ಹಾಗೊಂದು ಪ್ರತ್ಯುತ್ತರ ಬರೆದ ಪ್ರೀತಿಯ ಜಿಪುಣ ಬರಹಗಾರನ ಹೆಸರೇನು ಗೊತ್ತೆ...??

ಹಾಗೊಂದು ಪ್ರತ್ಯುತ್ತರ ಬರೆದ ಪ್ರೀತಿಯ ಜಿಪುಣ ಬರಹಗಾರನ ಹೆಸರೇನು ಗೊತ್ತೆ...??

ನಾನು ಆಗಷ್ಟೇ ವ್ಯಕ್ತಿತ್ವ ವಿಕಸನದ ಕುರಿತಾದ ಪುಸ್ತಕವೊಂದನ್ನು ಓದಿ ಮುಗಿಸಿದ್ದೆ. ಅದನ್ನು ಬರೆದವರು ನನ್ನ ಅತ್ಯಂತ ಪ್ರೀತಿಯ ಬರಹಗಾರರು.ಅಲ್ಲಿಯವರೆಗೂ ಆ ಖ್ಯಾತ ಲೇಖಕರ ಎಲ್ಲ ಬರಹಗಳನ್ನು ,ಕೈಗೆಟುಕಿದ ಪುಸ್ತಕಗಳನ್ನು ಓದಿ ಮುಗಿಸಿದ್ದ ನನ್ನಲ್ಲಿ ,ಅವರನ್ನು ಭೇಟಿಯಾಗುವ ಹೊಸದೊಂದು ಆಸೆ ಚಿಗುರೊಡೆದಿತ್ತು.ಅವರ ಬರಹದ ಮಾಂತ್ರಿಕತೆಯೇ ಅಂಥದ್ದು ಬಿಡಿ.ಅವರ ವ್ಯಕ್ತಿತ್ವ ವಿಕಸನದ ತತ್ವಗಳೂ ಆವತ್ತಿನ ಮಟ್ಟಿಗೆ ತೀರ ವಿಭಿನ್ನ ಚಿಂತನೆಗಳಾಗಿ ಗುರುತಿಸಲ್ಪಟ್ಟಿದ್ದವು. ವಿಚಿತ್ರವೆಂದರೆ ನನ್ನ ಇಂಜೀನಿಯರಿಂಗ್ ಪಠ್ಯವನ್ನೂ ಸಹ ಪಕ್ಕಕ್ಕೆ ಸರಿಸಿ,ನೆಚ್ಚಿನ ಲೇಖಕನ ಪುಸ್ತಕಗಳನ್ನೋದುತ್ತಿದ್ದ ನಾನು ಅದುವರೆಗೂ ಕನಿಷ್ಟ ಅವರದ್ದೊಂದು ಭಾವಚಿತ್ರವನ್ನೂ ನೋಡಿರಲಿಲ್ಲ.ಅಲ್ಲಿಯವರೆಗೆ ನಾನು ಓದಿದ ಯಾವುದೇ ಕೃತಿಯಲ್ಲಿಯೂ ಅವರ ಭಾವಚಿತ್ರ ಮುದ್ರಿತವಾಗಿರಲಿಲ್ಲ.ಇಷ್ಟು ಅದ್ಭುತವಾಗಿ ಬರೆಯುವ ಆತ ನೋಡಲು ಹೇಗಿರಬಹುದು ಎನ್ನುವ ಕುತೂಹಲ ನನಗೆ. ಅಲ್ಲೆಲ್ಲೋ ದೂರದ ಹೈದ್ರಾಬಾದಿನಲ್ಲಿ ವಾಸಿಸುವ ಆತನನ್ನು ಭೇಟಿಯಾಗುವುದಂತೂ ದೂರದ ಮಾತು ಕನಿಷ್ಟ ಪಕ್ಷ ಆತನ ಮುಖಾರವಿಂದದ ದರ್ಶನವನ್ನಾದರೂ ಮಾಡಬೇಕೆಂದು ನಿರ್ಧರಿಸಿದೆ.ಹಳ್ಳಿಯಲ್ಲಿಯೇ ಪದವಿಪೂರ್ವ ಶಿಕ್ಷಣವನ್ನು ಮುಗಿಸಿ ಅಭಿಯಂತರಿಕೆಯ ಪದವಿಗೆ ಸೇರಿಕೊಂಡ ನನಗೆ ಅಂತರ್ಜಾಲವೆನ್ನುವುದು ತೀರ ಹೊಸದು.ಸ್ನೇಹಿತರ ಸಹಾಯ ಪಡೆದುಕೊಳ್ಳೋಣವೆಂದರೇ ಅಹಂನ ಅಡ್ಡಿ.ತುಂಬ ಹೊತ್ತು ಯೋಚಿಸಿದ ನಾನು ಓದಿ ಮುಗಿಸಿದ ಪುಸ್ತಕದ ಹಿಂಬಾಗದಲ್ಲಿದ್ದ ಹೈದ್ರಾಬಾದಿನ ಲೇಖಕರ ವಿಳಾಸಕ್ಕೆ ಪತ್ರ ಬರೆಯಲು ನಿರ್ಧರಿಸಿದೆ.