ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)

ಕಾಲಾಯ ತಸ್ಮೈ ನಮಃ ( ನಲವತ್ತಿಂದ ಐವತ್ತಕ್ಕೆ..)

ಲಲಿತ ಪ್ರಬಂಧ : (ಸಿಂಗಪುರ ಕನ್ನಡ ಸಂಘದ 'ಸಿಂಗಾರ 2015' ದ್ವೈವಾರ್ಷಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು.)

ಮೊನ್ನೆ ಮೊನ್ನೆ ತಾನೆ ಸ್ನೇಹಿತ ಹನುಮಾಚಾರಿ ನೆನಪಿಸಲೆತ್ನಿಸುತ್ತಿದ್ದ ಇನ್ನೆರಡೆ ತಿಂಗಳಿಗೆ ಬರುವ ಹುಟ್ಟಹಬ್ಬದ ಕುರಿತು. ಈ ಬಾರಿಯಾದರೂ ಸ್ವಲ್ಪ 'ಜೋರಾಗಿ' ಆಚರಿಸಿ ಪಾರ್ಟಿ ಕೊಡಿಸಲಿ ಎಂಬುದು ಅವನಾಸೆ. ನನಗೊ ಹುಟ್ಟಿದಾಗಿನಿಂದ ಇಲ್ಲಿಯತನಕ ಹುಟ್ಟಿದ ಹಬ್ಬ ಆಚರಿಸಿಕೊಂಡ ನೆನಪೆ ಇಲ್ಲ ಅನ್ನುವುದು ಬೇರೆ ಮಾತು ಬಿಡಿ - ಪ್ರಾಯಶಃ ನನಗೆ ಗೊತ್ತಾಗದ ವಯಸಿನಲ್ಲಿ ಹೆತ್ತವರು ಮಾಡಿಕೊಂಡ 'ನಾಮಕರಣದ' ಆಚರಣೆಯನ್ನು ಹೊರತುಪಡಿಸಿದರೆ! ನಾವು ಬೆಳೆದ ವಾತಾವರಣ ಎಷ್ಟು ಸೊಗಡಿನದಾಗಿತ್ತು ಎಂದರೆ, ಹುಟ್ಟಿದ ದಿನವೆನ್ನುವುದೆ ಯಾರಿಗು ನೆನಪಿನಲ್ಲಿರುತ್ತಿರಲಿಲ್ಲ. ಹೈಸ್ಕೂಲಿನ ಮಟ್ಟಕ್ಕೆ ಬಂದು 'ಹ್ಯಾಪಿ ಬರ್ತಡೆ ಟು ಯೂ' ಎಂದು ಇಂಗ್ಲೀಷಿನಲ್ಲಿ ಹೇಳಿ ಎಲ್ಲರ ಮುಂದೆ 'ಗ್ರೇಟ್' ಅನಿಸಿಕೊಳ್ಳಬಹುದು ಎಂದು ಅರಿವಾಗುವತನಕ ಅದರ ಹೆಚ್ಚುಗಾರಿಕೆಯ ಕಡೆ ಗಮನವೆ ಹರಿದಿರಲಿಲ್ಲ ಎನ್ನಬೇಕು... ಹಾಗೆ ಗ್ರೀಟು ಮಾಡುತ್ತಲೆ ಹುಡುಗಿಯರಿಗೊಂದು 'ಗ್ರೀಟಿಂಗ್ ಕಾರ್ಡ್' ಕೊಡಬಹುದಲ್ಲವ? ಎನ್ನುವ ಜ್ಞಾನೋದಯವಾಗುವ ವಯಸ್ಸಲ್ಲಿ ಈ ಹುಟ್ಟುಹಬ್ಬದ ತಿಳುವಳಿಕೆಯೂ ಸ್ವಲ್ಪ ಹೆಚ್ಚಾಗಿದ್ದು ನಿಜವೆ ಆದರು, ಅದು ಹುಟ್ಟುಹಬ್ಬದ ಸ್ವಯಂ ಆಚರಣೆಯ ಮಟ್ಟಕ್ಕಾಗಲಿ ಅಥವಾ ಇತರರಿಗೆ ಗ್ರೀಟಿಂಗಿಗೆ ಕಾಸು ಖರ್ಚು ಮಾಡಿ 'ಹ್ಯಾಪಿ ಬರ್ತಡೆ' ಹೇಳುವಂತಹ ಧಾರಾಳತನದ ಮಟ್ಟಕ್ಕಾಗಲಿ ಬೆಳೆಯಲಿಲ್ಲ. ಆದರೆ ಆ ರೀತಿ ಗ್ರೀಟಿಂಗ್ ಕಾರ್ಡ್ ಕೊಡುವುದನ್ನೆ ಜೀವನದ ಧನ್ಯತೆಯ ಪರಮಗುರಿ ಎಂದುಕೊಂಡಿದ್ದ ಗೆಳೆಯರು ಸುತ್ತಮುತ್ತ ಬೇಕಾದಷ್ಟಿದ್ದರು. ಬರಿ ಹುಟ್ಟುಹಬ್ಬಕ್ಕೇನು? ಹೊಸವರ್ಷ, ಸಂಕ್ರಾಂತಿ, ದೀಪಾವಳಿ ಎಂದೆಲ್ಲ ನೆಪ ಹುಡುಕಿ ಗ್ರೀಟಿಂಗ್ ಖರೀದಿಸಲು ಅವರಲ್ಲಿ ಸಾಕಾಗುವಷ್ಟು ದುಡ್ಡಿರುತ್ತಿದ್ದರು, ಅದರಲ್ಲಿ ಏನು ಬರೆಯಬೇಕೆಂದು ಮಾತ್ರ ಗೊತ್ತಾಗದೆ ತಿಣುಕಾಡುತ್ತಿದ್ದರು. ಈ ಹನುಮಾಚಾರಿಯೂ ಆ ಗುಂಪಿನಲ್ಲೊಬ್ಬನಾಗಿದ್ದು, ನನಗೆ ಇದ್ದಕ್ಕಿದ್ದಂತೆ ಪರಮಾಪ್ತ ಗೆಳೆಯನಾಗಲಿಕ್ಕೆ ಇದು ಒಂದು ಮುಖ್ಯ ಕಾರಣವಾಗಿತ್ತು. ಗ್ರೀಟಿಂಗ್ ಸೀಸನ್ ಬರುತ್ತಿದ್ದಂತೆಯೆ ಎಲ್ಲಿದ್ದರೂ ಸರಿ ದೊಡ್ಡದೊಂದು ಕಂತೆ ಹಿಡಿದು ಬಂದುಬಿಡುತ್ತಿದ್ದ 'ಗುರೂ, ಏನಾದರೂ ಬರೆದುಕೊಡು..ತುಂಬಾ ಅರ್ಜೆಂಟು' ಎಂದು ದುಂಬಾಲು ಬೀಳುತ್ತ. ಅವನ ಅರ್ಜೆಂಟು ಯಾವ ತರದ್ದೆಂದು ಗೊತ್ತಿದ್ದರು ನನ್ನ ಕಲಾ ಪ್ರದರ್ಶನಕ್ಕೆ ಸಿಗುತ್ತಿದ್ದ ಅವಕಾಶಗಳೆಲ್ಲ ಅಂತದ್ದೆ ಆಗಿದ್ದ ಕಾರಣ, ನಾನೂ ಏನೊ ಒಂದು ಕವನವನ್ನೊ, ಕೋಟೇಷನ್ನೊ ಗೀಚಿ ಕಳಿಸುವುದು ನಡೆದೆ ಇತ್ತು ಅನ್ನಿ.

