರೂ ಹೋಗುತ್ತಾರಲ್ಲಾ, ಇದು ಸರೀನಾ? ನೀನು ದೇವರಾಗಿದ್ದರೆ ಅವರನ್ನೆಲ್ಲಾ ಉಳಿಸುತ್ತಿದ್ದೆಯಲ್ಲವಾ?

ದೇವರು: ನೀನು ವಿಜ್ಞಾನದ ಪ್ರಕಾರ ಚಿಂತಿಸುವವನು. ಒಳ್ಳೆಯದೇ. ಯಾವುದೇ ಕಾರ್ಯ ಕಾರಣವಿಲ್ಲದೆ ನಡೆಯುವುದಿಲ್ಲ ಅನ್ನುವುದು ನಿಮ್ಮ ವಿಜ್ಞಾನದ ನಿಯಮ, ಸರಿ ತಾನೇ? ಈ ಚಂಡಮಾರುತ, ಪ್ರವಾಹ ಇವೆಲ್ಲಾ ಸುಮ್ಮ ಸುಮ್ಮನೆ ಬರುವುದಿಲ್ಲ. ಭೂಮಿಯ ಸಮತೋಲನ ತಪ್ಪಿಸುವಂತಹ ಎಷ್ಟು ಕೆಲಸಗಳನ್ನು ನೀವು ಮಾಡುತ್ತಿದ್ದೀರಿ ಗೊತ್ತಾ? ಕಾಡುಗಳನ್ನೆಲ್ಲಾ ಕಡಿದು ಹಾಕುತ್ತೀರಿ. ಕೆರೆಗಳನ್ನೆಲ್ಲಾ ಮುಚ್ಚಿಸುತ್ತೀರಿ. ಬೆಟ್ಟ, ಗುಡ್ಡಗಳನ್ನು ಅಗೆದು ನೆಲಸಮ ಮಾಡುತ್ತೀರಿ. ಅಂತಸ್ತಿನ ಮೇಲೆ ಅಂತಸ್ತಿನ ಕಟ್ಟಡಗಳನ್ನು ಕಟ್ಟುತ್ತೀರಿ. ನೆಲ ಕೊರೆದು ಬೋರ್‌ವೆಲ್ಲುಗಳಿಂದ ಅಂತರ್ಜಲ ಹೀರಿಬಿಡುತ್ತಿದ್ದೀರಿ. ವಾತಾವರಣ ಕಲುತಗೊಳಿಸಿದ್ದೀರಿ. ಮಾಡಬಾರದ್ದನ್ನು ಮಾಡಿದರೆ ಆಗಬಾರದ್ದು ಆಗಿಯೇ ಆಗುತ್ತದೆ.

ಗಣೇಶ: ನಿಜ, ನಮ್ಮದೇ ತಪ್ಪಿರಬಹುದು. ಆದರೆ ಸಾಯುವವರಲ್ಲಿ ತಪ್ಪು ಮಾಡದವರೂ ಇರುತ್ತಾರಲ್ಲಾ. ನಿನ್ನನ್ನು ನಂಬುವವರೂ ಇರುತ್ತಾರೆ, ನಿನ್ನನ್ನು ನಂಬದವರೂ ಇರುತ್ತಾರೆ. ಇದು ಯಾವ ನ್ಯಾಯ? ಶಾಲೆಯಲ್ಲಿ ಒಬ್ಬ ತಪ್ಪು ಮಾಡಿದರೆ ಇಡೀ ಶಾಲೆಯ ಮಕ್ಕಳಿಗೆ ಶಿಕ್ಷೆ ಕೊಟ್ಟಂತೆ ಇದು ಅಲ್ಲವಾ?

ದೇವರು: ನಂಬುವವರು, ನಂಬದವರು ಅಂತ ಭೇದ ನನ್ನಲ್ಲಿಲ್ಲ. ಗಾಳಿ, ಬೆಳಕು, ನೀರು, ಆಕಾಶ, ನೆಲ ಇವೆಲ್ಲವೂ ನನ್ನನ್ನು ಪ್ರತಿನಿಧಿಸುವಂತಹವು. ಇವುಗಳಲ್ಲಿ ಯಾವುದಾದರೂ ಏನಾದರೂ ಭೇದ, ತಾರತಮ್ಯ ಮಾಡಿದ್ದು ನೋಡಿದ್ದೀಯಾ? ಇನ್ನು ಸಾಯುವವರ ವಿಚಾರ. ಬೆಂಕಿ ಸುಡುತ್ತದೆ ಎಂದು ತಿಳಿದವರನ್ನೂ ಸುಡುತ್ತದೆ, ಸುಡುತ್ತದೆ ಎಂದು ಗೊತ್ತಿಲ್ಲದವರನ್ನೂ ಸುಡುತ್ತದೆ. ಸಾಯುವವರೆಲ್ಲರೂ ತಪ್ಪು ಮಾಡದಿರಬಹುದು. ಆದರೆ ಸಮೂಹ ಜವಾಬ್ದಾರಿ ಅವರದೂ ಇರುತ್ತದೆ. ತಪ್ಪು ಮಾಡದಿರುವುದು ಮಾತ್ರ ಅಲ್ಲ, ತಪ್ಪು ಮಾಡುವವರನ್ನು ತಡೆಯುವ ಜವಾಬ್ದಾರಿ ಸಹ ಹೊರಬೇಕಾಗುತ್ತದೆ. ಅನಾಹುತಗಳನ್ನು ಕಂಡರೂ ತಿದ್ದಿಕೊಳ್ಳದಿದ್ದರೆ ಹೊಣೆ ಯಾರದು? ನಿಮಗೆ ವಿವೇಚನೆ ಮಾಡುವ ಶಕ್ತಿ ಇದೆ ಅಲ್ಲವಾ? ಅದನ್ನು ಉಪಯೋಗಿಸಿಕೊಂಡರೆ ಹೀಗೆ ಆಗುವುದಿಲ್ಲ. ಭೂಮಿ, ಪ್ರಕೃತಿಯ ಮೇಲೆ ನಿರಂತರ ಅತ್ಯಾಚಾರ ಮಾಡುತ್ತಿರುವುದರ ಫಲ ಅನುಭವಿಸಲೇಬೇಕಾಗುತ್ತದೆ.

ಗಣೇಶ: ದೇವರೇ, ನಿನ್ನ ಬಗ್ಗೆ ಒಂದು ದೊಡ್ಡ ಆಕ್ಷೇಪಣೆ ಇದೆ. ಅಂಪೈರ್ ಇಲ್ಲದಿದ್ದರೆ ಯಾವುದೇ ಆಟ ಆಡಲು ಸರಿಯಾಗುವುದಿಲ್ಲ. ನೀನು ಜಗತ್ತಿನ ಅಂಪೈರ್ ಅಲ್ಲವಾ? ಇವತ್ತಿನ ಸ್ಥಿತಿ ನೋಡಿದರೆ ನೀನು ನಿನ್ನ ಕೆಲಸ ಸರಿಯಾಗಿ ಮಾಡುತ್ತಿಲ್ಲ ಅನ್ನಿಸುತ್ತಿದೆ. ತಪ್ಪು ಮಾಡುವವರು, ಕೆಡುಕರಿಗೆ ಶಿಕ್ಷೆ ಆಗುವುದಾಗಲೀ, ಎಚ್ಚರಿಕೆ ಸಿಗುವುದಾಗಲೀ ಆಗುತ್ತಿಲ್ಲ. ನ್ಯಾಯ, ಧರ್ಮದ ಹಾದಿಯಲ್ಲಿ ನಡೆಯುತ್ತಿರುವವರಿಗೆ ಒಳ್ಳೆಯದಾಗುತ್ತಿದೆ ಎಂಬುದಾಗಲೀ, ಅವರಿಗೆ ಗೌರವ ಸಿಗುವುದಾಗಲೀ ಆಗುತ್ತಿಲ್ಲ. ನೀನು ಅಂಪೈರ್ ಆಗಿ ಕೆಟ್ಟವರಿಗೆ ಶಿಕ್ಷೆ, ಒಳ್ಳೆಯವರಿಗೆ ಬಹುಮಾನ ಕೊಡುವವನಾಗಿದ್ದರೆ ಸರಿಯಾಗುತ್ತಿತ್ತಲ್ಲವಾ?

