ಲಘು ಹರಟೆ: 'ಮೇಡ್ ಇನ್ ಚೈನಾ' ಟು 'ಮೇಕ್ ಇನ್ ಇಂಡಿಯಾ'

ಲಘು ಹರಟೆ: 'ಮೇಡ್ ಇನ್ ಚೈನಾ' ಟು 'ಮೇಕ್ ಇನ್ ಇಂಡಿಯಾ'

ಯಾಕೊ ಈಚಿನ ದಿನಗಳಲ್ಲಿ ಗುಬ್ಬಣ್ಣ ಬಹಳ ಅನ್ಯಮನಸ್ಕನಾಗಿರುವಂತೆ ಕಾಣುತ್ತಿದ್ದ. ಕಳೆದ ಎರಡು ವರ್ಷದಿಂದ ಚೈನದಲ್ಲೊಂದು ಪ್ರಾಜೆಕ್ಟು ಮಾಡುತ್ತಿದ್ದ ಕಾರಣ ಈಚೆಗೆ ಚೈನಾದ ಓಡಾಟ ಸ್ವಲ್ಪ ಜಾಸ್ತಿಯಾಗಿತ್ತು - ಕನಿಷ್ಠ ತಿಂಗಳಿಗೆರಡು ಬಾರಿಯಾದರೂ ಹೋಗುತ್ತಿದ್ದ. ಈ ಬಾರಿಯ 'ಅಕ್ಟೋಬರ ಗೋಲ್ಡನ್- ವೀಕ್ ಹಾಲಿಡೆ' ಸಮಯದಲ್ಲಿ ಒಂದು ವಾರ ಬ್ರೇಕು ಇದ್ದ ಕಾರಣ ಊರಲ್ಲೆ ಆರಾಮವಾಗಿರುವ ಅವಕಾಶ ಸಿಕ್ಕಿ, ಪೋನಾಯಿಸಿದ...

"ಹಲೋ ಸಾರ್..ಊರಲ್ಲೆ ಇದ್ದಿರ್ರಾ..."

"ಹಲ್ಲೊ..ಯಾರು, ಗುಬ್ಬಣ್ಣನಾ....? ಏನಣ್ಣ, ಪ್ರಾಜೆಕ್ಟು ಅದೂ ಇದೂ ಅಂತ ದೇಶ ಸುತ್ತೋನು ನೀನು..ನಾನು ಊರಲ್ಲಿದ್ದೀನಾ ಅಂತ ವಿಚಾರಿಸ್ತಿದ್ದೀಯಾ? ನೀನು ಊರಲಿದ್ದೀಯ ಅದನ್ಹೇಳು ಮೊದಲು.."

'ಅದೂ ನಿಜವೆ ಅನ್ನಿ... ಈಚೆಗಂತು ರಜೆ ಹಾಕೋಕು ಪುರುಸೊತ್ತಿಲ್ಲದ ಹಂಗಾಗಿಬಿಟ್ಟಿದೆ ಸಾರ್.. ಏನೊ ಪುಣ್ಯಕ್ಕೆ ಅವರ ನ್ಯಾಶನಲ್ ಡೇ ಸೆಲಬ್ರೇಷನ್ ಅಂತ ಹೀಗೊಂದು ವಾರ ಹಾಲಿಡೆ ಕೊಟ್ಟುಬಿಟ್ಟಿರೋದೆ ನೆಪ ಮಾಡ್ಕೊಂಡು, ನಾನೂ ಒಂದು ಬ್ರೇಕ್ ಹಾಕಿಕೊಂಡು ಊರಿಗೆ ಬಂದುಬಿಟ್ಟೆ, ನೋಡಿ..' ಎಂದು ದೇಶಾವರಿ ನಗೆ ನಕ್ಕ.

ಗಣರಾಜ್ಯ, ಸ್ವಾತಂತ್ರೋತ್ಸವ, ಗಾಂಧಿ ಜಯಂತಿ ಅಂತೆಲ್ಲಾ ತರದ ರಾಷ್ಟೀಯ ಹಬ್ಬಗಳಿಗೆಲ್ಲ ಒಂದೊಂದು ದಿವಸ ಸಿಕ್ಕುವುದೆ ದುಸ್ತರ. ಅಪ್ಪಿ ತಪ್ಪಿ ವಾರದ ಕೊನೆಯೊ ಅಥವಾ ಇನ್ನಾವುದಾದರು ಹಬ್ಬ ಜತೆಜತೆ ಬೆನ್ನಿಗೆ ಬಂದು ಅಪರೂಪಕ್ಕೆ ತುಸು ಧೀರ್ಘ ರಜೆಯಾಗುವ ಸಂಧರ್ಭಗಳನ್ನು ಬಿಟ್ಟರೆ, ಮಿಕ್ಕೆಲ್ಲಾ ಸಮಯ, ಅಂದು ರಜೆಯೆಂದು ಜೀರ್ಣಿಸಿಕೊಂಡು ಅನುಭವಿಸಿ ಆಸ್ವಾದಿಸುವ ಮನಸಾಗುವ ಹೊತ್ತಿಗೆ ಆ ದಿನವೆ ಕಳೆದುಹೋಗಿರುತ್ತದೆ... ಇವನು ನೋಡಿದರೆ, ವಾರವೆಲ್ಲ ರಜೆಯೆನ್ನುತ್ತಾನಲ್ಲ? ಎಲ್ಲೊ ಡೋಂಗಿ ಹೊಡೆಯುತ್ತಿರಬೇಕು ಅನಿಸಿ,

'ಗುಬ್ಬಣ್ಣ .. ನನಗೇ ರೀಲು ಹತ್ತಿಸಬೇಡ.. ಈ ಸೆಲಬ್ರೇಷನ್ಗೆಲ್ಲ ಅಬ್ಬಾಬ್ಬಾ ಅಂದ್ರೆ ಒಂದು, ಮಿತಿ ಮೀರಿದರೆ ಎರಡು ದಿನ ರಜೆ ಕೊಡಬಹುದು.. ವಾರ ಪೂರ್ತಿ ಅಂದ್ರೆ.... ತೆಗಿ ತೆಗಿ....' ಎಂದೆ.

' ಇಲ್ಲಾ ಸಾರ್.. ನಿಜವಾಗಿಯೂ ಇದು ಸತ್ಯದ ಮಾತು... ಇದೊಂದೆ ಅಲ್ಲ.. ಮೇ ತಿಂಗಳ ಮೊದಲ ವಾರದಲ್ಲಿ ಕಾರ್ಮಿಕರ ದಿನಾಚರಣೆಗು ಇದೆ ತರಹ ಒಂದು ವಾರ ರಜೆ ಸಾರ್.. ಇನ್ನು ಚೀಣಿ ಹೊಸ ವರ್ಷಕ್ಕೂ ಅದೆ ಕಥೆ.. '

'ಗುಬ್ಬಣ್ಣ ನೀ ಹೇಳೊ ತರ ನೋಡಿದ್ರೆ ವರ್ಷವೆಲ್ಲ ಬರಿ ಹಬ್ಬಗಳ ರಜೆಯಲ್ಲೆ ಇರೋ ಹಾಗೆ ಕಾಣ್ತಾರಲ್ಲೊ... ಬಜಾರಲ್ಲಿ ಎಲ್ಲಿ ನೋಡಿದರು ಬರೀ 'ಮೇಡ್ ಇನ್ ಚೈನಾ' ಐಟಂಮುಗಳೆ ಕಾಣುತ್ತೆ... ನೀನು ಹೇಳೊದು ಕೇಳಿದರೆ ಅವರು ಕೆಲಸಾನೆ ಮಾಡದೆ ಬರಿ ರಜೆಯಲ್ಲಿರ್ತಾರೆ ಅನ್ನೊ ಹಾಗೆ ಕಾಣುತ್ತೆ.. ಏನೊ ಇದರ ಗುಟ್ಟು?'

'ಅಲ್ಲೆ ಇರೋದು ಸಾರ್ ಕರಾಮತ್ತು... ವಾರಗಟ್ಟಲೆ ರಜೆ ಮಾಡಿಕೊಂಡು ಮಜಾ ಮಾಡಿಬಿಡುತ್ತಾರೆಂದರೆ, ಕೆಲಸ ಮಾಡದೆ ಹೋತ್ಲಾ ಹೊಡೀತಾರೆ ಅಂತಲ್ಲಾ... ಅವರದು ಪಕ್ಕ ಬಿಜಿನೆಸ್ ಮೈಂಡು... ಪಬ್ಲಿಕ್ಕ್ ಹಾಲಿಡೆ ಇರೋದು ಮೂರೆ ದಿನಾ ಸಾರ್.. ಆದರೆ ಆ ವಾರಕ್ಕೆ ಹಿಂದಿನ ವಾರವೊ, ಅಥವಾ ಮುಂದಿನ ವಾರವೊ, ರಜೆ ಇರುವ ಶನಿವಾರ, ಭಾನುವಾರಗಳಂದು ಕೆಲಸ ಮಾಡಿಬಿಡುತ್ತಾರೆ. ಕೆಲಸ ಮಾಡಿದ ಅ ದಿನಗಳ ಬದಲಿಗೆ ಆಚರಣೆಯ ವಾರದ ದಿನಗಳಂದು 'ಬದಲಿ ರಜೆ' ಘೋಷಿಸಿಬಿಡುತ್ತಾರೆ..! ಹೀಗೆ ಕೆಲಸದ ದಿನಗಳೂ ನಷ್ಟವಾಗಲಿಲ್ಲ, ವಾರ ಪೂರ್ತಿ ರಜೆ ಮಾಡಿಕೊಂಡ ಹಾಗಾಯ್ತು... ಆ ದೊಡ್ಡ ರಜೆಯ ಕಾರಣ ಜನರೆಲ್ಲ ಊರುಗಳಿಗೊ, ಪ್ರವಾಸಗಳಿಗೊ ಪ್ರಯಾಣ ಹೊರಡುವುದು ಹೆಚ್ಚುವುದರಿಂದ 'ಇಂಟರ್ನಲ್ ಟೂರಿಸಂ'ಗೆ ಕುಮ್ಮುಕ್ಕು ಕೊಟ್ಟ ಹಾಗೂ ಆಯ್ತು.. ಹೀಗೆ 'ಆಲ್ ಇನ್ ವನ್' ಉಪಾಯ ಸಾರ್..'