ಹನುಮಾಚಾರಿ 'ಹುಟ್ಟುಹಬ್ಬದ ಪಾರ್ಟಿ' ಎಂದಾಗ ಇವೆಲ್ಲ ಹಳೆಯ ಸರಕೆಲ್ಲ ಮತ್ತೆ ನೆನಪಾಗಿತ್ತು - 'ಎಷ್ಟು ಬೆಳೆದುಬಿಟ್ಟಿದ್ದಾನೆ ಹನುಮಾಚಾರಿ' ಎಂಬುದನ್ನು ಎತ್ತಿ ತೋರಿಸುವ ಹಾಗೆ. ನಲವತ್ತೈದರ ಗಡಿ ದಾಟಿದ ಮೇಲೆ ಬೆಳೆಯಬೇಕಾದ್ದೆ ಬಿಡಿ, ಇನ್ನು ಬೆಳೆಯದಿದ್ದರೆ ಬೆಳೆಯುವುದಾದರೂ ಯಾವಾಗ? ಅಂದಹಾಗೆ, ನಾನು ಬೆಳೆದಿದ್ದಾನೆ ಎಂದು ಹೇಳಿದ್ದು ಈಗ 'ಗ್ರೀಟಿಂಗಿನಲ್ಲಿ ಏನಾದರೂ ಬರೆದುಕೊಡು' ಎಂದು ದುಂಬಾಲು ಬೀಳದಷ್ಟು ಬೆಳೆದಿದ್ದಾನೆ ಎನ್ನುವರ್ಥದಲ್ಲಿ... ಆದರು ನಾನು ಹುಟ್ಟು ಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂಬುದರ ಬಗ್ಗೆ ಅವನಿಗೆ ಭಯಂಕರ ಕೋಪವಂತೂ ಇದೆ. ಯಾಕೆಂದರೆ ಅವನ ಪ್ರೆಂಡ್ ಸರ್ಕಲ್ಲಿನಲ್ಲಿ ಹುಟ್ಟು ಹಬ್ಬದ ಆಚರಣೆಯೆಂದರೆ 'ಸಕತ್ ಗುಂಡು ಪಾರ್ಟಿ' ಎಂದೆ ಅರ್ಥ..! ಹುಟ್ಟುಹಬ್ಬದ ದಿನ 'ವಿಷ್' ಮಾಡಿಸಿಕೊಂಡ ತಪ್ಪಿಗೆ ಇಡೀ ಗುಂಪನ್ನು ಹೊರಗಿನ ರೆಸ್ಟೋರೆಂಟಿಗೊ, ಬಾರಿಗೆ ಕರೆದುಕೊಂಡು ಹೋಗಿ ಕಂಠಪೂರ್ತಿ ತಿನಿಸಿ, ಕುಡಿಸಿ ಸಾವಿರಗಟ್ಟಲೆಯ ಬಿಲ್ಲನ್ನು ಭರಿಸಬೇಕು. ನಾನು ಆ ಚಕ್ರವ್ಯೂಹಕ್ಕೆ ಸಿಕ್ಕಿಕೊಳ್ಳುತ್ತಿಲ್ಲವಲ್ಲ ಎಂಬ ದೊಡ್ಡ ಸಂಕಟ ಅವನಿಗೆ. 'ಕನಿಷ್ಠ ಅವನೊಬ್ಬನನ್ನಾದರೂ ಕರೆದುಕೊಂಡು ಹೋಗಿ ಗುಂಡು ಹಾಕಿಸಬಹುದಲ್ಲ?' ಎಂಬ ಪರಮ ಖೇದವಿದೆ ಅವನಿಗೆ. ನಾನು ಕುಡಿತವನ್ನು ಮುಟ್ಟುವುದಿರಲಿ, ಮೂಸಿಯೂ ನೋಡುವುದಿಲ್ಲವೆಂದು ಗೊತ್ತಿದ್ದರು 'ಅದಕ್ಕೇನಂತೆ, ನೀವು ಕೊಡಿಸಿ, ನಾನು ಕುಡಿಯುತ್ತೇನೆ..ಒಬ್ಬರಾದರೂ ಎಂಜಾಯ್ ಮಾಡಬಹುದಲ್ಲಾ' ಎನ್ನುತ್ತಾನೆ. ಆದರೆ ಅವನ ಮನದಾಳದಲ್ಲಿರುವುದು 'ಹೀಗಾದರೂ ಸ್ವಲ್ಪ ಪರ್ಸು ಬಿಚ್ಚಲಿ ಇಂತಹ ಶೋಕಿ ಐಟಮ್ಮುಗಳ ಮೇಲೆ' ಅಂದಷ್ಟೆ.. 'ಸರಿ ಅದೆಷ್ಟಾಗುವುದೊ ಹೇಳಿಬಿಡು, ದುಡ್ಡು ಕೊಡುತ್ತೇನೆ, ಹೋಗಿ ನೀನೊಬ್ಬನೆ ಕುಡಿದುಕೊ' ಎನ್ನುತ್ತೇನೆ ನಾನು. ಇದುವರೆವಿಗು ನಾವು ಒಂದು ಪಾರ್ಟಿಗೂ ಹೋಗಿಲ್ಲವೆನ್ನುವುದು ಎಷ್ಟು ಸತ್ಯವೊ, ಅವನೂ ಒಂದು ಬಾರಿಯೂ ನನ್ನ 'ದುಡ್ಡು ಕೊಡುವ ಆಫರನ್ನು' ಒಪ್ಪಿಕೊಂಡಿಲ್ಲವೆನ್ನುವುದು ಅಷ್ಟೆ ಸತ್ಯ..!

ಆದರೆ ಈ ಬಾರಿ ಹನುಮಾಚಾರಿ ಹುಟ್ಟುಹಬ್ಬವನ್ನು ನೆನಪಿಸಿದಾಗ ಮಾತ್ರ ಯಾಕೊ ಸ್ವಲ್ಪ'ಚುಳ್' ಅಂದ ಹಾಗಾಯ್ತು. ಅವನೇನೊ ರೂಢಿಗತವಾಗಿ, ಅಭ್ಯಾಸದಂತೆ ನೆನಪಿಸಿದ್ದನೆ ಹೊರತು ಬಲವಂತದಿಂದ ಪಾರ್ಟಿ ಮಾಡಿಸಿಕೊಳ್ಳುವ ಉತ್ಸಾಹ, ಹುಮ್ಮಸ್ಸೆಲ್ಲ ಅರ್ಧ ಖಾಲಿಯಾಗಿಹೋಗಿತ್ತು - ಅದರಲ್ಲೂ ಇತ್ತಿಚೆಗೆ ಡಯಾಬಿಟೀಸ್ ಅದೂ ಇದೂ ಎಂದು ಕೆಲವು 'ಟಿಪಿಕಲ್' ಕಾಯಿಲೆಗಳ ಶುಭಾರಂಭವಾದ ಮೇಲೆ. ನನಗು ಸ್ವಲ್ಪ ಕಸಿವಿಸಿಯಾದದ್ದು ಪಾರ್ಟಿ ಕೊಡಿಸಲಾಗದ ಕಾರಣಕ್ಕಿಂತ ಹೆಚ್ಚು, 'ಅಯ್ಯಯ್ಯೊ ...ನಲವತ್ತರ ಗಡಿಯನ್ನು ದಾಟಿ ಐವತ್ತರತ್ತ ಹೋಗಿ ಬಿಡುತ್ತಿದೆಯಲ್ಲ ಜೀವನದ ಬಂಡಿ ?' ಎಂಬ ಭೀತಿಯೊ, ಕಳವಳವೊ ಅಥವಾ ಹೇಳಿಕೊಳ್ಳಲಾಗದ ಇನ್ನಾವುದೊ ಅನುಭೂತಿಯ ಪ್ರೇರಣೆಯಿಂದ ಉದ್ಭವಿಸಿದ್ದು. ನಲವತ್ತರ ಮೆಟ್ಟಿಲು ದಾಟುತ್ತಿದ್ದಂತೆ ಎಲ್ಲೊ ಸಣ್ಣ ಸ್ತರದಲ್ಲಿ ಈ ಅನಿಸಿಕೆ ಆರಂಭವಾಗುತ್ತದಾದರು ಅದು ನಿಜಕ್ಕು ತನ್ನ ಗುರುತ್ವವನ್ನು ಹೆಚ್ಚಿಸಿಕೊಂಡ ಮಹತ್ವದ ಸಂಗತಿಯಾಗುವುದು ನಲವತ್ತೈದರ ಆಸುಪಾಸಿನಲೆಲ್ಲೊ ಎಂದೆ ಹೇಳಬೇಕು. ಅದರಲ್ಲೂ ಐವತ್ತರ ಗಡಿಯ ಹತ್ತಿರ ಹತ್ತಿರ ಮುಟ್ಟಿಬಿಡುತ್ತಿದ್ದರಂತೂ ಹೇಳಿಕೊಳ್ಳಲಾಗದ ಅಸಾಧಾರಣ ಕಳವಳವೆ ಮನೆ ಮಾಡಿಕೊಂಡುಬಿಡುತ್ತದೆ. ಆಯಸ್ಸಿನ ಅರ್ಧ ಗಡಿ ದಾಟಿ ಆ ಬದಿಗೆ ಕಾಲಿಕ್ಕುತ್ತಿದ್ದೇವಲ್ಲ ಎನ್ನುವ ಭಾವನೆಯೆ ಏನೇನೊ ಕಸಿವಿಸಿ, ಆತಂಕಗಳ ಹೊರೆಯಾಗಿ ಕಾಡಲು ಆರಂಭಿಸುವ ಸಂಕ್ರಮಣದ ಹೊತ್ತು ಅದು. ಆದರೆ ನಿಜಕ್ಕೂ ಅದು ಅಷ್ಟೊಂದು ಗಲಿಬಿಲಿಗೊಳ್ಳುವ , ಗಾಬರಿಪಡುವ ವಯಸ್ಸೆ ಎಂದು ಪ್ರಶ್ನಿಸಿಕೊಳ್ಳಲು ಹೊರಟರೆ ಸಿಗುವ ಉತ್ತರವೂ ಅಷ್ಟೆ ತಳಮಳ , ಸಂಶಯ, ಗೊಂದಲಗಳ ಗೂಡಾಗಿ ಕಾಡುವ ಸಂಕ್ರಮಣದ ಸಂಧಿ ಕಾಲವದು ಎನ್ನುವುದರಲ್ಲಿ ಅನುಮಾನವಿಲ್ಲ. ಹೀಗಾಗಿ, ನಲವತ್ತರ ಮೆಟ್ಟಿಲು ಹತ್ತುವ ಮೊದಲೆ ತಲೆಯೆಲ್ಲ ಬೋಡಾಗಿ 'ಬೊಕ್ಕ ತಲೆ'ಯಾಗಿ ಹೋದಾಗ ಗಾಬರಿಯಿಂದಲೆ ಓಡಿಬಂದಿದ್ದ ಹನುಮಾಚಾರಿಯನ್ನು ಛೇಡಿಸಿ, ರೇಗಿಸಿದ್ದರೂ ಒಳಗೊಳಗೆ 'ಏನಪ್ಪ ಇದು ? ನನಗೂ ಏನಾದರೂ ಅವನಂತೆಯೆ ಆಗಲು ಶುರುವಾಯಿತೆ, ಏನು ಕಥೆ ? ಆಗಲೆ ಕೂದಲಿಲ್ಲದ ವಯಸಾದ ಮುದುಕನಂತೆ ಕಾಣಿಸಿಬಿಡುತ್ತೇನೆಯೆ?' ಎಂಬ ಆತಂಕದಲ್ಲಿ ಓಡಿ ಹೋಗಿ ಗುಟ್ಟಾಗಿ ಕನ್ನಡಿ ನೋಡಿಕೊಂಡಿದ್ದು ಉಂಟು..!