ದೇವರು: ನಾನು ಮೊದಲೇ ಹೇಳಿದ್ದೆ. ಪರಮಾತ್ಮ, ಜೀವಾತ್ಮ ಮತ್ತು ಪ್ರಕೃತಿ- ಈ ಮೂರು ಶಾಶ್ವತ ಸಂಗತಿಗಳ ಪೈಕಿ ನೀವುಗಳೂ ಒಬ್ಬರಾಗಿದ್ದೀರಿ. ನಿನ್ನನ್ನು ನೀನು ಸರಿಯಾಗಿ ತಿಳಿದುಕೊಂಡಿದ್ದರೆ ಈ ಪ್ರಶ್ನೆ ನಿನ್ನಿಂದ ಬರುತ್ತಲೇ ಇರಲಿಲ್ಲ. ನೀವು ಆಡುವ ಆಟಕ್ಕೆ ನೀವೇ ಅಂಪೈರ್ ಆಗಿದ್ದೀರಿ. ನೀವು ಆಡುವ ಪ್ರತಿಯೊಂದು ಆಟದ ಲೆಕ್ಕವೂ ನಿಮ್ಮೊಳಗಿರುವ ಕಾಣದ ಪುಸ್ತಕದಲ್ಲಿ ದಾಖಲಾಗಿರುತ್ತದೆ. ಕೆಲವಕ್ಕೆ ಆ ಕೂಡಲೇ ಫಲಿತಾಂಶ ಸಿಗುತ್ತದೆ. ಕೆಲವಕ್ಕೆ ಅದರದೇ ಆದ ಸಮಯಕ್ಕೆ ಸಿಗುತ್ತದೆ. ಅದಕ್ಕೂ ಅದರದೇ ಆದ ಕಾರಣಗಳಿರುತ್ತವೆ. ಆ ದಾಖಲಾಗುವ ಲೆಕ್ಕದಲ್ಲಿ ನ್ಯೂನತೆಗಳಿಗೆ ಅವಕಾಶವೇ ಇಲ್ಲ. ನಾನು ಕೇವಲ ನೀವು ಆಡುವ ಆಟಗಳಿಗೆ ಸಾಕ್ಷಿಯಾಗಿ, ಪ್ರೇಕ್ಷಕನಾಗಿ ಇರುತ್ತೇನಷ್ಟೆ. ಸಾಕ್ಷಿಯಾಗಿದ್ದರೂ ನಿಮ್ಮೊಳಗಿನ ಲೆಕ್ಕ ಕರಾರುವಾಕ್ಕಾಗಿ ಇರುವ ವ್ಯವಸ್ಥೆಗೆ ಕಾರಣೀಭೂತನಾಗಿರುತ್ತೇನೆ. ಆಟ ನಿಮ್ಮದು, ಅಂಪೈರ್ ನೀವು, ಲೆಕ್ಕವೂ ನಿಮ್ಮದೇ!

ಗಣೇಶ: ಇದು ನನ್ನ ತಲೆಗೆ ಸರಿಯಾಗಿ ಹೋಗುತ್ತಿಲ್ಲ. ಇರಲಿ, ಈಗ ಸಮಯವಾಯಿತು, ನನ್ನ ಕೆಲಸಕ್ಕೂ ಹೋಗಬೇಕಲ್ಲಾ. ನಾಳೆ ವಿವರವಾಗಿ ಹೇಳುವಂತೆ. ನಮಸ್ತೆ, ದೇವರೇ.

