ಹುಳದ ರೂಪವುಳ್ಳ ತಲೆಯಲ್ಲಿ ಹುಳ ಬಿಡುವ ಹೆಸರುಗಳುಳ್ಳ 'ನನ್ನ ಮೆಚ್ಚಿನ ಶಾವಿಗೆ'
ಯಾವುದೇ ಹೊಸ ಮಾಧ್ಯಮಕ್ಕೆ ಅಂಬೆಗಾಲು ಇಟ್ಟಾಗ, ಮೊದಲನೆಯ ಲೇಖನದ ಬಗ್ಗೆ ಬಹಳ ಉತ್ಸಾಹ, ಕುತೂಹಲ, ಅಂಜಿಕೆ, ಹುಮ್ಮಸ್ಸು, ಕಳವಳ ಇರುವುದು ಸರ್ವೇಸಾಮಾನ್ಯ. ಲ್ಯಾಪ್ಟಾಪ್ ಹಿಡಿದು ಕೂತಾಗ ಮೊದಲ ಲೇಖನ ಯಾವ ವಿಶಯದ ಬಗ್ಗೆ ಇರಬೇಕು? ಯಾರ ಬಗ್ಗೆ ಆಗಿರಬೇಕು? ಯಾರಿಗೋಸ್ಕರ ಬರೆಯಬೇಕು? ಯಾರು ಅದರ ಓದುಗರು? ಅನುಭವ ಹಂಚಿಕೊಳ್ಳುವಂಥದ್ದಾಗಿರಬೇಕಾ? ಅಥವಾ ಮಾಹಿತಿ ನೀಡುವಂಥದ್ದಾಗಿರಬೇಕಾ? ಅಂತೆಲ್ಲ ಯೋಚಿಸುತ್ತಿದ್ದಾಗ, ನನ್ನನ್ನೂ ಸೇರಿ ಹಲವಾರು ಜನರಿಗೆ ಮೊದಲು ತಲೆ ಹೊಳೆಯುವ ತಿಂಡಿ ತಿನಿಸು ನೆನಪಾಯಿತು. ಅದರಲ್ಲೂ ನಾ ಇಷ್ಟಪಟ್ಟು ಮಜಾ ಮಾಡಿ ತಿಂದ ಸ್ನೇಹಿತರ ಮನೆಯ ತಿಂಡಿಯಿಂದಲೇ ಮಙಳ ಹಾಡುವುದಾಗಿ ನಿರ್ಧರಿಸಿದೆ. ’ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ’ ಎಂಬ ನಾಣ್ಣುಡಿಯೇ ಉಂಟಲ್ಲ.
ಕಳೆದ ವರ್ಶ ಸುಮಾರು ಇದೇ ಸಮಯಕ್ಕೆ ನಾನು ವಾಶಿಂಗ್ಟನ್ ಡಿಸಿಯಲ್ಲಿ ಶ್ರೀವತ್ಸ ಜೋಷಿಯವರನ್ನು ಭೇಟಿಯಾಗಲು ಅವರ ಮನೆಗೆ ಹೋಗಿದ್ದೆ. ಮುಂಜಾನೆ ಮನೆಯಲ್ಲಿ ಸುಪ್ರಭಾತದ ಗುಂಗಿನೊಡನೆ, ಅವರ ’ವಿಚಿತ್ರಾನ್ನಾ’ ಪುಸ್ತಕದ ಕಂಪಿನೊಡನೆ, ಅಂತರ್ಜಾಲದ ಕನ್ನಡ ಪತ್ರಿಕೆಯ ವಾರ್ತೆಯ ಸುದ್ದಿಯೊಡನೆ, ಬಿಸಿ ಬಿಸಿ ಫ಼ಿಲ್ಟರ್ ಕಾಫ಼ಿಯ ಜೊತೆ ನನ್ನನ್ನು ಸ್ವಾಗತಿಸಿದ್ದು ಶಾವಿಗೆ ಉಪ್ಪಿಟ್ಟು. ಮೊದಲೇ ಉಪ್ಪಿಟ್ಟಿನ ಎಲ್ಲಾ ಅವತಾರಗಳು ಪಂಚಪ್ರಾಣವಾದ ನನಗೆ ಅವರು ಮಾಡಿಕೊಟ್ಟ ಬಿಸಿ ಬಿಸಿ ಶಾವಿಗೆ ಉಪ್ಪಿಟ್ಟು, ೧೦ ವರ್ಷಗಳ ಹಿಂದೆ ತಿರುಪತಿ ದೇವಸ್ಥಾನದಲ್ಲಿ ೧೦ ಗಂಟೆಗಳು ಕ್ಯು ನಿಂತು ದರ್ಶನ ಆದ ಕೂಡಲೆ ಸಿಕ್ಕ ಪ್ರಸಾದದ ಸಂತೋಶ ಭರಿತ ರುಚಿಯ ನೆನಪು ಮರುಕಳಿಸಿತು. ’ರಾಟಟೂಯಿ’ ಎಂಬ ಅಂಗ್ಲ ಭಾಷೆಯ ಚಿತ್ರದಲ್ಲಿ ಫ಼ುಡ್ ಇನ್ಸಪೆಕ್ಟರ್ ಊಟದ ರುಚಿಗೆ ಫ಼್ಲಾಶ್-ಬ್ಯಾಕಿನಲ್ಲಿ ಬಾಲ್ಯಕ್ಕೆ ಹೋಗಿ ತಮ್ಮ ಅಮ್ಮನ ಕೈ ಅಡಿಗೆ ನೆನಪು ಮಾಡಿಕೊಂಡಹಾಗೆ. ಕೆಲಸಕ್ಕಾಗಿ ಊರನ್ನು ಬಿಟ್ಟು, ವಿದೇಶದಲ್ಲಿ, ಮನೆಯವರಿಂದ ದೂರವಿರುವಾಗ ನಮ್ಮೂರ ಅಡಿಗೆ ಸಿಗುವುದೇ ಭಾಗ್ಯ. ಅಂಥದರಲ್ಲಿ ಇಂತಹ ಒಳ್ಳೆಯ ಪ್ರೀತಿಯಿಂದ ಮನೆಯಲ್ಲಿ ಮಾಡಿದ ಶಾವಿಗೆ ಉಪ್ಪಿಟ್ಟು ತಿಂದು ಆದ ಖುಶಿಯೇ ಹಾಡಿತು ’ಶಾವಿಗೆಯ’ ಮೂಲ ತಿಳಿಯುವ ಪ್ರಯತ್ನಕ್ಕೆ ನಾಂದಿ.
ಶಾವಿಗೆ, ಸೇಮಿಯಾ, ಇಡಿಯಪ್ಪಮ್, ನೂಡಲ್ಸ್, ಪಾಸ್ತ - ಭಾರತದಲ್ಲಿ ಇದರ ಹೆಸರು ಅನೇಕ, ರುಚಿ ಬಗೆಬಗೆ, ಸಿಹಿಯೋ ಖಾರವೋ, ಮಾಡುವ ವಿಧಾನ ಎಷ್ಟೋ ಆದರೆ ರೂಪ ಒಂದೆ. ಭಾರತದಲ್ಲೇ ಪುಳಿಯೋಗರೆ, ಪಾಯಸ, ಬರ್ಫ಼ಿ, ಹಲ್ವ, ಮೊಸರು ಶಾವಿಗೆ, ಒತ್ತು ಶಾವಿಗೆ ಹೀಗೆ ಅನೇಕ ಬಗೆಗಳಿವೆ. ಇದಲ್ಲದೆ ಚೀನದಲ್ಲಿ ’ಲಾ ಮಿಯಾನ್’ ಹೆಸರಿನ ಅತಿ ಸಣ್ಣಗಿನ ಅಕ್ಕಿಯ ಶಾವಿಗೆ ಮಾಡಿ ಸೂಪಿನೊಂದಿಗೆ ತಿಂದರೆ, ಇಟಲಿಯಲ್ಲಿ ಒಣಗಿಸಿದ ರವೆ ಶಾವಿಗೆಯನ್ನು (ಸೆಮೊಲಿನ) ತರಕಾರಿಗಳೊಂದಿಗೆ ಬೆರೆಸಿ ’ಪಿಜ಼್ಜ಼ೋಚೆರ್ರಿ’ ಎಂದು ಮೂರು ಹೊತ್ತೂ ಉಣ್ಣುತಾರೆ. ಅಮೇರಿಕ ದೇಶದಲ್ಲಿ ಅದೇ ಗೋಧಿ ಶಾವಿಗೆಯನ್ನು, ಪಾಸ್ತಾ ಹೆಸರಿನಲ್ಲಿ ಅಗಲಗಲವಾಗಿ ಕಂಡುಬರುತ್ತದೆ. ಅರೇಬಿಯಾ ದೇಶಗಳಲ್ಲಿ ಇದನ್ನು ಹೆಚ್ಚು ಎಣ್ಣೆಯಲ್ಲಿ ಕರಿದು ’ಇಟ್ಟ್ರಿಯ’ ಎಂದು ತಿಂದರೆ, ಜರ್ಮನಿಯಲ್ಲಿ ಬೇಯಿಸಿ ನಮ್ಮ ಒತ್ತು ಶಾವಿಗೆ ರೂಪದಲ್ಲಿ ’ಸ್ಪಟ್ಜಲ್’ ಅನ್ನು ಹೆಚ್ಚು ತಿನ್ನುತ್ತಾರೆ. ಕೊರಿಯ ದೇಶದ ’ಕಲ್ಗುಕ್ಸು’ ಹೆಸರುವಾಸಿಯಾದರೆ, ಟಿಬೇಟಿನ ’ಥುಕ್ಪಾ’ ಗೋಧಿ ಶಾವಿಗೆಯ ಕೀರ್ಥಿ ಸಾರುತ್ತದೆ. ಥಾಯ್ ಊಟದ ಮುಖ್ಯ ಭಾಗವೂ ’ಖನೋಮ್ ಚಿನ್’ ಆಗಿದೆ.
ಶಾವಿಗೆಯ ಮೂಲ ಖಂಡಿತವಾಗಿಯೂ ನಿಖರವಾಗಿ ಹೇಳಲು ಇನ್ನೂ ಸಾಧ್ಯವಾಗಿಲ್ಲ ಏಕೆಂದರೆ ಇದು ವಿವಿಧ ಬಗೆಗಳಲ್ಲಿ ಪ್ರತಿಯೊಂದು ದೇಶದಲ್ಲೂ ಬೇರೆ ಅಲಂಕಾರಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಚೀನಾ ದೇಶದವರು ಹಾಗು ಇಟಲಿ ದೇಶದವರು ತಾವೆ ಈ ಶಾವಿಗೆ ಕಂಡು ಹಿಡಿದದ್ದು ಅಂತ ಹಲವು ಪುಸ್ತಕಗಳಲ್ಲಿ ಸೆಣಸಾಡಿದ್ದಾರೆ. ಐದನೆಯ ಶತಮಾನದಲ್ಲೇ ’ಇಟ್ರಿಯಮ್’ ಹೆಸರಿನ ಶಾವಿಗೆ ಜೆರೂಸಲಮ್ ಹಾಗು ಪ್ಯಾಲೆಸ್ಟೈನ್ ಪ್ರಾಂತ್ಯದಲ್ಲಿ ಇದ್ದುದರ ಉಲ್ಲೇಖವಿದೆ. ಅರೇಬಿಯಾದಲ್ಲಿನ 'ಕಿಜಿಯ' ಜನಾಂಗದವರೂ ಶಾವಿಗೆಯ ಉಗಮವನ್ನು ತಾವೆ ದತ್ತು ತೆಗೆದುಕೊಳ್ಳುವ ವಾದವೂ ಮಂಡಿಸಿದ್ದಾರೆ. ಪರ್ಶಿಯ ದೇಶದಲ್ಲಿ ಇದನ್ನು 'ರೇಶ್ತೆ' ಎಂದು