ಈ ಕ್ಷಣವಷ್ಟೇ ವಾಸ್ತವ ಅದನ್ನು ಆನಂದದಿಂದ ಜೀವಿಸಬೇಕು.
ಈ ಬದುಕು ಎಂಬ ಸಮರದಲ್ಲಿ ಎಷ್ಟೇ ಪೆಟ್ಟು ತಿಂದಿದ್ದರೂ,ಎಷ್ಟೇ ನೋವು ಅನುಭವಿಸಿದ್ದರೂ ಸಹ ಬದುಕಬೇಕು ಎಂಬ ಛಲ ಯಾವತ್ತೂ ಕಡಿಮೆಯಾಗಬಾರದು! ಎಂತಹದೆ ಪರಿಸ್ಥಿತಿ ಇರಲಿ,ಮತ್ಯಾವುದೋ ಕಷ್ಟವಿರಲಿ ಏನೇ ಆದರೂ ಬದುಕಬೇಕು ಬದುಕನ್ನು ಅರಳಿಸಿಕೊಳ್ಳಬೇಕು ಅಲ್ಲವೇ?!
ಪರಿಸ್ಥಿತಿಗಳು ಯಾವತ್ತೂ ಒಂದೇ ರೀತಿಯಲ್ಲಿ ಇರುವುದಿಲ್ಲ. ಕಾಲದೊಂದಿಗೆ ಅವೆಲ್ಲವೂ ಬದಲಾಗುತ್ತಾ ಹೋಗುತ್ತವೆ ಎಂಬುದನ್ನು ನಾವು ಮರೆಯಬಾರದು.
ಈ ಜೀವನವೇ ಸಾಕಾಗಿದೆ?! ಯಾಕಪ್ಪಾ ಈ ಬದುಕು? ಎನ್ನುವ ನಿರಾಶಾದಾಯಕ ನುಡಿಗಳನ್ನು ಕೆಲವರು ಆಡುತ್ತಿರುತ್ತಾರೆ. ಅಸಲಿಗೆ ಅವರಿಗೆ ಬದುಕು ಎಂದರೆ ದೊಡ್ಡ ಗುಡ್ಡ ಇನ್ಯಾವುದೋ ಹತ್ತಲಾರದ ಎವರೆಸ್ಟ್ ಶಿಖರವಿದ್ದಂತೆ ಎಂದುಕೊಂಡವರವರು!
ಅವರು ತಾವಷ್ಟೇ ನಿರಾಶಾದಾಯಕತನಕ್ಕೆ ತುತ್ತಾಗುವುದಲ್ಲದೇ ಬೇರೆಯವರನ್ನು ಅದೇ ಪ್ರಪಾತಕ್ಕೆ ತಳ್ಳುವ ಪ್ರಮೇಯವುಳ್ಳವರಾಗಿರುತ್ತಾರೆ.ಬೇರೆ ಕೆಲಸವಾದರೂ ಏನಿದೆ ಅವರದು? ಅಲ್ಲವೇ..
ಹ್ಞೂಂ,ಇದೆ. ಅವರು ಮೊದಲು ಬದಲಾಗಬೇಕು. ತಮ್ಮ ನೋವು,ಹತಾಶೆ,ದುಃಖ,ಖಿನ್ನತೆ ಮತ್ತು ನಿರಾಶಾದಾಯಕತನದಿಂದ ಹೊರಬರಬೇಕು ಅದು ಅವರ ಮೊದಲ ಕೆಲಸವಾಗಬೇಕು.
ನಿಮಗೊಂದು ನಡೆದುಹೋದ ಜೀವಂತ ಕಥೆಯನ್ನು ಹೇಳುತ್ತೇನೆ. ಕಿವಿಗೊಟ್ಟು ಕೇಳಿ, ಮನಸ್ಸುಗೊಟ್ಟು ಆಲಿಸಿ .
