ಮಾತೆಯರಾಗಲಿ ಕನ್ನಡ ಮಾತೆ..

ಮಾತೆಯರಾಗಲಿ ಕನ್ನಡ ಮಾತೆ..

ಕನ್ನಡ ರಾಜ್ಯೋತ್ಸವ ಹತ್ತಿರವಾಗುತ್ತಿದೆ - ಎಂದಿನಂತೆ ನವೆಂಬರಿನ ಸೆರಗು ಹೊದ್ದು. ಆಡಂಬರ ಆಚರಣೆಗಳ ಸಡಗರ ಸಂಭ್ರಮ ಎಂದಿನಂತೆ ಹಾಯ್ದು ಹೋಗಲಿರುವಾಗಲೆ ಯಾವ ಅಬ್ಬರ ಆಡಂಬರಗಳಿಲ್ಲದೆ ಮಾಡಬಹುದಾದ ಮತ್ತೊಂದು ವಿಷಯ ಮನಸಿಗೆ ಬರುತ್ತಿದೆ. ಅದರಲ್ಲೂ ವಿದೇಶದಲ್ಲಿ ಕನ್ನಡ ಗಂಧವಿಲ್ಲದೆ ಬೆಳೆಯುವ ಮಕ್ಕಳ ವಿಷಯದಲ್ಲಿ ಇದು ತುಂಬಾ ಮುಖ್ಯವಾದದ್ದು. ಅದು ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗೆ ಮಾಡಬಹುದಾದ ಸುಲಭದ ಕೆಲಸ - ಕನಿಷ್ಠ ಮಾತಾನಾಡಬಲ್ಲ ಆಡು ಕನ್ನಡವನ್ನು ಮಕ್ಕಳಿಗೆ ಹೇಳಿಕೊಡುವುದು, ನಿರಂತರ ಮಾತನಾಡಿಸಿ ಅದು ಅಭ್ಯಾಸವಾಗುವಂತೆ ಮಾಡುವುದು. ತೀರಾ ಕೊಂಡಿ ಕಳಚಿ ಹೋಗದಂತೆ ಮಾಡುವಲ್ಲಿ ಇದು ಅಷ್ಟಿಷ್ಟಾದರೂ ಸಹಾಯಕಾರಿ. ಈ ಯೋಚನೆ ಬಂದಿದ್ದು ಏಕೆಂದರೆ ಮಗರಾಯ ಐಪ್ಯಾಡಿನ ಭಾಷಾಂತರ ನಿಘಂಟಿನ ಆವೃತ್ತಿಯೊಂದನ್ನು ಹಿಡಿದುಕೊಂಡು ಇಂಗ್ಲೀಷಿನಿಂದ ಕನ್ನಡಕ್ಕೆ ಪರಿವರ್ತಿಸಿ ಆ ಕನ್ನಡ ಅಕ್ಷರ ಕೂಡಿಸಿ ಓದಲು ಯತ್ನಿಸುತ್ತಿದ್ದ - ಸ್ವಪ್ರೇರಣೆಯಿಂದ. ಇನ್ನು ಕಾಗುಣಿತಾಕ್ಷರ ಬರದಿದ್ದರೂ ಅವನ ಯತ್ನಕ್ಕೆ ಖುಷಿಯಾಗಿ ನಾವು ಸಹಾಯ ಮಾಡಲೆತ್ನಿಸುತ್ತಿದ್ದಾಗ ಅನಿಸಿತು - ಈ ತರದ ಸಲಕರಣೆಗಳಿಂದ ಸರಿಯಾದ ಮಾರ್ಗದರ್ಶನ ನೀಡಿದರೆ ಅವರೆ ಕಲಿಯುವ ಸಾಧ್ಯತೆಯಿದೆಯೆಂದು. ಅದರ ಬುನಾದಿಯಾಗಿ, ತಳಹದಿಯಾಗಿ ಸ್ವಲ್ಪ ಆ ಭಾಷಾ ಪ್ರೇಮ ಹುಟ್ಟುವ ವಾತಾವರಣ ಸೃಜಿಸಿದರೆ ಸಾಕು. ಅದರ ಮೊದಲ ಹೆಜ್ಜೆಯಾಗಿ ಮನೆಯಲ್ಲಿ ಅಪ್ಪ, ಅಮ್ಮ ತರದ ಸಣ್ಣ ಪದಗಳಿಂದಲೆ ಆರಂಭಿಸಬಹುದು. ಈಗಾಗಲೆ ಎಷ್ಟೊ ಜನ ಇದಕ್ಕು ಹೆಚ್ಚು ಮಾಡುತ್ತಿರಬಹುದು.. ಇನ್ನು ಆರಂಭಿಸದಿದ್ದವರು ಈ ಕನ್ನಡ ರಾಜ್ಯೋತ್ಸವದಿಂದಾದರು ಆರಂಭಿಸಿದರೆ ಕನ್ನಡಕ್ಕೊಂದು ಅಮೂಲ್ಯ ಕೊಡುಗೆ ನೀಡಿದಂತಾಗುತ್ತದೆ, ಮುಂದಿನ ಪೀಳಿಗೆಗೆ ದಾಟಿಸುವ ಯತ್ನದಲ್ಲಿ. ಇದರಲ್ಲಿ ತಂದೆಗಳ ಪಾತ್ರವೂ ಹಿರಿದೆ ಆದರು ಮಾತೆಯರು ಮೊದಲ ಅಡಿಗಲ್ಲು ಹಾಕಿದರೆ ಭಾವನಾತ್ಮಕ ಬಂಧ ಬಲವಾಗಲಿಕ್ಕೆ ರಹದಾರಿ ಕೊಟ್ಟಂತಾಗುತ್ತದೆ. ಕನ್ನಡ ಮಾತಾಡಲೊಲ್ಲದ ಕನ್ನಡ ಮಾತೆಯರೂ ಇರುವುದು ನಿಜವಾದ ಕಾರಣ ಅವರಿಗೊಂದು ವಿಶೇಷ ಮನವಿಯಾಗಿ ಈ ಪುಟ್ಟ ಕವನ - ಕನ್ನಡ ಮಾತೆಯರಾಗಿ ಕನ್ನಡ ಮಾತೆಯನ್ನು ಪೋಷಿಸಲೆಂದು ಆಶಿಸುತ್ತ, ವಿನಂತಿಸಿಕೊಳ್ಳುತ್ತ. 

