ಜೀವ - ಜೀವನ; ಮರಳಿಸಲಾಗದ ಋಣ

ಜೀವ - ಜೀವನ; ಮರಳಿಸಲಾಗದ ಋಣ

ಅವತ್ತಿನ ಸಂಜೆಯ ಮಳೆಗೆ ನೆನೆದು ನೆಲ ಸೇರಿತ್ತು ಹೂಗಳ ಎಸಳು. ಮಳೆ ಬಿದ್ದ ಸಂಗತಿಯನ್ನು ಅಲ್ಲೆಲ್ಲಾ ಪಸರಿಸುತ್ತಿರುವ ಮಣ್ಣಿನ ಪರಿಮಳ. ನೆಲದೊಳಗಿನ ಧಗೆ ತಾಳಲಾಗದೆ ಹೊರಬಂದು ಹರಿದಾಡುತ್ತಿರುವ ಹುಳ-ಹುಪ್ಪಟೆಗಳ ಮೇಳ. ಹನಿಯ ರಭಸಕ್ಕೆ ಮುಚ್ಚಿಹೋಗಿದ್ದ ಗೂಡಿನ ದಾರಿಯನ್ನು ಸರಿಮಾಡುತ್ತಿರುವ ಇರುವೆಗಳ ದಳ. ಸಣ್ಣ ಮಿಂಚು, ಆಗೊಮ್ಮೆ ಈಗೊಮ್ಮೆ ಗುಡುಗಿನ ಸಪ್ಪಳ. ಕಪ್ಪೆಯ ವಟವಟ ತಾಳ. ಅಲ್ಲೊಂದು ಇಲ್ಲೊಂದು ಮಿಂಚುಹುಳ. ಹದವಾಗಿ ನೆನೆದಿದ್ದ ಅಂಗಳ. ಹಸಿ ಕೆಸರಿನಲ್ಲಿ ಹೆಜ್ಜೆ ಊರಿ ಗುರುತು ಬಿಟ್ಟಿದ್ದ ಹತ್ತು ಮತ್ತೂ ಒಂದಷ್ಟು ಪಾದತಳ. ನೀಲಿ ಬಾನ ತುಂಬಿದ್ದ ಮೋಡಗಳೂ ವಿರಳ. ಇದೆಲ್ಲದರ ಜೊತೆಗೆ ಮೌನವಾಗಿ ಮೇಲೇಳುತ್ತಿದ್ದ ಹಾತೆಗಳ ಬಳಗ. ಗೂಡ ಬಿಟ್ಟು ದೂರ ಓಡುವ ತುಮುಲ, ತವಕ. ಹಾರಿ ಗಗನದ ತುಂಬ, ಮುಗಿಲ ಮೀರಿ ಏರಲು ಉತ್ಕಟ ಉತ್ಸುಕ. ಚಿಗುರು ರೆಕ್ಕೆಯ ಬಲವೂ, ಬೆಳೆದ ವಯಸಿನ ಛಲವೂ, ಇರುವ ಮರೆಯುವ, ಇಹವ ಮರೆಸುವ ಮತ್ತು ಹಾರುವ ಆ ಹಾತೆಯೊಳಗಿತ್ತು. ಹರಿವ ನೆತ್ತರ ಧಮನಿ ಧಮನಿಯೊಳಿತ್ತು, ಅವ ನಡೆವ ಹಾದಿಯನೂ ತುಂಬಿತ್ತು.

ತುಂಬಿತ್ತು ಅವನ ದಿನಚರಿಯ ಪುಟಗಳು, ಅವನ ಕನಸ ಕುರಿತು. ಇಂದು, ನಾಳೆಯ ಜೊತೆಯ ನಿನ್ನೆಯನು ಮರೆತು. ನಗೆಯಿತ್ತು ಅಲ್ಲಿ, ನಸು ನಾಚಿಕೆಯೂ ಇತ್ತು. ಹುಸಿಕೋಪ, ಆರ್ದ್ರತೆ, ಕಣ್ಣೀರೂ ಇತ್ತು. ಕಳೆದ ನಿನ್ನೆಗಳಿತ್ತು, ನೂರು ನಿಟ್ಟುಸಿರಿತ್ತು, ಮರೆಯಲಾಗದ ಮನದ ಮುನಿಸ ಮಾತಿತ್ತು. ಪುಟ ಪುಟಕೂ ಹೊಸತೊಂದು ಅರ್ಥವಲ್ಲಿತ್ತು. ಅರ್ಥವಾಗದ ಮಾತು ಅವನೊಳಗೇ ಉಳಿದಿತ್ತು. ಅಲ್ಲೇ ಸತ್ತಿತ್ತು... ಅಲ್ಲೇ ಹುಟ್ಟಿತ್ತು..!

