ಹೋಗಿದ್ದು ಒಂದೇ ಸಬ್ಜೆಕ್ಟು

Submitted by Manushree Jois on Wed, 09/23/2015 - 23:04

ಬಾನಿನ ಅಂಚಿನ ತುದಿಯಲೊಂದು ಮೊಡವೆಯೆದ್ದಿತ್ತು. ಇಷ್ಟು ಹೊತ್ತು ಕೆರೆತುಂಬಾ ಬಿಟ್ಟ ಬೆಳಕನ್ನು ಎಳೆದುಕೊಂಡು ಸೂರ್ಯ ಪಶ್ಚಿಮಕ್ಕೆ ಹೊರಟಿದ್ದ. ತೀರ ಕತ್ತಲಾಗುವ ಮುನ್ನ ಮನೆಯ ಮುಟ್ಟಲೇ ಬೇಕು. ಅಮ್ಮ ಹೇಳಿದ ಮಾತು ಇನ್ನು ಕಿವಿಯಲ್ಲಿ ಮರೆಯಲಾಗದ ಕೆಟ್ಟ ರಾಗದಂತೆ ಕೇಳಿಸುತ್ತಲೇ ಇದೆ. “ನಿನ್ನ ರಿಸಲ್ಟ್ ಏನಾಯಿತೇ? ಗಂಡು ಬೀರಿ ತರ ಆ ಕೆರೆ ಹತ್ತಿರವೇ ಇರಬೇಡ ಹೇಳು ಯಾವಾಗ ಬರತ್ತೆ? .. ” ಒಂದೂ ಮಾತು ಕೇಳಿಸಿಕೊಳ್ಳದೆ ಸುಮ್ಮನೆ ಒಂದು ದೋಸೆ ಹೆಚ್ಚು ತಿಂದುಕೊಂಡು ಬಂದಿದ್ದೆ . ಆದರೂ ಇನ್ನು ಕಿವಿಯಲ್ಲೆ ಇದೆ ಅದು.

ನನಗೆ ಒಮ್ಮೊಮ್ಮೆ ಅನಿಸುತ್ತದೆ. ನಾನೇಕೆ ಹೀಗೆ ಎಂದು? ಪಕ್ಕದ ಮನೆ ಸರಸ ಮನೆ ಬಿಟ್ಟು ಹೊರ ಬರುವುದೇ ಇಲ್ಲ.ನನಗೋ.. ಮನೆಯಲ್ಲಿ ಇರಲಾಗುವುದೇ ಇಲ್ಲ. ಇಂಥ ದೊಡ್ಡ ಕೆರೆ ಬಾ ಎಂದು ಕೈ ಬೀಸಿ ಕರೆದಂತಾಗುತ್ತದೆ. ಶಾಲೆಯಲ್ಲೂ ಈ ಸಲ SSLC ಎಂದು ಮೇಷ್ಟ್ರು ಐದರ ತನಕ ಕೂರಿಸಿ ಕೊರೆದರೂ ಕೇಳಿಸಿಕೊಳ್ಳುತ್ತಾಳೆ. ನನಗಂತೂ ಮೇಷ್ಟ್ರ ಹೆಂಡತಿ ಲೀಲಾ ಆಂಟಿ ತವರಿಂದ ಯಾವಾಗ ಬರುವರೋ ಅನಿಸುತ್ತಿರುತ್ತದೆ. ಅಮ್ಮನಿಗೂ ಸರಸ ಅಂದರೆ ಇಷ್ಟ ಯಾರಿಗೂ ಒಂದು ಮಾತು ಜೋರಾಗಿ ಹೇಳಿದವಳಲ್ಲ. ಮಂಗಗಳಂತಾ ಮನುಷ್ಯರು ತುಂಬಿರುವ ಊರಿನಲ್ಲಿ ಹೇಗೆ ಸುಮ್ಮನಿದ್ದಾಳೋ..ನನಗಂತು ಕೂಗಿದಷ್ಟು ಸಾಕಾಗುವುದಿಲ್ಲ. ಹೀಗೆ ಯೋಚಿಸುತ್ತಾ ಕೆರೆಯ ದಾರಿಯಲ್ಲಿ ಬಿರುಸಾಗಿ ನಡೆದು ಮನೆಯ ಹತ್ತಿರ ಬಂದಾಗಿತ್ತು.

ಇದೇನಿದು? ಸರಸನ ಚಪ್ಪಲಿ !! ಊರಿಗೆ ಹೋದವಳು ಇಷ್ಟು ಬೇಗ ಬಂದಳಾ? ಮುಗೀತು ಕಥೆ ಇನ್ನು ರಿಸಲ್ಟನ್ನು ಬಾಯಿ ಬಿಡಲೇ ಬೇಕು ಅಂದುಕೊಂಡೆ. ಕಾಲಿಡುವಾಗಲೇ ಅಮ್ಮ “ಸರಸಂದು ಡಿಸ್ಟಿಂಕ್ಷನ್ ಬಂದಿದೆ. ನಿಂದೇನಾಯ್ತೇ” ಎಂದಿದ್ದಳು. “ಗಣಿತ ಹೋಗಿದೆ” ಎಂದಷ್ಟೇ ಹೇಳಿ ಬಿಸಿ ಬಿಸಿ ಬೊಂಡಕ್ಕೆ ಕೈ ಹಾಕಿದೆ. ಸರಸ ಇದನ್ನು ಕೇಳಿಸಿಕೊಂಡವಳೇ ಬರ್ತಿನಿ ಆಂಟಿ ಎಂದು ಹೊರಟಳು. ಅವಳಿಗೆ ಹೆದರಿಕೆ ಬಿಟ್ಟು ಬರ್ತೀನಿ ಎಂದು ಸದ್ಯಕ್ಕೆ ತಪ್ಪಿಸಿಕೊಂಡೆ.

“ಹೇಗೆ ಗಣಿತ ಹೋಯ್ತು? ನಂಗೂ ಅದರಲ್ಲೇ ಕಮ್ಮಿ ಕಣೆ.. ” ಎಂದು ಖುಷಿಯನ್ನು ಅಡಗಿಸಿಕೊಂಡು ಕೇಳಿದಳು. ಇವಳ ಬುದ್ಧಿ ಗೊತ್ತಿದರಿಂದ ಕೊಂಕಿಗೆ ಗಮನ ಕೊಡದೆ ಹೇಳಿದೆ. “ಹು ಕಣೆ ಉರು ಹೊಡೆದ ಸಮಾಜ ಹೋಗುತ್ತೆ ಅನ್ಕೊಂಡಿದ್ದೆ ಅದು ಹೇಗೆ ಲೆಕ್ಕ ಸರಿಮಾಡಿದ ಗಣಿತ ಹೋಯ್ತು ಅಂತ”. “ಮಾಡಿಸಿದ ಯಾವ ಲೆಕ್ಕನು ಬಂದಿರಲಿಲ್ಲ ಅದಕ್ಕೆ ಅನ್ಸುತ್ತೆ ” ಅಂದಳು. “ಎಲ್ಲ ಮಾಡಿಸಿದ್ದೆ ತರನೆ ಇತ್ತು ಕಣೆ ” ಎಂದೆ. ಅಷ್ಟೊತ್ತಿಗೆ ಭೂತದ ಮರ ದಾಟಿತ್ತು ಇನ್ನು ಅವಳಿಗೆ ಮನೆಗೆ ಹೋಗಲು ಭಯ ಇರಲಿಲ್ಲ. ನಾನು ಅಲ್ಲೇ ನಿಂತೆ, “ನಿಂಗೆ ಭೂತದ ಮರದ ಹತ್ರ ಹೆದರಿಕೆ ಆಗಲ್ವಾ” ಎಂದಳು. “ಇದೇ ಪ್ರಶ್ನೆನ ಐದನೇ ಕ್ಲಾಸಿಂದ ಕೇಳ್ತಾನೆ ಇದ್ಯಾ? ನಿಂಗೆ ಗೊತ್ತಿಲ್ವಾ.. ನನಗೆ ಭಯ ಇಲ್ಲ ಅಂತ, ಸರಿ ನೀನು ಹೋಗು. ನಾನು ಅಮ್ಮನ ಹತ್ತಿರ ಪೂಜೆ ಮಾಡಿಸ್ಕೋಬೇಕು” ಎಂದು ಯುದ್ಧಕ್ಕೆ ಸನ್ನದ್ದಳಾಗುತ್ತಾ ಮನೆ ದಾರಿ ಹಿಡಿದೆ.