ನಾನೂ ಆ ಯೋಜನೆಯ ಹಿಂದಿನ ವಾಣಿಜ್ಯಾತ್ಮಕ ಮತ್ತು ಭಾವನಾತ್ಮಕ ನಂಟಿನ ಚಾಣಾಕ್ಷತೆಯನ್ನು ಮೆಚ್ಚಿ ತಲೆದೂಗುತ್ತ, ' ನೀನು ಹೇಳುವುದೂ ನಿಜವೆನ್ನು ಗುಬ್ಬಣ್ಣ... 'ವರ್ಕ್ ಹಾರ್ಡ್, ಪ್ಲೇ ಹಾರ್ಡ್' ಎನ್ನುವ ಹಾಗೆ ಸಮರ್ಥವಾಗಿ ದುಡಿದಷ್ಟೆ ಬಲವಾಗಿ ಬಿಡುವು ಮಾಡಿಕೊಂಡು ನಿರಾಳವಾದರೆ ತನುಮನವೆಲ್ಲ ಮತ್ತೆ ರಿಫ್ರೆಷ್ ಆಗಿ ಚಾರ್ಜ್ ಆಗಿಬಿಡುತ್ತೆ... ಸ್ಟ್ರೆಸ್ಸು-ಒತ್ತಡಗಳ ಕಾಟದಿಂದ ಸ್ವಲ್ಪ ಮುಕ್ತಿ ಸಿಕ್ಕಿದಂತೆಯೂ ಆಗುತ್ತದೆ.. ದಕ್ಷತೆ, ಕ್ಷಮತೆ ಹೆಚ್ಚಲು ಅದೂ ಕಾರಣವಾಗುತ್ತದೊ ಏನೊ ? ಅದಕ್ಕೆ ಪ್ರಪಂಚದಲೆಲ್ಲ 'ಮೇಡ್ ಇನ್ ಚೈನಾ' ಸರಕುಗಳು ಅಗ್ಗದ ಬೆಲೆಗೆ ಕೈಗೊಂದು ಕಾಲಿಗೊಂದರಂತೆ ಸಿಗೋದು...ನೀನಂತೂ ಈಗ ಅಲ್ಲೆ ವಾಸ... ಎಲ್ಲಾ ಅರ್ಧಕ್ಕರ್ಧ ಬೆಲೆಗೆ ಸಿಗುತ್ತೆ ಬಿಡು..'

ಗುಬ್ಬಣ್ಣ ನನ್ನ ಮಾತಿಗೆ ಫಕ್ಕನೆ ನಕ್ಕವನೆ, ' ಅಯ್ಯೊ ಸುಮ್ಮನಿರಿ ಸಾರ್..ಅವೆಲ್ಲ ಹೊರಗಷ್ಟೆ ಅಗ್ಗ.. ಚೈನಾದೊಳಗೆ ಅದೆ ಮಾಲು ಕೊಳ್ಳಬೇಕೆಂದ್ರೆ ಹೊರಗಿಗಿಂತ ಜಾಸ್ತಿ ತೆತ್ತೆ ಕೊಳ್ಳಬೇಕು..' ಎಂದ.

ನನಗೆ ಆ ಲಾಜಿಕ್ ಅರ್ಥವಾಗಲಿಲ್ಲ.. ಅಲ್ಲೆ ತಯಾರಾದ ಸರಕು ಅಲ್ಲೆ ಬಿಕರಿಯಾದರೆ ಹೊರಗಿಗಿಂತ ಕಮ್ಮಿ ಬೆಲೆಯಿರಬೇಕಲ್ಲವೆ? ಎನ್ನುವ ನನ್ನ ತರ್ಕ ಅವನಿಗೂ ಅರ್ಥವಾಗಿ, ನಾನು ಪ್ರಶ್ನೆ ಕೇಳುವ ಮೊದಲೆ ' ಸಾರ್.. ಅಲ್ಲಿ 'ಉತ್ಪಾದನೆ ಅರ್ಥಾತ್ ಮ್ಯಾನುಫ್ಯಾಕ್ಚರಿಂಗ್' ಅಗ್ಗವೆ ಆದ್ರೂ, ಜನಗಳೇನು ಫ್ಯಾಕ್ಟರಿಗೆ ಹೋಗಿ ಕೊಳ್ಳೋದಿಲ್ಲವಲ್ಲ? ಅದನ್ನ ಡಿಸ್ಟ್ರಿಬ್ಯೂಟರು, ಡೀಲರು, ರೀಟೈಲರು, ಶೋರೂಮು ಅಂತೆಲ್ಲ ಹತ್ತಾರು ಕೈ ದಾಟಿಸಿ ಗಿರಾಕಿಗೆ ಸಿಗುವಂತೆ ಮಾಡುವ ಹೊತ್ತಿಗೆ ಎಲ್ಲಾ ಖರ್ಚುವೆಚ್ಚ, ಮಧ್ಯವರ್ತಿಗಳ ಲಾಭವೆಲ್ಲಾ ಸೇರಿಕೊಂಡು ಯಾವ ಹೊರಗಿನ ಬೆಲೆಗು ಕಮ್ಮಿಯಿರದಂತೆ ಆಗಿಬಿಟ್ಟಿರುತ್ತದೆ..' ಎಂದ.

ನಾನು ಅರ್ಥವಾದವನಂತೆ ತಲೆದೂಗುತ್ತ, ' ನೀನು ಹೇಳುವುದು ನಿಜ ಬಿಡು ಗುಬ್ಬಣ್ಣ..' ಎಂದೆ. ಹೊರಗಿನವರಿಗೆ ಒಂದೆ ಲಾಟಿನಲ್ಲಿ ದೊಡ್ಡ ಗಾತ್ರದಲ್ಲಿ ಮಾರುವಾಗ ಒಟ್ಟಾರೆ ಲಾಭ ಲೆಕ್ಕ ಹಾಕಿ ಕೊಚ ಕಡಿಮೆ ಲಾಭಾಂಶಕ್ಕೆ ಮಾರಿಬಿಡುವುದರಿಂದ ಕೊಳ್ಳುವವರಿಗು ಅಗ್ಗವಾಗಿಬಿಡುತ್ತದೆ.. ಅದೂ ಅಲ್ಲದೆ ಅಲ್ಲಿರುವ ಜನಸಂಖ್ಯೆಯ ಕಾರಣ ಕಾರ್ಮಿಕರು ಸುಲಭದಲ್ಲಿ, ಅಗ್ಗವಾಗಿ ಸಿಗುವುದರಿಂದ ಉತ್ಪಾದನ ವೆಚ್ಚವು ಕಮ್ಮಿಯಿರಲು ಸಾಧ್ಯವಾಗುತ್ತದೆ...ಆದರೆ ಅದೆ ವಿಧಾನ ಸ್ಥಳೀಯ ಗ್ರಾಹಕರಿಗೆ ಅನುಕರಿಸಲಾಗುವುದಿಲ್ಲ.. ಮೂಲ ಬೆಲೆಗೆ ಮಿಕ್ಕ ಮಾರಾಟದ ಖರ್ಚು ವೆಚ್ಚಗಳನ್ನು ಸೇರಿಸುವ ಹೊತ್ತಿಗೆ ಅಲ್ಲಿನ ತೆರಿಗೆಗಳ ಜತೆಯು ಸೇರಿ ಹೊರಗಿಗಿಂತ ಹೆಚ್ಚು ಬೆಲೆಯಾಗಿಬಿಟ್ಟಿರುತ್ತದೆ. ಹೀಗಾಗಿ ಚೀನಾದಿಂದ ಹೊರಗೆ ಕೊಂಡ ಅಗ್ಗದ ಸರಕು ಚೀನಾದಲ್ಲೆ ಹೆಚ್ಚು ತುಟ್ಟಿಯಾಗಿ ಕಂಡರೆ ಅಚ್ಚರಿಯೇನೂ ಇಲ್ಲ..

'ಒಟ್ಟಾರೆ ಮೇಡ್ ಇನ್ ಚೈನಾ' ಮಂತ್ರಕ್ಕೆ ಬೇಕಾದ ನೆಲ, ಜಲ, ಕಾರ್ಮಿಕ ಶಕ್ತಿ ಮತ್ತು ಮೂಲ ಸವಲತ್ತುಗಳನ್ನು ಒದಗಿಸಿಕೊಟ್ಟು ಯಾರೂ ಬೇಕಾದರೂ ಬಂದು 'ಉತ್ಪಾದಿಸಿ' ಅಂತ ಆಹ್ವಾನ ಕೊಟ್ಟಾಗ , ಅದರ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಎಷ್ಟು ದೇಶಗಳಿಗೆ, ಕಂಪನಿಗಳಿಗೆ ಸಾಧ್ಯ? ಆದರೆ ಅದೆ 'ಸರಣಿ ಉತ್ಪಾದನೆ' ಮಂತ್ರವನ್ನ ಯಾಕೊ ಬರಿ ಸರಕು ಉತ್ಪಾದನೆಗೆ ಮಾತ್ರ ಲಿಮಿಟ್ಟು ಮಾಡಿಬಿಟ್ಟಿರುವಂತಿದೆ.. ಜನಸಂಖ್ಯೆ ವಿಷಯಕ್ಕೆ ಬಂದರೆ 'ಮಾಸ್' ಪ್ರೊಡಕ್ಷನ್ ಬದಲು ಬರೀ 'ಲೀನ್' ಪ್ರೊಡಕ್ಷನ್' ಅನುಸರಿಸುತ್ತಿರುವಂತಿದೆ..' ಎಂದೆ ನನಗೆ ನಾನೆ ಹೇಳಿಕೊಳ್ಳುವವನಂತೆ.

' ಆದೇನೊ ನಿಜವೆ ಸಾರ್... ಜನಸಂಖ್ಯೆಗೆ ಕಡಿವಾಣ ಹಾಕದೆ ಹೋಗಿದ್ದರೆ ಅವರು ವೇಗವಾಗಿ ಇಷ್ಟೆಲ್ಲ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿತ್ತೆ.. ? ಅಲ್ಲದೆ ಈಗೆಲ್ಲಾ ಹೊಸತಿನ ಮಂತ್ರ 'ಲೀನ್ ಅಂಡ್ ಕ್ಲೀನ್' ಪ್ರೊಡಕ್ಷನ್ನೆ ಅಲ್ಲವಾ ಸಾರ್..?' ಎಂದ ಗುಬ್ಬಣ್ಣ.