ದೇವರು: ಹೋಗಿಬಾ, ಶುಭವಾಗಲಿ.

     ಗಣೇಶರು ಅದೇ ಗುಂಗಿನಲ್ಲಿ ತೇಲುತ್ತಾ ಮನೆಯ ಕಡೆಗೆ ಹೊರಟರು. ಮನೆಗೆ ಬಂದವರೇ ಆರಾಮ ಕುರ್ಚಿಯ ಮೇಲೆ ಕಣ್ಣು ಮುಚ್ಚಿ ಒರಗಿಕೊಂಡರು. "ಏನಾಗ್ತಿದೇರೀ? ಏಳ್ರೀ ಮೇಲೆ" ಎಂಬ ಮಾತಿನೊಂದಿಗೆ ಮುಖದ ಮೇಲೆ ತಣ್ಣೀರಿನ ಹನಿಗಳು ಸಿಂಪಡಿಸಲ್ಪಟ್ಟಾಗ ಬೆದರಿ ಕಣ್ಣು ತೆರೆದ ಗಣೇಶರು, "ನಿನಗೇನಾಯ್ತೇ? ಇದ್ದಕ್ಕಿದ್ದಂತೆ ನೀರು ಎರಚಿದ್ದರಿಂದ ನನಗೆ ಹೇಗಾಯ್ತು ಗೊತ್ತಾ?" "ಅಲ್ರೀ, ವಾಕಿಂಗಿಗೆ ಹೋಗ್ತೀನಿ ಅಂತೀರಿ, ಕುರ್ಚಿ ಮೇಲೆ ಅಲ್ಲಾಡದೆ ಕುಳಿತು ಬಿಡುತ್ತೀರಿ. ನಾನೂ ನೋಡೋ ಅಷ್ಟು ಹೊತ್ತು ನೋಡಿದೆ. ಮಾತನಾಡಿಸಿದರೂ ಮಾತನಾಡದೆ ಇದ್ದದ್ದರಿಂದ ಗಾಬರಿಯಾಗಿ ನೀರು ಚಿಮುಕಿಸಿದೆ". "ಅಯ್ಯೋ ಪುಣ್ಯಾತ್ಗಿತ್ತಿ, ನಾನು ವಾಕಿಂಗ್ ಮುಗಿಸಿ ಬಂದು ಕುಳಿತು ಐದು ನಿಮಿಷ ಆಯಿತು. ಸುಮ್ಮನೆ ಕಣ್ಣು ಮುಚ್ಚಿ ಕುಳಿತಿದ್ದೆ. ಅಷ್ಟಕ್ಕೇ ಇಷ್ಟು ರಂಪ ಮಾಡೋದಾ? ಹೋಗು, ಬಿಸಿ ಟೀ ತಂದುಕೊಡು" ಎಂದು ಮುಖ ಒರೆಸಿಕೊಳ್ಳುತ್ತಾ ಮತ್ತೆ ಕಣ್ಣು ಮುಚ್ಚಿ ಕುಳಿತರು.

-ಕ.ವೆಂ.ನಾಗರಾಜ್.

Comments

Submitted by Nagaraj Bhadra Tue, 08/11/2015 - 21:33

ಕವಿ ನಾಗರಾಜ ಸರ್ ಅವರಿಗೆ ನಮಸ್ಕಾರಗಳು. ದೇವರ ಜೊತೆ ಗಣೇಶನ ಸಂದರ್ಶನ ಚೆನ್ನಾಗಿ ನಡೆಯುತ್ತಾಯಿದೆ.ದೇವರು ಅಷ್ಟು ಬೇಗ ಸೋಲುವುದಿಲ್ಲ.ಗಣೇಶನ ಪ್ರಯತ್ನ ಮುಂದುವರೆಯಲ್ಲಿ.