ಹುಟ್ಟಿತ್ತು ಅವರ ಸ್ನೇಹದ ನಡುವೆ ಸಣ್ಣದೊಂದು ಸಲುಗೆ. ಮನಸೆರಡನ್ನು ಬೆಸೆಯುವ ಸೇತುವೆ. ಅವಳ ಸಾಮೀಪ್ಯ, ಪರಸ್ಪರ ಒಲವ ಸಂಗತಿಯ ಒಸಗೆ. ಮಾತಾಡುತ್ತಿದ್ದರೆ ಈ ಲೋಕದ್ದಿಲ್ಲ ಗೊಡವೆ. ಆದರೂ ಒಮ್ಮೊಮ್ಮೊ ಮೌನವೇ ಸರಿಸಮಾನ ಮಾತಿಗೆ. ಮನವರಿತರೆ ಇದು ಸಹಜವೇ, ಪ್ರೀತಿ ಜೀವದ ಬೆಸುಗೆ. ಜಗದೊಳಗೆ, ಜಗದ ಜೊತೆ ಸಾಗಿತ್ತು ಅವರ ಪ್ರೀತಿಯ ಪಯಣ. ಋಣಾನುಬಂಧ ಅಧೀನ, ಅದಮ್ಯ ಆಶಾಯಾನ, ನಿರುತ ನಿರಂತರ.

ನಿರುತ ನಿರಂತರವೆಲ್ಲ ನಿರ್ಲಿಪ್ತವಾಯ್ತು, ಅವಳ ಗಾಳಿಗೋಪುರವೆಲ್ಲ ನುಚ್ಚುನೂರಾಯ್ತು, ಮುಂಜಾವಿನ ಕನಸೂ ಸುಳ್ಳಾಗುವುದೆಂದು ಮನನವಾಯ್ತು, ಮಳೆಬಿಲ್ಲ ಬಯಸಿದ ಕೈಗೆ ಸಿಡಿಲು ಬಡಿದಂತಾಯ್ತು.. ಅವನ ಸಾವಿನ ಸುದ್ದಿಯಿಂದ. ಅಂಥಾ ಅಗಾಧ ಮನಃಶಕ್ತಿಯವನು ಅವಳ ಮದುವೆಯ ಸುದ್ದಿ ಕೇಳಿ ಕ್ಷಣ ಅಧೀರನಾಗಿದ್ದ. ಆದರೂ ಮನೆಯವರನ್ನು ಒಪ್ಪಿಸುವೆನೆಂದ ಅವಳ ಮಾತನ್ನು ಮನಸೋಇಚ್ಛೆ ಒಪ್ಪಿದ್ದ. ವಾರದ ನಂತರ ಮನೆಯವರು ಸಹಮತವಿತ್ತದ್ದನ್ನು ಅವಳು ಹೇಳಿದಾಗ ಗದ್ಗದಿತನಾಗಿದ್ದ. ಅವಳ ಕೈ ಮೇಲೆ ಕೈಯಿಟ್ಟು ಕಣ್ಮುಚ್ಚಿ ಕಣ್ಣಲ್ಲೇ ಉಪಕಾರ ಸ್ಮರಿಸಿದ್ದ. ಹಿತವಾಗಿ ತಲೆ ನೇವರಿಸಿ ಹೊರಟಿದ್ದ... ಕಣ್ಣೀರ ಉಪ್ಪುರುಚಿ ಅವಳನ್ನು ವಾಸ್ತವಕ್ಕೆ ದೂಡಿತ್ತು. ಮರುಕ್ಷಣ ಮತ್ತೊಮ್ಮೆ ಕಣ್ಣೀರು ಮಂಜಾಗಿಸಿತು ಅವಳ ಕಣ್ಣುಗಳನ್ನು.