' ಅದಿರಲಿ ಗುಬ್ಬಣ್ಣ.. ನೀನು ಲೀನ್ ಅಂಡ್ ಕ್ಲೀನ್ ಅಂದಾಗ ನೆನಪಾಯ್ತು... ಕಾರ್ಖಾನೆಯ ಉತ್ಪಾದನೆಯಲ್ಲಿ ಅವರು 'ಲೀನ್ (ತೆಳು)' ಪ್ರೊಡಕ್ಷನ್ ಸಿದ್ದಾಂತ ಬಳಸುತ್ತಿದ್ದಾರೊ ಇಲ್ಲವೊ - ಅವರ ಜನಸಂಖ್ಯೆ, ಮಕ್ಕಳುಗಳ ಉತ್ಪಾದನೆಯಲ್ಲಿ ಮಾತ್ರ ಪರ್ಫೆಕ್ಟ್ 'ಲೀನ್' ಉತ್ಪಾದನ ಮಂತ್ರ ಬಳಸುತ್ತಿರಲೆಬೇಕು.. ಅಲ್ಲಯ್ಯಾ, ಪುಟ್ಟ ವಯಸಿನವರಿಂದ ಹಿಡಿದು ವಯಸಾದವರತನಕ ಯಾರನ್ನೆ ನೋಡಲಿ, ಎಲ್ಲರೂ ಬರಿ ಲೀನಾಗಿಯೆ ಕಾಣುತ್ತಾರಲ್ಲಯ್ಯ? ಮೊದಮೊದಲು ತಿನ್ನುವುದಕ್ಕಿಲ್ಲದೆ ಹೀಗೆ ಒಣಗಿಕೊಂಡಿದ್ದಾರೇನೊ ಅಂದುಕೊಂಡಿದ್ದೆ... ಆದರೆ ಆಮೇಲೆ ಗೊತ್ತಾಯ್ತು, ಎಲ್ಲಾ ಇರೋದೆ ಹೀಗೆ ತೆಳ್ಳಗೆ, ಬೊಳ್ಳಗೆ ಅಂತ... ಅದೇನು ಹೊಟ್ಟೇಗೇನಾದ್ರೂ ತಿಂತಾರ, ಇಲ್ಲಾ ಬರೀ ಉಪವಾಸ ಮಾಡ್ಕೊಂಡ್ ತೂಕ ಇಳಿಸ್ತಾರಾ, ಹೇಗೆ ಅಂತೀನಿ...?! '

' ಅಯ್ಯೊ.. ಅದೇನೂಂತ ಹೇಳಲಿ ಸಾರ್... ನಾನು ಮೊದಮೊದಲು ನಮ್ಮ ಜೀನ್ಸ್ ಪಿಕ್ಚರಿನ 'ಐಶ್ವರ್ಯಾ ರಾಯ್ ಪಿಫ್ಟಿ ಕೇಜಿ ತಾಜು-ಮಹಲ್' ಹಾಡು ಕೇಳುತ್ತಾ ಇಡೀ ಪ್ರಪಂಚಕ್ಕೆಲ್ಲ ನಮ್ಮ ಐಶೊಬ್ಬಳೆ 'ಜೀತಾ ಜಾಗ್ತಾ ಫಿಫ್ಟಿ ಕೇಜಿ ತಾಜ್ಮಹಲ್' ಅಂತ ಕೊಚ್ಕೋತಾ ಇದ್ದೆ... ಆದರೆ ಇಲ್ಲಿಗೆ ಬಂದು ನೋಡಿದರೆ, ಹೆಚ್ಚು ಕಮ್ಮಿ ಎಲ್ಲರು 'ಫಿಫ್ಟಿ ಕೇಜಿ ಗ್ರೇಟ್ ವಾಲ್' ಗಳೆ ಅಂತ ಗೊತ್ತಾಗಿ ಪುಲ್ ದಂಗಾಗಿ ಬಾಯ್ಮುಚ್ಕೊಂಡ್ಬಿಟ್ಟೆ ಸಾರ್.. ನಿಮಗೆ ಬಂದಂಗೆ ನನಗೂ ಅದೆ ಅನುಮಾನ ಮೊದಲು ಬಂದಿದ್ದು - ಇವರೇನು ಸರಿಯಾಗಿ ಊಟಾ ಮಾಡ್ತಾರೊ ಇಲ್ಲಾ ಬರೀ ಉಪವಾಸ ಇರ್ತಾರಾ ಆಂತ..'

'ಗುಬ್ಬಣ್ಣಾ.. ನಾನೇನೊ ದೂರದ ದೇಶದಲ್ಲಿದ್ದೀನಿ.. ಏನು ತಿಂತಾರೆ, ಹೇಗೆ ತಿಂತಾರೆ ಅಂತ ಹತ್ತಿರದಿಂದ ಕಂಡು ಹಿಡಿಯೋದು ಕಷ್ಟ. ನಿನ್ನ ಠಿಕಾಣಿ ಅಲ್ಲೆ ಇದೆಯಲ್ಲಾ, ಸ್ವಲ್ಪ ರಿಸರ್ಚ್ ಮಾಡಿ ನೋಡೋದಲ್ವಾ?' ನಾನು ಸ್ವಲ್ಪ ಕೆಣಕುವಂತೆ ಕೇಳಿದೆ.

' ರಿಸರ್ಚ್ ಮಾಡೋದೇನು ಬಂತು..? ಬಂದಾಗಿಂದ ಬಿಟ್ಟ ಕಣ್ಣು-ಬಾಯಿ ಬಿಟ್ಟಂಗೆ, ನೋಡ್ತಾನೆ ಇದೀನಿ ಸಾರ್.. ಯಾವಾಗ್ಲೂ ಏನಾದ್ರೂ ತಿಂತಾನೆ ಇರ್ತಾರೆ ಒಂದೆ ಸಮ.. ಇನ್ನು ಡಿನ್ನರು, ಲಂಚು ಅಂತ ಹೊರಗೆ ಹೋದರಂತು ಹದಿನೈದಿಪ್ಪತ್ತು ತರ - ಸೂಪ್ನಿಂದ ಹಿಡಿದು, ತರತರಾವರಿ ಮೀನು, ಮಾಂಸ, ಪ್ರಾನು, ಕ್ರಾಬು, ಅನ್ನಾ, ನೂಡೆಲ್ಸ್ ಜತೆಗೆ ಇನ್ನೊಂದಷ್ಟು ಅರೆಬರೆ ಬೆಂದ ತರಕಾರಿಗಳು ಮತ್ತು ಕೊನೆಗೆ ಕತ್ತರಿಸಿಟ್ಟ ಹಣ್ಣುಗಳ ಸಮೇತ ಎಲ್ಲವನ್ನು ಕತ್ತರಿಸುತ್ತಾರೆ ಸಾರ್, ಸಾಲಾಗಿ.. ಆದರೆ ಅಷ್ಟೊಂದು ತಿಂದರೂ ಇರೋದು ಮಾತ್ರ ಹಂಚಿಕಡ್ಡಿ ಹಾಗೆ ಸಣ್ಣಾನೆ...'

'ಎಲ್ಲೊ ಅದು ಅವರ ಜೀನ್ಸ್ ನಲ್ಲೆ ಇರಬೇಕೂಂತ ಕಾಣುತ್ತೆ ಬಿಡೊ ಗುಬ್ಬಣ್ಣ.. ಎಷ್ಟು ತಿಂದ್ರು ಸೈಜ್ ಮಾತ್ರ ಹೆಚ್ಚಾಗದ ಹಾಗೆ.. ನಮ್ಮ ಜೀನ್ಸುಗಳಲ್ಲಿ ಅದು ಉಲ್ಟಾ ಇರಬೇಕು... ತಿನ್ನಲಿ ಬಿಡಲಿ ಗುಢಾಣದ ಹೊಟ್ಟೆ, ಡಬಲ್ ಚಿನ್ನು, ಉಬ್ಬಿದ ತೋಳು ಇತ್ಯಾದಿ ಮಾಮೂಲಾಗಿರುವಂತೆ..'

'ಆದ್ರೂ ಅದರಲ್ಲೇನೊ ಮರ್ಮವಿರಬೇಕು ಅನಿಸಿ ಸ್ವಲ್ಪ ಸಂಶೋಧನೆ ಮಾಡೆಬಿಡಬೇಕು ಅನಿಸಿತು.. ಅದಕ್ಕೆ ಸ್ವಲ್ಪ ದಿನ ಕ್ಲೋಸಾಗಿ ಅಬ್ಸರ್ವ್ ಮಾಡುತ್ತ ಅವರ ರೀತಿ ನೀತಿಗಳನ್ನೆ ಗಮನಿಸುತ್ತಿದೆ ಸಾರ್.. ಸುಮಾರು ದಿನ ಆದ ಮೇಲೆ ಕೊಂಚ 'ಕ್ಲೂ' ಸಿಕ್ತೇನೊ ಅನಿಸ್ತು....'

'ವಾರೆವಾ..! ಪರವಾಗಿಲ್ಲ ಗುಬ್ಬಣ್ಣ... ಸ್ವಲ್ಪ ರಿಸರ್ಚ್ ನಡೆಸಿಯೂ ಬಿಟ್ಟಿದ್ದೀಯಾ.. ಕಮಾನ್ , ಗೀವ್ ಮೀ ದ ಡೀಟೈಲ್ಸ್ ..' ಎಂದೆ ನಾನು ಅದೇನಿರಬಹುದವನ ಸಂಶೋಧನೆ? ಎನ್ನುವ ಕುತೂಹಲದಲ್ಲಿ.

' ಅಂತಾ ವಿಶೇಷದ್ದೇನು ಅಲ್ಲಾ ಸಾರ್.. ಬರಿ ಕಾಮನ್ಸೆನ್ಸ್ ಅಬ್ಸರ್ವೇಶನ್ಸ್ ಅಷ್ಟೆ... ಅವರ ಮಾಮೂಲಿ ಊಟಾ ತಿಂಡಿ ಮಾಡುವ ಹೊತ್ತಲ್ಲಿ ಗಮನಿಸಿದ್ದು ... ಮೊದಲಿಗೆ ಅವರು ಏನೇ ತಿನ್ನಲಿ ಆ ಆಹಾರದ ಒಂದು ಭಾಗ ತರಕಾರಿ, ಸೊಪ್ಪುಗಳಿದ್ದರೆ, ಮತ್ತೊಂದು ಭಾಗ ಯಾವುದಾದರೂ ಮಾಂಸಾಹಾರ ಇರುತ್ತಿತ್ತು.. ಅದೆರಡರ ಜತೆಗೆ ಮೂರನೆ ಭಾಗವೆಂದರೆ ರೈಸ್ ಅಥವಾ ನೂಡೆಲ್ಸ್. ಇಷ್ಟರ ಜತೆಗೊಂದು ಡ್ರಿಂಕ್ ಸೇರಿಕೊಂಡುಬಿಟ್ಟರೆ ಆದಂತೆ ಅವರ ಊಟ..'

'ಇದರಲ್ಲೇನು ವಿಶೇಷವಯ್ಯಾ ? ನಮ್ಮ ಹಾಗೆ ಕೆಲವು ಪಲ್ಯ, ಅನ್ನ, ಮಾಂಸಾಹಾರ ..?'

'ಬಾಯ್ಮಾತಿನ ಲೆಕ್ಕಾಚಾರದಲ್ಲಿ ಅದು ನಿಜಾನೆ ಸಾರ್.. ಆದರೆ ನಿಜವಾದ ಗುಟ್ಟಿರೋದು ಅವುಗಳ ಸರ್ವಿಂಗ್ ಸೈಜಿನಲ್ಲಿ...'