Submitted by nageshamysore Wed, 08/12/2015 - 20:34

ದೇವರು ಎಲ್ಲಾದರಲ್ಲೂ ಕಿಲಾಡಿ... ಗಣೇಶರ ಜತೆ ಚರ್ಚೆಯನ್ನು ಕೂಡ ಒಂದೆ ಇಡುಗಂಟಿನಲ್ಲಿ ಮುಗಿಸದೆ ಕಂತು ಕಂತಾಗಿ ನಡೆಸಿಕೊಡುತ್ತಿದ್ದಾನೆ. ಗಣೇಶರು 'ದೇವರ ಗೆದ್ದ ಮಾನವ' ಆಗುತ್ತಾರ ಇಲ್ಲವಾ ಅನ್ನುವುದನ್ನು ತಿಳಿಯುವ ಕುತೂಹಲ ಈಗ..!

Submitted by kavinagaraj Thu, 08/13/2015 - 07:31

In reply to by nageshamysore

:) ದೇವರಿಗೇನೋ ಊಟ-ತಿಂಡಿ ಯೋಚನೆಯಿಲ್ಲವೆಂದರೆ ಗಣೇಶರಿಗಿರುವಿದಿಲ್ಲವೇ? ಅದಕ್ಕಾಗಿ ಬಿಡುವು ಬೇಕಿರುತ್ತದೆ ಅನ್ನಿಸುತ್ತಿದೆ. ಅಲ್ಲದೆ ಮುಂದಿನ ಪ್ರಸ್ನೆಗಳಿಗೆ ಸಿದ್ಧತೆಯನ್ನೂ ಮಾಡಿಕೊಳ್ಳಬೇಕಲ್ಲಾ!! ಕೊನೆಗೊಮ್ಮೆ ಒಂದಲ್ಲಾ ಒಮ್ಮೆ ಎಲ್ಲರೂ 'ದೇವರ ಗೆದ್ದ ಮಾನವ'ರಾಗುತ್ತಾರೆ. ಗಣೇಶರು ಮುಂದಿನ ಸಾಲಿನಲ್ಲಿರುವವರು!!! ಧನ್ಯವಾದ, ನಾಗೇಶರೇ.

Submitted by venkatb83 Fri, 08/14/2015 - 15:01

In reply to by nageshamysore

ಹಿರಿಯರೇ -
ನಿಮ್ಮ ಈ ಬರಹ ನಾ ನೋಡಿದ -ಇದೇ ಸಂಪದದಲ್ಲಿ ಬರೆದ ಓ ಮೈ ಗಾಡ್..! ಚಲನ ಚಿತ್ರದ ಮುಂದಿನ ಭಾಗದಂತಿದೆ..ಚೆನ್ನಾಗಿ ಮೂಡಿ ಬರುತ್ತಿದೆ -ದೇವರ ಬಗೆಗಿನ ವಾದ ವಿವಾದ ತರ್ಕ-ಕುತರ್ಕ -ಹಸಿ ಬಿಸಿ ಚರ್ಚೆ ಬಗೆಗೆ ಬೆಳಕು ಚೆಲ್ಲುತ್ತಿದೆ...
ಮುಂದಿನ ಭಾಗಗಳಿಗೆ ಕಾಯ್ತಿರುವೆ
ಹಿಂದಿಯ ' ಓ ಮೈ ಗಾಡ್ ಚಲನ ಚಿತ್ರದಲ್ಲಿ ಸೀದಾ -ಸಾದಾ ಮನುಷ್ಯನಂತೆ ದೇವರು ಸಾದಾ ವಸ್ತ್ರ ಧರಿಸಿ ನಾಯಕನ ಮನೆಗೆ ಬಂದು-ನಾ ದೇವರು ಎಂದರೂ-
ನಾಯಕ ನಂಬದೇ-ದೇವರಿಗೆ ಕೇಳುವನು-
ಹಾಗಾದರೆ ನಾವು ಚಿತ್ರ ಪಟಗಳಲ್ಲಿ ನೋಡುವ ಹಾಗೆ ತಲೆ ಮೇಲೆ ಕಿರೀಟ-ಕೈನಲ್ಲಿ ಚಕ್ರ -ಗದೆ ಇತ್ಯಾದಿ ಯಾಕಿಲ್ಲ?
ಆ ವೇಷ ಭೂಷಣ ಯಾಕಿಲ್ಲ ಅಂತ ..!!