ಹನುಮಾಚಾರಿ ಹಾಗೆ ಅಳುಮೊಗ ಹೊತ್ತುಕೊಂಡು ಓಡಿಬಂದಾಗ ಅವನೇನೂ ಇನ್ನು ಪೂರ್ತಿ ಬೊಕ್ಕತಲೆಯವನಾಗಿರಲಿಲ್ಲವೆನ್ನಿ. ಮಧ್ಯದ ಬಯಲು ಮತ್ತು ಮುಂದಲೆಯ ಕಡೆಯೆಲ್ಲ ಪಾಲಿಷ್ ಹೊಡೆದಂತೆ ನುಣ್ಣಗೆ ಮಿರುಗುತ್ತಿದ್ದರು ತಲೆಯ ಎರಡು ಬದಿಗಳಲ್ಲಿ ಮತ್ತು ಹಿಂದಲೆಯಲ್ಲಿ ಇನ್ನು ಸಾಕಷ್ಟು ಮಿಕ್ಕಿತ್ತು. ಅದನ್ನು ನೋಡುತ್ತಲೆ, ' ನೀನೇನೆ ಹೇಳು ಆಚಾರಿ, ನಿಜ ಹೇಳಬೇಕಾದರೆ ನೀನು ನಿನ್ನ ಮಿಕ್ಕಿರುವ ಕೂದಲನ್ನು ಬೋಳಿಸಿ ಪೂರ್ತಿ 'ಬೊಕ್ಕ'ವಾಗಿಸಿಕೊಂಡರೆ ವಾಸಿ..' ಎಂದಿದ್ದೆ. ಅವನು ಅಳು ಮೊಗದಲ್ಲೆ, 'ಯಾಕೆ ಸಾರ್ ನೀವು ತಲೆ ತಿನ್ನುತ್ತೀರಾ ? ಮೊದಲೆ ಅವಳು ತಲೆ ತಿಂದು ತಿಂದೆ ಈ ಗತಿ ತಂದಿಟ್ಟಿದ್ದಾಳೆ, ಈಗ ನೀವು ಬೇರೆ ಸೇರಿಕೊಂಡು ಕಾಲು ಎಳೆಯುತ್ತಿರಲ್ಲಾ..?' ಎಂದಿದ್ದ. ನಾನು ಅವನಿಗಿಂತ ಎರಡು ಮೂರು ವರ್ಷಕ್ಕೆ ದೊಡ್ಡವನು ಅನ್ನುವುದಕ್ಕಿಂತ ಗ್ರೀಟಿಂಗಿನ ದಿನಗಳಲ್ಲಿ ಅಂಟಿಸಿಕೊಂಡಿದ್ದ ಆ ' ಸಾರ್..' ಎನ್ನುವ ಪಟ್ಟ , ಒಂದೆ ಕಡೆ ಕೆಲಸಕ್ಕೆ ಸೇರಿದ ಮೇಲೆ 'ಹಿರಿಯ ಆಫೀಸರ' ಎಂಬ ಮರ್ಯಾದೆಯ ಜತೆ ಸೇರಿ ಶಾಶ್ವತವಾಗಿಹೋಗಿತ್ತು. ಅದೇ ರೀತಿ ಕಾಲೇಜು ದಿನಗಳಲ್ಲಿ ಪ್ರೀತಿಯಿಂದ ಕರೆಯುತ್ತಿದ್ದ ' ಆಚಾರಿ' ನಾಮಧೇಯವೂ ಹನುಮಾಚಾರಿಗೆ ಪ್ರಿಯವಾದ, ಆತ್ಮೀಯತೆಯ ಸಂಕೇತವಾಗಿ ಉಳಿದುಕೊಂಡುಬಿಟ್ಟಿತ್ತು. ಇಬ್ಬರಿಗೂ ಅದು ಅಭ್ಯಾಸವಾಗಿ ಅದೊಂದು 'ಫಾರ್ಮ್ಯಾಲಿಟಿ'ಯಾಗಿ ಬದಲಾಗಿ ಹೋಗಿತ್ತೆ ವಿನಃ ಅದರ ಬಗ್ಗೆ ಇಬ್ಬರಿಗೂ ಸೀರಿಯಸ್ ನೆಸ್ ಇರಲಿಲ್ಲ... ' ಹಾಗಲ್ಲಾ ಆಚಾರಿ, ಈಚೆಗೊಂದು ಲೇಖನ ಓದುತ್ತಿದ್ದೆ, ಬಾಲ್ಡ್ ಹೆಡೆಡ್ ವ್ಯಕ್ತಿಗಳ ಕುರಿತು ಬರೆದಿದ್ದು.. ಅಲ್ಲೊಂದು ಕಡೆ ಬರೆದಿತ್ತು - 'ಗಾಡ್ ಕ್ರೀಯೇಟೆಡ್ ಸೋ ಫಿವ್ ಪರ್ಫೆಕ್ಟ್ ಹೆಡ್ಸ್, ದಿ ರೆಸ್ಟ್ ಹೀ ಕವರ್ಡ್ ವಿದ್ ಹೇರ..(ದೇವರು ಕೇವಲ ಎಷ್ಟು ಪರಿಪಕ್ವ ತಲೆಗಳನ್ನು ಸೃಷ್ಟಿಸಿದನೆಂದರೆ, ಮಿಕ್ಕ ತಲೆಗಳ ಹುಳುಕು ಮುಚ್ಚಲೆಂದೆ ಅವನ್ನು ಕೂದಲಡಿ ಮರೆಯಾಗಿಸಿಬಿಟ್ಟ ) ' ಅಂತಿತ್ತು.. ಅದು ನೆನಪಾಗಿ ಹಾಗೆಂದೆ ಅಷ್ಟೆ..' ಎಂದೆ. ಅದೊಂದು ಜೋಕ್ ಎಂದು ಮಾತ್ರ ಅವನಿಗೆ ಬಿಡಿಸಿ ಹೇಳಿರಲಿಲ್ಲವಾದರು, ಮಿಕ್ಕೆಲ್ಲದ್ದಕ್ಕಿಂತ ಅವನ ತಲೆಯನ್ನು 'ಪರ್ಫೆಕ್ಟ್ ಹೆಡ್ಡಿಗೆ' ಹೋಲಿಸಿದ್ದು ಅವನಿಗೆ ಬಲು ಖುಷಿಯೆನಿಸಿ 'ಹೌದಾ..ಸಾರ್..? ಹಾಗಾದರೆ ಅದಕ್ಕೇನಂತೆ? ಮಾಡಿಸೋಣ ಬಿಡಿ ' ಎಂದು ಬೊಕ್ಕ ತಲೆಯ ಕುರಿತಾಗಿ ಬಂದಿದ್ದ ಚಿಂತೆಯ ವಿಷಯವನ್ನೆ ಮರೆತು ನಗುತ್ತ ಹೋಗಿದ್ದ...!