'ಅಂದ್ರೆ..'

' ಸಾರ್.. ನಮ್ಮ ಹಾಗೆ ಅವರು ಹುಳಿ ಜತೆಗನ್ನ, ಸಾರನ್ನ, ಮೊಸರನ್ನ, ಪಲ್ಯದ ಜತೆಗನ್ನ ಅಂತೆಲ್ಲ ರೌಂಡ್ ರೌಂಡಾಗಿ ಬಾರಿಸಲ್ಲ ಸಾರ್.. ಅನ್ನ ಮತ್ತು ನೂಡಲ್ಲುಗಳು, ಬೇರೆ ತರಕಾರಿ ತರ ಇನ್ನೊಂದು ಐಟಂ ಅಷ್ಟೆ.. ಬೇರೆಲ್ಲಾ ಐಟಂ ತಿಂದ ಮೇಲೂ ಹೊಟ್ಟೆ ತುಂಬಿದ ಹಾಗೆ ಅನ್ನಿಸ್ದೆ ಇದ್ರೆ ಒಂದು ಬಟ್ಟಲಲ್ಲಿ ಅನ್ನಾನೊ, ನೂಡಲ್ಲೊ ತಿಂತಾರೆ...'

'ಓಹೊಹೊ...! ನಮ್ಮ ಹಾಗೆ ರಿಪೀಟ್ ಕೋರ್ಸಲ್ಲಿ ಬಾರ್ಸೋದು ಇಲ್ಲಾ ಅಂತಾಯ್ತು.. ಅಲ್ಲಿಗೆ ಒಟ್ಟು ತಿನ್ನೋದ್ರಲ್ಲಿ ಅರ್ಧ ಕಂಟ್ರೋಲ್ ಮಾಡ್ಕೊಂಡಂಗಾಯ್ತಲ್ವಾ?'

' ಅದೆ ಸಾರ್... ನಾನು ಡಿನ್ನರ್ ಪಾರ್ಟೀಲು ನೋಡಿದೀನಿ.. ಒಂದೆ ಸಮ ತಿಂತಾನೆ ಇರ್ತಾರಲ್ಲ ಅಂತ ನೋಡಿದ್ರೆ, ತಿನ್ನೋದೆಲ್ಲ ಸ್ಪೆಷಲ್ ಐಟಂಗಳೆ.. ಹತ್ತು ವೈರೈಟಿಯಿದ್ರೆ ಹತ್ತುನ್ನು ತಿಂತಾರೆ. ಆದರೆ ಅದರಲ್ಲಿ ಅರ್ಧಕ್ಕರ್ಧ ಮೂಳೆ ಸಿಪ್ಪೆಗಳೆ ಹೊರಟು ಹೋಗುತ್ತೆ... ಜತೆಗೆ ಈ ತರ ಜಾಸ್ತಿ ವೆರೈಟಿ ತಿಂದ ದಿನ ಅನ್ನ ಮುಟ್ಟೋದು ಸ್ವಲ್ಪಾನೆ - ಶಾಸ್ತ್ರಕ್ಕೆ ತಿಂದ ಹಾಗೆ...'

'ಒಟ್ನಲ್ಲಿ ಅವರ ಈಟಿಂಗ್ ಸ್ಟೈಲಲ್ಲೆ ಏನೊ ಒಂದು ಸೆಲ್ಫ್ ಕಂಟ್ರೋಲಿಂಗ್ ಮೆಕ್ಯಾನಿಸಮ್ ಇದೆ ಅನ್ನು....'

' ಅದು ಮಾತ್ರ ಗ್ಯಾರಂಟಿ ಸಾರ್.. ಅದೇನು ಗೊತ್ತಿದ್ದೆ ಮಾಡ್ತಾರೊ ಅಥವಾ ಹಿಂದಿನಿಂದ್ಲೂ ಹಾಗೆ ಬಂದುಬಿಟ್ಟಿದಿಯೊ - ಹುಡುಗರಿಂದ ಮುದುಕರವರೆಗೆ ಎಲ್ಲಾರ್ದು ಇದೆ ಅಪ್ರೋಚ್ ಸಾರ್.. ನಮಗೆ ಊಟದಲ್ಲಿ ಅನ್ನನೆ ಮುಖ್ಯ.. ಅದರ ಸುತ್ತಮುತ್ತ ಏನು ತಿಂದ್ರು ಅದು ಲೆಕ್ಕಕ್ಕಿರಲ್ಲ... ಇಲ್ಲಿ ಅನ್ನನೂ ಬೇರೆ ಐಟಂ ತರ ಇನ್ನೊಂದು ಐಟಂ... ಬೇರೇದು ಜಾಸ್ತಿಯಾದ್ರೆ ಅನ್ನ ಕಮ್ಮಿ ತಿಂತಾರೆ, ಅನ್ನ ಜಾಸ್ತಿಯಾದ್ರೆ ಬೇರೇದು ಕಮ್ಮಿಯಾಯ್ತು ಅಂತ ಲೆಕ್ಕ..'

'ಅಲ್ಲಿಗೆ ವೆರೈಟೀ ಇಸ್ ದ ಎಸ್ಸೆನ್ಸ್ ಆಫ್ ಲೈಫ್, ನಾಟ್ ದ ಕ್ವಾಂಟಿಟಿ..ಅನ್ನು... ನೋಡ್ದೋರ್ಗೆ ಎಷ್ಟೊಂದು ಅಂತ ಅನ್ಸಿದ್ರು ಸೈಜಲ್ಲಿ ಮಾತ್ರ ಕಮ್ಮಿ.. ನಾವು ರುಚಿಯಾಗಿದೆ ಅನ್ನೊ ನೆಪದಲ್ಲಿ ಎರಡೆರಡು ಸುತ್ತು ತಿಂದ್ರೆ ಇನ್ನೇನಾಗುತ್ತೆ?'

'ಅದ್ರೆ ಅಲ್ಲೆ ಸಾರ್ ನೀವು ಹುಷಾರಾಗಿರ್ಬೇಕು... ಇಲ್ಲಿನ ವ್ಯಾಪಾರಾನು ಹಾಗೇನೆ. ಹೊರಗಡೆ ದೊಡ್ಡದಾಗಿ ಕಂಡ್ರು ಒಳಗಡೆ ನೋಡಿ ಖರೀದಿಸ್ಬೇಕು..ಇಲ್ಲಾಂದ್ರೆ ಏಮಾರಿ ಬಿಡ್ತೀರಾ..'

'ಅಂದ್ರೆ ಮೋಸದ ವ್ಯಾಪಾರ ಅಂತನಾ? ಅದು ಎಲ್ಲಾ ಕಡೆನೂ ಇರೋದೆ ಅಲ್ವಾ ಗುಬ್ಬಣ್ಣ ?'

'ಮೋಸ ಅಂತಲ್ಲಾ ಸಾರ್..ಒಂದು ತರ ಬೇಸ್ತು ಬೀಳೋದು ಅನ್ನಿ... ಮೊನ್ನೆ ಹೀಗೆ ಎಲ್ಲೊ ಟ್ರಿಪ್ ಹೋಗಿದ್ವಿ... ಸರಿ ಅಲ್ಲಿದ್ದ ಅಂಗಡಿಯವನೊಬ್ಬ ಅಲ್ಲಿ ಫೇಮಸ್ ಗ್ರೀನ್ ಟಿ, ಹೆಲ್ತಿಗೆ ಡಯೆಟ್ಟಿಗೆ ತುಂಬಾ ಒಳ್ಳೇದು ಅಂತೆಲ್ಲ ಹೇಳಿ ಒಂದು ಸ್ಯಾಂಪಲ್ ಕೂಡ ಕುಡಿಸಿಬಿಟ್ಟ... ಗ್ರೀನ್ ಟೀ ಒಳ್ಳೆದಂತಾರಲ್ಲ ಅಂತಾ ನಾನು ಒಂದು ಪ್ಯಾಕೆಟ್ ಕೊಂಡೆ... ಒಳ್ಳೆ ಭಾರಿ ಸೈಜಿನ ಪ್ಯಾಕೆಟ್ಟೆ ಸುತ್ತಿ ಕೊಟ್ಟು ಐವತ್ತು ಡಾಲರು ಚಾರ್ಜ್ ಮಾಡಿದ ಸಾರ್... ಮನೆಗೆ ಬಂದು ಬಿಚ್ಚಿ ನೋಡಿದ್ರೆ ಒಳಗೆ ಐವತ್ತೈವತ್ತು ಗ್ರಾಂನ ಮೂರ್ನಾಲ್ಕು ಪೊಟ್ಟಣ ಮಾತ್ರ ಇದೆ.. ಮಿಕ್ಕಿದ್ದೆಲ್ಲಾ ಬರಿ ಪ್ಯಾಕಿಂಗಷ್ಟೆ..!'

'ಅಲ್ಲಿಗೆ ಅದೂ ಒಂತರ ಫಿಫ್ಟಿ ಗ್ರಾಂ ತಾಜ್ ಮಹಲ್ಲೆ ಆದಂಗಾಯ್ತು ಅನ್ನು..! '

' ಅದು ಹಾಳಾಗಲಿ ಸಾರ್.. ಅದನ್ನು ಕುಡಿಯೊ ರೀತಿನಾದ್ರೂ ಸರಿಯಾಗಿ ಗೊತ್ತಿರಬೇಕಲ್ವ ? ನಮ್ಮ ಟೀ ತರ ಹಾಲು ಸಕ್ರೆ ಬೆರೆಸಿ ಕುಡಿಯೋಕ್ ಹೋದ್ರೆ ಅಧ್ವಾನಾ...! ಎರಡು ಪ್ಯಾಕೆಟ್ಟು ಹಂಗೆ ವೇಸ್ಟಾಗ್ಹೋಯ್ತು.. ಮರ್ಯಾದೆಯಾಗಿ ಇಲ್ಲೀನವರು ಕುಡಿಯೋ ಹಾಗೆ ಬಿಸಿ ನೀರಿಗೆ ಹಾಕ್ಕೊಂಡು ಕುಡ್ದಿದ್ರೆ ಕೊಟ್ಟಿದ್ದ ದುಡ್ಡಿಗೆ ಕುಡ್ದಾಂಗಾದ್ರು ಆಯ್ತು ಅನ್ಕೊಂಡು ಸಮಾಧಾನ ಮಾಡ್ಕೋಬೋದಿತ್ತು.. ಆದ್ರೆ ಆಗಿದ್ ಮಾತ್ರ 'ಕಾಸು ಕೇಡು, ತಲೇನೂ ಬೋಳು' ಅನ್ನೊ ಲೆಕ್ಕಾಚಾರ. ಕೊನೆಗೆ ಇದೆಲ್ಲ ಬೇಕಿತ್ತಾ ? ಅನ್ಕೊಂಡು ಮಿಕ್ಕಿದೆರಡು ಪ್ಯಾಕೆಟ್ಟನ್ನೆ ರೀ ಪ್ಯಾಕೇಜ್ ಮಾಡಿ ಯಾರೊ ಕೋಲೀಗಿಗೆ ಗಿಫ್ಟಾಗಿ ಕೊಟ್ಟು ಕೈ ತೊಳೆದುಕೊಂಡೆ...'