ಅದಕ್ಕೆ ದೇವರು -ನೀವು ಹಲವಾರು ವರ್ಷಗಳಿಂದ ನಮ್ಮನ್ನು ಹಾಗೆ ನೋಡಿ ಕಲ್ಪಿಸಿಕೊಂಡು-ಈಗಲೂ ಅದೇ ರೀತಿ ನಾವು ಕಾಣ ಬೇಕು ಎಂದು ಬಯಸುವಿರಿ-ಆದರೆ ನಾನು ನಿಮ್ಮ ಹಾಗೆ ಅಪ್ಡೇಟ್ ಆಗಿರುವೆ ಎನ್ನುವನು..!!

ಶುಭವಾಗಲಿ

\\\|||||||//

Submitted by kavinagaraj Mon, 08/17/2015 - 12:30

In reply to by venkatb83

:) ಧನ್ಯವಾದ, ವೆಂಕಟೇಶರೇ. ನಾನು 'ಓ ಮೈ ಗಾಡ್..! ' ಚಲನ ಚಿತ್ರದ ಕುರಿತ ಲೇಖನ ಓದಿಲ್ಲ.
>>ದೇವರು -ನೀವು ಹಲವಾರು ವರ್ಷಗಳಿಂದ ನಮ್ಮನ್ನು ಹಾಗೆ ನೋಡಿ ಕಲ್ಪಿಸಿಕೊಂಡು-ಈಗಲೂ ಅದೇ ರೀತಿ ನಾವು ಕಾಣ ಬೇಕು ಎಂದು ಬಯಸುವಿರಿ-ಆದರೆ ನಾನು ನಿಮ್ಮ ಹಾಗೆ ಅಪ್ಡೇಟ್ ಆಗಿರುವೆ ಎನ್ನುವನು..!! -- ಇದನ್ನು ಓದಿ ಖುಷಿಯಾಯಿತು!
ಅಪ್ಡೇಟ್ ಆದರೆ ದೇವರಿಗೂ ಒಳ್ಳೆಯದು, ನಮಗೂ ಒಳ್ಳೆಯದು!! :)

