ಸುಬ್ಬನ ಲಕ್ಷ್ಮಣ ರೇಖೆ....

Submitted by gopaljsr on Fri, 10/16/2015 - 13:16

ಸುಬ್ಬ ಫೋನ್ ಮಾಡಿ ಮನೆಗೆ ಕಾಫಿಗೆ ಆಹ್ವಾನಿಸಿದ. ನಾನು, ಮಂಜನಿಗೂ ಹೇಳು, ಇಲ್ಲೇ ಇದ್ದಾನೆ ಎ೦ದೆ. ಮಂಜ ಫೋನ್ ಎತ್ತಲು ಹಿಂದೆ ಮುಂದೆ ನೋಡಿದ. ಏಕೆಂದರೆ ಸುಬ್ಬನ ಹೆಂಡತಿಯ ಭಯ. ಮಂಜ ಅವನ ಮದುವೆಯಲ್ಲಿ ಮಾಡಿದ ಅವಾಂತರಕ್ಕೆ, ಸರಿಯಾಗಿ ಸುಬ್ಬನ ಹೆಂಡತಿಯಿಂದ ಉಗಿಸಿಕೊಂಡಿದ್ದ. ಸುಬ್ಬನ ಮದುವೆಯಲ್ಲಿ ಮಂಜ  ಚೆನ್ನಾಗಿರುವ ಮದುವೆಯ ಹಾಡು ಹಾಕೆಂದರೆ, "ಅಹಾ ನನ್ನ ಮದುವೆಯಂತೆ ... ಓಹೋ ನನ್ನ ಮದುವೆಯಂತೆ... ನಂದು ನಿಂದು ಜೋಡಿಯಂತೆ ... ಪಂ ಪಂ ", "ಮದುವೆ... ಮದುವೆ... ಮದುವೆ... ಮಧುರ ಭಯಂಕರ ಮದುವೆ...",   ಎಂಬ  ತಮಾಷೆಯ ಹಾಡಗಳನ್ನೇ ಆಯ್ದು ಹಾಕಿದ್ದ. ಮತ್ತೆ ಮದುವೆ ಗಂಡು ಸುಬ್ಬನನ್ನೇ ಶ್ರೀ ಬಿ ಆರ್ ಲಕ್ಷ್ಮಣರಾವ್ ಅವರ "ಸುಬ್ಬಾ ಭಟರ ಮಗಳೇ ... ಇದೆಲ್ಲಾ ನಿಂದೆ ತೊಗೊಳೆ " ಎ೦ಬ ಹಾಡಿಗೆ ಡಾನ್ಸ್ ಮಾಡಿಸಿದ್ದ. ಸುಬ್ಬನ ಹೆಂಡತಿಗೆ ಪಿತ್ತ ನೆತ್ತಿಗೇರಿತ್ತು. ಮರುದಿನ ಮಂಜನನ್ನು ಸಕತ್ ತರಾಟೆಗೆ ತೆಗೆದುಕೊ೦ಡಿದ್ದಳು. ಮಂಜ ಸುಬ್ಬನ ಹೆಂಡತಿ ತುಂಬಾ ಜೋರಲ್ಲವಾ ಎಂದು ಅ೦ದ. ನಾನು "ಜೋರು ಇದ್ದರೆ ಪರವಾಗಿಲ್ಲ, ಆದರೆ ಬೋರ ಆಗಬಾರದು" ಎಂದಿದ್ದೆ. ಅವಾಗಿನಿಂದ ಮಂಜ ಸುಬ್ಬನ ಹೆಂಡತಿಯ ಕಂಡರೆ ತುಂಬಾ ಹೆದರುತ್ತಿದ್ದ.

