ನೀ ನೆನಪಿನ ಅತ್ತರು; ಮನ ಮರೆಯದು ನಾ ಅತ್ತರೂ...

ನೀ ನೆನಪಿನ ಅತ್ತರು; ಮನ ಮರೆಯದು ನಾ ಅತ್ತರೂ...

ಅವತ್ತಿನಿಂದಲೂ ಅವರು ಹಾಗೇ ಇದ್ದರು. ಇಬ್ಬರೂ ಸಹಕರ್ಮಿ, ಸಹಮಿತ್ರರು. ಹಾಗೇ ಜೊತೆ ಸಾಗುತ್ತಿರುವ ಅವರ ಓದೂ. ಓದುವ, ಕಲಿಯುವ ಮತ್ತು ಕಾಯಕದ ಜೀವನ ಅವರದು. ಕೆಲವೊಮ್ಮೆ ತಡರಾತ್ರಿಯವರೆಗಿನ ಕೆಲಸ, ಮುಂಜಾವಿನ ಆ ತರಗತಿ. ಅಲ್ಲಿಗೆ ಇಡೀ ದಿನ ಮುಗಿದ ಹಾಗೇ..! ಆಗ ವರ್ಷಗಳ ಹಿಂದಿನ ಕಾಲೇಜು ಜೀವನ ಮತ್ತೊಮ್ಮೆ ಕಣ್ಮುಂದೆ ನಿಲ್ಲುವುದಿತ್ತು. ಜೊತೆಗೆ ಜೀವಿತದ ಪ್ರಶ್ನೆಯೂ ನೆನಪಿಸುತ್ತಿತ್ತು, ವಾಸ್ತವದ ನಾಳೆಯನ್ನೂ... ಹಾಗೇ.

ಹಾಗೇ ಕಳೆಯುತ್ತಿತ್ತು ದಿನ... ದಿನಾ. ಬಹುಶಃ ಅದವನ, ಅವಳ ಜೊತೆ ಇರುವ, ಆಫೀಸಿನಲ್ಲಿನ ಕೆಲಸದ ಕೊನಯ ದಿನ. ಮರುದಿನದಿಂದ ಅಲ್ಲೆಲ್ಲಾ ಅವನು ನೆನಪಷ್ಟೇ. ನನ್ನಲ್ಲೂ ಅಷ್ಟೇ. ಏನಾದರೂ ಅಗತ್ಯದ ವಿಷಯಕ್ಕೆ ಬಿಟ್ಟರೆ, ಮತ್ಯಾಕೂ ಅವನಿಗೆ ಕರೆಮಾಡುತ್ತಿರಲಿಲ್ಲ, ಮತ್ಯಾರೂ ಕೂಡ. ನೀರ ಮೇಲೊಂದು ಅಲೆ ಬಂದು ಹೋದ ಹಾಗೆ. ಹೋದವನನ್ನು ನೆನೆಸಿ ಪ್ರಯೋಜನವಾದರೂ ಏನುಂಟು..? ಎಲ್ಲಾ ಕಛೇರಿ, ಕಾರ್ಯಗಳಲ್ಲೂ ಇದು ಸಹಜ, ಉಂಟೇ ಉಂಟು. ದಿನ ಕಳೆದಂತೆ, ಹೊಸ ಜನರು ಸೇರಿದಂತೆ, ಅವನು ದೂರವಾಗುತ್ತಾ ಹೊದ, ನನ್ನ ಕಣ್ಣಿನಿಂದ, ನಮ್ಮ ಮನಸಿನಿಂದ.

ಮನಸಿಲ್ಲದ ಮನಸಿನಿಂದ, ಆ ದಿನ, ಆಫೀಸಿನ ಕೊನೆಯ ದಿನ ಸಂಜೆ ನಮ್ಮೆಲ್ಲರಿಗೂ ಕಣ್ತುಂಬಿ, ಕೈಯೆತ್ತಿ ವಿದಾಯ ಹೇಳಿದ್ದ. ಮನಸ್ಸು ಸ್ವಲ್ಪ ಭಾರವಾಗುವಂತೆ ಮಾಡಿದ್ದ. ಅಂದು ಅವಳೂ ಸಹ ಏನೋ ಗಿಫ಼್ಟ್ ಕೊಟ್ಟಿದ್ದಳು, ಮನಃಪೂರ್ವಕ. ಮತ್ತೆ ಅಲ್ಲಿ ತುಂಬಿದ್ದು ನಮ್ಮ ಮಾತಿನ, ಕಣ್ಣ ನೋಟದ ಮೆಲು ಮೌನ. ಮೆಲ್ಲಗೆ ಬೆಳಕು ದೂರವಾಗುತ್ತಿತ್ತು, ಅದರೊಂದಿಗೆ ನಮ್ಮೆಲ್ಲರ ಹೆಜ್ಜೆಗಳೂ ಬೇರೆ ಬೇರೆಯಾಗುತ್ತಿತ್ತು ಮತ್ತು ನೆನಪುಗಳೂ, ಒಂದೊಂದಾಗಿ... ಅವನಿಂದ. 

