ಪಾಸಿಟಿವ್ ಮ್ಯಾನ್, ಮೈನಸ್ ಸ್ಟೋರಿ..!

ಪಾಸಿಟಿವ್ ಮ್ಯಾನ್, ಮೈನಸ್ ಸ್ಟೋರಿ..!

ಸಿನಿಮಾ ಚೌಕಟ್ಟಿಲ್ಲಿ ಪೌರಾಣಿಕ ಸುರ-ಅಸುರ ಕಥೆ.  ಪ್ಲಸ್ಸು ಮೈನಸ್ಸುಗಳ ಮಾನಸಿಕ ಕಾಯಿಲೆ. ಹಾಡು ಇವೆ. ಮನಸ್ಸಿಗಿಳಿಯೋದಿಲ್ಲ. ಚಿತ್ರಕಥೆಗೆ ಏನ್ ಹೇಳಬೇಕು. ಅನಂತ್ ನಾಗ್ ಪಾತ್ರದ ಬಗ್ಗೆ ಹೇಳೋಕೆ ಧೈರ್ಯ ಬೇಕು. ಅಷ್ಟು ಚೆನ್ನಾಗಿದೆ. ಮಾನಸಿಕ ಪಾತ್ರಗಳು ಹೊಸ ಫೀಲ್ ಕೊಡುತ್ತವೆ. ಆದರೂ ಪ್ಲಸ್ ಚಿತ್ರದಲ್ಲಿ ಪ್ಲಸ್ ಟೈಟಲಷ್ಟೇ ಪ್ಲಸ್ ಅನ್ನೋ ಭಾವ ಮೂಡುತ್ತದೆ.
---
ಪ್ಲಸ್ ಚಿತ್ರ ಯಾಕೆ ನೋಡಬೇಕು. ಅಲ್ಲಿ ಏನಿದೆ. ಪ್ಲಸ್ ಅಂದ್ರೆ ಏನೂ. ಪ್ಲಸ್ ಇದೆ ಅಂದಾಗ, ಮೈನಸ್ಸು ಇರಬೇಕಲ್ಲವೆ. ಚಿತ್ರದಲ್ಲಿ ಪ್ಲಸ್ ಏನೂ. ಮೈನಸ್ ಯಾವುದು. ಇವುಗಳ ಬಗ್ಗೆ ಹೇಳ್ತಾ ಹೋದರೆ, ರಪ್​ ಅಂತ ನಿಮಗೆ ಎದುರುಕೊಳ್ಳೋದು ಬರೀ ಮೈನಸ್ ಗಳೇ. ಆ ಮೈನಸ್​ ಗಳ ಸುಳಿಯಲ್ಲಿ, ಕೆಲವು ಪ್ಲಸ್ ಗಳೂ ಇವೆ. ಅವುಗಳನ್ನ ನಾವೇ ಹುಡುಕೊಳ್ಳಬೇಕು.ಅಷ್ಟೆ.

ಪ್ಲಸ್ ಸಿನಿಮಾ ಚೆಂದದ ಚಿತ್ರವಾಗಬಹುದು ಎಂಬ ನಿರೀಕ್ಷೆ ಇತ್ತು. ಅದು ಸುಳ್ಳಾಗಿದೆ. ಚೆಂದನದ ಗೊಂಬೆ ಹೀರೋ ಅನಂತ್ ನಾಗ್ ಇದ್ದಾರೇ ಅಂದಾಗ ವಿಶೇಷ ನಿರೀಕ್ಷೆ ಸಹಜ. ಅದು ಕಥೆಯಲ್ಲಿ ಕಂಡು ಬರೋದಿಲ್ಲ. ಅನಂತ್ ಕ್ಯಾರೆಕ್ಟರ್​ ಮತ್ತು ಅದಕ್ಕೆ ಕೊಟ್ಟ ಟ್ರೀಟಮೆಂಟ್ ಗೆ ಎದ್ದು ಕಾಣಿಸುತ್ತದೆ.

ಅನಂತ್ ಒಂದು ರೀತಿ ಚಿತ್ರಕ್ಕೆ ಪ್ಲಸ್. ಚಿತ್ರ ಬದುಕಿನ ವಿಶೇಷ ಪಾತ್ರ ಮಾಡಿದ್ದಾರೆ. ಸ್ಟೈಲಿಶ್ ಬಿಜಿನೆಸ್ ಮ್ಯಾನ್ ಆಗಿ ಕಾಣಿಸಿಕೊಳ್ತಾರೆ. ಆದರೆ, ಎಲ್ಲೂ ಕಾಡೋದಿಲ್ಲ. ಕೆಲವೊಂದು ದೃಶ್ಯದಲ್ಲಿ ಅನಂತ್​ ಪಾತ್ರವೇ ವಿಲನ್ ಆಗಿರಬಹುದೇ ಎಂಬ ಅನುಮಾನವೂ ಮೂಡುತ್ತದೆ. ಬೀ ಪಾಸಿಟಿವ್, ಥಿಂಕ್ ಪಾಸಿಟಿ ಅಂತ ಜೀವಿಸೋ ಈ ಕ್ಯಾರೆಕ್ಟರ್​, ನೆಗೆಟಿವ್ ಆಗಿಯೇ ಇರುತ್ತದೆ. ಆದರೆ, ಅದಕ್ಕೆ ಒಂದು ಬಲವಾದ ಕಾರಣ ಇರುತ್ತದೆ. ಅದನ್ನ ಸಿಂಪಲ್ ಕಥಾರೂಪದಲ್ಲಿ ಹೇಳಿದ್ರೇನೆ ಚೆಂದ. ಓದಿ.

