ಗೌರಿಗೊಂದು ಸ್ತುತಿ

ಸಂಜೆ ಬಣ್ಣದ ರೀತಿ ಚಂಚಲ ಅಂಕು ಡೊಂಕಿನ ಗಂಗೆಯು
ಎರಡು ನಾಲಿಗೆ ಹಾವು ಬಾಗಿದ ಕೊಳಕು ಮೊಗದವ ಚಂದಿರ
ಪೆದ್ದು ನಂದಿಯು ಹೀಗೆ ಗಂಡನ ಮನೆಯ ತುಂಬಿರೆ ಸಂಕಟ
ಬಾಳ್ವುದೆಂತೋ ಎನುತ ಬುರುಡೆಯ ಹಿಡಿದ ಗೌರಿಯೆ ಕಾಯಲಿ!
ಸಂಸ್ಕೃತ ಮೂಲ:
ಸಂಧ್ಯಾರಾಗವತೀ ಸ್ವಭಾವಕುಟಿಲಾ ಗಂಗಾ ದ್ವಿಜಿಹ್ವಃ ಫಣೀ
ವಕ್ರಾಂಗೈರ್ಮಲಿನಃ ಶಶೀ ಕಪಿಮುಖೋ ನಂದೀಚ ಮೂರ್ಖೋ ವೃಷಃ |
ಇತ್ಥಂದುರ್ಜನ ಸಂಕಟೇ ಪತಿಗೃಹೇ ವಸ್ತವ್ಯಮೇತತ್ಕಥಂ
ಗೌರೀತ್ಥಂ ನೃಕಪಾಲಪಾಣಿಕಮಲಾ ಚಿಂತಾನ್ವಿತಾ ಪಾತು ವಃ ||
सन्ध्यारागवती स्वभावकुटिला गंगा द्विजिह्वः फणी
वक्रांगैर्मलिनः शशी, कपिमुखो नंदीच मूर्खो वृषः ।
इत्थंदुर्जन संकटे पतिगृहे वस्तव्यमेतत्कथं
गौरीत्थं नृकपालपाणिकमला चिन्तान्विता पातु वः ॥
-ಹಂಸಾನಂದಿ
ಕೊ: ನವರಾತ್ರಿಯ ಸಮಯದಲ್ಲಿ ಒಂದಾದರೂ ಹೊಸ ದೇವೀಸ್ತುತಿಯನ್ನು ಅನುವಾದಮಾಡಬೇಕೆನ್ನಿಸಿ ಇದನ್ನು ಹುಡುಕಿ ಅನುವಾದಿಸಿದ್ದಾಯ್ತು
ಕೊ.ಕೊ: ಮೂಲವು ಶಾರ್ದೂಲವಿಕ್ರೀಡಿತ ವೃತ್ತದಲ್ಲಿದೆ. ಅನುವಾದವು ಮಾತ್ರಾ ಮಲ್ಲಿಕಾಮಾಲೆಯ ಧಾಟಿಯಲ್ಲಿದ್ದರೂ, ಪ್ರಾಸವನ್ನಿಟ್ಟಿಲ್ಲ.
ಕೊ.ಕೊ.ಕೊ: ಗೌರಿಯಂತಹ ಗೌರಿಗೇ ಗಂಡನ ಮನೆಯಲ್ಲಿ ಬಾಳಲಾಗದಷ್ಟು ಕಷ್ಟಗಳಂತೆ! ಒಂದುಕಡೆ ಚಂಚಲವಾದ ಹೀಗೋ ಹಾಗೋ ಹೇಗೋ ಹರಿಯುವ ಅಂಕುಡೊಂಕಿನ ಗಂಗೆ, ಇನ್ನೊಂದು ಕಡೆ ಎರಡು ಕೋಡಿನ, ಮುಖವೆಲ್ಲ ಕಲೆ ತುಂಬಿದ ಚಂದ್ರ - ಹೊರಗೆ ನೋಡಿದರೆ, ಮೊದ್ದು ಮುಖದ ಪೆದ್ದು ನಂದಿ. ಹೀಗೆ ಗಂಡನ ಮನೆಯಲ್ಲಿ ಮೂರುಕಡೆಯೂ ಇರುವ ಸಂಕಟವನ್ನು ತಾಳಲಾರದೇ ಗೌರಿ, ಕೈಯಲ್ಲಿ ಕಪಾಲ ಹಿಡಿದು ಯೋಚಿಸಿ ಕುಳಿತಳಲ್ಲಾ, ಅವಳೇ ನಮ್ಮನ್ನು ಕಾಪಾಡಲಿ ಎಂಬ ಭಾವ.
ಚಿತ್ರ ಕೃಪೆ: http://sreenivasaraos.com/2012/10/page/6/ ಚಿತ್ರದ ವಿವರದಲ್ಲಿ ಮಹಾವಿದ್ಯಾ ಮಾತಂಗಿ ಸ್ವರೂಪ ಎಂದು ಹೇಳಲಾಗಿದೆ.