Submitted by ಗಣೇಶ Tue, 08/18/2015 - 00:26

ದೇವರನ್ನು ನಾನು ಸಂದರ್ಶಿಸಿದ್ದೆ ಎಂದು ಪಾರ್ಥರಿಗೆ ಇನ್ನೂ ನಂಬಿಕೆಯಿಲ್ಲ. " ಎಲ್ಲರನ್ನು ಬಿಟ್ಟು ನಿಮ್ಮನ್ನೇ ದೇವರು ಸಂದರ್ಶನಕ್ಕೆ ಯಾಕೆ ಆಯ್ಕೆ ಮಾಡಿದರು?" ಎಂದು ಬೆಳ್ಳಂಬೆಳಗ್ಗೆ ಫೋನ್ ಮಾಡಿ ಕೇಳಿದರು.
ದೇವರ ಸಂದರ್ಶನಕ್ಕೆ ಹೊರಡುವ ಗಡಿಬಿಡಿಯಲ್ಲಿದ್ದೆ, ಆದರೂ ಮಿತ್ರ ಪಾರ್ಥರು ಕೇಳಿದಾಗ ಉತ್ತರಿಸದೇ ಹೋಗಲಾಗುತ್ತದಾ.." ಪಾರ್ಥರೆ, ದೇವರ ಬಳಿ ನಾನೇ ಈ ಪ್ರಶ್ನೆ ಕೇಳಿದ್ದೆ- ಸಂಪದದಲ್ಲೇ..ವೇದ ಶಾಸ್ತ್ರಗಳನ್ನೆಲ್ಲಾ ಅರೆದು ಕುಡಿದಿರುವ ಕವಿನಾಗರಾಜರು, ಹರಿಹರಪುರ ಶ್ರೀಧರರು ಇದ್ದಾರೆ.
ಸೃಷ್ಟಿಯಾದಿಯಿಂದ ಕಲಿಯುಗದವರೆಗೆ ಮಾನವ,ದಾನವ,ದೇವರು ಯಾರ ಬಗ್ಗೆಯೂ, ಎಳೆಎಳೆಯಾಗಿ ಬಿಡಿಸಿ ಹೇಳಬಲ್ಲ ಪಾಟೀಲರಿದ್ದಾರೆ.
ಒಂದು ಶಬ್ದಕ್ಕೆ ನೂರಾರು ಅರ್ಥ ಹುಡುಕಿ ದೇವರ ಬಗ್ಗೆ ವಿವರಿಸಬಲ್ಲ ಶ್ರೀಧರ್‌ಜಿ ಇದ್ದಾರೆ.
ಈ ಕ್ಷಣದಲ್ಲೇ ದೇವರ ಬಗ್ಗೆ ಕವಿತೆ ಕಟ್ಟಿ ಹಾಡಬಲ್ಲ ನಾಗೇಶರಿದ್ದಾರೆ.
ರಾಜ್‌‌ಕುಮಾರ್‌ನ ದೇವರ ಪಾತ್ರ ಮಾಡಿದ ಕನ್ನಡ ಸಿನೆಮಾದಿಂದ ಹಿಡಿದು, OMG, Godfather :) ವರೆಗೆ ದೇವರ ಬಗ್ಗೆ ಎಲ್ಲಾ ಭಾಷೆಯಲ್ಲೂ ಸಿನೆಮಾ ನೋಡಿರುವ, ಅದರ ಬಗ್ಗೆ ಗಂಟೆಗಟ್ಟಲೆ ಚರ್ಚಿಸಬಲ್ಲ ಸಪ್ತಗಿರಿ ಇದ್ದಾರೆ. ಹೀಗೇ...... ಅನೇಕರಿದ್ದಾರೆ...ಅವರನ್ನೆಲ್ಲಾ ಬಿಟ್ಟು ನನ್ನ ಬೆಳಗ್ಗಿನ ಸವಿ ನಿದ್ರೆ ಯಾಕೆ ಹಾಳು ಮಾಡುತ್ತಿದ್ದಿ? ಎಂದೆ.
ಅದಕ್ಕೆ ದೇವರು ಏನಂದರು ಗೊತ್ತಾ!?
(ನೀವ್ಯಾರೂ ಬೇಸರಪಟ್ಟುಕೊಳ್ಳಬೇಡಿ...)
-ನನಗೆ ಅತೀ ಬುದ್ಧಿವಂತ..
ಜ್ಞಾನಿ...
ಸಕಲಕಲಾವಲ್ಲಭ ತಾನೇ ಎಂದು ತಿಳಕೊಂಡಿರುವ ಶತದಡ್ಡನೇ ಬೇಕಿತ್ತು..............!ನೀನಲ್ಲದೇ ಬೇರ್ಯಾರಿದ್ದಾರೆ?" ಅನ್ನೋದಾ!
ಅದಿರ್ಲಿ ಪಾರ್ಥರೆ, ಸದ್ಯಕ್ಕೆ ದೆವ್ವಗಳು ಯಾವುವೂ ನಿಮ್ಮನ್ನು ಸಂದರ್ಶನಕ್ಕೆ ಕರಿಯಲಿಲ್ಲವೇ?" ಎಂದೆ.
"*&^%$#@$#@*"ಎಂದು ಶಾಪ ಹಾಕಿ ಫೋನ್ ಇಟ್ಟರು ಪಾರ್ಥರು..
****************************************************
>>>ಗೊರಕೆಯ ಸದ್ದು ಕೇಳುತ್ತಾ ನಿದ್ದೆ ಮಾಡುವ ಅಭ್ಯಾಸವಾಗಿದ್ದ ಅವರ ಪತ್ನಿಗೆ ಸಹ ಗೊರಕೆ ಕೇಳದ ಕಾರಣದಿಂದ ಸರಿಯಾಗಿ ನಿದ್ದೆ ಬಂದಿರಲಿಲ್ಲವಂತೆ!
-:) :) ಇದೆಲ್ಲಾ ನಿಮಗೆ ಹೇಗೆ ಗೊತ್ತಾಯಿತು!? ಸಪ್ತಗಿರಿಯ ಗೂಢಾಚಾರರು ಮನೆಯೊಳಗೆ ನುಸುಳಿದ್ದಾರೆ ಕಾಣುತ್ತದೆ...
>>ಇದು ನನ್ನ ತಲೆಗೆ ಸರಿಯಾಗಿ ಹೋಗುತ್ತಿಲ್ಲ...
ಇದೂ ನಿಜಾನೆ.. :) :)

