ಗಂಗಾ ವಿಮಾನ ಅಪಹರಣ ಮತ್ತು1971ರ ಇಂಡೋ-ಪಾಕ್ ಯುದ್ಧ

ಗಂಗಾ ವಿಮಾನ ಅಪಹರಣ ಮತ್ತು1971ರ ಇಂಡೋ-ಪಾಕ್ ಯುದ್ಧ

1971 ರ ಭಾರತ ಪಾಕಿಸ್ತಾನ ಯುದ್ಧ ಭಾರತೀಯ ಸೇನೆಯ ಶೌರ್ಯ ಪರಾಕ್ರಮಗಳಿಗೆ ಹಿಡಿದಕನ್ನಡಿಯೆಂದರೆ ತಪ್ಪಾಗಲಾರದು. ಪಾಕಿಸ್ತಾನಕ್ಕೆ ಭಾರತ ಸೇನಾ ಪ್ರಾಬಲ್ಯವನ್ನು ಸ್ಪಷ್ಟವಾಗಿ ಪರಿಚಯಿಸಿದ ಯುದ್ಧ. ಈ ಯುದ್ಧ ಪಾಕಿಸ್ತಾನದಿಂದ ಪೂರ್ವ ಪಾಕಿಸ್ತಾನವನ್ನು ಮುಕ್ತಗೊಳಿಸಿ, ವಿಶ್ವ ಭೂಪಟದಲ್ಲಿ ಬಾಂಗ್ಲಾದೇಶವೆಂಬ ಒಂದು ಹೊಸ ದೇಶವನ್ನೇ ಸೃಷ್ಟಿಸಿತು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಹಾಗೂ ಸೇನಾ ಮುಖ್ಯಸ್ಥ  ಫ್ರೀಲ್ಡ್ ಮಾರ್ಷಲ್ ಮಾನೆಕ್ ಷಾ ತೋರಿದ ದಿಟ್ಟತನ, ಭಾರತೀಯ ಸೇನೆಯ ಅಸೀಮ ಶೌರ್ಯ ಇಂದಿಗೂ ವಿಶ್ವದ ರಾಜಕೀಯದಲ್ಲಿ ಮಾಸದ ನೆನಪು. ಒಂದೇ ಮಾತಿನಲ್ಲಿ ಹೇಳುವುದಾದರೆ ಭಾರತ ತನ್ನ ಸಾಮರ್ಥ್ಯದ ಬಗ್ಗೆ ಇಡೀ ವಿಶ್ವಕ್ಕೆ ಒಂದು ಸ್ಪಷ್ಟವಾದ ಸಂದೇಶ ರವಾನಿಸಿತ್ತು. ಈ ಚಾರಿತ್ರಿಕ ವಿಜಯದ ಹಿಂದೆ ಹಲವಾರು ರೋಚಕ ಅಧ್ಯಾಯಗಳಿವೆ. ‘ಗಂಗಾ ವಿಮಾನ ಅಪಹರಣ ಪ್ರಕರಣ’ ಇವುಗಳಲ್ಲೊಂದು.ಯುದ್ಧ ಪ್ರಾರಂಭವಾಗುವ ಕೆಲ ತಿಂಗಳುಗಳ ಹಿಂದೆ, ಅಂದರೆ ಜನವರಿ 1971ರಲ್ಲಿ ಕಾಶ್ಮೀರದ ನ್ಯಾಷನಲ್ ಲಿಬರೇಶನ್ ಫ್ರಂಟ್ ಸಂಘಟನೆಗೆ ಸೇರಿದ ಹಾಶಿಮ್ ಖುರೇಶಿ ಮತ್ತು ಅಶ್ರಫ್ ಭಟ್ ಎಂಬ ಇಬ್ಬರು ಯುವಕರು ಗಂಗಾ ಎಂಬ ಹೆಸರಿನ ವಿಮಾನವನ್ನು ಅಪಹರಿಸಿ ಪಾಕಿಸ್ತಾನದ ನೆರವಿನಿಂದ ಅದನ್ನು ಲಾಹೋರ್‌ನಲ್ಲಿ ಇಳಿಸುವಲ್ಲಿ ಯಶಸ್ವಿಯಾಗಿದ್ದರು. ಪಾಕಿಸ್ತಾನ ಕೂಡ ಈ ವಿಮಾನ ಅಪಹರಣವನ್ನು ಭಾರತದ ವಿರುದ್ಧ ಬಳಸಿಕೊಳ್ಳಲು ಉತ್ಸುಕವಾಗಿತ್ತು.