ಅದು ಮಿಚಿಗನ್ ಮೇಡಂ ಇ.ಕೆ.ಶೀಲ್ಡ್ ಳ ಕಥೆ. ಹತಾಶೆ ಅವಳನ್ನು ಆತ್ಮಹತ್ಯೆಯ ಹೆಬ್ಬಾಗಿಲಿನವರೆಗೂ ಕರೆದುಕೊಂಡು ಹೋದಾಗ ಅವಳು ಅದರಿಂದ ಹೊರಬಂದು ಪರಿ ಬಲು ಅದ್ಭುತ ಹಾಗೂ ರೋಮಾಂಚನಕಾರಿಯಾಗಿದೆ.
ತನ್ನ ಗಂಡನ ಜೊತೆ ಸುಖವಾಗಿದ್ದ ಅವಳು ಅದೊಂದಿನ ಆಘಾತವಾಗಿಬಿಟ್ಟಿತು.
1937 ರಲ್ಲಿ ಆಕೆ ತನ್ನ ಗಂಡನನ್ನು ಕಳೆದುಕೊಂಡು ಬಿಟ್ಟಳು. ಮಾನಸಿಕವಾಗಿ ಜರ್ಜರಿತಳಾದಳು. ತನ್ನ ಸರ್ವಸ್ವ ಹಾಗೂ ತನ್ನ ಬದುಕೇ ಆಗಿದ್ದ ಗಂಡನನ್ನು ಕಳೆದುಕೊಂಡ ಮೇಲೆ ಅವಳಿಗಾದ ದುಃಖವನ್ನು ಶೋಕಗೀತೆಯಿಂದಲೂ ಸಾಭೀತುಪಡಿಸಲು ಆಗದು ಅಷ್ಟೊಂದು ನೋವು ಅವಳಲ್ಲಿ ಮನೆ ಮಾಡಿತ್ತು.
ಪ್ರತಿದಿನವನ್ನು ಸಂತಸದಿಂದ ಕಳೆಯುತ್ತಿದ್ದ ಆ ದಂಪತಿಗಳು ಭವಿಷ್ಯದ ದೃಷ್ಟಿಯಿಂದ ಯಾವುದೇ ಹಣವನ್ನು ಕೂಡಿಸಿ ಇಟ್ಟಿರಲಿಲ್ಲ.
ವಿಧಿ ಎಂತಹ ಆಟ ಆಡಿತು ನೋಡಿ? ಅವಳಲ್ಲಿ ಈಗ ಬಿಡಿಗಾಸೂ ಇರಲಿಲ್ಲ ಮುಂದಿನ ಬದುಕು ಸಾಗಿಸುವುದು ದೊಡ್ಡ ಪ್ರಶ್ನೆಯಾಗಿತ್ತು?!
ಅವಳ ಗಂಡ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ಅವಳಲ್ಲಿ ಕಾರನ್ನು ಸಹ ಗಂಡನ ಚಿಕಿತ್ಸೆಗಾಗಿ ಮಾರಿಬಿಟ್ಟಿದ್ದಳು. ಈಗ ಅವಳದೆಂದೂ ಏನೂ ಕೂಡ ಉಳಿದಿರಲಿಲ್ಲ.
ಅಲ್ಲಿ ಇಲ್ಲಿ ಕೆಲಸ ಕೇಳಿದಳು ಯಾರೂ ಕೂಡ ಆಕೆಗೆ ಕೆಲಸ ಕೊಡಲಿಲ್ಲ. ಗಂಡ ಸತ್ತ ಹೆಂಗಸು ಅಂತ ತುಂಬ ಕೆಟ್ಟದೃಷ್ಟಿಯಿಂದ ಅವಳನ್ನು ಸಮಾಜ ನೋಡಲಾರಂಭಿಸಿತು.