ಆಗ ಎದುರಾಗಿದ್ದು ಭಾಷೆಯ ಸಮಸ್ಯೆ.ಲೇಖಕರು ಮೂಲತ: ತೆಲುಗು ಸಾಹಿತ್ಯ ಕೃಷಿಕರು.ಅವರಿಗೆ ಕನ್ನಡ ಅರ್ಥವಾಗದು.ನನಗೋ ತೆಲುಗೆನ್ನುವುದು ಅನ್ಯಗ್ರಹ ಭಾಷೆಗೆ ಸಮಾನ.ಸರಿ ಇಂಗ್ಲೀಷಿನಲ್ಲಿ ಪತ್ರ ಬರೆಯೋಣವೆಂದರೆ,ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿದ್ದ ನಾನು ಹೈಸ್ಕೂಲಿನ ದಿನಗಳಲ್ಲಿ ಆಂಗ್ಲ ರಜಾಅರ್ಜಿಗಳನ್ನು ,ಪೋಷಕರ ನೆರವಿನೊಂದಿಗೆ ಬರೆದದ್ದನ್ನು ಬಿಟ್ಟರೆ ನನ್ನ ಇಂಗ್ಲೀಷ್ ಕೂಡ ಅಷ್ಟಕಷ್ಟೇ.ಏನು ಮಾಡುವುದೆಂದು ತಿಳಿಯದಂತಾಯಿತು.ಏನಾದರಾಗಲಿ ಇಂಗ್ಲೀಷಿನಲ್ಲಿಯೇ ಪತ್ರ ಬರೆಯುವುದಾಗಿ ನಿರ್ಧರಿಸಿದ ನಾನು ಗೆರೆ ಹಾಳೆಯೊಂದರ ಮೇಲೆ ನನಗೆ ಬರುತ್ತಿದ್ದ ಹರುಕು ಮುರುಕು ಇಂಗ್ಲೀಷಿನಲ್ಲಿಯೇ ಲೇಖಕರಿಗೆ ಬರೆಯಬೇಕೆಂದುಕೊಂಡ ಪತ್ರದ ಕರಡುಪ್ರತಿಯೊಂದನ್ನು ತಯಾರಿಸಿಕೊಂಡೆ.ಐದಾರು ಬಾರಿ ವ್ಯಾಕರಣದಲ್ಲಿರಬಹುದಾದ ದೋಷಗಳನ್ನು ಸ್ಪೆಲ್ಲಿಂಗಿನಲ್ಲಿನ ತಪ್ಪುಗಳನ್ನು ಆಂಗ್ಲ ನಿಘಂಟೊಂದನ್ನು ಆಧಾರವಾಗಿಟ್ಟುಕೊಂಡು ತಿದ್ದಿ ತೀಡಿ ಮುಗಿದ ನಂತರ ಸ್ವಚ್ಚ ಬಿಳಿಯ ಹಾಳೆಯೊಂದರ ಮೇಲೆ ನನ್ನ ಪತ್ರವನ್ನು ಇಳಿಸಿದೆ."ಮಾನ್ಯರೇ,ನಾನು ಇದುವರೆಗೂ ನನ್ನ ಕೈಗೆ ಸಿಕ್ಕ ನಿಮ್ಮ ಎಲ್ಲ ಪುಸ್ತಕಗಳನ್ನೂ ಓದಿ ಮುಗಿಸಿದ್ದೇನೆ.ನಿಮ್ಮ ದೊಡ್ಡ ಅಭಿಮಾನಿ ನಾನು.ನಿಮ್ಮ ಕತೆಗಳಾಗಲಿ ,ವ್ಯಕ್ತಿತ್ವ ವಿಕಸನದ ಬರಹಗಳಾಗಲಿ ನನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿವೆ.ತಮ್ಮಲ್ಲಿ ನನ್ನದೊಂದು ಸಣ್ಣ ಕೋರಿಕೆಯಿದೆ.ಸಾಕಷ್ಟು ಪುಸ್ತಕಗಳನ್ನೋದಿದರೂ ಇದುವರೆಗೂ ನಿಮ್ಮನ್ನು ನಾನು ನೋಡಿಯೇ ಇಲ್ಲ.ನನ್ನ ಅತ್ಯಂತ ನೆಚ್ಚಿನ ಲೇಖಕನನ್ನು ನೋಡುವ ಬಯಕೆ ನನ್ನದು.