ಕನ್ನಡ ಮಾತೆಯರೇಕೊ..
______________________

ಕನ್ನಡ ಮಾತೆಯರೇಕೊ
ಕನ್ನಡ ಮಾತೆ ಆಡರಲ್ಲ ?
ಮಕ್ಕಳೊಡನೆ ಮಾತಾಟ
ಕನ್ನಡವೆಲ್ಲಿ ಕಾಣೆಯಾಯ್ತ ? ||

ಮಮ್ಮೀ ಡ್ಯಾಡೀ ಮಧುರ
ಕರೆಯಲದೆಷ್ಟೂ ಸದರ 
ಅಪ್ಪ ಅವ್ವಾ ಅಮ್ಮಾ ಅಣ್ಣ
ಅನ್ನಬೇಕಿತ್ತಲ್ಲಾ ಉದರ ? ||

ಉಳಿವಿಗಾಗಿ ಹೋರಾಟ
ನಿಜ ಬದುಕೆ ಜೂಜಾಟ
ಜೂಜಿನ ಜೂಟಾಟ ಕುತ್ತೆ
ಕಳುವಾಗದಿಹಳೆ ಮಾತೆ ? ||

ಉಂಡು ತಿಂದು ಲಾಲಿ
ಹಾಡುವಾಗ ಜೋಕಾಲಿ
ಕಂದ ಮಲಗೆಂದು ಹಾಡಿ
ಮಿಡಿದರದೆ ಕನ್ನಡ ದುಡಿ ||

ಟುಸು ಪುಸು ಜಗದಾಚೆ
ಜತೆ ಕೂತ ಆತ್ಮೀಯತೆ
ಬಚ್ಚಿಡದೆ ಬಿಚ್ಚಲಿ ಮಾತೆ
ಕನ್ನಡ ತಾಯಿಗೆ ಘನತೆ ||

- ನಾಗೇಶ ಮೈಸೂರು

Comments

Submitted by santhosha shastry Mon, 10/26/2015 - 23:32

ರಾಯರು "ನವೆಂಬರ್ ಕನ್ನಡಿಗರಿಗೆ" ಚಾಟಿಯನ್ನೇನೋ ಬೀಸಿದ್ದೀರಿ. ಆದರೆ ನಂ ಚರ್ಮ ದಪ್ಪದ್ದಲ್ವಾ, ಅದಕ್ಕೆ ಏನು ಮಾಡೋದು?

Submitted by nageshamysore Tue, 10/27/2015 - 20:10

In reply to by santhosha shastry

ಶಾಸ್ತ್ರಿಗಳೆ ನಮಸ್ಕಾರ. ನಾವೇನ್ ಕಮ್ಮಿನಾ ? ನಮ್ದು ಗಜ ಚರ್ಮ - ಇನ್ನು ಎಡವಟ್ಟು - ಅದಕ್ಕೆ ನಮ್ಮನ್ನು ಸೇರಿಸಿಯೆ ಬೀಸ್ಕೊಂಡಿರೋದು :-) ಆದ್ರು ಮುಕ್ಕಾಲುಪಾಲು ಕನ್ನಡಿಗರು ಮೃದು ಹೃದಯದವರಲ್ವಾ ? ಅವರಾದರು ಇಂಪ್ಲಿಮೆಂಟ್ ಮಾಡ್ಲಿ ಅಂತ ಆಶಿಸ್ತಾ ಅದನ್ನ ನೋಡಿ ನಮ್ಮ ದಪ್ಪ ಚರ್ಮಕ್ಕು ಸ್ವಲ್ಪ ಸ್ಪೂರ್ತಿ ಬರಲಿ ಅನ್ಕೊಳೋಣ ಅಲ್ವಾ? ಪ್ರತಿಕ್ರಿಯೆಗೆ ಧನ್ಯವಾದಗಳು :-)

Submitted by kavinagaraj Fri, 01/15/2016 - 15:44

ಕರ್ನಾಟಕದ ರಾಜಧಾನಿಯಲ್ಲಿ ಕನ್ನಡ ಅಂದರೆ ಎನ್ನಡ, ಎಕ್ಕಡ, ಕ್ಯಾ, ವ್ಹಾಟ್ ಅನ್ನುವ ಸ್ಥಿತಿ ಇದೆ. ಬದಲಾವಣೆ ಆಳುವವರಲ್ಲಿ ಮೊದಲು ಬರದೆ ಬದಲಾವಣೆ ದುಸ್ಸಾಧ್ಯ.

Submitted by nageshamysore Tue, 01/19/2016 - 09:12

In reply to by kavinagaraj

ಕವಿಗಳೆ ನಮಸ್ಕಾರ ಮತ್ತು ಧನ್ಯವಾದಗಳು. ನಮ್ಮ ಸುತ್ತಲಿನ ವಾತಾವರಣವನ್ನು ಹಾಗೆ ಮಾಡಿಟ್ಟುಬಿಟ್ಟಿದೆ ವ್ಯವಸ್ಥೆ. ಅದೇ ಚೀನಾ, ಥೈಲ್ಯಾಂಡ್, ಜಪಾನುಗಳಂತಹ ದೇಶಗಳಲ್ಲಿ ಎಲ್ಲವು ಅಲ್ಲಿನ ಭಾಷೆಯ ಅಧಿಪತ್ಯದಲ್ಲೆ ನಡೆಯುವ ಬಗ್ಗೆ ಕಂಡಾಗ ಖೇದವೂ ಆಗುತ್ತದೆ, ನಮ್ಮಲ್ಲೇಕೆ ಅಭಿಮಾನ್ಯ ಶೂನ್ಯರು ಹೆಚ್ಚು ಅನಿಸಿ :-(