ಇದು ನಿಜವಾದ ಧರ್ಮವೇ ??

ಇದು ನಿಜವಾದ ಧರ್ಮವೇ ??

 

ಒಂದು ದೊಡ್ಡ ಜನಗಳ ಗುಂಪು  ಉತ್ತರ ಪ್ರದೇಶದ ಒಂದು ಗ್ರಾಮದಲ್ಲಿ ಇದ್ದಕ್ಕಿದ್ದಂತೆಯೇ ಒಂದು ಮನೆಗೆ ನುಗ್ಗುತ್ತದೆ. ಮನೆಯಲ್ಲಿದ್ದ ಕುಟುಂಬ ಸದಸ್ಯರನ್ನ ಬೀದಿಗೆ ನಿರ್ದಾಕ್ಷಣ್ಯವಾಗಿ  ಎಳೆದು ಬಾಯಿಗೆ ಬಂದಂತೆ ನಿಂದಿಸುತ್ತದೆ. ಆ ಕುಟುಂಬಕ್ಕೆ ಏನಾಗುತ್ತಿದೆ ಎನ್ನುವಷ್ಟರಲ್ಲಿ, ಆ ಗುಂಪು ಅವರ ಮೇಲೆರಗಿ ಜೀವ ಹೋಗುವಂತೆ ಅವರನ್ನು ಥಳಿಸುತ್ತದೆ. ಅಷ್ಟೊತ್ತಿಗೆ ಮನೆಯ ಮುಖಂಡನ ಜೀವವು  ಆ ಗುಂಪಿನ ಮೊಂಡುತನಕ್ಕೆ ನಲುಗಿ ನಂತರ ಬಲಿಯಾಗುತ್ತದೆ. 

          ಆ ರೀತಿಯಾಗಿ ಆಕ್ರಮಣ ಮಾಡಿದ ಆ ಗುಂಪು ಯಾವುದು , ಆ ಕುಟುಂಬ ಯಾರದ್ದು , ಸತ್ತುಹೋದ ಆ ಮನುಷ್ಯ ಯಾರು ಎಂದು ನಮಗೆಲ್ಲ ತಿಳಿದಿದೆ. ನಡೆದಿರುವ ಕೃತ್ಯ ಸರಿಯೋ ತಪ್ಪೋ , ಧರ್ಮವೋ ಅಧರ್ಮವೋ, ಯಾರದು ಸರಿ ಯಾರದು ತಪ್ಪು ಎನ್ನುವುದು ನಮ್ಮ ನಿಮ್ಮೆಲ್ಲರ ಯೋಚನೆಗೆ ಬಿಟ್ಟದ್ದು.

         ಕೆಲವರಿಗೆ  ಈ ಘಟನೆ ತೀರ ಅಸಹ್ಯ ಮತ್ತು ಅಧರ್ಮೀಯವಾಗಿ ಕಾಣಿಸುತ್ತದೆ , ಮತ್ತೆ ಕೆಲವರಿಗೆ ಇದು ಧರ್ಮ ರಕ್ಷಿಸಿದ ಮಹಾತ್ ಕಾರ್ಯವಾಗಿ ಕಾಣುತ್ತದೆ. ಎಲ್ಲಾ ಜನರು ಅವರದೇ ಆದ ದೃಷ್ಟಿಕೋನಗಳಿಂದ ಈ ಘಟನೆಯನ್ನು ವಿಶ್ಲೇಷಿಸುತ್ತಾರೆ. 

        ಈ ವಿಚಾರದಲ್ಲಿ ನನ್ನ ವೈಯುಕ್ತಿಕ ಭಾವನೆ ಏನೆಂದರೆ , "ಪ್ರತ್ಯಕ್ಷವಾಗಿ ನೋಡಿದರೂ ಸಹ ಪ್ರಮಾಣಿಸಿ ನೋಡು" ಎಂದು  ಹೇಳುವ ನಾವು , ಒಹಾಪೋಹಗಳ ಆಧಾರದ ಮೇಲೆ ಒಬ್ಬ ಮನುಷ್ಯನನ್ನು ಹತ್ಯೆ ಮಾಡಿ, ಅ ಘಟನೆಗೆ ಧರ್ಮ-ಅಧರ್ಮದ ಬಣ್ಣ ಲೇಪಿಸುವುದು ಅದೆಷ್ಟು ಸರಿ ?

         ಧಯವೇ ಧರ್ಮದ ಮೂಲವಯ್ಯ, ಧಯವೇ ನಮ್ಮ ಧರ್ಮದ ಭದ್ರ ಬುನಾದಿ, ಪರಧರ್ಮ ಸಹಿಷ್ಣತೆ ಎನ್ನುವ ಸತ್ವ ನಮ್ಮ ಧರ್ಮದ ಬೇರು ಎಂದು ಹೇಳುವ ನಾವು, ಇನ್ನೊಬ್ಬ ಧರ್ಮೀಯನನ್ನು ಕ್ಶುಲ್ಲಕ್ಕ ಗಾಳಿಮಾತಿನ ಆಧಾರದ ಮೇಲೆ  ಸಾಯಿಸಿ, ಗೋಹತ್ಯಗೆ ಬದಲಾಗಿ ಆತನ ಹತ್ಯ ಎನ್ನುವುದು ನಮ್ಮ ಧರ್ಮದ ಸಂಸ್ಕೃತಿಯೇ ?

        ದೇವರು ಕಣ-ಕಣಗಳಲ್ಲೂ,  ಜಗತ್ತಿನ ಎಲ್ಲಾ ಜೀವರಾಶಿಗಳಲ್ಲೂ, ಪ್ರತಿಯೊಬ್ಬರ ಹೃದಯದಲ್ಲೂ ಇದ್ದಾನೆ ಎನ್ನುವ  ಧರ್ಮವನ್ನು ಪಾಲಿಸುವ ನಾವು , ಮತ್ತೊಂದೆಡೆ ಅದೇ ಧರ್ಮ ಹೆಸರಿನಲ್ಲಿ ಮತ್ತೊಬ್ಬನ ಜೀವ ತೆಗೆದು, ನಾವು ಧರ್ಮ ರಕ್ಷಕರು ಎನ್ನುವುದನ್ನು ನಾವೇ ಒಪ್ಪಬಹುದೇ ? 

        ಕೆಲವರು ಧರ್ಮಾಂಧರಾಗಿ  ಒಳ್ಳೆಯ ಹಾದಿ ಬಿಟ್ಟು ಅಧರ್ಮಿಗಳಾಗಿ ಅನ್ಯಾಯ ಅಕ್ರಮಗಳನ್ನು ಮಾಡಿದರೆ , ಸೇಡು ತೀರಿಸಿಕೊಳ್ಳಲು ನಾವು ಕೂಡ ಅದೇ ಮಾರ್ಗವನ್ನು ತುಳಿದರೆ ನಮಗೂ ಮತ್ತು ಅವರಿಗೂ ಇರುವ ವ್ಯತ್ಯಾಸವಾದರೂ ಏನು ?

       ಇಂಥಹ ಘಟನೆಗಳಿಂದ ನಡೆದಾಗ ಧರ್ಮದ ಹೆಸರಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತವೆ. ಕೆಲವು ರಾಜ್ಯಗಳಲ್ಲಿ ಈಗ ಚುನಾವಣಾ ಸಮಯವಾದ್ದರಿಂದ, ರಾಜಕೀಯ ಪಕ್ಷಗಳಿಗೂ ಈ ಘಟನೆ ಒಂದು ಕೆಟ್ಟ ಅಸ್ತ್ರವಾಗಿದೆ.  ಒಬ್ಬರನ್ನೊಬ್ಬರು ದೂರಲು , ಜನಗಳ ಮದ್ಯ ಕಿಚ್ಚು ಹಚ್ಚಲು, ತಾವು ಅಧಿಕಾರಕ್ಕೆ ಬರಲು ಎಲ್ಲಾ ರಾಜಕೀಯ ಪಕ್ಷಗಳು ಇಂಥಹ ಘಟನೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಇದಕ್ಕೆ ನಾವು ಎಂದಿಗೂ ಅವಕಾಶ ಕೊಡಬಾರದು.

       ನಮ್ಮ ಸ್ವಂತ ಬುದ್ದಿಯಿಂದ , ಸ್ವಲ್ಪ ವಿವೇಚನೆಯಿಂದ ಯೋಚಿಸಿದರೆ ಮಾತ್ರ ಈ ಘಟನೆ ಯಾವ ಮಟ್ಟದ್ದು ,  ಈ ರೀತಿ ನೆಡೆದ್ದದ್ದು ಅದೆಷ್ಟು ದುರಾದೃಷ್ಟಕರ ಎಂದು ತಿಳಿಯುತ್ತದೆ. ಧರ್ಮೋ ರಕ್ಷಿತಿ ರಕ್ಷಿತಃ ಎಂಬುದರ ಸರಿಯಾದ ಅರ್ಥ ನಮಗೆ ಆಗದೆ ಹೋದಾಗ ಸಮಾಜದಲ್ಲಿ ಏನೆಲ್ಲಾ ಆಗುತ್ತದೆ ಎನ್ನುವುದಕ್ಕೆ ಈ ಘಟನೆಯೇ ಉದಾಹರಣೆ.  ಎಲ್ಲಾ ಧರ್ಮಗಳಲ್ಲೂ ಒಳ್ಳೆಯದು ಕೆಟ್ಟದ್ದು ಇದ್ದೆ ಇರುತ್ತದೆ. ನಾವು ಏನನ್ನು ಅಳವಡಿಸಿಕೊಳ್ಳುತ್ತೇವೆ ಅನ್ನುವುದು ಮುಖ್ಯ. ನಮ್ಮ ಧರ್ಮದಲ್ಲಿ ಇರುವ ಪ್ರತಿಯೊಬ್ಬರು ಒಳ್ಳೆಯವರಲ್ಲ, ಅನ್ಯ ಧರ್ಮದಲ್ಲಿ ಇರುವವರೆಲ್ಲರೂ  ಕೆಟ್ಟವರಲ್ಲ. ಧರ್ಮ ರಕ್ಷಣೆಯ ಸುಳ್ಳು ನೆವದ ಮೇಲೆ ಯಾವುದೇ ಧರ್ಮದ ಜನರು ಯಾವುದೇ ಅನ್ಯಾಯ ಅಕ್ರಮಗಳನ್ನು ಮಾಡಿದರೆ ಒಳ್ಳೆಯ ಸಮಾಜವು ಅಂಥಹ ಧರ್ಮವನ್ನು ಎಂದಿಗೂ ಒಪ್ಪುವುದಿಲ್ಲ.

ನಿರಂಜನ್

Comments

Submitted by santhosha shastry Sun, 10/25/2015 - 00:09

ನಿಜ ಸರ್. ಜನರಿಗೆ ತಾವು "ಮಾನವ ಧರ್ಮ"ದವರು ಅಂತ ಅರಿವು ಮೂಡುವವರೆಗೆ ಈ ಅನರ್ಥಗಳು ಇದ್ದದ್ದೇ.