ದಯವಿಟ್ಟು ತಮ್ಮದೊಂದು ಭಾವಚಿತ್ರವನ್ನು ಹಸ್ತಾಕ್ಷರದೊಂದಿಗೆ ಕಳುಹಿಸಿಕೊಟ್ಟರೇ ನಾನು ಧನ್ಯ" ಎಂಬ ಎಡವಟ್ಟು ಒಕ್ಕೂರಣೆಯೊಂದಿಗೆ ಬರೆದಿದ್ದ ನನ್ನ ಇಂಗ್ಲೀಷ್ ಪತ್ರವನ್ನು,ಮೂರು ನಾಲ್ಕು ಸಾರಿ ಓದಿ ನೋಡಿ,ಯಾವುದೇ ದೋಷವಿಲ್ಲದೇ ಸರಿಯಾಗಿ ಮೂಡಿಬಂದಿದೆ ಎಂಬ ತೃಪ್ತಿಯ ನಂತರ ಮೂರು ರೂಪಾಯಿಯ ಕವರೊಂದಕ್ಕೆ ಹಾಕಿ,ಮೇಲೊಂದು ಹತ್ತು ರೂಪಾಯಿಯ ಸ್ಟಾಂಪು ಬಡಿದು.ಲೇಖಕರ ವಿಳಾಸವನ್ನು,ಪತ್ರ ರವಾನಿಸುತ್ತಿರುವ ನನ್ನ ವಿಳಾಸವನ್ನು ಎರಡೆರಡು ಬಾರಿ ಪರೀಕ್ಷಿಸಿ ,ಪೋಸ್ಟ್ ಡಬ್ಬಿಗೆ ಹಾಕಿ ಬಂದಿದ್ದೆ.ಹಾಗೆ ಪತ್ರವನ್ನು ಬರೆದ ಒಂದೆರಡು ದಿನಗಳಿಗೆಲ್ಲ ನನ್ನಲ್ಲೊಂದು ವಿಚಿತ್ರ ಕನವರಿಕೆ.ಅವರಿಂದ ಪತ್ರ ಬಂದಂತೆ,ಅದರಲ್ಲಿ ’With love from' ಎಂದು ಬರೆದು ರುಜು ಹಾಕಿದ ಅವರದ್ದೊಂದು ನಗುಮುಖದ ಭಾವಚಿತ್ರವಿದ್ದಂತೆ ಕನಸು.ಅಸಲಿಗೆ ಬಾಗಲಕೋಟೆಯಿಂದ ಹೈದ್ರಾಬಾದಿಗೆ ಪತ್ರವೊಂದು ತಲುಪಲು ಬೇಕಾಗುವ ದಿನಗಳೆಷ್ಟೋ ನನಗೆ ತಿಳಿಯದು.ವಾರವಾದರೂ ಲೇಖಕರಿಂದ ಉತ್ತರ ಬಾರದಿದ್ದಾಗ ನನ್ನಲ್ಲೊಂದು ಸಣ್ಣ ನಿರಾಸೆಯಾಗಿದ್ದಂತೂ ನಿಜ.ಸ್ವಲ್ಪ ದಿನಗಳಲ್ಲಿಯೇ ನಾನು ಪತ್ರದ ವಿಷಯವನ್ನು ಮರೆತುಹೋಗಿದ್ದೆ.ಆದರೆ ತಿಂಗಳ ನಂತರ ನನ್ನ ಹೃದಯದ ಬಡಿತವನ್ನು ಮತ್ತೊಮ್ಮೆ ಹೆಚ್ಚಾಗಿಸಿದ್ದು, ಕಾಲೇಜಿನ ದಾರಿಯಲ್ಲಿ ಸಿಕ್ಕ ನನ್ನ ಬಾಡಿಗೆ ಕೋಣೆಯ ಮಾಲೀಕ ’ನಿಮಗೆ ಹೈದ್ರಾಬಾದಿನಿಂದ ಪತ್ರ ಬಂದಿದೆ,ನಿಮ್ಮ ರೂಮಿನ ಕಿಟಕಿಯಲ್ಲಿ ಎಸೆದಿದ್ದೇನೆ ನೋಡಿ’ಎಂದಾಗ. ಲೇಖಕರ ಹೊರತಾಗಿ ಹೈದ್ರಾಬಾದಿನಿಂದ ಇನ್ಯಾರು ನನಗೆ ಪತ್ರ ಬರೆದಿರುವುದು ಶಕ್ಯವಿರಲಿಲ್ಲ.ಹಾಗಾಗಿ ಮನೆಯ ಮಾಲೀಕನಿಂದ ವಿಷಯ ಗೊತ್ತಾದೊಡನೆಯೇ ಕಾಲೇಜಿನ ಉಳಿದ ಪಿರಿಯೆಡ್ಡುಗಳಿಗೆ ಚಕ್ಕರ್ ಹೊಡೆದು ಓಡುತ್ತ ಹೋಗಿ ನನ್ನ ಕೊಣೆಯ ಕದವನ್ನು ತೆರೆದೆ.ಕಿಟಕಿಯ ಬಳಿಯಲ್ಲಿ ದೊಡ್ಡದೊಂದು ಲಕೊಟೆಯಿರಬಹುದೆಂದು ನಿರೀಕ್ಷಿಸಿದವನಿಗೆ ಸಿಕ್ಕಿದ್ದು ಸಣ್ಣದ್ದೊಂದು ಐವತ್ತು ಪೈಸೆಯ ಅಂಚೆಪತ್ರ."