ಅವಳ ದುಃಖದ ಕಟ್ಟೆ ಒಡೆಯಿತು.ಅದೊಂದಿನ ಬಿಕ್ಕಿ ಬಿಕ್ಕಿ ಅತ್ತು ಬಿಟ್ಟಳು. ಕೆಲಸ ಸಿಕ್ಕರೆ ಶಾಂತಿ ನೆಮ್ಮದಿ ಸಿಕ್ಕು ಹತಾಶೆ ನಿರಾಶೆ ದೂರವಾಗಬಹುದು ಎಂಬುದು ಅವಳ ಆಲೋಚನೆಯಾಗಿತ್ತು.ಅದೃಷ್ಟವಶಾತ್ ಮುಂದೆ ಯಾವುದೋ ಒಬ್ಬ ಪುಣ್ಯಾತ್ಮ ಆಕೆಯ ಕಷ್ಟ ನೋಡಲಾರದೆ ಒಂದು ಕೆಲಸ ಕೊಟ್ಟ ಅಲ್ಲಿ ಪ್ರತಿದಿನ ಕಷ್ಟಪಟ್ಟು ದುಡಿದಳು.
ದುಡಿದ ಹಣ ಮತ್ತು ಅಲ್ಲಿ ಇಲ್ಲಿ ಸಾಲ ಪಡೆದುಕೊಂಡು ಕಂತಿನ ಮೇಲೆ ಒಂದು ಹಳೆಯ ಕಾರು ಖರೀಧಿಸಿಬಿಟ್ಟಳು.
ಅದರ ಸಹಾಯದಿಂದ ಪುಸ್ತಕ ಮಾರಾಟ ಮಾಡುವುದು ಅವಳ ದಿನನಿತ್ಯದ ಕಾಯಕವಾಗಿತು. ಅದು ಕೂಡ ಅಷ್ಟು ಸರಳವಾಗಿರಲಿಲ್ಲ.ಅವಳು ಎಷ್ಟೇ ದೂರದ ತನಕ ಹೋದರೂ ಸಹ ಅಷ್ಟೊಂದು ಪುಸ್ತಕಗಳು ಮಾರಾಟವಾಗುತ್ತಿರಲಿಲ್ಲ.ಆದಾಯವೂ ಸಾಕಷ್ಟು ಬರತೊಡಗಲಿಲ್ಲ.ಕಾರಿನ ಉಳಿದ ಕಂತು ಕಟ್ಟುವುದು ದುಸ್ಸಾದ್ಯವೆನಿಸತೊಡಗಿತು. ಒಂಟಿಯಾಗಿ ಕಾರು ಚಲಿಸಿಕೊಂಡು ಪುಸ್ತಕ ಮಾರಾಟ ಮಾಡಲು ಹೋಗುವುದು, ಒಂಟಿಯಾಗಿ ಊಟ ಮಾಡುವುದು ಇವೆಲ್ಲವೂ ಅವಳಲ್ಲಿ ತುಂಬ ಬೇಸರವನ್ನು ಹುಟ್ಟುಹಾಕಿದ್ದವು.
ಗಂಡನೊಂದಿಗೆ ಕೂಡಿ ಕಳೆದ ಆ ಸಂತಸದ ದಿನಗಳನ್ನು ನೆನಪಿಸಿಕೊಂಡು ಮತ್ತಷ್ಟು ದುಃಖ ಅವಳಲ್ಲಿ ಉಮ್ಮಳಿಸಿ ಬರುತ್ತಿತ್ತು.
ಹತಾಶೆಯು ಅವಳನ್ನು ತೀವ್ರವಾಗಿ ಕಾಡತೊಡಗಿತು ಅದು ಎಷ್ಟೆಂದರೆ ಆತ್ಮಹತ್ಯೆಯ ಮಾಡಿಕೊಳ್ಳುವ ತನಕ ಅವಳ ಹತಾಶೆಯು ಬಲವಾಗುತ್ತಾ ಹೋಯಿತು.ಅವಳೆನ್ನುವುದು ಏನೂ ಅವಳ ಬದುಕಿನಲ್ಲಿ ಇರಲಿಲ್ಲ. ಈ ಬದುಕನ್ನು ಎದುರಿಸುವುದೇ ದೊಡ್ಡ ಭಯವಾಗಿತ್ತು.