ಅವನಿಂದ ಮತ್ತೆಂದೂ ಕರೆಯಾಗಲೀ, ಸಂದೇಶಗಳಾಗಲೀ ಬರಲೇ ಇಲ್ಲ. ನಾವೂ ಪ್ರಯತ್ನಿಸಿರಲಿಲ್ಲ. ಆ ಧಾವಂತ, ಅದೇ ಕೆಲಸ, ಮಸುಕು ದೀಪ, ಅದೇ ಕಾಫಿ, ಗದ್ದಲ, ಒಮ್ಮೊಮ್ಮೆ ಗದರಿಕೆ, ತಪ್ಪು ಕೆಲಸಕ್ಕೆ ಬೈಗುಳ, ಕೈಕೊಡುವ ಕರೆಂಟು, ಸೀನು ತರುವ ಧೂಳು.. ಯಾರೋ ನೆನೆಸುತ್ತಿದ್ದಾರೆ ಎಂದುಕೊಂಡು ಕೆಲಸಕ್ಕೆ ಜಾರುವ ನಾವು. ಅಷ್ಟಾದರೂ ಅವನನ್ನು ಎಂದೂ ನೆನಪಿಸಿಕೊಳ್ಳುತ್ತಿರಲಿಲ್ಲ, ಅದರ ಅಗತ್ಯವೂ ಇರುತ್ತಿರಲಿಲ್ಲ.

ಇಲ್ಲ ಎಂದು ಅದೆಷ್ಟು ದಿನಗಳಾಗಿತ್ತೋ..? ಒಂದು ದಿನ ಹಾಗೇ ಎದುರು ಸಿಕ್ಕಿದ್ದ. ಕಾಫಿ ಹರಟೆಗೆ ಮಾತ್ರ ಸಮಯವಿದ್ದದ್ದು. ಮತ್ತೆಂದೂ ಅವನನ್ನು ಕಾಣುವ, ನೆನಪಿಸಿಕೊಳ್ಳುವ ಪ್ರಮೇಯ ಬರಲೇ ಇಲ್ಲ. 

ಬರಲಿಕ್ಕಿಲ್ಲ ಅಂದುಕೊಂಡಿದ್ದೆ ಅವನ 'ಬ್ಲಾಗ್ ಬರಹ’ ಓದುವವರೆಗೆ..! ಅಂದಿನ ಆ ಕಥೆಯಲ್ಲೇನೋ ಹೊಸತಿತ್ತು. ಅವನ ಬಗ್ಗೆ ಗೊತ್ತಿರುವವರಿಗೆ ಗೊತ್ತಾಗುವ ಗುರುತುಗಳಿತ್ತು. ಸತ್ಯ ಸಂಗತಿಯಿತ್ತು, ಅಲ್ಲಿ ಅವನೇ ಕಥೆಯಾದಂತಿತ್ತು. ಮತ್ತೆ ಅವನ ನೆನಪೇ ನನ್ನಲ್ಲಿ ತುಂಬಿತು, ಆ ಕಥೆ... ಅವನು... ಅವಳು.

ಅವಳು, ಅವನ ಮನದಲ್ಲಿ ತುಂಬಿರುವಳು, ಮಧುರ ಅನುಭಾವದ ಮುದವಾದ ನೆನಪು ತರುವವಳು, ಸಿಹಿಕನಸ ಜೊತೆಗೆ ನಿದಿರೆ ಮರೆಸುವವಳು.., ಇದ್ಯಾವುದೂ ಅಲ್ಲವೇ ಅಲ್ಲ. ಅವನಿಗೆ ಹೇಳಲಾಗದ, ಭಾವನೆಗಳಲ್ಲಿ ಹಿಡಿದಿಡಲಾಗದ, ಮನದಿಂದ ಮರೆಯಲೂ ಆಗದ ತರಳೆ ಅವಳಾಗಿದ್ದಳು. ಬಿರುಬಿಸಿಲ ನಡುದಿನದ ಹಿತ ನೆರಳೇ ಆಗಿದ್ದಳು, ಹುಣ್ಣಿಮೆಯ ಸಿಹಿಬೆಳಕ ಇರುಳೇ ಆಗಿದ್ದಳು... ಅವಳು. 