ಪ್ರೀತಿಯ ಗುರುರಾಜರಿಗೆ,ನಿಮ್ಮ ಪತ್ರ ಓದಿ ಸಂತೋಷವಾಯಿತು.ನನ್ನನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದೀರಿ. ’ನಂ.ಒನ್ ಆಗುವುದು ಹೇಗೆ’ ಎನ್ನುವ ಹೆಸರಿನ ನನ್ನ ಹೊಸ ಪುಸ್ತಕದ ಹಿಂಭಾಗದಲ್ಲಿ ನನ್ನ ಭಾವಚಿತ್ರವಿದೆ.ಅಲ್ಲಿ ತಾವು ನನ್ನ ವದನಾರವಿಂದದ ದರ್ಶನವನ್ನು ಮಾಡಬಹುದು.ಉಳಿದಂತೆ ಈ ಪತ್ರವನ್ನೇ ನನ್ನ ಆಟೋಗ್ರಾಫ್ ಎಂದುಕೊಳ್ಳುವುದು" ಎಂಬ ನಾಲ್ಕು ಸಾಲುಗಳ ಲೇಖಕರ ಉತ್ತರವನ್ನೋದಿದ ನನಗೆ ನಖಶಿಖಾಂತ ಉರಿದು ಹೋಗಿತ್ತು.ಅಭಿಮಾನಿಗಾಗಿ ಒಂದು ಭಾವಚಿತ್ರವನ್ನೂ ಕೂಡ ಕಳುಹಿಸದ ಈ ಜಿಪುಣ ಲೇಖಕರ ಪುಸ್ತಕಗಳನ್ನು ಮುಂದೆಂದೂ ಓದಬಾರದೆಂದುಕೊಂಡಿದ್ದೇನಾದರೂ ಅವರ ಪುಸ್ತಕಗಳ ರುಚಿಯ ಎದುರು ನನ್ನ ನಿರ್ಧಾರ ಮಂಡಿಯೂರಿ ಸೋಲನ್ನೊಪ್ಪಿಕೊಂಡಿತ್ತು.ಅವರ ಕೃಪಣತನಕ್ಕೆ ಆ ಕ್ಷಣಕ್ಕೆ ಕೋಪ ಬಂದಿದ್ದು ನಿಜವೇ ಆಗಿದ್ದರೂ ,ನಂತರದ ದಿನಗಳಲ್ಲಿ ಹಣದ ಕುರಿತಾದ,ವ್ಯವಹಾರಿಕತೆಯ ಕುರಿತಾದ ಅವರಫಿಲಾಸಫಿಗಳನ್ನೋದಿಕೊಂಡ ನಂತರ,ಆತ ತಾನು ಬರೆಯುವುದನ್ನೇ ಬದುಕುವ ಅಪರೂಪದ ಬರಹಗಾರರ ಪೈಕಿ ಒಬ್ಬಎಂಬುದು ಅರ್ಥವಾಗಿತ್ತು.ಅಂದ ಹಾಗೆ ನನಗೆ ಹೀಗೊಂದು ಪ್ರತ್ಯುತ್ತರ ಬರೆದ ನನ್ನ ಪ್ರೀತಿಯ ಜಿಪುಣ ಬರಹಗಾರನ ಹೆಸರು ಯಂಡಮೂರಿ ವೀರೇಂದ್ರನಾಥ..!

ಅದೊಂದು ಕಾಲವಿತ್ತು. ಯದ್ದನಪೂಡಿ ಸುಲೋಚನಾ ರಾಣಿಯಂತಹ ತೆಲುಗು ಭಾಷೆಯ ಮಹಿಳಾ ಕತೆಗಾರ್ತಿಯರು ಅಲ್ಲಿನ ಸಾಹಿತ್ಯಲೋಕದ ಮೇಲೆ ಪ್ರಭುತ್ವ ಸಾಧಿಸಿದ್ದ ದಿನಗಳವು.ಅನೇಕ ಪುರುಷ ಲೇಖಕರೂ ಸಹ ಮಹಿಳಾ ಗುಪ್ತನಾಮಗಳಲ್ಲಿಯೇ ಬರೆಯುವುದನ್ನು ಇಷ್ಟಪಡುತ್ತಿದ್ದರೆಂದರೇ ಸಾರಸ್ವತ ಲೋಕದ ಮೇಲಿನ ಮಹಿಳೆಯರ ಹಿಡಿತ ಇನ್ನೆಂಥದ್ದಿರಬೇಕು ಊಹಿಸಿ.ಅಂಥದ್ದೊಂದು ಕಾಲಘಟ್ಟದಲ್ಲಿ ಅಕ್ಷರ ಲೋಕದಲ್ಲಿನ ಮಹಿಳಾಪ್ರಭುತ್ವದ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತವರು ವೀರೆಂದ್ರನಾಥರು.