ಕಾರಿನ ಕಂತು ತೀರಿಸುವ ಮತ್ತು ಮನೆ ಬಾಡಿಗೆ ಕಟ್ಟುವ ವಿಷಯವಾಗಿ ಹಲವಾರು ಪ್ರಶ್ನೆಗಳು ಆಕೆಯ ತಲೆಯನ್ನು ಕೊರೆಯುತ್ತಿದ್ದವು. ಒಂದು ಕಡೆ ಹಸಿದ ಹೊಟ್ಟಯನ್ನು ತುಂಬಿಸಿಕೊಳ್ಳಲು ಕಷ್ಟವಾಯಿತು. ಅನಾರೋಗ್ಯಕ್ಕೆ ಈಡಾದರಂತೂ ವೈದ್ಯರ ಬಳಿ ಹೋಗಲು ಕವಡೆ ಕಾಸು ಸಹ ಇರಲಿಲ್ಲ. ಹೀಗೆ ಪ್ರತಿ ವಿಷಯದಲ್ಲಿ ಅವಳಿಗೆ ಭಯ. ..ಭಯ....ಭಯ....ಕಾಡುತ್ತಾ ಹೋಗಿ ಸಿಕ್ಕರೆ ತೋಚದಂತಾಯಿತು!
ಅದೊಂದಿನ ಹುಚ್ಚು ಧೈರ್ಯ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದಳು.ಇನ್ನೇನು ಕೆಲವೇ ನಿಮಿಷಗಳಲ್ಲಿ ಅವಳು ಆತ್ಮಹತ್ಯೆಗೆ ಶರಣಾಗುವ ಮುನ್ನ ಅವಳಲ್ಲಿ ಕೆಲವು ಯೋಚನೆಗಳು ಕಾಡಿದವು.
ಆತ್ಮಹತ್ಯೆ ಮಾಡಿಕೊಂಡರೆ ತನ್ನ ತಂಗಿಯನ್ನು ನೋಡಿಕೊಳ್ಳುವರಾರು? ಅವಳು ಹೇಗೆ ಬದುಕಬೇಕು? ಅವಳು ಕೊರಗಿ ಕೊರಗಿ ಹುಚ್ಚಿಯಾದರೆ? ಅಥವಾ ಅವಳು ಸತ್ತಾಗ ಶವಸಂಸ್ಕಾರಕ್ಕೆ ಹಣವೂ ಇಲ್ಲದ ಇಂತಹ ಹೀನ ಪರಿಸ್ಥಿತಿಯಲ್ಲಿ ತಾನು ಸತ್ತು ಸಾಧಿಸುವುದಾದರೂ ಏನು? ಎಂಬ ಆಲೋಚನೆಗಳು ಆತ್ಮಹತ್ಯೆಯಿಂದ ಹಿಂದುರಿಗಿಸಿದವು. ಈ ಆಲೋಚನೆಗಳಿಗೆ ಉತ್ತರ ಕಂಡುಕೊಳ್ಳಲು ಅವಳು ಆತ್ಮಹತ್ಯೆಯ ವಿಚಾರವನ್ನು ಕೈ ಬಿಟ್ಟಳು.
ಅದೊಂದಿನ ಒಂದು ನುಡಿಮುತ್ತು ಅವಳ ಕಣ್ಣಿಗೆ ಬಿತ್ತು ಅದು ಹೀಗಿತ್ತು ..."ಒಬ್ಬ ವಿವೇಕಿಯಾದ ಬಾಳಿಗೆ ಪ್ರತಿದಿನವೂ ಕೂಡ ಒಂದು ಹೊಸ ಬದುಕೇ" ಎಂದಿತ್ತು.
ಈ ಎಂಟು ಪದಗಳ ವಾಕ್ಯದಲ್ಲಿ ಅವಳಿಗೆ ಅದೇನು ಗೋಚರಿಸಿತೋ? ಏನೊ? ಅವಳಿಗೆ ಸ್ಪೂರ್ತಿದೊರೆತಂತಾಯಿತಂತೆ.
