ನದಿಯ ಒಡಲೊಳಗಿನ ಏಕಾಂತ ಮೌನ.
ಹರಿವ ನದಿಯ ಒಡಲೊಳಗೊಂದು
ಏಕಾಂತ ಮೌನ ಹಿಂಡಿ-ಹಿಪ್ಪೆ ಮಾಡುತ್ತಿದೆ.
ದಿನ ರಾತ್ರಿ ಚಂದ್ರನ ಬಿಂಬವ ಹಿಡಿದಿಟ್ಟು,
ದಕ್ಕಲಿಲ್ಲ ಎಂಬ ಕೊರಗಿನಲಿ,,,,,,,,,,
ಮುಗ್ದ ದಂಡೆಗಳವು, ಹರಿದು ಜರಿದು
ಮುನ್ನೆಡೆಯೊ ಸೆಳೆತಕ್ಕೆ, ಕಾವಲಾಗಿವೆ
ಸಿಕ್ಕದಿರುವ ಸಿಹಿ ನೀರ ಆಸರೆಗೆ,
ಎಂದೂ ಏನೂ ಬಯಸದೆ,,,, ಮಡಿಲಾಗಿ
ಸಿಕ್ಕ ಒಲವು, ಬಲವು ಎಲ್ಲವನೂ
ಹರಿವಿನೊಳಗಿನ ನೀರಿಗುಣಬಡಿಸಿ,
ತಲ್ಲಣಸಿ, ತಹತಹಿಸಿ, ಅದ್ಯಾರನೋ
ಅಪ್ಪುವ ತವಕದಲಿ, ಅಲೆಗಳು ತೆವಳುತ್ತಿವೆ
ಮೇಲೆ ಕಾಯುವ ಆಕಾಶ
ಕೆಳಗೊಂದು ಮಧುರ ಭೂಮಿ
ಪದೇ ಪದೇ, ಸ್ವಚ್ಚವಾದರೂ,
ತುಚ್ಚಗೊಳಿಸುವ ಹುಚ್ಚು ಜನ,
ಎಲ್ಲವನೂ ಬಚ್ಚಿಟ್ಟು ಹರಿಯುತ್ತಿದೆ
ನದಿಯ ಒಡಲೊಳಗಿನ ಏಕಾಂತ ಮೌನ.
ಮುಗ್ಧ ಮತ್ಸ್ಯ ವಾತ್ಸಲ್ಯದ,
ಗೌಪ್ಯತೆಯ ಚುಂಬನಕ್ಕೆ, ಬರಗಾಲದ
ಬಿಸಿ ತಟ್ಟಿ, ನೀರೆಲ್ಲ ಒಣಗಿ ಬಂಜರಾದಾಗ,
ಬಿಕ್ಕುತ್ತಿದೆ ನದಿಯ ಒಡಲೊಳಗಿನ
ಏಕಾಂತ ಮೌನ, ಕಣ್ಣೀರಿಗೂ ಬಡತನಬಂದು