ಎಂಬತ್ತರ ದಶಕದಲ್ಲಿ ತೆಲುಗಿನ ಖ್ಯಾತ ವಾರಪತ್ರಿಕೆಯಾಗಿರುವ ’ಆಂಧ್ರ ಜ್ಯೋತಿ’ಯಲ್ಲಿ ಪ್ರಕಟವಾದ ’ತುಳಸಿದಳಂ’ ಕಾದಂಬರಿ ಯಂಡಮೂರಿಯನ್ನು ಏಕಾಏಕಿ ಖ್ಯಾತಿಯ ಉತ್ತುಂಗಕ್ಕೆ ತಂದು ನಿಲ್ಲಿಸಿತ್ತು.ಅದೊಂದು ಕಾದಂಬರಿಯ ಪ್ರಖ್ಯಾತಿಯ ಸಂಚಲನ ಹೇಗಿತ್ತೆಂದರೆ ಮುಂದೆ ದಶಕಗಳ ಕಾಲ ದಕ್ಷಿಣ ಭಾರತೀಯ ಮನೋರಂಜಕ ಸಾಹಿತ್ಯ ಲೋಕವನ್ನು ಅಕ್ಷರಶ: ಆಳಿದವರು ಯಂಡಮೂರಿ .ಅಭಿಲಾಷೆ,ಪ್ರಾರ್ಥನಾ,ದುಡ್ಡುದುಡ್ಡು,ಬೆಳದಿಂಗಳ ಬಾಲೆಯಂತಹ ಕಾದಂಬರಿಗಳು ವೀರೆಂದ್ರನಾಥರ ಕೀರ್ತಿಯನ್ನು ಇನ್ನಷ್ಟು ಬೆಳಗಿದವು.ಕಾದಂಬರಿ ಲೋಕವನ್ನಾಳಿದ ಅವರು ಕೆಲಕಾಲದ ನಂತರ ವ್ಯಕ್ತಿತ್ವ ವಿಕಸನ ಸಾಹಿತ್ಯದತ್ತ ಮುಖಮಾಡಿದರು.ವಿಚಿತ್ರವೆಂದರೆ ಯಶಸ್ವಿ ಕಾದಂಬರಿಗಳ ಬರಹಗಾರನಾಗಿದ್ದ ವೀರೆಂದ್ರನಾಥರು ಬರೆದ ’ವಿಜಯಕ್ಕೆ ಐದು ಮೆಟ್ಟಿಲು’ ಎನ್ನುವ ಕೃತಿಯೂ ಕೂಡ ಅವರಿಗೆ ಯಶಸ್ಸಿನ ಹೊಸ ಅಲೆಯೊಂದನ್ನು ಸೃಷ್ಟಿಸಿಕೊಟ್ಟಿತು.ಅಂದಿನ ಕಾಲಕ್ಕೆ ಸುಮಾರು ಎರಡು ಕೋಟಿ ರೂಪಾಯಿಗಳಷ್ಟು ಮೌಲ್ಯದ ಕೃತಿಗಳು ಬಿಕರಿಯಾಗುವ ಮೂಲಕ ಯಂಡಮೂರಿಯೆನ್ನುವ ಕಾದಂಬರಿಕಾರ ,ಕೇವಲ ಪತ್ತೇದಾರಿ ಕಾದಂಬರಿಗಳನ್ನು ಮಾತ್ರವಲ್ಲ,ವಿಭಿನ್ನ ಪ್ರಕಾರದ ಸಾಹಿತ್ಯಗಳನ್ನೂ ಕೂಡ ಬರೆಯಬಲ್ಲ ಅಕ್ಷರ ಮಾಂತ್ರಿಕ ಎಂಬುದನ್ನು ನಿರೂಪಿಸಿತು.ಅನೇಕ ಸಿನಿಮಾ,ಟಿವಿ ಧಾರಾವಾಹಿಗಳಿಗೂ ಸಾಹಿತ್ಯ ಸೃಷ್ಟಿಸಿರುವ ಯಂಡಮೂರಿ ಪ್ರಸ್ತುತಕ್ಕೆ ತೆಲುಗಿನ ಪ್ರಸಿದ್ದ ದಿನಪತ್ರಿಕೆಯಾಗಿರುವ ’ಸಾಕ್ಷಿ’ಯಲ್ಲಿ ಭಾನುವಾರದ ಪುರವಣಿಗೆ ಕಾದಂಬರಿಯೊಂದನ್ನು ಬರೆಯುವಲ್ಲಿ ನಿರತರಾಗಿದ್ದಾರೆ.ಬಹುಶ: ತಮ್ಮ ಬರವಣಿಗೆಯ ಯಕ್ಷಿಣಿಯಿಂದ ಯಂಡಮೂರಿಯವರಷ್ಟು ಯಶಸ್ಸು,ಸಂಪತ್ತು ಗಳಿಸಿದ ದಕ್ಷಿಣ ಭಾರತೀಯ ಸಾಹಿತಿ ಮತ್ತೊಬ್ಬರಿಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.