ಮತ್ತೆ ಮನೆಗೆ ಬಂದಾಗ ಅಮ್ಮ ಅತ್ತ ಗುರುತು ಸ್ಪಷ್ಟವಾಗಿತ್ತು. ಆದರೂ ಗೊತ್ತಿಲ್ಲದವಳಂತೆ ಸುಮ್ಮನಾದೆ ಆದರೆ ಅವಳು ಓಡಿ ಬಂದು ಎರಡು ಬಿಟ್ಟಳು. “ಓದ್ಕೊ ಅಂದರೆ ಏನೇನೊ ಪುಸ್ತಕ ಹಿಡಿದು ಕೂರುತ್ತಿದ್ದೆ ಈಗ ನೋಡು .. ಏನಾಯಿತು” ಅಂತ ಬಾಯಿ ತುಂಬಾ ಬಯ್ದು ಹೊಡೆದಳು. “ತಡಿ ನಿನಗೊಂದು ಬರೆ ಹಾಕಿದರೆ ಸರಿ ಆಗುತ್ತೆ ” ಎಂದು ಸಟ್ಟುಗ ಹಿಡಿದು ಮಾರಿಯಂತಾದಳು. ಇಷ್ಟು ದಿನಕ್ಕೆ ಒಮ್ಮೆಯು ಬರೆ ಹಾಕಿದ ನೆನಪಿಲ್ಲ ನನಗೆ , ಹೇಳುತ್ತಾಳೆ ಅಷ್ಟೇ. ನಾನು ಸುಮ್ಮನೆ ಅತ್ತಿತ್ತ ಓಡಾಡುತ್ತಿದ್ದೆ. ಒಳಗಿಂದ ಪಾತ್ರೆಯೆಲ್ಲ ಉರುಳುತ್ತಿತ್ತು. ಇನ್ನು ಮುಂದೇನು ಎನ್ನುವ ಭೂತ ಇಬ್ಬರನ್ನು ಬೇರೆ ಬೇರೆ ರೀತಿಯಲ್ಲಿ ಆಡಿಸುತ್ತಿತ್ತು. ಅಮ್ಮಂಗೆ ಒಲೆ ಹಚ್ಚಲು ಬೆಂಕಿ ಪೊಟ್ಟಣ ಖಾಲಿಯಾಗಿತ್ತು. ಮತ್ತೆ ಬೆತ್ತದ ದೊಣ್ಣೆ ಹಿಡಿದು ಬಂದಳು. ಆದರೆ ಅಷ್ಟರಲ್ಲಿ ನಾನು ಹೊರಗೆ ಎಂದು ಜಗಲಿಯ ಬದಿ ಹೋಗಿ ಕೂತಿದ್ದೆ. ಇನ್ನು ಅಮ್ಮ ನನ್ನನ್ನು ಮುಟ್ಟುವಂತಿರಲಿಲ್ಲ ಸದ್ಯಕ್ಕೆ ಹೊಡೆತ ತಪ್ಪಿತ್ತಾದರೂ ಇನ್ನು ಪ್ರಶ್ನೆಗಳ ಮಳೆ.

ಊಟ ಕೊಟ್ಟು ಏನಕ್ಕೆ ಹೀಗೆ ಮಾಡಿದೆ ಅಂದಳು. “ಹೇಳಿದ್ನಲ್ಲಾ .. ನಾನು ಪಾಸಾಗುವಷ್ಟು ಮಾಡಿದ್ದೆ. ನನಗೆ ಗೊತ್ತಿಲ್ಲ ಹೇಗೆ ಫೇಲಾಯಿತೆಂದು” ಎಂದು ಗಟ್ಟಿಯಾಗಿ ಕೂಗಿದೆ. ಸತತ ಎರಡು ಗಂಟೆಗಳ ಕಾಲ ಹೆಣ್ಣು ಮಕ್ಕಳ ನಡತೆ ಮತ್ತು ಸಂಸ್ಕಾರದ ಬಗ್ಗೆ ಉಪದೇಶಾಮೃತವಾಯಿತು. ನನಗೇಕೋ ಇದನ್ನು ಸಂವಿಧಾನದಲ್ಲಿ ಸೇರಿಸಿದರೆ ಸಮಾಜದಲ್ಲಿ ಸುಲಭಕ್ಕೆ ಉತ್ತರ ಬರೆಯಬಹುದು ಅನಿಸುತ್ತಿತ್ತು.