ಪಾಕಿಸ್ತಾನ ಇದೇ ಅವಕಾಶಕ್ಕೋಸ್ಕರ ಕಾಯುತ್ತಿತ್ತೇನೋ ಎಂಬಂತೆ, ಪಾಕಿಸ್ತಾನದ ಅಂದಿನ ವಿದೇಶಾಂಗ ಸಚಿವ ಜುಲಿಕರ್ ಆಲಿ ಭುಟ್ಟೋ ಸ್ವತಃ ಅಪಹರಣಕಾರರನ್ನು ಭೇಟಿಯಾದರು. ಈ ವಿಮಾನ ಅಪಹರಣವನ್ನು ಬಳಸಿಕೊಂಡು ಪಾಕಿಸ್ತಾನದ ನಾಯಕರು ಭಾರತವನ್ನು ಬೆದರಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ಅತೀ ಉತ್ಸಾಹದಲ್ಲಿದ್ದರು.‘ಗಂಗಾ ವಿಮಾನ ಅಪಹರಣ ಪ್ರಕರಣ’ ನಂತರದಲ್ಲಿ ಹೊಸ ತಿರುವನ್ನು ಪಡೆದುಕೊಂಡಿತು. ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ಮೇಲೆ ಅತಿಯಾದ ಒತ್ತಡ ತರುವಲ್ಲಿ ಯಶಸ್ವಿಯಾಯಿತು. ಒತ್ತೆಯಾಳುಗಳಾಗಿದ್ದ ಎಲ್ಲಾ ಪ್ರಯಾಣಿಕರನ್ನು ಭಾರತಕ್ಕೆ ಹಿಂದಿರುಗಿಸಬೇಕಾಯ್ತು. ಆದರೆ ವಿಮಾನವನ್ನು ಅಪಹರಣಕಾರರು ನಾಶಪಡಿಸಿದ್ದರು.ಇದೇ ಕಾರಣವನ್ನು ಮುಂದಿಟ್ಟುಕೊಂಡು ಭಾರತವು ತನ್ನ ಭೂಪ್ರದೇಶದಲ್ಲಿ ಎಲ್ಲಾ ಪಾಕಿಸ್ತಾನಿ ವಿಮಾನಗಳ ಹಾರಾಟವನ್ನು ನಿಷೇಸಿ ಆದೇಶ ಹೊರಡಿಸಿತು. ಈ ನಿಷೇಧಾಜ್ಞೆ ಮುಂದೆ ನಡೆದ 1971ರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿತು. ಪಾಕಿಸ್ತಾನ ತನ್ನ ಸೇನೆಯನ್ನು ಪೂರ್ವ ಪಾಕಿಸ್ತಾನಕ್ಕೆ ಕಳುಹಿಸಲು ಪರದಾಡುವಂತೆ ಮಾಡಿತು ಈ ನಿಷೇಧಾಜ್ಞೆ! ಪಾಕಿಸ್ತಾನಿ ಸೇನೆ ಯಾವುದೋ ದೂರದ ದಾರಿಯಿಂದ ಇಡೀ ಭಾರತಕ್ಕೆ ಪ್ರದಕ್ಷಿಣೆ ಹಾಕಿಕೊಂಡು ಯುದ್ಧ ರಂಗ ಸೇರುವಂತಾಯಿತು.
‘ಗಂಗಾ ವಿಮಾನ ಅಪಹರಣ ಪ್ರಕರಣ’ವನ್ನು ಪಾಕಿಸ್ತಾನ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳಲು ಪ್ರಯತ್ನಿಸಿದರೆ, ಕೊನೆಗೆ ಇದೇ ಪ್ರಕರಣ ಭಾರತದ ಪರವಾಗಿ, ಪಾಕಿಸ್ತಾನದ ಹೀನಾಯ ಸೋಲಿಗೆ ಕಾರಣವಾಯಿತು! ತಮಾಷೆಯ ವಿಷಯವೆಂದರೆ ಆದಿಯಿಂದ ಅಂತ್ಯದವರೆಗೆ, ‘ಗಂಗಾ ವಿಮಾನ
ಅಪಹರಣ ಪ್ರಕರಣ’ವನ್ನು ನಿಯಂತ್ರಿಸಿದ್ದು ಭಾರತೀಯ ಗುಪ್ತಚರ ಸಂಸ್ಥೆ ‘ರಾ’ ! ಹಾಶಿಮ್ ಖುರೇಶಿ ಮತ್ತು ಅಶ್ರಫ್ ಭಟ್ ನ್ಯಾಷನಲ್ ಲಿಬರೇಶನ್ ಫ್ರಂಟ್ ಸದಸ್ಯರಾಗಿರಲಿಲ್ಲ, ಅಪಹರಣಕಾರರ ಸೋಗು ಹಾಕಿದ್ದ ಭಾರತದ ‘ರಾ’ ಏಜೆಂಟ್‌ಗಳಾಗಿದ್ದರು. ಅಪಹರಿಸಲ್ಪಟ್ಟ ‘ಗಂಗಾ’ ಭಾರತದ ಹಳೆಯ, ಉಪಯೋಗಿಸಲ್ಪಡದ ವಿಮಾನವಾಗಿತ್ತು. ಕೆಲವೇ ವಾರಗಳ ಹಿಂದೆ ಭಾರತವು ಅಪಹರಣದ ನಾಟಕಕ್ಕೋಸ್ಕರವೇ ಈ ವಿಮಾನವನ್ನು ಮರುಬಳಕೆಗೆ ತಂದಿತ್ತು!