ಗಟ್ಟಿಯಾದ ಕಥಾವಸ್ತು,ಒಬ್ಬ ಬುದ್ದಿವಂತ ನಾಯಕ,ಅವನಿಗಿಂತ ಬುದ್ದಿವಂತ ನಾಯಕಿ,,ನಡುನಡುವೆ ಇಣುಕುವ ವಾಸ್ತವವಾದ, ಕೆಲವೊಮ್ಮೆ ಓದುಗನ ಬುದ್ದಿಮತ್ತೆಯನ್ನು ಪರೀಕ್ಷಿಸುವ ಗಣಿತದ ತರ್ಕಗಳು, ಎರಡು ಪುಟಗಳಿಗೊಮ್ಮೆ ಸಿಗುವ ಅನಿರೀಕ್ಷಿತ ತಿರುವುಗಳು ಮತ್ತು ಪುಟದಿಂದ ಪುಟಕ್ಕೆ ಸಾಗುವ ಪತ್ತೆದಾರಿ ಶೈಲಿಯ ಓಘ ಇವಿಷ್ಟು ಯಂಡಮೂರಿಯವರ ಕಾದಂಬರಿಯ ಯಶಸ್ಸಿನ ಸರಕುಗಳು. ಬರೆಯಬೇಕಾದ ವಸ್ತುವಿನ ಬಗ್ಗೆ ಅವರು ನಡೆಸುವ ಸಂಶೋಧನೆಯಂತೂ ಅದ್ಭುತವೇ ಸರಿ.ಕೆಲವೊಮ್ಮೆ ’ಇಷ್ಟೆಲ್ಲ ವಿವರಣೆ ಇವರಿಗೆಲ್ಲಿ ಸಿಗುತ್ತದಪ್ಪಾ’ಎಂದೆನಿಸುವುದು ಸುಳ್ಳೇನಲ್ಲ.ವ್ಯಕ್ತಿತ್ವ ವಿಕಸನದ ಬರಹಗಳ ಬಗ್ಗೆ ಹೇಳುವುದಾದರೆ ಯಂಡಮೂರಿಯದ್ದು ಪಕ್ಕಾ ಯದಾರ್ಥವಾದ.ಅಲ್ಲಿ ಭಾವುಕತೆಗೆ ಅವಕಾಶವಿಲ್ಲ.ಅತಿಯಾದ ಒಳ್ಳೆಯತನ, ಸಮಾನತೆಯ ಅತಿರೇಕದ ಪ್ರತಿಪಾದನೆಯ ತತ್ವಗಳು ಅವರಿಗೆ ನಗೆಪಾಟಿಲಿನ ವಸ್ತುಗಳು.ಹಣದ ಮೋಹ ಹೋಗಬೇಕು ಎಂದು ಬರೆಯುತ್ತಲೇ ಲಕ್ಷಾಂತರ ರೂಪಾಯಿಗಳನ್ನು ಗಳಿಸಿದ ಲೇಖಕರ ನಡುವೆ ’ಹಣ ನಮಗೆ ಸುಖ ನೀಡುವುದಿಲ್ಲ ನಿಜ.ಆದರೆ ಮನುಷ್ಯ ಪ್ರಪಂಚದ 90% ಸಂತೋಷಗಳೆಲ್ಲವೂ ದುಡ್ಡಿನಿಂದಬರುವಂಥದ್ದೇ’ಎಂದು ಬರೆದವರಲ್ಲಿ ಮೊದಲಿಗರು ಯಂಡಮೂರಿ. ಆಗಲೇ ಹೇಳಿದಂತೆ ಬರೆದಂತೆಯೇ ಬಾಳುತ್ತಿರುವ ಲೇಖಕ ಅವರೆಂಬುದು ನನ್ನ ವೈಯಕ್ತಿಕ ಅನುಭವ.

ಖ್ಯಾತನಾಮ ಆಂಗ್ಲ ಸಾಹಿತಿಗಳಿಂದ ಕೃತಿಚೌರ್ಯ ಮಾಡುತ್ತಾರೆನ್ನುವುದು ಯಂಡಮೂರಿಯ ಬಗೆಗಿರುವ ಒಂದು ಆಪಾದನೆ.ಸ್ವತ: ವೀರೆಂದ್ರನಾಥರ ಬಹುದೊಡ್ಡ ಅಭಿಮಾನಿಯಾಗಿ ನಾನು ಇಂಥದ್ದೊಂದು ಅಪಾದನೆಯ ಬಗ್ಗೆ ಕೊಂಚ ವಿವರಿಸುವುದೊಳಿತು.ಅವರ ಅನೇಕ ಕೃತಿಗಳಲ್ಲಿ ಸಮಕಾಲೀನ ಆಂಗ್ಲ ಕಾದಂಬರಿಗಳ ಗಾಢ ಛಾಯೆ ಗೋಚರಿಸುವುದಂತೂ ಹೌದು.ಅವರ ’ತುಳಸಿದಳಂ’ಕಾದಂಬರಿಯಲ್ಲಿ ಆವತ್ತಿಗೆ ಆಂಗ್ಲ ಕಾದಂಬರಿಯ ಲೋಕದಲ್ಲಿ ಹೊಸದೊಂದು ಸಂಚಲನವನ್ನೇ ಸೃಷ್ಟಿಸಿದ್ದ ವಿಲಿಯಂ ಪೀಟರ್ ಬ್ಲಾಟಿಯ ’ದಿ ಎಕ್ಸಾರ್ಸಿಸ್ಟ್’ನ ಹೋಲಿಕೆಗಳು ಅತಿಯೆನ್ನುವಷ್ಟು ಗೋಚರಿಸುತ್ತವೆ.’