Submitted by kavinagaraj Tue, 08/18/2015 - 13:19

In reply to by ಗಣೇಶ

ಆತ್ಮೀಯ ಗಣೇಶರೇ, ದೇವರು ಗಣೇಶರನ್ನೇ ಸಂದರ್ಶನಕ್ಕೆ ಆರಿಸಿಕೊಂಡು ಒಳ್ಳೆಯ ಕೆಲಸ ಮಾಡಿದ್ದಾರೆ. ಸಂದರ್ಶನದ ವಿವರ ನನಗೆ ತಲುಪಿಸುತ್ತಿರುವ ಗೂಢಚಾರರ ನನಗೆ ಈಗಲೂ ಗೊತ್ತಾಗಿಲ್ಲ. ಸಪ್ತಗಿರಿಯವರನ್ನೇ ವಿಚಾರಿಸಿದರೆ ಅವರು ಸರಿಯಾಗಿ ಉತ್ತರಿಸದೆ ಹಾರಿಕೆ ಉತ್ತರ ನೀಡಿದರು. ನೀವೂ ಅವರ ಮೇಲೇ ಅನುಮಾನ ಪಟ್ಡಿರುವಿರಿ. ಪಾರ್ಥರನ್ನೇ ಮುಂದೆಬಿಟ್ಟು ತಿಳಿಯೋಣವೆಂದರೆ ನೀವು ಅವರನ್ನು ದೆವ್ವದ ಸಂದರ್ಶನದ ಬಗ್ಗೆ ವಿಚಾರಿಸಿ ಕೆಣಕಿದ್ದೀರಿ. ಇರಲಿಬಿಡಿ, ಮಂದೊಮ್ಮೆ ಸತ್ಯ ಹೊರಗೆ ಬಂದೇಬಂದೀತು!!

Submitted by partha1059 Tue, 08/18/2015 - 15:09

In reply to by ಗಣೇಶ

ಅಂತೂ ಗಣೇಶರು ನಿದ್ದೆಯಿಂದ ಎದ್ದರು ಅಂದು ಕೊಂಡು ಸಮಾದಾನ ಪಟ್ಟೆ
ಸುಳ್ಳೆ ಆಯಿತು
ಅಲ್ಲಿ ಹೋಗಿ ಮತ್ತೊಬ್ಬರನ್ನು ಪಾರ್ಥ ಎಂದು ತಿಳಿದು
ವಾದ ಮಾಡಿ ಗೆದ್ದು ಬಂದಿದ್ದಾರೆ !
ದೆವ್ವಗಳೆ ? ಸಂದರ್ಶನವೇ ?
ಇನ್ನೆಲ್ಲಿ ಆಷಾಡದ ಅಮಾವಾಸ್ಯೆ ಮುಗಿಯಿತಲ್ಲ !
.
ನಾಗರಾಜರೆ ಮುಂದುವರೆಸಿ....