ಮದುವೆ ಆದ ಮೇಲೆ ಸುಬ್ಬ ಹೆಂಡತಿಯ ದಾಸನಗಿಬಿಟ್ಟಿದ್ದ. ನಾನು ತುಂಬಾ ದಿವಸದಿಂದ ಸುಬ್ಬನ ಮನೆಗೆ ಹೋಗಿರಲಿಲ್ಲ. ಸುಬ್ಬನ ಮನೆಗೆ ಹೋದಾಗ ಅವನ ಹೆಂಡತಿ ಯಾವಾಗಲು, ಸುಬ್ಬನ ವರ್ಣನೆ ಮಾಡುತ್ತಿದ್ದಳು.ಒಂದು ದಿವಸ ಸುಬ್ಬನ ಹೆಂಡತಿ, ನಮ್ಮ ಮನೆಯವರು ಇವತ್ತು ದೆಹಲಿಗೆ ಫ್ಲೈಟ್ನಲ್ಲಿ ಹೋಗುತ್ತಿದ್ದಾರೆ ಎಂದು ಅವನ ವರ್ಣನೆ ಮಾಡುತ್ತಿದ್ದಳು. ಅವಳಿಗೆ ನಿಜವಾಗಿಯೂ ಫ್ಲೈಟ್ ನಲ್ಲಿ ಹೋಗುತ್ತಿದ್ದಾರೆ ಎನ್ನುವುದನ್ನು ಹೇಳಬೇಕಿತ್ತಷ್ಟೇ .. ಬೇರೇನೂ ಇರಲಿಲ್ಲ. ಸುಬ್ಬ ಕೂಡ ಮದುವೆ ಆದ ಮೇಲೆ, ಅದೇ ರೀತಿ ಹೇಳುವುದನ್ನು ಕರಗತ ಮಾಡಿಕೊಂಡು ಬಿಟ್ಟಿದ್ದ.

ಮಂಜನನ್ನು ಸುಬ್ಬನೇ ಹೇಗೋ ಮಾಡಿ ಕಾಫಿಗೆ ಒಪ್ಪಿಸಿದ್ದ. ಇಬ್ಬರು ಸುಬ್ಬನ ಮನೆಗೆ ಹೋದೆವು. ತಿಂಡಿಯ ಜೊತೆಗೆ ಕಾಫಿ ಸಿಕ್ಕಿತು. ಆದರೆ ಸುಬ್ಬ ಮತ್ತು ಅವನ ಹೆಂಡತಿಯ ಆರ್ಭಟದ ಮಾತುಗಳು ಮಾತ್ರ ನಿಂತಿರಲಿಲ್ಲ. ಸುಬ್ಬನ ಹೆಂಡತಿ, ನಾಳೆ ನಮ್ಮ ಮನೆಯವರ ಡೆಲಿವರಿ ಇದೆ ಎಂದು ಹೇಳಿದಳು. ನಮಗೆ ಗಾಬರಿ ಆಯಿತು, ಕಡೆಗೆ ಸುಬ್ಬ ನನ್ನ ಪ್ರಾಡಕ್ಟ್ ರಿಲೀಸ್ ಇದೆ ಎ೦ದ. ಆಮೇಲೆ ಅರ್ಥ ಆಯಿತು. ಸುಬ್ಬನ ಮಾತಿನ ಓಘ ಮಾತ್ರ ಕಮ್ಮಿ ಆಗಿರಲಿಲ್ಲ. ನಾನು ಒಂದು ಕಪಾಟನ್ನು ತೆಗೆದು ಕೊಳ್ಳಬೇಕಿದೆ. ತನ್ನಲ್ಲಿರುವ ಶರ್ಟ್ ಪ್ಯಾಂಟ್ ಗಳ ಅಂಕಿಅಂಶಗಳನ್ನು ಹೇಳಬೇಕೆಂದು,ನನ್ನ ಹತ್ತಿರ ಇರುವ ೩೦ ಪ್ಯಾಂಟ್ ಮತ್ತು ೩೦ ಶರ್ಟ್ ಇಡಲು ಜಾಗವಿಲ್ಲ ಎಂದು ಹೇಳಿದ. ಮತ್ತೆ ಸುಬ್ಬ ತನ್ನ ಶರ್ಟ್ ತೆಗೆದು, ಮಂಜ ನೋಡಿಲ್ಲಿ ಹೊಸ ಬನಿಯನ್ನು ತೆಗೆದುಕೊಂಡಿದ್ದೇನೆ ಎಂದು ತೋರಿಸಿದ. ನಮಗೆ ಗಾಬರಿ ಮತ್ತೆ ಏನಾದರು ತೋರಿಸಿಯಾನು ಎಂದು. ಇದನ್ನ ಆನ್ಲೈನ್ ಸೈಟ್ ನಿಂದ ಆರ್ಡರ್ ಮಾಡಿ ತೆಗೆದು ಕೊಂಡಿದ್ದು ಎ೦ದ. ಆನ್ಲೈನ್ ಮಾರ್ಕೆಟ್ ಬಗ್ಗೆ ದೊಡ್ಡ ಭಾಷಣ ಬಿಗಿದ. ನನ್ನ ಹೆಂಡತಿಗೂ ಆನ್ಲೈನ್ ಇಂದ ಆರ್ಡರ್ ಮಾಡಿದ್ದೆ, ಇನ್ನು ಬಂದಿಲ್ಲಾ ಎ೦ದ. ಸುಬ್ಬ ತನ್ನ ಲ್ಯಾಪ್ಟಾಪ್ ತೆಗೆದು ನೋಡು ನಾನು ತೆಗೆದುಕೊಂಡಿರುವ ಸಾಮಾನು ಎಂದು ತನ್ನ ಆರ್ಡರ್ ತೊರಿಸಿದ. ನೀನು ತೆಗೆದುಕೋ ಎಂದು ಮಂಜನಿಗೆ ಹೇಳಿದ. ಮಂಜ ಒಂದು ಲ್ಯಾಪ್ಟಾಪ್ ನೋಡಿ ಇದು ಬರಿ "೨೦೦೦೦" ಎಂದು ತಮಾಷೆ ಮಾಡಿ ಬೇಡ ಬಿಡು ಎ೦ದ. ಮತ್ತೆ ಮಂಜ ಹಳೆಯ ವಸ್ತುಗಳನ್ನು ಮಾರುವುದಕ್ಕೂ ಸೈಟ್ ಉಂಟು ಎ೦ದ. ನಿನ್ನ ಎಲ್ಲ ಹಳೆಯ ಬನಿಯನ್ನುಗಳನ್ನೂ ಮಾರಿಬಿಡು ಎಂದು, ಎಲ್ಲಿ ಹೇಳಿಬಿಟ್ಟಾನು ಎಂದು ಸುಬ್ಬನ ಹೆಂಡತಿಯ ಕಡೆಗೆ  ತೋರಿಸಿ, ಕಣ್ಣ ಸನ್ನೆ ಮಾಡಿದೆ.