ಪ್ರಾರ್ಥನಾ’ ಕಾದಂಬರಿಯ ಪ್ರಾರ್ಥನಾಳ ಕತೆ, ಅಮೇರಿಕನ್ ಕಾದಂಬರಿಕಾರ ರಾಬಿನ್ ಕುಕ್ ಬರೆದ ’ಫೀವರ್’ಕಾದಂಬರಿಯ ಮಿಶೆಲ್ ಮಾರ್ಟೆಲ್ ಳ ಕತೆಯಂತೆಯೇ ಭಾಸವಾಗುತ್ತದೆ.’ಅಂತರ್ಮುಖಂ’ ಎನ್ನುವ ಹೆಸರಿನ ಕಾದಂಬರಿ ಕೂಡ ಫ್ರೆಂಚ್ ಸಾಹಿತ್ಯಲೋಕದ ದಂತಕತೆಯೆನಿಸಿಕೊಂಡಿರುವ ಆಲ್ಬರ್ಟ್ ಕ್ಯಾಮುವಿನ ’ಔಟಸೈಡರ್’ಮತ್ತು ಜರ್ಮನ್ ದಂತಕತೆ ಫ್ರಾಂಝ್ ಕಾಫ್ಕಾನ ’ಮೆಟಾಮಾರ್ಫಸಿಸ್’ನ ಮಿಶ್ರಣದಂತಿದೆ ಎನ್ನುವುದು ಮೂಲ ಆಂಗ್ಲ ಕಾದಂಬರಿಗಳನ್ನೋದದ ಓದುಗನಿಗೆ ಅರ್ಥವಾಗಲಿಕ್ಕಿಲ್ಲ.ತೀರ ಇತ್ತೀಚೆಗೆ ಅವರ ’ಅಭಿಲಾಷಾ’ಎನ್ನುವ ಕಾದಂಬರಿಯೂ 1956ರ ’Beyond A Reasonable Doubt’ಎನ್ನುವ ಡಗ್ಲಾರ್ಸ್ ಮಾರೋ ವಿರಚಿತ ಆಂಗ್ಲ ಸಿನಿಮಾದ ಹೂಬೆಹೂಬು ನಕಲಿನಂತಿದೆ ಎಂಬ ವಿವಾದಗಳೆದ್ದಿದ್ದವು.ಇಷ್ಟೆಲ್ಲ ವಿವಾದಗಳಿದ್ದರೂ, ಭಾರತೀಯ ಮಣ್ಣಿನ ಸೊಗಡಿಗೆ ತಕ್ಕಂತೆ ಮರುಸೃಷ್ಟಿಸಲ್ಪಟ್ಟ ಕೃತಿಗಳನ್ನು ಯಾವುದೋ ಪ್ರಸಿದ್ದ ಕೃತಿಗಳ ಕಳಪೆ ನಕಲುಗಳು ಎಂದೊಪ್ಪಿಕೊಳ್ಳುವುದುಖಂಡಿತವಾಗಿಯೂ ಕಷ್ಟವೇ. ಟೀಕಾಕಾರರು ಒಪ್ಪದಿದ್ದರೂ ,ಕಮರ್ಶಿಯಲ್ ಸಾಹಿತ್ಯವೆನ್ನುವುದು ಸಾಹಿತ್ಯವೇ ಅಲ್ಲ ಎಂದು ವಾದಿಸುವ ವಿಲಕ್ಷಣವಾದಿಗಳು ಟೀಕಿಸಿದರೂ ಸಹ ಒಂದಿಡೀ ಸಮುದಾಯವನ್ನು ತಮ್ಮ ಹಿಡಿದಿಟ್ಟುಕೊಳ್ಳುವ ಕಥಾಶೈಲಿಯ ಮೂಲಕ ಸಾಹಿತ್ಯಲೋಕದತ್ತ ಆಕರ್ಷಿಸಿದವರು ಯಂಡಮೂರಿ ವೀರೆಂದ್ರನಾಥರು ಎನ್ನುವುದಂತೂ ಸತ್ಯ. ತುಂಬ ಸಲ ನಾನೂ ಸಹ ಅವರಂತೆಯೇ ಕತೆಗಳನ್ನು ಬರೆಯಲು ಪ್ರಯತ್ನಿಸಿದ್ದಿದೆ.ಅಪರೂಪಕ್ಕೊಮ್ಮೆ ಗೆಳೆಯರು ’ನೀನು ಯಂಡಮೂರಿಯಂತೆಯೇ ಕತೆ ಬರಿತೀಯಾ ಕಣೋ’ ಎಂದಾಗಲಂತೂ ನನಗೆ ಸ್ವರ್ಗಕ್ಕೆ ಮೂರೇ ಗೇಣು.ಇದೇ ನವೆಂಬರ ಹದಿನಾಲ್ಕರಂದು ನನ್ನ ಮೆಚ್ಚಿನ ಭಾರತೀಯ ಕತೆಗಾರನಿಗೆ ಅರವತ್ತಾರರ ಹರೆಯದ ಸಂಭ್ರಮ.ಹಾಗಾಗಿ ಇದನ್ನೆಲ್ಲ ನಿಮಗೆ ಹೇಳಬೇಕೆನಿಸಿತು.