ಗುಬ್ಬಣ್ಣ ಇದರಲ್ಲೆಲ್ಲಾ ತುಂಬಾ ಲೆಕ್ಕಾಚಾರದ ಮನುಷ್ಯ.. ಮೊದಲೆ ಕಾಸ್ಟ್ ಅಕೌಂಟಿಂಗಿನಲ್ಲಿ ಎಕ್ಸ್ ಪರ್ಟ್ ಬೇರೆ. ಅಷ್ಟೊಂದು ದುಡ್ಡು ಕೊಟ್ಟು ವೇಸ್ಟಾಯಿತಲ್ಲ ಅಂತ ಬಹಳ ಖೇದ ಪಟ್ಟುಕೊಂಡಿರಬೇಕು. ಆದರು ಅಲ್ಲೆ ಕಿಲಾಡಿತನ ತೋರ್ಸಿ ಯಾರಿಗೊ ಗಿಫ್ಟ್ ಅಂತ ತಗಲಿಸಿ ಸಾಗ ಹಾಕಿದ್ದಾನೆ.. ಯಾರ್ಯಾರಿಗೊ ಕೊಟ್ಟಿರೋದಿಲ್ಲ..ಖದೀಮ ಅವನು; ಯಾರೊ ತನ್ನ ವ್ಯವಹಾರಕ್ಕೆ ಅನುಕೂಲ ಆಗೋರನ್ನೆ ಹುಡುಕಿರ್ತಾನೆ.. ವ್ಯವಹಾರದ ವಿಷಯಕ್ಕೆ ಬಂದರೆ ಅವರನ್ನು ಮೀರಿಸಿದ ಚಾಣಾಕ್ಷ್ಯ ಇವನು!

'ಹೋಗಲಿ ಬಿಡೊ ಗುಬ್ಬಣ್ಣ... 'ವೆನ್ ಯೂ ಆರ್ ಇನ್ ರೋಮ್, ಬೀ ಯೆ ರೋಮನ್' ಅನ್ನೊ ಹಾಗೆ ಚೀನಾದಲ್ಲಿರೊತನಕ ಅಲ್ಲಿಯವರ ಹಾಗೆ 'ಗ್ವಾಂಗ್ ಕ್ಸಿ' ಅನುಸರಿಸುತ್ತ ಇದೀಯಾ - ದುಬಾರಿ ಗಿಫ್ಟ್ ಕೊಟ್ಕೊಂಡು, ಅಲ್ಲಿಯವರ ತರನೆ ಊಟ ತಿಂಡಿ ತಿನ್ಕೊಂಡು, ನೆಟ್ವರ್ಕಿಂಗ್ ಮಾಡ್ಕೊಂಡು. ಇನ್ನು ಡಿನ್ನರ್ ಪಾರ್ಟಿಗಳಲ್ಲಿ ಗುಂಡು ಹಾಕೊ ಹೊತ್ನಲ್ಲಿ 'ಗನ್ ಬೆ' ಅಂತ ಹೇಳೋದು ಕಲ್ತಿರ್ತೀಯಾ.. 'ಸ್ವಾಮಿ ಕಾರ್ಯಾ, ಸ್ವಕಾರ್ಯಾ' ಅನ್ನೊ ಹಾಗೆ ವ್ಯವಹಾರಕ್ಕೂ ಅನುಕೂಲ, ಹೆಂಡ್ತಿ ಮಕ್ಕಳ ಭಯವಿಲ್ದೆ ಪುಕ್ಕಸಟ್ಟೆ ಗುಂಡು ಪಾರ್ಟಿನು ಮಾಡಿದ ಹಾಗಾಯ್ತು.. ಇನ್ನೇನು ಬೇಕು ನಿನಗೆ ?'

'ಗ್ವಾಂಗ್ ಕ್ಸಿ' ಅನ್ನೋದು ವ್ಯವಹಾರದಲ್ಲಿನ ಔಪಚಾರಿಕ ಸಂಬಂಧ, ನಂಟನ್ನು ಭದ್ರವಾಗಿರಿಸಿಕೊಳ್ಳಲು ಅಲ್ಲಿನ ವ್ಯವಹಾರಸ್ತರು ಅನುಸರಿಸುವ ಸಾಂಪ್ರದಾಯಿಕ ವಿಧಾನ, ಪದ್ದತಿ. ಇನ್ನು ಗುಂಡು ಪಾರ್ಟಿಯಲ್ಲಿ 'ಗನ್ ಬೆ' ಅಂದರೆ 'ಚಿಯರ್ಸ್'ಗೆ ಸಮನಾದ ಪದ.

' ಇಲ್ಲಿನ ವ್ಯವಹಾರದ ಮಾತು ಬಿಡಿ ಸಾರ್... ನಮ್ಮ ಹಾಗಲ್ಲ... ನಮ್ಮಲ್ಲಿ ವ್ಯವಹಾರದಲ್ಲೂ ಪರ್ಸನಲ್ ರಿಲೇಶನಷಿಪ್ ಮುಖ್ಯ.. ಡೀಲಿಂಗ್ನಲ್ಲಿ ಎಷ್ಟೋ ತರದ ಅನೌಪಚಾರಿಕ ಸಹಾಯ, ಸಹಕಾರ ಕೇಳದಿದ್ರೂ ಮಾಡ್ತೀವಿ. ಮಾಡಿಸಿಕೊಂಡವರು ಅದನ್ನ ನೆನಪಲಿಟ್ಟುಕೊಂಡು ಎದುರಿಗೆ ಸಿಕ್ಕಿದಾಗ ಒಂದು ನಮಸ್ಕಾರನಾದ್ರೂ ಹಾಕ್ತಾರೆ.. ಇಲ್ಲಿ ಲಕ್ಷಾಂತರದ ಡೀಲಿಗೆ ಹೆಲ್ಪ್ ಮಾಡಿ ಬಿಜಿನೆಸ್ ಗಿಟ್ಟೊ ಹಾಗೆ ಮಾಡಿದ್ರೂ, ಒಂದು ಲಂಚೊ, ಡಿನ್ನರೊ ಕೊಡಿಸಿಬಿಟ್ರೆ ಆಯ್ತು.. ಎಲ್ಲಾ ಪೀಠಿ ಆದ ಹಾಗೆ. ಆಮೇಲೆ ನೀನ್ಯಾರೊ, ನಾನ್ಯಾರೊ..'

'ವಾರೆವ್ಹಾ! ನಮ್ಮ ಕರ್ಮ ಸಿದ್ದಾಂತಾನ ತುಂಬಾ ಚೆನ್ನಾಗಿ ಅರ್ಥ ಮಾಡ್ಕೊಂಡ್ಬಿಟ್ಟಿರೊ ಹಾಗೆ ಕಾಣುತ್ತಲ್ಲೊ ಗುಬ್ಬಣ್ಣ? ನಿನ್ನ ಕರ್ತವ್ಯ ನೀನು ಮಾಡ್ದೆ, ಹಾಗೆ ನನ್ನ ಕರ್ತವ್ಯನೂ ನಾನು ಮಾಡಿ ಋಣ ತೀರಿಸ್ಬಿಟ್ಟೆ.. ಇನ್ಯಾಕೆ ಬೇಕು ಉಳಿದ ನಂಟು, ವ್ಯಾಮೋಹ ಎಲ್ಲಾ ? ಸದ್ಯ ಈ ತರ ಬರಿ ವ್ಯವಹಾರದಲ್ಲಿ ಮಾತ್ರಾನೊ, ಗಂಡ, ಹೆಂಡ್ತಿ, ಮಕ್ಕಳು, ನೆಂಟರ ಸಂಬಂಧದಲ್ಲು ಅದೆ ತರಾನೊ..?' ಎಂದೆ ಕುತೂಹಲದ ದನಿಯಲ್ಲಿ.

' ಬರಿ ವ್ಯವಹಾರದಲ್ಲೇನು ಬಂತು.. ಎಲ್ಲಾದರಲ್ಲೂ ಇದೆ ಅಂತ ಕಾಣುತ್ತೆ ಸಾರ್.. ಅದೂ ಅಲ್ದೆ ಅವರಿಗ್ಯಾವ 'ಕರ್ಮ ಸಿದ್ದಾಂತ' ಬಿಡಿ ಸಾರ್.. ನಮ್ಮ ಹಾಗೆ ಇಲ್ಲಿನವರಿಗೆ ದೇವರು, ಧರ್ಮ ಗಿರ್ಮ ಅಂತ ಡೀಪ್ ಇಂಟ್ರಸ್ಟಾಗಲಿ, ಕಮಿಟ್ಮೆಂಟ್ ಆಗ್ಲಿ ಇರಲ್ಲ... ದೇವರುಗಳಿಗಿಂತ ದೆವ್ವಗಳಿಗೆ ಪೂಜೆ ಹೆಚ್ಚು.. ದೇವರೂ ಅಂತ ಹೊರಟ್ರೂ ಅಲ್ಲೆಲ್ಲ ಕಾಣ್ಸೋದು ಬುದ್ಧನ ದೇವಸ್ಥಾನಗಳೆ.. ಆ ವಿಷಯದ ಬಗ್ಗೆ ಯಾರೂ ತೀರಾ ಹಚ್ಕೊಳ್ಳೋಕ್ ಹೋಗಲ್ಲ.. ಅದಕ್ಕೆ ನೋಡಿ, ಯಾವ ಧರ್ಮ ಬೇಕಾದ್ರೂ ಆರಾಮವಾಗಿ ಫಾಲೋ ಮಾಡ್ತಾರೆ, ಯಾವ ಧರ್ಮದವರನ್ನ ಬೇಕಾದ್ರೂ ಮದ್ವೆ ಮಾಡ್ಕೊಂಡು ಸಂಸಾರ ಮಾಡ್ತಾರೆ.. ಸಾಕೊ ತಾಕತ್ತು, ಆಸ್ತಿ, ಅಂತಸ್ತು, ಐಶ್ವರ್ಯ ಇದ್ರೆ ಸರಿ - ಆಮೇಲಷ್ಟೆ ಪ್ರೀತಿ, ಪ್ರೇಮ ಎಲ್ಲಾ.. ಹೀಗಾಗಿ ಪಕ್ಕಾ ಕಮರ್ಶಿಯಲ್ ಅಂಡ್ ಪ್ರಾಕ್ಟಿಕಲ್ ಮೈಂಡ್..'