ತಮ್ಮ ಆಫೀಸಿನ ಬಗ್ಗೆ ತುಂಬಾ ಹೇಳಿಕೊಂಡ.  ತಾನು ಹೇಳುವ ಮಾತು ವೇದ ವಾಕ್ಯ ಇದ್ದ ಹಾಗೆ, ಮತ್ತು ತನ್ನ ಮಾತನ್ನು ಲಕ್ಷ್ಮಣ  ರೇಖೆ ಇದ್ದ ಹಾಗೆ, ಯಾರು ಮೀರುವುದಿಲ್ಲ ಎಂದು ಕೊಚ್ಚಿಕೊ೦ಡ. ಅಷ್ಟರಲ್ಲಿ ಸುಬ್ಬನ ಆನ್ಲೈನ್ ಆರ್ಡರ್ ಬ೦ತು. ನಾವಿಬ್ಬರು ಕುಂಟು ನೆಪ ಹೇಳಿ ಅಲ್ಲಿಂದ ಜಾಗ ಕಿತ್ತೆವು.

ಒಂದು ದಿವಸ ಸುಬ್ಬ ಮಂಜನ ಮನೆಗೆ ಬ೦ದ, ತುಂಬಾ ಬೇಜಾರಿನಿಂದ ತನ್ನ ಆಫೀಸ್ ವಿಷಯದ ಬಗ್ಗೆ ಹೇಳಲಾರಂಬಿಸಿದ. ನಾನು ಮ್ಯಾನೇಜರ್ ಆಗಬೇಕಿತ್ತು ಕಣೋ, ಎ೦ದು. ಈಗ ಬಂದಿರೋ ಹೊಸ ಸಿಇಓ ಅದನ್ನು ತಪ್ಪಿಸಿದ, ನನ್ನ ಮಾತನ್ನು ಈಗ ಯಾರು ಕೇಳುತ್ತಿಲ್ಲ ಎಂದು ಗೊಣಗಿದ. ಅದಕ್ಕೆ ಮಂಜ ಹೋಗಲಿ ಬಿಡು ಯಾಕೆ ಗೊಣಗುತ್ತೀಯ, ಅವರನ್ನು ಜಿರಳೆ ಎಂದು ತಿಳಿದುಕೋ ಅಷ್ಟೇ ಎ೦ದ. ನನಗೆ ಅರ್ಥ ಆಗಲಿಲ್ಲ, ಏನು? ಹಾಗೆಂದರೆ ಎ೦ದೆ. ಅದಕ್ಕೆ ಮಂಜ, ಸುಬ್ಬನೇ ಹೇಳಿರಲಿಲ್ಲವಾ, ಸುಬ್ಬನ ಮಾತು ಎಂದರೆ ಲಕ್ಷ್ಮಣ ರೇಖೆ ಎಂದು, ಅದಕ್ಕೆ ಅವರನ್ನು ಜಿರಳೆ ಎಂದು ತಿಳಿದುಕೋ, ಈಗ ಬಂದಿರುವ ಸಿಇಓ ನ ಕೊಳಚೆ ನೀರು ಎಂದುಕೋ ಅಷ್ಟೇ. ಮತ್ತೆ ಇನ್ನೊಂದು ಲಕ್ಷ್ಮಣ ರೇಖೆ ಹೋಡದರೆ ಆಯಿತು ಎಂದಾಗ ಸುಬ್ಬನ ಪಿತ್ತ ನೆತ್ತಿಗೇರಿತ್ತು.