ಅವನಿಗೇನೊ ಹಾಸ್ಯ ಮಾಡಿ ಏಮಾರಿಸಿ ಓಡಿಸಿದ್ದರು ಮುಂದಿನ ಕೆಲವು ದಿನಗಳಲ್ಲೆ ಅದೆ ಭೀತಿ ಮತ್ತೊಂದು ರೂಪದಲ್ಲಿ ಧುತ್ತನೆ ನನ್ನೆದುರೆ ಅವತರಿಸಿಕೊಂಡಿತ್ತು ಬಿಳಿಕೂದಲ ರೂಪದಲ್ಲಿ..! ಅದುವರೆವಿಗೂ 'ಒಂದೂ ಬಿಳಿ ಕೂದಲಿಲ್ಲದ ಅಚ್ಚ ತರುಣನಂತೆ' ಎಂದೆಲ್ಲ 'ಶಾಭಾಷ್ ಗಿರಿ' ಗಿಟ್ಟಿಸಿಕೊಳ್ಳುತ್ತಿದ್ದ ನಾನು, ಇದೆಲ್ಲಿಂದ ಬಂದವಪ್ಪ ಈ ಬಿಳಿ ಜಿರಲೆಗಳು ಎಂದು ಗಾಬರಿ ಪಡುವಂತಾಗಿತ್ತು... ಮೊದಮೊದಲು ಅಲ್ಲೊಂದು ಇಲ್ಲೊಂದು ಕಂಡಾಗ, ಹೇಗೊ ಪೊದೆಯಂತಿದ್ದ ಕಪ್ಪು ಕೂದಲಿನ ಮಧ್ಯೆ ಅವಿಸಿಟ್ಟರೂ, ಅವುಗಳು ಪಾರ್ಥೇನಿಯಮ್ಮಿನಂತೆ ಹೆಚ್ಚುಹೆಚ್ಚಾಗಿ ಚಿಗಿತು ಎಲ್ಲೆಂದರಲ್ಲಿ ಒಂದೊಂದೆ ಬೆಳ್ಳಿರೇಖೆಯಂತೆ ಕಾಣಿಸಿಕೊಳ್ಳತೊಡಗಿದಾಗ ಇನ್ನು ಬೇರೆ ದಾರಿಯಿಲ್ಲವೆಂದರಿವಾಗಿ 'ಡೈಯ್' ನ ಮೊರೆ ಹೋಗಬೇಕಾಗಿ ಬಂದಿತ್ತು - ತಾರುಣ್ಯದ ಅದೇ 'ಲುಕ್ಕನ್ನು' ಉಳಿಸಿಕೊಳ್ಳಲು. ಆದರೆ ಅದೆ ನೊರೆಗೂದಲಿನ ಬಿಳಿ ಬಂಗಾರ ಮೊದಲೆ ಕುರುಚಲಂತಿದ್ದ ಗಡ್ಡ, ಮೀಸೆಗಳಲ್ಲು ನಡುನಡುವೆ ಪ್ರಕಟವಾಗಿ ತನ್ನ ಪ್ರತಾಪ ತೋರಿಸಲಾರಂಭಿಸಿದಾಗ, ಅವಕ್ಕೊಂದು ಗತಿ ಕಾಣಿಸಲೇಬೇಕೆಂದು ನಿರ್ಧರಿಸಿ, ಅವನ್ನು ಬೆಳೆಯುವ ಮುನ್ನವೆ ತರಿದು 'ಕ್ಲೀನ್ ಫೇಸ್ ಶೇವ್' ಮಾಡಿಕೊಳ್ಳುವ ಹೊಸ ಪರಿಪಾಠ ಆರಂಭಿಸಬೇಕಾಗಿ ಬಂದಿತ್ತು. ಹಾಗೆ ಬಂದ ಹೊಸದರಲ್ಲೆ ಕೆಲವು ಸಹೋದ್ಯೋಗಿಗಳು, ' ಸಾರ್ ಗಡ್ಡ ಮೀಸೆ ಇರದಿದ್ರೆ ತುಂಬಾ ಯಂಗ್ ಆಗಿ ಕಾಣುತ್ತೀರ.. ನಾರ್ತ್ ಇಂಡಿಯನ್ ತರ ಕಾಣುತ್ತೀರ..' ಎಂದೆಲ್ಲ ಕಾಮೆಂಟ್ ಕೊಟ್ಟ ಮೇಲೆ ಆ ಅವತಾರವೆ ಪರ್ಮನೆಂಟ್ ಆಗಿಹೋಗಿತ್ತು. ಈಗ ತಲೆಗೆ ಡೈ ಹಾಕುವುದು ನಿಲ್ಲಿಸಿಯಾಗಿದೆ ಎನ್ನಿ, ಅರ್ಧಕ್ಕರ್ಧ ಬೊಕ್ಕತಲೆಯಾಗಿ ಖಾಲಿಯಾದ ಮೇಲೆ... ಆದರು ಮುನ್ನೆಚ್ಚರಿಕೆಯಾಗಿ ತಲೆಗೂದಲನ್ನು ತೀರಾ ತುಂಡಾಗಿ ಕತ್ತರಿಸಿಕೊಳ್ಳುತ್ತೇನೆ, ಯಾವುದೂ ಎದ್ದು ಕಾಣದ ಹಾಗೆ. ನನ್ನ ಚೌರದ ಪಟ್ಟಾಭಿಷೇಕಕ್ಕೆ ಹೋದಾಗಲೆಲ್ಲ, ನನ್ನ ನಾಪಿತನಿಗೆ ತುಂಬ ಸುಲಭದ ಕೆಲಸ. ನಾನು 'ನಂಬರ್ ಮೂರು' ಎನ್ನುವುದಕ್ಕೂ ಕಾಯದೆ ತನ್ನ ಕೆಲಸ ಆರಂಭಿಸಿಬಿಡುತ್ತಾನೆ... ಒಂದು ನಿಮಿಷದ ಮಿಷಿನ್ ಕಟ್, ಅರ್ಧ ನಿಮಿಷದ ಕತ್ತರಿ ಸೇವೆ, ಕೊನೆಯರ್ಧ ನಿಮಿಷ ಬ್ಲೇಡಿನ ಕೆರೆತ, ಒಟ್ಟು ಎರಡು ನಿಮಿಷಕ್ಕೆ ಐವತ್ತು ರೂಪಾಯಿ ಸಂದಾಯವಾದಾಗ ಅವನಿಗೆ 'ಪ್ರತಿ ಗಿರಾಕಿಯೂ ಹೀಗೆ ಇರಬಾರದೆ' ಅನಿಸಿದ್ದರೆ ಆಶ್ಚರ್ಯವೇನೂ ಇಲ್ಲ...! ನನಗೊ ದುಡ್ಡು ಕೀಳಬೇಕೆಂದು ಕತ್ತರಿಯಾಡಿಸುವಂತೆ ನಟಿಸುತ್ತ ಹೆಚ್ಚು ಸಮಯ ವ್ಯಯಿಸದೆ ಎರಡೆ ನಿಮಿಷದಲ್ಲಿ ಮುಗಿಸಿಬಿಡುತ್ತಾನಲ್ಲ ಎಂದು ಅಭಿಮಾನ (ದುಡ್ಡು ಮಾತ್ರ ಮಾಮೂಲಿ ಚಾರ್ಜೆ ಕಿತ್ತುಕೊಂಡರು..) ! ಒಟ್ಟಾರೆ ಈ ನಲವತ್ತರ ಆಸುಪಾಸಿನ ಕಾಟ ಯಾರನ್ನು ಬಿಟ್ಟಿದ್ದಲ್ಲ ಬಿಡಿ - ಕೆಲವರಿಗೆ ಸ್ವಲ್ಪ ಮೊದಲು, ಕೆಲವರಿಗೆ ನಂತರ ಅನ್ನುವ ವ್ಯತ್ಯಾಸ ಬಿಟ್ಟರೆ.