ಹದಿಮೂರನೆಯ ಶತಮಾನದಿಂದ ತಿನ್ನುತ್ತಲೇ ಇರುವ ಉದಾಹರಣೆಗಳನ್ನೂ ನಾವು ಕಾಣಬಹುದು. ದಿಡೀರ್ ಆಗಿ ಮಾಡುವ ಪ್ಯಾಕಿನಲ್ಲಿದೊರೆಯುವ ಇನ್ಸಟಂಟ್ ಶಾವಿಗೆಯ ಕೀರ್ತಿ ಜಪಾನ್ ದೇಶಕ್ಕೆ ಸಲ್ಲುತ್ತದೆ. ಇದನ್ನು ಜಪಾನಿ ಮೊಮೊಫ಼ುಕು ಎಂಬುವರು ೧೯೫೮ನಲ್ಲಿ ಕಂಡುಹಿಡಿದರು. ನಮ್ಮ ದೇಶದಲ್ಲಿ ಮನೆಯಿಂದ ದೂರವಿರುವ ಸಿಂಗಲ್ ಹುಡುಗ ಹುಡುಗಿಯರ ದಿನನಿತ್ಯದ ಅನ್ನದಾತ, ಅತಿ ಒಲುಮೆಯ ಮ್ಯಾಗಿ ನೂಡಲ್ಸ್ ಇತ್ತೀಚಿಗಷ್ಟೆ ಬ್ಯಾನ್ ಆಗಿ ಮತ್ತೆ ಮಾರುಕಟ್ಟೆಗೆ ಪ್ರವಾಹ ಸುರಿಸಿದ ವಿಶಯ ನಮಗೆಲ್ಲ ತಿಳಿದೇ ಇದೆ.
ಒಟ್ಟಿನಲ್ಲಿ ಪ್ರಪಂಚದಾದ್ಯಂತ ಪ್ರಸಿದ್ಧವಾಗಿರುವ ಈ ಶಾವಿಗೆಯನ್ನು, ಶ್ರೀವತ್ಸ ಜೋಶಿಯವರ ನಳಪಾಕದ ರೂಪದಲ್ಲಿ, ಅದೂ ನಮ್ಮ ದೇಶದ ಕರಾವಳಿ ಕೀರ್ತಿಯ ಬಾಳೆಕಾಯಿ ಚಿಪ್ಸ್ ಜೊತೆ ವಿದೇಶದಲ್ಲಿ ತಿಂದು, ಬೊಂಬಾಟ್ ಭೋಜನ ಖ್ಯಾತಿಯ ಸಿಹಿ ಕಹಿ ಚಂದ್ರು ಸವೆಯುವ ಹಾಗೆ ’ಊಮ್ಹುಹುಮ್ಹಹುಮ್ಹುಹುಮ್’ ಎಂದು ಮುಖದ ಮೇಲೆ ಅಂದು ಇಡೀ ದಿನ ನಗುವಿನ ಮಂದಹಾಸ ಮೂಡಿತ್ತು. ಶಾವಿಗೆಯ ಮೂಲ ತಿಳಿಯಲು ಸಾಧ್ಯವಾಗದಿದ್ದರೂ, ಅದರ ರುಚಿಯೊಂದಿಗೆ ಇಷ್ಟು ವಿಭಿನ್ನ ಬಗೆಗಳ, ಅವುಗಳ ಕಷ್ಟಕರವಾದ ಹೆಸರುಗಳ ಉಚ್ಚಾರ ತಿಳಿದು ನಾಲಿಗೆಗಂತು ಕೆಲಸ ಜಾಸ್ತಿ ಆಗಿ, ಕೈಗೂ ಕೆಲಸ ಕೊಡುವ ನಿಟ್ಟಿನಲ್ಲಿ ಇದನ್ನೇ ಸಂಪದದಲ್ಲಿನ ಮೊದಲ ಲೇಖನವಾಗಿಸಿಬಿಟ್ಟೆ. ಇದನ್ನು ಓದಿ ನಿಮಗೆ ಇಷ್ಟವಾದ ಶಾವಿಗೆಯ ಬಗೆಯನ್ನು ತಿಳಿಸುತ್ತೀರ ತಾನೆ?