ಸುಧಾರಾಣಿ. ಸೈಂಟಿಸ್ಟ್. ಪತಿ ಅನಂತ್ ನಾಗ್. ಸೈಂಟಿಸ್ಟ್ ಸುಧಾರಾಣಿ, ಒಂದು ವ್ಯಾಕ್ಸಿನ್ ಕಂಡು ಹಿಡೀತಾರೆ. ಅದರಿಂದ ಜಗತ್ತಿನಲ್ಲಿಯ ಯಾವುದೇ ಮೆಂಟಲ್ ಡಿಸಾಡರ್ (ಮಾನಸಿಕ ಅಸ್ವಸ್ಥತೆ) ಹೋಗಲಾಡಿಸಬಹುದು. ಅದನ್ನ ಕಂಡು ಹಿಡಿದ ತಕ್ಷಣವೇ ಸುಧಾರಾಣಿ ಪಾತ್ರ ಸತ್ತು ಹೋಗುತ್ತದೆ. ಈ ವಿಷ್ಯ ತಿಳಿದು ಅನಂತ್​ ಪಾತ್ರ ಸೇಡು ತೀರಿಸಿಕೊಳ್ಳುತ್ತದೆ. ಆ ಸೇಡಿನ ನೆಗೆಟಿವ್ ರೂಪವೇ ಗಡ್ಡಿ ವಿಜಯ್ ನಿರ್ದೇಶಿಸಿದ ಈ ಪ್ಲಸ್ ಸಿನಿಮಾ ಅಂತಹ ಹೇಳಿದರೆ ಕಂಡಿತ ತಪ್ಪಾಗೋದಿಲ್ಲ.
-----
ಮೈನಸನ್ನ ಪ್ಲಸ್ ಮಾಡೋದು ಹೇಗೆ. ಇದು ಪ್ಲಸ್ ಚಿತ್ರದಲ್ಲಿ ಸಿಗೋ ಐಡಿಯಾ. ಆದರೆ, ಅದನ್ನ ಹೇಳೋಕೆ ಆಯ್ದ ಕೊಂಡ ಕಾನ್ಸೆಪ್ಟ್ ಸೂಪರ್. ನಿಜಕ್ಕೂ ಇದು ಸೂಪರ್.  ಮಾನಸಿಕ ಅಸ್ವಸ್ಥವಾಗಿರೋ  ಆ ಮೂರೂ ಪಾತ್ರಕ್ಕೂ ಒಂದೊಂದು ಮಾನಸಿಕ ಕಾಯಿಲೆ. ಚೇತನ್ ಚಂದ್ರ ನಿರ್ವಹಿಸಿರೋ ಪಾತ್ರಕ್ಕೆ ಹೆಚ್ಚಿನ ಸದ್ದು ಕಿವಿ ಮೇಲೆ ಬಿದ್ದರೇ, ಮನಸ್ಸು ವ್ಯಘ್ರಗೊಳ್ಳುತ್ತದೆ. ರಕ್ತ ಕಂಡರೇ ತಲೆ ಸುತ್ತು ಬಂದು ಬೀಳೋದು ನಾಯಕಿಗೆ ಇರೋ ರೋಗ. ಯಾರಾದರೂ ತನಗಿಂತಲೂ ಚೆನ್ನಾಗಿದ್ದರೇ, ಅದರಿಂದ ಹೊಟ್ಟೆಕಿಚ್ಚು ಪಡೋದು ನಿರ್ಮಾಪಕ ರಿತೇಶ್ ಪಾತ್ರ..

ಪ್ಲಸ್ ಚಿತ್ರದ ಕಥೆ ಈ ಮೂರು ಪಾತ್ರಗಳ ಮೂಲಕವೇ ಸಾಗುತ್ತದೆ. ಅದರ ಸೂತ್ರಧಾರ ಮಾತ್ರ ಅನಂತ್ ನಾಗ್. ತನ್ನ ಹೆಂಡತಿಯ ಸಾವಿಗೆ ಕಾರಣರಾಗಿರೋರನ್ನ ಕೊಲ್ಲಿಸೋದು ಇದೇ ಮೂವರಿಂದಲೇ ಅನ್ನೋದು ಕಥೆ ಓಪನ್ ಸಿಕ್ರೇಟ್. ಆದರೆ, ಕೊಲ್ಲುವಿಕೆನೂ ಇಲ್ಲಿ ವಿಶೇಷವಾಗಿದೆ. ಒಂದೊಂದು ಕೊಲೆನೂ ಒಂದೊಂದು ರೀತಿ ಇರುತ್ತದೆ. ಆದರೆ, ಎಲ್ಲೂ ಥ್ರಿಲ್ ಮೂಡಿಸೋದಿಲ್ಲ. ಡೋಜು ಕೊಡೋದಿಲ್ಲ.

ಪ್ಲಸ್ ಚಿತ್ರದಲ್ಲಿ ಕೊಲೆ ಎತ್ತೇಚವಾಗಿ ನಡೆಯೋದಿಲ್ಲ. ಮೊದಲಾರ್ಧ ಮುಗಿದ ಬಳಿಕವೇ ಈ ಹತ್ಯಾಕಾಂಡ ಶುರುವಾಗೋದು.ಆದರೆ, ಮೊದಲಾರ್ಧದಲ್ಲಿ ಏನಾದರೂ ವಿಶೇಷ ಇದೀಯಾ ಅಂತ ಕೇಳಬೇಡಿ. ಸಿನಿಮಾ ಶುರುವಾಗೋದು, ಡಿವಿಜಿ ಅವರ ‘ಬದುಕಿದು ಜಟಕಾ ಬಂಡಿ’ ಹಾಡಿನ ಹಿನ್ನೆಲೆಯಲ್ಲಿ. ಆ ಹಾಡನ್ನ ಕೇಳೋರು ನಟ ಅಚ್ಯುತ್ತ ಕುಮಾರ್. ಹಾಗೆ ಹಾಡು ಕೇಳ್ತಾ ಕುಳಿತಾಗಲೇ, ಯುವ ನಿರ್ದೇಶಕ ಬರೆಯಲ್ಲಿ ಬೈಕ್ ಏರಿ ಬರೋದು. ಬಂದು, ಪ್ಲಸ್ ಚಿತ್ರದ ಕಥೆ ಹೇಳೋದು. ಇಲ್ಲಿವರೆಗೂ ನೀವೂ ಓದಿದ ಆ ಎಲ್ಲ ವಿಚಾರಗಳು, ಈ ನಿರ್ದೇಶಕ ಹೇಳೋ ಕಥೆನೇ ಆಗಿರುತ್ತದೆ.

ಸಿನಿಮಾದೊಳಗಿನ ಸಿನಿಮಾ ಕಥೆಯಲ್ಲಿ ಸುರ-ಅಸುರ ಕಥೆ ಬರುತ್ತದೆ. ಸುರ ಅಂದ್ರೆ ಅದು ಅನಂತ್ ನಾಗ್. ಅಸುರ ಅಂದ್ರೆ ಅದು ರವಿಶಂಕರ್. ಸುರ-ಅಸುರ ಅಂಶಗಳು ಭೂಮಿ ಮೇಲಿರೋ ಮನುಷ್ಯರೇ ಆಗಿರುತ್ತಾರೆ. ಪಾಸಿಟಿವ್ ಆಗಿ ಥಿಂಗ್ ಮಾಡುವವನು ಸುರ. ನೆಗೆಟಿವ್ ಆಗಿರೋನೇ ಅಸುರ. ಇವರೆಡೂ ಚಿತ್ರಮಂದಿರದಿಂದ ಹೊರ ಬರೋ ಮಂದಿಗೆ ಕೊನೆಯಲ್ಲಿ ಅರ್ಥವಾಗೋ ವಿಚಾರ. ಅಷ್ಟರೊಳಗೆ ಪ್ರೇಕ್ಷಕರು ಗೊಂದಲದಲ್ಲಿ ಬಿದ್ದು ಆಗಿರುತ್ತದೆ. ಯಾಕೆಂದ್ರೆ, ಪ್ಲಸ್ ಚಿತ್ರದ ಬೀಜಗಣಿತ ಮತ್ತು ಸುರ-ಅಸುರ ಕಥೆಯನ್ನ ಸಿನಿಮಾ ಚೌಕಟ್ಟಿನಲ್ಲಿ ನೀಡಿದಂತಿದೆ. ಮನರಂಜನೆ ನಿರೀಕ್ಷೆಯಲ್ಲಿ ಹೋದ್ರೆ, ಕಂಡಿತ ಅದು ಸಿಗೋದಿಲ್ಲ. ಸಿಗೋದು ಪ್ಲಸ್ ಮತ್ತು ಮೈನಸ್ ಗಳ ಲಕ್ಕವಷ್ಟೇ.
-ರೇವನ್ ಪಿ.ಜೇವೂರ್