ಈ ವಯಸಿನ ಗಡಿ ಮತ್ತದರ ಅಂಚಿನಲ್ಲಿ ಅಡ್ಡಾಡುತ್ತಿದ್ದಂತೆ ಎದುರಾಗುವ 'ಶಾಕ್' ಗಳು ಒಂದೂ ಎರಡಲ್ಲ. ಅಲ್ಲಿಯತನಕ, ಮೊನ್ನೆ ಮೊನ್ನೆಯವರೆಗೆ 'ಸಾರ್' ನ ಜತೆ ಹೆಸರಿಡಿದು ಕರೆಯುತ್ತಿದ್ದವರೆಲ್ಲ ಏಕಾಏಕಿ 'ಅಂಕಲ್' ಎಂದು ಶುರು ಹಚ್ಚಿಕೊಂಡು ಬಿಡುತ್ತಾರೆ... ಜತೆಗೆ ಆಗಾಗೆ ಅಪ್ಡೇಟ್ ಮಾಡುವ 'ಬಯೋಡೇಟ', 'ರೆಸ್ಯೂಮು'ಗಳಲ್ಲಿ 'ಅಬ್ಬಬ್ಬಾ ಇಷ್ಟೊಂದು ವಯಸಾಗಿ ಹೋಯಿತೆ? ಇನ್ನು ಮುಂದೆಯೂ ಸುಲಭದಲ್ಲಿ ಕೆಲಸ ಸಿಗುವುದೊ ಅಥವಾ ತೀರಾ ವಯಸಾಗುವ ಮೊದಲೆ ಬೇರೆ ಕಡೆ ಬದಲಾಯಿಸಿಕೊಂಡುಬಿಡುವುದು ಒಳಿತ?' ಎಂಬೆಲ್ಲ ದ್ವಂದ್ವಗಳು ಕಾಡತೊಡಗುತ್ತವೆ. ಅದರಲ್ಲೂ ಅಲ್ಲಿಯತನಕ ಕೆಲಸ ಬದಲಿಸದೆ ಒಂದೆ ಕಡೆ, ಒಂದೆ ಕಂಪನಿಯಲ್ಲಿ ದುಡಿಯುತ್ತಿದ್ದವರಿಗಂತು ಅದೊಂದು ದೊಡ್ಡ ಧರ್ಮಯುದ್ಧವೆ ಸರಿ. ಕೆಲಸ ಬದಲಿಸಿ ಅನುಭವವಿರದೆ ಇಂಟರ್ವ್ಯೂ ಅಟೆಂಡು ಮಾಡಲು ಅನುಭವವಿಲ್ಲದ ಪರಿಸ್ಥಿತಿ..! ಅಲ್ಲಿಯತನಕ ಬೇರೆಯವರಿಗೆ ಇಂಟರ್ವ್ಯೂ ಮಾಡಿ ಅಭ್ಯಾಸವಿರುತ್ತದೆಯೆ ಹೊರತು ತಾವೆ ಹೋಗಿ 'ಹಾಟ್ ಸೀಟಿನಲ್ಲಿ' ಕೂತು ಬಂದ ಅನುಭವವಿರುವುದಿಲ್ಲವಲ್ಲ? ಜತೆಗೆ ಇಷ್ಟು ವರ್ಷ ಕಳೆದ ಕಂಪನಿಯನ್ನು ಬಿಟ್ಟು ಹೋಗಲಾಗದ 'ಪತ್ನಿ' ವ್ಯಾಮೋಹ ಬೇರೆ.. ಅದೆಷ್ಟೆ ಜಗಳ, ಅಸಹನೆ, ಅತೃಪ್ತಿಗಳಿರಲಿ ಕಟ್ಟಿಕೊಂಡ ಮೇಲೆ ಸತಿ ಶಿರೋಮಣಿಯ ಜತೆ ಏಗುವುದಿಲ್ಲವೆ ? ಎನ್ನುವ ಪರಮ ತತ್ವವನ್ನು ಕೆಲಸಕ್ಕೂ ಹೊಂದಿಸಿಕೊಂಡು ಮುಂದುವರೆವ ಅಸೀಮ ನಿಷ್ಠೆ ಹಾಗು ಭಕ್ತಿ. ಆದರೂ 'ಮುಂದೆ ಏನೊ ಎಂತೊ?' ಎಂಬ ಚಿಂತೆ ಕಾಡದೆ ಬಿಡುವುದಿಲ್ಲ. 'ಹೇಗಿದ್ದರೂ ಕೆಲಸ ಬಿಟ್ಟು ಹೋಗುವುದಿಲ್ಲ, ಪ್ರಮೋಶನ್ ಕೊಡದಿದ್ದರೂ ನಡೆಯುತ್ತದೆ' ಎಂದೆ ತನ್ನನ್ನು ನಿರ್ಲಕ್ಷಿಸಿದ್ದಾರೇನೊ ಎನ್ನುವ ಅನುಮಾನ ಕಾಡುತ್ತಲೆ ಇರುತ್ತದೆ. 'ಯಾರು ಯಾರೆಲ್ಲ ಬಂದು ಬಡ್ತಿ ಪಡೆದು ಮುಂದೆ ಹೋದರೂ ನಾನು ಮಾತ್ರ ಇಲ್ಲೆ ಕೊಳೆಯುತ್ತಿರುವೆನಲ್ಲ, ಕತ್ತೆಯ ಹಾಗೆ ದುಡಿಯುತ್ತಿದ್ದರು?' ಎಂಬ ಸಿಟ್ಟು, ಆಕ್ರೋಶ ರೊಚ್ಚಿಗೆಬ್ಬಿಸಿದಾಗ ಏನಾದರೂ ಸರಿ, ಈ ಬಾರಿ ಬೇರೆ ಕಡೆ ಅಪ್ಲೈ ಮಾಡಿ ನೋಡಿಬಿಡಲೆಬೇಕು ಎಂಬ ಹುಮ್ಮಸ್ಸೆದ್ದರೂ, ಒಂದು ರೆಸ್ಯುಮ್ ಸಿದ್ದಮಾಡುವಷ್ಟರಲ್ಲಿ ಅರ್ಧ ಉತ್ಸಾಹವೆಲ್ಲ ಇಳಿದುಹೋಗಿರುತ್ತದೆ. ಎರಡು ಪೇಜೆಂದುಕೊಂಡು ಹೊರಟಿದ್ದು ಹತ್ತಾಗಿ, ಅದನ್ನು ಎರಡಕ್ಕಿಳಿಸಲಾಗದೆ ಹಾಗೂ ಹೀಗೂ ಒದ್ದಾಡಿ ಎಂಟಾಗಿಸಿದರೂ ತೃಪ್ತಿಯಾಗದೆ ಯಾರದಾದರು ರೆಸ್ಯೂಮ್ ತಂದು ಫಾರ್ಮ್ಯಾಟ್ ಕಾಪಿ ಮಾಡಿಯಾದರು ಚಿಕ್ಕದಾಗಿಸಬೇಕು ಎಂದುಕೊಂಡು ಎಲ್ಲೊ ಮೂಲೆಯಲ್ಲಿ ಸೇವಾಗಿಸಿ ಕೂತುಬಿಟ್ಟರೆ ಆ ಫೈಲನ್ನು ಮತ್ತೆ ತೆಗೆಯುವುದು ಮುಂದಿನ ಬಾರಿಯ ಪ್ರಮೋಶನ್ ಮಿಸ್ಸಾದಾಗಲೆ...