ಮಂಜನ ಹೆಂಡತಿ ಮಗನಿಗೆ ಹೊಡೆಯುತ್ತಿದ್ದಳು, ಏಕೆ ಹೊಡೆಯುತ್ತಿರುವೆ ಎಂದು ಮಂಜ ಕೇಳಿದಾಗ, ನಿಮ್ಮ ಮಗ, ಧ್ಯಾನದ ಅರ್ಥ ಬರೆ ಎಂದರೆ ದಾನ್ಯದ ಅರ್ಥ ಕಾಳು ಎಂದು ಬರೆದು ಬಂದಿದ್ದಾನೆ ಎಂದಳು. ಅದಕ್ಕೆ ಮಂಜ ನೀನು ಹೀಗೆ ಕಾಲಿಗೆ ಹೊಡೆದು ಕೇಳುತ್ತಿದ್ದರೆ, ಮತ್ತೆ ಅವನು ಕಾಳು ಎಂದೇ ಬರೆಯುತ್ತಾನೆ ತಿಳಿಯಿತಾ, ಎಂದ. ಏನೇ...  ಅವನನ್ನ ಒಂದೇ ದಿವಸದಲ್ಲಿ ಡಾಕ್ಟರ ಅಥವಾ ಇಂಜಿನಿಯರ್ ಮಾಡಬೇಕು ಅಂದು ಕೊಂಡಿದ್ದೀಯಾ, ಸಾಕು ಬಿಡು, ಅವನು ನಮ್ಮ ಮಗನಾದರೆ ಸಾಕು ಎಂದ. ತನ್ನ ಮಗನನ್ನು ಪುಟ್ಟ ಬಾ "ಬಿಸಿ ಬಿಸಿ ಐಸ್ ಕ್ರೀಂ" ಕೊಡಿಸುತ್ತೇನೆ ಎಂದು ಸಮಾಧಾನ ಮಾಡಿದ.

ಮತ್ತೆ ಸುಬ್ಬನಿಗೆ ಸಮಾಧಾನಿಸುತ್ತ, ನಿನ್ನ ಸಾಮರ್ಥ್ಯದ ಬಗ್ಗೆ ಅವರಿಗೆ ಅರಿವಿಲ್ಲ ಬಿಡು, ಜೀವನದಲ್ಲಿ ಒಂದು.. ನಾವು ಅರ್ಥ(convince) ಮಾಡಿಸಬೇಕು ಇಲ್ಲಾ, ಗೊಂದಲ(confuse) ಮಾಡಿಸಬೇಕು ತಿಳಿಯಿತಾ, ನಾವು ಮಾಡೋ   ದೊಡ್ಡ ತಪ್ಪು ಏನು? ಗೊತ್ತ, ಅರ್ಥ ಮಾಡಿಸೋಕೆ ಹೋಗುತ್ತೇವೆ. ಅದರಿಂದನೇ...  ಆಗೋದು ಗೊಂದಲ, ನಿನ್ನ ಹೊಸ ಸಿಇಓ ನಿನ್ನ ಸಾಮರ್ಥ್ಯ ಅಳತೆ ಮಾಡವ ಅಳತೆಗೋಲು ಅಲ್ಲ ಎಂದು ತಿಳಿ ಸಾಕು, ಇನ್ನೇನು ..ಇದೆ ಕೊನೆ ಏನು ಅಲ್ಲವಲ್ಲ, ಬೇರೆ ನೌಕರಿ ಹುಡುಕು ಎಂದ. ಅವರೆಲ್ಲರೂ ಹಾಗೆ ಬಿಡು ಸುಬ್ಬ "ಇದ್ದಾಗ ಹಚಾ-ಹಚಾ, ಇಲ್ಲದಿರುವಾಗೆ ಹಪಾ-ಹಪಿ" ಮಾಡುವಂತಹ ಜನ ಎಂದಾಗ ಸುಬ್ಬ ಸ್ವಲ್ಪ ಹ್ಯಾಪಿ ಆಗಿ, ಮನೆಗೆ ಹೋದ.

Rating
No votes yet

Comments