ಅವಳ ಕಣ್ಣುಗಳಲ್ಲಿ ವರ್ಷದ ನಂತರ ನಗು ಇಣುಕಿತ್ತು. ಮದುವೆಯ ಮಾತುಕತೆ ಮನೆಯಲ್ಲಿ ನಡೆದಿತ್ತು. ಹಳೆ ನೆನಪುಗಳು ದೂರಾಗದಿದ್ದರೂ ಹೊಸತರರೊಂದಿಗೆ ಬೆರೆಸಿ ಮರೆಯುವ ಯೋಚನೆ. ಹಾಗಾಗಿ ಅದೇ ವರನನ್ನು ಒಪ್ಪಿದ್ದಳು. ಅವನ ಗೆಳೆಯನೆಂದೂ ತಿಳಿದಿದ್ದಳು. ‘ಹೋಲಿಕೆಯು ಹೊಸತನ್ನು ಹೊಲಸಾಗಿಸುತ್ತದೆ’ ಹಾಗಾಗಿ ಅವರಿಬ್ಬರನ್ನು ಹೋಲಿಸುವ ಗೋಜಿಗೇ ಹೊಗಲಿಲ್ಲ ಅವಳು. ಅದೇಕೋ ಅಂದು ಅವನು ಎಂದಿನಂತೆ ಕಾಣಿಸಲಿಲ್ಲ. ಸಹಜತೆಯ ಸೋಗು ತೀರಾ ಅಸಹಜವಾದಂತಿತ್ತು. ಮನೆಯವರ ಮಾತುಕತೆಯಿಂದ ಇಬ್ಬರೂ ದೂರ ಬಂದಿದ್ದರು. ಬಹಳ ದಿನಗಳಿಂದ ಮುಚ್ಚಿಟ್ಟಿದ್ದ ಒಂದು ವಿಷಯ ಅಂದು ಅವಳೆದುರು ತೆರೆದಿಟ್ಟಿದ್ದ. " ನನ್ನ ಜೀವದ ಗೆಳೆಯ ಅವನು. ಅವನ ಸಾವಿಗೆ ನಾನೇ ಕಾರಣವೇನೋ..? ಬದುಕ ತಿದ್ದಿ, ಜೀವನವನ್ನು ತೋರಿಸಿದ್ದಕ್ಕೆ ಪ್ರತಿಯಾಗಿ ಹೊರಲಾರದಷ್ಟು ಋಣವಿತ್ತು ನಮ್ಮಿಬ್ಬರಿಂದಲೂ ದೂರವಾದ. ಬಹುಶಃ ನಾನವತ್ತು ಅವನಲ್ಲಿ ನಿಮ್ಮನ್ನು ಇಷ್ಟಪಟ್ಟದ್ದು ಹೇಳಿರದಿದ್ದರೆ.. ಹೀಗಾಗುತ್ತಿರಲಿಲ್ಲವೇನೋ?..." ಸಂಜೆಯ ಮೌನದಲ್ಲೂ ಮುಂದೆ ಅವನಾಡಿದ ಮಾತು ಕೇಳದಾಯ್ತು. ಋಣಮುಕ್ತನಾಗಿ, ಜೀವ ಮತ್ತು ಜೀವನ ಎರಡನ್ನೂ ದೂರಮಾಡಿದ್ದಕ್ಕೆ ಒಂದು ಕ್ಷಣ ಅವನ ಮೇಲೆ ಕೋಪಗೊಂಡಳು, ವಿಶಾಲ ವಿಶ್ವದಲ್ಲಿ ಬದುಕು ಸಾಗಿಸಲಾರದೆ ಜೀವ ತ್ಯಜಿಸಿದ ಹೇಯಕೃತ್ಯ ನೆನೆದು ನಿಟ್ಟುಸಿರಿಟ್ಟಳು. ಮರುಕ್ಷಣ ದುಃಖ ಉಮ್ಮಳಿಸಿ ಮನಸಾರೆ ಅತ್ತುಬಿಟ್ಟಳು, ಅವನ ಕೈ ಹಿಡಿದು ಕುಸಿದು ಕುಳಿತಳು, ಅವನ ನೆನಪಿನೊಂದಿಗೆ ಅವನೂ.

ಅವನೂ ಎಲ್ಲರಂತೆ ಬೆಳಕ ಬಯಸಿ ಬದುಕಿದವನು, ಕತ್ತಲಾಗಿಹೋದನು. ಬಾನಿನಾಚೆಗೆ ಹಾರುವ ಬಯಕೆಯವನು, ಬದುಕ ದೀಪಕ್ಕೆ ಮುತ್ತಿಟ್ಟ ಹಾತೆಯಾದನು. ಉರಿದು ಬೆಳಕಾಗಬಯಸಿದವನು, ಬೆಳಕನ್ನೇ ಸುತ್ತಿ ಸುಟ್ಟುಹೋದನು. ಬದುಕ ತಿಳಿಯುವ ಮೊದಲೇ ಬಾಳ ತೊರೆದವನಾದನು, ಬರಿಯ ನೆರಳಾಗಿ ಉಳಿದನು. ನೋಡಿದವರಲಿ ನೆನಪಾದನು, ಕಂಡವರಲಿ ಕಥೆಯಾದನು, ಕೆಲವರಲಿ ಕನಸಾದನು... ನನ್ನಲ್ಲಿ ಮರಳಿಸದ ಋ ಣ ವಾ ದ ನು.

Rating
No votes yet

Comments