' ಅಯ್ಯಯ್ಯೊ.. ನೀ ಹೇಳೋದ್ ನೋಡಿದ್ರೆ, ಅವರೊಂದು ತರ ನಮ್ಮ ಕುವೆಂಪು ಹೇಳೊ ವಿಶ್ವಮಾನವ ಕುಲಕ್ಕೆ ಸೇರಿದವರ ತರ ಕಾಣ್ತಾರಲ್ಲಯ್ಯ ? 'ಒಂದೆ ಜಾತಿ, ಒಂದೆ ಕುಲ, ದುಡ್ಡೊಂದಷ್ಟೆ ಎಲ್ಲಕ್ಕು ಮೂಲ' ಅನ್ಕೊಂಡು ಹೊರಟಿರೋದ್ರಿಂದ್ಲೆ ಪ್ರಪಂಚದ ಯಾವ ಮೂಲೆಗೆ ಹೋದ್ರೂ ಅವರೆ ಕಾಣಿಸ್ತಾರೆ ಅಂತಾಯ್ತು.. ನಮ್ಮಲ್ಲಿ ಹೊರಗಿನವರಿರಲಿ, ನಮ್ಮವರನ್ನೆ ಗಂಟು ಹಾಕೋಕು ಜಾತಿ, ಜಾತಕ, ಗೋತ್ರ, ರೀತಿ, ರಿವಾಜು, ಅಂತ ನೂರೆಂಟು ತೊಡಕು.. ಅದೊಂದು ಇಲ್ದೆ ಇರೊ ಕಾರಣ ಅವರ ಸ್ಪೀಡೂ ರಾಕೆಟ್ ಸ್ಪೀಡೆ ಅಂತ ಕಾಣುತ್ತೆ?' ನಾನು ಅವರ ವಿಶ್ವವ್ಯಾಪಿತ್ವವನ್ನು ನೆನೆಯುತ್ತ ಅದೆ ಗುಂಗಿನಲ್ಲಿ ಹೇಳಿದೆ.

' ಅದೆ ನೋಡಿ ಸಾರ್ ಅವರ ಸೀಕ್ರೆಟ್ಟು.. ಧರ್ಮ, ದೇವರು ಅಂತ ಯಾವುದೆ ಮತ ಬೇಧ ಡೀಪಾಗಿ ಕಾಡೊಲ್ಲ.. ಯಾವ ಧರ್ಮ ಇಷ್ಟಾನೊ ಅದನ್ನ ಫಾಲೊ ಮಾಡ್ತಾರೆ, ಬೇಡಾ ಅನಿಸಿದ್ರೆ ಬಿಟ್ಟು ಹಾಕೋಕು ಯಾವುದೆ ಎಮೋಶನಲ್ ಬ್ಯಾಗೇಜ್ ಇರೋದಿಲ್ಲ.. ಅದೆ ತರ ಇಡಿ ದೇಶದಲ್ಲೆಲ್ಲ ಹತ್ತಾರು ತರ ಭಾಷೆಗಳಿದ್ರು, ಎಲ್ಲರ ಕಾಮನ್ ಲಾಂಗ್ವೇಜ್ 'ಮ್ಯಾಂಡರೀನ್'. ಹೀಗಾಗಿ ಒಂದು ನೆಲ, ಒಂದು ಭಾಷೆ ಅನ್ನೊ ಎರಡು ತತ್ವಗಳೆ ಎಲ್ಲಾ ನಿಭಾಯಿಸ್ಕೊಂಡಿರೊ ಹಾಗೆ ಕಾಣ್ಸುತ್ತೆ ಸಾರ್..'

'ಅಲ್ಲೂ ಒಂತರ ಅವರ 'ಮೇಡ್ ಇನ್ ಚೈನಾ' ಪಾಲಿಸಿನೆ ಸೇರ್ಕೊಂಡಿರೊ ಹಾಗೆ ಕಾಣುತ್ತಲ್ಲೊ ಗುಬ್ಬಣ್ಣಾ ? ಹೀಗೆ ಅವರು ಫಿಫ್ಟಿ ಕೇಜಿ ತಾಜಮಹಲ್ಲಗಳನ್ನೆ ಪ್ರೊಡ್ಯೂಸ್ ಮಾಡ್ತಾ ಧರ್ಮ ದೇಶ ಅನ್ನದೆ ಎಲ್ಲಾರ ಜತೆನು ಸೇರ್ಕೊಂಡು, ಮದುವೆ ಮುಂಜಿ ಅಂತ ಮಾಡ್ಕೊಂಡು ಮಕ್ಳು ಮರಿಗಳನ್ನ ಹೆರ್ತಾ ಹೋದ್ರೆ ಇಡಿ ಪ್ರಪಂಚವನ್ನೆ ಒಂದು ತರ 'ವಿಶ್ವ ಮಾನವ ಪ್ರಪಂಚ' ಮಾಡಿಬಿಡಬಹುದಲ್ವಾ ? ' ಎಂದೆ ತಮಾಷೆ ಮಾಡುತ್ತಾ.

' ಆಗೋದೇನು ಬಂತು ಸಾರ್.. ? ಈಗ ಎಷ್ಟರ ಮಟ್ಟಿಗೆ ಆಗಿಯೆಹೋಗಿದೆಯೊ ಯಾರಿಗೆ ಗೊತ್ತು ಸಾರ್ ? ಅವರಿಗಂತು ಜಾತಿ ಮತ ಧರ್ಮ ಯಾವುದು ಮದುವೆಗೆ ತೊಡಕಾಗಲ್ಲ. ಆಸ್ತಿ, ಹಣಕಾಸು, ಅಂತಸ್ತುಗಳೆ ಧರ್ಮ ಕರ್ಮ ಎಲ್ಲಾ.. ಅದು ನೆಟ್ಟಗಿದ್ರೆ, ಮಿಕ್ಕಿದ್ದೆಲ್ಲಾ ಪಾಸು..! ಹಾಗೆ ನೋಡೋಕ್ ಹೋದ್ರೆ ಈಗಾಗ್ಲೆ ಪ್ರತ್ಯಕ್ಷವಾಗಿಯೊ, ಪರೋಕ್ಷವಾಗಿಯೊ ಹೆಚ್ಚು ಕಮ್ಮಿ ಅವರ ರೀತಿಯ ಜೀನ್ಸುಗಳೆ ಎಲ್ಲರ ಬ್ಲಡ್ಡಲ್ಲು ಮ್ಯುಟೇಶನ್ ಆಗಿಬಿಟ್ಟರೂ ಆಶ್ಚರ್ಯವೇನೂ ಇಲ್ಲ. .. ಈಗಾಗಲೆ ಇನ್ನೂ ಆಗದೆ ಇದ್ರೂ ಮುಂದಕ್ಕೆ ಆದ್ರೂ ಆಗೋದೆ!'

' ಶಿವ ಶಿವಾ..! ಗುಬ್ಬಣ್ಣ ಎಲ್ಲಿಂದೆಲ್ಲಿಗೆ ತೊಗೊಂಡು ಹೋಗ್ಬಿಟ್ಟೆಯೊ ? ಬೇರೆ ಎಲ್ಲಾದ್ರೂ ಆಗಬಹುದು ..ನಮ್ಮ ದೇಶದಲ್ಲಿ ಆಗೋದುಂಟೇನೊ? ನಮ್ಮ ಕಲೆ, ಆಚಾರ, ಸಂಪ್ರದಾಯ, ರೀತಿ, ನೀತಿಗಳೆ ಬೇರೆ.. ಅವರಿಗೆ ಅವರ ಸಂಸ್ಕೃತಿ ಇದ್ದ ಹಾಗೆ ನಮಗೆ ನಮ್ಮದೂ ಮುಖ್ಯವಲ್ಲವೇನೊ ?'

'ಹೋಗ್ಲಿ ಬಿಡಿ ಸಾರ್.. ಅದು ಆದಾಗ ನೋಡೋಣ.. ಅದು ಹೇಳಿ ಕೇಳಿ ನಮ್ಮ ಮಕ್ಕಳು ಮರಿಗಳ ಜನರೇಶನ್ನಿನ ಪ್ರಶ್ನೆ.. ಆಗ ನಾವೇ ಇರ್ತಿವೋ, ಇಲ್ವೊ ಯಾರಿಗೆ ಗೊತ್ತು ? ನಮ್ಮ ಕಾಲಕ್ಕೆ ಬರಿ ಮೇಡ್ ಇನ್ ಚೈನಾ ಪ್ರಾಡಕ್ಟುಗಳಷ್ಟೆ ಅಂತ ಕಾಣುತ್ತೆ. ಮಿಕ್ಕ ಮೇಡ್ ಇನ್ ಚೈನಾ ಐಡಿಯಾನ ಮುಂದಿನ ಜನರೇಶನ್ ನೋಡಿಕೊಳ್ಳುತ್ತೆ..'

ಆಗ ನನಗೆ ತಟ್ಟನೆ ನೆನಪಾಯ್ತು.. ನಮ್ಮ ದೇಶದಲ್ಲೂ ಈಗ ಹೊಸಗಾಳಿ ಬೀಸುತ್ತ 'ಮೇಕ್ ಇನ್ ಇಂಡಿಯಾ' ಸ್ಲೋಗನ್ ಶುರುವಾಗಿದೆಯಲ್ಲವೆ ? ಅಂತ.

' ಗುಬ್ಬಣ್ಣ.. ಅಂದ ಹಾಗೆ ನಮ್ಮ ಸರ್ಕಾರಾನು ಈಗ 'ಮೇಕ್ ಇನ್ ಇಂಡಿಯಾ' ಅಂತ ಶುರು ಮಾಡಿದಿಯಲ್ಲಯ್ಯ ? ಅಲ್ಲಿಗೆ ನಾವು ಅವರ ದಾರಿನೆ ಹಿಡಿದು ನಡಿಬಹುದಲ್ವ..? ಆಗ ನಮ್ಮ ಎಕಾನಮೀನು ಅವರದರ ಹಾಗೆ ಸ್ಟ್ರಾಂಗ್ ಆಗುತ್ತೆ ಬಿಡು..'

