ನೌಕೆಗೊಬ್ಬ ನಾವಿಕನಾಗಿ..

Submitted by nageshamysore on Sat, 09/19/2015 - 05:19

(Picture courtesy: Ms.serene . This poem was inspired by the above picture)

ಹೀಗೇ ವೀ ಚಾಟೊಂದರಲ್ಲಿ ಪರಿಚಿತರೊಬ್ಬರು ಹಾಕಿದ್ದ ಚಿತ್ರವೊಂದು ಆಕರ್ಷಕವಿದೆಯೆನಿಸಿ, ತುಸು ಆಳವಾಗಿ ನೋಡಿದೆ. ಪೈಂಟಿಂಗಿನ ಪೋಟೊ ತೆಗೆದಂತಿದ್ದರು ಚಿತ್ರ ತುಂಬಾ ಮುದ ನೀಡುವಂತಿದೆಯೆನಿಸಿತು. ಸಾಗರದಲ್ಲೊ, ನದಿಯಲ್ಲೊ ಒಬ್ಬಂಟಿಯಾಗಿ ಕೊಡೆಯ ಅಡಿ ನೌಕೆಯಲಿ ಕೂತ ವನಿತೆಯೊಬ್ಬಳು, ಎಲ್ಲಿಗೊ ಹೊರಟ ಪಯಣ. ಬರಿ ಅರ್ಧ ನಾವೆಯ ಚಿತ್ರದಿಂದಾಗಿ ಮಿಕ್ಕರ್ಧ ಭಾಗ ಊಹೆಯ ಪಾಲು. ಯಾರಾದರು ಜತೆಗಿರುವರೆ ಅಥವಾ ಬರಿಯ ನಾವಿಕ ಮಾತ್ರ ಹುಟ್ಟು ಹಾಕಿ ನಡೆಸುತ್ತಿರುವನೆ ಎನ್ನುವುದು ಅವರವರ ಊಹೆಗೆ ಬಿಟ್ಟದ್ದು..

ಅದೇನೆ ಇದ್ದರು ಆ ನೌಕೆಯ ವಿನ್ಯಾಸವಾಗಲಿ, ತೊಟ್ಟುಡುಗೆಯ ಖದರಾಗಲಿ, ನೀಳ ಕೇಶರಾಶಿಯಾಗಲಿ, ಕೊಡೆಯ ಜೋತಾಡುವ ಮಣಿ ಲಾಲಿತ್ಯವಾಗಲಿ, ಮುಖದಲ್ಲಡಗಿದ ಭಾವ ಸಂಪದವಾಗಲಿ - ಎಲ್ಲವು ಏನೊ ಕಥೆ ಹೇಳುವಂತೆ ಕಂಡಾಗ ಅದಕ್ಕೊಂದು ಕವಿತೆಯ ರೂಪ ಕೊಡುವುದೆ ಸರಿಯೆನಿಸಿತು. ಆಗ ಮೂಡಿದ ಭಾವಗಳಿಗಿತ್ತ ಪದ ರೂಪ ಈ ಕವಿತೆ.

ಚಿತ್ರವನ್ನು ಬಳಸಿಕೊಳ್ಳಲು ಅನುಮತಿಯಿತ್ತ ಅದರೊಡತಿ ಸೆರೀನಳಿಗೆ ಈ ಮೂಲಕ ಮತ್ತೊಮ್ಮೆ ಕೃತಜ್ಞತೆಗಳು...:-)

ಅಗಾಧ ಸಾಗರ ಸುತ್ತ
ಸುಪ್ತ ಗಾಢ ಏಕಾಂತ
ನಿಗೂಢ ಮೌನ ಅನಂತ
ನೌಕೆಯದೊಂದೆ ತೇಲುತ್ತ.. ||

ಬಿದಿರ ಮೆಳೆ ಮರದದಿರೊ
ಕುದುರಿಸಿ ಕಟ್ಟಿದ ನಾರೊ
ಸರಳ ತೇಲುವುದ್ದದ ತೆಪ್ಪ
ಪ್ರಕ್ಷುಬ್ದಕು ಶಾಂತ ಸ್ವರೂಪ.. ||

ಅದರೊಂದು ಚೂಪು ತುದಿಗೆ
ಸುಂದರ ಕೊಡೆಯೊಂದರಡಿಗೆ
ಕುಳಿತಿಹಳಾರೊ ಆ ಹುಡುಗಿ
ನೀಳ ಕೂದಲಲಿ ತಲೆಯಡಗಿ.. ||

ಬಣ್ಣದ ಚಾಮರ ವಿನ್ಯಾಸ ಭಿನ್ನ
ಜೋತಾಡಿವೆ ಮಣಿ ಸಂಪನ್ನ
ಮರದ ಕಡ್ಡಿಗಳ ಸುತ್ತಿದ ಬೆರಗು
ಹಾರೊ ಹಕ್ಕಿಗು ಮೂಡಿಸಿ ಬೆರಗು.. ||

ಕೂತು ಕಣ್ಮುಚ್ಚಿದ ಪ್ರಶಾಂತ
ವದನದೊಳ ಚಿಂತನೆ ಅಮೂರ್ತ
ಪ್ರಪುಲ್ಲತೆ ಹರಿದಿದೆ ತಂತಾನೆ
ಒಂಟಿ ಹೊರಟಳೆಲ್ಲಿಗೆ ಜಾಣೆ ? ||

ಯಾರೊ ನಡೆಸಿರಬೇಕು ನಾವೆ
ಸದ್ದ ಮಾಡದೆ ಕದಲಿಸದೆ ತಾವೆ
ಸಮಾಧಿಯಲಿಹ ಯೋಗಿನಿ ಜತೆ
ಏನಿರಬಹುದವಳ ಚಿಂತನೆ ಕಥೆ ? ||

ಕಾಣದವನಾರೊ ನಡೆಸಿರಬೇಕಲ್ಲಿ
ನಾನಾಗಬಾರದೆ ನಾವಿಕನಲ್ಲಿ ?
ಎಂದುದಿಸಿದ ಆಸೆಯ ಪಲುಕು
ಆ ತುದಿಗೆ ಕೂತಂತೆ ಮೆಲುಕು.. ||

ಕೂತೊಟ್ಟಿಗೆ ಹೋಗುವ ದೂರ
ಯಾರು ಬಲ್ಲರು ಉದ್ದಗಲ ಸಾಗರ ?
ಹೋದಷ್ಟು ದೂರ ಆಸರೆ ಅಪ್ಪುಗೆ
ಕೊಡಲಾರೆಯ ಜತೆ ಬರಲೊಪ್ಪಿಗೆ ? ||

Thanks and best regards,
Nagesha MN