ಮುಂದು ಅವಳು ನೆನಪು ಮಾಡಿಕೊಳ್ಳುತ್ತಾಳೆ ಆ ಸಾಲುಗಳಿಗೆ ನಾನು ಅದೇಷ್ಟು ಅಭಾರಿಯಾಗಿದ್ದೇನೆಂದರೆ ಅದನ್ನು ನನಗೆ ಪದಗಳಲ್ಲಿ ಹೇಳಲು ಆಗದು ನನ್ನ ಮರುಹುಟ್ಟಿಗೆ ಕಾರಣವೇ ಆ ಸಾಲುಗಳು ಎಂದು ಅವಳು ತನ್ನ ಬರೆದಿಟ್ಟಿದ್ದಾಳೆ.
ಅವಳು ಮಾಡಿದ್ದಾದರೂ ಏನು ಗೊತ್ತಾ?!
ಆ ನುಡಿಮುತ್ತನ್ನು ಬರೆದುಕೊಂಡು ತನ್ನ ಹಳೆಯ ಕಾರಿನ ಗ್ಲಾಸಿಗೆ ಅಂಟಿಸಿಕೊಂಡು ಅದನ್ನು ಪ್ರತಿದಿನ ಓದಿಕೊಳ್ಳುತ್ತಿದ್ದಳಂತೆ ಅದರಿಂದ ಚಿರಂತನ ಸ್ಪೂರ್ತಿ ಆಕೆಗೆ ಲಭಿಸುತ್ತಿತ್ತಂತೆ. ಆ ಮಾತುಗಳ ಪರಿಣಾಮದಿಂದ ಅವಳು ನಿನ್ನೆಗಳನ್ನು(ದುಃಖಗಳನ್ನು) ಮರೆತಳು.
ನಾಳೆಯ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿದಳು ಹಾಗೂ ಪ್ರತಿದಿನ ಆಕೆ ಹೇಳಿಕೊಳ್ಳುತ್ತಿದ್ದಳು "ನನ್ನ ಪಾಲಿಗೆ ಇಂದು ಹೊಸ ಬದುಕು " ಎಂದು .
ಆಗ ಒಂಟಿತನದ ಭಯ ಅವಳಿಗೆ ಕಡಿಮೆಯಾಯಿತು ಆತಂಕ ದೂರವಾಯಿತು.
ವಿಧಿಯಾಟವೆಂಬಂತೆ ಪುಸ್ತಕಗಳ ಮಾರಾಟ ಮೊದಲಿಗಿಂತಲೂ ಹೆಚ್ಚಿತು ಆದಾಯ ಬರತೊಡಗಿತು. ದಿನಗಳೆದಂತೆ ತನ್ನ ಕಾರಿನ ಎಲ್ಲ ಕಂತನ್ನು ತೋರಿಸಿದಳು ಊಟಕ್ಕೆ ಯಾವುದೇ ಕೊರತೆಯಾಗದ ಹಾಗೆ ಸಂಪಾದಿಸತೊಡಗಿದಳು .ಬದುಕಿನ ಬಗ್ಗೆ ಪ್ರೀತಿ ಬೆಳೆಸಿಕೊಂಡಳು. ಮುಂದೆ ಸುಖ ಜೀವನ ನಡೆಸಿದಳು !
ಬದುಕಿನಲ್ಲಿ ಏನೇ ಬಂದರೂ ಭಯಪಟ್ಟುಕೊಳ್ಳಬಾರದು. ಭಯವೇ ಮನುಷ್ಯನನ್ನು ಮಾನಸಿಕವಾಗಿ ಕೊಲ್ಲುವ ಮಾರಕ ಶಸ್ತ್ರಾಸ್ತ್ರ.ಭವಿಷ್ಯದ ಬಗ್ಗೆ ಭಯಪಡುವಲ್ಲಿ ಯಾವ ಅರ್ಥವೂ ಇಲ್ಲವೆಂದು ಅರಿವಾಗಬೇಕು.
ಪ್ರತಿದಿನ ಪ್ರತಿ ಗಂಟೆ ಪ್ರತಿಕ್ಷಣ ಹೊಸತನದಿಂದ ಬದುಕಬೇಕು.
ಅದುವೇ ಬದುಕಿನ ಸತ್ಯ!
-ವಿಶ್ವನಾಥ್ ಬಿ ಎಮ್