ಅಮ್ಮನಿಗೆ ನನಗೆ ಯಾವಾಗಲೂ ಜಗಳವೇ. ಅವಳಿಗೆ ನಮ್ಮಜ್ಜ ಓದಿಸಿರಲಿಲ್ಲ. ಅಪ್ಪನ ಜಿಪುಣತನಕ್ಕೆ ಬೇಸರ ಪಟ್ಟು ಕೆಲಸಕ್ಕೆ ಸೇರುವ ಪ್ರಯತ್ನ ಪಟ್ಟಾಗ ಓದು ಎಷ್ಟು ಮುಖ್ಯವೆಂದು ಅರಿವಾಗಿತ್ತಂತೆ. ಅದಕ್ಕೆ ನನ್ನನ್ನು ಯಾವಾಗಲೂ ಓದು ಓದು ಎಂದು ಒತ್ತಾಯಿಸುತ್ತಿದ್ದಳು. ನಾನು ಮೊದಲು ಚೆನ್ನಾಗಿಯೇ ಓದುತ್ತಿದ್ದೆ ಆದರೇ ಪಾಠಗಳು ದೊಡ್ಡದಾದಂತೆ ಸ್ವಲ್ಪ ಕಷ್ಟವಾಗಿತ್ತು. ಜೊತೆಗೆ ಊರಿನ ಹೊಸ ಗ್ರಂಥಾಲಯದ ಪುಸ್ತಕಗಳು ಆಕರ್ಷಕವಾಗಿ ಕಂಡವು. ನಾಲ್ಕು ಗೋಡೆಯ ಮಧ್ಯೆ ಪಾಠ ಕೇಳುವುದಕ್ಕಿಂತ ಕೆರೆಯ ಏರಿಯ ಮೇಲೆ, ಬೆಟ್ಟದ ತುದಿಯ ಮೇಲೆ ಓಡಾಡುವುದು ಹೆಚ್ಚು ಇಷ್ಟವಾಗುತ್ತಿತ್ತು.ಹೇಗೋ ತಳ್ಳಿಕೊಂಡು ಬಂದಿದ್ದೆನಾದರೂ ಸರಸಳಂತೆ ಬುದ್ಧಿವಂತೆ ನಾನಾಗಿರಲಿಲ್ಲ. ಇದೇ ಅಮ್ಮನಿಗೂ ದುಃಖ.

ಇನ್ನು ಬಟ್ಟೆ ಬರೆ, ಜೀನ್ಸ್ ಹಾಕಿದರೆ ಸೈಕಲ್ ಹೊಡೆಯುವುದು ಆರಾಮೆನಿಸುತ್ತಿತ್ತು. ಅಮ್ಮನಿಗೆ ಅದು ಇನ್ನೇನೋ ಒಂಥರಾ ಕಾಣಿಸುತ್ತಿತ್ತು. ಹುಡುಗರ ಹತ್ತಿರ ಕದ್ದು ಮುಚ್ಚಿ ಮಾತಾಡದೆ ಎದುರೆದರೆ ಮಾತನಾಡುತ್ತಿದ್ದೆ. ಅಮ್ಮನಿಗೆ ಇವೆಲ್ಲಾ ಕಳವಳಕ್ಕೆ ಕಾರಣ. ಇಷ್ಟೆಲ್ಲಾ ವೈರುಧ್ಯಗಳಿಂದಾಗಿ ಅಮ್ಮ ನನ್ನನ್ನು ಸ್ವಲ್ಪ ಹೆಚ್ಚೇ ಅಂಕೆಯಲ್ಲಿಡುತ್ತಿದ್ದಳು.