ಅತ್ತಕಡೆಯಿಂದ ಗುಬ್ಬಣ್ಣ ಲೊಚಗುಟ್ಟುವ ಸದ್ದು ಕೇಳಿಸಿತು.. ಹಿಂದೆಯೆ, ' ಸಾರ್.. ಅವರು ಮೂವತ್ತು, ನಲ್ವತ್ತು ವರ್ಷ ಹಿಂದೆ ಮಾಡಿದ್ದನ್ನ ನಾವು ಈಗ ಮಾಡ್ತೀವಿ ಅಂತ ಹೊರಟಿದ್ದೀವಿ ಸಾರ್.. ಈಗ ಮ್ಯಾನುಫ್ಯಾಕ್ಚರ್ ಮಾಡೋಕೇಂತಾ ಉಳಿದಿರೋದಾದರೂ ಏನು ? ಎಲ್ಲಾ ಅವರೆ ಮಾಡಿ ಮುಗಿಸಿಬಿಟ್ಟಿದ್ದಾರೆ, ಅಥವಾ ಈಗಾಗ್ಲೆ ಮಾಡ್ತಾ ಇದಾರೆ..' ಎಂದ.

' ಹಂಗಾದ್ರೆ.. ನಮಗೆ ಮಾಡೋಕೇನೂ ಸ್ಕೋಪೆ ಇಲ್ಲಾಂತೀಯಾ ಗುಬ್ಬಣ್ಣ ? ಚೂರು, ಪಾರು, ಹಳಸಲು, ತಂಗಲೂ...?'

' ಸಾರ್.. ತೀರಾ ಹೈ ಎಂಡ್, ಹೊಸ ಟೆಕ್ನಾಲಜಿ ಅಂದ್ರೆ ಅದು ನಮ್ಮ ಹತ್ರ ಬರೋಲ್ಲ.. ಲೊ ಟೆಕ್ನಾಲಜಿನೆಲ್ಲಾ ಈಗಾಗ್ಲೆ ಚೀನಾ ತರ ಬೇರೆ ದೇಶಗಳು ಮುಗಿಸಿ ಹಾಕಿಬಿಟ್ಟಿವೆ.. ಇನ್ನು ಉಳಿಕೆ, ಪಳಿಕೆ, ತಂಗಳು ಅಂತ ಚೂರುಪಾರು ಸಿಕ್ಕಿದ್ರು 'ಆನೆ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆ' ಅನ್ನೊ ಹಾಗೆ ಯಾವ ಮೂಲೆಗೆ ಸಾರ್..'

' ಅಲ್ಲಿಗೆ ಮೇಕ್ ಇನ್ ಇಂಡಿಯಾ ಸ್ಲೋಗನ್ನೆ ಫ್ಲಾಪು ಅಂತಿಯಾ?'

'ಪೂರ್ತಿ ಹಂಗನ್ನೋಕಾಗಲ್ಲ ಸಾರ್.. ಅದಕ್ಕೆ ನೋಡಿ ಹೆಸರಲ್ಲೆ ಸ್ವಲ್ಪ ಸ್ಮಾರ್ಟಾಗಿ ಇಟ್ಟಿದಾರೆ ನಮ್ಮೋರು..' ಎಂದ ಗುಬ್ಬಣ್ಣನ ಮಾತು ನನಗರ್ಥವಾಗಲಿಲ್ಲ. ಅಲ್ಲೆಂತ 'ಸ್ಮಾರ್ಟ್ನೆಸ್' ಎಂದು ತಲೆ ಕೆರೆದುಕೊಳ್ಳುವಾಗಲೆ ಮತ್ತೆ ಗುಬ್ಬಣ್ಣನೆ ' ನೋಡಿ ಸಾರ್ ವರ್ಡಿಂಗ್.... 'ಮೇಡ್' ಅನ್ನೋದು ಪಾಸ್ಟೆನ್ಸ್, ಭೂತಕಾಲ ಅಲ್ವಾ ಸಾರ್? 'ಮೇಕ್' ಅನ್ನೋದು ವರ್ತಮಾನ ಮತ್ತು ಭವಿತಕ್ಕೆ ಹೊಂದೊ ಅಂತದ್ದು..'

' ಅಂದರೆ ಹಿಂದೆ ಹಳೆದೆಲ್ಲಾ ಅಲ್ಲಿ ಮಾಡಿದ್ರಿ , ಇನ್ನು ಹೊಸದ್ನೆಲ್ಲಾ ಇಲ್ಲಿ ಮಾಡಿ ' ಅಂತಾನಾ?' ಅವನ ಮಾತಿನಿಂಗಿತ ಅರಿಯಲೆತ್ನಿಸುತ್ತ ನಾನು ಗೊಂದಲದಲ್ಲೆ ಕೇಳಿದೆ.

'ಅಷ್ಟು ಮಾತ್ರ ಅಲ್ಲಾ ಸಾರ್.. ಬರಿ ಅವರಿವರಿಗೆ ಮಾತ್ರ ಅಲ್ಲಾ .. ಇದು ಚೈನಾದವರಿಗೂ ಇನ್ವಿಟೇಶನ್ನು..!'

'ಅಂದ್ರೆ.. ? ನನಗರ್ಥವಾಗಲಿಲ್ಲ.. ಅವರಿಗ್ಯಾಕಪ್ಪ ಇನ್ವಿಟೇಶನ್ನು ? ಅವರು ನಮ್ಮ ಕಾಂಫಿಟೇಶನ್ ಅಲ್ವಾ? '

' ಅಲ್ಲೆ ಇರೋದು ಸಾರ್ ಗಮ್ಮತ್ತು.. ಅವರೀಗಾಗ್ಲೆ ವರ್ಷಾಂತರದಿಂದ ಮಾಡ್ತಾ, ಮಾಡ್ತಾ ಅಲ್ಲೂ ಎಲ್ಲಾ ರೇಟು ದುಬಾರಿಯಾಗಿ ಹೋಗಿದೆ ಸಾರ್.. ಹೇಗು ಹೆಚ್ಚು ಕಡಿಮೆ ಎಲ್ಲಾ ಪ್ರೊಡಕ್ಷನ್ನು ಚೈನಾದಲ್ಲಿ ತಾನೆ ಇರೋದು? ಅದರಲ್ಲೊಂದರ್ಧ ತೆಗೆದು 'ಮೇಕಿನ್ ಇಂಡಿಯಾ' ಬ್ಯಾನರಡಿಯಲ್ಲಿ ಇಂಡಿಯಾಗೆ ಶಿಪ್ಟ್ ಮಾಡಿಬಿಟ್ರೆ ? ಅವರ ದುಬಾರಿ ವೆಚ್ಚಕ್ಕೆ ಲಗಾಮು ಹಾಕಿದಂಗೆ ಆಗುತ್ತೆ, ನಮ್ಮ ಮ್ಯಾನುಫ್ಯಾಕ್ಚರಿಂಗ್ ಫಾಸ್ಟಾಗಿ ಬೇಳಿಯೋಕೆ ದಾರಿಯಾಗುತ್ತೆ.. ಅವರ ಬೇಸು ಪ್ರೊಟೆಕ್ಟಾಗಿಬಿಡೋದ್ರಿಂದ ಕಾಂಪಿಟೇಟರ್ ಬದಲು ಕಾಂಪ್ಲಿಮೆಂಟರ್ಸ್ ಆಗಿಬಿಡಲ್ವ ಸಾರ್?'

ನನಗು ಜ್ಞಾನೋದಯವಾಯ್ತು - ಅರೆರೆ! ಹೌದಲ್ಲ? ಆಗ ನಮ್ಮ ಚೀಪ್ ಲೇಬರ್ ಬಳಸಿ ಮತ್ತೆ ಅಗ್ಗದ ಸರಕು ತಯಾರಿಸಬಹುದು. ಅಲ್ಲದೆ ನಮ್ಮಲ್ಲೇನು ಒನ್ ಚೈಲ್ಡ್ ಪಾಲಿಸಿ ಅಂತೆಲ್ಲಾ ಇರದ ಕಾರಣ ಅದರ ಕೊರತೆಯೇನೂ ಬರೋದಿಲ್ಲ.. ಚೈನಾನೆ ದೊಡ್ಡ ಕಸ್ಟಮರು ಆಗಿಬಿಟ್ರೆ ಕಾನ್ಪ್ಲಿಕ್ಟ್ ಆಫ್ ಇಂಟ್ರೆಸ್ಟ್ ಇರೋದಿಲ್ಲ..

' ಆದರೆ ಅದೆಲ್ಲಾ ಆಗೊ ಹೋಗೊ ಮಾತೆ ಗುಬ್ಬಣ್ಣಾ? ಈಗಾಗ್ಲೆ ಗಡಿ ಪ್ರಾಬ್ಲಮ್ಮು ಅದೂ ಇದೂಂತ ಸಾಕಷ್ಟು ತರಲೆಗಳಿವೆ ಇಬ್ಬರ ಮಧ್ಯೆ .. ಅದೆಲ್ಲಾ ಕರಗೊದುಂಟೆ? ವ್ಯವಹಾರ ನಡೆಯೊದುಂಟೆ ?'

' ಯಾಕಾಗಲ್ಲ ಸಾರ್? ಈಗಾಗ್ಲೆ ಅವರೆಲ್ಲ ಬಂದು ಹೋಗ್ಲಿಲ್ವ , ಇನ್ವೆಸ್ಟೂ ಮಾಡ್ತಾ ಇಲ್ವ ? ಹಾಗೆ ನಮ್ಮವರು ಅಲ್ಲಿಗೆ ಹೋಗಿ ನೋಡ್ತಾ ಇಲ್ವಾ? ಎರಡೂ ಕಡೆ ವ್ಯಾಪಾರ, ವ್ಯವಹಾರ ಇಂಪ್ರೂ ಆಗೋದ್ರೆ ಗಡಿ, ಯುದ್ಧ ಎಲ್ಲ ಹಿಂದಕ್ಕೆ ಹೋಗಿಬಿಡುತ್ತೆ ಸಾರ್.. ಅವರಿಗು ಬೇಕಾಗಿರೋದು ದುಡ್ಡು, ಬಿಜಿನೆಸ್ಸು.. ನಮಗೆ ಡೆವಲಪ್ಮೆಂಟೂ..'

'ಅಂತೂ ಹಿಂದೂ-ಚೀಣೀ ಭಾಯಿ ಭಾಯಿ ಆದ್ರೆ, ಎಲ್ಲಾದಕ್ಕೂ ಒಂದು ದಾರಿ ಆಗುತ್ತೆ ಅಂತಿಯಾ?'

'ಅಷ್ಟೆ ಅಲ್ಲಾ ಸಾರ್.. ಆಗ ಅವರಿಗಿಂತ ಚೆನ್ನಾಗಿ ನಾವೆ ಲೀನ್ ಪ್ರೊಡಕ್ಷನ್ ಮಾಡಿ ಇಡೀ ಪ್ರಪಂಚಕ್ಕೆ ಮಾದರೀ ಆಗಬಹುದಲ್ಲವಾ?'

ಬಾಲಿವುಡ್ಡಿನಲ್ಲಿ ಈಗಾಗಲೆ ಇರುವ 'ಲೀನ್' ತಾರಾಮಣಿಗಳ ಸಂಖ್ಯೆ ನೋಡಿದರೆ ಅದೇನು ದೂರದ ಕನಸಲ್ಲ ಅನಿಸಿತು... ಅದೂ ಅಲ್ಲದೆ ಗುಬ್ಬಣ್ಣನ ಐಡಿಯಾ ವಿಶ್ವಮಾನವ ತತ್ವಕ್ಕೆ ಇನ್ನು ಹೆಚ್ಚು ಹತ್ತಿರಕ್ಕೆ ಒಯ್ಯುವ ಐಡಿಯಾ ಅನಿಸಿತು. ಅಲ್ಲದೆ ಈ ಎರಡು ದೇಶಗಳು ಕೈ ಜೋಡಿಸಿದರೆ, ಮಿಕ್ಕೆಲ್ಲವು ಅದರ ಮುಂದೆ ಕೈ ಕಟ್ಟಿ ನಿಲ್ಲಬೇಕಾದ ಪರಿಸ್ಥಿತಿಯುಂಟಾದರೂ ಅತಿಶಯವೇನಿಲ್ಲ....

ಅಷ್ಟರಲ್ಲಿ ಕೆಳಗಿನಿಂದ ನನ್ನ ಶ್ರೀಮತಿಯ ದನಿ ಕೇಳಿಸಿತು, ' ಏನ್ರೀ ಅದು ಗಂಟೆಗಟ್ಟಲೆ ಪೋನಿನಲ್ಲಿ ನಿಮ್ಮ ಪುರಾಣ ? ಕೆಳಗೆ ಮೂರು ಸಾರಿ ಕಾಫಿ ಬಿಸಿ ಮಾಡಿಟ್ಟಾಯಿತು, ಬಂದು ಕುಡಿಬಾರ್ದೆ?'

ಆಗ ನನ್ನ ಗಮನವೆಲ್ಲ 'ಮೇಡಿನ್ ಚೈನಾ ಟೀಯಿಂದ, ಮೇಕಿನ್ ಇಂಡಿಯ ಕಾಫಿಯತ್ತ' ಹರಿದು ನಾಲಿಗೆ ತುಡಿಯತೊಡಗಿತು, ಕಾಫಿಯ ರುಚಿಗೆ ಹಾತೊರೆಯುತ್ತ. ಅದೆ ಹೊತ್ತಿಗೆ ಸರಿಯಾಗಿ ಗುಬ್ಬಣ್ಣ ಹೇಳುತ್ತಿದ್ಸ, ' ಸಾರ್ .. ಬೇರೆ ಏನೂ ಮಾಡಬೇಕಿಲ್ಲ ಸಾರ್.. ಈಗಿರುವ ಸ್ಲೋಗನ್ನನ್ನೆ - ''ಮೇಡ್ ಇನ್ ಚೈನಾ' ಟು 'ಮೇಕ್ ಇನ್ ಇಂಡಿಯಾ' - ರೀ ಡಿಸ್ಕವರ್ ಗೈಂಟ್ ಏಷ್ಯ!' ಅಂತ ರೀ ಡೆಸಿಗ್ನೇಟ್ ಮಾಡಿಬಿಟ್ರೆ ಆಯ್ತು ಸಾರ್.. ಮಿಕ್ಕಿದ್ದೆಲ್ಲಾ ತಾನಾಗೆ ಆಗುತ್ತೆ..'

' ಗುಬ್ಬಣ್ಣಾ ಇಲ್ಲಿ ಲೋಕಲ್ ಕಾಲ್ಸ್ ಫ್ರೀ ಅಂತ ಗೊತ್ತು.. ಆದರೆ ಕೆಳಗೆ ನನ್ನ ಹಂಡ್ರೆಡ್ ಕೇಜಿ ತಾಜಮಹಲ್ಲು, ಪ್ಯೂರ್ ಮೇಡಿನ್ ಇಂಡಿಯಾ ಬಿಸಿ ಕಾಫಿ ಇಡ್ಕೊಂಡು ಅರ್ಧ ಗಂಟೆಯಿಂದ ಕಾಯ್ತಾ ಇದಾಳೆ.. ಈಗೇನಾದ್ರೂ ಹೋಗ್ಲಿಲ್ಲಾಂದ್ರೆ ನನ್ನ ಮೇಕನ್ನೆ ಬದಲಾಯಿಸಿಬಿಡ್ತಾಳೆ -ವಂಶಾವಳಿ ಪೂರ್ತಾ ಜಾಲಾಡಿಸ್ತಾ.. ಮತ್ತೆ ಸಿಕ್ಕಾಗ ಮಾತಾಡೋಣ ಈ ವಿಷಯಾನ' ಎಂದೆ ಸಂವಾದವನ್ನು ಮುಗಿಸುವ ಸೂಚನೆ ನೀಡುತ್ತಾ..

' ಪ್ಯಾಶನೇಟ್ ಆಗಿ ಮೇಡ್ ಇನ್ ಇಂಡಿಯಾನೆ ಕಟ್ಟಿಕೊಂಡಿದ್ದೀರಾ..ಮೇಡಿನ್ ಇಂಡಿಯಾ ಕಾಫಿ, ತಿಂಡಿ ಎಲ್ಲಾ ಸಿಗುತ್ತೆ.. ನಮ್ಮ ಮನೆ ಪಾಡು ನೋಡಿ ಸಾರ್.. ಮೇಡಿನ್ ಇಂಡಿಯಾನೆ ಕಟ್ಟಿಕೊಂಡಿದ್ರೂ ನಾನೆ ಎಲ್ಲಾ ಮಾಡಿಕೊಡಬೇಕು....' ಎಂದ ಅಳುವ ದನಿಯಲ್ಲಿ.

ಇನ್ನು ಅವನ ಸಂಸಾರದ ಗೋಳಾಟ ಶುರುವಾದರೆ ಇನ್ನೆರಡು ಗಂಟೆ ಪೋನಿಡುವುದಿಲ್ಲ ಎಂದರಿವಾಗಿ, 'ಗುಬ್ಬಣ್ಣ ಮತ್ತೆ ಸಂಜೆ ಮಾತಾಡೋಣ.. ಈಗ ಹೋಗ್ದೆ ಇದ್ರೆ ನನ್ನೆ ಬಲಿ ಹಾಕ್ಬಿಡ್ತಾಳೆ ನಮ್ಮನೆ ಗ್ರೇಟ್ ವಾಲು.. ಬೇಜಾರು ಮಾಡ್ಕೋಬೇಡಾ, ಬೈ ಬೈ' ಎಂದವನೆ ಕೈಲಿದ್ದ 'ಮೇಡಿನ್ ಚೈನಾ' ಪೋನನ್ನು ಕಟ್ ಮಾಡಿ ಕೆಳಗೆ ನಡೆದೆ - ಗಮಗಮಿಸೊ 'ಮೇಡಿನ್ ಇಂಡಿಯಾ' ಕಾಫಿಯತ್ತ..

 

Comments

Submitted by nageshamysore Thu, 08/20/2015 - 03:38

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ... ಒಂದೊಂದು ಸಾರಿ ಹರಟೇನು ನಿಜ ಆಗ್ಬಿಡೊ ಛಾನ್ಸ್ ಇರುತ್ತೆ.. ಯಾವುದಕ್ಕೂ ಬ್ಯಾಂಕಲ್ಲಿ ಒಂದಷ್ಟು ಹೊಸ ಸ್ಕೀಮುಗಳನ್ನು ರೆಡಿ ಮಾಡಿಟ್ಕೊಳ್ಳಿ - ಮೇಕಿನ್ ಇಂಡಿಯಾ ಮಾಡ್ತೀವಿ ಸಾಲಕೊಡಿ ಅಂತ ಚೈನಾದಿಂದ ಯಾವ್ದಾದ್ರು ಹೊಸ ಕಂಪನಿ ಬಂದ್ರೆ ಉಪಯೋಗಕ್ಕೆ ಬರುತ್ತೆ :-)

Submitted by nageshamysore Fri, 08/21/2015 - 18:03

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ಗುಟ್ಟೆಲ್ಲಿ ಬಂತು ಬಿಡಿ ಈ ಮಾಹಿತಿ ಕ್ರಾಂತಿ ಜಗದಲ್ಲಿ. ಅವರವರ ಶಕ್ತಿಗನುಸಾರ ಪರವಾಗಿಯಾದರು ವಾದಿಸಬಹುದು, ವಿರೋಧವಾಗಿಯಾದರು ವಾದಿಸಬಹುದು; ಎರಡಕ್ಕು ಪೂರಕವಾಗುವಂತೆ ಮಾಹಿತಿಯನ್ನು ಒದಗಿಸಬಹುದು. ಎಲ್ಲಾ ಮಾತಿದ್ದವರ ಜಗ, ಮಾರ್ಕೆಟಿಂಗಿದ್ದರೆ ಎಲ್ಲಾವೂ ಸರಾಗ :-)

ಬಯಲಿಗೆ ಬಿದ್ದ ಮೇಲೆಲ್ಲಿ ಬಯಲು
ಬೆತ್ತಲೆ ಸತ್ಯವೊ ಮಿಥ್ಯವೊ ಕವಲು
ಅವರವರ ಭಾವಕವರವರ ಭಕುತಿಗೆ
ತಕ್ಕಂತೆ ಸಲಿಗೆ ತೇಪೆ ಹಾಕಿ ಹೊಲಿಗೆ ! ||

Submitted by nageshamysore Thu, 09/03/2015 - 18:05

In reply to by VEDA ATHAVALE

ವೇದ ಮೇಡಂ ನಮಸ್ಕಾರ. ಪ್ರವಾಸಿಯಾಗಿ ಹೋಗಿ ಚೈನಾದಿಂದೇನಾದರು ಐಟಂ ಕೊಂಡು ತಂದರೆ, ಆ ಮಾರ್ಕೆಟ್'ಇಂಗಿ'ನ ಪ್ರಭಾವ ಚೆನ್ನಾಗಿ ಅರ್ಥವಾಗುತ್ತದೆ.. ಬಾಕ್ಸು, ಪ್ಯಾಕೆಟ್ ಪೂರಾ ಸೂಪರು ಒರಿಜಿನಲ್ಲು, ಒಳಗಿನ ಮಾಲು ಮಾತ್ರ 'ಬಾಳಿಕೆ ಬಂದಷ್ಟೆ ಭಾಗ್ಯ' ಎನ್ನುವ ಸನ್ನಿವೇಶ. ಯಾಕೆಂದರೆ, ಒರಿಜಿನಲ್'ಕಾಪಿ' ಮಾಡುವುದರಲ್ಲಿ ನುರಿತ ಕೈ ಇವರದು ಅನ್ನುತ್ತಾರೆ ! :-)