ಅವಳು ಎಲ್ಲರೊಂದಿಗೂ ಬೆರೆಯುವವಳು, ನಗು ಹಂಚುತ ನಗುವವಳು. ಇಬ್ಬರೂ ಆಫೀಸಿನಲ್ಲಿ ಜೊತೆಯಾಗಿಯೇ ಇರುತ್ತಿದ್ದರು. ಜೊತೆಯಲ್ಲೇ ಕೆಲಸವೂ ಸಹ, ಊಟ, ಜಗಳವೂ... ಒಮ್ಮೊಮ್ಮೆ. ದಿನವೂ ಹೊಸತನ ಎನಿಸುವ ದಿನಗಳು ಅಲ್ಲಿತ್ತು. ಬಿಸಿಲು-ಮಳೆ ಜೊತೆಯಂತೆ, ರಾತ್ರಿ-ಮಿಂಚುಹುಳದಂತೆ, ಕನಸಿನೊಳಗಿನ್ನೊಂದು ಕನಸಿನಂತೆ. ಆಫೀಸು ಬಿಡುವವರೆಗೆ, ನಮ್ಮಿಂದ ದೂರಾಗುವವರೆಗೆ. 

‘ದೂರ’ವೇ ಮನಸ್ಸನ್ನು ‘ಹತ್ತಿರ’ವಾಗಿಸುವುದಂತೆ. ಹತ್ತಿರದವರನ್ನು ಅರಿಯುವುದೂ ದೂರವಾದಮೇಲೆಯೇ. ಅದು ‘ಭಾವನೆ’ಯ ‘ದೃಷ್ಟಿ’ಯನ್ನೆ ಬದಲಿಸಿಬಿಡಬಹುದು. ಆಲೋಚನೆಯ ಆಂತರ್ಯವನ್ನು, ಸ್ನೇಹದ ಸಾಂಗತ್ಯವನ್ನೂ. ಹಾಗೆಯೇ ಇಲ್ಲಿಯೂ. ಅವತ್ತಿನಿಂದ ಮನದ ಮಾತು ಅವಳಲ್ಲಿ ಹೇಳಿ ಮನಸು ಹಗುರಮಾಡಬೇಕೆಂದು ಪಟ್ಟ ಪ್ರಯತ್ನಗಳೆಷ್ಟೋ..? ಆದರೆ ಮಾತಾಡಲು ಮಾತೇ ಬಾರದು. ಹೇಳಲೂ ಆಗದೆ, ಮನಸ್ಸಲ್ಲೇ ಮುಚ್ಚಿಡಲೂ ಆಗದೆ ನೊಂದ ದಿನಗಳೆಷ್ಟೋ..? ಕೊನೆಗೂ ಒಂದು ದಿನ, ಕಣ್ಮುಚ್ಚಿ, ಕಹಿ ಮದ್ದು ಕುಡಿದ ಹಾಗೆ, ಒಂದೇ ಉಸಿರಿನಲ್ಲಿ ಹೇಳಿದ, ಮನಸ ಹಗುರವಾಗಿಸಿದ. ಖುಷಿಯಿಂದ ಸಂಭ್ರಮಿಸಿದ.