ಆದರೆ ಈ ಸಲ ಮಾತ್ರ ಪರಿಸ್ಥಿತಿ ಕೈ ಮೀರಿತ್ತು. ಅಮ್ಮ ಹೆಚ್ಚೇ ತಲೆ ಕೆಡಿಸಿಕೊಂಡಿದ್ದಳು. ನನಗೂ ಭಯ ಆವರಿಸಿತ್ತು. ದೇವರ ಮುಂದೆ ದೀಪ ಆರದಂತೆ ಉರಿಯುತ್ತಲೇ ಇತ್ತು. ಏನೇನೋ ಹರಕೆಗಳ ಪಟ್ಟಿ ಬೆಳೆಯುತ್ತಿತ್ತು. ನಾನು ಸ್ನಾನ ಮುಗಿಸಿ ಒಳ ಬರುವಾಗ ಸ್ವಲ್ಪ ತಣ್ಣಗಾಗಿತ್ತಾದರೂ ಕಾವಿನ್ನೂ ಆರಿರಲಿಲ್ಲ. ಅಷ್ಟೊತ್ತಿಗೆ ಮೇಲಿನ ಮನೆಯ ಸರೋಜ ಚಿಕ್ಕಿ ಮನಗೆ ಬಂದರು. ನನ್ನ ಮುಖ ಕಂಡವರೇ “ರಿಸಲ್ಟ್ ಏನಾಯಿತು” ಎಂದರು. ನಾನು ರಾಜ ರೋಷವಾಗಿ “ಒಂದು ಸಬ್ಜಕ್ಟ್ ಹೋಗಿದೆ. ರಿವ್ಯಾಲ್ಯುಯೇಷನ್ ಹಾಕಿದ್ದೀನಿ ” ಎಂದು ಕೋಣೆಯೊಳಗೆ ಹೋಗಲು ಎದ್ದೆ. ಆದರೆ ಅವರಿಗೆ ಅದು ವಿಶೇಷವಾಗಿ ಕಾಣಲಿಲ್ಲ, ಅಮ್ಮನ ಬಾಡಿದ ಮುಖವನ್ನು ಗಮನಿಸದೆ ಏನೋ ಹೇಳಲು ತಿಣುಕಾಡುತ್ತಿದ್ದರು. ಇದಕ್ಕಿಂತಲೂ ಕೆಟ್ಟ ಸುದ್ದಿ ಏನು ಸಿಕ್ಕಿರ ಬಹುದೆಂದು ನಾನು ಕೂಡ ಕುತೂಹಲದಲ್ಲಿ ಕಿವಿಯಾದೆ.

“ಸರಸನ ವಿಚಾರ ಗೊತ್ತಾಯಿತೇನೆ? ಅವರಪ್ಪ ಶಂಕರ ಗಂಡು ನೋಡ ಬೇಕೆನ್ನುತ್ತಿದ್ದ. ಆದರೆ ಇವತ್ತು ಬೆಳಿಗ್ಗೆ 5 ಗಂಟೆಗೆ ಎದ್ದು ಎಲ್ಲೋ ಹೋಗಿಬಿಟ್ಟಿದ್ದಾಳೆ. ಆಟೋ ಡ್ರೈವರ್ ರಮೇಶನ ಜೊತೆ ಅಂತ ಸುದ್ದಿ”. ಕೇಳಿದ ನನಗೆ ಒಮ್ಮೆಲೆ ನಂಬಲಾಗಲಿಲ್ಲ. ಅವರಿಬ್ಬರೂ ಮಾತನಾಡುತ್ತಿದ್ಧದು ಗೊತ್ತಿದದೇ ಆದರೂ ತೀರ ಹೀಗೆ ಮಾಡುವಳೆಂದು ಊಹಿಸಿಯೂ ಇರಲಿಲ್ಲ. ತಾಯಿ ತಂದೆ ತಂಗಿಯರನ್ನೆಲ್ಲಾ ಬಿಟ್ಟು ಹೋಗುವ ಧೈರ್ಯವಾದರೂ ಹೇಗೆ ಬಂತು. ಇನ್ನು ಮೂರು ಹೆಣ್ಮಕ್ಕಳಿದ್ದರೂ ಹೊಟ್ಟೆ ಬಟ್ಟೆ ಕಟ್ಟಿ ಇವಳನ್ನು ಇಷ್ಟು ಓದಿಸಿದ್ದರು. ಓದಿ ದುಡಿದು ನೋಡಿಕೊಳ್ಳುವುದು ಬಿಟ್ಟು ಹೀಗೆ ಮಾಡಿದ್ದಳು. ಏಕೋ ನನ್ನ ಗಣಿತ ಅವರ ಮನೆಯವರ ದುಃಖದ ಮುಂದೆ ಗೌಣವಾಗಿ ಕಂಡಿತ್ತು. ಅವರನ್ನು ಮಾತನಾಡಿಸಿ ಬರಲು ತಕ್ಷಣ ಹೊರಟೆ. ಅಮ್ಮ ನನ್ನನ್ನೇ ಗಾಬರಿಯಾಗಿ ನೋಡುತ್ತಿದ್ದಳು. “ನಾನು ಯಾವತ್ತೂ ಓಡಿ ಹೋಗುವುದಿಲ್ಲ ಮಾರಾಯ್ತಿ ..” ಎಂದಷ್ಟೇ ಹೇಳಿ ಎಲ್ಲಿಗೆಂದು ಕೂಡ ಹೇಳದೆ ಹೊರನಡೆದೆ.