ಹಾಗೆಯೆ ಒದ್ದಾಡುತ್ತಲೆ ನೋಡು ನೋಡುತ್ತಿದ್ದಂತೆ ಐವತ್ತರ ಆಚೀಚಿನ ಗಡಿ ತಲುಪುತ್ತಿದ್ದ ಹಾಗೆಯೆ, ಇನ್ನು ಹುಡುಕಿ ಪ್ರಯೋಜನವಿಲ್ಲ ಎಂದು ಮನವರಿಕೆಯಾಗತೊಡಗುತ್ತದೆ. ಮೊದಲೆ ಸಿಗುವುದು ಕಷ್ಟ, ಸಿಕ್ಕರೂ ಈಗಿರುವ ಸಂಬಳ, ಸ್ಥಾನಮಾನದ ಆಸುಪಾಸಿನಲಷ್ಟೆ ಸಿಗುವುದು ಅಂದಮೇಲೆ ಹೊಸ ಜಾಗದಲ್ಲಿ ಹೋಗಿ ಒದ್ದಾಡುವುದೇಕೆ ? ಹೇಗೂ ಇಷ್ಟು ವರ್ಷ ಇಲ್ಲೆ ಏಗಿದ್ದಾಯ್ತು..ಇನ್ನುಳಿದ ಹತ್ತು ಹದಿನೈದು ವರ್ಷ ಇಲ್ಲೆ ಹೇಗೊ ಕಳೆದುಬಿಟ್ಟರಾಯ್ತು ಅನ್ನುವ ಸ್ಮಶಾನ ವೈರಾಗ್ಯ ಆರಂಭವಾಗುವ ಹೊತ್ತಿಗೆ, ಸ್ವಂತಕ್ಕಿಂತ ಹೆಚ್ಚಾಗಿ ವಯಸಿಗೆ ಬರುತ್ತಿರುವ ಮಕ್ಕಳು, ಅವರ ವಿದ್ಯಾಭ್ಯಾಸ, ಮದುವೆಗಳ ಚಿಂತೆ ಆರಂಭವಾಗಿರುವುದು ಒಂದು ಕಾರಣವೆನ್ನಬಹುದು. ಆದರೆ ಹಾಗೆಂದು 'ಶಸ್ತ್ರಸನ್ಯಾಸ' ತೊಟ್ಟ ಮಾತ್ರಕ್ಕೆ ಆ ಕೆಲಸಕ್ಕೆ ಸಂಬಂಧಿಸಿದ ಚಿಂತೆಯೆಲ್ಲ ಮಾಯವಾಯ್ತೆಂದು ಹೇಳಲಾಗುವುದೆ ? ಹಿತೈಷಿಗಳೊ, ಹಿತಶತ್ರುಗಳೊ ಯಾರಾದರೊಬ್ಬರೂ ಆಗಾಗ್ಗೆ ಕೆಣಕುತ್ತಲೆ ಇರುತ್ತಾರೆ - 'ಏನ್ ಸಾರ್ ..ಈ ಸಾರಿನಾದ್ರೂ ಪ್ರಮೋಶನ್ ಬಂತಾ?' ಪೆಚ್ಚಾಗಿ ಹುಸಿನಗೆಯಷ್ಟನ್ನೆ ಉತ್ತರವಾಗಿತ್ತು ಮನೆಗೆ ಬಂದರೆ ಶ್ರೀಮತಿಯದು ಅದೇ ರಾಗ - 'ಏನ್ರೀ... ವನಜನ ಗಂಡ ಕೋದಂಡರಾಮಯ್ಯನವರಿಗೆ ಈ ಬಾರಿ ಪ್ರಮೋಶನ್ ಸಿಕ್ಕಿತಂತಲ್ಲ..? ನಿಮಗೆ ಹೋಲಿಸಿದರೆ ಅವರು ಮೊನ್ನೆ ಮೊನ್ನೆ ಸೇರಿದವರಲ್ವಾ ನಿಮ್ಮ ಕಂಪೆನಿಗೆ ? ಅದು ಹೇಗ್ರಿ ಅವರಿಗೆ ಇಷ್ಟು ಬೇಗ ಬಡ್ತಿ ಸಿಕ್ಕಿಬಿಡ್ತು..?' ಎನ್ನುತ್ತಾಳೆ. ಅದೇನು ಹಂಗಿಸುತ್ತಿದ್ದಾಳೊ, ಮುಗ್ದವಾಗಿ ಪ್ರಶ್ನಿಸುತ್ತಿದ್ದಾಳೊ ಗೊತ್ತಾಗದೆ ಒದ್ದಾಡುತ್ತಿರುವಾಗಲೆ ಪಕ್ಕದಲ್ಲಿದ್ದ ಮಗ, ' ಅಪ್ಪಾ ಆಫೀಸಿನಲ್ಲಿ ನೀನು ಬಾಸಾ ಅಥವಾ ಎಂಪ್ಲಾಯೀನಾ?' ಎಂದು ಕೇಳಿ ಉರಿವ ಗಾಯಕ್ಕೆ ಉಪ್ಪೆರಚುತ್ತಾನೆ. ಇದ್ದುದರಲ್ಲಿ ಮಗಳೆ ವಾಸಿ, ' ಕಾಫಿ ಮಾಡ್ಕೊಂಡು ಬರ್ಲಾಪ್ಪ?' ಅನ್ನುತ್ತ ಮಾತು ಬದಲಿಸುತ್ತಾಳೆ. ಇವರೆಲ್ಲರ ಬಾಯಿಗೆ ಪದೆಪದೆ ಬೀಳುವುದನ್ನು ತಪ್ಪಿಸಿಕೊಳ್ಳಲು ಇನ್ನಷ್ಟು ಕಷ್ಟಪಟ್ಟು ಕೆಲಸ ಮಾಡಿ ಈ ಬಾರಿಯಾದರು ಪ್ರಮೋಶನ್ ಗಿಟ್ಟಿಸೋಣವೆಂದು ಯತ್ನಿಸುತ್ತಿದ್ದರೆ 'ಈ ಸಾರಿ ಖಂಡಿತ ಸಿಗುತ್ತದೆ' ಎಂದು ವಾಗ್ದಾನ ಮಾಡಿದ್ದ ಬಾಸೆ ಬದಲಾಗಿ ಮತ್ತೆ ಹತಾಶೆಯ ಹೊಸ ಚಕ್ರ ಗಿರಕಿ ಹೊಡೆಯತೊಡಗುತ್ತದೆ...