ಸಂಭ್ರಮ ಅವನ ಪಾಲಿಗಂತೂ ಉಳಿಯಲೇ ಇಲ್ಲ. ಪ್ರತಿಯೊಬ್ಬರಿಗೂ ಅವರದೇ ಒಂದು ಪ್ರಪಂಚವಿರುವುದು. ಅದರ ಬಾನಿನ ತುಂಬ ಅವರದೇ ಕನಸು, ಹುಚ್ಚು ಕಲ್ಪನೆಯ ಮೋಡವಿರುವುದು. ನಡು ಬೇಸಿಗೆಯಲ್ಲಿ ಅನ್ಯರ ಆಶಯಕೆ ಅಲ್ಲಿ ಮಳೆ ತರಲು ಸಾಧ್ಯವೇ..? ಪರರ ಬಯಕೆಗೆ ಅಲ್ಲಿ ಮಿಂಚು ಮಿಂಚಲು ಸಾಧ್ಯವೇ..? ಅವನ ಆಸೆಯ ಗಿಡಕೆ ಅಲ್ಲಿ ಬೇರು ಬಲಿಯಲು ಸಾಧ್ಯವೇ..? ಮೊಗ್ಗು ಅರಳಲು ಸಾಧ್ಯವೇ..? ಬಣ್ಣದ ಚಿಟ್ಟೆಯ ರೆಕ್ಕೆಯನ್ನು ಮುಟ್ಟುವ ಕನಸಿಗೆ ಉಸಿರು ಇನ್ನೆಲ್ಲಿ..? ಕಮರಿ ನೆಲಸೇರುವುದಲ್ಲದೆ ಏನೂ ಉಳಿದಿರದು ಅಲ್ಲಿ..! ಬಹುಶಃ ಅವಳ ಪ್ರಪಂಚದಲ್ಲೂ ಕನಸೊಂದು ಇದ್ದಿರಬಹುದು. ಅವನ ಕಲ್ಪನೆಗೆ ನಿಲುಕದ ನಿಜ ಬೇರೊಂದಿರಬಹುದು ಅಥವಾ ಕನಸ ತಾರದ ಕ್ರೂರ ಕಹಿ ಇರುಳೂ ಇರಬಹುದು. ಮತ್ತೆಂದೂ ಅವಳು ಅವನಲ್ಲಿ ಮೌನ ಮುರಿದದ್ದೇ ಇಲ್ಲ. ಅವನ ಕನಸ ಹಕ್ಕಿ ರೆಕ್ಕೆ ಬಿಚ್ಚಿದ್ದೂ ಇಲ್ಲ. ಹೊಸ ಆಸೆ ಹೊತ್ತು, ಉತ್ತರವ ಕಾಯುತ ಕುಳಿತ ಅವನ ಪ್ರಶ್ನೆಯ ಕಣ್ಣೆವೆಗಳು ಮತ್ತೆಂದೂ ತೆರೆಯಲೇ ಇಲ್ಲ. ಅವನು ಮತ್ತೊಮ್ಮೆ ಸೋತಿದ್ದ, ಅವನದೇ ಪ್ರಪಂಚದಲ್ಲಿ. ಹಾಗೇ, ಮನದ ಮಾತಿಗೆ ಸೋತು ಆ ಮನಸ ನೋಯಿಸಿದೆನೇ..? ನವಿರು ಭಾವನೆಯ ಭಾವ ಮುರಿದೆನೇ..? ಕಾಣದ ಕನಸ ಕೈಯಾರೆ ಕೊಂದೆನೆ..? ಎಂಬೆಲ್ಲಾ ವೇದನೆಯೂ ಮನೆ ಮಾಡಿತು ಅವನ ಮನದಲ್ಲಿ.

ಮನದಲ್ಲಿ ಅವನ ಕಥೆಯದ್ದೇ ಬೆಚ್ಚನೆಯಿತ್ತು ಆಫೀಸು ಹುಡುಗ ಕಾಫಿ ತಂದಿಡುವವರೆಗೆ. ಮನ ತುಂಬಿ ಒಂದು ನಿಟ್ಟುಸಿರು. ಒಂದು ಗುಟುಕು ಕಾಫಿ ಕುಡಿದಾಗ ಏನೋ ಉಲ್ಲಾಸ. ಮನದಿಂದ ದೂರವಿದ್ದವನು ಮತ್ತೆ ಹತ್ತಿರವಾಗಿದ್ದ, ದೂರವಾಗದಿರುವಷ್ಟು. ಕಿಟಕಿಯ ಬಳಿ ನಿಂತು, ಹೊರಗೆ ಮಾಡಿನ ಮೂಲೆಯಲ್ಲಿ ಜೊತೆಯಿದ್ದ ಎರಡು ಗುಬ್ಬಚ್ಚಿಗಳನ್ನು ನೋಡುತ್ತಾ ಅವನ ಕಥೆಯ ಜೊತೆಯಾದೆ... ಆ ಕೊನೆಯ ಸಾಲನ್ನು ಮತ್ತೊಮ್ಮೆ ನೆನಪಿಸಿದೆ, ನನ್ನಷ್ಟಕ್ಕೇ, ಮೆಲುದನಿಯಲ್ಲಿ "ನೀ ನೆನಪಿನ ಅತ್ತರು; ಮನ ಮರೆಯದು ನಾ ಅತ್ತರೂ..." 

ಅವತ್ತಿನಿಂದಲೂ ಅವಳು ಹಾಗೇ ಇದ್ದಳು... ಇವತ್ತೂ...

Rating
No votes yet

Comments