Comments

nageshamysore

Sun, 09/27/2015 - 20:02

ಕ್ಯಾಶುವಲ್ಲಾಗಿ ಹೇಳಿಕೊಂಡು ಹೋಗುವ ಕಥಾನಕದ ಶೈಲಿ ತುಂಬಾ ಹಿಡಿಸಿತು. 'ಹೋಗಿದ್ದು ಒಂದು ಸಬ್ಜೆಕ್ಟು' ಎನ್ನುವಾಗ ನಾಯಕಿಯ ಫೇಲಾಗಿ ಹೋದ 'ಗಣಿತ'ವೆಂಬ ಸಬ್ಜೆಟ್ ಮತ್ತು ಕಾಣೆಯಾಗಿ ಹೋದ ಸರಸಳೆಂಬ ಪಾತ್ರದ ಮತ್ತೊಂದು 'ಸಬ್ಜೆಟ್' - ಎರಡೂ ಅಂತರ್ಗತವಾದಂತೆ ದನಿಸುವುದು ಕುತೂಹಲಕರ. ಎರಡರಲ್ಲೂ 'ಲೆಕ್ಕಾ'ಚಾರವೆ ಎಡವಟ್ಟಾಗಿದ್ದು ಎನ್ನುವ ಛೋದ್ಯವನ್ನು ಸೇರಿಸಿಕೊಂಡರೆ ಈ ಪುಟ್ಟ ಹಾಗು ಸುಂದರ ಕಥೆಗೆ ಅದರ ಶಿರೋನಾಮೆಯೂ ಅಷ್ಟೆ ಸೊಗಸಾಗಿ ಒಪ್ಪುತ್ತದೆ ಎನ್ನಬಹುದು :-)

ಒಳ್ಳೆಯ observation.. ಕೆಲವೊಮ್ಮೆ ಭಾವನೆ, ಯೋಚನೆ ಹೆಚ್ಚಾದಾಗ ಭಾಷೆಗಿಂತ ತಾತ್ಪರ್ಯ ಒತ್ತು ತೆಗೆದುಕೊಳ್ಳುತ್ತದೆ. ಆದರೆ ಶಬ್ದದ ಅಲಂಕಾರ ಕೂಡ ಇರಬೇಕು. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

santhosha shastry

Tue, 09/29/2015 - 21:17

ಬಹಳ‌ ನೈಜವಾಗಿ ಮತ್ತು ಸೊಗಸಾಗಿ ಮೂಡಿಬಂದಿದೆ. ಶೈಲಿ ಚೆನ್ನಾಗಿದೆ. ಫೇಲಾಗೋವ್ರ‌ ಮನಸ್ಥೈರ್ಯ‌ ನಮಗಲ್ದೇ ಬೇರೆ ಯಾರಿಗೆ ಅರ್ಥ‌ ಆಗ್ಬೇಕು ಹೇಳಿ!