ಇದೆಲ್ಲಕ್ಕು ಮೀರಿದ ಹೆಚ್ಚಿನ ಗಂಡಾಂತರದ್ದು ಸ್ವಯಂ ಆತ್ಮಾಭಿಮಾನದ ಕುರಿತಾದದ್ದು.. ಇದೆಲ್ಲಾ ಏಟುಗಳು ಒಳಗೊಳಗೆ ಪೂರ್ತಿಯಾಗಿ ಕುಗ್ಗಿಸಿ 'ನಾನು ಸಾಧಿಸಿದ್ದಾದರು ಏನು?' ಎಂಬ ದೊಡ್ಡ ಭೂತಾಕಾರದ ಪ್ರಶ್ನೆಯನ್ನು ಹುಟ್ಟಿಸಿ ಅನಾಥ ಪ್ರಜ್ಞೆಯಲ್ಲಿ ತೊಳಲಾಡಿಸುವ ಬಗೆ ಅವರ್ಣನೀಯ. ಆ ಸಂಧಿಕಾಲದಲ್ಲಿ ಇರುವ ಗೊಂದಲ ಎಷ್ಟು ಕ್ಲಿಷ್ಟಕರವೆಂದರೆ ' ಏನೆಲ್ಲ ಆಯ್ತೆಂದು ಹಿಂದಕ್ಕೆ ತಿರುಗಿ ನೋಡುತ್ತ, ಗೋಳಾಡಿಕೊಂಡು ಮುಂದಿನ ಪಾಠಕ್ಕಾಗಿ ಅವಲೋಕಿಸುತ್ತ ಕೂರಬೇಕೆ? ಅಥವಾ ಹಿಂದಿನದೆಲ್ಲ ಮರೆತು ಆದದ್ದಾಯ್ತೆಂದು ಮುಂದಿನ ಭವಿತದತ್ತ ನೋಡುತ್ತ ಕೂರಬೇಕೆ?' ಎನ್ನುವ ಗೊಂದಲದಿಂದ ಹೊರಬರಲೆ ಆಗದ ಚಕ್ರವ್ಯೂಹವಾಗಿ ಕಾಡತೊಡಗಿರುತ್ತದೆ. ಹಳತನ್ನು ಬಿಟ್ಟೊಗೆಯಲಾಗದಷ್ಟು ದೂರ ಬಂದು ಆಗಿಬಿಟ್ಟಿರುವುದರಿಂದ, ಸಾರಾಸಗಟಾಗಿ ಬಿಟ್ಟುಬಿಡಲೂ ಭಯ; ಹೊಸದಾಗಿ ಹೊಸತನ್ನು ನಿರಾತಂಕವಾಗಿ ಅಪ್ಪಲೂ ಭೀತಿ - ಅದರಲ್ಲಿನೇನೇನಡಗಿದೆಯೋ? ಎಂದು. ಅಲ್ಲದೆ ಎಲ್ಲ ಹೊಸದಾಗಿ ಮೊದಲಿಂದ ಆರಂಭಿಸಿದರೆ ಇದುವರೆವಿಗೆ ಗಳಿಸಿದ ಅನುಭವ, ಪರಿಣಿತಿಯನ್ನೆಲ್ಲ ಗಾಳಿಗೆ ತೂರಿದಂತಲ್ಲವೆ ? ಎಂಬ ಗಳಿಸಾಗಿರುವ ವೃತ್ತಿಪರತೆಯ ಆಸ್ತಿಯನ್ನು ನಷ್ಟವಾಗಿಸದಿರುವ ಗೊಡವೆ ಬೇರೆ. ಒಟ್ಟಾರೆ ಏನೆ ಆದರು ಮೊತ್ತದಲ್ಲಿ ಮಾತ್ರ ಬರಿ ಗೊಂದಲ. ಇದು ಸಾಲದಕ್ಕೆ ಹೊರಗಿನ ದೇಹಕ್ಕೆ ವಯಸಾಗುತ್ತಿದ್ದರೂ ಒಳಗಿನ ಮನವಿನ್ನು 'ಯೌವ್ವನ'ದಲ್ಲೆ ಅಡ್ಡಾಡಿಕೊಂಡು ತನ್ನದೆ ಲೋಕದಲ್ಲಿ ವಿಹರಿಸಿಕೊಂಡ ಕಾರಣದಿಂದಾಗಿ ಈ ವಯಸಾಗುತಿರುವ ದೇಹದ ಅಸಹಾಯಕತೆ ತಟ್ಟನೆ ಅರಿವಾಗುವುದಿಲ್ಲ. 'ಇದೇನು ಮಹಾ?' ಎಂದು ಭರದಲ್ಲಿ ದಿನವೂ ಹತ್ತಿ ಮೇಲೇರುತ್ತಿದ್ದ ಮೆಟ್ಟಿಲುಗಳೆ, ಅರ್ಧ ಹತ್ತುತ್ತಿದ್ದಂತೆ ಏದುಸಿರು ಕೊಡಲಾರಂಭಿಸಿದಾಗಷ್ಟೆ 'ಎಲ್ಲೊ, ಏನೊ ಎಡವಟ್ಟಾಗಿರಬಹುದೆ?' ಎನ್ನುವ ಅನುಮಾನದ ಸುಳಿವು ಸಿಗುವುದು. ಅದು ಕಾಲುನೋವಾಗೊ, ಏದುಸಿರಾಗೊ, ಧಾರಾಕಾರದ ಬೆವರಾಗೊ ಹರಿಯುತಿದ್ದರೂ ನಾನಿನ್ನು ಪ್ರಾಯದ, ಯೌವ್ವನದ, ಬಿಸಿರಕ್ತದ ಎಳೆಗರು ಎನ್ನುವ ಮನದ ಮಾಯೆಯ ಮುಸುಕು ತುಸುತುಸುವಾಗಿ ಹಿಂಜರಿಯುತ್ತ, ನೇಪಥ್ಯಕ್ಕೆ ಸರಿಯುತ್ತ, ನಂಬಿಕೆಗಳ ಬಲ ಸಡಿಲವಾಗುವ ಕಾಲ. ಆದರೆ ಈ ಹೊಸ್ತಿಲಲ್ಲಿರುವ ಪ್ರತಿಶತ ಎಲ್ಲರೂ ಇದೆ ಪರಿಸ್ಥಿತಿಯಲ್ಲಿ ಸಿಕ್ಕಿ ನರಳುವರೆಂದೆ ಹೇಳಬರುವುದಿಲ್ಲ. ಇದಾವ ತೊಡಕೂ ಇರದೆ ಮಿಂಚಿನ ವೇಗದಲ್ಲಿ ಸಂಚರಿಸುತ್ತ ಮುನ್ನಡೆವ ಭಾಗ್ಯಶಾಲಿಗಳೂ ಇಲ್ಲದಿಲ್ಲ - ಆದರೆ ಅವರ ಸಂಖ್ಯೆ ಅಷ್ಟು ದೊಡ್ಡದಿರದು ಅನ್ನುವುದನ್ನು ಬಿಟ್ಟರೆ .

ನೈಜದಲ್ಲಿ ಈ ಹಂತವನ್ನು ದಾಟುವ ಎಲ್ಲರೂ ಇದೊಂದು ರೀತಿಯ 'ಮಿಡ್ ಲೈಫ್ ಕ್ರೈಸಿಸ್' ಅನ್ನು ಅನುಭವಿಸಿಯೆ ತೀರುತ್ತಾರೆನ್ನುವುದರಲ್ಲಿ ಸಂದೇಹವೆ ಇಲ್ಲ. ಆದರೆ ಪ್ರತಿಯೊಬ್ಬರು ಅನುಭವಿಸುವ ಮಟ್ಟ ಒಂದೆ ರೀತಿ ಇರುವುದಿಲ್ಲ ಎನ್ನುವುದಷ್ಟೆ ವ್ಯತ್ಯಾಸ. ಕೆಲವರಲದು ತೀವ್ರತರವಾಗಿ ಕಾಡಿದರೆ ಮತ್ತೆ ಕೆಲವರಲ್ಲಿ ಮಾಮೂಲಿನಂತೆ ಬಂದು ಸಾಗಿಹೋಗುವ ಸಾಮಾನ್ಯ ಪ್ರಕ್ರಿಯೆಯಾಗಿಬಿಡಬಹುದು. ಅದೇನೆ ಆದರೂ ಆ ಆತಂಕ, ಗೊಂದಲ, ಕಸಿವಿಸಿಗಳ ಐವತ್ತರ ಹತ್ತಿರವಾಗುತ್ತಿರುವ ಅಥವಾ ಅದರ ಹೊಸಿಲು ದಾಟುತ್ತಿರುವ ಭೀತಿಯೆ ಅದರ ಮುಂದಿನ ಪರ್ವಕ್ಕೆ ಬೇಕಾದ ಪರಿಪಕ್ವತೆಯನ್ನೊದಗಿಸುವ ಬುನಾದಿಯಾಗುತ್ತದೆಯೆಂಬುದು ಅಷ್ಟೆ ನಿಜ. ಅಲ್ಲಿಯತನಕ ಬರಿಯ ಲಾಜಿಕ್, ಸೈಂಟಿಫಿಕ್ ಎಂದು ತಾರ್ಕಿಕ ಮತ್ತು ವೈಜ್ಞಾನಿಕ ನೆಲೆಗಟ್ಟಿನತ್ತಿತ್ತಲೆ ಸುಳಿದಾಡುತ್ತಿದ್ದ ಮನ ಇದ್ದಕ್ಕಿದ್ದಂತೆ ತಾತ್ವಿಕದತ್ತ, ದೈವಿಕದತ್ತ, ಶಾಸ್ತ್ರ, ಪೂಜೆ, ಪುನಸ್ಕಾರಗಳತ್ತ ಗಮನ ಹರಿಸತೊಡಗುವುದು ಆ ಪಕ್ವತೆಯ ಪ್ರೇರಣೆಯ ಪರಿಣಾಮದಿಂದಲೆ. ಪ್ರತಿಯೊಂದು ಮನಸು ತನಗೆ ಸೂಕ್ತವಾದ ಏನೊ ಸಾಧಿಸಿ ತೋರಿಸಲು ಸಾಧ್ಯವಿರುವಂತಹ ಹಾದಿಯೊಂದನ್ನು ಹುಡುಕಿಕೊಂಡು ಮುನ್ನುಗ್ಗುವುದು ಅದೆ ಕಾರಣದಿಂದಲೆ. ಹೆಚ್ಚು ಹೆಚ್ಚು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದಾಗಲಿ, ಮರೆತೆ ಹೋದಂತಿದ್ದ ಹವ್ಯಾಸವನ್ನು ಮತ್ತೆ ರೂಢಿಸಿಕೊಳ್ಳಲೆತ್ನಿಸುತ್ತ ಬೆಳೆದು ಪ್ರಬುದ್ಧವಾಗಲೆತ್ನಿಸುವುದಾಗಲಿ, ಜವಾಬ್ದಾರಿಯ ನಿಭಾವಣಿಕೆಯ ವಿಧಾನವನ್ನೆ ಬದಲಿಸಿಕೊಳ್ಳುವ ತರದಲ್ಲಾಗಲಿ, ಒಟ್ಟಾರೆ ತಮ್ಮ ವ್ಯಕ್ತಿತ್ವದ ನಿಲುವಿಗೆ ಒಂದು ಹೊಸ ರೂಪುರೇಷೆಯನ್ನು ಕೊಡುವ ಯಾವುದೆ ಯತ್ನವಾಗಲಿ - ಎಲ್ಲವೂ ಈ ಪರಿಪಕ್ವತೆಯತ್ತ ನಡೆಸಲ್ಹವಣಿಸುವ ಮನದ ಆಯಾಚಿತ ಯತ್ನಗಳೆ ಎನ್ನಬಹುದು. ಆ ಮೂಲಕವೆ ಈ ವಯೋ ಸಂಕ್ರಮಣದ ಸಂಧಿಕಾಲವನ್ನು ದಾಟಿ ಮುನ್ನಡೆಯಲು ಬೇಕಾದ ಕಸುವನ್ನು, ಮನೋಸ್ಥೈರ್ಯವನ್ನು ಒಗ್ಗೂಡಿಸಿಕೊಡುತ್ತದೆ, ಈ ಪಕ್ವತೆಯತ್ತ ನಡೆಸುವ ಪ್ರಕ್ರಿಯೆ. ಆ ಪಕ್ವತೆಯ ಹತ್ತಿರವಾದಂತೆಲ್ಲ ಮತ್ತೆ ಮನ ಶಾಂತಿಯತ್ತ ಚಲಿಸತೊಡಗುತ್ತದೆ - ಹೊಸತಿನ ಸಮತೋಲನದಲ್ಲಿ; ಕೆಲವರು ಅಲ್ಲಿಗೆ ಬೇಗ ತಲುಪಿದರೆ ಮತ್ತೆ ಕೆಲವರು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಂಡು ಸೇರುತ್ತಾರೆನ್ನುವುದಷ್ಟೆ ವ್ಯತ್ಯಾಸ.

ಮೊನ್ನೆ ಆಫೀಸಿಗೆ ಬಂದಾಗ ಯಾಕೊ ಅಂದು ತಡವಾಗಿ ಬಂದ ಹನುಮಾಚಾರಿ ಸ್ವಲ್ಪ ಮಂಕಾದಂತೆ ಕುಳಿತಿದ್ದ. ನಾನು ಅವನ ಮುಖವನ್ನೆ ನೋಡುತ್ತ,'ಆಚಾರೀ.. ಈ ಸಾರಿ ನನ್ನ ಬರ್ತಡೆ ಸೆಲಬ್ರೇಟ್ ಮಾಡೋಣ ಅಂದ್ಕೊಂಡಿದ್ದೀನಿ ಕಣೊ , ನಿಂಜೊತೆಗೆ..' ಎಂದೆ. ಅವನೊಂದು ಅರೆಗಳಿಗೆ ನನ್ನ ಮುಖವನ್ನೆ ನೋಡುತ್ತ ಪಕಪಕನೆ ನಗತೊಡಗಿದ. ನಾನು, 'ಇಲ್ಲಾ ಆಚಾರಿ.. ಐಯಾಂ ಸೀರಿಯಸ್..ಐ ವಿಲ್ ಡ್ರಿಂಕ್ ವಿತ್ ಯೂ' ಎಂದೆ. ಅವನು ಒಂದರೆಗಳಿಗೆ ನನ್ನ ಮುಖವನ್ನು ಮತ್ತೆ ನೋಡಿದವನೆ, ' ಸರಿ.. ಸಾರ್... ಆದರೆ ಒಂದ್ ಚೇಂಜ್.. ನೋ ಡ್ರಿಂಕ್ಸ್.. ನಾನೀಗ ಕುಡಿಯೋದು ನಿಲ್ಲಿಸಿಬಿಟ್ಟಿದ್ದೇನೆ.. ಯಾವುದಾದರೂ ಒಳ್ಳೆ ಹೆಲ್ತಿ ರೆಸ್ಟೋರೆಂಟಿಗೆ ಹೋಗೋಣ, ಫ್ಯಾಮಿಲಿ ಜೊತೆಲಿ..' ಎಂದುಬಿಡುವುದೆ?

ಒಟ್ಟಾರೆ, ಎಲ್ಲಾ ಸೇರಿಸಿ 'ಕಾಲಾಯ ತಸ್ಮೈ ನಮಃ' ಅಂದುಬಿಡಬಹುದಲ್ಲವೆ?
ಧನ್ಯವಾದಗಳೊಂದಿಗೆ ,
ನಾಗೇಶ ಮೈಸೂರು
 

Comments

Submitted by santhosha shastry Sun, 09/06/2015 - 23:53

ರಾಯರೇ ಪ್ರಬಂಧ‌ ಬಹಳ‌ ಮಸ್ತಾಗಿದೆ. ಈ ಕಾಲದ‌ ತಳಮಳಗಳನ್ನು ಹಾಸ್ಯವಾಗಿ ಮುನ್ನೆಲೆಗೆ ತಂದು, ಅರೇ ಹೌದಲ್ವಾ ಅಂತ‌ ನಮ್ಮ‌ ನಮ್ಮಲ್ಲೇ ಹೇಳಿಕೊಳ್ಳುವಂತಾಯ್ತು.

Submitted by nageshamysore Mon, 09/07/2015 - 19:27

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ ಮತ್ತು ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಮಾತು ನಿಜ - ಮಿಡ್ ಲೈಫ್ ಕ್ರೈಸಿಸ್ ('ನಡುವಯಸಿನ ನಡುಕ' ಎನ್ನಬಹುದೆ?) ಎನ್ನುವುದು ಎಲ್ಲರನ್ನು ಒಂದಲ್ಲ ಒಂದು ರೀತಿ ಕಾಡಿಯೆ ತಡಕಾಡಿಸುವುದರಿಂದ ಓದಿದ ಬಹುತೇಕ ಮಂದಿಗೆ 'ಹೌದಲ್ಲ?' ಎನ್ನುವ ಭಾವನೆ ತರಿಸುವುದರಲ್ಲಿ ಅಚ್ಚರಿಯೇನು ಇಲ್ಲ - ಅದರಲ್ಲೂ ಕೆಲಸದಲ್ಲಿರುವ ಮಂದಿಗೆ. ಆದರೆ ಅದು ಪರಿವರ್ತನೆಯ ಸಂಧಿಕಾಲವಾದ ಕಾರಣ ಅದನ್ನು ನಿಭಾಯಿಸಿಕೊಳ್ಳಬೇಕೆಂಬ ಅರಿವಿದ್ದರೆ ಸಂಭಾಳಿಸುವುದು ಸುಲಭ (ಇಂಗ್ಲೀಸ್ಹಿನಲ್ಲಿ ಹೇಳುವಂತೆ - ಏಜ್ ಗ್ರೇಸ್ಪುಲಿ). ತಮ್ಮ ಅಕ್ಕರೆಯ ಪ್ರತಿಕ್ರಿಯೆಗೆ ಮತ್ತೆ ನಮನಗಳು :-)

Submitted by nageshamysore Sat, 09/12/2015 - 08:06

ನಲವತ್ತಿಂದ ಐವತ್ತಕ್ಕೆ ಬರುತ್ತಿರುವ ಎಲ್ಗರಿಗೆ ಮುಂಗಡವಾಗಿ ಹಾರ್ದಿಕ ಶುಭಾಶಯಗಳು.
-ಅರವತ್ತೈದಕ್ಕೆ ಬರುತ್ತಿರುವವನಿಂದ. (ಎಲ್ಲಾ ಅಂಕಲ್/ಆಂಟಿಯರಿಗೆ ತಾತನಿಂದ ಅನ್ನಬಹುದೇನೋ!)
-ಕವಿ ನಾಗರಾಜ

(ತಾಂತ್ರಿಕ ತೊಡಕಿನಿಂದ ಎರಡು ಬಾರಿ ಪ್ರಕಟವಾಗಿಬಿಟ್ಟಿದೆ ಈ ಬರಹ. ಕವಿ ನಾಗರಾಜರ ಈ ಪ್ರತಿಕ್ರಿಯೆ ಆ ಮತ್ತೊಂದರಲ್ಲಿ ಬಂದಿದೆ. ಎಲ್ಲವನ್ನು ಒಂದೆಡೆ ಸೇರಿಸುವ ದೃಷ್ಟಿಯಿಂದ ಈ ಬರಹದಡಿಯಲ್ಲಿ ಹಾಕುತ್ತಿದ್ದೇನೆ.)

Submitted by nageshamysore Sat, 09/12/2015 - 08:09

In reply to by nageshamysore

ಕವಿಗಳೆ ನಮಸ್ಕಾರ - ಅರವತ್ತರಿಂದ ಎಪ್ಪತ್ತರ ಯಾನದ ತುಮುಲ, ಅನುಭವಗಳನ್ನು ನೀವೂ ದಾಖಲಿಸಿ - ಮುಂದಿನ ಹಂತದ ಸಿದ್ದತೆಯೂ ಆದಂತಾಗುತ್ತದೆ - ನಲವತ್ತು/ಐವತ್ತರ ಹೊಸಿಲಿನವರಿಗೆ..:-)