Comments

Submitted by kavinagaraj Sun, 01/17/2016 - 11:34

ನಾನೂ ಸಹ ಯಂಡಮೂರಿ ವೀರೇಂದ್ರನಾಥರ ಅಭಿಮಾನಿ. ಅವರ ನಂ. 1 ಆಗುವುದು ಹೇಗೆ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿದ್ದಾಗ ಅದನ್ನು ಕತ್ತರಿಸಿಟ್ಟುಕೊಂಡು ಜೆರಾಕ್ಸ್ ಮಾಡಿಸಿ ಕೊನೆಗೆ ಬೈಂಡ್ ಮಾಡಿಸಿ ನನ್ನ ಮಗನಿಗೆ ಓದಲು ಕೊಟ್ಟಿದ್ದೆ. ಪ್ರಕಟಿತ ಪಸ್ತಕವನ್ನೂ ಮುಂದೊಮ್ಮೆ ಕೊಂಡುಕೊಂಡಿದ್ದೆ. ವ್ಯಾವಹಾರಿಕವಾಗಿ ಮತ್ತು ಸಂಬಂಧಗಳನ್ನು ಉಳಿಸಿಕೊಂಡು ಮುಂದೆ ಬರುವ ರೀತಿಯ ಬಗ್ಗೆ ಅವರ ವಿಚಾರಲಹರಿ ಮನಕ್ಕೆ ಹಿಡಿಸುತ್ತದೆ. ಒಳ್ಳೆಯ ಲೇಖನಕ್ಕೆ ಅಭಿನಂದನೆಗಳು.

ಯಂಡಮೂರಿ ವೀರೇಂದ್ರನಾಥ್ ಅವರ ಕೆಲ ಕಾದಂಬರಿಗಳನ್ನು ನಾನು ಕನ್ನಡ ಅನುವಾದದಲ್ಲಿ (ಯತಿರಾಜ್ ವೀರಾಬುಂಧಿ ಮತ್ತಿತರರು ಅನುವಾದಿಸಿದ್ದು) ಓದಿರುವೆ ಹಾಗೆಯೇ ಅವರ ಮೂಲ ತೆಲುಗು ಬರಹಗಳು ಹೇಗಿರಬಹುದು ಎಂದು ತೆಲುಗಲ್ಲೂ ಓದಿದ್ದೆ..ಅವರು ಬರೆದ ಅಂಕಿತ ಎನ್ನುವ ಕಾದಂಬರಿ ನನಗೆ ಇಸ್ಟ. ನೀವು ಹೇಳಿದ ಹಾಗೆ ಅವರೊಬ್ಬ ಸಕಲ ಕಲಾ ವಲ್ಲಭ..ಸಿನೆಮಾ ಧಾರಾವಾಹಿ ,ಕಥೆ ಚಿತ್ರ ಕಥೆ ,ವ್ಯಕ್ತಿತ್ವ ವಿಕಸನ ಹೀಗೆ ಎಲ್ಲ ಪ್ರಕಾರಗಳಲ್ಲಿ ಪರಿಣಿತರು. ಕಾದಂಬರಿಗಳು ಇನ್ನೂ ಓದುವವರು ಇರುವಾಗಲೇ ಅದು ಬರೆಯೋದು ಬಿಟ್ಟು -ವ್ಯಕ್ತಿತ್ವ ವಿಕಸನ ಮತ್ತು ಷೇರು ಮಾರುಕಟ್ಟೆಗೆ ಲಗ್ಗೆ ಇಟ್ಟವರು..!! ಅವರ ಮಂತರ ತಂತ್ರ ಕುರಿತ ತುಳಸಿಧಳ ನನಗೇನೋ ಅದ್ಭುತ ಅನ್ನಿಸಲಿಲ್ಲ .ಅದ್ಕೆ ಕಾರಣ ಅದ್ಕೆ ಮೊದಲೇ ನಾ ಕನ್ನಡದ ಕೌಂಡಿನ್ಯ ಅವರ ಎಲ್ಲ ವಿಧವಾದ ಬರಹ ಓದಿದ್ದು ಕಾರಣ ಇರ್ಬೇಕು.. ನಿಮ್ಮ ಹಾಗೆಯೇ ನಾನೂ ಕೌಂಡಿನ್ಯ ಆವ್ರಿಗಾಗಿ ಅದೇ ತ್ರಾಸು ಪಟ್ಟೆ..!! ಜೀಪುಣೆ0ದ್ರ ನಾಥ್ ಅವರು.,...!!
ಶುಭವಾಗಲಿ
\\\|||||///