ಯುದ್ಧದ ಪ್ರಾರಂಭಕ್ಕೆ ಮೊದಲೇ ಭಾರತವು ಪಾಕಿಸ್ತಾನಿ ವಿಮಾನಗಳು ನೇರವಾಗಿ ಪೂರ್ವ ಪಾಕಿಸ್ತಾನ ತಲುಪುವುದನ್ನು ನಿಷೇಸಲು ಯೋಚಿಸಿತ್ತು. ಈ ಜವಾಬ್ದಾರಿ ಭಾರತದ ಗುಪ್ತಚರ ವಿಭಾಗ ‘ರಾ’ ಹೆಗಲಿಗೆ ಬಿತ್ತು. ಅಂದಿನ ‘ರಾ’ ಮುಖ್ಯಸ್ಥರಾಗಿದ್ದ ಆರ್. ಎನ್. ಕಾವ್ ಈ ಜವಾಬ್ದಾರಿಯನ್ನು ದಕ್ಷವಾಗಿ ನಿಭಾಯಿಸಿದರು. ‘ಗಂಗಾ ವಿಮಾನ ಅಪಹರಣ’ದ ಪ್ರತಿ ಹಂತವೂ ಪೂರ್ವನಿಯೋಜಿತವಾಗಿತ್ತು. 1968ರಲ್ಲಿ ಸ್ಥಾಪನೆಯಾಗಿ, ಆಗಷ್ಟೇ ಅಂಬೆಗಾಲಿಡುತ್ತಿದ್ದ ‘ರಾ’ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅದ್ಭುತ!
ವಿಶ್ವದ ಬಲಾಢ್ಯ ಗುಪ್ತಚರ ಸಂಸ್ಥೆಗಳು, ಭಾರತದ ಈ ಗುಪ್ತಚರ ಚಾಣಾಕ್ಷತೆಯನ್ನು ತಿರುಗಿ ನೋಡುವಂತೆ ಮಾಡಿತ್ತು ‘ಗಂಗಾ ವಿಮಾನ ಅಪಹರಣ ಪ್ರಕರಣ’.ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತೆ, ಪಾಕಿಸ್ತಾನ ಭಾರತಕ್ಕೆ ಕೇಡು ಬಯಸುವ ಅವಸರದಲ್ಲಿ ‘ರಾ’ ಖೆಡ್ಡಾದಲ್ಲಿ ಬಿತ್ತು. 1948ರಲ್ಲೇ ಸ್ಥಾಪನೆಗೊಂಡು, ಭಾರತವನ್ನು ನಿರಂತರ ಕೆಣಕುತ್ತಿದ್ದ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ಐಎಸ್‌ಐ ಅವಮಾನದಿಂದ ಕೈಲಾಗದೆ ಮೈ ಪರಚಿಕೊಂಡಿತ್ತು. ಹೀಗೆ ಇಂದಿಗೂ ವಿಶ್ವ ಗುಪ್ತಚರ ವಿಭಾಗದ ರೋಚಕ ಕಥನಗಳಲ್ಲಿ ಅಚ್ಚಳಿಯದೆ, ಭಾರತದ ಗುಪ್ತಚರ ವಿಭಾಗದ ಮುಕುಟಪ್ರಾಯವಾಗಿ ನಿಲ್ಲುವ ಉದಾಹರಣೆ ‘ಗಂಗಾ ವಿಮಾನ ಅಪಹರಣ ಪ್ರಕರಣ’. ಮುಂದೆ ಕೆಲವೇ ತಿಂಗಳಲ್ಲಿ ನಡೆದ 1971ರ ಇಂಡೋ-ಪಾಕ್ ಯುದ್ಧ, ಮತ್ತದರ ಫಲಿತಾಂಶ ಭಾರತದ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಸತ್ಯ. ‘ರಾ’ ಸ್ಥಾಪನೆಯೊಂದಿಗೆ ಭಾರತ ಅಕೃತವಾಗಿ ರವಾನಿಸಿದ ಸಂದೇಶ ಸ್ಪಷ್ಟ, ಶತ್ರು ಸಂಹಾರದಲ್ಲಿ ಭಾರತ ಚಾಣಕ್ಯನೇ, ಅಂದಿಗೂ ಇಂದಿಗೂ ಎಂದೆಂದಿಗೂ!
 

(ಈ ಲೇಖನ 24 ನವಂಬರ್ 2015 ರ ಹೊಸ ದಿಗಂತ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ)